ಮಧುರ ಒಲವಿಗೆ ಪ್ರೇಮಲೋಕವೇ ಸೃಷ್ಟಿಸಿ ಕೊಡುವದು, ಕಾವ್ಯ ಕವಿಯ ಜೀವಾಳು… ಕವಿ ಎಂ. ಎಸ್. ಆಲಮೇಲ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಕವಿಯು ಸಮಾಜದ ಪ್ರತಿಬಿಂಬವು
ಕಲ್ಪನೆಯ ಮಹಾ ಸಾಗರವು
ಕಾವ್ಯ ಕವಿಯ ಜೀವಾಳವು
ರವಿಯು ಕಾಣದಿಹದನ್ನು ಕಂಡನು ಕವಿಯು
ಅವನ ಲೇಖನಿಯೂ
ಒಮ್ಮೆ ಭ್ರಷ್ಟರ ವಿರುದ್ಧ ಕತ್ತಿಯಾಗುವದು
ಇನ್ನೊಮ್ಮೆ ಕರುಣೆಯ ಕಡಲಾಗುವದು
ಪ್ರೀತಿಯ ಸೆಲೆಯಾಗುವದು
ಮಧುರ ಒಲವಿಗೆ ಪ್ರೇಮಲೋಕವೇ
ಸೃಷ್ಟಿಸಿ ಕೊಡುವದು
ನಿಂದಕರ ನುಡಿಗೆ ನೊಂದರು,
ಪುಟಿದು ನಿಲ್ಲುವದು
ಅನ್ಯಾಯ- ಅಕ್ರಮ-ಅಧರ್ಮದ ವಿರುದ್ಧ
ಹೋರಾಟ ಮಾಡುವದು
ಸಮುದಾಯದ ಓರೆ -ಕೋರೆಗಳ
ತಿದ್ದಿ ತೀಡುವದು
ರಮ್ಯ – ರಮಣೀಯ ಪ್ರಕೃತಿಗೆ ತನ್ನತಾನೆ
ಅರ್ಪಿಸಿಕೊಳ್ಳುವದು
ಬಡತನದ ಬವಣೆಯಲ್ಲಿ ನೊಂದು- ಬೆಂದರು
ಸಮ ಸಮೂಹದ ಚಿಂತನೆ ಮಾಡುವದು
ಕವಿಯು ಧನಿಕನಲ್ಲ
ಲೇಖನಿಯೇ ಆತನ ಅಷ್ಟೈಶ್ವರ್ಯವು
ಧನ – ಕನಕ ಕರಗಿಹೋಗಬಹುದು
ಸಿರಿ – ಸಂಪದವು ನಾಶವಾಗಲು ಬಹುದು
ಕಾವ್ಯವೆಂಬ ಅಮೃತವು
ಚಿರಂಜೀವಿಯಾಗಿರುವದು
ಕಾಣದಿರಿ ಕವಿಯ ಕೀಳಾಗಿ
ಕಲೆ, ಸಾಹಿತ್ಯ, ಸಂಸ್ಕೃತಿ ಮುಂದಿನ ಯುಗಕ್ಕೆ
ಕಲಿಯುಗದ ಮೂಲಾಧಾರವು.
- ಎಂ. ಎಸ್. ಆಲಮೇಲ – ಯಡ್ರಾಮಿ.
