ಲುಂಗಿ ಅದು ಬರೀ ವಸ್ತ್ರಧಾರಣೆಯನ್ನಲ್ಲ, ಮಣ್ಣಿನೊಂದಿಗೆ ಬೆಸೆದುಕೊಂಡ ಸಂಸ್ಕೃತಿಯದು…ಕವಿ ರಾಜಾಬಾಬು ಕಂಚರ್ಲ ಅವರ ತೆಲಗು ಮೂಲದ ಕವನವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಧನಪಾಲ ನಾಗರಾಜಪ್ಪ ಅವರು, ಕವಿತೆಯನ್ನು ಪೂರ್ತಿಯಾಗಿ ಓದಿ…
ತೆಲುಗು ಮೂಲ : ರಾಜಾಬಾಬು ಕಂಚರ್ಲ

ಕನ್ಯಾಕುಮಾರಿಯಿಂದ ಹಿಮಾಲಯದವರೆಗೂ
ಭಿನ್ನ ಸಂಸ್ಕೃತಿಗಳು
ವಿಭಿನ್ನ ವಸ್ತ್ರಧಾರಣೆಗಳು
ಭಾರತೀಯ ಸಂಪ್ರದಾಯ
ಆಯಾ ಪ್ರದೇಶಗಳ ಆತ್ಮಗೌರವ!
‘ಲುಂಗಿವಾಲಾ’ ಎಂದು ಹೀಯಾಳಿಸಿದರೂ
ವ್ಯಂಗ್ಯೋಕ್ತಿಗಳನ್ನು ಎಸೆದರೂ
ಅದು ಬರೀ ವಸ್ತ್ರಧಾರಣೆಯನ್ನಲ್ಲ
ತಲೆತಲಾಂತರಗಳ ಜೀವನ ವಿಧಾನವನ್ನು
ಮಣ್ಣಿನೊಂದಿಗೆ ಬೆಸೆದುಕೊಂಡ ಸಂಸ್ಕೃತಿಯನ್ನು
ಪ್ರಾದೇಶಿಕ ಸಂಪ್ರದಾಯವನ್ನು ಅವಮಾನಿಸಿದಂತೆಯೇ!
ಈ ದೇಶದಲ್ಲಿ
ರಾಜ್ಯ ಯಾವುದಾದರೂ
ಭಾಷೆ ಯಾವುದಾದರೂ
ಉಡುಗೆ-ತೊಡುಗೆ ಹೇಗೇ ಇದ್ದರೂ
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ
ನಾವೆಲ್ಲರೂ ಭಾರತೀಯರು!
ಸಂಸತ್ತು ಎಂದರೆ
ಪದಗಳ ಕದನರಂಗವಲ್ಲ
ಜನರ ಆಶೋತ್ತರಗಳ ಪ್ರತಿಬಿಂಬ
ವೈವಿಧ್ಯತೆಗೆ ನೆಲೆಯಾಗಿರುವ ಪ್ರಜಾಪ್ರಭುತ್ವದ ದೇಗುಲ!
ಅಲ್ಲಿ
ವಾದವನ್ನು ವಿಮರ್ಶಿಸು ನೀತಿಯನ್ನು ಪ್ರಶ್ನಿಸು
ಅನ್ಯಾಯವನ್ನು ಖಂಡಿಸು
ಆದರೆ ಹೀಯಾಳಿಸಿದಿರು
ಯಾವುದೇ ಪ್ರದೇಶ, ಭಾಷೆಯನ್ನು
ಯಾವುದೇ ಸಂಸ್ಕೃತಿ, ವಸ್ತ್ರಧಾರಣೆಯನ್ನು
ದಕ್ಷಿಣವೂ ಅಲ್ಲ ಉತ್ತರವು ಅಲ್ಲ
ಭಾರತೀಯತೆಯೇ ನಮ್ಮ ವಿಳಾಸ!
ಯಾವ ಭಾಷೆ ಮಾತನಾಡಿದರೂ
ಪ್ರತಿ ಭಾಷೆಯಲ್ಲೂ
ಭಾರತೀಯ ಹೃದಯವೇ ಮಿಡಿಯುವುದು!
ಪ್ರದೇಶದ ಮೇಲೆ ಅಭಿಮಾನವಿರಲಿ
ಪ್ರಾದೇಶಿಕ ದ್ವೇಷ ನಿಲ್ಲಲಿ
ಸಂಸ್ಕೃತಿಯ ಮೇಲೆ ಪ್ರೀತಿಯಿರಲಿ
ಇತರರ ಸಂಸ್ಕೃತಿ ತೃಣವಲ್ಲ ಮರೆಯದಿರು
ವೈವಿಧ್ಯತೆಯನ್ನು ಗೌರವಿಸಿದಾಗಲೇ
ಪ್ರಜಾಪ್ರಭುತ್ವ ಬಲಗೊಳ್ಳುವುದು
ಮನುಷ್ಯನನ್ನು ಗೌರವಿಸಿದಾಗಲೇ
ಭಾರತೀಯತೆ ಮಹೋನ್ನತವಾಗುವುದು!”
ಮಾತುಗಳು ಕಿಚ್ಚು ಹಚ್ಚದಿರು
ಬದಲಾವಣೆಯ ಹಾದಿಗಳನ್ನು ತೋರುತಿರು
ಧ್ವನಿಗಳ ದ್ವೇಷ ಕಾರದಿರು
ಸೋದರಭಾವವೇ ದೇಶದ ಉಸಿರು
ದೇಶವನ್ನು ವಿಭಜಿಸುವುದು ಭಾಷೆಯಲ್ಲ;
ವೈವಿಧ್ಯತೆಯನ್ನು ಅವಮಾನಿಸುವ ಮನಸ್ಸು
ದೇಶವನ್ನು ಬಲಪಡಿಸುವುದು ಅಧಿಕಾರವಲ್ಲ;
ಒಬ್ಬರನ್ನೊಬ್ಬರು ಗೌರವಿಸುವ ಸಂಸ್ಕಾರ!
- ಕನ್ನಡಾನುವಾದ : ಧನಪಾಲ ನಾಗರಾಜಪ್ಪ
