82ರ ಇಳಿ ವಯಸ್ಸಿನ ಲೇಖಕಿ ಹೆಚ್. ವಿ. ಜಯಲಕ್ಷ್ಮಿ ಅವರ ‘ಅಮ್ಮನಂಗಳದಲ್ಲಿ ಆರೋಗ್ಯ’ ಕೃತಿಯ ಕುರಿತು ಲೇಖಕರಾದ ರವಿನಾಗ್ ತಾಳ್ಯ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಅಮ್ಮನಂಗಳದಲ್ಲಿ ಆರೋಗ್ಯ
ಲೇಖಕರು : ಹೆಚ್. ವಿ. ಜಯಲಕ್ಷ್ಮಿ
ಪ್ರಕಾಶನ : ಹೆಚ್.ಎಸ್.ಆರ್.ಎ ಪ್ರಕಾಶನ
ಪ್ರಕಾರ : ಆರೋಗ್ಯ
ಬೆಲೆ :೧೨೦.೦೦
ಕನ್ನಡಮ್ಮನ ತೇರು ಬಳಗದ ಮೂಲಕ ಯುಗಾದಿ ಹಬ್ಬದ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಸಾಹಿತ್ಯ ಸ್ಪರ್ಧೆಯಲ್ಲಿ ನನಗೆ ಪುಸ್ತಕ ಬಹುಮಾನವಾಗಿ “ಯುಗಾದಿ” ಕವನ ಸಂಕಲನ ಮತ್ತು “ಅಮ್ಮನಂಗಳದಲ್ಲಿ ಆರೋಗ್ಯ” ಎಂಬ ಎರಡು ಪುಸ್ತಕಗಳನ್ನು ಶ್ರೀಯುತ ಚನ್ನಕೇಶವ. ಜಿ ಲಾಳನಕಟ್ಟೆರವರು ಅಂಚೆ ಮೂಲಕ ಕಳುಹಿಸಿಕೊಟ್ಟಿದ್ದರು. ಈ ಎರಡು ಪುಸ್ತಕಗಳ ಪೈಕಿ ಶ್ರೀಯುತ ಚನ್ನಕೇಶವ. ಜಿ ಲಾಳನಕಟ್ಟೆ ರವರ “ಯುಗಾದಿ” ಎಂಬ ಕವನ ಸಂಕಲನದ ಕುರಿತ ನನ್ನ ಅನಿಸಿಕೆಯನ್ನು ಈ ಮೊದಲು ತಮ್ಮೊಂದಿಗೆ ಹಂಚಿಕೊಂಡಿದ್ದೆ.
ಇದೀಗ ಅಮ್ಮನಂಗಳದಲ್ಲಿ ಆರೋಗ್ಯ ಎಂಬ ಪುಸ್ತಕದ ಬಗ್ಗೆ ನನ್ನ ಅಭಿಪ್ರಾಯವನ್ನು ತಮ್ಮ ಮುಂದುರಿಸುತ್ತಿದ್ದೇನೆ.

ಈ ಪುಸ್ತಕದ ಕರ್ತೃ ಶ್ರೀಮತಿ ಹೆಚ್. ವಿ. ಜಯಲಕ್ಷ್ಮಿರವರು. ಮಾತೃ ಸಮಾನರಾದ ಈ ಹಿರಿಯ ಚೇತನ ತಮ್ಮ 82ರ ಇಳಿ ವಯಸ್ಸಿನಲ್ಲಿಯೂ ಸಹ ಒಂದು ಕೃತಿಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡುವ ಮೂಲಕ ಪುಸ್ತಕಗಳ ಓದು ಮತ್ತು ಬರಹದ ಹವ್ಯಾಸಗಳಿಂದ ಅಂತರ ಕಾಯ್ದುಕೊಂಡಿರುವ ಯುವ ಜನತೆಗೆ ಮಾದರಿಯಾಗಿದ್ದಾರೆ.
ಅದಾಗಿ ಈ ಅಮ್ಮನಂಗಳದಲ್ಲಿ ಆರೋಗ್ಯ ಕೃತಿಯು ಆಧುನಿಕ ಜಗತ್ತಿಗೆ ಸಾಂಪ್ರದಾಯಿಕ ಮತ್ತು ಔಷಧೀಯ ಸತ್ವಗಳನ್ನು ಹೊಂದಿರುವ ಬಗೆ ಬಗೆಯ ಖಾದ್ಯಗಳನ್ನು ತಯಾರಿಸುವ ವಿಧಾನವನ್ನು ತಿಳಿಸುವ ಪಾಕ ಶಾಸ್ತ್ರದ ಪುಸ್ತಕವಾಗಿದೆ.
ಸಾಮಾನ್ಯವಾಗಿ ಬಹುತೇಕ ಗಂಡಸರು ಹೆಂಡತಿಯ ಅಡುಗೆ ಕೈರುಚಿಗಿಂತ ಅಮ್ಮನ ಅಡುಗೆಯ ಕೈರುಚಿಯನ್ನೇ ಹೆಚ್ಚಾಗಿ ಹೊಗಳುತ್ತಿರುತ್ತಾರೆ. ಈ ಕಾರಣವಾಗಿ ಶ್ರೀಮತಿಯ ಕೆಂಗಣ್ಣಿಗೆ ಗುರಿಯಾದವರೂ ಉಂಟು. ವಾಸ್ತವದಲ್ಲಿ ಅಮ್ಮನ ಕೈರುಚಿಯ ಕೈ ಮೇಲಾಗಿರುವುದಕ್ಕೆ ಅನೇಕ ಕಾರಣಗಳಿವೆ. ಆಧುನಿಕ ಅಡುಗೆ ಸಾಧನಗಳ ಬಳಕೆ, ರಸಗೊಬ್ಬರಗಳನ್ನು ಹಾಕಿ, ಅತಿಯಾದ ಕೀಟನಾಶಕಗಳನ್ನು ಸಿಂಪಡಿಸಿ ಬೆಳೆದ ಹೈಬ್ರಿಡ್ ತಳಿಯ ತರಕಾರಿ ಮತ್ತು ಆಹಾರ ಧಾನ್ಯಗಳ ಬಳಕೆ, ತಗ್ಗಿದ ಮಣ್ಣಿನ ಗುಣಮಟ್ಟ, ಬದಲಾದ ವಾತಾವರಣ, ಬದಲಾದ ಹವಾಗುಣ ಇವೆಲ್ಲ ಕಾರಣಗಳಿಂದ ತಲೆಮಾರಿನಿಂದ ತಲೆಮಾರಿಗೆ ಆಹಾರದ ಮೂಲ ಸ್ವಾದ, ರುಚಿ ಮತ್ತು ಪರಿಮಳ ಕ್ಷೀಣಿಸುತ್ತಿರುವುದಂತೂ ನಿಜ.
ಇದರ ಜೊತೆ ಜೊತೆಗೆ ತಲೆಮಾರಿನಿಂದ ತಲೆಮಾರಿಗೆ ಔಷಧೀಯ ಸತ್ವವಿರುವ ಪ್ರಾಚೀನ ಅಥವಾ ಸಾಂಪ್ರದಾಯಿಕ ಅಡುಗೆಗಳು ಸಹ ಕಣ್ಮರೆಯಾಗುತ್ತಿವೆ. ಈಗಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಮುಂದಿನ ತಲೆಮಾರಿಗೆ ನೆರವಾಗುವ ಸಾಂಪ್ರದಾಯಿಕ ಶೈಲಿಯ ಅಡುಗೆ ತಯಾರಿಕೆ ವಿಧಾನಗಳನ್ನು ದಾಖಲಿಸಿಡುವುದು ನಿಜಕ್ಕೂ ಅನಿವಾರ್ಯವಾಗಿದೆ. ಇಂತಹ ಸಾಂಪ್ರದಾಯಿಕ ಅಡುಗೆಗಳನ್ನು ಮುಂದಿನ ತಲೆಮಾರಿಗೂ ಕೊಂಡೊಯ್ಯುವ ಮಹತ್ಕಾರ್ಯವನ್ನು ಶ್ರೀಮತಿ ಹೆಚ್ ವಿ ಜಯಲಕ್ಷ್ಮಿರವರು ಮಾಡಿದ್ದಾರೆ ಎಂತಲೇ ಹೇಳಬಹುದು.

ಈ ಪುಸ್ತಕ ಬಹುಮಾನ ನನಗೆ ಅಂಚೆ ಮೂಲಕ ದೊರೆತ ದಿನ ನನ್ನ ಜೊತೆ 7ನೇ ತರಗತಿಯಲ್ಲಿ ಓದುತ್ತಿರುವ ನನ್ನ ಮಗಳೂ ಸಹ ಇದ್ದಳು. ಈ ಪುಸ್ತಕ ಅವಳ ಮನ ಸೆಳೆದದ್ದು ನಿಜಕ್ಕೂ ನನಗೆ ಸಂತಸವಾಯಿತು. ಈ ಪುಸ್ತಕ ಓದಿ ನನ್ನ ತಾಯಿಯ ಮೇಲ್ವಿಚಾರಣೆಯಲ್ಲಿ ಒಂದು ದಿನ ಜೀರಾನ್ನ ತಯಾರು ಮಾಡಿ ನನ್ನ ಬಾಯಲ್ಲಿ ಒಂದು ಚಮಚ ಜೀರಾನ್ನ ಇಟ್ಟು ಕಣ್ಮಿಟುಕಿಸಿ, ನಗುತ್ತಾ “ಹೇಗಿದೆ ಪಪ್ಪಾ? “ ಎಂದಳು. ಮಗಳು ಮೊದಲ ಬಾರಿಗೆ ತಯಾರಿಸಿದ ಅಡುಗೆ, ಜರಿಯಲಾದೀತೆ? ತುಂಬಾ ಚೆನ್ನಾಗಿದೆಯಮ್ಮಾ ಎಂದಾಗ ಅವಳಿಗೆ ಹಿಗ್ಗೋ ಹಿಗ್ಗು. ಬಿಡುವಿನ ವೇಳೆ ನನ್ನ ತಾಯಿ ಮತ್ತು ಮಗಳು ಇದರಲ್ಲಿನ ಅಡುಗೆಗಳನ್ನು ತುಂಬಾ ಇಷ್ಟಪಟ್ಟು ಓದುತ್ತಿದ್ದಾರೆ. ಈ ಪುಸ್ತಕದಲ್ಲಿ ಒಟ್ಟು 66 ಬಗೆಯ ಖಾದ್ಯ ತಯಾರಿಸುವ ಮಾಹಿತಿ ಇದೆ. ಹೆಚ್ಚಿನದಾಗಿ ಸಿರಿಧಾನ್ಯ, ಬೇಳೆ ಕಾಳುಗಳು, ಸೊಪ್ಪು ತರಕಾರಿ ಬಳಸಿ ತಯಾರಿ ಮಾಡಬಹುದಾದ ಖಾದ್ಯಗಳಿವೆ, ಔಷಧೀಯ ಸತ್ವ ಇರುವ ಆಹಾರಗಳೂ ಇವೆ.
ಅಡುಗೆ ತಯಾರಿ ಮಾಡುವುದು ಕೇವಲ ಒಂದು ಕೆಲಸವಲ್ಲ. ಅದು ವಿಜ್ಞಾನವೂ ಹೌದು, ತಪಸ್ಸೂ ಹೌದು, ಕಲೆಯೂ ಹೌದು. ಅಮ್ಮ ಪ್ರೀತಿ ಬೆರೆಸಿ ಮಾಡಿ ಬಡಿಸಿದ ಚಟ್ನಿ, ಮುದ್ದೆಗೆ ಯಾವ ಪುಷ್ಕಳ ಭೋಜನವೂ ಸಾಟಿ ಆಗದು. ಇಂತಹ ಮಾತೃ ಹೃದಯ ತನ್ನೊಳಗಿನ ಪಾಕ ನೈಪುಣ್ಯತೆಗೆ ಅಕ್ಷರ ರೂಪ ನೀಡಿ ಓದುಗರ ಮುಂದಿರಿಸಿದೆ. ಎಲ್ಲಾ ಮಾತೃ ಹೃದಯಿಗಳಿಗೂ, ಪಾಕ ಶಾಸ್ತ್ರದಲ್ಲಿ ಆಸಕ್ತಿ ಇರುವವರಿಗೂ, ಆಹಾರ ಪ್ರಿಯರಿಗೂ ಈ ಪುಸ್ತಕ ಸಾಂಪ್ರದಾಯಿಕ ಶೈಲಿಯ ಅಡುಗೆಗಳನ್ನು ಕಲಿಯಲು ತುಂಬಾ ಉಪಯುಕ್ತವಾಗಿದೆ.

ತಾಯಿಯ ಅಡುಗೆಯ ಕಲೆಗೆ ಪುಸ್ತಕದ ರೂಪ ನೀಡಿದ ಶ್ರೀಮತಿ ಹೆಚ್. ವಿ. ಮೀನ ರವರು ಖುದ್ದಾಗಿ ತಮ್ಮ ತಾಯಿ ಶ್ರೀಮತಿ ಹೆಚ್. ವಿ. ಜಯಲಕ್ಷ್ಮಿರವರ ಈ ಕೃತಿಗೆ ಬೆನ್ನುಡಿ ಬರೆದಿರುವುದು ವಿಶೇಷ.
ಹೆಚ್.ಎಸ್.ಆರ್.ಎ ಪ್ರಕಾಶನ, ಬೆಂಗಳೂರು ಇವರು ಈ ಪುಸ್ತಕ ಪ್ರಕಟಿಸಿದ್ದು ಇದರ ಮುಖಬೆಲೆ ರೂ. 120/- ಇರುತ್ತದೆ. ತಾಯಿ ಮಕ್ಕಳಿಗೆ ಉಣ ಬಡಿಸುವ ಚಿತ್ರ ಇರುವ ಸುಂದರ ಮುಖಪುಟ, ಪುಸ್ತಕದ ಮೂಲ ಉದ್ದೇಶ ಏನೆಂದು ಹೇಳುತ್ತಿದೆ.
- ರವಿನಾಗ್ ತಾಳ್ಯ
