ದೇವರನಾಡಿನ ಮಗಳ ದುರಂತ ಕಥನ

ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ದೇವರನಾಡಿನ(ಕೇರಳ) ಮಗಳು ನರ್ಸ್ ನಿಮಿಷಾ ಪ್ರಿಯಾ ಗಲ್ಲಿಗೇರಲು ಇಂದೇ ಕಡೆಯ ದಿನವಾಗಿದ್ದು ಅವರನ್ನು ರಕ್ಷಿಸುವ ಅಂತಿಮ ಪ್ರಯತ್ನಗಳು ನಿರರ್ಥಕ ವಾಗಿದೆ. ಇಂದು(ಜುಲೈ16) ಅವರನ್ನು ಯೆಮನ್‌ ಆಡಳಿತ ಮರಣ ದಂಡನೆ ಜಾರಿ ಮಾಡಲಿದೆ. ಆಶಾ ಭಾವನೆ ಏನೆಂದರೆ ಯೆಮೆನ್ ಆಡಳಿತ ನಿಮಿಷಾ ಗಲ್ಲು ಶಿಕ್ಷೆಯನ್ನು ಮುಂದೂಡಿದೆ.  ಡಾ.ಗುರುಪ್ರಸಾದ ರಾವ್ ಹವಲ್ದಾರ್ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ನಿಮಿಷಾ ಪ್ರಿಯಾ ಅವರು ಕೇರಳದಲ್ಲಿ ಜನಿಸಿದ್ದು, ದಿನಗೂಲಿ ನೌಕರರ ಕುಟುಂಬಕ್ಕೆ ಸೇರಿದವರು. ನಿಮಿಷಾ 2008 ರಲ್ಲಿ ಉತ್ತಮ ಅವಕಾಶಗಳನ್ನು ಅರಸಿ ಯೆಮೆನ್‌ಗೆ ತೆರಳಿದರು. 2011 ರಲ್ಲಿ, ನಿಮಿಷಾ ಇಡುಕ್ಕಿಯವರಾದ ಟಾಮಿ ಥಾಮಸ್ ಎಂಬುವವರನ್ನು ವಿವಾಹವಾದರು. ಈ ದಂಪತಿಗಳು ಯೆಮೆನ್‌ನ ರಾಜಧಾನಿ ಸನಾದಲ್ಲಿ ನೆಲೆಸಿದ್ದರು. ಇವರಿಗೆ ಮಗಳು ಇದ್ದಾರೆ. ಬಳಿಕ, ನಿಮಿಷಾ ಪ್ರಿಯಾ ಮತ್ತು ಟಾಮಿ 2015 ರಲ್ಲಿ ಯೆಮೆನ್ ರಾಜಧಾನಿ ಸನಾದಲ್ಲಿ ತಮ್ಮದೇ ಆದ ವೈದ್ಯಕೀಯ ಕ್ಲಿನಿಕ್ (ವೈದ್ಯಕೀಯ ಚಿಕಿತ್ಸಾಲಯ) ಅನ್ನು ಪ್ರಾರಂಭಿಸಲು ನಿರ್ಧರಿಸಿದರು. ಆದರೆ, ಇದು ಅವರ ಜೀವನದ ದಿಕ್ಕನ್ನೆ ಬದಲಾಯಿಸಿತು.

ವ್ಯಾಪಾರ ಒಪ್ಪಂದವು ತಪ್ಪಾದ ದಾರಿಗೆ ತಿರುಗಿತ್ತು. ಅದು ಹೇಗೆಂದರೆ, ವಿದೇಶಿಯರು ಸ್ವತಂತ್ರವಾಗಿ ವ್ಯವಹಾರಗಳನ್ನು ನೋಂದಾಯಿಸಲು ಯೆಮೆನ್ ಕಾನೂನುಗಳು ಅನುಮತಿಸದ ಕಾರಣ, ನಿಮಿಷಾ ಪ್ರಿಯಾ ಅವರಿಗೆ ಸ್ಥಳೀಯ ಪಾಲುದಾರರ ಅಗತ್ಯವಿತ್ತು. ಹೀಗಾಗಿ, ಅವರು ಸ್ಥಳೀಯ ಪ್ರಾಯೋಜಕ ತಲಾಲ್ ಅಬ್ದೋ ಮಹ್ದಿ ಎಂಬುವವರನ್ನು ಸಂಪರ್ಕಿಸಿದರು. ಆದರೆ, ಈ ಪಾಲುದಾರಿಕೆಯು ಬೇಗನೆ ಹಳಸಿತು. ತಲಾಲ್ ಅಬ್ದೋ ಮಹ್ದಿ ಕ್ಲಿನಿಕ್‌ನ ಮಾಲೀಕತ್ವದ ಶೇ.67 ರಷ್ಟನ್ನು ತನಗೆ ನೀಡಬೇಕೆಂದು ನಿಮಿಷಾ ಪ್ರಿಯಾ ಮೇಲೆ ಒತ್ತಡ ಹೇರಿದರು. ಉಳಿದ ಶೇ.33 ರಷ್ಟನ್ನು ಆಕೆಯ ಹಳೆಯ ಉದ್ಯೋಗದಾತರಿಗೆ ನೀಡುವಂತೆ ಒತ್ತಾಯಿಸಿದರು.

ದೈಹಿಕವಾಗಿ ಮತ್ತು ಲೈಂಗಿಕವಾಗಿ ಹಲ್ಲೆ

ಕ್ಲಿನಿಕ್ ಚೆನ್ನಾಗಿ ಆದಾಯ ಗಳಿಸಲು ಪ್ರಾರಂಭಿಸಿದಾಗ, ತಲಾಲ್ ಅಬ್ದೋ ಮಹ್ದಿ ಲಾಭವನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಿದರು. ಅಲ್ಲದೆ, ಸಂಪೂರ್ಣ ನಿಯಂತ್ರಣವನ್ನು ತಾನೇ ತೆಗೆದುಕೊಳ್ಳಲು ಮುಂದಾದರು. ನಿಮಿಷಾ ಪ್ರಿಯಾ ಆತನನ್ನು ಪ್ರಶ್ನಿಸಿದಾಗ, ತಲಾಲ್ ಅಬ್ದೋ ಮಹ್ದಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಕಿರುಕುಳ ನೀಡಲು ಪ್ರಾರಂಭಿಸಿದರು ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ನಿಮಿಷಾ ಪ್ರಿಯಾ ಮತ್ತು ಅವರ ಕುಟುಂಬದವರ ಪ್ರಕಾರ, ಕಿರುಕುಳ ಕೇವಲ ಹಣಕಾಸಿಗೆ ಸೀಮಿತವಾಗಿರಲಿಲ್ಲ. ತಲಾಲ್ ಅಬ್ದೋ ಮಹ್ದಿ ಹಲವಾರು ಬಾರಿ ತನ್ನ ಮೇಲೆ ದೈಹಿಕವಾಗಿ ಮತ್ತು ಲೈಂಗಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಆಕೆ ಆರೋಪಿಸಿದ್ದಾರೆ.

ಮದುವೆಯಾಗಿದ್ದಾನೆ ಎಂದು ಸುಳ್ಳು

ಆತ ತನ್ನ ಪಾಸ್‌ಪೋರ್ಟ್ ಬಳಸಿ ತನ್ನ ಚಲನವಲನಗಳನ್ನು ನಿಯಂತ್ರಿಸುತ್ತಿದ್ದ ಮತ್ತು ವಿವಾಹದ ಫೋಟೋವನ್ನು ಬದಲಾಯಿಸಿ ನ್ಯಾಯಾಲಯದಲ್ಲಿ ತನ್ನನ್ನು ಮದುವೆಯಾಗಿದ್ದಾನೆ ಎಂದು ಸುಳ್ಳು ಹೇಳಿದ್ದಾನೆ ಎಂದು ತಿಳಿಸಲಾಗಿದೆ. 2015 ರಲ್ಲಿ ತಲಾಲ್ ಅಬ್ದೋ ಮಹ್ದಿ ಕೇರಳಕ್ಕೆ ಬಂದು ಆಕೆಯ ಕುಟುಂಬದೊಂದಿಗೆ ಇದ್ದನು. ಆ ಸಮಯದಲ್ಲಿ ಆತ ಮದುವೆಯ ದಾಖಲೆಗಳನ್ನು ತಿರುಚಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದನು. ನಿಮಿಷಾ ಪ್ರಿಯಾ ಅವರ ದೂರುಗಳ ಕಾರಣದಿಂದಾಗಿ ತಲಾಲ್ ಅಬ್ದೋ ಮಹ್ದಿ ಹಲವಾರು ಬಾರಿ ಜೈಲಿಗೆ ಹೋದರೂ, ಆತ ತನ್ನ ಪ್ರಭಾವವನ್ನು ಮುಂದುವರಿಸಿದನು. ಆಕೆಯ ಪಾಸ್‌ಪೋರ್ಟ್ ಅವನ ಬಳಿಯೇ ಉಳಿಯಿತು.

2020ರಲ್ಲಿ ನಿಮಿಷಾ ಪ್ರಿಯಾಗೆ ಮರಣದಂಡನೆ

ಜುಲೈ 2017 ರಲ್ಲಿ, ನಿಮಿಷಾ ಪ್ರಿಯಾ ತನ್ನ ಪಾಸ್‌ಪೋರ್ಟ್ ಕೇಳಲು ಮತ್ತೆ ತಲಾಲ್ ಅಬ್ದೋ ಮಹ್ದಿಯನ್ನು ಜೈಲಿನಲ್ಲಿ ಭೇಟಿಯಾದರು. ಆತನನ್ನು ಶಾಂತಗೊಳಿಸಲು ಔಷಧಿ ನೀಡುವಂತೆ ಜೈಲಿನ ಅಧಿಕಾರಿಯೊಬ್ಬರು ಸೂಚಿಸಿದರು ಎನ್ನಲಾಗಿದೆ. ನಿಮಿಷಾ ಪ್ರಿಯಾ ತಲಾಲ್ ಅಬ್ದೋ ಮಹ್ದಿಗೆ ಇಂಜೆಕ್ಷನ್ (sedatives) ನೀಡಿದರು. ಆದರೆ, ಅತಿಯಾದ ಡೋಸ್‌ನಿಂದ ಆತ ಮೃತಪಟ್ಟನು. ಆತಂಕದಲ್ಲಿ, ಅವರು ತನ್ನ ಸಹೋದ್ಯೋಗಿ ಯೆಮೆನ್ ನರ್ಸ್ ಸಹಾಯವನ್ನು ಕೋರಿದರು. ಆಕೆ ದೇಹವನ್ನು ತುಂಡು ಮಾಡಿ, ನೀರಿನ ಟ್ಯಾಂಕ್‌ನಲ್ಲಿ ಎಸೆಯಲು ಸಲಹೆ ನೀಡಿದಳು. ಇಬ್ಬರೂ ತಲೆಮರೆಸಿಕೊಂಡರು. ಆದರೆ, ಬಳಿಕ ಅವರನ್ನು ಬಂಧಿಸಲಾಯಿತು. 2020ರಲ್ಲಿ, ಯೆಮೆನ್ ನ್ಯಾಯಾಲಯವು ನಿಮಿಷಾ ಪ್ರಿಯಾ ಅವರಿಗೆ ಮರಣದಂಡನೆ ವಿಧಿಸಿತು. ಆಕೆಯ ಮೇಲ್ಮನವಿಗಳನ್ನು ತಿರಸ್ಕರಿಸಲಾಯಿತು.

‘ಬ್ಲಡ್ ಮನಿ’ಮೂಲಕ ಕ್ಷಮಾದಾನ

ನಿಮಿಷಾ ಪ್ರಿಯಾ ಅವರ ಬಿಡುಗಡೆಗೆ ಒತ್ತಾಯಿಸಲು ಭಾರತದಲ್ಲಿ ‘ಸೇವ್ ನಿಮಿಷಾ ಪ್ರಿಯಾ ಇಂಟರ್ನ್ಯಾಷನಲ್ ಆಕ್ಷನ್ ಕೌನ್ಸಿಲ್’ ಅನ್ನು ರಚಿಸಲಾಯಿತು.ಯೆಮೆನ್‌ನಲ್ಲಿ ಶರಿಯಾ ಕಾನೂನು ಜಾರಿಯಲ್ಲಿದೆ. ‘ಬ್ಲಡ್‌ ಮನಿ’ ಕೊಟ್ಟು ಶಿಕ್ಷೆಯಿಂದ ಪಾರಾಗಲು ಅವಕಾಶವಿದೆ.ಇದರಂತೆಯೇ ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ ಅನುಮತಿಸಲಾದ ,ಬಲಿಪಶುವಿನ ಕುಟುಂಬಕ್ಕೆ ‘ಬ್ಲಡ್ ಮನಿ’ (ರಕ್ತದ ಹಣ) ಅಥವಾ ‘ದಿಯ್ಯಾ’ (Blood Money) ಪಾವತಿಸುವ ಮೂಲಕ ಕ್ಷಮಾದಾನ ಪಡೆಯಲು ಪ್ರಯತ್ನಿಸಲಾಯಿತು. ಜೂನ್ 2024 ರಲ್ಲಿ, ಭಾರತ ಸರ್ಕಾರವು ತಲಾಲ್ ಅಬ್ದೋ ಮಹ್ದಿಯ ಕುಟುಂಬದೊಂದಿಗೆ ಮಾತುಕತೆಗಳನ್ನು ಪ್ರಾರಂಭಿಸಲು 40,000ಲಕ್ಷ ಹಣವನ್ನು ವರ್ಗಾವಣೆಯನ್ನು ಅನುಮೋದಿಸಿತು. ಆದರೆ, ಯೆಮೆನ್ ಅಧ್ಯಕ್ಷರು ಜುಲೈ 16 ರಂದು ಗಲ್ಲು ಶಿಕ್ಷೆಯನ್ನು ಅನುಮೋದಿಸಿದರು.ಈ ನಡುವೆ ಸೇವ್ ನಿಮಿಷಾ ಪ್ರಿಯಾ ಇಂಟರ್​​ನ್ಯಾಷನಲ್​ ಆ್ಯಕ್ಷನ್ ಕೌನ್ಸಿಲ್ ಕೊನೆ ಹಂತದ ಪ್ರಯತ್ನವೊಂದನ್ನು ಮಾಡಿದೆ.

ಸೇವ್ ನಿಮಿಷಾ ಪ್ರಿಯಾ ಇಂಟರ್​​ನ್ಯಾಷನಲ್​ ಆಕ್ಷನ್ ಕೌನ್ಸಿಲ್​ನ ಸದಸ್ಯರಾದ ಸ್ಯಾಮುಯೆಲ್​ ಜೆರೊಮೆ ಯೆಮೆನ್​ನಲ್ಲಿದ್ದು, ಹಲವು ತಿಂಗಳ ಪ್ರಯತ್ನ ಫಲವಾಗಿ ಮಂಡಳಿಯು ಇದೀಗ ಸಂತ್ರಸ್ತರ ಮುಖಾಮುಖಿ ಚರ್ಚೆ ಯನ್ನು ಸ್ಥಳೀಯ ಜೈಲು ಅಧಿಕಾರಿಗಳ ಸಹಾಯದಿಂದ ಸಭೆಯನ್ನು ಏರ್ಪಡಿಸಲಾಗಿತ್ತು.

ಮರಣದಂಡನೆ ಆದೇಶದ ನಡುವೆಯೂ ಇದೊಂದು ಪ್ರಯತ್ನ ನಿಮಿಷಾಗೆ ದೊಡ್ಡ ಭರವಸೆಯಾಗಿತ್ತು. ತಮ್ಮ ಮರಣದಂಡನೆ ಆದೇಶ ಹಿಂಪಡೆಗೆ ಪ್ರತಿಯಾಗಿ ನೀಡುವ ಬ್ಲಡ್​ ಮನಿಯನ್ನು ಸಂತ್ರಸ್ತರ ಕುಟುಂಬ ಒಪ್ಪಬಹುದು ಎಂಬ ನಂಬಿಕೆ ಇತ್ತು ಆದರೆ ಸಂತ್ರಸ್ತ ಕುಟುಂಬಕ್ಕೆ ಬ್ಲಡ್​ಮನಿ (ಸಾವಿಗೆ ಹಣದ ರೂಪದಲ್ಲಿ ಕುಟುಂಬಕ್ಕೆ ನೀಡುವ ಪರಿಹಾರ) 7.5 ಕೋಟಿ (ಅಂದಾಜು 900,000 ಡಾಲರ್​) ಯನ್ನು ಕುಟುಂಬ ತಿರಸ್ಕರಿಸಿದರು.

ಕೇಂದ್ರ ಸರ್ಕಾರದ ಅಸಹಾಯಕತೆ

ಮೊದಲು ಇರಾನ್​ ಜೊತೆಗೆ ಮಾತುಕತೆ ನಡೆಸುವ ಪ್ರಯತ್ನ ನಡೆದಿತ್ತು. ಆದರೆ, ಯೆಮನ್‌ನಲ್ಲಿ ಹೌತಿ ನಾಯಕತ್ವ ಪ್ರಭಾವ ಹಾಗೂ ಅಲ್ಲಿನ ಪ್ರಾದೇಶಿಕ ಉದ್ವಿಗ್ನತೆಗಳು ಮತ್ತು ವ್ಯಾಪಕವಾದ ಪಶ್ಚಿಮ ಏಷ್ಯಾದ ಸಂಘರ್ಷವು ಆ ಪ್ರಯತ್ನಗಳನ್ನು ಸ್ಥಗಿತಗೊಳಿಸಿತು.

ನಿಮಿಷ ಪ್ರಿಯಾ ಅವರನ್ನು ರಕ್ಷಿಸುವುದಕ್ಕೆ ರಾಜತಾಂತ್ರಿಕ ಮಾರ್ಗಗಳನ್ನು ಬಳಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ‘ಸೇವ್‌ ನಿಮಿಷ ಪ್ರಿಯಾ–ಇಂಟರ್‌ನ್ಯಾಷನಲ್‌ ಆ್ಯಕ್ಷನ್‌ ಕೌನ್ಸಿಲ್‌’ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಗುರುವಾರ ವಿಚಾರಣೆ ನಡೆಸುವ ಸಂದರ್ಭದಲ್ಲಿಕೇಂದ್ರ ಸರ್ಕಾರದ ಅಸಹಾಯಕತೆ ಬಗ್ಗೆ ಅಟಾರ್ನಿ ಜನರಲ್‌ ಆರ್‌.ವೆಂಕಟರಮಣಿ- ಹೇಳುತ್ತಾ

‘ ತನ್ನ ಪ್ರಜೆಗಳನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದ್ದು ನಿಮಿಷ ಪ್ರಿಯಾ ವಿಚಾರದಲ್ಲಿ ಏನೆಲ್ಲಾ ಮಾಡಬಹುದೋ ಅದನ್ನೆಲ್ಲ ಮಾಡುತ್ತಿದೆ.ಸದ್ಯದ ಮಟ್ಟಿಗೆ ಗಲ್ಲು ಶಿಕ್ಷೆ ಜಾರಿಯನ್ನು ಅಮಾನತಿನಲ್ಲಿಡಲು ಸಾಧ್ಯವಾಗುವಂತಹ ದಾರಿಯನ್ನು ಪತ್ತೆ ಮಾಡುವಂತೆ ಆ ಪ್ರದೇಶದ ಪಬ್ಲಿಕ್‌ ಪ್ರಾಸಿಕ್ಯೂಟರ್‌ಗೆ ಸರ್ಕಾರ ಇತ್ತೀಚೆಗೆ ಪತ್ರವನ್ನೂ ಬರೆದಿತ್ತು. ಯೆಮನ್‌ನಲ್ಲಿ ಹೆಚ್ಚು ಪ್ರಭಾವ ಹೊಂದಿರುವ ಕೆಲವು ಶೇಖ್‌ಗಳ ಜೊತೆಗೆ ಮಾತುಕತೆಯನ್ನೂ ನಡೆಸಿದೆ’ ಎಂದೂ ಅವರು ಮಾಹಿತಿ ನೀಡಿದರು. ಯೆಮನ್‌ನಲ್ಲಿರುವ ಹುಥಿ ಬಂಡುಕೋರ ಸಂಘಟನೆಯ ಬಗ್ಗೆ ಪ್ರಸ್ತಾಪಿಸಿದ ಅಟಾರ್ನಿ ಜನರಲ್‌, ಆ ಸಂಘಟನೆಯನ್ನು ರಾಜತಾಂತ್ರಿಕವಾಗಿಯೂ ಮಾನ್ಯತೆ ನೀಡಿಲ್ಲ.ಈ ವಿಚಾರದಲ್ಲಿ ಕೇಂದ್ರ ಸರ್ಕಾರವು ಒಂದು ನಿರ್ದಿಷ್ಟ ಹಂತದವರೆಗೆ ಹೋಗಬಹುದು. ನಾವು ಈಗಾಗಲೇ ಆ ಹಂತವನ್ನು ತಲುಪಿದ್ದೇವೆ.’ ‘ಗಲ್ಲು ಶಿಕ್ಷೆ ಜಾರಿಯನ್ನು ಅಮಾನತಿನಲ್ಲಿಡಲಾಗಿದೆ ಎಂಬ ಮಾಹಿತಿ ಅನೌಪಚಾರಿಕ ಮೂಲಗಳಿಂದ ತಿಳಿದು ಬಂದಿದೆ.

ಆದರೆ ಇದು ಎಷ್ಟರ ಪಟ್ಟಿಗೆ ಸತ್ಯ ಎನ್ನುವುದು ನಮಗೆ ಖಾತರಿ ಇಲ್ಲ. ‌ಯೆಮನ್‌ನಲ್ಲಿ ನಿಜಕ್ಕೂ ಏನಾಗುತ್ತಿದೆ ಎನ್ನುವುದು ಸರ್ಕಾರಕ್ಕೆ ತಿಳಿದಿಲ್ಲ’ ಕೇಂದ್ರದ ಅಸಹಾಯಕ ಸ್ಥಿತಿಯ ಬಗ್ಗೆ ತಿಳಿಸಿದ್ದಾರೆ.

ಧಾರ್ಮಿಕ ಗುರವಿನ ಕೊನೆಯ ಪ್ರಯತ್ನ:

ಕೇರಳದ ಪ್ರಭಾವಿ ಸುನ್ನಿ ಮುಸ್ಲಿಂ ಧಾರ್ಮಿಕ ಗುರು ಕಾಂತಪುರಂ ಎ.ಪಿ. ಅಬೂಬಕ್ಕರ್‌ ಮುಸ್ಲಿಯಾರ್‌ ಮಧ್ಯಪ್ರವೇಶಿಸಿದ್ದಾರೆ. ‌ಶೇಕ್‌ ಅಬೂಬಕ್ಕರ್ ಅವರು ಯೆಮೆನ್‌ನಲ್ಲಿರುವ ಧಾರ್ಮಿಕ ಮುಖಂಡ ಶೇಕ್‌ ಹಬೀರ್‌ ಉಮರ್‌ ನೇತೃತ್ವದಲ್ಲಿ ಸಭೆ ನಡೆಸಿದ್ದು, ಇದರಲ್ಲಿ ಮಹ್ದಿ ಕುಟುಂಬದ ಸದಸ್ಯರು ಭಾಗವಹಿಸಿದ್ದಾರೆ. ನಿಮಿಷಾ ಮಾಡಿದ ತಪ್ಪನ್ನು ಕ್ಷಮಿಸುವುದಕ್ಕಾಗಿ ಸಂತ್ರಸ್ತರು ಅಥವಾ ಅವರ ಕುಟುಂಬದವರಿಗೆ ಪ್ರಕರಣದ ಆರೋಪಿಗಳು ಪರಿಹಾರದ ರೂಪದಲ್ಲಿ ನೀಡುವ ಮೊತ್ತ ‘ಬ್ಲಡ್‌ ಮನಿ’ ನೀಡುವ ಕುರಿತು ಮಾತುಕತೆಗಳು ನಡೆಯುತ್ತಿವೆ. ಆದರೆ, ಈ ಕುರಿತು ಇದುವರೆಗೂ ಅಧಿಕೃತ ಸಂದೇಶವು ಪ್ರಕಟಗೊಂಡಿಲ್ಲ. ಮುಸ್ಲಿಯಾರ್‌ ಅವರ ಪ್ರಧಾನ ಕಚೇರಿಯಲ್ಲಿ ಈ ವಿಚಾರಕ್ಕೆ ಸಂಬಂಧಿಸಿ ಮಾತುಕತೆ ನಡೆಸುವುದಕ್ಕಾಗಿಯೇ ಕಚೇರಿ ಆರಂಭಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿದೆ.

ಇದು ಕೇವಲ ಕಾನೂನು ಪ್ರಕರಣವಲ್ಲ, ಇದೊಂದು ಮಾನವೀಯ ಕಥೆ. ಕರುಣೆ, ನ್ಯಾಯವು ನಿಮಿಷಾ ಪ್ರಿಯಾ ರಂತಹ ಹಲವಾರು ಪ್ರಕರಣಗಳ ಒಂದು ಸಂಕೀರ್ಣ ಪರಿಸ್ಥಿತಿಯನ್ನು ತೋರಿಸುತ್ತದೆ. ಇದರಲ್ಲಿ ಆರ್ಥಿಕ ಸಂಕಷ್ಟಗಳು, ಕಿರುಕುಳ ಮತ್ತು ಕಾನೂನು ತೊಡಕುಗಳು ಸೇರಿವೆ. ಈ ಪ್ರಕರಣವು ಭಾರತೀಯ ಪ್ರಜೆಗಳು ವಿದೇಶದಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಎತ್ತಿ ತೋರಿಸುತ್ತಿದೆ.ಕೊನೆಯದಾಗಿ ನಿಮಿಷಾ ಅವರಿಗೆ ಸಾವು ಆಗದಿರಲಿ ಎಂಬ ಪ್ರಾರ್ಥನೆ ಫಲಿಸಲಿ


  •  ಡಾ.ಗುರುಪ್ರಸಾದ ರಾವ್ ಹವಲ್ದಾರ್ – ಲೇಖಕರು ಮತ್ತು ಉಪನ್ಯಾಸಕರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW