ಗುರುಭ್ಯೋ ನಮಃ : ಗೀತಾಂಜಲಿ ಎನ್ ಎಮ್

ಇಂದು ಗುರು ಪೂರ್ಣಿಮಾ ನಮ್ಮ ಪೂರ್ವಿಕರು ಆಷಾಢ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ಸಾಂಪ್ರದಾಯಿಕವಾಗಿ “ಗುರು ಪೂರ್ಣಿಮೆ” ಎಂದು ಆಚರಿಸುತ್ತಾರೆ. ಇದೊಂದು ಧಾರ್ಮಿಕ ಆಚರಣೆಯಾಗಿದ್ದು ಈ ದಿನದಂದು ತಮ್ಮ ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಗುರುಗಳನ್ನು ಗೌರವಿಸುವ ಸಲುವಾಗಿ ಆಚರಿಸಲಾಗುತ್ತದೆ. ಈ ದಿಂದ ವಿಶೇಷತೆಯ ಕುರಿತು ಗೀತಾಂಜಲಿ ಎನ್ ಎಮ್ ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಭಾರತ ಒಂದು ಸುಸಂಸ್ಕೃತ ದೇಶ ಇಲ್ಲಿ ಆಚರಿಸಲ್ಪಡುವ ಪ್ರತೀ ಆಚರಣೆಗಳ ಹಿಂದೆ ಒಂದು ಉತ್ತಮವಾದ ಸಂದೇಶದೊಂದಿಗೆ ಸಂಸ್ಕಾರ, ಕೃತಜ್ಞತೆ ಹಾಗೂ ದೈವೀಕತೆ ಇರುತ್ತದೆ !

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ |
ಚಕ್ಷುರುನ್ಮೀಲಿತಂಯೇನ ತಸ್ಮೈಶ್ರೀ ಗುರವೇ ನಮಃ ||
ನಿರ್ಮಲ ಜ್ಞಾನ ಬೋಧಾಯ |
ನಿರಂಜನ ಲೀಲಾ ಧರಾಯ ಚ ||
ಕೋಟಿ ಸ್ರೋಯ ಪ್ರಕಾಶಾಯ |
ತಸ್ಮೈ ಶ್ರೀ ಗುರವೇ ನಮಃ ||

ಅಂದರೆ ಅಜ್ಞಾನದ ಕತ್ತಲಿನಿಂದ ಕುರುಡಾಗಿದ್ದವನ ಕಣ್ಣನ್ನು ಜ್ಞಾನವೆಂಬ ದೀಪದಿಂದ ತೆರೆಸಿದ ಗುರುವಿಗೆ ಪ್ರಣಾಮಗಳು. ನಿರ್ಮಲವಾದ ಶ್ರೇಷ್ಠ ಜ್ಞಾನ ಭೋದಿಸಿದ ಸೃಷ್ಟಿಕರ್ತನ ಲೀಲೆಯನ್ನು, ಸಕಲ ಚರಾಚರ ಜಗತ್ತನ್ನು ವ್ಯಾಪಿಸಿರುವ ತತ್ವವನ್ನು ತೋರಿಸಲ್ಪಟ್ಟ ಸೂರ್ಯನ ಪ್ರಕಾಶದಂತೆ ಧರೆಯಲ್ಲಿ ಪ್ರಕಾಶಿಸುತ್ತಿರುವರುವ ಗುರುವಿಗೆ ನನ್ನ ನಮಸ್ಕಾರಗಳು.

ಇಂದು ಗುರು ಪೂರ್ಣಿಮಾ ನಮ್ಮ ಪೂರ್ವಿಕರು ಆಷಾಢ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ಸಾಂಪ್ರದಾಯಿಕವಾಗಿ “ಗುರು ಪೂರ್ಣಿಮೆ” ಎಂದು ಆಚರಿಸುತ್ತಾರೆ. ಇದೊಂದು ಧಾರ್ಮಿಕ ಆಚರಣೆಯಾಗಿದ್ದು ಈ ದಿನದಂದು ತಮ್ಮ ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಗುರುಗಳನ್ನು ಗೌರವಿಸುವ ಸಲುವಾಗಿ ಆಚರಿಸಲಾಗುತ್ತದೆ. ಇದನ್ನು ಹಿಂದೂಗಳು, ಬೌದ್ಧರು ಮತ್ತು ಜೈನರು ತಮ್ಮ ಗುರುವಿಗೆ ಪೂಜೆ ಸಲ್ಲಿಸುವದರು ಮೂಲಕ ಆಚರಿಸುತ್ತಾರೆ,

ಈ ಗುರುಪೂರ್ಣಿಮೆಯ ದಿನದಂದು ಗುರು ಸೂತ್ರದ ಪ್ರಭಾವ ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ಪ್ರಭಾವಶಾಲಿ ಯಾಗಿರುತ್ತದೆ ಎಂದು ನಂಬಲಾಗುತ್ತದೆ, ಹಿಂದೂಗಳ ಯೋಗ ಸಂಪ್ರದಾಯದ ಪ್ರಕಾರ, ಈ ದಿನವು ಶಿವ ಸುಪ್ತಋಷಿಗಳಿಗೆ ಯೋಗವನ್ನು ಕಲಿಸಲು ಪ್ರಾರಂಭಿಸಿದ ದಿನವೆಂದು ಮತ್ತು ಅಧಿಕೃತವಾಗಿ ಶಿವ ಮೊದಲ ಗುರುವಾದ ಕ್ಷಣವನ್ನು ಸೂಚಿಸುತ್ತದೆ. ಹಾಗೆಯೇ ಇನ್ನೊಂದು ಪುರಾಣದ ಪ್ರಕಾರ ಹಿಂದೂ ಪರಂಪರೆಯ ಶ್ರೇಷ್ಠ ಗುರುಗಳಲ್ಲಿ ಒಬ್ಬರಾದ ಬ್ರಹ್ಮರ್ಷಿ ಬಿರುದಾಂಕಿತ ವೇದವ್ಯಾಸ ಮಹರ್ಷಿಗಳ ಜನ್ಮದಿನದ ಅಂಗವಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಅಲ್ಲದೆ ಅವರು ಮಹಾಭಾರತವನ್ನು ರಚಿಸಿದ ಕವಿಯೂ ಹೌದು. ವೇದಗಳನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿ ಕೀರ್ತಿಯು ಇವರಿಗೆ ಸಲ್ಲುತ್ತದೆ.

ಫೋಟೋ ಕೃಪೆ : ಅಂತರ್ಜಾಲ

ಗುರು ಪೂರ್ಣಿಮೆಯು ಬುದ್ಧಿವಂತಿಕೆ, ಆಧ್ಯಾತ್ಮಿಕ, ಸಾಹಿತ್ಯಿಕ ಜ್ಞಾನಕ್ಕೆ ವ್ಯಾಸ ಮಹರ್ಷಿಗಳು ನೀಡಿದ ಕೊಡುಗೆಗಳನ್ನು ಗೌರವಿಸುವ ದಿನವಾಗಿದೆ. ವೇದವ್ಯಾಸ ಮಹರ್ಷಿಗಳು ಹುಟ್ಟಿದ ದಿನದ ಜೊತೆಗೆ ಆಷಾಢ ಶುಕ್ಲ ಪಕ್ಷದ ಪ್ರಾರಂಭದಿಂದ ಬ್ರಹ್ಮಸೂತ್ರಗಳ ರಚನೆ ಪ್ರಾರಂಭಿಸಿದ ದಿನವಾಗಿಯೂ ಈ ದಿನ ಮಹತ್ವ ಪಡೆದುಕೊಂಡಿದೆ. ಜೊತೆಗೆ ಈ ದಿನದಿಂದ ಶುಕ್ಲ ಪಕ್ಷ ಕೊನೆಗೊಳ್ಳುತ್ತದೆ. ಇದರ ಸ್ಮರಣಾರ್ಥಕವಾಗಿ ಈ ದಿನದಂದು ಬ್ರಹ್ಮಸೂತ್ರಗಳ ಪಠಣ ಮಾಡಲಾಗುತ್ತದೆ ಹಾಗಾಗಿ ಈ ದಿನವನ್ನು ‘ವ್ಯಾಸಪೂರ್ಣಿಮ’ ಎಂದೂ ಸಹ ಕರೆಯಲಾಗುತ್ತದೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಹಿಂದೂ ಧರ್ಮದ ಎಲ್ಲ ಅಧ್ಯಾತ್ಮಿಕ ಪರಂಪರೆಗಳಲ್ಲಿಯೂ ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸುತ್ತ ಈ ಹಬ್ಬವನ್ನು ಭಕ್ತಿಯಿಂದ ಆಚರಿಸಲಾಗುತ್ತದೆ.

ಇನ್ನೂ ಬೌದ್ಧರು ಸಾಂಪ್ರದಾಯಿಕವಾಗಿ ಈ ಹಬ್ಬವನ್ನು ಗೌತಮ ಬುದ್ಧನ ಪ್ರಥಮ ಧರ್ಮೋಪದೇಶದ ಅಂಗವಾಗಿ ಆಚರಿಸುತ್ತಾರೆ. ಹಾಗೆಯೇ ಜೈನ ಸಂಪ್ರದಾಯದಲ್ಲಿ ಗುರು ಪೂರ್ಣಿಮವನ್ನು ಟ್ರಿನೋಕ್‌ ಗುಹಾ ಪೂರ್ಣಿಮಾ ಎಂದೂ ಕರೆಯಲಾಗುತ್ತದೆ ಪ್ರತಿಯೊಬ್ಬರ ಜೀವನದಲ್ಲೂ ಗುರು ಪ್ರಮುಖ ಪಾತ್ರ ವಹಿಸುತ್ತಾರೆ. ನಮ್ಮ ನಮ್ಮಗುರುವಿನ ಕಾರಣದಿಂದಲೇ ನಾವು ಪ್ರಾಪಂಚಿಕ ಜ್ಞಾನದ ಜೊತೆ ಒಂದು ಗುರಿ ಮುಟ್ಟಲು ಸಾಧ್ಯವಾಗಿದೆ, ಹಾಗಾಗಿ ನಮ್ಮ ಜ್ಞಾನಕ್ಕೆ ಹಾಗೂ ನಮ್ಮಗುರಿಗೆ ಕಾರಣರಾದ ಗುರುಗಳಿಗೆ ಕೃತಜ್ಞತೆಸಲ್ಲಿಸ ಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ. ಹಾಗಾಗಿ ಮೊದಲಿಗೆ ನಾವು ಕೃತಜ್ಞತೆ ಸಲ್ಲಿಸಬೇಕಾದದ್ದು ದೇವರಿಗೆ. ಪ್ರಪಂಚದ ಸೃಷ್ಟಿಕರ್ತನು ಎಲ್ಲವನ್ನೂ ಸುಂದರವಾಗಿ ಸೃಷ್ಟಿಸಿ ನಮಗೊಂದು ಸುಂದರ ಬದುಕನ್ನು ಕೊಟ್ಟ ಆ ದೇವರಿಗೆ ಮೊದಲು ನಮಿಸಿ ಕೃತಜ್ಞತೆ ಸಲ್ಲಿಸುತ್ತಾ, ನಾವು ಭೂಮಿಗೆ ಬರಲು ಕಾರಣರಾದ ನಮಗೆ ಜನ್ಮ ನೀಡಿದ ತಂದೆ ತಾಯಿಗಳು ಹುಟ್ಟಿದ ಕ್ಷಣದಿಂದಲೂ ಒಂದೊಂದೇ ಕಲಿಕೆಯನ್ನು ಕಲಿಸುತ್ತಾ ಬಾಷೆ, ಊಟ, ಆಟ ಪಾಠದ ಜೊತೆ ಬದುಕಿನ ನೈತಿಕ ಮೌಲ್ಯಗಳ ಮಹತ್ವವನ್ನು ತಿಳಿಸಿ ಸರಿ ತಪ್ಪುಗಳನ್ನು ತಿದ್ದುತ್ತಾ ಮನೆಯನ್ನೇ ಮೊದಲ ಪಾಠಶಾಲೆಯನ್ನಾಗಿಸಿ ಜೀವನದ ಮೊದಲ ಗುರುಗಳಾಗುತ್ತಾರೆ.

ಹಾಗಾಗಿ ನಮ್ಮ ಜೀವನದಲ್ಲಿ ಮೊದಲ ಗುರುವಾಗಿ ಬರುವ ಹೆತ್ತವರಿಗೆ ಕೃತಜ್ಞತೆಯನ್ನು ಸಲ್ಲಿಸಿ ನಂತರ ವಿದ್ಯೆ, ಬುದ್ದಿ ಕಲಿಸಿದ ಗುರುಗಳಾದಿಯಾಗಿ ಜೀವನದ ಕಲಿಕೆಯ ಹಾದಿಯಲ್ಲಿ
ಬರುವ ಎಲ್ಲಾ ಗುರುವರ್ಯರನ್ನು ಸ್ಮರಿಸುತ್ತ ನಮಿಸೋಣ.

ಫೋಟೋ ಕೃಪೆ : ಅಂತರ್ಜಾಲ

ಗುರುವಿನ ಮಹತ್ವ :

ಒಂದು ಮೇಣದ ಬತ್ತಿ ತನ್ನನ್ನು ತಾನು ಕರಗಿಸಿಕೊಂಡು ಮತ್ತೊಂದು ಮೇಣದ ಬತ್ತಿಗೆ ಬೆಳಕು ನೀಡುತ್ತದೆ. ಆ ಬೆಳಕಿನಿಂದ ನೂರಾರು ದೀಪಗಳು ಹೊತ್ತಿ ಉರಿದರೂ ಮೊದಲ ದೀಪದ ಬೆಳಕು ಕಡಿಮೆಯಾಗುವುದಿಲ್ಲ. ಗುರು ಎಂಬ ಸ್ಥಾನ ಕೂಡ ಹಾಗೆಯೇ. ತನ್ನ ಜ್ಞಾನ, ಅನುಭವ, ಸಮಯ ಮತ್ತು ಬದುಕನ್ನೇ ಅರ್ಪಿಸಿ ಮತ್ತೊಬ್ಬರ ಜೀವನವನ್ನು ಬೆಳಗಿಸುವ ಮಹಾನ್ ವ್ಯಕ್ತಿತ್ವ.

‘ಗುರು” ಎಂಬ ಪದವು ಸಂಸ್ಕೃತ ಮೂಲಗಳಾದ “ಗು” ಅಂದರೆ ಕತ್ತಲೆ ಮತ್ತು ರು “ರು” ಅಂದರೆ ಹೋಗಲಾಡಿಸುವವನು ಎಂಬುದರಿಂದ ಬಂದಿದೆ. ಹೀಗಾಗಿ, ಗುರು ಎಂದರೆ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವವನು ಮತ್ತು ಶಿಷ್ಯನನ್ನು ಜ್ಞಾನೋದಯ ಮತ್ತು ಆತ್ಮಸಾಕ್ಷಾತ್ಕಾರದ ಕಡೆಗೆ ಕರೆದೊಯ್ಯುವವನು. ಗುರು-ಶಿಷ್ಯ ಸಂಬಂಧವನ್ನು ಆಳವಾಗಿ ಪೂಜಿಸಲಾಗುತ್ತದೆ, ಇದನ್ನು ಹೆಚ್ಚಾಗಿ ಪೋಷಕರು-ಮಕ್ಕಳ ಸಂಬಂಧಕ್ಕಿಂತ ಹೆಚ್ಚು ಪವಿತ್ರವೆಂದು ಪರಿಗಣಿಸಲಾಗುತ್ತದೆ

ಗುರು ಪೂರ್ಣಿಮೆ ಬಂದಾಗ ನಾವು ಹೆಚ್ಚಾಗಿ ಶಾಲೆಯ ಶಿಕ್ಷಕರನ್ನು ನೆನಪಿಸಿಕೊಳ್ಳುತ್ತೇವೆ. ಆದರೆ ಬದುಕಿನ ದಾರಿಯಲ್ಲಿ ಗುರುಗಳ ಸಂಖ್ಯೆ ಅನೇಕ. ಮೊದಲ ಹೆಜ್ಜೆ ಇಡಲು ಕಲಿಸಿದ ತಾಯಿ, ಜವಾಬ್ದಾರಿಯನ್ನು ಕಲಿಸಿದ ತಂದೆ, ಅಕ್ಷರ ಜ್ಞಾನ ನೀಡಿದ ಶಿಕ್ಷಕ, ತಪ್ಪುಗಳನ್ನು ತೋರಿಸಿ ತಿದ್ದಿದ ಅಕ್ಕ, ಅಣ್ಣ, ಸ್ನೇಹಿತ, ಸೋಲು ಗೆಲುವಿನ ಮೂಲಕ ಪಾಠ ಕಲಿಸಿದ ನಮ್ಮ ಅನುಭವಗಳು ಇವಲ್ಲವೂ ನಮ್ಮ ಜೀವನದ ಗುರುಗಳೇ.

ಈ ತಾಂತ್ರಿಕ ಕಾಲದಲ್ಲಿ ಮಾಹಿತಿಯ ಕೊರತೆಯಿಲ್ಲ. ಬೆರಳ ತುದಿಯಲ್ಲಿ ಜಗತ್ತಿನ ಜ್ಞಾನ ಸಿಗುತ್ತದೆ. ಆದರೆ ಯಾವ ಜ್ಞಾನವನ್ನು ಯಾವ ಸಂದರ್ಭದಲ್ಲಿ ಬಳಸಬೇಕು ಎಂಬ ವಿವೇಕವನ್ನು ಕಲಿಸುವವರು ಮಾತ್ರ ಗುರುಗಳು. ಅದಕ್ಕಾಗಿಯೇ ಗುರು ಎಂದರೆ ಕೇವಲ ಪಾಠ ಮಾಡುವ ವ್ಯಕ್ತಿಯಲ್ಲ, ವ್ಯಕ್ತಿತ್ವವನ್ನು ರೂಪಿಸುವ ಶಕ್ತಿ.

ಒಬ್ಬ ವೈದ್ಯ, ವಿಜ್ಞಾನಿ, ನ್ಯಾಯಾಧೀಶ, ರೈತ, ಕಲಾವಿದ ಅಥವಾ ನಾಯಕನ ಯಶಸ್ಸಿನ ಹಿಂದೆ ಒಬ್ಬ ಗುರು ಇದ್ದೇ ಇರುತ್ತಾನೆ. ಜಗತ್ತು ಸಾಧಕರನ್ನು ಗುರುತಿಸುತ್ತದೆ, ಆದರೆ ಆ ಸಾಧಕರನ್ನು ರೂಪಿಸಿದ ಗುರುಗಳನ್ನು ಅನೇಕ ಬಾರಿ ಮರೆಯುತ್ತದೆ. ಗುರು ಪೂರ್ಣಿಮೆ ಅಂಥ ಮರೆತ ಕೃತಜ್ಞತೆಗಳನ್ನು ನೆನಪಿಸಿಕೊಳ್ಳುವ ಸಂದರ್ಭವಾಗಿದೆ. ಸಮಾಜದಲ್ಲಿ ಇಂದು ಹೆಚ್ಚುತ್ತಿರುವ ಅಸಹಿಷ್ಣುತೆ, ಮೌಲ್ಯಗಳ ಕುಸಿತ ಮತ್ತು ಸಂಬಂಧಗಳ ಬಿರುಕುಗಳ ನಡುವೆ ಜ್ಞಾನಕ್ಕಿಂತ ಹೆಚ್ಚು ಮಾನವೀಯತೆಯನ್ನು ಕಲಿಸುವ ಗುರುಗಳ ಅಗತ್ಯವಿದೆ. ಏಕೆಂದರೆ ಶಿಕ್ಷಣ ಬದುಕನ್ನು ಕಟ್ಟಬಹುದು, ಆದರೆ ಸಂಸ್ಕಾರ ಸಮಾಜವನ್ನು ಕಟ್ಟುತ್ತದೆ.

ಇಂದಿನ ವೇಗದ ಯುಗದಲ್ಲಿ ಯಶಸ್ಸನ್ನು ಅಂಕಗಳು, ಹುದ್ದೆಗಳು ಮತ್ತು ಸಂಪತ್ತಿನಿಂದ ಅಳೆಯಲಾಗುತ್ತಿದೆ. ಆದರೆ ಒಬ್ಬ ಉತ್ತಮ ಗುರು ತನ್ನ ಶಿಷ್ಯನಿಗೆ ಯಶಸ್ಸಿನ ಜೊತೆಗೆ ಸಜ್ಜನಿಕೆಯ ಮಹತ್ವವನ್ನೂ ಕಲಿಸುತ್ತಾನೆ. ಸ್ಪರ್ಧೆಯ ನಡುವೆ ಸಹಕಾರ, ಸಾಧನೆಯ ನಡುವೆ ವಿನಯ, ಹಕ್ಕುಗಳ ಜೊತೆಗೆ ಕರ್ತವ್ಯಗಳ ಅರಿವನ್ನು ಮೂಡಿಸುತ್ತಾನೆ. ಆದ್ದರಿಂದಲೇ ಗುರುಗಳ ಬೋಧನೆಗಳು ಪಠ್ಯಪುಸ್ತಕಗಳ ಪುಟಗಳನ್ನು ಮೀರಿ ಜೀವನದ ಪ್ರತಿಯೊಂದು ಹಂತದಲ್ಲೂ ನಮ್ಮನ್ನು ಮುನ್ನಡೆಸುತ್ತವೆ.

ಗುರು ಎಂಬುದು ಕೇವಲ ಒಂದು ಸಂಬಂಧವಲ್ಲ, ಅದು ಒಂದು ಜವಾಬ್ದಾರಿ. ಶಿಷ್ಯನ ಕನಸುಗಳಿಗೆ ರೆಕ್ಕೆ ಕಟ್ಟುವ, ಆತ್ಮವಿಶ್ವಾಸಕ್ಕೆ ಬಲ ತುಂಬುವ ಮತ್ತು ನಿರಾಶೆಯ ಕತ್ತಲಲ್ಲಿ ಆಶಾಕಿರಣವಾಗುವ ಶಕ್ತಿ. ಒಬ್ಬ ನಿಜವಾದ ಗುರು ತನ್ನ ಶಿಷ್ಯನು ತನಗಿಂತಲೂ ಎತ್ತರಕ್ಕೆ ಬೆಳೆಯುವುದನ್ನು ಕಂಡು ಹೆಮ್ಮೆಪಡುತ್ತಾನೆ. ಆದ್ದರಿಂದಲೇ ಸಮಾಜದಲ್ಲಿ ದೇವರನ್ನು ಕಾಣದವರೂ ಇರಬಹುದು, ಆದರೆ ಗುರುಗಳ ಸ್ಪರ್ಶವಿಲ್ಲದೆ ಬೆಳೆದವರು ಖಂಡಿತ ವಿರಳ. ‘ಜ್ಞಾನವೆಂಬ ಅಮೃತವನ್ನು ಉಣಬಡಿಸುವ ಗುರುಗಳು ಮಾನವ ಸಮಾಜದ ಶಾಶ್ವತ ಮಾರ್ಗದರ್ಶಕರು.’

ಗುರುಗಳು ನಮ್ಮ ಭವಿಷ್ಯವನ್ನು ಹೇಳುವುದಿಲ್ಲ ಭವಿಷ್ಯವನ್ನು ನಿರ್ಮಿಸಿಕೊಳ್ಳುವ ಶಕ್ತಿಯನ್ನು ನೀಡುತ್ತಾರೆ. ಹಾಗಾಗಿ ಗುರು ಪೂರ್ಣಿಮೆಯ ವಿಶೇಷತೆ ಕೇವಲ ಧಾರ್ಮಿಕ ಆಚರಣೆಯಲ್ಲಿ ಮಾತ್ರ ಅಡಗಿಲ್ಲ. ಇದು ಕೃತಜ್ಞತೆಯ ಹಬ್ಬ. ನಾವು ಜೀವನದಲ್ಲಿ ಪಡೆದ ಪ್ರತಿಯೊಂದು ಜ್ಞಾನ, ಕೌಶಲ್ಯ ಮತ್ತು ಮೌಲ್ಯದ ಹಿಂದೆ ಯಾರದೋ ಮಾರ್ಗದರ್ಶನ ಇರುತ್ತದೆ. ಆದರೆ ಆಧುನಿಕ ಜೀವನದ ಒತ್ತಡದಲ್ಲಿ ನಮಗೆ ದಾರಿ ತೋರಿದವರನ್ನು ನೆನಪಿಸಿಕೊಳ್ಳಲು ಸಮಯವೇ ಸಿಗುವುದಿಲ್ಲ. ಅಂತಹ ಸಂದರ್ಭದಲ್ಲಿ ಗುರು ಪೂರ್ಣಿಮೆ ನಮಗೆ ವಿನಯ, ಗೌರವ ಮತ್ತು ಕೃತಜ್ಞತೆಯ ಮಹತ್ವವನ್ನು ನೆನಪಿಸುತ್ತದೆ.

ಭಾರತೀಯ ಸಂಸ್ಕೃತಿಯಲ್ಲಿ ಗುರು-ಶಿಷ್ಯ ಸಂಬಂಧವು ಕೇವಲ ಜ್ಞಾನ ವಿನಿಮಯದ ಸಂಬಂಧವಾಗಿರಲಿಲ್ಲ. ಅದು ವ್ಯಕ್ತಿತ್ವ ನಿರ್ಮಾಣದ ಪವಿತ್ರ ಬಂಧವಾಗಿತ್ತು. ಪ್ರಾಚೀನ ಗುರುಕುಲಗಳಲ್ಲಿ ವಿದ್ಯಾರ್ಥಿಗಳು ಕೇವಲ ವಿದ್ಯೆಯನ್ನಷ್ಟೇ ಅಲ್ಲ, ಸ್ವಾವಲಂಬನೆ, ಶಿಸ್ತು, ಪ್ರಕೃತಿ ಪ್ರೇಮ, ಸಮಾಜ ಸೇವೆ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಯುತ್ತಿದ್ದರು. ಇಂದಿಗೂ ಶಿಕ್ಷಣದ ನಿಜವಾದ ಉದ್ದೇಶ ಇದೇ ಆಗಬೇಕು.

ಇಂದಿನ ಕಾಲದಲ್ಲಿ ಸಾಮಾಜಿಕ ಜಾಲತಾಣಗಳು, ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಸಾಧನಗಳು ಮಾಹಿತಿಯನ್ನು ಸುಲಭವಾಗಿ ಒದಗಿಸುತ್ತಿವೆ. ಆದರೆ ಮಾಹಿತಿಯನ್ನು ಜ್ಞಾನವಾಗಿ ಮತ್ತು ಜ್ಞಾನವನ್ನು ವಿವೇಕವಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಬೆಳೆಸುವುದು ಗುರುಗಳೇ. ಆದ್ದರಿಂದ ತಂತ್ರಜ್ಞಾನವು ಗುರುಗಳಿಗೆ ಪರ್ಯಾಯವಾಗಲಾರದು, ಅದು ಕೇವಲ ಅವರ ಕಾರ್ಯಕ್ಕೆ ಸಹಾಯಕವಾಗಬಲ್ಲದು.

ಒಂದು ರಾಷ್ಟ್ರದ ಭವಿಷ್ಯ ತರಗತಿ ಕೊಠಡಿಗಳಲ್ಲಿ ರೂಪುಗೊಳ್ಳುತ್ತದೆ ಎನ್ನಲಾಗುತ್ತದೆ. ಏಕೆಂದರೆ ಅಲ್ಲಿ ಕುಳಿತಿರುವ ಮಕ್ಕಳು ನಾಳಿನ ವಿಜ್ಞಾನಿಗಳು, ವೈದ್ಯರು, ಶಿಕ್ಷಕರು, ಆಡಳಿತಗಾರರು ಮತ್ತು ನಾಯಕರಾಗಿರುತ್ತಾರೆ. ಅವರನ್ನು ರೂಪಿಸುವ ಶಿಲ್ಪಿಗಳು ಗುರುಗಳು. ಆದ್ದರಿಂದ ಗುರುಗಳಿಗೆ ಒಂದು ಮಹತ್ತರವಾದ ಜವಾಬ್ದಾರಿ ಇರುತ್ತದೆ. ಗುರುಗಳನ್ನು ಗೌರವಿಸುವುದು ಎಂದರೆ ಜ್ಞಾನವನ್ನು ಗೌರವಿಸುವುದು, ಜ್ಞಾನವನ್ನು ಗೌರವಿಸುವುದು ಎಂದರೆ ದೇಶದ ಭವಿಷ್ಯವನ್ನು ಗೌರವಿಸುವುದು ಎಂದರ್ಥ, ಪ್ರಾಪಂಚಿಕ ಜೀವನದ ಜೊತೆ ಬದುಕಿನ ಅರ್ಥ, ಗುರಿ ಹಾಗೂ ಸನ್ಮಾರ್ಗ ತೋರಿಸುವ ಮಾರ್ಗದರ್ಶಿಯಾಗಿ ನಮಗೆ ವಿದ್ಯೆ ಬುದ್ದಿ ಜ್ಞಾನ ಕೊಟ್ಟ ಗುರುಗಳನ್ನು ಕೃತಜ್ಞತೆಯಿಂದ ಸ್ಮರಿಸುತ್ತ ಎಲ್ಲಾ ಗುರುವರ್ಯರಿಗೂ ನಮಿಸುತ್ತಾ ಧನ್ಯವಾದಗಳನ್ನು ಹೇಳೋಣ.

ಗುರು ಪೂರ್ಣಿಮೆಯ ಈ ಸಂದರ್ಭದಲ್ಲಿ ನಮ್ಮ ಬದುಕಿಗೆ ದಾರಿ ತೋರಿದ ಪ್ರತಿಯೊಬ್ಬ ಗುರುಗಳಿಗೂ ಹೃದಯಪೂರ್ವಕ ನಮನ ಸಲ್ಲಿಸೋಣ. ಅವರ ಬೋಧನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳೋಣ. ಏಕೆಂದರೆ ಗುರುಗಳಿಗೆ ನಾವು ಕೊಡುವ ಅತ್ಯುತ್ತಮ ಗುರುದಕ್ಷಿಣೆ ಎಂದರೆ ಅವರ ಪಾಠಗಳನ್ನು ಜೀವನದಲ್ಲಿ ಪಾಲಿಸುವುದು.

ಸೂರ್ಯನು ಜಗತ್ತಿಗೆ ಬೆಳಕು ನೀಡಿದರೆ, ಗುರು ಬದುಕಿಗೆ ಬೆಳಕು ನೀಡುತ್ತಾನೆ.

ಓಂ ಗುರುಭ್ಯೋ ನಮಃ!!


  • ಗೀತಾಂಜಲಿ ಎನ್ ಎಮ್ – ಕೊಡಗು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading