ನಲವತ್ತು ದಾಟಿದಾಗ ಆಕಾಶವನ್ನು ಮುಟ್ಟುವುದಲ್ಲ, ಅದರೆಡೆಗೆ ನೋಡುವ ಒಂದು ಪ್ರಶಾಂತವಾದ ಕ್ಷಣವೇ ಎಷ್ಟು ದೊಡ್ಡ ವರವೋ ತಿಳಿಯಿತು…ಕವಿ ರಾಜಾಬಾಬು ಕಂಚರ್ಲ ತೆಲುಗು ಮೂಲದ ಕವಿತೆಯನ್ನು ಕನ್ನಡಕ್ಕೆ ಧನಪಾಲ ನಾಗರಾಜಪ್ಪ ಅವರು ಅನುವಾದಿಸಿದ್ದಾರೆ, ತಪ್ಪದೆ ಪೂರ್ತಿಯಾಗಿ ಓದಿ…
ತೆಲುಗು ಮೂಲ : ರಾಜಾಬಾಬು ಕಂಚರ್ಲ

ಒಂದು ನಿಶ್ಶಬ್ದವಾದ ಆತ್ಮಸಂಭಾಷಣೆ
ಚಿಕ್ಕಂದಿನಲ್ಲಿ
ದೊಡ್ಡವನಾಗಬೇಕೆಂದು ಬಯಸಿದೆ
ನನ್ನ ಪುಟ್ಟ ಕೈಗಳಲ್ಲಿ
ದೊಡ್ಡ ಪ್ರಪಂಚವನ್ನೇ ಹಿಡಿಯಬೇಕೆಂದು
ಪುಟ್ಟ ಪುಟ್ಟ ಹೆಜ್ಜೆಗಳಿಂದ
ದೂರದ ದಾರಿಗಳನ್ನೆಲ್ಲಾ
ಅಳೆಯಬೇಕೆಂದು ಆತುರಪಟ್ಟೆ
ಆಗ ಕಾಲ
ನಿಧಾನವಾಗಿ ನಡೆಯುತ್ತಿತ್ತು
ಒಂದು ಹಗಲು
ಒಂದು ಯುಗದಂತೆ ಕಳೆಯುತ್ತಿತ್ತು
ಒಂದು ಸಂಜೆ
ಮುಗಿಯದ ಕಥೆಯಂತಿರುತ್ತಿತ್ತು
ನನಗೆ ತಿಳಿದಿರಲಿಲ್ಲ
ಆ ನಿಧಾನದ ದಿನಗಳಲ್ಲೇ
ಜೀವನ
ತನ್ನ ಅತ್ಯಂತ ಹಿತವಾದ
ಗೀತೆಯನ್ನು ಹಾಡುತ್ತಿದೆ ಎಂದು
**
ಇಪ್ಪತ್ತು ವರ್ಷದ ವಯಸ್ಸಿನಲ್ಲಿ
ಆಕಾಶವೆಲ್ಲಾ ನನ್ನದೆಂದುಕೊಂಡೆ
ಮೂವತ್ತಕ್ಕೆ ಬರುವ ಹೊತ್ತಿಗೆ
ಆಕಾಶ ಎಷ್ಟು ದೂರವೋ ತಿಳಿಯಿತು
ನಲವತ್ತು ದಾಟಿದಾಗ
ಆಕಾಶವನ್ನು ಮುಟ್ಟುವುದಲ್ಲ
ಅದರೆಡೆಗೆ ನೋಡುವ
ಒಂದು ಪ್ರಶಾಂತವಾದ ಕ್ಷಣವೇ
ಎಷ್ಟು ದೊಡ್ಡ ವರವೋ ತಿಳಿಯಿತು
ಈಗ ಅರ್ಥವಾಗುತ್ತಿದೆ
ಕಾಲವೆಂದೂ
ನಮ್ಮನ್ನು ಹಿಂದೂಡಿ ಓಡಲಿಲ್ಲ
ನಾವೇ
ಅದರ ಹಿಂದೆ ಓಡಿದೆವೆಂದು
ಒಂದು ದಿನ ನಿಂತು
ಹಿಂದೆ ತಿರುಗಿ ನೋಡಿದಾಗ
ನಮ್ಮ ಕೈಗಳಲ್ಲಿ
ವರ್ಷಗಳು ಇರಲಿಲ್ಲ
ಕೆಲವು ನಲಿವು-ನೋವುಗಳು
ಕೆಲವು ಮುಖಗಳು
ಕೆಲವು ಹೆಸರುಗಳು
ಕೆಲವು ಅರೆಬರೆಯ ಮಾತುಗಳಷ್ಟೇ ಇದ್ದವು
**
ಹಳೆಯ ಫೋಟೋಗಳನ್ನು ನೋಡುವಾಗ
ಅದರಲ್ಲಿರುವನನ್ನು ನೋಡಿ ಆಶ್ಚರ್ಯ
ಅದು ನಾನೇನಾ?
ಆ ನಗು ಇಷ್ಟು ಮುಗ್ಧವಾಗಿತ್ತಾ?
ಆ ಕಣ್ಣುಗಳಲ್ಲಿ ಇಷ್ಟು ಬೆಳಕಿತ್ತಾ?
ಆ ಜನರು ಇಷ್ಟು ಹತ್ತಿವಾಗಿದ್ದರೆ?
ಆಗ ಅರ್ಥವಾಗುತ್ತದೆ
ನೆನಪುಗಳು ಗತವನ್ನು ಮರಳಿ ತರಲಾರವು
ಆದರೆ ಗತಕಾಲದಲ್ಲಿ
ನಾವು ಕಳೆದುಕೊಂಡ ನಮ್ಮನ್ನು
ಒಂದು ಕ್ಷಣ ಮರಳಿ ನಮಗೆ ತೋರುವವು
ಕಾಲ
ಕೂದಲನ್ನು ಬೆಳ್ಳಗಾಗಿಸಿದೆ
ಮುಖದ ಮೇಲೆ ತನ್ನ ಬೆರಳುಗಳಿಂದ ಸುಕ್ಕುಗಳನ್ನು ಗೀಚಿದೆ
ನಡಿಗೆಯಲ್ಲಿ ಸ್ವಲ್ಪ ನಿಧಾನವನ್ನು
ಸ್ವಲ್ಪ ಘನತೆಯನ್ನು ತುಂಬಿದೆ
ಆದರೆ
ನನ್ನೊಳಗಿರುವ ಪುಟ್ಟ ಮಗುವಿಗೆ
ಅದು ಸ್ವಲ್ಪವೂ
ಮುದಿತನವನ್ನು ತರಲಾರದೆ ಹೋಯಿತು
ಇಂದಿಗೂ…
ತುಂತುರು ಮಳೆಯಾದರೆ
ಮನಸ್ಸು ಓಡುತ್ತದೆ
ಇಂದಿಗೂ…
ಹಳೆಯ ಹಾಡು ಕೇಳಿಸಿದರೆ
ಒಂದು ದೂರವಾದ ಸಂಜೆ
ಮತ್ತೆ ನನ್ನ ಪಕ್ಕದಲ್ಲಿ ಬಂದು ಕೂರುತ್ತದೆ
ಇಂದಿಗೂ…
ಯಾರೇ ಪ್ರೀತಿಯಿಂದ ಕರೆದರೆ
ಒಳಗೆಲ್ಲೋ
ಅಮ್ಮನು ಕರೆದಂತೆ ಅನಿಸುತ್ತದೆ
ಬಾಲ್ಯದ ನಾನು
ಬಾಗಿಲು ತೆರೆದು ನೋಡುತ್ತೇನೆ
ಬಹುಶಃ…
ಮುಪ್ಪು ಮೈಗಷ್ಟೇ;
ಮನಸ್ಸಿಗಲ್ಲ
**
ಅಂದೊಮ್ಮೆ…
ಜೀವನವೆಂದರೆ
ಇನ್ನೂ ಎಷ್ಟೋ ದಿನಗಳು
ಎಂದುಕೊಂಡಿದ್ದೆ
ಈಗ…
ತಿಳಿದುಕೊಂಡೆ
ಜೀವನವೆಂದರೆ
ದಿನಗಳ ಲೆಕ್ಕವಲ್ಲ
ಅಮ್ಮನ ಕೈಯನ್ನು
ಎಷ್ಟು ಕಾಲ ಹಿಡಿದುಕೊಂಡಿದ್ದೆವೋ ಅದು ಮುಖ್ಯವಲ್ಲ
ಆ ಕೈಯಲ್ಲಿನ ಬಿಸಿ ಸ್ಪರ್ಶವನ್ನು
ಎಷ್ಟು ಆಳವಾಗಿ ಅನುಭವಿಸಿದೆವೋ
ಅದೇ ಮುಖ್ಯ
ಒಬ್ಬರನ್ನು
ಎಷ್ಟು ವರ್ಷ ಪ್ರೀತಿಸಿದೆವೆನ್ನುವುದು ದೊಡ್ಡದಲ್ಲ;
ನಮ್ಮ ನಡುವಿನ ನಿಶ್ಶಬ್ದವನ್ನೂ ಕೂಡ
ಎಷ್ಟು ಚೆನ್ನಾಗಿ ಅರ್ಥೈಸಿಕೊಂಡಿದ್ದೆವೆಂಬುದೇ ದೊಡ್ಡದು
ಜೀವನವೆಂದರೆ
ಎಷ್ಟು ಬೆಳಗುಗಳನ್ನು ನೋಡಿದೆವೆಂಬುದಲ್ಲ;
ಎಷ್ಟು ಬೆಳಗುಗಳನ್ನು
ನಿಜವಾಗಿ ಪ್ರೀತಿಸಿದೆವೆಂಬುದು
**
ಅದಕ್ಕೇ…
ಇನ್ನು ನಾಳೆಯನ್ನು
ಅಷ್ಟಾಗಿ ನಂಬುವುದಿಲ್ಲ
“ಆಮೇಲೆ ಮಾತನಾಡುತ್ತೇನೆ…”
“ಇನ್ನೊಮ್ಮೆ ಭೇಟಿಯಾಗುತ್ತೇನೆ…”
“ತದನಂತರ ಪ್ರೀತಿಸುತ್ತೇನೆ…”
“ಆನಂತರ ಸಂತೋಷವಾಗಿರುತ್ತೇನೆ…”
ಎಂದು ಜೀವನವನ್ನು ಮುಂದೂಡುವುದಿಲ್ಲ
ಯಾಕೆಂದರೆ…
ನಾಳೆ ಎಂಬುದು
ಕಾಲ ಕೊಟ್ಟ ಭರವಸೆಯಲ್ಲ
ನಾವು ಊಹಿಸಿಕೊಂಡಿರುವ
ಒಂದು ಸುಂದರವಾದ ಅವಕಾಶವಷ್ಟೇ
ಇಂದು ಇರುವ ಮನುಷ್ಯನನ್ನು
ಇಂದೇ ಪ್ರೀತಿಸುವೆ
ಇಂದು ಬಂದ ಮಳೆಯನ್ನು
ಇಂದೇ ಅನುಭವಿಸುವೆ
ಇಂದು ಸಿಕ್ಕ ನಗುವನ್ನು
ಇಂದೇ ಹಂಚುವೆ
ಯಾಕೆಂದರೆ…
ಕೆಲವು ಕ್ಷಣಗಳು
ಮರಳಿ ಬರುವುದಿಲ್ಲ
ಕೆಲವು ಮನುಷ್ಯರು
ಮರಳಿ ಸಿಗುವುದಿಲ್ಲ
ಕೆಲವು ಬಾಗಿಲುಗಳು
ತಿರುಗಿ ತೆರೆಯುವುದಿಲ್ಲ
**
ಒಂದು ದಿನ
ಈ ದೇಹವನ್ನೂ ಕೂಡ
ಕಾಲಕ್ಕೆ ಒಪ್ಪಿಸಲೇಬೇಕು
ಮುಖದ ಮೇಲಿನ ಸುಕ್ಕುಗಳು
ಮಣ್ಣಿನಲ್ಲಿ ಬೆರೆತು ಹೋಗುವವು
ಬೆಳ್ಳಗಾದ ಕೂದಲು
ಬಲಹೀನವಾಗಿ ಉದುರಿಹೋಗುವವು
ನಮ್ಮ ಹೆಸರೂ ಕೂಡ
ಕಾಲಾನಂತರ ಯಾರದೋ ನೆನಪಿನಲ್ಲಿ
ಒಂದು ಸಣ್ಣ ಪ್ರತಿಧ್ವನಿಯಾಗಿ ಉಳಿಯುವುದು
ಆಗ…
ನಮ್ಮೊಂದಿಗೆ
ಏನು ಬರುತ್ತದೆ?
ಗಳಿಸಿದ್ದೇನೂ ಬರುವುದಿಲ್ಲ
ಗೆದ್ದಿದ್ದೇನೂ ಅಲ್ಲ
ಹುದ್ದೆಗಳೇನೂ ಬರುವುದಿಲ್ಲ
ನಮ್ಮ ಜೊತೆ ಬರುವುದು
ನಾವು ಹಂಚಿದ ಪ್ರೀತಿ ಮಾತ್ರವೇ
**
ಅದಕ್ಕೇ ಓ ಕಾಲವೇ…
ನೀನು ನನ್ನನ್ನು ಇನ್ನೂ
ಸ್ವಲ್ಪ ಮುಂದಕ್ಕೆ ಕೊಂಡೊಯ್ಯಬಹುದು
ನನ್ನ ಕೂದಲನ್ನು ಇನ್ನಷ್ಟು ಬೆಳ್ಳಗಾಗಿಸಬಹುದು
ನನ್ನ ಹೆಜ್ಜೆಗಳನ್ನು ಇನ್ನಷ್ಟು ನಿಧಾನವಾಗಿಸಬಹುದು
ಆದರೆ…
ನನ್ನೊಳಗಿರುವ
ಆ ಬಾಲ್ಯದ ಬೆಳಕನ್ನು ಮಾತ್ರ ಕರೆದೊಯ್ಯಬೇಡ
ಆ ಬೆಳಕಿರುವವರುವವರೆಗೂ
ಪ್ರತಿ ಬೆಳಗೂ ಒಂದು ಹೊಸ ಹುಟ್ಟೇ
ಪ್ರತಿ ಸಂಜೆಯೂ ಒಂದು ಪುಟ್ಟ ವಿದಾಯವೇ
ಪ್ರತೀ ಮನುಷ್ಯನೂ…
ಒಂದು ದೈವ ಸಂದೇಶವೇ
ಪ್ರತೀ ಪ್ರೀತಿಯೂ
ಒಂದು ಪ್ರಾರ್ಥನಾ ಗೀತೆಯೇ
ಪ್ರತೀ ಉಸಿರೂ
ಒಂದು ಸುಂದರವಾದ ವರವೇ
ಈಗ ನನಗೆ ತಿಳಿಯಿತು
ಚಿಕ್ಕಂದಿನಲ್ಲಿ ದೊಡ್ಡವರಾಗಲು ಆತುರಪಡುವೆವು
ದೊಡ್ಡವರಾದ ಮೇಲೆ
ಬಾಲ್ಯವೇ ಅದೃಷ್ಟ ಎಂದರಿಯುವೆವು
ಆದರೂ…
ಇನ್ನೂ ತಡವಾಗಿಲ್ಲ
ಯಾಕೆಂದರೆ…
ನಮ್ಮೊಳಗಿನ ಬಾಲ್ಯ
ಇನ್ನೂ ನಮ್ಮೊಂದಿಗೇ ಇದೆ
ಅದರ ಕೈ ಹಿಡಿದುಕೊಂಡು
ಉಳಿದ ದಾರಿಯಲ್ಲಿ ನಡೆಯೋಣ
ನಾಳೆಗಾಗಿ ಅಲ್ಲ; ಈ ಕ್ಷಣಕ್ಕಾಗಿ
ಯಾಕೆಂದರೆ…
ಜೀವನ ನಮ್ಮನ್ನು ಕೇಳುವುದೊಂದೇ –
“ನೀನೆಷ್ಟು ಕಾಲ ಬದುಕಿದೆ?” ಎಂದಲ್ಲ;
“ನಿನಗೆ ಸಿಕ್ಕಿದ ಜೀವನವನ್ನು
ಎಷ್ಟು ಪ್ರೀತಿಯಿಂದ ಬದುಕಿದೆ?” ಎಂದು…!!
- ಕನ್ನಡಾನುವಾದ : ಧನಪಾಲ ನಾಗರಾಜಪ್ಪ
