ಇದೊಳ್ಳೆ ವರಸೆ…! ಸದ್ಯದಲ್ಲೇ ಓದುಗರ ಕೈಯಲ್ಲಿ

ಸಂದೇಶ್ ಎಚ್. ನಾಯಕ್ ಅವರ ‘ಇದೊಳ್ಳೆ ವರಸೆ…!’ ಪುಸ್ತಕ ಸದ್ಯದಲ್ಲೇ ಬಿಡುಗಡೆಯಾಗುಲಿದ್ದು, ಓದುಗರಿಗೆ ಈಗ ಲಭ್ಯವಿದೆ, ಪ್ರಿ – ಬುಕ್ಕಿಂಗ್ ಆರಂಭವಾಗಿದೆ. ಆಸಕ್ತರು ಈ ಕೆಳಗಿನಂತಿದೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಇದೊಳ್ಳೆ ವರಸೆ…!
ಲೇಖಕರು : ಸಂದೇಶ್ ಎಚ್. ನಾಯಕ್
ಪ್ರಕಾಶನ: ಪುಸ್ತಕ ಮನೆ

ಮುಖಬೆಲೆ : ೧೫೦.೦೦
ರಿಯಾಯತಿ ಬೆಲೆ :೧೨೦.೦೦ ಅಂಚೆ ವೆಚ್ಚ ಪ್ರತ್ಯೇಕ
ಖರೀದಿಗಾಗಿ : 9606474289

ಅನಿರೀಕ್ಷಿತವಾಗಿ ಕೂಡಿ ಬಂದ ‘ಅಂಕಣ ಬಲ’ವೊಂದು ಹೊಸದಿಗಂತ ಪತ್ರಿಕೆಯಲ್ಲಿ ‘ವಾರದ ವರಸೆ’ ಎಂಬ ಹೆಸರಿನಲ್ಲಿ ಕಳೆದ ಕೆಲ ವರ್ಷಗಳಿಂದ ಬರೆಸಿಕೊಂಡು ಬರುತ್ತಿದೆ. ಆ ಪೈಕಿ, ಆಯ್ದ 30 ಲೇಖನಗಳ ಪುಟ್ಟದೊಂದು ಕಟ್ಟು ‘ಇದೊಳ್ಳೆ ವರಸೆ…!’ ಎಂಬ ನಾಮಾಂಕಿತದೊಂದಿಗೆ ಹೊತ್ತಗೆಯಾಗಿ ಹೊರಬರುತ್ತಿರುವುದನ್ನು ಈ ‘400’ರ ಹೊತ್ತಿನಲ್ಲಿ ನಿಮ್ಮ ಜೊತೆ ಹಂಚಿಕೊಳ್ಳಲು ಸಂತಸವಾಗುತ್ತಿದೆ.

ತೀರಾ ಮೊನ್ನೆ ಮೊನ್ನೆಯವರೆಗೂ ನನ್ನದೇ ಮೊಬೈಲ್‌ನ ಕಡತದಲ್ಲಿ ಕುಳಿತು ದಿಟ್ಟಿಸುತ್ತಿದ್ದ, ಆಗಾಗ ನನ್ನ ಕೈದಡವುತ್ತಿದ್ದ, ಸಣ್ಣಗೆ ಕಣ್ಸನ್ನೆ ಮಾಡಿ ಕರೆಯುತ್ತಿದ್ದ ಬರಹಗಳಲ್ಲಿ ಕೆಲವನ್ನು ಎತ್ತಿ ಪುಸ್ತಕದ ಸೆರಗಿಗೆ ಹಾಕಿದ್ದೇನೆ. ಆಗ ಅದೆಷ್ಟೋ ಬರಹಗಳು, ‘ಅಯ್ಯೋ ನನ್ನನ್ನೇಕೆ ಬಿಟ್ಟೆ?, ನನಗಲ್ಲಿ ಜಾಗವಿಲ್ಲವೇ?, ಎಂಥಾ ಸಂದರ್ಭದಲ್ಲಿ ನಾ ನಿನ್ನ ಕೈಹಿಡಿದು ಬಂದು, ನಿನ್ನ ಅಂಕಣ ಅಲಂಕರಿಸಿದ್ದೆ ಈಗ ಬೇಡವೇ? ನನ್ನನ್ನೂ ಸೇರಿಸಿಕೊಳ್ಳೋ ಮಾರಾಯ ಪ್ಲೀಸ್! ಎಂದೆಲ್ಲಾ ಗೋಗರದಂತೆ ಅನಿಸುತ್ತಿತ್ತು. ಹಾಗೂ ಹೀಗೂ ಒಂದು ಹಕ್ಕಿನಲ್ಲಿ, ಬೇಕಾದ ಮೂವತ್ತನ್ನು ಹೆಕ್ಕಿ ತೆಗೆದೆ.

 

ಆ ಮೂವತ್ತು ಬರಹಗಳು ಅಚ್ಚಿನ ಮನೆಯ ಬೆಚ್ಚಗಿನ ಅನುಭೂತಿಯಲ್ಲಿ ಪುಸ್ತಕವಾಗಿ ರೂಪುತಳೆಯುತ್ತಿವೆ. “ನಿಮ್ಮ ಪುಸ್ತಕ ಬಂದಿಲ್ಲವಾ..? ಯಾವಾಗ ಪುಸ್ತಕ ತರ್ತೀರಿ…? ಬೇಗ ಒಂದು ಪುಸ್ತಕ ಮಾಡಿ…” ಎಂಬ ಹಲವರ ಪ್ರೀತಿ, ಆಗ್ರಹಪೂರಿತ ಪ್ರಶ್ನೆಗಳಿಗೆ ಅವೇ ಉತ್ತರ ಕೊಡುವ ಉತ್ಸಾಹದಲ್ಲಿವೆ. ನಾನೆಲ್ಲವನ್ನೂ ಹಾಗೆ ನಿಂತು ನೋಡುತ್ತಿದ್ದೇನೆ. ಹೌದು. ಒಂದು ಬಗೆಯ ಮನದುಂಬಿದ ಭಾವದಲ್ಲಿ. ಎಷ್ಟೆಂದರೂ ಮೊದಲ ಪುಸ್ತಕವೆಂಬ ಬೆರಗು, ಪುಳಕವಲ್ಲವೇ?!

ಇನ್ನು ನೀವು ಒಪ್ಪಿ, ಆಸಕ್ತಿಯಿಂದ ಕೈ ಬೀಸಿದರೆ, ಅವು ನಿಮ್ಮ ಮನೆಯ ಟಿಫಾಯಿ, ಕಪಾಟು, ಟೇಬಲ್ ಅಷ್ಟೇ ಏಕೆ ನೀವೊಂಚೂರು ಮನಸ್ಸು ಮಾಡಿದರೆ ನಿಮ್ಮ ಅಂಗೈಯ ಅಂಗಳದಲ್ಲೂ ನಲಿದಾಡುತ್ತವೆ. ಏನಾದರೂ ಓದೋಣ ಅನಿಸಿದಾಗ ಅವು ನಿಮಗೆ ಸಾಥ್ ಕೊಡಲು ರೆಡಿ.

ಪುಸ್ತಕದೊಳಗೆ ಜಾಗ ಗಿಟ್ಟಿಸಿಕೊಂಡ, ಆ ಬರಹಗಳೂ ನನ್ನಲ್ಲಿ ಹೀಗೊಂದು ಪ್ರಾಮಿಸ್ ಮಾಡಿವೆ. ಅವರು ಓದುತ್ತಾ ಹೋದಂತೆ ಒಂದಷ್ಟು ಕಿರುನಗು, ತಮಾಷೆಯ ಆಹ್ಲಾದ, ಪದವಿನೋದದ ಮೋದ, ವಿಡಂಬನೆಯ ಕಚಗುಳಿ, ಇಷ್ಟೇ ಇಷ್ಟು ಯೋಚನೆಯ ಕಿಡಿಯನ್ನು ಅವರೊಳಗೆ ಹಬ್ಬುತ್ತೇವೆ ಎಂದು. ನಾನೂ ಅದನ್ನೇ ನಂಬಿ ಕೂತಿದ್ದೇನೆ. ಅವು ತಮ್ಮ ಮಾತನ್ನು ಉಳಿಸಿಕೊಂಡವೋ ಇಲ್ಲವೋ ಎಂದು ನೀವು ಮತ್ತೆ ನನಗೆ ಹೇಳಬೇಕು ಆಯ್ತಾ.

ಎಂದಿನಂತೆ ಪ್ರೀತಿ ವಿಶ್ವಾಸವಿರಲಿ


  • ಆಕೃತಿಕನ್ನಡ ನ್ಯೂಸ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading