‘ನನ್ನ ಅಪ್ಪ ಕೆ ಎಸ್ ನ’ ಕೃತಿ ಪರಿಚಯ

‘ಕೆ ಎಸ್ ನರಸಿಂಹ ಸ್ವಾಮಿ ಅವರಿಗೂ ನನಗೂ ದೂರದ ಸಂಬಂಧ. ಅವರ ಎಂಟು ಮಕ್ಕಳಲ್ಲಿ ನಾನು ಐದನೆಯವನು’ ಎಂದಾಗ ಸಭೆ ಘೊಳ್ಳೆಂದಿತು. ನಾಡಿನ ಖ್ಯಾತ ಕವಿ ಕೆ ಎಸ್ ನ ಅವರ ಮಗ ಕೆ ಎನ್ ಮಹಾಬಲರ ನೆನಪುಗಳು ಪುಸ್ತಕ ರೂಪವನ್ನು ಪಡೆದುಕೊಂಡು ಕರುನಾಡಿಗರ ಕೈ ತಲುಪಿದ್ದು ‘ನನ್ನ ಅಪ್ಪ ಕೆ ಎಸ್ ನ’ ಕೃತಿಯ ಕುರಿತು ಬಿ.ಎಸ್.ರವೀಂದ್ರ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….

ಪುಸ್ತಕ : ನನ್ನ ಅಪ್ಪ ಕೆ ಎಸ್ ನ
ಲೇಖಕರು : ಕೆ ಎನ್ ಮಹಾಬಲ
ಸಂಪರ್ಕ : ೦೯೪೪೯೮೧೧೧೭೭
ಪ್ರಕಾಶಕರು : ಬಹುರೂಪಿ 
ಬೆಲೆ : 200/-
ಖರೀದಿಗಾಗಿ :
Bahuroopi.in Bahuroopi.official/editor@bahuroopi.in
ಫೋ: 70191 82729

“ನರಸಿಂಹ ಸ್ವಾಮಿಯವರ ದೂರದ ಸಂಬಂಧಿ”

೧೯೮೬ ರ ನವೆಂಬರ್ ಒಂದರಿಂದ ಆರರವರೆಗೆ ಹೊಸಪೇಟೆಯಲ್ಲಿ ನಾಲ್ಕನೆಯ ಬ್ಯಾಂಕಿಂಗ್ ಕಮ್ಮಟ. ಸಂಜೆಯ ಹೊತ್ತು ಏನಾದರೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸುತ್ತಿದ್ದೇವು. ಅಂದು ಆಶುಭಾಷಣ.‌ ಪ್ರಾಚಾರ್ಯ ಎಚ್ಚೆಸ್ಕೆ ಅವರೂ ಇದ್ದರು. ಕೆ ಎನ್ ಮಹಾಬಲರಿಗೆ ಕಾಕತಾಳೀಯವಾಗಿ ಬಂದ ವಿಷಯ “ಕೆ ಎಸ್ ನ”. ವಿಷಯ ನೋಡಿ ತುಸು ನಸು ನಕ್ಕು ಮಹಾಬಲರು ಆರಂಭಿಸಿದರು ” ಕೆ ಎಸ್ ನರಸಿಂಹ ಸ್ವಾಮಿ ಅವರಿಗೂ ನನಗೂ ದೂರದ ಸಂಬಂಧ. ಅವರ ಎಂಟು ಮಕ್ಕಳಲ್ಲಿ ನಾನು ಐದನೆಯವನು” ಸಭೆ ಘೊಳ್ಳೆಂದಿತು. ಪ್ರಾಚಾರ್ಯರ ಮುಖದಲ್ಲಿ ಕಿರುನಗೆ. ಬಹಶಃ ಅಂದೇ “ನನ್ನ ಅಪ್ಪ ಕೆ ಎಸ್ ನ” ಗೆ ಬೀಜಾಂಕುರವಾಯಿತು ಅಂತ ಕಾಣುತ್ತದೆ.

೨೦೧೯-೨೦ ರಲ್ಲಿ ಮಹಾಬಲರಿಗೆ ಕೆ ಎಸ್ ನ ಅವರ ಬಗ್ಗೆ ತಮ್ಮ ನೆನಪುಗಳನ್ನು ದಾಖಲಿಸುವ ಮನಸ್ಸು ಬಂತು. ಅದಕ್ಕೆ ಕಾರಣ ಮಹಾಬಲರ ಮಾತುಗಳಲ್ಲಿಯೇ ಕೇಳಿ ;

“ಇತ್ತೀಚೆಗೆ ಕನ್ನಡದ ಶ್ರೇಷ್ಠ ವಿದ್ವಾಂಸರಾದ ವೆಂಕಟಾಚಲ ಶಾಸ್ತ್ರಿಗಳು ಮರೆಯಲಾಗದ ಮಹನೀಯರು ಮಾಲಿಕೆಯಲ್ಲಿ ಉಪನ್ಯಾಸ ನೀಡುತ್ತ ಕಳೆದ ಶತಮಾನದ ಕನ್ನಡ ಸಾರಸ್ವತ, ಸಾಂಸ್ಕೃತಿಕ ಲೋಕದ ಹಲವು ದಿಗ್ಗಜರುಗಳ ಸಾಧನೆಗಳ ಸಂಪೂರ್ಣ ಮಾಹಿತಿಗಳ ಲಭ್ಯವಿಲ್ಲವೆಂದೂ, ಬಹುತೇಕ ಸಂದರ್ಭಗಳಲ್ಲಿ ಅವರ ಕುಟುಂಬದ ಮೂರನೆಯ ನಾಲ್ಕನೆಯ ತಲೆಮಾರಿನ ಸದಸ್ಯರಿಗೂ ಈ ಸಾಧಕರ ಮಹತ್ತಿನ ಬಗ್ಗೆ ತಿಳಿದಿಲ್ಲವಾದ್ದರಿಂದ ಅವರ ಬಗೆಗಿನ ದಾಖಲೀಕರಣ ಕಷ್ಟವೆಂದೂ ವಿಷಾದಿಸಿದರು.

ಈ ನಮ್ರಜೀವಿಗಳಲ್ಲಿ ಬಹುಪಾಲು ಜನರು ತಮ್ಮ ಜೀವನಚರಿತ್ರೆಯನ್ನು ಬರೆಯದಿರುವುದೇ ನಿಖರವಾದ ದಾಖಲೀಕರಣದ ಪ್ರಕ್ರಿಯೆಗೆ ಅಡ್ಡಿಯಾಗಿದೆ ಎಂದೂ ಅವರು ತಮ್ಮ ಅಭಿಮತ ವ್ಯಕ್ತಪಡಿಸಿದರು.

ಆಗ ನನಗೆ ನಮ್ಮ ತಂದೆ ಕೆ.ಎಸ್.ನ ರವರೂ ಯಾವುದೇ ಸಲಹೆಗಳ ಆಮಿಷ ಎದುರಾದರೂ ತಮ್ಮ ಜೀವನ ಚರಿತ್ರೆಯನ್ನು ಕೃತಿರೂಪದಲ್ಲಿ ತರಲಿಲ್ಲವೆಂಬ ವಸ್ತುಸ್ಥಿತಿ ನೆನಪಾಯಿತು. ಅವರ ಅಭಿನಂದನ ಗ್ರಂಥ ಚಂದನದಲ್ಲಿ ಕೂಡ ಅವರ ಕಾವ್ಯದ ವಿಮರ್ಶೆ ಇದೆಯೇ ಹೊರತು ಜೀವನದ ಘಟನೆಗಳ ಸವಿಸ್ತಾರ ದಾಖಲೆಗಳಿಲ್ಲ. ನರಹಳ್ಳಿ ಬಾಲಸುಬ್ರಮಣ್ಯ ಅವರ ನುಡಿಮಲ್ಲಿಗೆ ಕೃತಿಯೂ ಬಹುತೇಕ ಕವನ ರೂಪುಗೊಂಡ ಹಿನ್ನಲೆಗೇ ಒತ್ತು ಕೊಟ್ಟಿತ್ತು .

ಇದ್ದಕ್ಕಿದ್ದಂತೆ ರವೀಂದ್ರರವರು ಒಂದು ದಿನ “ಸಮನ್ವಯ ಸಮಿತಿ ಕನ್ನಡವೇ ಸತ್ಯ” ವೇದಿಕೆಯಲ್ಲಿ ಕವಿಪುತ್ರನಾದ ನನ್ನಂತಹವರಿಗೆ ‘ಕವಿಜೀವನದ ಅಪರೂಪದ ಒಳನೋಟಗಳನ್ನು ಒದಗಿಸುವ ಸಾಂಸ್ಕೃತಿಕ ಜವಾಬ್ದಾರಿ’ ಇದೆಯೆಂದು ನೆನಪಿಸಿದರು (ನನ್ನ ಪುಣ್ಯ ಅವರು ಇಂಥ ದಾಖಲೀಕರಣಕ್ಕೆ ಕಾಲಮಿತಿಯನ್ನೇನೂ ಹೇರಲಿಲ್ಲ). ಆದರೆ ಹೇಮಚಂದ್ರ ಅವರು “ತುಂಬಾ ಕಾಯಿಸಬೇಡಿ’ ಎಂದು ರಾಯಚೂರಿನ ಕೋಟೆಯ ಮೇಲೆಯೇ ನಿಂತು ಎಚ್ಚರಿಸಿದರು.

ಹೀಗಾಗಿ ಆ ಸಿರಿವಂತ ಸಾಹಿತ್ಯ ಪರಂಪರೆಯಲ್ಲಿ ಹುಟ್ಟಿ ಬೆಳೆದ ಮತ್ತು ಇನ್ನೂ ಜೀವಿಸುತ್ತಿರುವ ಭಾಗ್ಯವನ್ನು ಸದಾ ನೆನೆಯುತ್ತಾ ಕವಿ ಕೆ.ಎಸ್.ನ ಅವರ ಬದುಕು (ಸಾಮಾಜಿಕ, ಸಾಂಸ್ಕೃತಿಕ, ಸಾಂಸಾರಿಕ) ಪರಿಪೂರ್ಣಗೊಳ್ಳಲು ಕಾರಣವಾದ ಪ್ರಸಂಗಗಳನ್ನು ಹಾಗೂ ಅವರು ನಿತ್ಯ ಕೃತಜ್ಞತೆಯಿಂದ ಸ್ಮರಿಸುತ್ತಿದ್ದ ವ್ಯಕ್ತಿಗಳನ್ನು ಈ ಲೇಖನ ಮಾಲಿಕೆಯಲ್ಲಿ ಚಿತ್ರಿಸುವ ಯತ್ನ ಮಾಡುತ್ತೇನೆ. ಪೂರ್ವಾಗ್ರಹವೂ ಅಲ್ಲದ ಪ್ರಶಂಸೆಯೂ ಅಲ್ಲದ ಒಂದು ಸುವರ್ಣ ಮಾರ್ಗವನ್ನು ಕ್ರಮಿಸಬೇಕಾದ ಜವಾಬ್ದಾರಿಯೂ ನನ್ನನ್ನು ಆವರಿಸಿದೆ.” ( ‘ನನ್ನ ಅಪ್ಪ ಕೆ ಎಸ್ ನ’ ಪುಸ್ತಕದ ಪೂರ್ವರೂಪ “ಕವಿ ನೆನಪು’ ಪಿಡಿಎಫ್ ಆವೃತ್ತಿಯಲ್ಲಿ ಮಹಾಬಲರ ಮಾತುಗಳು)

ನೆನಪುಗಳನ್ನು ಸಮನ್ವಯ ಸಮಿತಿಯ ವೇದಿಕೆಯಲ್ಲಿ ಹಂಚಿಕೊಳ್ಳಲು ಮಹಾಬಲ ಆರಂಭಿಸಿದರು. ಪಿಡಿಎಫ್ ರೂಪವನ್ನು ಬಿಡುಗಡೆ ಮಾಡಿದಾಗ ಪ್ರಸ್ತಾವನೆಯಲ್ಲಿ ಈ ರೀತಿ ಬರೆದರು.

“ನಾಡಿನ ಖ್ಯಾತ ಕವಿ ಕೆ.ಎಸ್. ನರಸಿಂಹಸ್ವಾಮಿಯವರ ಮಗನಾದ ಕಾರಣದಿಂದ ಅವರ ಬದುಕಿನ ಹಲವು ಮಹತ್ವದ ಹಾಗೂ ಜನರಿಗೆ ಅಷ್ಟಾಗಿ ಪರಿಚಿತವಲ್ಲದ ನೆನಪುಗಳನ್ನು ದಾಖಲಿಸುವ ಸಾಹಸಕ್ಕೆ ತೊಡಗಿದ್ದಕ್ಕೆ ಪ್ರಧಾನವಾಗಿ ಪ್ರೇರಣೆ ನೀಡಿದ್ದು “ಸಮನ್ವಯ ಸಮಿತಿ-ಕನ್ನಡವೇ ಸತ್ಯ” ಎಂಬ ಬಹಳ ವಿಶಿಷ್ಟ ವಾಟ್ಸಪ್ ವೇದಿಕೆ.

ಇಲ್ಲಿ “ಶುಭ ಬೆಳಗು,” ಬೆಳಗಿನ ವಂದನೆಗಳು” ಎಂದೆಲ್ಲ ಒಕ್ಕಣಿಸಿ ನಿದ್ದೆಯಿಂದೆಬ್ಬಿಸುವ ಕುಕ್ಕುಟಗಳಿಲ್ಲ. “ಇದೋ ನೋಡಿ ನನ್ನ ಸಾಧನೆ, ನಿಮಗೆ ಸಾಧ್ಯವೇ” ಎಂದು ತುತ್ತೂರಿ ಊದುವ ಆತ್ಮಪ್ರತ್ಯಯದ ಪ್ರಾಣಿಗಳಿಲ್ಲ.

ಕೇವಲ ಶುದ್ಧ ಹಾಗೂ ಪ್ರಾಮಾಣಿಕ ಅಭಿವ್ಯಕ್ತಿಗಳು ಇಲ್ಲಿರುವುದು. ಕಥೆ, ಕವನ (ಅವುಗಳೇ ಹೆಚ್ಚು), ಪ್ರಬಂಧ, ಸಚಿತ್ರಲೇಖನ, ಪ್ರವಾಸಕಥನ, ಹಾಸ್ಯ ಲಾಸ್ಯಗಳ ಶೋಭಾಯಾತ್ರೆಯೇ ಸಾಗಿದೆ. ಬೆನ್ನು ತಟ್ಟಿ ಹುರಿದುಂಬಿಸುವ, ಕೆಣಕಿ ಜಡವ ಚೇತನವಾಗಿಸುವ ಸಹೃದಯಗಣವೇ ಇಲ್ಲಿದೆ. ವೇದಿಕೆಯಲ್ಲಿ ತೇಲಿಬಂದ ಪ್ರಸ್ತುತಿಗಳಲ್ಲಿ ಅದೆಷ್ಟೋ ಕೃತಿಗಳಾಗಿ ಸರಸ್ವತಿಯ ಮಣಿಹಾರವಾಗಿದೆ. ಮತ್ತಷ್ಟು ಪ್ರಸ್ತುತಿಗಳು ಕೃತಿಗಳಾಗುವ ಎಲ್ಲ ಅರ್ಹತೆ ಹೊಂದಿವೆ.

ನಾನೂ ಇಲ್ಲಿ ಬಂದಾಗ ಒಬ್ಬ ಚಪ್ಪಾಳೆ ಹೊಡೆಯುವ ಪ್ರೇಕ್ಷಕ ಅಷ್ಟೆ. ದಿನ ಕಳೆದಂತೆ “ಪಡೆ ನೋಡಲ್ ಬಂದವಂಗೆಗುಡಿಯಂ ಹೊರಿಸಿದಂತಾಯ್ತು” ಅನ್ನುವ ಹಾಗಿದೆ ನನ್ನ ಸ್ಥಿತಿ. ಮೆರವಣಿಗೆ ನೋಡಬಂದವನಿಗೆ ಬಾವುಟ ಕೈಗಿಟ್ಟು ಮುನ್ನಡೆಸು ಎಂದು ಆತ್ಮವಿಶ್ವಾಸ ತುಂಬುವ ಸಾಹಿತ್ಯ ಪರಿಚಾರಕರು ಇಲ್ಲಿದ್ದಾರೆ. ಅದನ್ನು ಸದ್ಬಳಕೆ ಮಾಡಿಕೊಳ್ಳುವ ಪ್ರತಿಭಾವಂತ ಬರಹಗಾರರಿದ್ದಾರೆ.

ಸುಮ್ಮನೆ ಕಥೆ ಕೇಳುವ ಜನಮೇಜಯರಿಗಿಂತ, ಕುತೂಹಲದಿಂದ ಪ್ರತಿಕ್ರಿಯಿಸುವ ಮನೋರಮೆಯರೇ ಅಧಿಕ ಸಂಖ್ಯೆಯಲ್ಲಿರುವುದು ಈ ವೇದಿಕೆಯ ವಿಶೇಷ. ಈ ಕೃತಿ ಹೊರಬರಲು ವೇದಿಕೆಯ ಸಂಚಾಲಕ ಬಿ.ಎಸ್.ರವೀಂದ್ರ ಅವರ ಪ್ರೇರಣೆ ಹಾಗೂ ಮುಂದಾಳತ್ವವೇ ಕಾರಣ. ಅವರಿಗೆ ನನ್ನ ವಂದನೆಗಳು.”

ಈಗ ಮಹಾಬಲರ ನೆನಪುಗಳು ಪುಸ್ತಕ ರೂಪವನ್ನು ಪಡೆದುಕೊಂಡು ಕರುನಾಡಿಗರ ಕೈ ತಲುಪಿದೆ. ಪ್ರಟಣೆಯ ಸುತ್ಯಾರ್ಹ ಕೆಲಸ ಮಾಡಿದ ‘ಬಹುರೂಪಿ’ ಪ್ರಕಾಶನದವರು ಅಭಿನಂದನಾರ್ಹರು.

ಇದೊಂದು ಆತ್ಮಕಥೆ ಅಥವಾ ಜೀವನ ಚರಿತ್ರೆ ಅಲ್ಲ. ಲೇಖಕರು ಸ್ವತಃ ತಾವು ಅನುಭವಿಸಿದ ಘಟನೆಗಳನ್ನು ಸ್ವಾರಸ್ಯವಾಗಿ ಹೇಳುತ್ತಾ ಹೋಗಿದ್ದಾರೆ. ಅವರೇ ಹೇಳಿದಂತೆ “ಪೂರ್ವಾಗ್ರವೂ ಅಲ್ಲದ ಪ್ತಶಂಸೆಯೂ ಅಲ್ಲದ ಸುವರ್ಣ ಮಾರ್ಗವನ್ನು” ಅತೀ ಎಚ್ಚರಿಕೆಯಿಂದ ಸವೆಸಿದ್ದಾರೆ. ಪಾರದರ್ಶಕವಾದ, ಹದವಾದ ಹಾಸ್ಯ ಮಿಶ್ರಿತವಾದ ಬರೆಹ. ನೋವಿನ ಮಾತುಗಳೂ ಇವೆ, ಆದರೆ ಕಹಿಭಾವಕ್ಕೆ ಎಡೆಯಿಲ್ಲ. ಅಧ್ಯಾಯಗಳು ಐವತ್ತು, ಆದರೆ ಎರಡು ಅಥವ ಎರಡೂವರೆ ಪುಟ ಅಷ್ಟೆ. ಓದು ಎಲ್ಲಿಯೂ ಭಾರವೆನುಸುವುದಿಲ್ಲ. ಸಹೃದಯತೆಯಿಂದ ಕೂಡಿದ ಸರಳ ನೇರ ನಿರೂಪಣೆ. ಆತ್ಮೀಯವಾಗಿ ತರಾತುರಿಯಿಲ್ಲದೆ ಬಡಿಸುವ ಘನವಾದ ಊಟ.

ಮೊದಲ ಅಧ್ಯಾಯ ನರಸಿಂಹ ಸ್ವಾಮಿಯವರ ನೆನಪಿನ ಹೂರಣ. “ಅರಳಿತು ಮೈಸೂರ ಮಲ್ಲಿಗೆ”. ೧೯೪೨ ರ ಜನವರಿಯಲ್ಲಿ ಮೈಸೂರು ಮಹಾರಾಜಾ ಕಾಲೇಜಿನ ಅಂಗಳದಲ್ಲಿ ಬಿಡುಗಡೆಯಾದ ಸಂದರ್ಭ. ಎ ಆರ್ ಕೃಷ್ಣಶಾಸ್ತ್ರಿಗಳ ಆತಿಥ್ಯ. ಕೃತಿಗೆ ಡಿವಿಜಿಯವರ ಮುನ್ನುಡಿ. ಸಮಾರಂಭದಲ್ಲಿ ಹಾಜರಿದ್ದವರು ಬಿಎಂಶ್ರೀ, ಮಾಸ್ತಿ, ಡಿವಿಜಿ, ಕುವೆಂಪು, ತೀನಂಶ್ರೀ, ಡಿಎಲ್ಎನ್… ಮುಂತಾದ ಮಹನೀಯರು. ೨೭ ವರ್ಷದ ತರಣು ಕವಿಗೆ ಇದಕ್ಕಿಂತ ದೊಡ್ಡ ಸ್ವಾಗತ ಸಿಗಲು ಸಾಧ್ಯವೇ. ಮಹಾಬಲರು ಎ ಆರ್ ಕೃ ಬಗ್ಗೆ ಹೀಗೆ ಬರೆಯುತ್ತಾರೆ ” ಕೃಷ್ಣಶಾಸ್ತ್ರಿಗಳು ಕನ್ನಡ ಶ್ರೇಷ್ಠ ಸಾಹಿತ್ಯ ಪರಿಚಾರಕರು. ಉತ್ತಮ ಕೃತಿಗಳನ್ನು ಗಮನಿಸಿ, ಕವಿಗಳಿಗೆ ಮಾರ್ಗದರ್ಶನ ನೀಡಿದ್ದಷ್ಟೆ ಅಲ್ಲದೆ, ಕೃತಿ ಪ್ರಕಟಗೊಳ್ಳುವಂತೆ ಮಾಡಿ ಸಂತಸಪಡುತ್ತಿದ್ದ ಮಹಾನ್ ಚೇತನ” ಮಹಾಬಲರ ಕೃತಿಯ ವಿಶೇಷವೆಂದರೆ ಕೆ ಎಸ್ ನ ಅವರ ಒಡನಾಡಿಗಳ ಬಗ್ಗೆ ಬರೆಯುವಾಗ ಆ ದಿವ್ಯ ಚೇತನಗಳ ಸಕಾರ ಬದುಕಿಗೆ ಮೆರಗು ತುಂಬುತ್ತಾರೆ. ಅಂದಿನ ದಿನಗಳ‌ ಸಾಂಸ್ಕೃತಿಕ ಸಾಹಿತ್ಯಕ ಬದುಕಿಗೆ ಕನ್ನಡಿ ಹಿಡಿಯುತ್ತಾರೆ.

ಒಲವಿನ ಕವಿ ಹಂತ ಹಂತವಾಗಿ ಬೆಳೆದು ನವ್ಯಕ್ಕೂ ಸೈ ಅನ್ನಿಸಿಕೊಂಡರು. ನರಸಿಂಹ ಸ್ವಾಮಿಯವರ “ಬಾಗಿಲು ತರೆಯಿತು” ೧೯೭೬ ರಲ್ಲಿ ಪ್ರಕಟವಾಗಿ ೧೯೭೭ ಕೇಂದ್ರ ಸಾಹಿತ್ಯ ಅಕಾದೆಮಿಯ ಬಹುಮಾನವನ್ನು ಪಡೆದುಕೊಂಡಿತು. “ಪುಷ್ಪಕವಿಯ ಪರಾಕು” ಎಂದು ಕುಹಕವಾಡಿದ ಅಡಿಗರಿಗೆ ಕೆ ಎಸ್ ನ‌ ಪದ್ಯದಲ್ಲಿಯೇ ಉತ್ತರಿಸುತ್ತಾರೆ. ಅಡಿಗರೂ ಕವಿಯ ಬೆಳವಣಿಗೆಗೆ ಸಂತಸ ಪಡುತ್ತಾರೆ. ಈ ಕೃತಿಯನ್ನು ಹೊರತರಲು ಕಾರಣರಾದ ಜಿವಿ ಹಾಗೂ ಪ್ರಕಾಶಕ ಬಾಕಿನ ಬಗ್ಗೆ ಮಹಾಬಲರ ನೆನಕೆಗಳು ಅಭಿನಂದನೀಯ.

ಪುತಿನ ರ ಪ್ರೀತಿ, ಬೇಂದ್ರೆಯವರು ಮನೆಗೆ ನೀಡಿದ ಆತಿಥ್ಯ ಮತ್ತು ಬೇಂದ್ರೆಯವರ ಶಿಶು ಸಹಜ ಪ್ರೀತಿ. ನಿಸಾರ್ ಅಹಮದ್ ಅವರು ತೋರುವ ಗುರು ಗೌರವ …ಮೊದಲಾದ ಘಟನೆಗಳು ನಮ್ಮ ನೆನಪಿನ ಜೋಳಿಗೆಗೂ ಬಿದ್ದು ಹೋಗುತ್ತವೆ.

ಕವಿ, ಎಲ್ಲರಂತೆ ಬದುಕಿದವರು. ಜೀವನದ ಸವಾಲುಗಳನ್ನು ಎದುರಿಸಿದವರು. ಅಕಾದೆಮಿಕ್ ವಲಯದಿಂದ ಬಾರದೆ ಇದ್ದರೂ ಅವರ ಕೃತಿಗಳು ಹಲವಾರು ಡಾಕ್ಟರೇಟ್ ಅಧ್ಯಯನಗಳಿಗೆ ಒಳಗಾಯಿತು. ಮಹಾಬಲ ಈ ಎಲ್ಲವನ್ನೂ ಗುರುತಿಸುತ್ತಾರೆ. ನರಸಿಂಹ ಸ್ವಾಮಿಯವರ ಕಾಫಿ ಪ್ರೀತಿ, ಗೆಳೆಯರೊಂದಿಗಿನ ಆತ್ಮೀಯತೆ. ಕೆವಿ ಸುಬ್ಬಣ್ಣ ಕಳಿಸಿದ್ದ ನಡಿಗೆ ಬೆತ್ತದ ಪ್ರೀತಿ, ಕೆಲವೊಮ್ಮೆ ಸರಿಯಾಗಿ ನಡೆಸಿಕೊಳ್ಳದವರ ಬಗ್ಗೆ ಸಿಟ್ಟು.

ನರಸಿಂಹ ಸ್ವಾಮಿಯವರ ಕವನಗಳಿಗೆ ದನಿಯಾದವರೂ, ಕ್ಯಾಸೆಟ್ ಮಾಡಿದ ಅಶ್ವಥ್, ಸಹಾಯ ಮಾಡಿದ ಬಾಕಿನ, ಸುಮತೀಂದ್ರ ನಾಡಿಗ, ಶಿವಮೊಗ್ಗಾ ಸುಬ್ಬಣ್ಣ, ಇವರ ಕವಿತೆಗಳನ್ನು ಬರೆದುಕೊಡುತ್ತಿದ್ದ ಎಂ ವಿ ವೆಂಕಟೇಶ ಮಾರ್ತಿ… ಮುಂತಾದ ಹಲವರು ಸಾಹಿತ್ಯದ ಹಿರಿಯರ ಬಗ್ಗೆ ನೆನಪುಗಳು ಇಲ್ಲಿ ಅರಳಿಕೊಂಡಿದೆ.

ಎರಡು ಮುಖ್ಯವಾದ ಘಟನೆಗಳು, ಡಾ ರಾಜಕುಮಾರ್ ಅವರು ಕೆ ಎಸ್ ನ ಅವರ ಕ್ಯಾಸೆಟ್ ಬಿಡುಗಡೆ ಮಾಡಿದಾಗ ಇವರನ್ನು ಸನ್ಮಾನಿಸಿ, ನಮಸ್ಕರಿಸಿದ್ದು, ಕೆ ಎಸ್‌ನ‌ ಅವರ ‘ಮೈಸೂರ ಮಲ್ಲಿಗೆ’ ಕವನಗಳನ್ನು ಬಳಸಿಕೊಂಡ ಚಿತ್ರದಲ್ಲಿ “ಉತ್ತಮ ಚಲನಚಿತ್ರ ಗೀತಕಾರ’ ರಾಷ್ಟ್ರ ಪ್ರಶಸ್ತಿ ಬಂದಿದ್ದು ಗಮನೀಯ.
ಕೆ ಎಸ್ ನ ಅವರ ಕುಟುಂಬದ ಬಗೆಗಿನ ನೆನಪುಗಳನ್ನು ಮಹಾಬಲರು ಕೆದಕಿದ್ದಾರೆ.‌ ಮಹಾಬಲರೂ ನರಸಿಂಹ ಸ್ವಾಮಿಯವರ ಪ್ರಭಾವ ಸುಖವನ್ನು ಅನುಭವಿಸಿದ್ದಾರೆ. ಒಂದು ಘಟನೆ ಹೀಗಿದೆ.

“ಕೆ.ಆರ್. ನಗರದ ಸಾಹಿತ್ಯ ಸಂಘಟಕ, ಸಮಾಜಸೇವಕ ಹಾಗೂ ನನ್ನ ಆತ್ಮೀಯ ಮಿತ್ರ ಡಾ. ಭೇರ್ಯ ರಾಮಕುಮಾರ್ ಅವರು ಪ್ರತಿವರ್ಷ ಕೆಎಸ್‌ನ ಸ್ಮಾರಕ ರಾಜ್ಯಮಟ್ಟದ ಕವನ ಸ್ಪರ್ಧೆ ಏರ್ಪಡಿಸಿ ಮೈಸೂರಿನಲ್ಲಿ ಭಾರಿ ಪ್ರಶಸ್ತಿ ವಿತರಣಾ ಸಮಾರಂಭ ಏರ್ಪಡಿಸುತ್ತಾರೆ. ನಾನೂ ಬಿಡುವಿದ್ದಾಗಲೆಲ್ಲ ಕಾರ್ಯಕ್ರಮದಲ್ಲಿ ತಪ್ಪದೆ ಭಾಗವಹಿಸುತ್ತೇನೆ. ಸಭಾ ಕಾರ್ಯಕ್ರಮ ಮುಗಿದ ನಂತರ ರಾಜ್ಯದ, ಹೊರನಾಡಿನ ಮೂಲೆಮೂಲೆಗಳಿಂದ ಬಂದ ಉದಯೋನ್ಮುಖ ಕವಿ, ಕವಯತ್ರಿಯರು ನನ್ನೊಂದಿಗೆ ಸೆಲ್ಪಿ ತೆಗೆಸಿಕೊಳ್ಳಲು ಮುನ್ನುಗ್ಗುತ್ತಾರೆ. ನಾನು ಬಹಳ ಸಂಕೋಚದಿಂದ, “ನನ್ನ ಜತೆ ಫೋಟೊ ಏಕೆ? ನಾನು ಆ ಕವಿಯಲ್ಲ” ಎನ್ನುತ್ತೇನೆ. ಅದಕ್ಕೆ ಉತ್ತರವಾಗಿ ಒಮ್ಮೆ ಒಬ್ಬ ಮಹಿಳಾಮಣಿ, “ಅಯ್ಯೋ, ನಿಮ್ಮ ಫೋಟೊ ಯಾರಿಗೆ ಬೇಕು? ನಾನು ನಿಮ್ಮ ಮೂಲಕ ಕಾಣುತ್ತಿರುವುದು ನಿಮ್ಮ ತಂದೆಯವರನ್ನು” ಎಂದು ನಿಜದರ್ಶನ ಮಾಡಿಸಿದಳು. ಹೌದು, ಅದಲ್ಲವೇ ವಾಸ್ತವ!”

ಈ ರೀತಿಯ ಹಲವಾರು ಘಟನೆಗಳನ್ನು ಒಳಗೊಂಡ ಈ ಕೃತಿ ಕೆ ಎಸ್ ನ ಮತ್ತು ಅವರ ಸಮಕಾಲೀನರು, ಅಂದಿನ ಸಾಹಿತ್ಯ ಸಂಸ್ಕೃತಿ ಮತ್ತು ಕುಟುಂಬದ ಬಗ್ಗೆ ಬೆಳಕು ಚೆಲ್ಲುತ್ತದೆ. ಇದೊಂದು ಅಪರೂಪದ ಕೃತಿ. ಕನ್ನಡಿಗರು ಓದಬೇಕಾದ್ದು.


  •  ಬೆಂಶ್ರೀ ರವೀಂದ್ರ – ಹಿರಿಯ ಸಾಹಿತಿಗಳು, ಕವಿ, ಲೇಖಕರು, ಚಿಂತಕರು, ಬೆಂಗಳೂರು

Leave a Reply

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading