ಅನುಸೂಯ ಯತೀಶ್ ರವರು ತಮ್ಮ “ಕಾವ್ಯ ದರ್ಪಣ” ವಿಮರ್ಶಾ ಸಂಕಲನದ ಕುರಿತು ಸಂಗಾತಿ ಅಂತರ್ಜಾಲ ಮುಖ್ಯ ಸಂಪಾದಕರಾದ ಕು.ಸ.ಮಧುಸೂದನ ರಂಗೇನಹಳ್ಳಿ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಅನುಸೂಯ ಯತೀಶ್ ರವರು ತಮ್ಮ “ಕಾವ್ಯ ದರ್ಪಣ” ವಿಮರ್ಶಾ ಸಂಕಲನಕ್ಕೆ ಎರಡು ಮಾತು ಬರೆದುಕೊಡಿ ಎಂದು ಕೋರಿದಾಗ ನನಗೆ ಇಲ್ಲ ಎನ್ನಲಾಗಲಿಲ್ಲ. ಕಾರಣ ಲೇಖಕಿಯ ವಿಮರ್ಶಾ ಶಕ್ತಿಯ ಅರಿವು ನನಗಿದ್ದ ಕಾರಣದಿಂದ ಎನ್ನಬಹುದು. ಜೊತೆಗೆ ಕವಿತೆಗಳನ್ನು ಗಂಭೀರವಾಗಿ ಓದಿ ಅವುಗಳನ್ನು ಅದ್ಬುತವಾಗಿ ವಿಮರ್ಶೆಗೊಳಪಡಿಸಿ ಕವಿ ಮತ್ತು ಓದುಗ ಇಬ್ಬರನ್ನೂ ಮುಖಾಮುಖಿಯಾಗಿಸುವ, ಕವಿತೆಯನ್ನು ಓದುಗರಿಗೆ ಅರ್ಥ ಮಾಡಿಸುವ ಮತ್ತು ಕವಿತೆಯ ಲೋಪದೋಷಗಳನ್ನು ಕವಿಗೆ ಮನನ ಮಾಡಿಸಿ ಕೊಡುವ ಅವರ ಬರವಣಿಗೆಯ ಶೈಲಿಗೆ ನಾನು ಬೆರಗಾಗಿದ್ದೇನೆ.
ಅವರ ಬರಹದಲ್ಲಿನ ಮತ್ತೊಂದು ಮಹತ್ವದ ಸಂಗತಿಯೆಂದರೆ ಅವರು ಬಳಸುವ ಭಾಷೆ ವಿದ್ವತ್ ಪೂರ್ಣತೆಯ ಜೊತೆಗೆ ಕಾವ್ಯವನ್ನು ಓದಲಿಚ್ಚಿಸುವ ಹೊಸ ಓದುಗರಿಗೂ ಅರ್ಥ ಮಾಡಿಸುವ ಮತ್ತು ಕವಿತೆಗಳೆಡೆಗೆ ಅವರಿಗೆ ಒಲವು ಮೂಡುವಂತೆ ಮಾಡುವ ವಿಶಿಷ್ಠ ಶೈಲಿಗೆ ಸೋಜಿಗಪಟ್ಟಿದ್ದೇನೆ. ನಾವು ಕವಿತೆ ಓದಿ ಕವಿತೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಹೋಲಿಸಿದರೆ ಅನುಸೂಯ ಯತೀಶ್ ಅವರು ಕವಿತೆಯ ಪ್ರತಿ ಸಾಲು, ಶಬ್ದಗಳನ್ನು ವಿಮರ್ಶೆಯ ಓರೆಗೆ ಹಚ್ಚುವ ಸೂಕ್ಷ್ಮತೆಯನ್ನು ಮೆಚ್ಚದಿರಲಾಗದು.

ಅವರು ನಮ್ಮ ಸಂಗಾತಿ ಪತ್ರಿಕೆಗೆ ಪ್ರತಿ ವಾರ ಬೇರೆ ಬೇರೆ ಕವಿಗಳ ಕವಿತೆಯನ್ನು ನಿಕಷಕ್ಕೊಳಪಡಿಸುವ ಅವರ ಬರಹವನ್ನು ಓದಿ ಬಹಳಷ್ಟು ಓದುಗರು ಆ ಕವಿತೆ ಇರುವ ಸಂಕಲನಗಳ ಬಗ್ಗೆ ಮಾಹಿತಿ ಪಡೆದು, ಪುಸ್ತಕ ಕೊಂಡುಕೊಂಡು ಓದಿದ್ದು ಇದೆ. ಕನ್ನಡದಲ್ಲಿ ಯಾವತ್ತಿಗೂ( ಈ ಕ್ಷಣದವರೆಗು) ಪುರುಷ ವಿಮರ್ಶಕದೇ ಕಾರುಬಾರು ಕಾಣುತ್ತ ಬಂದಿದೆ. ಇದಕ್ಕೆ ಕಾರಣಗಳನ್ನು ಹುಡುಕುತ್ತ ಹೋದರೆ,ಹೊಸದಾಗಿ ಸಂಶೋಧನಾ ಗ್ರಂಥವನ್ನೆ ಬರೆಯಬೇಕಾಗುತ್ತದೆ.
ಹೀಗೆ ಪುರುಷ ಪ್ರಧಾನ ವಿಮರ್ಶೆಯ ಅಖಾಡಕ್ಕೆ ಇಳಿದಿರುವ ಅನುಸೂಯ ಯತೀಶ್ ಅವರು ಭವಿಷ್ಯದಲ್ಲಿ ಉತ್ತಮ ವಿಮರ್ಶಕಿರಾಗುವ ಸಕಲ ಲಕ್ಷಣಗಳೂ ಈ ಕೃತಿಯಲ್ಲಿ ಕಾಣುತ್ತಿವೆ.ಇದೀಗ ಲೇಖಕಿಯವರು ವಿಮರ್ಶೆಯ ಪ್ರಕಾರಕ್ಕೆ ತಮ್ಮ ಕೊಡುಗೆಯನ್ನು ನೀಡುವ ಹೊಣೆಗಾರಿಕೆ ಹೊರಬೇಕಾಗಿದೆ.
ಇನ್ನು ಖಾಸಗಿಯಾಗಿ ಅನುಸೂಯ ಯತೀಶ್ ರವರ ಬಗ್ಗೆ ಹೇಳುವುದಾದರೆ ನಮ್ಮ ಸಂಗಾತಿ ಸಾಹಿತ್ಯ ಪತ್ರಿಕೆಗೆ ಹಲವು ವಾರಗಳ ಕಾಲ ನಿರಂತರವಾಗಿ “ಕಾವ್ಯದರ್ಪಣ” ಎನ್ನುವ ಅಂಕಣ ಬರೆದು ಪತ್ರಿಕೆಯ ಮೌಲ್ಯ ಹೆಚ್ಚಿಸಿದ್ದಾರೆ. ಅವರಿಗೆ ನಮ್ಮ ಸಂಗಾತಿ ಬಳಗ ಋಣಿಯಾಗಿದೆ.

ಕೊನೆಯ ಮಾತು:
ವಿಮರ್ಶಾ ಕ್ಷೇತ್ರಕ್ಕೆ ಅಡಿಯಿಟ್ಟಿರುವ ಅನುಸೂಯ ಯತೀಶ್ ರವರ ಬರವಣಿಗೆ ಮತ್ತಷ್ಟು ಹರಿತವಾಗಿ ಕನ್ನಡದ ಬರಹಗಾರರನ್ನು ಸಕಾರಾತ್ಮಕವಾಗಿ ಹುರಿದುಂಬಿಸಲೆಂದು ಹಾರೈಸುತ್ತೇನೆ.
- ಕು.ಸ.ಮಧುಸೂದನ ರಂಗೇನಹಳ್ಳಿ – ಪ್ರಧಾನ ಸಂಪಾದಕರು, ಸಂಗಾತಿ ಸಾಹಿತ್ಯ ಪತ್ರಿಕೆ( ವೆಬ್)
