ಅನಂತಮೂರ್ತಿಯವರ ಕಥಾಸಾಹಿತ್ಯದಲ್ಲಿ ಸಂಸ್ಕೃತಿ ವಿಘಟನೆ

ಜ್ಞಾನಪೀಠ ಪುರಸ್ಕೃತರಾದ ಅನಂತಮೂರ್ತಿಯವರ ತಂದೆ ರಾಜಗೋಪಾಲಾಚಾರ್ಯ, ಅವರು ಮೂಲತಃ ಉಡುಪಿಯವರು. ಆದರೆ ಅವರು ಬೆಳೆದದ್ದು ಶಿವಮೊಗ್ಗ ಜಿಲ್ಲೆಯ ಮೇಳಿಗೆ ಎನ್ನುವ ಅಗ್ರಹಾರದಲ್ಲಿ. ಅವರ ತಂದೆ ಮಠದ ಏಜೆಂಟ್ ಆಗಿದ್ದರೂ ಅಂದಿನ ರಾಜಕೀಯ, ಸಾಮಾಜಿಕ ಬೆಳವಣಿಗೆಗಳಿಗೆ ತೆರೆದುಕೊಂಡವರು. ಅನಂತಮೂರ್ತಿ ಅವರ ಸಾಧನೆಯ ಹಾದಿಯ ಮೆಲಕು ನೋಟ ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಇದರಲ್ಲಿ ಮೂರು ಭಾಗಗಳಿವೆ

ಒಂದು:

ಸಂಸ್ಕೃತಿಯ ಸ್ವರೂಪದ ವಿವೇಚನೆ. ಎರಡು; ಅದರ ವಿಭಿನ್ನ ಸ್ವರೂಪಗಳು ಅವರು ಕಥನ ಸಾಹಿತ್ಯದಲ್ಲಿ ಪ್ರಕಟಗೊಂಡ ಬಗೆ.ಮೂರನೇ ಭಾಗದಲ್ಲಿ ಅವರ ಸಾಧನೆ ಮತ್ತು ಮಿತಿಗಳನ್ನು ವಿವರಿಸಲಾಗಿದೆ. ‘ಸಂಸ್ಕೃತಿ’ ಎನ್ನುವ ಶಬ್ದ ಕ್ಕೆ ಮಾಡಲ್ಪಟ್ಟದ್ದು, ಕೃತಕ, ಅನೈಜ ಎನ್ನುವ ಅರ್ಥಗಳು ಇವೆ.ಅದಕ್ಕೆ ವಿರುದ್ಧವಾಗಿ ಪ್ರಕೃತಿ ಮತ್ತು ನೈಸರ್ಗಿಕ ಶಬ್ದಗಳಿವೆ. ಸಂಸ್ಕೃತಿ ಎನ್ನುವುದು ಅಂತರಂಗದ ಪರಿಪಾಕ ಎನ್ನುವುದರಿಂದ ಹಿಡಿದು ಅದೊಂದು ಜೀವನ ವಿಧಾನ ಎನ್ನುವ ವಿಶಾಲವಾದ ಅರ್ಥ ವ್ಯಾಪ್ತಿಯನ್ನು ಹೊಂದಿದೆ. ಒಟ್ಟಾರೆ ಅದು ಮನುಷ್ಯರಿಗೆ ಸಂಬಂಧಿಸಿದ, ಸಾಪೇಕ್ಷ, ನಿರಂತರವಾದ ಚಲನಶೀಲ ಪ್ರಕ್ರಿಯೆ ಎಂದು ಕರೆಯಬಹುದು.

ಅನಂತ ಮೂರ್ತಿಯವರ ಕತೆಗಳಲ್ಲಿ ಸಂಸ್ಕೃತಿಯ ಸ್ವರೂಪವನ್ನು ಗ್ರಹಿಸಲು ಅವರು ಬೆಳೆದು ಬಂದ ಹಿನ್ನೆಲೆಯನ್ನು ಗಮನಿಸುವುದು ಅಗತ್ಯ. ಉಡುಪಿಯ ರಾಜಗೋಪಾಲಾಚಾರ್ಯ ಅವರ ತಂದೆ. ಅವರ ಹೆಸರೇ ಹೆಸರೇ ಸೂಚಿಸುವಂತೆ ಉಡುಪಿಗೆ ಸೇರಿದವರಾದರು ಬೆಳೆದದ್ದು ಶಿವಮೊಗ್ಗ ಜಿಲ್ಲೆಯ ಮೇಳಿಗೆ ಎನ್ನುವ ಅಗ್ರಹಾರದಲ್ಲಿ. ಅವರ ತಂದೆ ಮಠದ ಏಜೆಂಟ್ ಆಗಿದ್ದರೂ ಅಂದಿನ ರಾಜಕೀಯ, ಸಾಮಾಜಿಕ ಬೆಳವಣಿಗೆಗಳಿಗೆ ತೆರೆದುಕೊಂಡವರು. ಇಂತಹ ಸನ್ನಿವೇಶದಲ್ಲಿನ ಇಬ್ಬಂದಿತನ ತಂದೆಯಿಂದ ಮಗನಿಗೆ ಬಂದ ಬಳುವಳಿ. ಆದ್ದರಿಂದ ಅವರಿಗೆ ಮೊದಲಿನಿಂದಲೂ ತಾವು ಬೆಳೆದು ಬಂದ ವಾತಾವರಣದ ಅಮಾನುಷ ಅಂಶಗಳು, ಅದರ ವೈರುಧ್ಯಗಳು ತೀವ್ರ ವಾಗಿ ತಟ್ಟಿ ಚಿಂತನೆಗೆ ಈಡುಮಾಡಿರಬೇಕು.ಇದಕ್ಕೆ ಅವರ ನೆರವಿಗೆ ಬಂದದ್ದು ಅವರು ಪಡೆದ ಪಾಶ್ಚಾತ್ಯ ಶಿಕ್ಷಣ. ಅದು ಅವರನ್ನು ಆತ್ಮ ವಿಮರ್ಶೆ ಮಾಡಿಕೊಳ್ಳಲು ಪ್ರೇರೇಪಿಸಿತು.

ಈ ಹಿನ್ನೆಲೆಯಲ್ಲಿ ಅವರು ಮೊದಲು ಬರೆದ ಕತೆಗಳು , ವಿಮರ್ಶಾಸಂಕಲನಗಳು ಅವರ ಸಂಸ್ಕೃತಿಯ ಪರಿಕಲ್ಪನೆಯನ್ನು ನಮ್ಮ ಮುಂದೆ ಇರಿಸುತ್ತವೆ.ಅದನ್ನು ಸ್ಥೂಲವಾಗಿ ಹೀಗೆ ಗ್ರಹಿಸಬಹುದು. ಬ್ರಾಹ್ಮಣ ಸಂಸ್ಕೃತಿ ತನ್ನ ಆತ್ಮರತಿ ಸ್ವಭಾವದಿಂದ ಜಡವಾಗಿ ಗೂಡುಕಟ್ಟಿದೆ.ಅದರಿಂದಾಗಿ ಅದು ತನ್ನ ಕ್ರಿಯಾಶೀಲ ತೆಯನ್ನು ಕಳೆದುಕೊಂಡಿದೆ. ಬಹುಸಂಖ್ಯಾತ ಶ್ರಮಿಕ ವರ್ಗವನ್ನು ದೂರವಿಟ್ಟು ತನ್ನ ಒಡಲಿನಲ್ಲಿ ಅರ್ಬುದ ರೋಗವನ್ನು ಬೆಳೆಸಿಕೊಂಡಿದೆ.

ಇದಕ್ಕೆ ಕಾಯಕಲ್ಪವೆಂದರೆ ಅದು ಶೂದ್ರ ಸಂಸ್ಕೃತಿಯ ಸಂಪರ್ಕದಿಂದ ಮಾತ್ರ ಸಾಧ್ಯ. ಆದರೆ ಅದು ಸಂಭವಿಸಲು ಇರುವ ಅಡ್ಡಿ ಆತಂಕಗಳನ್ನು ಅವರು ನಾಲ್ಕು ಬಗೆಯಲ್ಲಿ ಗ್ರಹಿಸುತ್ತಾರೆ. ಅವನ್ನು ಅಭ್ಯಾಸದ ಅನುಕೂಲಕ್ಕಾಗಿ ಹೀಗೆ ಗುರುತಿಸಬಹುದು.

೧. ಬ್ರಾಹ್ಮಣ ಶೂದ್ರರ ಸಂಬಂಧ.
೨. ಬ್ರಾಹ್ಮಣರಲ್ಲಿ ಗಂಡು ಹೆಣ್ಣಿನ ಸಂಬಂಧ
೩. ಬ್ರಾಹ್ಮಣರಲ್ಲಿ ದಾಂಪತ್ಯದ ಪರಿಕಲ್ಪನೆ.
೪. ಬ್ರಾಹ್ಮಣರ ವಿದ್ಯುಕ್ತ ಕ್ರಿಯೆಗಳು

ಇವುಗಳನ್ನು ಅವರ ಕತೆ ಕಾದಂಬರಿಗಳಲ್ಲಿ ಕಂಡು ಬರುವ ಸ್ವರೂಪದ ಮೇಲೆ ಮಾಡಿಕೊಂಡಿರುವುದರಿಂದ ಇಲ್ಲಿ ಕಥಾಸಾಹಿತ್ಯ ಎನ್ನುವುದು ಎರಡನ್ನೂ ಒಳಗೊಂಡಿದೆ.

೧. ಬ್ರಾಹ್ಮಣ ಶೂದ್ರರ ಸಂಬಂಧ: ಅನಂತ ಮೂರ್ತಿ ಯವರ ಕಾದಂಬರಿಗಳಲ್ಲಿ ಇದಕ್ಕೆ ಅವಕಾಶ ದೊರೆತಿರುವದರಿಂದ ಅವರ ಎರಡು ಕಾದಂಬರಿ ಗಳಾದ ಸಂಸ್ಕಾರ ಮತ್ತು ಭಾರತೀಪುರಗಳನ್ನು ಗಮನಿಸಬಹುದು. ಭಾರತದ ವರ್ಣವ್ಯವಸ್ಥೆಯ ಎರಡು ತುದಿಗಳೆಂದರೆ ಬ್ರಾಹ್ಮಣ ಮತ್ತು ಶೂದ್ರರು.ಬ್ರಾಹ್ಮಣ್ಯ ತನಗಿರುವ ಬೌದ್ಧಿಕ ಪರಂಪರೆಯ ಬೆನ್ನೆಲುಬಿನಿಂದಾಗಿ ,ತನ್ನ ಹೊಟ್ಟೆ ಯನ್ನು ತನ್ನ ದುಡಿಮೆಯಿಂದ ತುಂಬಿಸುತ್ತಾ ಬಂದಿರುವ ಶೂದ್ರರನ್ನು ಕೀಳೆಂದು ಪರಿಗಣಿಸುತ್ತ ತನ್ನ ಸಂಸರ್ಗದಿಂದ ದೂರವಾಗಿಯೆ ಇಟ್ಟಿದೆ. ವೇದಾಧ್ಯಯನ, ಜಪ ತಪ ಅನುಷ್ಠಾನಗಳನ್ನು ಆದರ್ಶವೆಂದು ಪರಿಗಣಿಸಿದ ಪ್ರತೀಕವಾಗಿ ಸಂಸ್ಕಾರದ ಪ್ರಾಣೇಶಾಚಾರ್ಯ ಬರುತ್ತಾರೆ.

ಆದರೆ ಅವರಿಗೆ ಸವಾಲಾಗಿ ಬರುವ ನಾರಣಪ್ಪ ಅದಕ್ಕೆ ತದ್ವಿರುದ್ಧವಾಗಿ ಜೀವನ ನಡೆಸುತ್ತಾನೆ. ರೋಗಿಷ್ಟೆಯಾದ ಹೆಂಡತಿಯನ್ನು ತನ್ನ ಸಾಧನೆಯ ಊರುಗೋಲೆಂದು ಭಾವಿಸಿ ಅವಳ ಜತೆಗೆ ಯಾಂತ್ರಿಕ ಜೀವನ ನಡೆಸುವ ಪ್ರಾಣೇಶಾಚಾರ್ಯರು ಒಂದು ಕಡೆಗೆ ಇದ್ದರೆ, ಕಟ್ಟಿ ಕೊಂಡ ಹೆಂಡತಿಯನ್ನು ಬಿಟ್ಟು, ಸೂಳೆ ‘ ಚಂದ್ರಿ’ ಯನ್ನು ಇಟ್ಟುಕೊಂಡು ಹೆಂಡ ಕುಡಿಯುತ್ತಾ , ತನಗೆ ಬಹಿಷ್ಕಾರ ಹಾಕಿದರೆ ಮುಸ್ಲಿಂ ಆಗಿಬಿಡುತ್ತೇನೆ ಎಂದು ಹೆದರಿಸುವ ನಾರಣಪ್ಪ ಇನ್ನೊಂದು ತುದಿ.

ಶಕುಂತಲೋಪಾಖ್ಯಾನವನ್ನು ಶೃಂಗಾರ ಮಯವಾಗಿ ವರ್ಣಿಸುತ್ತಾ ಯುವಕರನ್ನು ಉದ್ರೇಕಿಸುತ್ತಿದ್ದ ಪ್ರಾಣೇಶಾಚಾರ್ಯ, ತನ್ನ ನೈಸರ್ಗಿಕ ಕಾಮವನ್ನು ಅಪರೋಕ್ಷವಾಗಿ ತೀರಿಸಿಕೊಳ್ಳುವ ಪ್ರಾಣೇಶಾಚಾರ್ಯ. ತನ್ನ ಬದುಕಿನಿಂದ ಯುವಕರನ್ನು ಸೆಳೆದುಕೊಳ್ಳುವ ನಾರಣಪ್ಪ ಅವನಿಗೊಂದು ಸವಾಲು ಬದುಕಿದ್ದಾಗ. ಅವನು ಸತ್ತು ಸವಾಲಾಗುವುದು ಅವನ ಸಂಸ್ಕಾರವನ್ನು ಮಾಡಬೇಕೇ ಬೇಡವೇ ಎಂಬ ತೊಡಕಿನಲ್ಲಿ ಸಿಕ್ಕಿಸಿದಾಗ. ಬ್ರಾಹ್ಮಣ ನಾಗಿ ಹುಟ್ಟಿದರು ಬ್ರಾಹ್ಮಣನಂತೆ ಬದುಕದೆ ಸತ್ತ ಅವನಿಗೆ ಉತ್ತರ ಹುಡುಕುವುದು ಧರ್ಮ ಶಾಸ್ತ್ರಗಳಲ್ಲಿ.

ಇದಕ್ಕೆ ಬದಲಾಗಿ ಚಂದ್ರಿ ವರ್ತಿಸುವುದನ್ನು ನೋಡಿ. ಅವಳು ನಾರಣಪ್ಪ ಇರುವವರೆಗೆ ನಿಷ್ಠಾವಂತಳಾಗಿದ್ದು, ಅವನು ಸತ್ತ ಮೇಲೆ ಅವನು ಕೊಟ್ಟ ಆಭರಣಗಳನ್ನು ಸಂಸ್ಕಾರದ ಖರ್ಚಿಗೆಂದು ತಂದುಕೊಟ್ಟರೆ, ಮೊದಲು ಅವನ ಸಂಸ್ಕಾರ ಮಾಡಲು ಹಿಂಜರಿದ ಅದೆ ಬ್ರಾಹ್ಮಣರು ನಾಲಿಗೆಯಲ್ಲಿ ಜೊಲ್ಲು ಸುರಿಸುತ್ತಾರೆ.ಇಲ್ಲ ಸಲ್ಲದ ಸಂಬಂಧ ಗಳನ್ನು ಸೃಷ್ಟಿಸಿಕೊಂಡು. ಅದಕ್ಕಾಗಿ ಕೋರ್ಟ್ ನ ಕಟ್ಟೆ ಹತ್ತಲು ಸಿದ್ದರಾಗುತ್ತಾರೆ.ಇವರು ಬ್ರಾಹ್ಮಣ ಸಂಸ್ಕೃತಿಯ ವಿಘಟನೆಯ ಪ್ರತೀಕಗಳಾಗಿದ್ದಾರೆ. ಚಂದ್ರಿ ಬೇರೆ ದಾರಿ ಕಾಣದೆ ಮುಸ್ಲಿಂ ರಿಂದ ನಾರಣಪ್ಪನ ಹೆಣವನ್ನು ಸುಡಿಸಿ ತನ್ನ ದಾರಿ ಹಿಡಿದು ಹೋಗುತ್ತಾಳೆ.

ಈ ನಡುವೆ ಮಾರುತಿಯಿಂದ ತಮ್ಮ ಪ್ರಶ್ನೆಗೆ ಉತ್ತರ ಸಿಗದ ಪ್ರಾಣೇಶಾಚಾರ್ಯರು ಬಸವಳಿದು ದಾರಿಯಲ್ಲಿ ಸಿಕ್ಕ ಚಂದ್ರಿಯನ್ನು ಆಧರಿಸಿದಾಗ ಅವರಿಬ್ಬರ ನಡುವೆ ಸಮಾಗಮವಾಗುತ್ತದೆ. ವೇದಾಂತ ಶಿರೋಮಣಿ ಪ್ರಾಣೇಶಾಚಾರ್ಯರಿಗೆ ಹೊಸ ಆಯಾಮವನ್ನು ಕೊಡುತ್ತದೆ.ತಾನು ಇಲ್ಲಿಯವರೆಗೆ ಬದುಕಿದ್ದು ಅನೈಸರ್ಗಿಕ ಎಂಬ ಪರಿವೆ ಮೂಡಿ ಹೆಂಡತಿ ಸತ್ತ ಕೂಡ ಲೇ ತಾನು ಕಾಲು ಹೋದಲ್ಲಿ ನಡೆದುಬಿಡುವುದಾಗಿ ,ತಾನು ನಾರಣಪ್ಪನ ಶವ. ಸಂಸ್ಕಾರದ ಪ್ರಶ್ನೆ ಯನ್ನು ಬಿಡಿಸಲು ಅನರ್ಹನೆಂದು ಭಾವಿಸಿ ಹೊರಟುಬಿಡುತ್ತಾರೆ. ಆದರೆ ಹೀಗೆ ಹೊರಟಾಗ ಅವರಿಗೆ ಜತೆಯಾಗುವವನು ಮಾಲೇರ ಪುಟ್ಟ. ಅವರು ಇದುವರೆಗೆ ಕಾಣದ ವಸ್ತು ಪ್ರಪಂಚವನ್ನು ಅದರ ಜೀವಂತಿಕೆಯನ್ನು ಪ್ರಾಣೇಶಾಚಾರ್ಯರಿಗೆ ತೋರಿಸಿಕೊಡುತ್ತಾನೆ. ಆದರೆ ಅವರಿಗೆ ಪೂರ್ವ ಜನ್ಮದ ಅಸ್ತಿತ್ವ ಕಾಡಿಯೇ ಕಾಡುತ್ತದೆ. ಯಾರಾದರೂ ತನ್ನ ನ್ನು ಗುರುತಿಸಿಬಿಟ್ಟರೆ ಎಂಬ ಅಳುಕು ಅವರನ್ನು ಎಲ್ಲಿಯೂ ನಿಲ್ಲದಂತೆ ಮಾಡುತ್ತದೆ. ಮಾಲೇರ ಪುಟ್ಟ ತೋರಿಸಿದ ಪದ್ಮಾವತಿ ಯ ಮೇಲೆ ಅವರಿಗೆ ಆಸೆಯಾದರೂ‌ ಅವರು ಅಗ್ರ ಹಾರಕ್ಕೆ ತಾನು ಕಳೆದುಕೊಂಡ ಅರ್ಹತೆಯಿಂದಾಗಿ ತನ್ನಂತೆಯೆ ಇದ್ದು ಬಿಡುವ ತಿಳಿಸುವ ಉದ್ದೇಶದಿಂದ ಮರಳಿಬರುತ್ತಾರೆ.

ಇಲ್ಲಿ ಬರುವ ಬೆಳ್ಳಿ, ಚಂದ್ರಿ, ಪದ್ಮಾವತಿಯರು ಹೊಲತಿಯರ ಪ್ರತೀಕಳಾಗಿ ಬಂದು, ಬ್ರಾಹ್ಮಣರ ಭೋಗಕ್ಕೆ ಸೃಷ್ಟಿಸಿದಂತೆ ಅವರ ವರ್ಣನೆಗಳ ಮೂಲಕ ಗ್ರಹಿಸಬಹುದಾಗಿದೆ.ಶೂದ್ರ ತ್ವ ಆವಾಹಿಸಿಕೊಂಡ ನಾರಣಪ್ಪ, ಮತ್ತು ಮಾಲೇರಪುಟ್ಟರು ಆ ಬದುಕಿನ ಜೀವಂತಿಕೆಯ ನೈಸರ್ಗಿಕತೆಯ ನಿದರ್ಶನವಾಗಿದ್ದಾರೆ. ಅವರ ವ್ಯಕ್ತಿತ್ವದ ಕ್ರಿಯಾಶೀಲತೆಯನ್ನು ಜಡಬ್ರಾಹ್ಮಣ್ಯದ ಪ್ರತೀಕಗಳಾಗಿರುವ ಪ್ರಾಣೇಶಾಚಾರ್ಯರಲ್ಲಾಗಲಿ, ಹಣಕ್ಕಾಗಿ ಹಪಹಪಿಸುವ ಉಳಿದ ಬ್ರಾಹ್ಮಣರಲ್ಲಾಗಲಿ ಕಾಣಲು ಸಾಧ್ಯವಿಲ್ಲ.

ಭಾರತೀಪುರ ಕಾದಂಬರಿಯ ನಾಯಕ ‌ಜಗನ್ನಾಥ ಪ್ರಾಣೇಶಾಚಾರ್ಯರ ವಿದೇಶೀ ಶಿಕ್ಷಣ ಪಡೆದ ಬ್ರಾಹ್ಮಣ್ಯದ ಮುಂದುವರಿದ ಮಾದರಿ.ಇವನಿಗೆ ತಾನು ಇಂಗ್ಲೆಂಡ್ ನಲ್ಲಿ ಇದ್ದರೂ ಕ್ರಿಯಾಶೀಲನಾಗಿಲ್ಲವೆಂದು ಮನವರಿಕೆಯಾಗಿ ಅದನ್ನು ಕಾರ್ಯ ರೂಪಕ್ಕೆ ತರಲೆಂದು ಭಾರತಕ್ಕೆ ಮರಳುತ್ತಾನೆ.ಊರಿನ ಕೇಂದ್ರವಾದ ದೇಗುಲದ ಮಂಜುನಾಥ ಎಲ್ಲವನ್ನೂ ನಿಯಂತ್ರಿಸುತ್ತ ಬಂದಿರುವದರಿಂದ ಹೊಲೆಯರ ವಿಮೋಚನೆಗೆ ಅವರ ಸಂಘಟನೆ ಆಗದೆ ,ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಭಾವಿಸಿ ,ಅದರ ಒಂದು ಅಂಗವಾಗಿ, ಅವರನ್ನು ಮಂಜುನಾಥನ ದೇವಾಲಯ ಕ್ಕೆ ಹೊಗಿಸುವ ಪ್ರಯತ್ನ ಮಾಡಿದ.ಅಲ್ಲಿಗೆ ಹೋದರೆ ಅಲ್ಲಿ ಮಂಜುನಾಥನೆ ಇಲ್ಲ. ಗುಡಿಯ ಪೂಜಾರಿಯ ಮಗ ತಂದೆಯ ಮೇಲಿನ ಸಿಟ್ಟಿನಿಂದ ಹೊಳೆಗೆ ತೆಗೆದುಕೊಂಡು ಹೋಗಿ ಎಸೆದಿರುತ್ತಾನೆ. ಇದಕ್ಕೆ ಜಗನ್ನಾಥನ ಬೂರ್ಜ್ವಾ ಹಿನ್ನೆಲೆ ಹುಸಿಕ್ರಾಂತಿಕಾರತೆಗಳು ಕಾರಣವಾಗಿವೆ.

ಎರಡನೆಯದಾಗಿ

ಗಂಡು- ಹೆಣ್ಣಿನ ಸಂಬಂಧ: ಅವರ ಪ್ರಶ್ನೆ ಮತ್ತು ಕ್ಲಿಪ್ ಜಾಯಿಂಟ್ ಕಥೆಗಳಲ್ಲಿ ಬ್ರಾಹ್ಮಣ ಯುವಕರ ದ್ವಂದ್ವಗಳನ್ನು ಗುರುತಿಸಬಹುದಾಗಿದೆ. ಪ್ರಶ್ನೆ ಕಥೆಯ ,ರಂಗನಾಥನಿಗೆ ಒಡನಾಡಿಯಾದ ಶಾರದೆಯನ್ನು ಮದುವೆ ಆಗುವ ಆಸೆ. ಶಾರದೆಗೆ ಕೂಡ. ಅದಕ್ಕೆ ಅಡ್ಡಿಯೆಂದರೆ ಅವಳ ಮಾವ.ಆ ಮಾವನಿಗೆ ತಲೆತಲಾಂತರದ ಶಾಪದ ಭೀತಿ.ರಂಗನಾಥ ನಿಗೆ ಶೂದ್ರಳಾದ ಲಚ್ಚಿ ಹಾಸಿಗೆ ಯ ಸುಖಕ್ಕೆ ಹೇಳಿ ಮಾಡಿಸಿದಂತೆ ಕಾಣಿಸಿದರೆ, ಶಾರದೆ ಶುಭ್ರ ಶ್ವೇತ ಸುಂದರಿ.ಅವನ ಸಮಸ್ಯೆ ಎಂದರೆ ಒಂದೆ ಶಯ್ಯೆಯಲ್ಲಿ ಆತ್ಮಕ್ಕೂ ಆಗಬೇಕು, ದೇಹಕ್ಕೂ ಆಗಬೇಕು.’ ಎನ್ನುವ ಹಂಬಲ. ದೇಹ ಬೇರೆ ಆತ್ಮ ಬೇರೆ ಬ್ರಾಹ್ಮಣ ಸಂಸ್ಕೃತಿ ಹುಟ್ಟು ಹಾಕಿದ ಭ್ರಮೆಗಳಲ್ಲಿ ಒಂದು. ರಂಗನಾಥ ಅದರ ಬಲಿಪಶು.

‘ ಕ್ಲಿಪ್ ಜಾಯಿಂಟ್’ ಕಥೆಯ ಕೇಶವನಿಗಾದರೂ ತಾನು ಬೆಳೆದ ಉಸಿರುಕಟ್ಟುವ ಬ್ರಾಹ್ಮಣ ಕುಟುಂಬದ ಪರಿಸರದಿಂದ ಓಡಿಹೋಗಿ ಇಂಗ್ಲೆಂಡ್ ಸೇರುತ್ತಾನೆ. ಅಲ್ಲಿ ಅವನಿಗೆ ತಾನು ಇಲ್ಲಿಯವರೆಗೆ ವಂಚಿತನಾದ ಅನುಭವಗಳನ್ನು ಸೂರೆಹೊಡೆಯುವ ತವಕ.ಅಲ್ಲಿ ಕ್ಯಾಬರೆಯ ಲೂಸಿಯ ನಗ್ನ ಮೊಲೆಗಳಲ್ಲಿ ಕಾಣಿಸುವುದು, ಕಾಡುವುದು ಅವನ ಭೂತವೆ.ಮದುವೆಗಾಗಿ ತುದಿಗಾಲಿನಲ್ಲಿ ನಿಂತಿರುವ ತಂಗಿಯರೆ.ಹೀಗೆ ಅವನು ಅಲ್ಲಿಯೂ ಸಲ್ಲದ ಇಲ್ಲಿಗೂ ಸಲ್ಲದವಾಗಿ ಬಿಡುವ ತ್ರಿಶಂಕುವಾಗಿಬಿಡುವ ದುರ್ಬಲ ನಾಯಕರ ಪ್ರತೀಕವಾಗಿದ್ದಾನೆ.

ದಾಂಪತ್ಯದ ಪರಿಕಲ್ಪನೆ: ಇದಕ್ಕೆ ಒಳ್ಳೆಯ ನಿದರ್ಶನ ವೆಂದರೆ ಅವರ ‘ಪ್ರಸ್ತ’ ಕತೆಯಲ್ಲಿ ಬರುವ ಮೂರು ತಲೆಮಾರಿನ ದಾಂಪತ್ಯ ಚಿತ್ರ. ಸೂಳೆಯಲ್ಲಿ ಮುಕ್ತಿ ಕಂಡು ,ಕಡೆಗಾಲದಲ್ಲಿ ಹೆಂಡತಿಯ ಮುಖವನ್ನು ಕನ್ನಡಿಯಲ್ಲಿ ಕಾಣುವ ೬೦ ನೆಯ ವಯಸ್ಸಿನ ಸೀತಕ್ಕನನ್ನು ಹಿಡಿದು ಕೊಳ್ಳಲು ಬಂದಾಗ ಓಡಿ ಹೋಗುತ್ತಾಳೆ. ವಿಷಮ ದಾಂಪತ್ಯ ದಿಂದ ನರಳಿದ ಸದಾ ಸಂಶಯದಲ್ಲಿ ತೊಳಲಾಡುವ ವೆಂಕಮ್ಮ,ಕಲಿತ ಹೆಂಡತಿ ಯ ಜತೆಯಲ್ಲಿ ಸರಸದಿಂದ ಇರುವ ಪುಂಡರೀಕ ನೇತ್ರಾವತಿ ಯರ ವೈವಾಹಿಕ ಸಂಬಂಧದ ಜಟಿಲತೆಯನ್ನು ಸೆರೆಹಿಡಿಯುತ್ತದೆ. ‘ ಹೆಂಡತಿಯನ್ನು ಪ್ರೀತಿಸಬಾರದೆ, ಹೆಸರು ಹಿಡಿದು ಕರೆಯಬಾರದೆ’ ಎಂದು ಹಂಬಲಿಸುವ ಗಂಡು ಹೆಣ್ಣಿನ ದಾಂಪತ್ಯ ಜೀವನದ ಆರೋಗ್ಯಕರ ಸಂಬಂಧಕ್ಕಾಗಿ ಹಾತೊರೆಯುತ್ತವೆ.

ವಿದ್ಯುಕ್ತ ಕ್ರಿಯೆಗಳು: ಬ್ರಾಹ್ಮಣ ಸಂಸ್ಕೃತಿಯ ಹೊರ ವಿವರಗಳು ಪ್ರಕಟವಾಗುವುದು ,ಅದರ ವಿಧಿ ಆಚರಣೆ ಗಳಲ್ಲಿ ನ ಅಮಾನವೀಯತೆಗಳು ವ್ಯಕ್ತಗೊಂಡಿರುವುದು ಅವರ ‘ ಘಟಶ್ರಾದ್ದ’ ಮತ್ತು ಪ್ರಕೃತಿ ಕತೆಗಳಲ್ಲಿ. ಎರಡರಲ್ಲೂ ಯಮುನಕ್ಕ ಮತ್ತು ಲಕ್ಷ್ಮಿಯರು ಬಾಲ್ಯದಲ್ಲೇ ಗಂಡಂದಿರನ್ನು ಕಳೆದುಕೊಂಡ ವಿಧವೆಯರು.ಬಲವಂತವಾಗಿ ತಮ್ಮ ಹರೆಯದ ಹಸಿವನ್ನು ಅದು ಮುಟ್ಟು ಕೊಳ್ಳ ಬೇಕಾಗಿ ಬಂದಾಗ ,ಸಹಜವಾಗಿಯೆ ಅದು ತನ್ನ ತೃಪ್ತಿಯ ತಾಣಗಳನ್ನು ಕಂಡು ಕೊಳ್ಳಲು ಬಯಸುತ್ತದೆ. ಯಮುನಕ್ಕ ಮಾಸ್ತರ ಸಂಬಂಧವನ್ನು ಹೊಂದಿ ಬಸಿರಾದರೆ, ಲಕ್ಷ್ಮಿ ಊರಿನ ಯುವಕನನ್ನು ತಬ್ಬಿಕೊಂಡು ಮಲಗುತ್ತಾಳೆ. ಹೀಗೆ ನಿಸರ್ಗದ ವಿರುದ್ಧದ ಹೋರಾಟದಲ್ಲಿ ವಿಫಲಗೊಂಡು ಅದಕ್ಕೆ ಶರಣಾಗುತ್ತಾರೆ. ಅದಕ್ಕೆ ಅವರು ಅನುಭವಿಸಬೇಕಾಗಿ ಬಂದ ‌ಪ್ರಾಯಶ್ಚಿತ್ತ ಮಾತ್ರ ಘೋರವಾದದ್ದು.ಯಮುನಕ್ಕ ಬಲವಂತವಾಗಿ ಗರ್ಭ ಪಾತ ಮಾಡಿಸಿಕೊಳ್ಳಬೇಕಾಗಿ ಬಂದು ಕಡೆಗೆ ಬ್ರಾಹ್ಮಣ ರಿಂದ ಜೀವಂತ ಘಟಶ್ರಾದ್ದಕ್ಕೆ ಒಳಗಾಗಬೇಕಾಗುತ್ತದೆ. ಕಡೆಗೆ ಬಾಲಕ ನಾಣಿ ಕೇಳುವ ” ಅಮ್ಮ ಬಸಿರಾಗುವುದಿಲ್ಲವೆ, ಯಮುನಕ್ಕ ಬಸಿರಾದರೆ ತಪ್ಪೇನು’? ಎನ್ನುವುದು ಮರ್ಮಘಾತಕವಾಗಿದೆ. ಕಡೆಗೆ ಅವರು ಚಿಕ್ಕ ಹುಡುಗಿಯನ್ನು ಅಡುಗೆಗಾಗಿ ಮದುವೆಯಾಗುವುದು ವಿಡಂಬನೆಯಾಗಿದೆ.

ಅನಂತ ಮೂರ್ತಿಯವರ ಕಥಾಸಾಹಿತ್ಯದಲ್ಲಿನ ಸಂಸ್ಕೃತಿ ವಿಘಟನೆ ಯ ಸಾಧನೆ ಮತ್ತು ಮಿತಿಗಳು. ಸಂಸ್ಕೃತಿ ಎನ್ನುವುದು ಬ್ರಾಹ್ಮಣ ಸಂಸ್ಕೃತಿಯೆಂದೂ, ಅದು ವೈದಿಕ ಸಂಸ್ಕೃತಿಯ ಜಡಗೊಂಡ ಸ್ವರೂಪ ವನ್ನು ಬಹುತೇಕ ಪ್ರತಿನಿಧಿಸುತ್ತದೆ ಎಂದು ಮೇಲಿನ ವಿಶ್ಲೇಷಣೆಯಿಂದ ಕಂಡು ಕೊಳ್ಳಬಹುದಾಗಿದೆ. ಅವರು ಮೇಲಿನ ಎಲ್ಲವನ್ನೂ ಕಾಣಿಸುವುದು ,ಶೋಧಿಸುವುದು, ತಾವು ಬೆಳೆದು ಬಂದ ಬ್ರಾಹ್ಮಣ ಸಂಸ್ಕೃತಿಯ ಕೃತಕತೆಯುಳ್ಳ ಜೀವ ವಿರೋಧಿ ನೆಲೆಗಳನ್ನು. ಅದು ಹೇಗೆ ಜಡವಾಗಿದೆ, ಚಲನಶೀಲತೆಯನ್ನು ಕಳೆದುಕೊಂಡು ಅಮಾನುಷ ವಾಗಿದೆ ಎಂಬುದು. ಇದು ಅವರ ಸಾಧನೆ. ಅದಕ್ಕೆ ಪರ್ಯಾಯವಾಗಿ ಪ್ರಕೃತಿ ದತ್ತವಾಗಿ ಬದುಕುವುದರಲ್ಲಿ, ಬ್ರಾಹ್ಮಣ ಸಂಸ್ಕೃತಿಯ ಕಾಯಕಲ್ಪ ಸಾಧ್ಯ ಎಂದು ಅವರ ಕಥಾಸಾಹಿತ್ಯದಲ್ಲಿ ದಟ್ಟವಾಗಿ ಪ್ರಕಟವಾಗಿದೆ. ಈಚೆಗೆ ಅವರು ತರಂಗದ ಸಂದರ್ಶನ ದಲ್ಲಿ ಹೇಳಿರುವ ” ವೈದಿಕ ಮತ್ತು ಬ್ರಾಹ್ಮಣ ಸಂಸ್ಕೃತಿಗಳ ಟೀಕೆ ಮಾಡದಿದ್ದರೆ ತಾನು ಲೇಖಕನಾಗುವುದೆ ಸಾಧ್ಯವಾಗುತ್ತಿರಲಿಲ್ಲ. ” ಎಂಬ ಮಾತುಗಳನ್ನು ಮೇಲಿನ ಹಿನ್ನೆಲೆಯಲ್ಲಿ ಗ್ರಹಿಸಬಹುದು. ಆದರೆ ಅವರ ಕಥೆಗಳ ಪ್ರಧಾನ ಮಿತಿಯೆಂದರೆ ಅವರ ಕಥಾವಸ್ತು ಬ್ರಾಹ್ಮಣ ಪಾತ್ರ ಗಳ ಸುತ್ತ ಗಿರಕಿ ಹೊಡೆಯುತ್ತವೆ.ಉಳಿದ ವರ್ಗಗಳು ಅವರ ವ್ಯಕ್ತಿತ್ವದ ಪೋಷಣೆಗೆ ಸಹಾಯಕರಾಗಿಯೋ ಸಾಧನಗಳಾಗಿಯೊ ರೂಪುಗೊಂಡಿರುವುದು. ಆದ್ದರಿಂದ ಅನಂತಮೂರ್ತಿ ಕಥಾಸಾಹಿತ್ಯದ ಪ್ರಧಾನ ಸಂವೇದನೆ ‘ ಬ್ರಾಹ್ಮಣ್ಯ’ ಎಂದು ಕರೆದರೆ ತಪ್ಪಿಲ್ಲ.


  • ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading