ಕವಿತೆಯಿಲ್ಲದೆ ನಾನು ನೋವ ಹಾಡಲಿ ಹೇಗೆ ? ಕವಿ ಹಂದಿಕುಂಟೆ ನಾಗರಾಜ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಮೊನ್ನೆ ತಾನೆ,
ಒಂದೇ ತಟ್ಟೆಯಲ್ಲಿ ಹಂಚಿತಿಂದವರೇ ಈಗ
ಬೆನ್ನಿಗಿರಿದಿದ್ದಾರೆ ನೋವು ಗಾಯದ್ದಲ್ಲ,
ಇರಿದವರು ನಂಬಿದವರೆನ್ನುವುದು,
ಎಷ್ಟೆಲ್ಲಾ ಹೇಳಲಿಕ್ಕಿದೆ, ಕವಿತೆಯಿಲ್ಲದೆ
ನಾನು ನೋವ ಹಾಡಲಿ ಹೇಗೆ..?
ಈಗ ಬಂದೆ,
ಇಲ್ಲೇ ಕುಳಿತರು ಆಯ್ತಾ
ದಾರಿ ಗೊತ್ತಿಲ್ಲ ನಿನಗೆ,
ನಾನಿದೀನಲ್ಲ ಭಯ ಬೇಡ
ಅಂತಾ ಹೇಳಿ ಹೋದವರು ಅಲ್ಲಿ;
ಮತ್ತೊಬ್ಬರಿಗೂ ಇದೇ ಧೈರ್ಯದ ಮಾತು ಹೇಳಿ ಕಾಣೆಯಾಗಿದ್ದಾರೆ,
ಎಷ್ಟೊಂದಿದೆ ಗೊತ್ತಾ ಹೇಳಲಿಕ್ಕೆ
ಕವಿತೆಯಿಲ್ಲದೆ ನಾನು
ನೋವ ಹಾಡಲಿ ಹೇಗೆ..?
ದೂರದವರ ಮಾತು ಬಿಡಿ
ಹೆಚ್ಚೆಂದರೆ ದ್ವೇಷಿಸುತ್ತಾರೆ,
ಹತ್ತಿರದವರ ಕುರಿತೇ
ಸದಾ ಭಯ ನನಗೆ
ಎಲ್ಲಾ ಸಾಮ್ರಾಜ್ಯಗಳೂ ಅಳಿದಿದ್ದೂ
ಒಳಗಿನ ಪಿತೂರಿಯಿಂದಲೆ
ಹೇಳಲಿಕ್ಕೆ ಇನ್ನೂ ಇದೆ
ಕವಿತೆಯಿಲ್ಲದೆ ನಾನು
ನೋವ ಹಾಡಲಿ ಹೇಗೆ..?
ಒಂದೇ ಭೂಮಿಯಿದ್ದೂ
ಇಲ್ಲಿ ಗಡಿಯೆಂಬ ಸರಳರೇಖೆಯ
ಮಾತಿಗೆ,
ಮನುಷ್ಯ ಕೊಲ್ಲುತ್ತಿದ್ದಾನೆ ಮನುಷ್ಯನನ್ನೇ…
ಆದರೂ ಗಾಳಿ, ನೀರು, ಬೆಳಕಿಗೆ
ಬೇಲಿ ಸುತ್ತುತ್ತಿಲ್ಲ ಇವರು,
ಎಷ್ಟಾದರೂ ನಮಗೆ ‘ಕೇವಲ’ ಮನುಷ್ಯರೆಂಬ ಮಿತಿಯಿದೆ ಅಲ್ಲವೇ,
ಎಷ್ಟೊಂದಿದೆ ನೋಡಿ ಹೇಳಲಿಕ್ಕೆ
ಕವಿತೆಯಿಲ್ಲದೆ ನಾನು ನೋವ ಹಾಡಲಿ ಹೇಗೆ..?
ಒಂದು ಮಾತನ್ನೂ ಹೇಳದೆ
ದಾರಿ ಬದಲಿಸಿದವರ
ನೆನಪುಗಳಿನ್ನೂ ಹಚ್ಚ ಹಸುರಾಗಿಯೇ ಇವೆ,
ಇಲ್ಲಿ ಹಸಿದವರನ್ನೇ ಅಣಕಿಸುವ ಸಿರಿತನದ ಅಬ್ಬರದ ಔತಣಕೂಟಗಳಿವೆ
ಪ್ರೀತಿಸಿಯೂ ಕೊಲ್ಲುವ ವಿಷದ ವರ್ತುಲವೇ ಇದೆ
ಏನೆಲ್ಲ ಹೇಳಲಿಕ್ಕಿದೆ ಕವಿತೆಯಿಲ್ಲದೆ ನಾನು ನೋವ ಹಾಡಲಿ ಹೇಗೆ..?
ಈಗ ಹೇಳಿ ನೀವು,
ನೋವಿಲ್ಲದೆ ಹಾಡಬಲ್ಲಿರಾ ಕವಿತೆಯನ್ನು
ಕವಿತೆಯಿಲ್ಲದೆ ಹಾಡಬಲ್ಲಿರಾ ನೋವನ್ನು
- ಹಂದಿಕುಂಟೆ ನಾಗರಾಜ
