ನಾವು ನಿರ್ಲಕ್ಷಿಸುವ ಕಿವಿ ಇಡೀ ದೇಹವನ್ನು ಸಮತೋಲನದಲ್ಲಿಡುವ ಕೆಲಸ ಮಾಡುತ್ತದೆ ಎಂದರೆ ಎಲ್ಲರೂ ನಂಬಲೇಬೇಕು. ಲೇಖಕರಾದ ಸಿದ್ಧರಾಮ ಕೂಡ್ಲಿಗಿ ಅವರು ವರ್ಟಿಗೋ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕಳೆದ ವಾರ ಮಧ್ಯರಾತ್ರಿ ಯಥಾ ರೀತಿ ವಾಶ್ ರೂಮ್ ಗೆ ಹೋಗಬೇಕೆಂದು ಹಾಸಿಗೆಯಿಂದ ಎದ್ದೆ. ಎದ್ದು ಕುಳಿತ ತಕ್ಷಣ ಇಡೀ ಮನೆಯೆ ತಿರುಗಿದಂತೆ ಭಾಸವಾಗತೊಡಗಿತು. ಸ್ವಲ್ಪ ಹೊತ್ತಿಗೆ ಹೇಗೋ ಸುಧಾರಿಸಿಕೊಂಡು, ನಿಧಾನವಾಗಿ ಎದ್ದೆ. ಎದ್ದ ತಕ್ಷಣವೂ ಅದೇ ಅನುಭವ. ಒಮ್ಮೆಲೆ ಭಯ ಆವರಿಸಿತು. ಇದೇಕೆ ತಲೆ ತಿರುಗುತ್ತಿದೆ ಅಂತ. ಹಾಗೂ ಹೀಗೂ ಗೋಡೆ ಹಿಡಿದು ವಾಶ್ ರೂಮ್ ಗೆ ಹೋಗಿ ಬರುವುದರೊಳಗೆ ಸುಸ್ತಾಗಿಬಿಟ್ಟೆ. ಬೆಳಿಗ್ಗೆ ಸರಿ ಹೋಗಬಹುದು ಎಂದು ನಿದ್ದೆ ಹೋದೆ.
ಮರುದಿನ ಬೆಳಿಗ್ಗೆ ಎದ್ದು ಕುಳಿತುಕೊಳ್ಳಲೇ ಆಗದಂತಹ ಸ್ಥಿತಿ ಬಂದುಬಿಟ್ಟಿತು. ಎದ್ದು ಕುಳಿತ ತಕ್ಷಣ ಇಡೀ ಮನೆ ಭರ್ ಎಂದು ತಿರುಗತೊಡಗಿದ ಅನುಭವ. ಹಾಗೇ ಮಲಗಿಬಿಟ್ಟೆ. ಇನ್ನು ಹೇಗಪ್ಪ ಮುಂದೆ ? ಎಂದು ಚಿಂತಿತನಾಗಿ, ನಮ್ಮ ಸಂಬಂಧಿಯೊಬ್ಬರಿಗೆ ಫೋನ್ ಮಾಡಿ ಕರೆದೆ. ಎದ್ದು ಮನೆಯ ಬಾಗಿಲಾದರೂ ತೆಗೆಯಲಾಗುತ್ತೋ ಇಲ್ಲವೋ ಅನ್ನುವಂಥ ಪರಿಸ್ಥಿತಿ. ನಡೆಯಲು ಹೋದರೆ ದೇಹದ ಮೇಲೆ ನಿಯಂತ್ರಣವೇ ಸಿಗುತ್ತಿರಲಿಲ್ಲ. ತೂರಾಡುತ್ತ ಹೋಗುವ ಅನುಭವ. ತಪ್ಪು ಹೆಜ್ಜೆ ಬೇರೆ. ಸಂಬಂಧಿಯಾದ ಅಳಿಯ ಮನೆಗೆ ಒಬ್ಬರು ಕಂಪೌಂಡರ್ ನ್ನೇ ಕರೆದುತಂದ. ಬಿಪಿ, ಶುಗರ್ ಪರೀಕ್ಷಿಸಿದರೆ ಎರಡೂ ನಾರ್ಮಲ್ ಇತ್ತು. ಇನ್ನೇನಿರಬಹುದೆಂಬ ಯೋಚನೆ. ಹಿಂದಿನ ದಿನ ಸರಿಯಾಗಿ ಊಟ ಮಾಡಿರಲಿಲ್ಲ. ಅದಕ್ಕೂ ತಲೆ ತಿರುಗುತ್ತಿರಬಹುದಾ ? ಅಥವಾ ಹೃದಯ ಸಂಬಂಧಿ ಕಾಯಿಲೆಯಾ ? ಹೀಗೇ ಏನೇನೋ ಯೋಚನೆ. ತಲೆ ಬೇರೆ ನೋವು, ಕಿವಿಯಲ್ಲಿ ಗುಂಯ್ ಎಂಬ ಶಬ್ದ, ಅದನ್ನು ಅನುಭವಿಸಿದವರಿಗೇ ಎಲ್ಲ ಗೊತ್ತಾಗೋದು.
ಅಳಿಯನೇ ನಿಧಾನವಾಗಿ ಆಸ್ಪತ್ರೆಗೆ ಕರೆದೊಯ್ದ. ಅಲ್ಲಿ ವೈದ್ಯರು ಎಲ್ಲ ವಿಚಾರಿಸಿ, ಇದು ವರ್ಟಿಗೋ ಎಂದು ಮಾತ್ರೆ ಕೊಟ್ಟರು. ಒಂದೆರಡು ದಿನ ಮಾತ್ರೆ ತೆಗೆದುಕೊಂಡಾಗ ಸರಿ ಅನಿಸಿತು. ಇನ್ನು ಪರವಾಗಿಲ್ಲ ಅನಿಸಿತಾದರೂ ರಾತ್ರಿ ಮಾತ್ರ ಭಯ ಅನಿಸುತ್ತಿದ್ದುದು ಸುಳ್ಳೇನಲ್ಲ. ಆದರೂ ಈ ಸಲ ತಲೆ ತಿರುಗುವುದು ಮೊದಲಿನಷ್ಟಿಲ್ಲದಿದ್ದರೂ ಮಲಗಿದಾಗ, ಎದ್ದು ಕುಳಿತಾಗ ಸ್ವಲ್ಪ ತಿರುಗಿದಂತೆ ಭಾಸವಾಗುತ್ತಿತ್ತು. ಇದು ಸರಿ ಹೋಗುವುದಿಲ್ಲ ಎಂದು ಮರುದಿನವೇ ಬೆಂಗಳೂರಿಗೆ ನನಗೆ ಆತ್ಮೀಯನಾದ ಚಾಲಕನನ್ನು ಕರೆದುಕೊಂಡು ಹೊರಟೆ.

ಮನೆಯಲ್ಲಿಯೂ ಗಾಬರಿ. ಇದು ಯಾಕೆ ಹೀಗೆ ? ಅನ್ನೋದೇ ಎಲ್ಲರಿಗೂ ಯೋಚನೆ. ಮಗ ಮನೆಯ ಸಮೀಪದ ಸ್ಪರ್ಷ್ ಆಸ್ಪತ್ರೆಗೆ ಅಪಾಯಿಂಟ್ ಮೆಂಟ್ ಬುಕ್ ಮಾಡಿದ. ಅಲ್ಲಿ ಕಾಯಿಲೆಯ ಲಕ್ಷಣಗಳನ್ನೆಲ್ಲ ತಿಳಿದುಕೊಂಡು ಇಎನ್ ಟಿ ವೈದ್ಯರ ಬಳಿ ಕಳಿಸಿದರು. ಇ ಎನ್ ಟಿ ವೈದ್ಯರು ಒಬ್ಬ ಚಿಕ್ಕ ವಯಸಿನ ಯುವತಿ. ನಗು ನಗುತ್ತಲೇ ಎಲ್ಲ ವಿವರ ತಿಳಿದುಕೊಂಡರು. ಕಣ್ಣು, ಕಿವಿ, ಮೂಗು, ಗಂಟಲು ಎಲ್ಲವನ್ನೂ ತಮ್ಮ ಉಪಕರಣಗಳ ಮೂಲಕ ಪರೀಕ್ಷಿಸಿದರು. ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ನಿಂತುಕೊಳ್ಳಿ ಎಂದರು. ನಿಂತುಕೊಂಡೆ. “ಸರಿ ಬನ್ನಿ” ಎಂದು ಪಕ್ಕದಲ್ಲಿರುವ ಮತ್ತೊಂದು ಕೋಣೆಗೆ ಕರೆದೊಯ್ದರು. ಅಲ್ಲಿ ಒಂದು ಟೇಬಲ್ ಮೇಲೆ ಕೂಡಿಸಿ “ನಿಮ್ಮ ತಲೆಯ ಹಿಂಭಾಗ ಟೇಬಲ್ ಮೇಲಿರಬಾರದು, ಪೂರ್ತಿ ಟೇಬಲ್ ಹಿಂಭಾಗಕ್ಕೆ ಬರಬೇಕು, ಆಸರೆ ಇರದಂತೆ, ನಾನು ನಿಮ್ಮ ತಲೆಯನ್ನು ಹಿಡಿದಿರುತ್ತೇನೆ ಏನೂ ಹೆದರಬೇಡಿ ಎಂದು” ಕೂಡಿಸಿದರು. ನಾನು ಕಾಲು ಚಾಚಿ ಕೂತೆ, ತಲೆಯ ಹಿಂಭಾಗವನ್ನು ಹಿಡಿದು “ನಿಧಾನವಾಗಿ ಹಿಂದೆ ಮಲಗಿ” ಎಂದರು. ನಾನು ನಿಧಾನವಾಗಿ ಹಿಂದೆ ಮಲಗಿದೆ ನನ್ನ ತಲೆಯ ಹಿಂಭಾಗದಲ್ಲಿ ಯಾವುದೇ ಆಸರೆ ಇರಲಿಲ್ಲ, ಹಾಗೆ ಮಲಗಿದ ತಕ್ಷಣ ಇಡೀ ಕೋಣೆಯೇ ಗಿರಗಿರನೇ ಸುತ್ತತೊಡಗಿದ ಅನುಭವ. “ತಿರುಗುವಿಕೆ ನಿಂತ ನಂತರ ಹೇಳಿ” ಎಂದರು. ತಲೆ ತಿರುಗುವಿಕೆ ನಿಂತ ಮೇಲೆ “ಬಲಗಡೆ ಹೊರಳಿ” ಎಂದರು. ಬಲಗಡೆ ನಿಧಾನವಾಗಿ ಹೊರಳಿದೆ, ಮತ್ತೆ ತಲೆ ತಿರುಗುವ ಅನುಭವ, ನೆಲ ನೋಡಿ ಎಂದರು, ಹಾಗೇ ನೆಲ ನೋಡಿದೆ, ತಲೆ ತಿರುಗುವಿಕೆ ನಿಂತ ಮೇಲೆ ಹೇಳಿ ಅಂದರು. ಹೇಳಿದೆ. “ಬಲಗಡೆಯಿಂದಲೇ ಮೇಲೆದ್ದು ಕುಳಿತುಕೊಳ್ಳಿ” ಎಂದರು. ಎದ್ದು ಕುಳಿತೆ. ಮತ್ತೆ ಅದೇ ಪುನರಾವರ್ತನೆ. ಈ ಬಾರಿ ಮಲಗಿದಾಗ ತಲೆ ತಿರುಗಲಿಲ್ಲ. ಎದ್ದು ಕುಳಿತ ನಂತರ “ಈಗ ಸರಿ ಹೋಯ್ತು. ಮತ್ತೆ ಸದ್ಯಕ್ಕೆ ಮರುಕಳಿಸುವುದಿಲ್ಲ ಬನ್ನಿ” ಎಂದು ತಮ್ಮ ಕೋಣೆಗೆ ಕರೆದೊಯ್ದರು. ಕಿವಿಯಲ್ಲಿ ಕ್ರಿಸ್ಟಲ್ ತನ್ನ ಜಾಗವನ್ನು ಬದಲಿಸಿದಾಗ ಈ ರೀತಿ ಆಗುತ್ತೆ. ವಯಸ್ಸಾದ ಮೇಲೆ ಇದು ಸಾಮಾನ್ಯ. ಎಲ್ಲರಿಗೂ ಇದು ಆಗುವುದಿಲ್ಲ ಕೆಲವರಿಗೆ ಮಾತ್ರ ಈ ರೀತಿ ಆಗುತ್ತೆ ಎಂದರು. “ಮಾತ್ರೆ ಕೊಡುವೆ ಒಂದು ವಾರ ನೋಡಿ, ಕಡಿಮೆ ಅನಿಸದಿದ್ದರೆ ಬನ್ನಿ” ಎಂದು Vertin 16 ಎಂಬ ಮಾತ್ರೆಯನ್ನು ಬರೆದುಕೊಟ್ಟರು.
ಮಾತ್ರೆ ತೆಗೆದುಕೊಂಡು ಮನೆಗೆ ಬಂದೆವು. ಎಲ್ಲರಿಗೂ ಆಗ ಸಮಾಧಾನ. ಪ್ರತಿದಿನವೂ ಮಾತ್ರೆ ತೆಗೆದುಕೊಳ್ಳುತ್ತಿರುವೆ. ವೈದ್ಯರು ಹೇಳಿದಂತೆ ಮತ್ತೆ ತಲೆ ಸುತ್ತು ಬಂದಿಲ್ಲ.
Vertigo ಎಂಬ ವಿಚಿತ್ರ ಕಾಯಿಲೆ ಕಿವಿಯಲ್ಲಿನ ಕ್ರಿಸ್ಟಲ್ ಎಂಬ ಪದಾರ್ಥವು ತನ್ನ ಸ್ಥಳವನ್ನು ಬದಲಾಯಿಸಿದಾಗ ಈ ಸಮಸ್ಯೆ ಉಂಟಾಗುತ್ತೆ. ಆಗ ಇಡೀ ದೇಹ ಸಮತೋಲನವನ್ನು ಕಳೆದುಕೊಂಡುಬಿಡುತ್ತೆ. ನಡೆಯಲೂ ಆಗದ ಸ್ಥಿತಿ. ಈ ಸ್ಥಿತಿ ಉಲ್ಬಣಗೊಂಡಿದ್ದರೆ ತಕ್ಷಣ ಬಿದ್ದು ದೇಹಕ್ಕೆ ಪೆಟ್ಟಾಗುವ ಪರಿಸ್ಥಿತಿಯೂ ಉಂಟಾಗಬಹುದು. ಕಾರಣ ವರ್ಟಿಗೋ ಕಾಣಿಸಿಕೊಂಡರೆ ಹಾಸಿಗೆಯ ಮೇಲೆ ಕಣ್ಮುಚ್ಚಿ ಮಲಗುವುದೊಂದೇ ಉಪಾಯ. ನಡೆಯಬೇಕಾದರೂ ಸ್ವಲ್ಪ ಹೊತ್ತು ಸುಧಾರಿಸಿಕೊಂಡು ಒಬ್ಬರ ಆಸರೆ ಅಥವಾ ಬೇರೇನಾದರೂ ಆಸರೆಗೆ ಹಿಡಿದುಕೊಂಡು ಓಡಾಡಬೇಕಾಗುತ್ತೆ. ಇದು ಕಾಣಿಸಿಕೊಂಡರೆ 3-4 ದಿನ ಇರುತ್ತೆ. ನಂತರ ನಿಧಾನವಾಗಿ ಕಡಿಮೆಯಾಗುತ್ತೆ. ಆದರೆ ಆ ಮೂರು ನಾಲ್ಕು ದಿನ ಇಡೀ ದೇಹ ಸಮತೋಲನ ಕಳೆದುಕೊಂಡ ಅನುಭವ. ಕಿವಿಯ ಯಾವ ಭಾಗದಲ್ಲಿ ಈ ಸಮಸ್ಯೆ ಇರುತ್ತದೆಯೋ ಅದರೆ ವಿರುದ್ಧ ಭಂಗಿಯಲ್ಲಿ ಮಲಗಬೇಕಾಗುತ್ತದೆ. ಉದಾಹರಣೆಗೆ ಬಲಗಿವಿಯಲ್ಲಿ ಈ ಸಮಸ್ಯೆ ಇದ್ದರೆ ಎಡಗಡೆಯೇ ಮಲಗಬೇಕು. ಎಡಗಿವಿಯಲ್ಲಿ ಸಮಸ್ಯೆ ಇದ್ದರೆ ಬಲಗಡೆಯೇ ಮಲಗಬೇಕು. ನಂತರದಲ್ಲಿ ಇದು ಯಾವಾಗ ಮತ್ತೆ ಮರುಕಳಿಸುವುದೋ ಗೊತ್ತಾಗುವುದಿಲ್ಲವಾದ್ದರಿಂದ ಸದಾ ಎಚ್ಚರಿಕೆಯಿಂದ ಇರುವುದು ಒಳಿತು ಎಂದು ಹೇಳಲಾಗುತ್ತದೆ.
ವಿಶೇಷ ಸೂಚನೆ : ತಲೆ ತಿರುಗುವಿಕೆಗೆ ಇದೊಂದೇ ಕಾರಣ ಎಂದು ತಿಳಿಯಬಾರದು. ಬೇರೆ ಬೇರೆ ಕಾರಣಗಳೂ ಇರುತ್ತವೆ. ವೈದ್ಯರ ಹತ್ತಿರ ತೋರಿಸಿದಾಗಲೇ ಅದು ಏನೆಂಬುದು ಗೊತ್ತಾಗುತ್ತದೆಯೇ ಹೊರತು ನಾವೇ ಇದು ಇಂಥದೇ ಎಂದು ತೀರ್ಮಾನಿಸಬಾರದು.
- ಸಿದ್ಧರಾಮ ಕೂಡ್ಲಿಗಿ
