ಲೇಖಕರಾದ ಸಹನಾ ಕಾಂತಬೈಲು ಅವರ ‘ಆನೆ ಸಾಕಲು ಹೊರಟವಳು’ ಕೃತಿಯ ಕುರಿತು ಲೇಖಕರಾದ ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ಆನೆ ಸಾಕಲು ಹೊರಟವಳು.
ಲೇಖಕರು: ಸಹನಾ ಕಾಂತಬೈಲು.
ಶ್ರೀರಾಮ ಬುಕ್ ಸೆಂಟರ್ ಮಂಡ್ಯ.
ಮುದ್ರಣದ ವರ್ಷ: ೨೦೧೯ ರಿಂದ ೨೦೨೧(೩ಮುದ್ರಣ.)
ಪುಟಗಳು: ೧೨೦.
ಬೆಲೆ: ರೂ. ೯೦.
ಲೇಖಕಿ ಸಹನಾ ಕಾಂತಬೈಲು ಅವರು ಉದಯವಾಣಿ ಪತ್ರಿಕೆಯಲ್ಲಿ ಸಂಪಾದಕರ ಕೋರಿಕೆಯ ಮೇರೆಗೆ ಕೃಷಿ, ಭೂಮಿ, ಹೆಣ್ಣು ಇಷ್ಟನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದ ಅಂಕಣ ಬರಹಗಳ ಸಂಗ್ರಹವಿದು. ತಾನು ಪದವೀಧರೆಯಲ್ಲ ಆದರೆ ಪ್ರಕೃತಿಯೆಂಬ ವಿಶ್ವ ವಿದ್ಯಾಲಯ ತನಗೆ ಬಹಳಷ್ಟು ಕಲಿಸಿದೆ ಎನ್ನುವ ಅವರು ಕೃಷಿಯೊಂದಿಗಿನ ತಮ್ಮ ಒಡನಾಟ ಹಾಗೂ ಅನುಭವಗಳನ್ನು ಒಂದು ಸವಾಲಿನಂತೆ ಸ್ವೀಕರಿಸಿ, ಇಲ್ಲಿ ಹಂಚಿಕೊಂಡ ರೀತಿಯನ್ನು ಮೆಚ್ಚಲೇ ಬೇಕು. ಹಾಗೇ ತಮ್ಮ ಈ ಚೊಚ್ಚಲು ಕೃತಿಗೆ ಡಾ. ಹಾ. ಮಾ. ನಾಯಕ ಅಂಕಣಬರಹ ಪುರಸ್ಕಾರವನ್ನೂ ಪಡೆದು , ಮುಂಬೈ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ಹಾಗೂ ಸನ್ಮಾನ ಸ್ವೀಕರಿಸಿರುವುದು ಅವರ ಹಿರಿಮೆ.
ತಮ್ಮ ಹಲಸಿನ ಹಣ್ಣಿನ ನಂಟಿನ ಪ್ರೀತಿಯ ಬಗ್ಗೆ ಹೇಳುತ್ತಾ ಅದರ ಉಪಯೋಗ, ಸಂಬಂಧಗಳನ್ನು ಕೂಡಿಸುವ ಅದರ ಶಕ್ತಿ ಗ್ರಾಮೀಣ ಭಾಗದಲ್ಲಿ ಮಹಿಳೆಯರು ಹಲಸಿನ ಖಾದ್ಯಗಳ ಮೂಲಕ ಬದುಕು ಕಟ್ಟಿಕೊಂಡ ಬಗೆಯನ್ನು ವಿವರಿಸಿದ್ದಾರೆ.
ಮಳೆಗಾಲದಲ್ಲಿ ಎಡಬಿಡದೇ ಸುರಿವ ಮಳೆಯಿಂದ ಅಡಿಕೆ ಬೆಳೆಗಾರರ ಪರಿಸ್ಥಿತಿ ಶೋಚನೀಯ. ಫಸಲು ಕೊಡುವ ಮರ ಮುರಿದು,ಗುಡ್ಡ ಜರಿದು ತೋಟಕ್ಕೆ ಬಿದ್ದು ತೋಟವೇ ಸರೋವರವಾಗುವುದು, ವಾರಗಟ್ಟಲೆ ಕರೆಂಟ್ ಇಲ್ಲದೆ ಕತ್ತಲೆಯಲ್ಲಿ ದಿನ ದೂಡುವುದು, ಕೃಷಿಕರ ಬದುಕು ಪ್ರಕೃತಿಯನ್ನೇ ಅವಲಂಬಿಸಿದೆ.ಇತರ ಉದ್ಯೋಗಕ್ಕೆ ಇರುವ ಭದ್ರತೆ ಕೃಷಿಗೆ ಇಲ್ಲ. ವರಮಾನವೂ ಅಸ್ಥಿರವೆಂದು ಕೃಷಿಕನಿಗೆ ಹೆಣ್ಣು ಕೊಡಲು ಹಿಂದೇಟು ಹಾಕುವರೇ ಜಾಸ್ತಿ. ರೈತರಿಗೆ ಆತ್ಮ ವಿಶ್ವಾಸ ತುಂಬುವುದು ಹೇಗೆ? ಎನ್ನುವ ಅವರ ಚಿಂತನೆ, ಹೆಚ್ಚು ಖರ್ಚಿಲ್ಲದ ಹಳ್ಳಿಯ ತರಕಾರಿಯ ಅಡುಗೆಯ ರುಚಿ, ಅದರಲ್ಲಿನ ಪೋಷಕಾಂಶಗಳ ಕುರಿತು ಸೊಗಸಾಗಿ ಮಾಹಿತಿ ನೀಡಿದ್ದಾರೆ.

ಮನೆಯಲ್ಲಿ ಗಂಡು,ಹಟ್ಟಿಯಲ್ಲಿ ಹೆಣ್ಣು ಹುಟ್ಟಬೇಕು ಎಂದು ವಾಡಿಕೆ ಮಾತಿದೆ. ಹೆಣ್ಣು ಕರು ಹೈನುಗಾರಿಕೆಗೆ ನೆರವಾಗುತ್ತದೆ. ಆದರೆ ಬೇಸಾಯಕ್ಕೂ ಯಂತ್ರವಿರುವ ದುಬಾರಿ ದಿನದಲ್ಲಿ ಖರ್ಚು ಹೆಚ್ಚಿಸುವ ಹೋರಿ ಧರ್ಮಕ್ಕೆ ಕೊಟ್ಟರೂ ಯಾರಿಗೂ ಬೇಡ. ಹಾಗಾಗಿ ಲೇಖಕಿ ತಮ್ಮ ಮನೆಯ ಹೋರಿ ಕರುವನ್ನು ಜೀಪಲ್ಲಿ ತುಂಬಿಸಿ ಕಾಡಲ್ಲಿ ಬಿಟ್ಟು ಬಂದ ‘ಹೋರಿಕರುವಿನ ವಿದಾಯ ಪ್ರಸಂಗ ‘ ಎನ್ನುವ ಲೇಖನ ಹೃದಯಸ್ಪರ್ಶಿಯಾಗಿದೆ.
ವ್ಯವಹಾರ ಬಯಸದ ವ್ಯವಸಾಯವಾದ ತಮ್ಮ ಜೇನುಕೃಷಿಯಿಂದ ಆತ್ಮೀಯರಿಗೆ ಸವಿಜೇನು ಹಂಚಿ ಬಾಂಧವ್ಯ ಮಧುರಗೊಳಿಸಿ ಕೊಳ್ಳುತ್ತಲೇ ಜೇನುಗಳ ಕೀಟ ಜಗತ್ತನ್ನೂ ಪರಿಚಯಿಸುತ್ತಾ,ಅವುಗಳ ಕಾರ್ಯಕ್ಷಮತೆಯ ಬಗ್ಗೆ ಹೊಗಳಿದ್ದಾರೆ.
೨೦೧೦ ರವರೆಗೂ ವಿದ್ಯುತ್ ಸೌಕರ್ಯವಿರದ ತಮ್ಮ ಮನೆಗೆ ೧೧೦೦೦೦/ ಖರ್ಚು ಮಾಡಿ , ಪರಿಸರಸ್ನೇಹಿ ವಿದ್ಯುತ್ ಉತ್ಪಾದಿಸುವ ಯಂತ್ರವನ್ನು ಅಳವಡಿಸಿ ಸ್ವಾವಲಂಬಿಯಾಗಿದ್ದು, ಮಹಾ ನಗರ ಮುಂಬೈಗೆ ಹೋದಾಗ ಅಲ್ಲಿನ ಹಸುಸಾಕಣೆಯ ಕುಟುಂಬದ ಸಂಪಾದನೆ ನೋಡಿ ಅಚ್ಚರಿ ಪಟ್ಟಿದ್ದು, ಹಂಡೆ ಬಿಸಿನೀರು ಸ್ನಾನದ ಸುಖ ಅನುಭವಿಸಿದ ತನ್ನ ಗೆಳತಿ , ಬಸ್ಸಲ್ಲಿ ಹೂಮಾರುವ ಹೆಂಗಸರನ್ನು ನೋಡುತ್ತಾ,ಗೃಹಿಣಿಯರ ಕೆಲಸವನ್ನು ಯಾರೂ ಲೆಕ್ಕಿಸುವುದಿಲ್ಲ.ಬೇರು ಬಿಟ್ಟು ಇಡೀ ಮರವನ್ನು ಭದ್ರವಾಗಿ ಕಾಪಿಡುವ ಮಹತ್ವದ ಬೇರಿನಂತೆ ಮಹಿಳೆಯರೂ ತಮ್ಮ ಸಂಸಾರವನ್ನು ಪೋಷಿಸುತ್ತಾರೆ. ಎನ್ನುತ್ತಲೇ “ಒಲೆ ಬದಲಾದರೂ ಉರಿ ಬದಲಾಗದು ” ಎಂಬ ಲೇಖನದಲ್ಲಿ ಸ್ತ್ರೀ ಪರ ನಿಲುವನ್ನು ವ್ಯಕ್ತ ಪಡಿಸಿದ್ದಾರೆ .
ಒಬ್ಬ ಹೆಣ್ಣಿಗೆ ಮನೆಯರ ಅದರಲ್ಲೂ ಪತಿಯ ಸಹಕಾರ ಇದ್ದರೆ ಮಾತ್ರ ಆಕೆಯ ಪ್ರತಿಭೆ ಅರಳುತ್ತದೆ. ಅಡಿಕೆ ಹಳೆಯ ಉಪಯೋಗ ಹೋಟೆಲ್ ಗಳಲ್ಲಿ ಬಾಳೆಎಲೆಯಲ್ಲಿ ಆಹಾರ ಕೊಟ್ಟರೆ,ರೈತರಿಗೂ ಹಣ ಸಿಗುತ್ತದೆ,ಬೇಸಿಗೆಯಲ್ಲಿ ನೀರಿನ ಉಳಿತಾಯವೂ ಆಗುತ್ತದೆ ಎಂಬ ಅವರ ಸಾಮಾಜಿಕ ಕಳಕಳಿ, ಆರೋಗ್ಯಕರ ಬಾಳೆಹಣ್ಣಿನ ಸುಕೇಳಿ,ಹಲ್ವಾ ತಯಾರಿಕೆ, ಕೃಷಿ ಕಠಿಣ ನಿಜ.ಹಾಗೆಂದು ಎಲ್ಲರೂ ಪೇಟೆಗೆ ಹೋದರೆ ಅನ್ನ ಸಿಕ್ಕಿತಾದರೂ ಹೇಗೆ? ಕಂಪ್ಯೂಟರ್ ನಿಂದ ಅಕ್ಕಿ ಉದುರುತ್ತದೆಯೇ?.. ಎನ್ನುತ್ತಾ,ಶಾಲೆಗಳಲ್ಲಿ ಕೃಷಿಶಿಕ್ಷಣ ನೀಡಿ ವಿದ್ಯಾರ್ಥಿಗಳಲ್ಲಿ ಕೃಷಿ ಕುರಿತು ಒಲವು ಬೆಳೆಸಿ, ಹೊಸಬಗೆಯ ಹಸಿರುಕ್ರಾಂತಿ ಮಾಡಬೇಕೆನ್ನುವ ಅವರ ಆಶಯ, ಅಮೇರಿಕಾದ ಜನರ ಕುಟುಂಬಜೀವನದ ಬಗ್ಗೆ ನಮ್ಮವರಿಗಿದ್ದ ತಪ್ಪು ತಿಳುವಳಿಕೆ, ಅಲ್ಲಿರುವ ಸುಂದರ ಗ್ರಂಥಾಲಯದ ಕುರಿತ ಲೇಖನವನ್ನು ಓದಿದರೇ ಇನ್ನೂ ಸೊಗಸು.ಹೆಚ್ಚಿನ ಓದಿನ ಕಾರಣದಿಂದಲೇ ಇಲ್ಲಿನ ಮಕ್ಕಳು ಪ್ರಶ್ನೆ ಮಾಡುವ ಮತ್ತು ವಿವೇಚಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದು ಅವರ ಅಭಿಪ್ರಾಯ.
ತಾವು ಕೋಲ್ಕತ್ತಾ ನಗರ ಪ್ರವಾಸಕ್ಕೆ ಹೋದಾಗ ಕಂಡಿದ್ದು ಅಲ್ಲಿಯ ಜನ ಪ್ರತಿದಿನ ಹಾಲು ಕರೆಯುವಾಗ ಹಸುಗಳಿಗೆ ಇಂಜೆಕ್ಷನ್ ನೀಡಿದಾಗ ಅವುಗಳ ವೇದನೆ ನೆನೆದು ಲೇಖಕಿ ಮರುಗಿದ್ದು, ಹಿರಿಯರು ಹೊರೆಯಲ್ಲ ಎಂಬ ಅವರ ನಿಲುವು ,ಇಂದಿನ ಮದುವೆಯಲ್ಲಿ ಆಡಂಬರ ಇದೆ.ಆದರೆ ಆಪ್ತತೆ ಇಲ್ಲ ಎನ್ನುವ ಸತ್ಯವಾದ ಅನಿಸಿಕೆಯೊಂದಿಗೆ ತಮ್ಮ ಮದುವೆಯ ನೆನಪುಗಳನ್ನೂ ತೆರೆದಿಟ್ಟಿದ್ದಾರೆ.
ತಾವು ಮದುವೆ ಮುಂಜಿಯಂತಹ ಸಮಾರಂಭಕ್ಕೆ ಹೋದಾಗ ಹತ್ತಿರ ಕೂತ ಹೆಂಗಸರು ತರಕಾರಿ,ಬೀಜಗಳ ಬಗ್ಗೆ ಮಾತಾಡುತ್ತಾರಲ್ಲದೆ ಸೀರೆ ಒಡವೆಗಳ ಬಗ್ಗೆ ಚರ್ಚಿಸುವುದಿಲ್ಲ . ಬಿತ್ತಿ ಬೆಳೆಸುವ ಸಂಸ್ಕೃತಿಯ ಹಿಂದೆ ಹೆಣ್ಣಿನ ಕೊಡುಗೆ ಬಹಳ ದೊಡ್ಡದು . ಮನೆ ಬೆಳಗುವ ಹೆಣ್ಣು ಬಯಸುವ ಸ್ವಂತಮನೆಯ ಕನಸನ್ನು ಬಿಂಬಿಸುವ ಲೇಖನದಲ್ಲಿ ತಮ್ಮ ಸಹಜ ಸುಂದರ ಹಳ್ಳಿಮನೆಯ ಬಗ್ಗೆ ಬಣ್ಣಿಸಿದ್ದಾರೆ.

ಮುಂಬಯಿ ಯೂನಿವರ್ಸಿಟಿಯಲ್ಲಿ ಉಪನ್ಯಾಸ ಮಾಡುತ್ತಾ “ತಾವು ನಡೆದುಬಂದ ದಾರಿಯ ಬಗ್ಗೆ ಮಾತಾಡಿ,ಹೇಗೆ ಬರೆಯಬೇಕು ಎಂಬುದಕ್ಕೆ ಉತ್ತರ ಇಲ್ಲ. ಅದು ಹೇಳಿಕೊಟ್ಟು ಬರುವಂಥದ್ದಲ್ಲ. ಓದುವುದೊಂದೇ ಇದಕ್ಕೆ ಪರಿಹಾರ.ಬರವಣಿಗೆ ಒಂದು ಕಲೆ. ಬರೆಯುವುದಕ್ಕೆ ನಿಯಮಗಳಿಲ್ಲ. ನೋಡಿದ್ದನ್ನು ಮನಸ್ಸಲ್ಲಿಟ್ಟು ಗ್ರಹಿಸಿಟ್ಟು ಬೇಕಾದಾಗ ಬಳಸಬಲ್ಲವನು ಲೇಖಕನಾಗಿ ಬೆಳೆಯಲು ಸಾಧ್ಯ. ಕತೆ, ಕವನ, ಕಮ್ಮಟಗಳು ನಮಗೆ ಸ್ಪೂರ್ತಿ ಕೊಡಬಲ್ಲವೇ ಹೊರತೂ ಬರೆಯಬೇಕಾದವರು ನಾವೇ.ಬರೆಯುವುದು, ಓದುವುದು ಆತ್ಮಸಂತೋಷಕ್ಕೆ. ಹಗುರಾಗುವುದಕ್ಕೆ ಬಿಡುಗಡೆ ಪಡೆಯುವುದಕ್ಕೆ.” ಎನ್ನುವ ಲೇಖಕಿಯವರ ಮಾತು ಮನಸ್ಸಿಗೆ ಹತ್ತಿರವಾಯಿತು.ಸಾಹಿತ್ಯ ದಿಗ್ಗಜರ ಸಾಲಿನಲ್ಲಿ ತಮ್ಮ ಹೆಸರನ್ನೂ ಮೂಡಿಸಿದ ಅವರ ಸಾಧನೆಗೆ ಹೆಮ್ಮೆಯೆನಿಸಿತು.
ಆನೆ ಸಾಕಲು ಹೊರಟವಳು ಎನ್ನುವ ಶೀರ್ಷಿಕೆಯ ಲೇಖನದಲ್ಲಿ ಕಾಡಿನಲ್ಲಿ ಆಹಾರವಿಲ್ಲದ ಆನೆಗಳು ರೈತರಹಸಿರಿನ ಅಡಿಕೆತೋಟವನ್ನು ಧ್ವಂಸ ಮಾಡುವುದನ್ನು ತಪ್ಪಿಸಲು ಕೃಷಿ ಇಲಾಖೆಯ ಸಹಾಯಪಡೆದು ಲೇಖಕಿ ಕಲ್ಲು ಬಾಳೆ ಬೆಳೆಸಿ, ಆನೆಯ ಸಂತತಿಯನ್ನು ಉಳಿಸಲು ಅವರ ಹೋರಾಟ , ಇಲಾಖೆಯ ಸಹಯೋಗದಲ್ಲಿ ಕೈಗೊಂಡ ಕ್ರಮ ಇವೆಲ್ಲಾ ಲೇಖಕಿಯವರ ಜೀವನಪ್ರೀತಿ ಹಾಗೂ ಮಾನವೀಯತೆಯನ್ನು ಎತ್ತಿ ಹಿಡಿಯುವಲ್ಲಿ ಸಫಲವಾಗಿದೆ .
ಇಲ್ಲಿನ ಎಲ್ಲಾ ಲೇಖನಗಳೂ ಆಸಕ್ತಿಯಿಂದ ಓದಿಸಿಕೊಂಡು ನನಗೆ ಅಪೂರ್ವ ಆನಂದ ನೀಡಿದವು. ವಿಸ್ಮಯ ಹುಟ್ಟಿಸುತ್ತಲೇ ಹೃದಯ ತಟ್ಟುವ ಇವರ ಬರಹಗಳನ್ನು ನೀವೂ ಓದಿ ಆನಂದಿಸಿ…
ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ :
- “ಹಸುರು ಹೊನ್ನು” ಕೃತಿ ಪರಿಚಯ
- ‘ಪ್ರೀತಿ ಮಮತೆಗಳ ನಡುವೆ’ ಕೃತಿ ಪರಿಚಯ
- ‘ಮೀನಾಕ್ಷಿಯ ಸೌಗಂಧ’ ಕೃತಿ ಪರಿಚಯ
- ‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ
- ‘ಸಿಂಧೂರ ರೇಖೆಯ ಮಿಂಚು’ ಕೃತಿ ಪರಿಚಯ
- ‘ಇನ್ನೊಂದು ಸಂಪುಟ’ ಕೃತಿ ಪರಿಚಯ
- ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿ
- ‘ಪಾಂಚಾಲಿಯಾಗಲಾರೆ’ ಕೃತಿ ಪರಿಚಯ
- ‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ
- ‘ಅಗಮ್ಯ’ ಕೃತಿ ಪರಿಚಯ
- ‘ಯಾವ ನಾಳೆಯೂ ನಮ್ಮದಲ್ಲ’ ಕೃತಿ ಪರಿಚಯ
- ‘ದೀಪದ ಮಲ್ಲಿಯರು’ ಕೃತಿ ಪರಿಚಯ
- ‘ಕಾಡು ತಿಳಿಸಿದ ಸತ್ಯಗಳು’ ಕೃತಿ ಪರಿಚಯ
- ‘ಕೃಷಿ ಬದುಕಿನ ಹೆಜ್ಜೆ ಸಾಲು’ ಕೃತಿ ಪರಿಚಯ
- ‘ಒಲ್ಲೆಯೆನದಿರು ನಮ್ಮದಲ್ಲದ ನಾಳೆಗಳ’ ಕೃತಿ ಪರಿಚಯ
- ‘ಗಾದೆ ಮಾತಿನ ಗುಟ್ಟು’ ಕೃತಿ ಪರಿಚಯ
- ‘ಕಿಚ್ಚಿಲ್ಲದ ಬೇಗೆ’ ಕೃತಿ ಪರಿಚಯ
- ‘ಅಗಸ್ತ್ಯ’ ಕೃತಿ ಪರಿಚಯ
- ‘ಸಾಂದರ್ಭಿಕ’ ಕೃತಿ ಪರಿಚಯ
- ರೇಖಾ ಕಾಖಂಡಕಿ ಅವರು ಕೃತಿ ಪರಿಚಯ
- ಗೌರಿ ಕೃತಿ ಪರಿಚಯ
- ‘ನಿಮ್ಮ ಸಿಮ್ಮ’ ಕೃತಿ ಪರಿಚಯ
- ‘ಪಣಿಯಮ್ಮ’ ಕೃತಿ ಪರಿಚಯ
- ‘ಚಿಗುರಿದ ಕನಸು’ ಕೃತಿ ಪರಿಚಯ
- ‘ಅಶ್ವತ್ಥಾಮೋ ಹತಃ’ ಪರಿಚಯ
- ‘ಹೂ ದಂಡಿ’ ಕೃತಿ ಪರಿಚಯ
- ‘ಬೂದಿ ಮುಚ್ಚಿದ ಕೆಂಡ’ ಕೃತಿ ಪರಿಚಯ
- ‘ಇಲಿಯಡ್’ ಕೃತಿ ಪರಿಚಯ
- ‘ಅಲೆಯೊಳಗಿನ ಮೌನ’ ಕೃತಿ ಪರಿಚಯ
- ‘ಹೂಲಿ ಶೇಖರರ ನಾಟಕಗಳು’ ಕೃತಿ ಪರಿಚಯ
- ‘ನನ್ನಕ್ಕ ನಿಲೂಫರ್’ ಕೃತಿ ಪರಿಚಯ
- ‘ಅರಣ್ಯಕಾಂಡ’ ಕೃತಿ ಪರಿಚಯ
- ‘ವಿಕ್ರಮಾರ್ಜುನ ವಿಜಯ’ ಕೃತಿ ಪರಿಚಯ
- ‘ಸುನೀತಗಳು’ ಕೃತಿ ಪರಿಚಯ
- ‘ಮೈ- ಮನಸ್ಸುಗಳ ಸುಳಿಯಲ್ಲಿ ಸಖಿ!’ ಕೃತಿ ಪರಿಚಯ
- ‘ಪದ್ದಣ ಮನೋರಮೆ’ ಕೃತಿ ಪರಿಚಯ
- ‘ಬ್ರಹ್ಮರಾಕ್ಷಸ’ ಕೃತಿ ಪರಿಚಯ
- ‘ಬದುಕ ಭಿತ್ತಿಯ ಚಿತ್ರಗಳು’ ಕೃತಿ ಪರಿಚಯ
- ‘ಅಮ್ರಪಾಲಿ’ ಪುಸ್ತಕ ಪರಿಚಯ
- ‘ಇದು ಕತೆಯಲ್ಲ ಜೀವನ’ ಕೃತಿ ಪರಿಚಯ
- ‘ಕೇದಗೆ ಪುಷ್ಪ’ ಕೃತಿ ಪರಿಚಯ
- ‘ಬಂಕಿಮಚಂದ್ರರ ಶ್ರೇಷ್ಠ ಕತೆಗಳು’ ಕೃತಿ ಪರಿಚಯ
- ‘ಸೀಳುದಾರಿ’ ಪುಸ್ತಕ ಪರಿಚಯ
- ‘ಲವ್ ಟುಡೆ’ ಕೃತಿ ಪರಿಚಯ
- ‘ಕ್ಲಾಸ್ ಟೀಚರ್’ ಕೃತಿ ಪರಿಚಯ
- ‘ಒಂದು ಎಂಟಾಣೆಯ ಕಥೆ’ ಕೃತಿ ಪರಿಚಯ
- ‘ನಿಮಗ ತಿಳಿಯೋದಿಲ್ಲ ಬಿಡ್ರಿ’ ಕೃತಿ ಪರಿಚಯ
- ‘ಮಾಸದ ವಿಜಯ’ ಕೃತಿಯ ಪರಿಚಯ
- ‘ಅರಳಿಮರ’ ಪುಸ್ತಕ ಪರಿಚಯ
- ‘ಆಸೆಯ ಅಲೆಗಳ ಮೇಲೆ’ ಕೃತಿ ಪರಿಚಯ
- ‘ಬರ್ಬರಿಕ’ ಕೃತಿ ಪರಿಚಯ
- ‘ನನ್ನ ದನಿಗೆ ನಿನ್ನ ದನಿಯು’ ಕೃತಿ ಪರಿಚಯ
- ‘ಅಂತರಂಗ’ ಕೃತಿ ಪರಿಚಯ
- ‘ಕಾಡುಬಳ್ಳಿ’ ಕೃತಿ ಪರಿಚಯ
- ‘ನಂಟು’ ಪುಸ್ತಕ ಪರಿಚಯ
- ‘ಶಕುನದ ಹಕ್ಕಿ’ ಕೃತಿ ಪರಿಚಯ
- ‘ಪರ್ಷಿಯಾ ಪರಿಮಳ’ ಕೃತಿ ಪರಿಚಯ
- ‘ತೀರದ ತುಡಿತ’ ಕೃತಿ ಪರಿಚಯ
- ‘ಅಪೂರ್ವ ಕುಸುಮಗಳು’ ಕೃತಿ ಪರಿಚಯ
- ‘ಹುಲಿ ವೇಷ’ ಕೃತಿ ಪರಿಚಯ
- ಮಾಲತಿ ರಾಮಕೃಷ್ಣ ಭಟ್ – ಕಿರಿಯ ಸಹಾಯಕರು, ಲೋಕೋಪಯೋಗಿ ಇಲಾಖೆ ಉಪವಿಭಾಗ, ಸಿದ್ದಾಪುರ.
