‘ಅಪೂರ್ವ ಕುಸುಮಗಳು’ ಕೃತಿ ಪರಿಚಯ

೩೦ ವರ್ಷಗಳ ಕಾಲ ಆಕಾಶವಾಣಿಯಲ್ಲಿ ಉದ್ಯೋಗ ಮಾಡುತ್ತಲೇ, ಮಹಿಳಾ ಸಾಹಿತ್ಯದಲ್ಲಿ ಅನುವಾದಕಿಯಾಗಿ ಹೆಸರು ಮಾಡಿರುವ ಲೇಖಕಿ ಎಚ್. ಎಸ್. ಪಾರ್ವತಿ ಅವರ ಕೊನೆಯ ಪ್ರಕಟಿತ ಕೃತಿ ಅಪೂರ್ವ ಕುಸುಮಗಳು. ೨೦೧೫ ರಲ್ಲಿ ಅಗಲಿದ ಅವರೀಗ ನೆನಪು ಮಾತ್ರ. ಲೇಖಕರಾದ ಮಾಲತಿ ರಾಮಕೃಷ್ಣ ಭಟ್ ಅವರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ಅಪೂರ್ವ ಕುಸುಮಗಳು
ಲೇಖಕರು: ಎಚ್. ಎಸ್.ಪಾರ್ವತಿ
ಸಮರ್ಥ ಪ್ರಕಾಶನ ಬೆಂಗಳೂರು
ಮುದ್ರಣದ ವರ್ಷ: ೨೦೧೫
ಪುಟಗಳು: ೨೪೮
ಬೆಲೆ: ರೂ. ೨೫೦

ಹೈಸ್ಕೂಲುವರೆಗೆ ಮಾತ್ರ ಓದಿದ್ದ ತಾವು ಸಾಹಿತ್ಯದ ಮೂಲಕವೇ ಆಕಾಶವಾಣಿಯಲ್ಲಿ ಉದ್ಯೋಗ ಪಡೆದಿದ್ದು, ಮುಂದೆ ಹಿಂದಿ ಪರೀಕ್ಷೆ ಪಾಸುಮಾಡಿ ಅನುವಾದಕಿಯಾಗಿದ್ದು, ತಮ್ಮ ಧ್ವನಿಯಿಂದಲೇ ಜನರು ಗುರ್ತಿಸುತ್ತಿದ್ದದ್ದು, ಡಾ. ಅನುಪಮಾ ನಿರಂಜನ, ಡಾ. ಜಿ ಎಸ್ ಶಿವರುದ್ರಪ್ಪ, ಡಾ. ಶಿವರಾಮ ಕಾರಂತ, ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್,ಶ್ರೀ ಜಿ. ನಾರಾಯಣ, ಮುಂತಾದ ಗಣ್ಯರೊಂದಿಗೆ ತಾವು ನಡೆದು ಬಂದ ಹಾದಿಯನ್ನು ಸ್ಮರಿಸಿದ್ದಾರೆ. ಸ್ವಯಂ ಪ್ರೇರಣೆಯೇ ತಮ್ಮ ಕೆಲಸಗಳಿಗೆ ಕಾರಣ. ಅನಾರೋಗ್ಯದಲ್ಲೂ ತಾವು ಬರೆಯುವ ಹಂಬಲವನ್ನು ಕಳೆದುಕೊಳ್ಳಲಿಲ್ಲ ಎಂಬುದನ್ನು ಅವರು ಇಲ್ಲಿನ ಸಂದರ್ಶನ ಹಾಗೂ ಸಂಕ್ಷಿಪ್ತ ಆತ್ಮಕಥೆಯಲ್ಲಿ ಹೇಳಿದ್ದಾರೆ.

ಈ ಪುಸ್ತಕದಲ್ಲಿರುವ ಮೊದಲೆರಡು ಪೌರಾಣಿಕ ಹಾಗೂ ಕೆಲವು ಸಾಮಾಜಿಕ ಕಥೆಗಳ ಪರಿಚಯ ಹೀಗಿದೆ.

  • ಸಾಲ್ವ ರಾಜಕುಮಾರನನ್ನು ಪ್ರೀತಿಸಿದ ಕಾಶಿರಾಜನ ಮಗಳು ಅಂಬೆಯನ್ನು ಭೀಷ್ಮ ತಮ್ಮನಿಗಾಗಿ ಹೊತ್ತುಕೊಂಡು ಬರುತ್ತಾನೆ. ವಿಷಯ ತಿಳಿದು ಸಾಲ್ವನ ಅರಮನೆಗೆ ಆಂಬೆಯನ್ನು ಕಳಿಸಿದಾಗ ಅವನು ತಿರಸ್ಕರಿಸುತ್ತಾನೆ. ಆಗ ವಿಚಿತ್ರವೀರ್ಯನಂತಹ ದುರ್ಬಲ ವ್ಯಕ್ತಿಯನ್ನು ವರಿಸಲು ನಿರಾಕರಿಸುವ ಅಂಬೆ ಭೀಷ್ಮನೇ ತನ್ನನ್ನು ವಿವಾಹವಾಗಬೇಕೆಂದು ಹಠ ಹಿಡಿದಾಗ, ತಾನು ಬ್ರಹ್ಮಚಾರಿಯಾಗಿರುವೆ ಎಂದು ಮಾಡಿದ ಪ್ರತಿಜ್ಞೆಯನ್ನು ನೆನಪಿಸುತ್ತಾನೆ. ಒಟ್ಟಾರೆ ತಿಳಿದೋ ತಿಳಿಯದೆಯೋ ಅಂಬೆಯ ದುರಂತ ಬದುಕಿಗೆ ಕಾರಣರಾದ ಭೀಷ್ಮರನ್ನು ಅಂಬೆಯೇ ಮುಂದೆ ಶಿಖಂಡಿಯಾಗಿ ಹತ್ಯೆಗೈಯುವ ಮಹಾಭಾರತದ ಪಾತ್ರಗಳನ್ನು ಆಧರಿಸಿ ಬರೆದ ಅಂಬೆ. ಉತ್ತಮವಾಗಿ ಮೂಡಿ ಬಂದಿದೆ.

• ದಮಯಂತಿ.
ನಳ ಮಹಾರಾಜ ತನ್ನ ದಾಯಾದಿ ಸೋದರ ಪುಷ್ಕರನೊಂದಿಗೆ ಜೂಜಿನಲ್ಲಿ ಎಲ್ಲವನ್ನೂ ಕಳೆದುಕೊಂಡು ಕಾಡಿಗೆ ಹೊರಟಾಗ, ದಮಯಂತಿಯೂ ಪತಿಯನ್ನು ಹಿಂಬಾಲಿಸುತ್ತಾಳೆ. ತನ್ನ ತಾಳ್ಮೆ ಹಾಗೂ ಬುದ್ಧಿವಂತಿಕೆಯಿಂದಲೇ ಅವಳು ಎದುರಾದ ಕಷ್ಟಗಳನ್ನು ನಿವಾರಿಸಿಕೊಳ್ಳುವ ಪರಿ ಇಲ್ಲಿ ಬಹಳ ಸೊಗಸಾಗಿದೆ.

• ಸುಂದರ ರೂಪದ ಜೊತೆ ಸಕಲವಿದ್ಯೆ ಹಾಗೂ ಉದ್ಯೋಗವಿದ್ದೂ ಮದುವೆಯಾಗದ ಜಯಶ್ರಿಗೆ ಇದ್ದ ದೈಹಿಕ ಕೊರತೆಯಾದರೂ ಯಾವುದು?… ಅದೇ ಕೊರಗಲ್ಲಿದ್ದ ಅವಳ ತಂದೆ- ತಾಯಿಗೆ ದೈರ್ಯ ಹೇಳಿ ಜಯಶ್ರಿಯನ್ನು ವರಿಸಿದ ಯಶಸ್ವಿ ಎನ್ನುವ ಹುಡುಗನ ಹೃದಯವಂತಿಕೆ, ಇಲ್ಲಿ ಬರುವ ದೂರದ ಸಂಬಂಧಿ ಕಾಮಾಕ್ಷಿ ಎನ್ನುವರ ಜೀವನದ ಕಷ್ಟದ ಪ್ರಸಂಗ ಎಲ್ಲವೂ ‘ ಸೋತರೂ ಗೆದ್ದವಳು’ ಎನ್ನುವ ಕಥೆಯಲ್ಲಿ ಅಡಕವಾಗಿದೆ.

*೧೨ ರ ವಯಸ್ಸಲ್ಲೇ ಮೃದಂಗವಾದನದಲ್ಲಿ ಪರಿಣಿತಿ ಪಡೆದ ತೇಜಸ್ವಿ ಮುಂದೆ ಸಂಗೀತಲೋಕದಲ್ಲಿ ಹೆಸರುವಾಸಿಯಾಗುತ್ತಾನೆ. ಹೆಚ್ಚು ಕಲಿತು ಮದರಾಸಿನಿಂದ ಬೆಂಗಳೂರಿಗೆ ಬಂದ ಮೇಲಂತೂ ಅವನಿಗೆ ಇಲ್ಲಿನ ಯಾವ ಸಂಗೀತಗಾರರೂ ತನ್ನ ವಿದ್ವತ್ತಿಗೆ ಸಮರಲ್ಲ ಎನ್ನುವ ಅಹಂಭಾವ ಮೂಡತೊಡಗಿತು.

ಸಹಜವಾಗಿ ಅವನ ಬಗ್ಗೆ ಆಕ್ಷೇಪಗಳು ಕೇಳಿ ಬರತೊಡಗಿದಂತೆ, ಸಭೆಯ ಆಹ್ವಾನಗಳು ಕಡಿಮೆಯಾಗುತ್ತಾ,ಅವನೊಬ್ಬ ಕಲಾವಿದ ಎಂಬುದನ್ನೇ ಜನರು ಮರೆತರು.ಅದೃಷ್ಟ ಲಕ್ಷ್ಮಿ ಒಲಿಯುವುದಕ್ಕೆ ಮನುಷ್ಯರ ಪ್ರಯತ್ನವೂ ಮುಖ್ಯವಲ್ಲವೇ?. ಇದೇ ರೀತಿ ಒದಗಿಬಂದ ಅವಕಾಶವನ್ನು ತಮ್ಮ ಅಹಮ್ಮಿನಿಂದ ಕೈಬಿಟ್ಟು ಮೂಲೆಗುಂಪಾದ ಇನ್ನೊಬ್ಬ ಸಾಹಿತಿ ದೇಸಾಯಿ ಎನ್ನುವರ ಕುರಿತ ಅಹಂ -೧ ಮತ್ತು ಅಹಂ -೨ ಎನ್ನುವ ಕಥೆಗಳಿವೆ.

*ಮಡಿಲು.
ದತ್ತಕ ಸಮಸ್ಯೆಯೊಂದರ ಸುತ್ತ ಹೆಣೆದ ಕಿರು ಕಾದಂಬರಿ ಮಡಿಲು. ಪ್ರೇಮಿಸಿ ಮದುವೆಯಾದ ವಾಸವಿ ಮತ್ತು ಶ್ರೀನಿವಾಸ ಜಾತಿಯ ಕಾರಣಕ್ಕೆ ಹೆತ್ತವರ ಮಡಿಗೆ ಅಡ್ಡಿಯಾಗಬಾರದೆಂದು ಬೇರೆಮನೆ ಮಾಡಿದ್ದರು. ವಾಸವಿ ಗರ್ಭಿಣಿ ಎಂದು ತಿಳಿದಮೇಲೆ ಎರಡೂ ಕುಟುಂಬಗಳ ನಡುವಿನ ಬಿರುಕು ಮುಚ್ಚಿ ಸಂಭ್ರಮವೆದ್ದಿತು. ಆದರೆ ಮೊದಲ ಹೆರಿಗೆಯಲ್ಲಿ ಸಮಸ್ಯೆಯಾಗಿ ವಾಸವಿಯ ಗರ್ಭಕೋಶವನ್ನು ಅಪರೇಷನ್ ಮೂಲಕ ತೆಗೆಯಬೇಕಾಗಿ ಬಂತು.

ಚೇತರಿಸಿಕೊಂಡ ನಂತರ ತನ್ನ ದುಃಖ ಮರೆಯಲು ವಾಸವಿ ಕೆಲಸಕ್ಕೆ ಸೇರಿಕೊಂಡಳು. ಆಗ ಮಾವ ತಮ್ಮ ದೂರದ ಸಂಬಂಧಿ ಬಡ ಸರಸಕ್ಕನ ಮೂರು ಗಂಡುಮಕ್ಕಳಲ್ಲಿ ಕಿರಿಯನಾದ ಎರಡು ವರ್ಷದ ಮಗ ಮುಕುಂದನನ್ನು ಸಾಕಿ ಕೊಳ್ಳುವಂತೆ ಹೇಳುತ್ತಾರೆ. ಹಾಗೆ ಮನೆಗೆ ಕರೆತಂದ ಮುಕುಂದನನ್ನು ಸ್ವಂತ ಮಗನಂತೆ ಪ್ರೀತಿಸಿ ಬೆಳೆಸ ತೊಡಗಿದ್ದಾಗಲೇ, ಮುಕುಂದನ ತಾಯಿ ಸರಸಕ್ಕನ ನಾಲಿಗೆ ಹಾಗೂ ಹಣದ ದುರಾಸೆಯಿಂದ ಅವರು ಮಗುವನ್ನು ಅವಳಿಗೇ ವಾಪಸ್ ಕೊಡಬೇಕಾಯಿತು.

ಬೇಸರಗೊಂಡು ಅವರು ಬೆಂಗಳೂರಿನಿಂದ ದೂರದ ದೆಹಲಿಗೆ ವರ್ಗಾವಣೆ ಮಾಡಿಸಿಕೊಂಡು ಅಲ್ಲಿಯೇ ನೆಲೆಸಿ ಹೊಸಬದುಕು ಕಟ್ಟಿ ಕೊಂಡರು.ಒಮ್ಮೆ ಪಂಡಿತರೊಬ್ಬರ ಪರಿಚಯವಾಗಿ ಅವರು ನಡೆಸುತ್ತಿದ್ದ”ಮಕ್ಕಳ ಮನೆ “ಎಂಬ ಅನಾಥಾಲಯಕ್ಕೆ ಹೋಗುತ್ತಾರೆ. ಅದನ್ನು ಪ್ರಾರಂಭ ಮಾಡಿದ ಹಿನ್ನಲೆಯನ್ನು ತಿಳಿದು ಇವರೂ ಸೂರ್ಯ ಎಂಬ ಪುಟ್ಟ ಹುಡುಗನನ್ನು ದತ್ತಕ ಪಡೆದು ಸಾಕಿಕೊಳ್ಳುತ್ತಾರೆ.ಅವನಿಗೆ ಒಳ್ಳೆಯ ಪರಿಸರ ನೀಡಿ ಓದಿಸಿ ವಿದ್ಯಾವಂತನನ್ನಾಗಿಸುತ್ತಾರೆ.

ನಿವೃತ್ತಿಯ ನಂತರ ಮಗ ಸೂರ್ಯನೊಂದಿಗೆ ಮತ್ತೆ ಬೆಂಗಳೂರಿಗೆ ಬಂದ ಅವರಿಗೆ ಮತ್ತೊಂದು ಸಂಕಷ್ಟ ಎದುರಾಯಿತು.ಸೂರ್ಯನ ಹುಟ್ಟಿನ ಬಗ್ಗೆ ಹೇಳಿ, ಅವನು ಶ್ರೀನಿವಾಸ – ವಾಸವಿಯರ ಸ್ವಂತ ಮಗನಲ್ಲ ಎಂದು ವಿಷಬೀಜ ಬಿತ್ತಿದ್ದು ಯಾರು?. ಬೇಸರಗೊಂಡು ಮನೆಬಿಟ್ಟು ಹೋಗಿದ್ದ ಸೂರ್ಯ ಹೋಗಿದ್ದೆಲ್ಲಿಗೆ?.

ಮನುಷ್ಯ ಎಷ್ಟು ಪ್ರಯತ್ನ ಪಟ್ಟರೂ ಪ್ರಾಪ್ತಿಯಿದ್ದಷ್ಟೇ ದಕ್ಕೋದು ಎಂದು ನಂಬಿದ ವಾಸವಿಯ ಮಡಿಲು ತುಂಬಿತೇ?… ಎನ್ನುವುದನ್ನು ನೀವು ಓದಿಯೇ ತಿಳಿಯ ಬೇಕು. ಮನಮಿಡಿಯುವ ಈ ನೀಳ್ಗತೆಯನ್ನು ಲೇಖಕಿ ಬಹಳ ಅದ್ಭುತವಾಗಿ ಬರೆದಿದ್ದಾರೆ. ಹಲವು ಮಿಶ್ರಣ ಬರಹಗಳ ಈ ಕೃತಿ ಓದುಗನಿಗೆ ವಿಭಿನ್ನ ಅನುಭವ ನೀಡುತ್ತದೆ.

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು  ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ  ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್ – ಕಿರಿಯ ಸಹಾಯಕರು, ಲೋಕೋಪಯೋಗಿ ಇಲಾಖೆ ಉಪವಿಭಾಗ, ಸಿದ್ದಾಪುರ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading