ಅಂಗೈಯಲ್ಲಿ ಪ್ರಪಂಚ (ಭಾಗ- ೩೪)

 

ಅಕ್ಕಪಕ್ಕದವರ ಮನೆಯವರು ವಸ್ತುಗಳನ್ನು ಮನೆಯ ಹೊರಗೆ ಇಟ್ಟಿದ್ದರೆ ಅವರನ್ನು ಕೇಳಿ ಬಳಸುವ ಸೌಜನ್ಯವೂ ಇಲ್ಲದೇ, ತಮಗೆ ಬೇಕಾದಂತೆ ಹಗಲು-ರಾತ್ರಿ ಎನ್ನದೇ ತೆಗೆದುಕೊಂಡು ಹೋಗಿ ಉಪಯೋಗಿಸಿ ತಂದು ಏನೂ ಗೊತ್ತಿಲ್ಲದಂತೆ ಹಾಗೇ ಇಟ್ಟು ಹೋಗುವವರೂ ಇದ್ದಾರೆ. ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ನೆರೆಹೊರೆಯ ಸಂಬಂಧ’ ತಪ್ಪದೆ ಮುಂದೆ ಓದಿ…

ಅಶೋಕನಿಗೆ ರಾತ್ರಿ 2 ಗಂಟೆಯಲ್ಲಿ ಮೈಯ್ಯೆಲ್ಲಾ ಬೆವರಿ ವಿಪರೀತ ಎದೆನೋವು ಕಾಣಿಸಿಕೊಂಡಾಗ ಅವನ ಹೆಂಡತಿ ಶಾರದಾ ತಕ್ಷಣ ಕರೆ ಮಾಡಿದ್ದು ಆ ಮನೆಯ ಓನರ್ಗೆ. ಗ್ರೌಂಡ್ ಫ್ಲೋರ್ ನಲ್ಲಿದ್ದ ಅವರು ತಕ್ಷಣ ಎದ್ದು ರೆಡಿಯಾಗಿ ಬಂದು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದಾಗ ಪರೀಕ್ಷಿಸಿದ ವೈದ್ಯರು, ಕೂಡಲೇ ಐಸಿಯುಗೆ ಅಡ್ಮಿಟ್ ಮಾಡಿ ಎಂದರು. ಅದು ಪ್ರತಿಷ್ಠಿತ ಆಸ್ಪತ್ರೆಯಾದ ಕಾರಣ ತಕ್ಷಣ 50,000 ಕಟ್ಟಲು ಹೇಳಿದರು. ಆಗ ಆ ಮನೆ ಒನರ್ ಎಟಿಎಂ ಗೆ ಹೋಗಿ ಹಣ ಡ್ರಾ ಮಾಡಿ ತಂದು ಕಟ್ಟಿದ್ದರು (ಆ ಸಮಯದಲ್ಲಿ ಅಷ್ಟು ಹಣವನ್ನು ಒಟ್ಟಿಗೆ ಡ್ರಾ ಮಾಡುವ ಅವಕಾಶ ಇತ್ತು) ಜೊತೆಗೆ ಶಾರದೆಗೂ ಧೈರ್ಯ ಹೇಳಿ ಬೆಳಗಿನವರೆಗೂ ಜೊತೆಯಲ್ಲಿದ್ದು ಅವರ ಕಡೆಯವರು ಬಂದ ಮೇಲಷ್ಟೇ ಅವರು ಮನೆಗೆ ಹೊರಟಿದ್ದು. ಇದಾಗಿ ಹತ್ತು ವರ್ಷಗಳೇ ಕಳೆದಿದ್ದರೂ ಶಾರದೆಗೆ ಅವರು ಆಪದ್ಬಾಂಧವರಂತೆ. ಅವಳ ಮನದಲ್ಲಿ ಸದಾ ಅವರಿಗೆ ಕೃತಜ್ಞತೆಯ ಭಾವ.

ಪಕ್ಕದ ಮನೆಯ ಶಾಂತ ಬಂದು ಏನ್ ಅಡ್ಗೆ ಮಾಡಿದ್ಯ ಲಕ್ಷ್ಮೀ ಎಂದಾಗ ಮಜ್ಜಿಗೆ ಹುಳಿ ಎಂದಿದ್ದಳು ಲಕ್ಷ್ಮಿ. ನಾನಿನ್ನೂ ಏನೂ ಮಾಡಿಲ್ಲ ಇವತ್ತು, ಇಷ್ಟೊತ್ತು ಮಲ್ಗಿದ್ದೆ , ತಲೆನೋವಿತ್ತು ಎಂದ ಶಾಂತಳ ಮಾತು ಕೇಳಿ ಲಕ್ಷ್ಮಿ, ಇರಿ ಹಾಗಾದ್ರೆ ಸ್ವಲ್ಪ ಮಜ್ಜಿಗೆಹುಳಿ ಕೊಡ್ತೀನಿ ಎಂದು ಕೊಟ್ಟಿದ್ದಳು. ಮತ್ತೆ ಸಿಕ್ಕಿದಾಗ ಶಾಂತ, ಮಜ್ಜಿಗೆಹುಳಿ ತುಂಬಾ ಚೆನ್ನಾಗಿತ್ತು ಎಂದದ್ದು ಕೇಳಿ ಲಕ್ಷ್ಮಿಗೆ ಸಹಜವಾಗಿಯೇ ಖುಷಿಯಾಗಿತ್ತು. ಇನ್ನೊಮ್ಮೆ ಸಂಜೆ ಯಾರೋ ನೆಂಟರು ಬಂದರೆಂದು ಲಕ್ಷ್ಮಿ, ಸ್ವಲ್ಪ ಸಾಂಬಾರ್ ಕೊಡ್ತ್ಯ, ಊರಿಂದ ಒಂದಿಬ್ರು ಬಂದಿದಾರೆ, ಅವ್ರು ಬರದು ನಂಗೂ ಗೊತ್ತಿರ್ಲಿಲ್ಲ ಎಂದಾಗ ಏನೂ ಹೇಳಲಾಗದೇ ಲಕ್ಷ್ಮಿ ತನ್ನ ಮನೆಯವರಿಗೆಂದು ಮಾಡಿದ್ದ ಸಾಂಬಾರ್ ಕೊಟ್ಟಿದ್ದಳು. ಪಾಪ, ಅವಳಿಗೂ ಚಿಕ್ಕಚಿಕ್ಕ ಮಕ್ಕಳು, ಮತ್ತೆ ಕಷ್ಟಪಟ್ಟು ಅಡುಗೆ ಮಾಡಿದ್ದಳು. ಅನೇಕ ದಿನಗಳ ನಂತರ ಮಾತನಾಡುವಾಗ ಏನ್ ಅಡ್ಗೆ ಎಂದ ಶಾಂತಳ ಮಾತಿಗೆ ಹಾಗಲಕಾಯಿ ಗೊಜ್ಜು ಎಂದ ತಕ್ಷಣವೇ ಅಯ್ಯೋ, ನಾಲ್ಗೆ ಎಲ್ಲಾ ಕೆಟ್ಟ್ಹೋಗಿದೆ, ನಂಗ್ ಸ್ವಲ್ಪ ಕೊಡು ಎಂದು ನಿರ್ದಾಕ್ಷಿಣ್ಯವಾಗಿಯೇ ಕೇಳಿದ್ದಳು. ಕೊನೆಗೆ ಮಾಡಿದ್ದರಲ್ಲಿ ಅವರ ಮನೆಯಲ್ಲಿದ್ದ ಮೂರು ಜನರಿಗೆ ಆಗುವಷ್ಟು ಕೊಡುವಷ್ಟರಲ್ಲಿ ಇವಳು ಮತ್ತೆ ಅಡುಗೆ ಮಾಡುವ ಪರಿಸ್ಥಿತಿ ಬಂತು. ಪದೇ ಪದೇ ಅವರ ಈ ರೀತಿಯ ವರ್ತನೆ ನೆರೆಹೊರೆಯವರೆಂಬ ಕಾರಣಕ್ಕೆ ಲಕ್ಷ್ಮಿಗೆ ಆಡುವಂತಿಲ್ಲದೇ ಅನುಭವಿಸುವಂತಾಯಿತು.

ಇನ್ನು ಕೆಲವರು ಪಕ್ಕದ ಮನೆಗೆ ಬರುವ ಪತ್ರಿಕೆ, ಮ್ಯಾಗಜಿನ್ಗಳಿಂದ ಹಿಡಿದು ಎಲ್ಲವನ್ನೂ ಬೆಳಗ್ಗೆ ಎದ್ದು ಅವರು ತೆಗೆದುಕೊಳ್ಳುವ ಮುಂಚೆಯೇ ತೆಗೆದುಕೊಂಡು ಹೋಗಿ ನೋಡಿ ತಂದು ಹಾಕಿರುವ ಉದಾಹರಣೆಗಳೂ ಬೇಕಾದಷ್ಟಿವೆ. ಪಾಪ, ಇವರು ಒಂದೆರಡು ಬಾರಿ ಬಾಗಿಲು ತೆಗೆದು ನೋಡಿ ಇವತ್ಯಾಕೋ ಇನ್ನೂ ಪೇಪರ್ ಬಂದಿಲ್ಲ ಅಂದುಕೊಂಡು ಸುಮ್ಮನಾಗುತ್ತಾರೆ.

ಅಕ್ಕಪಕ್ಕದವರ ಮನೆಯವರು ವಸ್ತುಗಳನ್ನು ಮನೆಯ ಹೊರಗೆ ಇಟ್ಟಿದ್ದರೆ ಅವರನ್ನು ಕೇಳಿ ಬಳಸುವ ಸೌಜನ್ಯವೂ ಇಲ್ಲದೇ, ತಮಗೆ ಬೇಕಾದಂತೆ ಹಗಲು-ರಾತ್ರಿ ಎನ್ನದೇ ತೆಗೆದುಕೊಂಡು ಹೋಗಿ ಉಪಯೋಗಿಸಿ ತಂದು ಏನೂ ಗೊತ್ತಿಲ್ಲದಂತೆ ಹಾಗೇ ಇಟ್ಟು ಹೋಗುವವರೂ ಇದ್ದಾರೆ.

ಇವೆಲ್ಲಾ ಒಂದೆರಡು ಉದಾಹರಣೆಗಳಷ್ಟೆ. ಒಂದು ನಾಣ್ಯಕ್ಕೆ ಎರಡು ಮುಖಗಳಿದ್ದಂತೆ. ಒಡಹುಟ್ಟಿದವರು, ಬಂಧು-ಬಾಂಧವರು ಎಷ್ಟೇ ಜನ ಇದ್ದರೂ ಸಮಯಕ್ಕಾಗುವುದು ನೆರೆಹೊರೆಯವರೇ. ಬಂಧುಗಳು ಬೇರಡೆಯಿಂದ ಬರಲು ಸಾಕಷ್ಟು ಸಮಯವೂ ಬೇಕಾಗುತ್ತದೆ. ಅಷ್ಟರಲ್ಲಿ ಒಂದು ಜೀವವೇ ಹೋಗಬಹುದು. ನೆರೆಹೊರೆಯವರಾದರೆ ಅಲ್ಲಿಯೇ ಇರುವುದರಿಂದ ತಕ್ಷಣದ ಸ್ಪಂದನೆ, ಸಹಾಯ ದೊರಕುತ್ತದೆ. ಹಾಗಾಗಿ ನೆರೆಹೊರೆಯವರಲ್ಲಿ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವುದು ತುಂಬಾ ಅಗತ್ಯ.

ಹಾಲು, ತರಕಾರಿ, ಕರಿಬೇವು, ಕೊತ್ತಂಬರಿ, ಸಕ್ಕರೆ ಹೀಗೆ ಅಗತ್ಯದ ವಸ್ತುಗಳಿಗೆ ಹೊತ್ತುಗೊತ್ತಿಲ್ಲದೇ ನೆರೆಹೊರೆಯ ಮನೆಯೇ ಬೇಕು. ಅದು ಅವರವರಲ್ಲಿ ಉತ್ತಮ ಸಂಬಂಧ ಹೊಂದಿದ್ದರೆ ಮಾತ್ರ. ಬರೀ ತೆಗೆದುಕೊಳ್ಳುವವರಾದರೆ ಕಷ್ಟ. ಕೊಡು-ಕೊಳ್ಳುವಿಕೆ, ಒಳ್ಳೆಯ ಮಾತುಕತೆ ಎಲ್ಲವೂ ಇದ್ದಲ್ಲಿ ಮಾತ್ರ ಇದೆಲ್ಲ ಸಾಧ್ಯ.

ಕೆಲವರು ತಮಗೆ ಬೇಕಾದಾಗ ಮಾತನಾಡಿಸಿ ಸಹಾಯ ಪಡೆದವರು ಬೇರೆ ಸಮಯದಲ್ಲಿ ಎದುರಿಗೆ ಕಂಡರೂ ಕಾಣದಂತೆ ಓಡಾಡುತ್ತಾರೆ. ಅವರ ಆ ರೀತಿಯ ವರ್ತನೆಯಿಂದ ಬೇಸತ್ತಿದ್ದರೂ ನೆರೆಹೊರೆಯರಲ್ಲವೇ ಎಂದುಕೊಂಡು ಮತ್ತೆ ಅವರು ಬಂದಾಗ ನಗುನಗುತ್ತಾ ಮಾತನಾಡುವುದು ಅನಿವಾರ್ಯ.

ತಮ್ಮ ಸಾಕುಪ್ರಾಣಿಗಳಿಂದ ನೆರೆಹೊರೆಯವರಿಗೆ ಆಗುವ ತೊಂದರೆಯ ಬಗ್ಗೆ ಕೆಲವರಿಗೆ ಕಿಂಚಿತ್ತೂ ಚಿಂತೆಯಿಲ್ಲ. ಹೇಳಿದಷ್ಟೂ ಹೆಚ್ಚು ಮಾಡುವವರೂ ಇದ್ದಾರೆ. ತಮ್ಮ ಮನೆ, ತಮ್ಮಿಷ್ಟ ಎಂಬ ಅಹಂಕಾರದ ಧೋರಣೆಯೂ ಇದಕ್ಕೆ ಕಾರಣ. ಹೊತ್ತಲ್ಲದ ಹೊತ್ತಿನಲ್ಲಿ ಗೋಡೆ ಕೊರೆಯುವುದು, ಕುಟ್ಟುವುದು, ಧಡಧಡ ಓಡುವುದು, ಜೋರಾದ ಟಿವಿ, ಹಾಡುಗಳ ಶಬ್ಧ, ನಾಲ್ಕು ಮನೆಗೆ ಕೇಳುವಷ್ಟು ಧ್ವನಿ ಎತ್ತರಿಸಿ ಫೋನಿನಲ್ಲಿ ಮಾತನಾಡುವುದು, ಸ್ನೇಹಿತರು-ಬಂಧುಗಳೊಡಗೂಡಿ ಪಾರ್ಟಿಗಳ ಅಬ್ಬರ, ಇನ್ನೂ ಹತ್ತು ಹಲವು. ತಮ್ಮ ಮನೆಯೇ ಇರಬಹುದು. ಮಾನವ ಸಂಘ ಜೀವಿ. ಹಾಗಾಗಿ ಒಂಟಿಯಾಗಿ ಬದುಕಲು ಸಾಧ್ಯವಿಲ್ಲ. ಇದನ್ನು ಅರಿತು ನೆರೆಹೊರೆಯವರಿಗೆ ಹೊರೆಯಾಗದಂತೆ ಬದುಕುವುದೂ ಸಹ ನಮ್ಮ ಕರ್ತವ್ಯ.

ಧಾವಂತದ ಬದುಕು, ಕೆಲವರ ಬೇಸರ ತರಿಸುವ ವರ್ತನೆ, ದುರಹಂಕಾರದ ಮಾತುಗಳು, ಬಡತನ-ಸಿರಿತನದ ಹೋಲಿಕೆ ಇವೆಲ್ಲ ಕೆಲವೊಮ್ಮೆ ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಹೊಂದದಂತೆ ತಡೆಯುತ್ತದೆ. ಕ್ರಿಯೆಯಂತೆ ಪ್ರತಿಕ್ರಿಯೆ ಎನ್ನುತ್ತಾರಲ್ಲ ಹಾಗೆ. ತೀರಾ ವಿರುದ್ಧದ ಸ್ವಭಾವ, ವರ್ತನೆಯಾದರೆ ನೆರೆಹೊರೆಯವರೆಂದು ಅಂತಹವರಿಂದ ದಿನಾ ಕಿರಿಕಿರಿ ಅನುಭವಿಸುವ ಬದಲು ನಮ್ಮ ಪಾಡಿಗೆ ನಾವಿರುವುದು ಒಳ್ಳೆಯದು. ಈಗಂತೂ ಅವಲಂಬನೆಯ ಬದುಕು ಬೆರಳೆಣಿಕೆಯಷ್ಟು. ಯಾವ ವಿಷಯಕ್ಕಾದರೂ ಬೇಕಾದ ಅನುಕೂಲಗಳು ಇವೆ. ಜೊತೆಗೆ ಸ್ವಲ್ಪ ಮುಂದಾಲೋಚನೆ ಇದ್ದರಂತೂ ಎಂತಹ ಸಮಯ ಬಂದರೂ ನಿಭಾಯಿಸಬಹುದು.

ಮನಸ್ಸು ಸ್ವಚ್ಛವಾಗಿದ್ದು ಹೊಂದಾಣಿಕೆಯ ಸ್ವಭಾವ ಇರುವ ನೆರೆಹೊರೆಯವರಾದರೆ ನಾವೂ ಅವರ ಜೊತೆಜೊತೆಗೇ ಸಾಗಬಹುದು. ಸಮಯ ಸಾಧಕರಾಗಿರದೇ ಸಮಯಕ್ಕಾಗುವ ನೆರೆಹೊರೆಯವರಿರಲಿ ಎಂಬ ಆಶಯದೊಂದಿಗೆ.


  • ಮಂಗಳ ಎಂ ನಾಡಿಗ್ – ಅಂಕಣಕಾರ್ತಿ, ಬೆಂಗಳೂರು.

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading