ಶರಣರ ಅನುಭವ ಮಂಟಪದ ಪರಿಕಲ್ಪನೆ

೧೨ನೇ ಶತಮಾನದ ಕಲ್ಯಾಣ ಕ್ರಾಂತಿ ವಿಶ್ವ ಇತಿಹಾಸದಲ್ಲೇ ಅಪರೂಪ. ರಾಜ ಬಿಜ್ಜಳನ ಆಸ್ಥಾನದಲ್ಲಿದ್ದ ಮಂತ್ರಿ ಬಸವಣ್ಣನವರು ಕೇವಲ ಆಡಳಿತ ಸುಧಾರಕ ಮಾತ್ರ ಆಗಿರಲಿಲ್ಲ. ಅವರು ಮಾನವ ಸಮಾನತೆಯ ಮೊದಲ ಪ್ರಯೋಗ ಮಾಡಿದರು. ಆ ಪ್ರಯೋಗದ ಹೆಸರೇ ಅನುಭವ ಮಂಟಪ. ಲೇಖಕರಾದ ಓಂಕಾರ ಪಾಟೀಲ ಅವರು ಲೇಖನವನ್ನು  ತಪ್ಪದೆ ಮುಂದೆ ಓದಿ… 

ಮಂಡೆ ಮಾಸಿದಡೆ ಮಹಾಮಜ್ಜನವ ಮಾಡುವುದು. ವಸ್ತ್ರ ಮಾಸಿದಡೆ ಮಡಿವಾಳoಗಿಕ್ಕುವುದು ಮನದ ಮೈಲಿಗೆ ತೊಳೆಯಬೇಕಾದರೆ ಕೂಡಲ ಚೆನ್ನಸಂಗನ ಶರಣರ ಅನುಭಾವ ಮಾಡುವುದು||

ಮೇಲಿನ ಶರಣರ ವಚನದ ಸಾರದಂತೆ “ಮಂಡೆ” ಅಂದರೆ “ತಲೆ” ನಮ್ಮ ತಲೆ ಕೊಳೆಯಾದರೆ ತಲೆ ಸ್ವಚ್ಛ ಮಾಡಲು ಸ್ನಾನ ಮಾಡುತ್ತೇವೆ, “ವಸ್ತ್ರ” ಅಂದರೆ “ಬಟ್ಟೆ” ಬಟ್ಟೆ ಹೊಲಸಾದರೆ ಒಗೆದು ಸ್ವಚ್ಛ ಮಾಡಲು ಮಡಿವಾಳ(ಅಗಸ)ನಿಗೆ ಕೊಡುತ್ತೇವೆ ಅದೇ ರೀತಿ ನಮ್ಮ ಅಂತರಂಗದ ಮನದ ಮೈಲಿಗೆ ಶುಚಿ ಮಾಡಲು ಶರಣರ ಅನುಭಾವವೇ ಲೇಸು ಎಂದು ಶರಣರು ನುಡಿದಂತೆ ಶರಣತತ್ವಗಳಾದ ಕಾಯಕ, ದಾಸೋಹ, ಮತ್ತು ಶರಣತತ್ವವನ್ನೊಳಗೊಂಡಂತೆ ಸತ್ಯ, ಸಮಾನತೆ ಜಾತಿ ರಹಿತ, ವರ್ಣರಹಿತ ಕಲ್ಯಾಣ ರಾಜ್ಯವನ್ನು ಕಟ್ಟಲು ಒಂದು ಸಾಧನವಾಗಿ ಬಸವಣ್ಣನವರು “ಅನುಭವ ಮಂಟಪ” ವನ್ನು ಸ್ಥಾಪನೆ ಮಾಡಿದರು, ಅಲ್ಲಮಪ್ರಭು ದೇವರನ್ನು ಮೊಟ್ಟಮೊದಲ ಅನುಭವ ಮಂಟಪದ ಕುಲಪತಿಗಳನ್ನಾಗಿ ನಿಯುಕ್ತಿ ಮಾಡಿದರು.

ಬಸವಣ್ಣನವರು ಸಮಾಜಕ್ಕಾಗಿ ಬದುಕಿದವರು, ಅವರು ಸ್ಥಾಪಿಸಿದ ಅನುಭವಮಂಟಪದಲ್ಲಿ ಎಲ್ಲಾ ವರ್ಗದ ಎಲ್ಲಾ ಜಾತಿಯ ಜನರಿಗೆ ಭಾಗವಹಿಸಿ ಮುಕ್ತವಾಗಿ ಚರ್ಚಿಸಲು ತಮ್ಮ ಸಮಸ್ಯೆಯನ್ನು ಹಾಗು ಅಭಿಪ್ರಾಯವನ್ನು ವ್ಯಕ್ತಪಡಿಸಲು ಹೇಳಿಕೊಳ್ಳಲು ಮಾಡಿಕೊಡಲಾಗಿತ್ತು.

ಅನುಭವ ಮಂಟಪ ಸ್ಥಾಪನೆಯ ಮುಂಚೆ ಸಮಾಜದಲ್ಲಿ ಮೂರು ದೊಡ್ಡ ಸಮಸ್ಯೆಗಳಿದ್ದವು ಅವುಗಳೆಂದರೆ ಧಾರ್ಮಿಕತೆಯಲ್ಲಿ ಎಕಸ್ವಾಮ್ಯ ಅಧಿಕಾರ, ಜಾತಿ ತಾರತಮ್ಯ, ಸ್ತ್ರೀ ದೌರ್ಜನ್ಯ, ಈ ಎಲ್ಲದಕ್ಕೆ ಉತ್ತರವಾಗಿ ಸ್ಥಾಪಿಸಿದ ಎಲ್ಲರಲ್ಲಿ ಸಮಾನತೆ ಸಾರುವ “ಅನುಭವ ಮಂಟಪ” ವನ್ನು ಬಸವಣ್ಣನವರು ಸ್ಥಾಪನೆ ಮಾಡಿದರು.

“ಅನುಭವ” ಅಂದರೆ ಕೇವಲ ಪುಸ್ತಕದ ಜ್ಞಾನ ಅಲ್ಲ. ತನ್ನ ಜೀವನದಲ್ಲಿ ಅನುಭವಿಸಿದ, ಅನುಭೂತಿ ಮಾಡಿದ ಸತ್ಯ.

“ಮಂಟಪ” ಅಂದರೆ ಚರ್ಚೆ, ವಾದ ವಿವಾದ, ತೀರ್ಮಾನ ನಡೆಯುವ ಮುಕ್ತ ವೇದಿಕೆ.ಹಾಗಾಗಿ ಇದನ್ನು “ಅನುಭವಿಗಳ ಸಂಸತ್ತು” ಅಥವಾ ಅನುಭವ ಮಂಟಪವೆಂದು ಕರೆಯುವರು. ರಾಜ ಬಿಜ್ಜಳನಿಂದ ಹಿಡಿದು ಮಾದಾರ ಚೆನ್ನಯ್ಯನವರೆಗೆ ಎಲ್ಲರೂ ನೆಲದ ಮೇಲೆ ಸಮಾನವಾಗಿ ಕುಳಿತು ಪ್ರಶ್ನಿಸುವ, ಟೀಕಿಸುವ ಸ್ವಾತಂತ್ರ ಅಧಿಕಾರ ಶರಣರು ಅನುಭವ ಮಂಟಪದ ಮೂಲಕ ಕಲ್ಪಿಸಿದರು.

ಶರಣರು ಕನ್ನಡ ಭಾಷೆಯಲ್ಲಿ ವಚನಗಳನ್ನು ಬರೆಯುವ ಅಂದಿನ ಸಂಸ್ಕೃತ ಭಾಷೆಯ ಪಾರುಪತ್ಯವನ್ನು ವಿರೋಧಿಸಿ ಕನ್ನಡ ಅಸ್ಮಿತೆಯನ್ನು ಮೆರೆದರು. ಹೀಗಾಗಿ ಅಕ್ಕಮಹಾದೇವಿ, ನೀಲಾಂಬಿಕೆ, ಲಿಂಗಮ್ಮ, ಕಾಳವ್ವೆ ಮುಂತಾದ ೩೦ಕ್ಕೂ ಹೆಚ್ಚು ಮಹಿಳಾ ವಚನಕಾರರು ಕನ್ನಡ ಭಾಷೆಯಲ್ಲಿ ಸಾವಿರಾರು ವಚನವನ್ನು ರಚಿಸಿ ಕನ್ನಡ ಸಾರಸತ್ವಲೋಕಕ್ಕೆ ತಮ್ಮದೇಯಾದ ಕೊಡಗೆಯನ್ನು ನೀಡಿರುತ್ತಾರೆ.

ಅದೇ ರೀತಿ ಕಮ್ಮಾರ, ಕ್ಷೌರಿಕ, ಚರ್ಮಕಾರ, ರೈತ ಸೇರಿದಂತೆ ಎಲ್ಲ ವರ್ಗದವರಿಗೂ ಕಾಯಕ, ದಾಸೋಹ, ಶರಣತತ್ವದ ಮಹತ್ವದ ಕುರಿತು ಅರುಹಿದರು.

ಒಟ್ಟಾರೆಯಾಗಿ ಹೇಳುವದಾದರೆ ಕಲ್ಯಾಣ ನಾಡಿನ ಶರಣರು ಕಟ್ಟಿದ ಅನುಭವ ಮಂಟಪ ಕೇವಲ ಇಟ್ಟಿಗೆ-ಕಲ್ಲಿನ ಕಟ್ಟಡ ಅಲ್ಲ. ಅದು ಒಂದು ಕಾಯಕ, ದಾಸೋಹ, ಶರಣ ತತ್ವ, ಜಾತಿರಹಿತ ಸಮಾಜ ನಿರ್ಮಾಣ, ಸ್ತ್ರೀ ಶೋಷಣೆ ರಹಿತ,ಸಮಾನತೆಯ ಕನ್ನಡ ಅಸ್ಮಿತೆಯ ಕೇಂದ್ರ ಕಲ್ಯಾಣ ನಾಡಿನ ಶರಣರ ಜಗತ್ತಿನ ಮೊದಲ ಸಂಸತ್ತು “ಅನುಭವ ಮಂಟಪ ” ವಾಗಿದೆ.


  • ಓಂಕಾರ ಪಾಟೀಲ – ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಕಾರ್ಯದರ್ಶಿಗಳು, ಬೀದರ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading