ಗಣೇಶ ಚತುರ್ಥಿಗೆ ಇಪ್ಪತ್ತ ದಿನಾ ಇದ್ದಾಗಲೇ ಹಬ್ಬದ ಸಂಭ್ರಮಾ ಶುರುವಾಗುತ್ತೆ. ಮನೆಯಲ್ಲಿನ ಗಣೇಶ, ಸಾರ್ವಜನಿಕ ಗಣೇಶೋತ್ಸವ ಹೀಗೆ ಗಣೇಶಪ್ಪ ಇದ್ದಷ್ಟು ದಿನ ಸಂತೋಷ ಕೊಟ್ಟು ಹೊರಡುತ್ತಾನೆ. ಗಣಪನ ನೆನಪನ್ನು ಹೊತ್ತ ಲೇಖಕಿ ನೂತನ ಕುಲಕರ್ಣಿ ಅವರ ಲೇಖನವನ್ನು ತಪ್ಪದೆ ಮುಂದೆ ಓದಿ…
ಇವತ್ತ ಗಣಪತಿ ಬಪ್ಪಾನ್ನ ಪ್ರತಿಷ್ಠಾಪನೆ ಮಾಡೋವಾಗ ಪೂಜಾ ವಿಧಾನ ಕೇಳಲಿಕತ್ತಿದ್ವಿ. ಹೇಳಲಿಕ್ಹತ್ತಿದ್ದ ಶ್ರೀಮತಿ” ಗಣಪತಿ ಕೂಡಸೋವಾಗ ಶಾಂತ ರೀತಿಯಿಂದ ಪೂಜಿ ಮಾಡಬಾರದು, ಜೋರಾಗಿ ಮಂತ್ರ, ಹಾಡು, ಘಂಟಾನಾದ ಇರಬೇಕು” ಅಂತ ಹೇಳಿದ್ಲು. ಆಗ ನನಗ ಅನಿಸ್ತು ಓಹೋ ಅದಕ್ಕs ನೋಡ ಗಣಪತಿ ಹಬ್ಬ ಅಂದ್ರ ಈ ಪರಿ ಗದ್ದಲಾ ಅಂತ.
ಗಣೇಶ ಚತುರ್ಥಿ ಇನ್ನೂ ಇಪ್ಪತ್ತ ದಿನಾ ಅಂದಾಗs ಸುರು ಸಂಭ್ರಮಾ. ಶ್ರಾವಣದಾಗs ಗಣಪತಿ ಮೂರ್ತಿಗೋಳು ಅಂಗಡಿ ಹೊರಗ ಬಂದ ಸಾಲಾಗಿ ಕೂತು,” ಹೂಂ ಇನ್ನ ನನ್ನ ಸ್ವಾಗತಕ್ಕ ತಯಾರಿ ಸುರು ಮಾಡ್ರಿ, ಬರಲಿಕ್ಹತ್ತೇನಿ ನಾ” ಅಂತ ಹೇಳತಾವ. ಇತ್ಲಾಗ ನಾರಳೀ ಪೂರ್ಣಿಮಾದ ಛಂದಾ ಛಂದ ರಾಖಿಗೋಳು ರಾರಾಜಿಸಲಿಕತ್ರ, ಅತ್ಲಾಗ ಮುದ್ದ ಮದ್ದಾದ ಗಣಪ್ಪಗೋಳು ಮಿಂಚತಿರತಾವ. ಅದನ್ನ ನೋಡಿ ” ಅಯ್ಯ ಲಗೂನ ಗಣಪತಿ ಮೂರ್ತಿ order ಮಾಡಿ ಬರಬೇಕ ” ಅಂತ ಗಡಬಡಿ ಹತ್ತಿಬಿಡತದ.
ಶ್ರಾವಣದ ಜಿಟಿಜಿಟಿ ಮಳಿಯೊಳಗs ಸಾರ್ವಜನಿಕ ಗಣೇಶೋತ್ಸವದ ಪೆಂಡಾಲ ಕಟ್ಟೋ ಕೆಲಸಾ ಸುರು. ಅದೂ ಗಲ್ಲಿ ಗಲ್ಲಿಗೊಂದರ ಹಂಗ. ಅದರಾಗ ನಮ್ಮ ಬೆಳಗಾವಿ, ಗಣಪತಿ ಹಬ್ಬಕ್ಕ ಫೇಮಸ್. ನಟ್ಟ ನಡುವ ಪ್ಯಾಟ್ಯಾಗೂ ದೊಡ್ಡ ಪೆಂಡಾಲ್ ! ಪೆಂಡಾಲ್ ಕಟ್ಟಾವ್ರದ್ದು, ವಿದ್ಯುತ್ ಸಪ್ಲಾಯಕ್ಕ ಬಂದಾವ್ರದ್ದು, ಡೆಕೊರೇಷನ್ ಮಾಡಾವ್ರದ್ದು ಒಂದ ಗದ್ದಲ ಆದ್ರ, ಸಾಮಾನ ಸಡಿ ಖರೀದಿಸಲಿಕ್ಕೆ ಬಂದ ಹೋಗಾವ್ರದ್ದು , ಅಂಗಡಿ ಮುಗ್ಗಟ್ಟಿನಾವ್ರದ್ದು, ರಸ್ತೆ ಮ್ಯಾಲ ಹೂ ಹಣ್ಣು ಪಲ್ಯೆ ಮಾರಾವ್ರದ್ದು ಮತ್ತೊಂದ ನಮೂನಿ ಗದ್ದಲ. ಗಣಪತಿ ಹಿಂದ ಮುಂದ ಆಜೂ ಬಾಜೂ ಅಲಂಕಾರ ಮಾಡಲಿಕ್ಕೆ ಬೇಕಾದ ಲೈಟಸರಾ, ಆರ್ಟಿಫಿಶಿಯಲ್ ಹೂ ಬಳ್ಳಿ, ಗಿಡಾ, ಥರ್ಮೋಕೋಲದ ನಾನಾ ನಮೂನಿ ಡಿಜೈನದ ಗುಡಿ ಗೋಪರ, ಛತ್ರ ಚಾಮರಾ , ತಿರಗೋ ಪ್ರಭಾವಳಿ ಮಾರೋ ಅಂಗಡಿಗೋಳು ….ಅಬಾಬಾಬಾ ಒಂದೋ ಎರಡೋ ? ಎಲ್ಲಾ ಕಡೆ ನೂಕ ನುಗ್ಗಲಾ. ಇಂಥಾದರಾಗ ಆವಾಗೆಲ್ಲಾ , ಅಂದ್ರ ನಾವ ಸಣ್ಣಾವರ ಇದ್ದಾಗ, ಬಾಂಬೇ ಸರ್ಕಸ್, ಜಂಬೋ ಸರ್ಕಸ್ ಅಂತ , ಏನೇನೋ exhibition ಅಂತ, ಕನ್ನಡ ಕಂಪನಿ ನಾಟಕ ಅಂತ, ಮರಾಠಿ emotional ಸಿನೇಮಾ ಅಂತ ….ಅವೂ ಇದs ಟೈಮ್ ನಡೀರಿ ಅಂತ ಬೆಳಗಾವಿಗೆ ಬಂದ ಠಾಣೆ ಹಾಕೋವು. ಇಡೀ ಊರಿಗೆ ಊರs ಜಾತ್ರಿ ಜಮಾಸಿದ್ಹಂಗ.

ಚಂದ್ರಕಾಂತ ಅವರ ಮನೆಯಲ್ಲಿನ ಗಣೇಶ
ಮನ್ಯಾಗ ಗಣಪತಿ ಕೂಡಸಾವ್ರು ಹರತಾಲಿಕಾ ತೃತಿಯಾದ ಸಂಜೀಕನ ಮೂರ್ತಿ ತಂದ ಬಿಡತಾರ. ಸಂಜೀಮುಂದ ಎಲ್ಲಾರ ಮನಿ ಅಂಗಳದಾಗ ಘಂಟಿ ಶಬ್ದದ ಜೋಡಿ “ಗಣಪತಿ ಬಪ್ಪಾ ಮೋರಯಾ” ಅನ್ನೋ ಘೋಷ ಕೇಳಸತಿರತದ. ಮರದಿನಾ ಲಗೂನ ಗಣಪತಿ ಪ್ರಾಣ ಪ್ರತಿಷ್ಟಾನ ಆಗಬೇಕಲಾ. ಬ್ಯಾರೆ ಬ್ಯಾರೆ ಟೈಮಿಗೆ ಬ್ಯಾರೆ ಬ್ಯಾರೆ ಮನಿಯಿಂದ ಗಣಪತಿ ಕೂಡಸೋ ಆವಾಜ ಬರತಿರತದ.
ಘಂಟಿ , ಜಾಗಟಿ , ಶಂಖಾ , ಚಪ್ಪಾಳಿ ಜೋಡಿ “ಸುಖಕರ್ತಾ ದುಃಖಹರ್ತಾ ವಾರ್ತಾ ವಿಘ್ನಾಚಿ” ಹಾಡು, ಹೊರಗ ಚಿಳ್ಳಿ ಪಿಳ್ಳಿಗೋಳು ಫಟಾಕ್ಷಿ ಹೊಡಿಯೋದ ಅಗದೀ common. ಮನಿ ಗಣಪ್ಪನ ಕೂಡಿಸಿ ಗಂಡ ಹುಡುಗ್ರು ಗಲ್ಲಿ ಗಣಪತಿ ತರಲಿಕ್ಕೆ ಓಡತಾರ. ಮೂರ್ತಿ ಆಕಾರಕ್ಕ ತಕ್ಹಂಗ ಸಣ್ಣ, ಧೊಡ್ಡ ಟ್ರಕ್ಕು , ಓಪನ್ ಗಾಡಿ , ಟ್ರ್ಯಾಕ್ಟರು..ತೊಗೊಂಡ , ಡಿಜೆ ಹಾಕ್ಕೊಂಡ , ಅತೀ ಉತ್ಸಾಹದಿಂದ ಕುಣಕೋತ , ಹಾದಿ ತುಂಬ ಫಟಾಕ್ಷಿ ಹಾರಿಸಿಕೋತ ಗಣಪತಿನ್ನ ಪೆಂಡಾಲಕ್ಕ ತಂದ ಹಚ್ಚೋತನಕಾ ರಾತ್ರಿ ಸರ್ವತ್ತ ಆಗತದ.
ಝಗಝಗಾ ಅಂತ ಬೆಳಗೋ ಪೆಂಡಾಲನ್ಯಾಗ ಗಣಪ್ಪ ಆಸೀನ ಅಗೋದs ತಡಾ ಭಟ್ಟರ ಮಂತ್ರ, ಪೂಜಿ ಸುರು. ಅವನ ಮುಂದ ಎಲಿ ಅಡಕಿ, ಬಣ್ಣಬಣ್ಣದ ಹೂ, ಮಾಲಿ, ಕ್ಯಾದಗಿ, ಕರಕಿ , ಪತ್ರಿ, ಅಕ್ಕಿ, ಟೆಂಗಿನಕಾಯಿ, ನಾನಾ ಥರದ ಹಣ್ಣು ಹಂಪಲಾ, ಅರಿಷಿಣ ಕುಂಕುಮಾ, ಗಂಧ, ಸಿಂಧೂರ, ಧೂಪಾ, ಅಗರಬತ್ತಿ, ಕರ್ಪರಾ, ಹತ್ತೆಂಟು ನಂದಾ ದೀವಿಗಿ, ತುಪ್ಪದ ದೀಪದ ನೀಲಾಂಜನ ಇಟ್ಟ ಬೆಳ್ಳಿ ಆರತಿ ತಟ್ಟಿ, ಅಕ್ಷತಿ ಬಟ್ಟಲಾ, ಕಡಬು ಮೋದಕ ಪಾಯಸಗಳ ನೈವೇದ್ಯ, ಮುಂದ ಬಾಳಿ ಖಂಬಾ, ಮ್ಯಾಲ ಮಾವಿನ ತೋರಣ.. ಎಲ್ಲಾಕ್ಕಿಂತ ಹೆಚ್ಚ ಅಂದ್ರ ಗಲ್ಲಿ ಮಂದಿ ಎಲ್ಲಾ ಕೈ ಮುಕ್ಕೊಂಡೋ , ಚಪ್ಪಾಳಿ ಹಾಕ್ಕೋತೋ, ಘಂಟಿ ಜಾಗಟಿ ಬಾರಿಸಿಕೋತೋ, ಶಂಖಾ ಊದಕೋತೋ, ಹಾಡಕೋತೋ ಆರತಿ ಮಾಡೋ ಸಂಭ್ರಮಾ ನೋಡೇ ಅನಂದಿಸಬೇಕು. ಹಿಂಗ ದಿವಸಕ್ಕ ಎರಡ ಸಲದ್ಹಂಗ ( ಮುಂಜಾನಿ -ಸಂಜಿ) ಹನ್ನೊಂದ ದಿವಸ ಗಣಪನ ಆರಾಧನಿ ನಡಿತದ. ಕೆಲವು ಜನಾ ನಡುವ ಒಂದ ದಿನಾ ಮಂತ್ರಪುಷ್ಪ ಅಂತ ಮತ್ತೂ ವಿಶೇಷ ಪೂಜಿ ಮಾಡತಾರ. ಗಲ್ಲಿ ಗುಂಪು ಸತ್ಯ ನಾರಾಯಣ ಪೂಜಿ ಮಾಡಿ ಅನ್ನ ಪ್ರಸಾದನೂ ಏರ್ಪಡಸತಾರ. ಅಷ್ಟೂ ದಿನಾ ಹಗಲ ರಾತ್ರಿ ಮ್ಯುಸಿಕ್ ನಡದs ಇರ್ತದ.
(ಈಗೀಗ ಸಂಬಂಧ ಸೂತ್ರ ಇಲ್ಲದ ಹುಚ್ಚು ಹಾಡುಗಳನ್ನ ಹಚ್ಚಿ ಗಣಪನ ಕಿವಿಯಷ್ಟs ಅಲ್ಲದ ಊರ ಕಿವಿ ಕೊರದು ತೂತ ಆಗತಾವ.) ಮದಲೆಲ್ಲಾ ಪೆಂಡಾಲ ತುದಿಗೆ ಲೌಡ ಸ್ಪೀಕರ್ ಹಾಕಿ, ಸುಖಕರ್ತಾ, ಗಣರಾಜ ರಂಗೀ ನಾಚತೋ, ತುಜ ಮಾಗತೋ ಮೀ ಆತಾ, ಗಜಾನನಾ ಶ್ರೀ ಗಣರಾಯಾ…. ಈ ಮರಾಠಿ ಹಾಡುಗಳು, ಆವಾಗೀವಾಗ ದೇಶಭಕ್ತಿ ಗೀತೆಗಳು, ಶರಣು ಶರಣಯ್ಯ ಶರಣು ಬೆನಕಾ, ಗಜಮುಖನೇ ಗಣಪತಿಯೇ… ಇಂಥಾ ಕನ್ನಡ ಹಾಡುಗಳನ್ನ ಸತತ ಹಚ್ಚಿರತಿದ್ದರು.

ವಿನೋಧ ಮುಕ್ತಿ ಅವರ ಮನೆಯಲ್ಲಿನ ಗಣೇಶ
ಸುತ್ತಮುತ್ತಲಿನ ಹಳ್ಳಿಗಳಿಂದಷ್ಟ ಅಲ್ಲದ ಧೂರದ ಧಾರವಾಡ, ಹುಬ್ಬಳ್ಳಿ, ಕಾರವಾರದಿಂದ ಸೈತ ಜನಾ ಗಣಪತಿ ನೋಡಲಿಕ್ಕಂತ ಬೆಳಗಾವಿಗೆ ಬರತಿದ್ದರು. ಆವಾಗಾವಗಿನ ಟ್ರೆಂಡ್ ಪ್ರಕಾರ ವಿಧ ವಿಧ ಭಾವ ಭಂಗಿ , ವೇಷ ಭೂಷದಾಗ ಗಣಪ್ಪನ್ನ ನೋಡೋದs ಒಂದ ಛಂದ. ಪೆಂಡಾಲ ಕಥಿ ಏನ ಹೇಳೋದು? ಒಂದ ಕಡೆ ಹಡಗು , ಒಂದ ಕಡೆ ಗುಹೆ , ಮತ್ತೊಂದ ಕಡೆ ದೂರದ ಕಲಕತ್ತೆಯ ಕಾಲಿಬಾಡಿ, ಮಗದೊಂದ ಕಡೆ ಸ್ಪೇಶ್ ಷಟಲ್ … ಇತ್ಯಾದಿಗಳ ಪ್ರತಿಕೃತಿಗಳ ಪೆಂಡಾಲಗಳು. ರಾತ್ರಿ ಲಗೂನ ಊಟ ಮುಗಿಸಿ , ಆಜೂ ಬಾಜೂ ಮಾಮಿ , ಮೌಶಿ , ಕಾಕು ಅವರ ಮಕ್ಕಳು , ಊರಿಂದ ಬಂದ ಸಂಬಂಧಿಕರನೆಲ್ಲಾ ಗೊಳೇ ಹಾಕ್ಕೊಂಡ , ಗಲಗಲಾ ಮಾಡಕೋತ ಗಣಪತಿ ನೋಡಲಿಕ್ಕೆ ಹೋಗೋದರ ಮಜಾ ನಮ್ಮ ಬೆಳಗಾವಿ ಬಿಟ್ರ ಬ್ಯಾರೇ ಎಲ್ಲೆ ಸಿಗಬೇಕ? ಒಂದ ದಿನಾ ಶಹಾಪೂರ , ಒಂದಿನಾ ಟಿಳಕವಾಡಿ , ಮತ್ತೊಂದ ದಿನಾ ಹಿಂದವಾಡಿ , ಇನ್ನೊಂದಿನಾ ಊರಾಗs ಆ ಗಲ್ಲಿ ಈ ಗಲ್ಲಿ ಅಂತ ರಾತ್ರಿಯಿಡೀ ತಿರಗಿದ್ದs ತಿರಗಿದ್ದು. ಇಡೀ ಊರಂತ ಊರ ದೀಪದಿಂದ ಝಗಝಗಾ , ಮಂದಿ ಮಕ್ಕಳಿಂದ ಕಲಕಲಾ !ಹನ್ನೊಂದ ದಿನಾ ಹಗಲ ರಾತ್ರಿ ಏಕ ಆಗಿರತಿದ್ದವು. ಈಗೂ ಅದs ಸಡಗರಾ ಸಂಭ್ರಮಾ ಅದ.ಒಟ್ಟ ಗಣಪ್ಪಗ ಗದ್ದಲ ಬೇಕ. ಮರಾಠಿಯೊಳಗ ಅಂತಾರ ,”ಲೈ ಧುಂಬಡ ಬಪ್ಪಾಚೆ!”
ಹನ್ನೊಂದ ದಿನಾ ಕನಸಿನ್ಹಂಗ ಕರಗತಾವ. ಅನಂತ ಚತುರ್ದಶಿಗೆ ಸಾರ್ವಜನಿಕ ಗಣಪತಿ ವಿಸರ್ಜನ. ಅಂದ ಮನಸ್ಸು ಭಾರ ಆಗತದ. ಮಧ್ಯಾಹ್ನಕ್ಕ ಉತ್ತರ ಪೂಜಿ ಮುಗಿಸಿ, ಮತ್ತ ಅದs ಬಾಜಾ ಬಜಂತ್ರಿ, ಎದಿ ಡವಡವಾ ಆಗೋಹಂಗ ಡಿಜೆ, ಢಾಂ ಢೂಂ ಫಟಾಕ್ಷಿ , ಗಣಪತಿ ಬಪ್ಪಾ ಮೋರಯಾ , ಪುಢಚ್ಯಾ ವರ್ಷಿ ಲೌಕರ ಯಾ ಅಂತ ವಿದಾಯ ಘೋಷದ ಗೂಡಾ ಗಾಡ್ಯಾಗ ಗಣಪತಿ ಮೆರವಣಿಗೆ ಹೊಂಟರ ನಿಂತ ನೋಡಲಿಕ್ಕೆ ಎರಡ ಕಣ್ಣು ಸಾಲಾಂಗಿಲ್ಲ. ಮೈಲುದ್ದ ಮೆರವಣಿಗ್ಯಾಗ ನೂರಾರ ಗಣಪತಿ ಮೂರ್ತಿಗೋಳು ಒಂದs ಕಡೆ ನೋಡೋ ಹರ್ಷ ಒಂದಕಡೆ ಆದ್ರ , ಇವತ್ತ ಗಣಪ್ಪ ವಾಪಸ್ ಹೋಗತಾನಲ್ಲಾ ಅನ್ನೋ ನೋವು ಮತ್ತೊಂದ ಕಡೆ ! ಹಿಂಗ ಹೊಂಟ ಗಣಪತಿ ವಿಸರ್ಜನೆ ಆಗಿ , ತನ್ನೂರ ಸೇರೋ ತನಕಾ ಒಮ್ಮೊಮ್ಮೆ ಎರಡ ದಿವಸ ಹಿಡಿತಾವ. ಬಂದಾಗಿಂದ ಹೋಗೋ ತನಕಾ ಗಣಪ್ಪಗ ರಾಶಿ ಹೂ, ಹಣ್ಣು , ಕಾಯಿ, ಸಿಹಿ ಸಿಹಿ ಭಕ್ಷ್ಯ ಭೋಜನ , ಸಂಗೀತ,ನೃತ್ಯ , ಅಲಂಕಾರ , ಆರತಿ ,ಅಕ್ಷತಿ , ಸಡಗರ , ಸಂಭ್ರಮ, ಕಿಲಕಿಲ ನಗಿ , ಮಾತು , ಹಾಡು , ಹರಟಿ , ಗಿಜಿಗಿಜಿ ಗದ್ದಲ , ಧಡಬಡ ಧಾಂದಲೆ ….ಈ ಥರದ ಮಸ್ತ್ ಮಾಹೋಲ್ ಬೇಕು. ಆತ ಜೀವನದ ಕ್ಷಣಕ್ಷಣಾನೂ , ಜಗದ ಕಣಕಣಾನೂ ಪ್ರೀತಿಸೋ ನಿತ್ಯಸುಖಿ! ಪ್ರಸನ್ನ ಮುಖಿ!! ಜೀವನ ಪ್ರೀತಿ , ಅದs ಗಣಪತಿ.
- ನೂತನ ಕುಲಕರ್ಣಿ
