‘ಹನುಮಾನ್ ಅಂಶ’ ಸಿನಿಮಾ

‘ಹನುಮಾನ್ ಅಂಶ’ ಸಿನೆಮಾದ ಬಜೆಟ್ ಎರಡುಕೋಟಿ. ಆದರೆ ಅದರ ಗಳಿಕೆ ನೂರುಪಟ್ಟು, ಈ ಸಿನಿಮಾದ ಕುರಿತು ಯೋಗ ತಜ್ಞರಾದ ಸುವರ್ಣಿನಿ ಕೊಣಲೆ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೆಲವೊಂದು ಸಿನೆಮಾಗಳು ಕಾಡುತ್ತವೆ. ಕೆಲವು ಹೃದಯ ತುಂಬುತ್ತವೆ. ಇದು ಎರಡನೆಯ ಬಗೆಯದ್ದು. ಮೊದಲ ಬಾರಿ‌ ಏನೇನೂ ನಿರೀಕ್ಷೆಯೇ ಇಲ್ಲದೆ ನೋಡಿದ್ದೆ. ನೋಡುತ್ತಾ ಅದರೊಳಗೆ ಮುಳುಗಿದ್ದೆ. ಅದೆಷ್ಟು ದೃಶ್ಯಗಳಲ್ಲಿ ಕಣ್ಣು ತುಂಬಿ ಹರಿದಿದ್ದವೋ ಗೊತ್ತಿಲ್ಲ. ಸಿನೆಮಾ ಮುಗಿದಾಗ ಅಲ್ಲಿಂದ ಹೊರಡಬೇಕು ಎಂದೂ ಅನಿಸಿರಲಿಲ್ಲ. ಸೀತಾರಾಮ್
ಸೀತಾರಾಮ್ ಎನ್ನುವುದು ಕಿವಿಯನ್ನೂ ಮನಸ್ಸನ್ನೂ ಹೃದಯವನ್ನೂ ತುಂಬಿತ್ತು.

ಎರಡನೆಯ ಬಾರಿಗೆ ಅಮ್ಮ- ಅಪ್ಪನನ್ನು‌ ಕರೆದುಕೊಂಡು ಹೋಗಿದ್ದೆ. ಮತ್ತೆ ಅದೇ ಕಥೆ. ಮೂರನೆಯ ಬಾರಿ ನೋಡುವುದಿದೆ. ಪುಟ್ಟನ ಜೊತೆಗೆ. ಮತ್ತೆ ಅದೇ ಸಾಗರದಲ್ಲಿ ಮುಳುಗುವ ಆಸೆ. ಅಲ್ಲೊಂದು ದೃಶ್ಯವಿದೆ. ಬಾಬಾ ಇನ್ನೂ ಪುಟ್ಟ ಹುಡುಗನಾಗಿದ್ದಾಗ, ಮನೆ ಬಿಟ್ಟು ಕಾಡುಮೇಡು ಅಲೆಯುತ್ತಿರುವಾಗ, ಕಾಡಿನ ಪುಟ್ಟ ಗಿಡವೊಂದರಲ್ಲಿ ಪುಟ್ಟದೊಂದು ಹೂವು.. ಅದನ್ನು ನೋಡಿ, ಬೆರಳಿನಿಂದ ಸವರುವ ದೃಶ್ಯ. ಅದು ಹೃದಯದೊಳಗೊಂದು ಪ್ರಶಾಂತ ಅಲೆ ಎಬ್ಬಿಸುತ್ತದೆ. ಅಲೆ ಪ್ರಶಾಂತವಾಗಿರುವುದು ಹೇಗೆ? ಎಂದರೆ ಅದು ಹಾಗೆಯೇ. ವಿವರಿಸಲಾಗದು.

ಈ ಸಿನೆಮಾದ ಕುರಿತು ಬರೆಯಬೇಕು ಎಂದುಕೊಂಡಷ್ಟೂ ಬರೆಯಲು ಸಾಧ್ಯವಾಗುತ್ತಿಲ್ಲ. ಬರೆಯುವ ನನ್ನ‌ ಸಾಮರ್ಥ್ಯವನ್ನು ಮೀರಿದ್ದು ಇದು.. ಇದನ್ನು ಅನುಭವಿಸಬಹುದಷ್ಟೇ.
ಕಳೆದ ಕೆಲವು ದಿನಗಳಿಂದ ಈ‌ ಸಿನೆಮಾ ತಂಡ ಬೇರೆ ಬೇರೆ ಊರು, ಸಂಸ್ಥೆಗಳನ್ನು ಭೇಟಿ ಮಾಡುತ್ತಿದೆ. ಅಂಥದ್ದೇ ಒಂದು ಕಾರ್ಯಕ್ರಮದಲ್ಲಿ ತೀರಾ ವಯಸ್ಸಾದ ತಾಯಿಯೊಬ್ಬರು ಬಾಬಾ ಪಾತ್ರಧಾರಿಯ ಮುಖ, ಭುಜವನ್ನು ತಡವಿ ಪ್ರೀತಿ‌ಹರಿಸುವ ದೃಶ್ಯ ಕಣ್ಣಿಗೆ ಬಿತ್ತು.

ಭಕ್ತಿ ಎಂದರೆ ಹಾಗೆಯೇ. ಭಾರತ ಇಷ್ಟೊಂದು ಆಕ್ರಮಣಗಳನ್ನು ಸಹಿಸಿ ಇಂದಿಗೂ ಭಾರತವೇ ಆಗಿರುವುದಕ್ಕೆ ಒಂದು ಮುಖ್ಯ ಕಾರಣ ಭಕ್ತಿಯೇ. ನೀವೆನ್ನಬಹುದು ಕ್ಷಾತ್ತ್ರ ಇಲ್ಲದೇ ಉಳಿಯುತ್ತಿರಲಿಲ್ಲ ಎಂದು. ಆದರೆ ಆ ಕ್ಷಾತ್ತ್ರದ ಹಿಂದಿನ‌ ಶಕ್ತಿಯೂ ಭಕ್ತಿಯೇ ತಾನೆ.

ಸಿನೆಮಾದ ಬಜೆಟ್ ಎರಡುಕೋಟಿ. ಆದರೆ ಅದರ ಗಳಿಕೆ ನೂರುಪಟ್ಟು, ಇಲ್ಲಿಯವರೆಗೆ! ಈ ಹಣದ ಲೆಕ್ಕಾಚಾರ ಬಿಟ್ಟುಬಿಡೋಣ. ಜನರಲ್ಲಿ ಇದು ಮೂಡಿಸುತ್ತಿರುವ ಭಾವ ಇದೆಯಲ್ಲ, ಆ ಅಂಶ ಮುಖ್ಯವಾದದ್ದು ಅನಿಸುತ್ತದೆ ನನಗೆ. ಜನರಿಗೆ ಇದು ಬೇಕಾಗಿದೆ. ಅವರಿಗೇ ಇದು ತಿಳಿದಿಲ್ಲ. ಏಕೆಂದರೆ ನಾವು, ಜನರು, ನಮ್ಮೊಳಗೆ ಏನಿದೆ ಏನಿಲ್ಲ ಎಂದು ನೋಡಿಕೊಳ್ಳುವುದನ್ನೂ, ನಮಗೆ ಬೇಕಿರುವುದು ಏನು, ಬೇಡವಾದದ್ದು ಏನು ಎನ್ನುವುದನ್ನೂ ಮರೆತಿದ್ದೇವಲ್ಲ.

ನಮಗೆ ಯಾರೋ ಹಾಕಿಕೊಟ್ಟ trackನಲ್ಲಿ ಓಡುವುದಷ್ಟೇ ನಮ್ಮ ಬದುಕಾಗಿದೆ. ಯಾರೋ ಹರಿಯಬಿಟ್ಟ ಮೀಮ್ ಗಳನ್ನು forward ಮಾಡುತ್ತಾ, ಯಾರೋ ಮಾಡಿದ ಭಾಷಣದ ತುಣುಕನ್ನು ನಮ್ಮ feed ತೋರಿಸುವುದು ಯಾಕಾಗಿ ಎಂದೂ ಅರ್ಥ ಮಾಡಿಕೊಳ್ಳದೆಯೇ ಅದನ್ನು ನಂಬುತ್ತಾ, ಯಾರೋ ತಂದು ನಮ್ಮ ಮೆದುಳಿಗೆ ಮನಸ್ಸಿಗೆ ತುರುಕುವ ವಿಷಯಗಳನ್ನೇ ನಮ್ಮ ಅಗತ್ಯವೆಂದು ತಿಳಿಯುತ್ತಾ ಬದುಕುತ್ತಿರುತ್ತೇವೆ.

ನಮ್ಮ ಮನಸ್ಸು ನಿಜವಾಗಿಯೂ ಅರಸುತ್ತಿರುವುದು ಇಂತಹ ತಂಗಾಳಿಯನ್ನು. ಒಂದು ಸಿನೆಮಾ ನಮ್ಮ ಭ್ರಮೆ ಕಳಚಲಾರದು. ಆದರೆ ನಮ್ಮ ಬದುಕಿನ ಬೇಗೆಯಲ್ಲಿ ಒಂದಷ್ಟು ತಂಪುಕೊಡಬಲ್ಲದು.

ಮೂರನೆಯ ಬಾರಿ ನೋಡಿ ಬಂದಮೇಲೆ ಏನನಿಸುತ್ತದೆ ಎಂದು ಮತ್ತೆ ಬರೆಯುವೆನೇನೋ ಆದರೆ ಬರೆಯಲು ಆಗದೇ ಇರುವಷ್ಟು ಅದು ನನ್ನನ್ನು ಆವರಿಸಲಿ ಎಂಬ ಪ್ರಾರ್ಥನೆ ನನ್ನದು.


  • ಸುವರ್ಣಿನಿ ಕೊಣಲೆ – ಯೋಗ ತಜ್ಞರು ಮತ್ತು ಉಪನ್ಯಾಸಕರು

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading