ಜನಪ್ರಿಯ ಸಾಹಿತಿಗಳಾದ ನಾ.ಡಿಸೋಜ ಅವರ ‘ಕಾಡುಬಳ್ಳಿ’ ಕೃತಿಯ ಕುರಿತು ಲೇಖಕರಾದ ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ ಹೆಸರು: ಕಾಡುಬಳ್ಳಿ.
ಲೇಖಕರು: ನಾ.ಡಿಸೋಜ.
ಪ್ರಕಾಶನ : ಶ್ರೀರಾಮ ಪ್ರಕಾಶನ ಮಂಡ್ಯ.
ವರ್ಷ : ೨೦೨೦.
ಪುಟಗಳು : ೨೬೮.
ಬೆಲೆ : ೨೩೦.
ನಾಡೋಜ ಜನಪ್ರಿಯ ಸಾಹಿತಿ ಡಾ.ನಾ.ಡಿಸೋಜ ಅವರು ತಾವು ಬಹಳ ವರ್ಷಗಳ ನಂತರ ಬರೆದ ಕಥಾಸಂಕಲನ ಇದೆಂದು ಮುನ್ನುಡಿಯಲ್ಲಿ ಹೇಳಿದ್ದಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯೂ ಸೇರಿದಂತೆ ಹಲವು ಗೌರವಗಳಿಗೆ ಇವರು ಪಾತ್ರರಾಗಿದ್ದಾರೆ.

“ತನ್ನ ಅನುಭವಕ್ಕೆ ಮಾತಿನ ರೂಪವನ್ನು ಕೊಡುವ ಪ್ರಯತ್ನ ಮಾಡಿದ ಮನುಷ್ಯನ ಮನದಲ್ಲಿ ಬೇರೆ ಬೇರೆ ಕಾರಣಕ್ಕೆ ಹುಟ್ಟಿದ ಕಲಾಕೃತಿಯೇ ಕತೆ “ಎನ್ನುವುದು ಅವರ ಅಭಿಪ್ರಾಯ. ಕಥೆಗೆ ಎಂದೂ ಸಾವಿಲ್ಲ ಎನ್ನುತ್ತಾ ಅವರು ಇಲ್ಲಿ ೨೯ ಕಥೆಗಳನ್ನು ಒಟ್ಟು ಗೂಡಿಸಿದ್ದಾರೆ.
ಸರಳವಾದ ಇಲ್ಲಿನ ಕಥೆಗಳು, ಪರಿಸರ,ಶೋಷಿತರು, ರಾಜಕೀಯ, ಧಾರ್ಮಿಕತೆ ಹೀಗೆ ಎಲ್ಲಾ ಪ್ರಕಾರಗಳಲ್ಲಿ ಕಂಡು ಬರುತ್ತದೆ. ಕಥೆಗಾರರಾದ ಅವರಲ್ಲಿ ಸಮಾಜವನ್ನು ಸಮನ್ವಯ,ಸಹಜ ಹಾಗೂ ಸೃಜನಶೀಲ ಭಾವದಿಂದ ನೋಡುವ ಸಹೃದಯೀ ದೃಷ್ಟಿಕೋನವಿದೆ.
- ಕಾಡಿನ ನಡುವೆ ಒಂದು ವೇದಿಕೆ ಮಾಡಿ” ಪರಿಸರ ಉಳಿಸಿ” ಎನ್ನುವ ವಿಚಾರವಾಗಿ ಏರ್ಪಡಿಸಿದ, ಸಮಾರಂಭಕ್ಕೆ ಹೋದಾಗ ನಿರೂಪಕರಿಗೆ ವಿಚಿತ್ರ ಬಳ್ಳಿಯೊಂದು ಕಾಣುತ್ತದೆ. ಆ ಬಳ್ಳಿ ಯುವಕನೊಬ್ಬನ ತೋಳಿನಂತೆ ದಷ್ಟ -ಪುಷ್ಟವಾಗಿದ್ದು ಮರಗಳನ್ನು ಬಿಗಿಯಾಗಿ ಹೆಬ್ಬಾವಿನಂತೆ ಹಿಡಿದ ರೀತಿ ಗಾಬರಿ ಹುಟ್ಟಿಸುವಂತಿತ್ತು. ಕುತೂಹಲ ಗೊಂಡ ಅವರಿಗೆ ಸ್ನೇಹಿತರು ಅದು ” ಗಣಪೆ ಬಳ್ಳಿ ‘ ಎಂದು ಪರಿಚಯ ಮಾಡುತ್ತಾ ಕೌತುಕಮಯವಾದ ಆ ಬಳ್ಳಿ ತರುವ ಸಂಬಂಧದ ಬಗ್ಗೆ ಹೇಳಿದ್ದೇನು?…ಎಂಬುದು “ಕಾಡಿನಬಳ್ಳಿ” ಕಥೆಯ ಹಿನ್ನಲೆ.
• ನೆನಪಿಗೆ ಮುಳುಗಡೆ ಇಲ್ಲ, ಸರ್ ಎಂ. ವಿ. ಜೋಗ ಮತ್ತು ಲಾರ್ಡ್ ಕರ್ಜನ್, ಹಿನ್ನೀರು, ಶರಾವತಿ ಎಂಬ ಮಾನಿನಿ ಈ ಕಥೆಗಳು ಶರಾವತಿ ನದಿಗೆ ಅಣೆಕಟ್ಟು ಕಟ್ಟುವಾಗ ಮುಳುಗಡೆ ಪ್ರದೇಶದ ಜನರಿಗೆ ಪರಿಹಾರ ನೀಡಿಕೆ, ಹುಟ್ಟಿ ಬೆಳೆದ ಊರಿನ ನಂಟು ಕಳೆದುಕೊಂಡವರ ಬವಣೆ, ಸಾಮಾನ್ಯ ಜನರ ಅಂತರಂಗದ ನೋವಿನ ನಿಟ್ಟುಸಿರು ಇಂತಹ ಪ್ರಸಂಗಗಳ ಕುರಿತವಾಗಿವೆ.
- ದುಷ್ಟನಲ್ಲದ ಕ್ರೈಸ್ತ ಮರಿಯಾನನನ್ನು ಜನ ಅಷ್ಟಾಗಿ ನಂಬುತ್ತಿರಲಿಲ್ಲ ಎನ್ನುತ್ತಾ ಆತನ ವ್ಯಕ್ತಿತ್ವದ ಬಗ್ಗೆ ಲೇಖಕರು ಇಲ್ಲಿ ನೀಡಿದ ವಿಭಿನ್ನ ಪರಿಚಯವೇ ನಮ್ಮನ್ನೂ ಆತ ಮರುಳನೋ ದುರುಳನೋ ಎಂಬ ದ್ವಂದ್ವದಲ್ಲಿ ಸಿಲುಕಿಸುವಂತಿದೆ. ಬಹಳ ವರ್ಷ ಇಗರ್ಜಿಯ ಮಿರೋನ್ ಆಗಿದ್ದವನನ್ನು ಜನರು ಬೈಯುತ್ತಿದ್ದದ್ದು ಯಾವ ಕಾರಣಕ್ಕೆ?… ಯಾವುದೇ ನರಳಾಟ ಇಲ್ಲದೇ ಒಂದು ದಿನ ಸತ್ತ ಮರಿಯಾನನನ್ನು ಕಾಣಲು ಕಣ್ಣೀರು ಹಾಕುತ್ತಾ ಎಲ್ಲಾ ಸಮಾಜದ ಬಾಂಧವರು ಅಲ್ಲಿಗೆ ಬಂದಿದ್ದೇಕೆ ? ಎನ್ನುವುದನ್ನು ಸಾವಿನ ಸನ್ನಿಧಿಯಲ್ಲಿ.. ಕಥೆಯು ಹೇಳುತ್ತದೆ.
• ಒಂದು ಸಣ್ಣ ಶಬ್ಧ. ಕರ್ನಾಟಕ ಲೋಕೋಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಅಭಿಯಂತರರಾದ ಹನುಮಂತ ಆಚಾರರು ಹೇಳಿದ ಪ್ರಾಮಾಣಿಕ ನೌಕರ ಕಮಲಾಕರ ಗಾಂಧಿಯ ಕಥೆಯ ಸಾರಾಂಶವೇನು?… ಲಂಚಮುಟ್ಟದ ಆತನನ್ನು ಕಷ್ಟವಿಲ್ಲದೇ ಪ್ರಾಜೆಕ್ಟಿನಿಂದ ಹೊರಗಟ್ಟಲು “ಆತ ಖಿನ್ನತೆಯಿಂದ ನರಳುತ್ತಿದ್ದಾನೆ.ಸರ್ಕಾರಿ ಕೆಲಸ ಮಾಡಲು ಅರ್ಹನಲ್ಲ. “ಎಂದು ಮೇಲಾಧಿಕಾರಿ ಬರೆದ ಒಂದು ಸಣ್ಣ ಶಬ್ಧದಿಂದ ಉಂಟಾದ ಪರಿಣಾಮವೇನು?.
- ಗುಡಿಗಾರಿಕೆಯ ಕಲಾವಿದರ ಕುಟುಂಬದಲ್ಲಿ ಬೆಳೆದ ಹುಡುಗಿ ಸುನಂದಾ ತನ್ನನ್ನು ಮದುವೆಯಾದ ಹುಡುಗ ಸುಳ್ಳು ಹೇಳಿ ತನ್ನ ಮದುವೆಯಾಗಿದ್ದಾನೆ.ಆತ ಶಿಲ್ಪಿಯಲ್ಲ ಎಂದು ತಿಳಿದಾಗ ಭ್ರಮ ನಿರಸನಗೊಂಡಿದ್ದಳು.ಆದರೆ ತನ್ನ ಗಂಡ ಉದ್ದೇಶ ಪೂರ್ವಕವಾಗಿ ಗುಡಿಗಾರಿಕೆಯನ್ನು ಬಿಟ್ಟಿದ್ದಲ್ಲ ಎಂದು ಖಚಿತವಾದಾಗ ಮತ್ತೆ ಅವನನ್ನು “ಶಿಲ್ಪಿ “ಯನ್ನಾಗಿಸಲು ಅವಳು ಮಾಡಿದ ಪ್ರಯತ್ನವೇನು?
-
ವಾಕಿಂಗ್ ಟ್ರ್ಯಾಕ್ ಮೇಲೊಂದು ಒಂಟಿ ಗುಲ್ ಮೊಹರ್, ಕಥೆಯಲ್ಲಿ ಬೆಳಗಿನ ವಿಹಾರಕ್ಕೆ ಬರುವ ಅನೇಕ ಭಾವದ ಜನರ ವಿಸ್ತೃತ ಬಣ್ಣನೆ ವಿನೋದಮಯವಾಗಿದ್ದರೂ ವಾಸ್ತವಕ್ಕೆ ಹತ್ತಿರವಾಗಿದೆ. ಕೆಲವರು ಇರುವ ಆರೋಗ್ಯವನ್ನು ಸಂರಕ್ಷಿಸಿ ಕೊಳ್ಳಲು,ಹಲವರು ಅನಾರೋಗ್ಯದಿಂದ ತಮ್ಮನ್ನು ಉಳಿಸಿಕೊಳ್ಳಲು, ಕೆಲವರು ಮನರಂಜನೆಗೆ, ಬೇಸರ ನೀಗಲು ಪರಸ್ಪರ ಬೇಟಿಯಾಗಲು, ಮಾತು -ಹರಟೆಗೆ ಈ ಎಲ್ಲಾ ಉದ್ದೇಶಗಳ ಸಲುವಾಗಿ ಬರುತ್ತಾರೆ.

ಹಾಗೆಯೇ ಇಲ್ಲಿ ವಾಯುವಿಹಾರ ಮಾಡುವವರ ನಡಿಗೆಯೂ ಭಿನ್ನವೇ!.ಹಾಗೇ ನಿರೂಪಕರು ಅಲ್ಲಿದ್ದ ಒಂಟಿ ಗುಲ್ ಮೊಹರ್ ಮರದ ಬಗ್ಗೆ ಹೇಳುತ್ತಾರೆ. ಹಿಂದೆಲ್ಲಾ ರಸ್ತೆಯಲ್ಲಿ ಬಿದ್ದ ಹೂವಿನ ಹಾಸಿಗೆಯಂತೆ ಸೊಬಗು ನೀಡುತ್ತಿದ್ದ ಆ ಮರವನ್ನು ಸದ್ಯ ಯಾವುದೋ ಕಾರಣಕ್ಕೆ ಕಡಿದು ಉರುಳಿಸಿದಾಗ, ಯಾರೊಬ್ಬರೂ ಮಾತಾಡದ ಬಗ್ಗೆ ಖೇದ ವ್ಯಕ್ತ ಪಡಿಸಿದ್ದಾರೆ.
ಹೀಗೆ ಬಗೆ ಬಗೆಯ ಚೆಂದದ ಪುಟ್ಟ ಪುಟ್ಟ ಕತೆಗಳು ಇದರಲ್ಲಿವೆ. ನೀವೂ ಓದಿ ನೋಡಿ….
- ಮಾಲತಿ ರಾಮಕೃಷ್ಣ ಭಟ್ – ಕಿರಿಯ ಸಹಾಯಕರು, ಲೋಕೋಪಯೋಗಿ ಇಲಾಖೆ ಉಪವಿಭಾಗ, ಸಿದ್ದಾಪುರ.
