‘ಪುನರುತ್ಥಾನ’ ಕೃತಿ ಪರಿಚಯ

ಮರಾಠಿ ಮೂಲದ ಸದಾನಂದ ಶೆವಡೆ ಅವರ ಶಂಕರಾಚಾರ್ಯರ ಅನುಯಾಯಿಗಳಿಗೆ ಅವರ ಜೀವನದ ಆದರ್ಶವನ್ನು ಕನ್ನಡಕ್ಕೆ ತಂದಿದ್ದಾರೆ ಸುಮಾ ದ್ವಾರಕನಾಥ ಅವರು, ಈ ಕೃತಿಯ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಪುಸ್ತಕ : ಪುನರುತ್ಥಾನ
ಮೂಲ ಮರಾಠಿ: ಸದಾನಂದ ಶೆವಡೆ
ಕನ್ನಡಕ್ಕೆ: ಸುಮಾ ದ್ವಾರಕನಾಥ

ಮರಾಠಿ ಕನ್ನಡ ಸಾಂಸ್ಕೃತಿಕ ರಾಯಭಾರಿಯಾಗಿ ಕೆಲವು ಮರಾಠಿ ಕೃತಿಗಳನ್ನು ಕನ್ನಡಕ್ಕೆ ತಂದು ಯಶಸ್ವಿಯಾಗಿರುವ ನನ್ನ ಮೆಚ್ಚಿನ ಶಿಷ್ಯೆ ಸುಮಾ ಅವರು ಈ ಸಲ ಶಂಕರಾಚಾರ್ಯರ ಜೀವನಾಧಾರಿತ ಕಾದಂಬರಿ ಪುನರುತ್ಥಾನವನ್ನು ಕನ್ನಡಕ್ಕೆ ತಂದಿದ್ದಾರೆ. ಅದರಲ್ಲಿ ಅವರು ಮೂಲ ಕಾದಂಬರಿಕಾರರ ಆಶಯ ಮತ್ತು ಆಕೃತಿಗಳಿಗೆ ಭಂಗ ಬಾರದಂತೆ ಕನ್ನಡೀಕರಿಸಿದ್ದಾರೆ. ಈಗಾಗಲೇ ಅವರ ಬಗ್ಗೆ ಇರುವ ಚಾರಿತ್ರಿಕ ಜೀವನ ವಿವರಗಳು ಇಲ್ಲಿ ಪುರಾಣೀಕರಣಕಕ್ಕೆ ಒಳಗಾಗಿದೆ. ಇದರಿಂದಾಗಿ ಸುಮಾರು ಒಂದು ಸಾವಿರ ವರ್ಷಗಳಷ್ಟು ಅವರ ಹಿಂದಕ್ಕೆ ಸರಿದಿದೆ. ಇದಕ್ಕೆ ಕಾರಣ ಮೂಲ ಲೇಖಕರಿಗೆ ಪಾಶ್ಚಿಮಾತ್ಯರ ಇತಿಹಾಸದ ಪರಿಕಲ್ಪನೆಯ ಕುರಿತು ಇರುವ ಅಸಮಾಧಾನ. ಅದನ್ನು ಲೇಖಕಿ ಯಥಾವತ್ತಾಗಿ ಉಳಿಸಿ ಕೊಂಡು ಮೂಲಕ್ಕೆ ನಿಷ್ಠರಾಗಿದ್ದಾರೆ.

ಮೇಲೆ ನಾನು ಸೂಚಿಸಿದ ಇತಿಹಾಸದ ಪುರಾಣೀಕರಣಕಕ್ಕೆ ನಿದರ್ಶನವೆಂದರೆ ಶಂಕರಾಚಾರ್ಯರನ್ನು ಅವತಾರ ಪುರುಷನನ್ನಾಗಿ ಗ್ರಹಿಸಿರುವುದು. ಅವರು ಇತರ ಆಚಾರ್ಯರಂತೆ ಅಲ್ಲದೆ ಸಾಕ್ಷಾತ್ ಶಿವನ ಅವತಾರ ಎಂದು ಇಲ್ಲಿ ಪರಿಗಣಿಸುತ್ತಾರೆ. ಆದ್ದರಿಂದ ಅವರಿಗೆ ಎದರಾದವರಿಗೆ ಶಾಸ್ತ್ರಾರ್ಥದಲ್ಲಿ ಸೋಲು ಕಟ್ಟಿಟ್ಟ ಬುತ್ತಿ. ಅವರ ಜೀವನದ ಪರಮ ಉದ್ದೇಶವೆಂದರೆ ವೇದ ಪ್ರಾಮಾಣ್ಯದ ಅದ್ವೈತ ತತ್ವವನ್ನು ಆರ್ಯಾವರ್ತದ ತುಂಬ ಪ್ರಸಾರ ಮಾಡುವುದು. ಅದಕ್ಕಾಗಿ ನಾಲ್ಕು ಪೀಠಗಳನ್ನು ದೇಶದ ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಿದರು. ಮತ್ತು ತಮ್ಮ ಪ್ರಮುಖ ಶಿಷ್ಯರನ್ನು ಪೀಠಾಧಿಪತಿಗಳನ್ನಾಗಿ ನೇಮಿಸಿದರು.

ಹೀಗೆ ಮಾಡುವಾಗ ಅವರು ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅವನ್ನು ವೈಯಕ್ತಿಕ, ಸಾಮುದಾಯಿಕ ಹಾಗೂ ಧಾರ್ಮಿಕ ಸವಾಲುಗಳು ಎಂದು ಕರೆಯಬಹುದು . ವೈಯಕ್ತಿಕವಾಗಿ ಸವಾಲನ್ನು ಅವರು ಸ್ವತಃ ತಮ್ಮ ಕುಟುಂಬದಿಂದಲೇ ಎದುರಿಸಬೇಕಾಗುತ್ತದೆ. ಅವರು ಕಿರಿಯ ವಯಸ್ಸಿನಲ್ಲಿಯೇ ತಮ್ಮ ತಂದೆಯನ್ನು ಕಳೆದುಕೊಂಡಾಗ,ಇವರನ್ನು ಅವರ ತಾಯಿ ಜೋಪಾಸನೆ ಮಾಡಿದರು. ಇವರು ಕಿರಿಯ ವಯಸ್ಸಿನಲ್ಲಿಯೇ ತಾನು ಸಂನ್ಯಾಸಿಯಾಗಿ, ಧರ್ಮ ಪ್ರಚಾರದಲ್ಲಿ ತೊಡಗಬೇಕು ಎಂದು ನಿರ್ಧರಿಸಿದರು. ಅದಕ್ಕೆ ಅವರ ಅನುಮತಿ ಪಡೆಯಲು ತಮ್ಮ ಯೋಗದ ಬಲದಿಂದ ತಮ್ಮ ಕಾಲನ್ನು ಮೊಸಳೆ ಹಿಡಿವಂತೆ ಮಾಡಿ , ಅವರಿಂದ ತಾನು ಸಂನ್ಯಾಸಿಯಾಗಲು ಅನುಮತಿ ದೊರೆತರೆ ಮಾತ್ರ ಬಿಡುತ್ತದೆ ಎಂದು ಹೇಳಿ ಅವರಿಂದ ಅವರ ಬಲವಂತವಾಗಿ ಅನುಮತಿ ಪಡೆಯುತ್ತಾರೆ. ಈಚೆಗೆ ಆಕೆಯ ಎದುರಿಸಿದ ತೊಳಲಾಟವನ್ನು ಕುರಿತು, ಕವಿ ತಾರಿಣೆ ಶುಭದಾಯಿನಿ ಅವರು ” ಶಂಕರರ ತಾಯಿ” ಎನ್ನುವ ಸುಂದರವಾದ ಕವನ ಬರೆದಿದ್ದಾರೆ. ನಂತರ ಅವರ ಸಾವಿನ ಸಮಯದಲ್ಲಿ ಬಂದು ಸಂಸ್ಕಾರ ಮಾಡುವುದಾಗಿ ಆಶ್ವಾಸನೆ ಕೊಡುತ್ತಾರೆ. ಮತ್ತು ಆಗ ಬಂದು ಊರಿನವರ ವಿರೋಧವನ್ನು ಲೆಕ್ಕಿಸದೆ, ಸ್ವತಃ ಚಿತಾಗ್ನಿಯನ್ನು ರಚಿಸಿ, ಅದರಲ್ಲಿ ಅವರ ತಾಯಿಯ ಶವಕ್ಕೆ ಸಂಸ್ಕಾರ ಮಾಡಿ, ಅವರು ತಾಯಿಗೆ ಕೊಟ್ಟ ಮಾತನ್ನು ನಡೆಸಿಕೊಡುತ್ತಾರೆ.
ಸಾಮುದಾಯಿಕ: ವಿವಿಧ ಸಮುದಾಯಕ್ಕೆ ಸೇರಿದ ಅಂದಿನ ಜನರು ಸಹಜವಾಗಿಯೇ ಅವರವರ ನಂಬಿಕೆಗಳಿಗೆ ಅನುಗುಣವಾಗಿ ನಡೆದು ಕೊಳ್ಳುತ್ತಿದ್ದರು. ಅವರನ್ನೆಲ್ಲಾ ಒಂದುಗೂಡಿಸಲು ಅವರ ನಂಬಿಕೆ ವಿಚಾರಗಳನ್ನು ತಿಳಿದುಕೊಳ್ಳಲು, ಮತ್ತು ಅವುಗಳಲ್ಲಿ ಇರುವ ಮಿತಿಗಳನ್ನು ಗ್ರಹಿಸಿ ಅವರಿಗೆ ಮನವರಿಕೆ ಮಾಡಿ ಕೊಡಲು, ಅವರ ಜೊತೆ ಶಾಸ್ತ್ರಾರ್ಥ ನಡೆಸುವುದು ಅನಿವಾರ್ಯವಾಯಿತು. ಆಗ ಬಹುತೇಕರು ಪೂರ್ವ ಮೀಮಾಂಸೆಯ ಕರ್ಮಕಾಂಡವನ್ನು ಅನುಸರಿಸುತ್ತಿದ್ದುದರಿಂದ ಅವರಿಗೆ ಉತ್ತರ ಮೀಮಾಂಸೆಯ ಜ್ಞಾನ ಮಾರ್ಗಕ್ಕೆ ಅದು ಮೆಟ್ಟಿಲೆಂದು, ಅಲ್ಲಿಯೇ ಉಳಿಯದೆ ಅವರು ಅದ್ವೈತದ ಕಡೆಗೆ ಸಾಗಬೇಕು ಎಂದು ಮನವರಿಕೆ ಮಾಡಿದರು. ಇದಕ್ಕೆ ಅವರು ಮಂಡನಮಿಶ್ರರ ಜೊತೆಗೆ ನಡೆಸಿದ ಶಾಸ್ತ್ರಾರ್ಥ ನಿದರ್ಶನವಾಗಿದೆ. ನಂತರ ಅವನನ್ನು ತನ್ನ ಶಿಷ್ಯನನ್ನಾಗಿ ಮಾಡಿ ಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಅದಕ್ಕೆ ಮೊದಲು ಅವರ ನಡುವಿನ ಶಾಸ್ತ್ರಾರ್ಥಕ್ಕೆ ತೀರ್ಪುಗಾರಳಾದ ಅವನ .
ಹೆಂಡತಿ ವಿದುಷಿ ಸರಸ್ವತಿಯಿಂದ ಕಾಮಶಾಸ್ತ್ರದ ಕುರಿತು ಸವಾಲನ್ನು ಎದುರಿಸಬೇಕಾಗುತ್ತದೆ ಅದಕ್ಕೆ ಉತ್ತರ ಕೊಡಲು ಅವರು ಸತ್ತ ರಾಜನೊಬ್ಬನ ಪರಕಾಯ ಪ್ರವೇಶ ಮಾಡಿ, ಅಲ್ಲಿ ಕೂಡಾ ವ್ರತಾಚಾರಣೆ ಮಾಡಿ ಅವನ ಹೆಂಡತಿಯಿಂದ ಮಾಹಿತಿ ಪಡೆದು ಬಂದು ಸರಸ್ವತಿಯ ಪ್ರಶ್ನೆಗೆ ಉತ್ತರ ಕೊಡುತ್ತಾರೆ. ಮುಂದೆ ಅವರು ದಕ್ಷಿಣದ ಸರ್ವಜ್ಞ ಪೀಠ ಏರುವಾಗ ಅವಳು ಮತ್ತೆ ಬಂದು ಸ್ತ್ರೀ ಸ್ಪರ್ಶದ ಶುದ್ದತೆಯ ಪ್ರಶ್ನೆ ಹಾಕಿದಾಗ, ಅವರು ತಮ್ಮ ವ್ರತಾಚಾರಣೆಯ ಮೂಲಕ ಶುದ್ದತೆ ಕಾಯ್ದುಕೊಂಡದ್ದನ್ನು ತಿಳಿಸಿ ಸರ್ವಜ್ಞ ಪೀಠ ಏರುತ್ತಾರೆ.
ಧಾರ್ಮಿಕ; ಭಿನ್ನ ಧರ್ಮಗಳಾದ ಜೈನ ಮತ್ತು ಬೌದ್ಧ ಧರ್ಮಗಳನ್ನು ಮತ್ತು ಅವನ್ನು ಅನುಸರಿಸುವವರನ್ನು ಪಾಖಂಡಿಗಳೆಂದು ಕರೆಯುವುದಲ್ಲದೆ , ಅವರ ಜೊತೆಗೆ ಕೂಡಾ ಶಾಸ್ತ್ರಾರ್ಥ ಮಾಡಿ ಸೋಲಿಸಿ , ಅವರನ್ನು ಆರ್ಯಾವರ್ತದ ಆಚೆಗೆ ನೇಪಾಳಕ್ಕೆ ಓಡಿ ಹೋಗುವಂತೆ ಮಾಡುತ್ತಾರೆ. ಅವರ ಪ್ರಕಾರ ವೇದದಲ್ಲಿ ಇರುವುದನ್ನೇ ಅವರು ಹೇಳಿದರೆ ಹೊರತು ಅವರು ಹೇಳಿದ್ದರಲ್ಲಿ ಹೊಸದೇನಿಲ್ಲ ಎಂದು ವಾದಿಸಿಸುತ್ತಾರೆ. ಅವರಲ್ಲಿ ಒಬ್ಬನಾದ ಅಭಿನವಗುಪ್ತ ಅವರಿಗೆ ಮರಣಾಂತಿಕ ಅಭಿಚಾರ ಮಾಡಿ ಅವರಿಗೆ ಭಗಂದರವೆಂಬ ಕಾಯಿಲೆಯಿಂದ ನರಳುವಂತೆ ಮಾಡಿದ. ಅದನ್ನು ತಿಳಿದು ಅವರು ಅವನ ವಿರುದ್ದ ಪ್ರತಿಕಾರ ಕೈಗೊಳ್ಳದೆ ಇದ್ದಾಗ, ಅದನ್ನು ಸಹಿಸದ ಅವರ ಶಿಷ್ಯರು, ಅವನ ವಿರುದ್ದ ಅಭಿಚಾರ ಕೈಗೊಳ್ಳಲು ಅವರು ಮೌನ ಸಮ್ಮತಿ ನೀಡಿದರು. ಇದರಿಂದಾಗಿ ಅವರು ಅದರಿಂದ ವಾಸಿಯಾಗಿ ಅವನಿಗೆ ವರ್ಗಾವಣೆಯಾಗುತ್ತದೆ.

ಮುಂದೆ ಅವರು ನೇಪಾಳಕ್ಕೆ ಹೋಗಿ ಅಲ್ಲಿ ಬೌದ್ಧರಿಂದ ಪಶುಪತಿನಾಥ ಮಂದಿರಕ್ಕೆ ಒದಗಿದ್ದ ದುರ್ಗತಿಯಿಂದ ಬಿಡಿಸಿ ಪುನರುತ್ಥಾನಗೈಯುತ್ತಾರೆ. ಹೀಗೆ ಶಂಕರಾಚಾರ್ಯರು ಅನ್ಯ ಧರ್ಮಗಳಿಂದ ವೈದಿಕ ಧರ್ಮಕ್ಕೆ ಒದಗಿದ್ದ ಆಘಾತದಿಂದ, ಅದು ಮತ್ತೆ ಚೇತರಿಸಿಕೊಳ್ಳುವಂತೆ ತಮ್ಮ ಶಾಸ್ತ್ರಾರ್ಥ ಮತ್ತು ದೇಗುಲಗಳ ಜೀರ್ಣೋದ್ದಾರ ಮಾಡಿದ್ದಕ್ಕೆ ಈ ಕೃತಿಯನ್ನು ಪುನರುತ್ಥಾನ ಎಂದು ಕರೆಯಲಾಗಿದೆ.

ಇದನ್ನು ಕನ್ನಡದ ಜಾಯಮಾನಕ್ಕೆ ತಕ್ಕಂತೆ ಅನುವಾದ ಮಾಡಿರುವ ಸುಮಾ , ಶಂಕರಾಚಾರ್ಯರ ಅನುಯಾಯಿಗಳಿಗೆ ಅವರ ಜೀವನದ ಆದರ್ಶವನ್ನು ತಿಳಿಯುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ. ಅದಕ್ಕೆ ಅವರಿಗೆ ಅಭಿನಂದನೆಗಳು.

ಇಲ್ಲಿ ಇರುವ ಒಂದು ತಾಂತ್ರಿಕ ತೊಡಕು ಎಂದರೆ ಶಂಕರಾಚಾರ್ಯ ರನ್ನು ಶಿವನ ಅವತಾರ ಎಂದು ನಂಬಿಕೆ ಇರುವ ಲೇಖಕರಿಗೆ ಶಿವನು ಚಂಡಾಳರ ರೂಪದಲ್ಲಿ ಬಂದಾಗ ಇವರಿಗೆ ಅವನು ಶಿವ ಎಂದು ಗೊತ್ತಾಗಲಿಲ್ಲ ಹೇಗೆ ಎಂಬುದು. ಕೇರಳದ ಈಳವರ ಗುರು ನಾರಾಯಣ ಅವರು ಕೂಡಾ ಚಂಡಾಳ ಅಲ್ಲ ಶಿವನೇ ಎಂದು ಸಮರ್ಥಿಸುತ್ತಾರೆ. ಇದರ ಹಿಂದೆ ಅವನು ಚಂಡಾಳ ಎಂದು ಒಪ್ಪಿಕೊಳ್ಳಲು ಸಿದ್ಧವಿಲದವರ ಹುನ್ನಾರ ಕೂಡಾ ಆಗಿರಬಹುದು ಅಲ್ಲವೇ?

ಮೂಲ ಸಂಸ್ಕೃತದ ಮಾತುಗಳನ್ನು ಹಾಗೆಯೇ ಉಳಿಸಿಕೊಂಡಿರುವುದರಿಂದ ಕೆಲವು ಸಲ ಅದು ತಿಳಿಯದವರಿಗೆ ಅರ್ಥ ಗ್ರಹಿಕೆಗೆ ತೊಡಕನ್ನುಂಟು ಮಾಡುತ್ತವೆ: ಋತುಂಬರ ಪ್ರಜ್ಞೆ, ತತ್ವಮಸಿ, ಅಹಂ ಬ್ರಹ್ಮಾಸ್ಮಿ ಇತ್ಯಾದಿ. ಅವುಗಳಿಗೆ ಕೊನೆಗೆ ಅಡಿಟಿಪ್ಪಣಿ ಕೊಡಬಹುದಿತ್ತು.


  • ರಘುನಾಥ್ ಕೃಷ್ಣಮಾಚಾರ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading