‘ಹೂ ಮನಸ್ಸಿಗೆ’ ಕವನ

ನಮ್ಮ ಯೋಚನೆಯು ನಮ್ಮನ್ನೇ ಮೀರಿ ಜಿಗಿದಂತೆ…ಕವಿ ನಾಗರಾಜ ಜಿ.ಎನ್.ಬಾಡ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಕುಳಿತಲ್ಲೇ ಕುಳಿತು
ಬೇಸರಗೊಂಡ ಮನಸು
ಸುಮ್ಮನಿರದೆ ಕಾಣುವುದು
ಹತ್ತು ಹಲವು ಹಗಲುಗನಸು

ದೂರದ ಊರಿಂದ ಹಕ್ಕಿ
ಹಾರಿಬಂದು ಕುಳಿತಂತೆ
ಎದುರುಗೊಳ್ಳುವ ಗುಬ್ಬಚ್ಚಿ
ಕಿವಿಯೊಳಗೆ ಚಿಂವ್ ಚಿಂವ್ ಎಂದಂತೆ

ಬೇಸರವ ದೂರ ತಳ್ಳಿ
ಹಾಡೊಂದು ಗುಂಯ್ ಗುಟ್ಟು ನಕ್ಕಂತೆ
ಗೊತ್ತು ಗುರಿಯಿಲ್ಲದ ಪಯಣಕ್ಕೆ
ಯಾರೋ ಜೊತೆಯಾದಂತೆ

ಬದುಕಿನ ಹಾಡಿಗೆ
ಹೊಸ ಶ್ರುತಿಯು ಬೆರೆತಂತೆ
ಎಲ್ಲೋ ಬೀಸಿದ ತಂಗಾಳಿ
ತಣ್ಣಗೆ ಬಂದು ಅಪ್ಪಿ ಹೋದಂತೆ

ಒಂದು ಚೂರು ಕದಲಿದರೆ
ಆಗಸವೇ ಕೈಗೆ ಸಿಕ್ಕಂತೆ
ನಮ್ಮ ಯೋಚನೆಯು
ನಮ್ಮನ್ನೇ ಮೀರಿ ಜಿಗಿದಂತೆ

ಹಿಡಿದಿಟ್ಟುಕೊಳ್ಳಲೇ ಬಾರದು
ಯಾವುದೇ ಕಹಿ ಭಾವನೆಗಳ
ಮೌನದ ಗೂಡೊಳಗೆ
ಬಚ್ಚಿಡಬಾರದು ನೋವುಗಳ

ಕನಸು ಕಂಗಳಿಗೆ ಬರಬಾರದು
ಎಂದೆಂದಿಗೂ ಸಿಹಿ ಕನಸಿನ ಬರ
ಕನಸುಗಳ ಮೊಟ್ಟೆ ಇಡುವ
ಹೂ ಮನಸ್ಸಿಗೆ ಸೋಕಬಾರದು ಜ್ವರ


  • ನಾಗರಾಜ ಜಿ.ಎನ್.ಬಾಡ – ಕುಮಟ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading