ಕಥೆಗಾರರಾದ ಚಂಪಾ ಚಿನಿವಾರ್ ಅವರ ‘ಮೇಘ ಮಾಲೆ’ ಕಥಾಸಂಕಲನದಲ್ಲಿನ ಮೊದಲ ಕತೆ ‘ಸವಿ ಸಿಂಚನ ಪ್ರೇಮ ಬಂಧನ’ ಓದುಗರ ಮುಂದಿದೆ, ತಪ್ಪದೆ ಮುಂದೆ ಓದಿ…
* ಸವಿ ಸಿಂಚನ ಪ್ರೇಮ ಬಂಧನ
ಸಬಿತಾ… ಕಮ್ ಅಂಡ್ ಮೀಟ್ ಮಿ ಆಫ್ಟರ್ ಯುವರ್ ಲಂಚ್… ತನ್ನ ಎಂಪ್ಲಾಯಿಗೆ ಕರೆ ಮಾಡಿ ಕರೆದಳು ಮುಕ್ತ.
ಮೇ ಐ ಕಮಿನ್ ಮೇಡಂ… ಯೆಸ್ ಕಮ್…
ಮುಕ್ತ ಫೈಲ್ ನೋಡುತಿದ್ದವಳು. ಸಬಿತ ಬಂದಿದ್ದನ್ನು ನೋಡಿ ಫೈಲ್ ಮುಚ್ಚಿಟ್ಟು ಅವಳನ್ನು ಕಳಿತುಕೊಳ್ಳಲು ಹೇಳಿದಳು. ಸಬಿತಾ ಅವಳ ಎದುರಿಗೆ ಕುರ್ಚಿಯಲ್ಲಿ ಥ್ಯಾಂಕ್ಯೂ ಮ್ಯಾಮ್ ಎಂದು ಕುಳಿತಳು.
ಸಬಿತಾ ನೆಕ್ಸ್ಟ್ ವೀಕೆಂಡ್ ಗೆ ರೆಸಾರ್ಟ್ ಬುಕ್ ಮಾಡ್ಬೇಕು ಅದರ ಫೋನ್ ನಂಬರ್ ನೋಡಿ ಡೀಟೇಲ್ಸ್ ಕೇಳು. ಹಾಗೆ ಎಲ್ಲರೂ ಕಂಪಲ್ಸರಿ ಬರಬೇಕೆಂದು ಮೇಲ್ ಕಳಿಸು ಎಂದು ಮುಕ್ತಾ ಹೇಳಿದಾಗ, ಓಕೆ ಮೇಡಂ ಈಗಲೇ ರೆಸಾರ್ಟ್ ಗೆ ಕಾಲ್ ಮಾಡಿ ತಿಳಿದುಕೊಳ್ಳುತ್ತೇನೆ ಎಂದು ಹೇಳಿ ಕ್ಯಾಬಿನ್ ನಿಂದ ಹೊರಟಳು.
ಅರ್ಧ ಗಂಟೆ ಕಳೆದ ನಂತರ ಸಬಿತ, ಮುಕ್ತಾಳ ಕ್ಯಾಬಿನ್ ಬಂದು. ‘ಮೇಡಂ, ಸಕ್ಲೇಶಪುರದಲ್ಲಿ ರೆಸಾರ್ಟ್ ಬುಕ್ ಆಗಿದೆ. ನಮ್ಮ ಮ್ಯಾನೇಜರ್ ದುಡ್ಡು ಕಟ್ಟಿ ಆಯ್ತು. ಹದಿನೈದು ಜನಕ್ಕೆ ಬುಕ್ ಆಯ್ತು’ ಅಂದಳು. ‘ವಾಟ್, ಹದಿನೈದು ಜನಾನ?? ಅವನು? ಅವನು ಬರಲ್ವಾ’ ಅಂತ ಕೇಳಿದಳು. ‘ಮುಕ್ತಾ, ಗೊತ್ತಿಲ್ಲ ಮೇಡಂ, ಕೇಳಿಲ್ಲ. ಅವನನ್ನು ಬಹುಶಃ ಬರಲ್ಲಾ ಅನ್ಸುತ್ತೆ’ ಎಂದು ಸಬಿತ ಹೇಳಿದಾಗ, ‘ಸರಿ ನಾನು ಮಾತಾಡ್ತೀನಿ, ಅವನ ಬಳಿ ಎಂದು ಮುಕ್ತ ಸಬಿತಾಳನ್ನು ಅಂದಿನ ಕಾರ್ಯಕ್ರಮಗಳ ಬಗ್ಗೆ ಗಮನ ಹರಿಸಲು ಹೇಳಿ ಅವಳನ್ನು ಕಳುಹಿಸಿದಳು.
ಮುಕ್ತಾ ಮೈಸೂರಿನಲ್ಲಿ ಒಂದು ಕಂಪನಿಯ ಸಿಇಓ ಆಗಿದ್ದು, ಅವಳ ಬಳಿ ಹದಿನಾರು ಜನ ಕೆಲಸ ಮಾಡುತ್ತಿದ್ದರು. ಚಿಕ್ಕ ಕಂಪನಿಯಾದರೂ ಬಹಳ ಲಾಭದಾಯಕವಾಗಿ ನಡೆಯುತ್ತಿತ್ತು. ಮುಕ್ತಾ ತನ್ನ ಎಲ್ಲಾ ಕೆಲಸಗಾರರನ್ನು ಚೆನ್ನಾಗಿ ನೋಡಿಕೊಂಡಿದ್ದಳು. ಅವರೂ ಸಹ ಇವಳ ಬಳಿ ಬಹಳ ಸಮಾಧಾನವಾಗಿ ಕೆಲಸ ಮಾಡುತಿದ್ದರು. ಗಂಡು ಮಕ್ಕಳು ಹಾಗು ಹೆಣ್ಣು ಮಕ್ಕಳು ಇಪ್ಪತೆರಡು ರಿಂದ ಮೂವತ್ತು ವರ್ಷದವರೆಗಿನ ಎಲ್ಲರೂ ಕೆಲಸಕ್ಕಿದ್ದರು. ವರ್ಷದ ಫೈನಾನ್ಸ್ ಕ್ಲೋಸಿಂಗ್ಸ್ ಮೀಟಿಂಗ್ ಅನ್ನು, ಎಲ್ಲರಿಗೂ ಬದಲಾವಣೆ ಸಿಗಲಿ ಎಂದು ಅವರನ್ನೆಲ್ಲ ಕರೆದುಕೊಂಡು ರೆಸಾರ್ಟ್ ಗೆ ಹೊರಟಿದ್ದಳು. ತನ್ನ ಸಿಬ್ಬಂದಿ ವರ್ಗದವರನ್ನು ಒಂದೇ ಕುಟುಂಬದವರಂತೆ ಎಲ್ಲರನ್ನು ನೋಡಿಕೊಂಡು ನಿಭಾಯಿಸುತಿದ್ದಳು.
ಸಂಜೆ 4:30 ರ ಸಮಯದ ಮೇಲೆ ಲಾಂಜ್ ನಲ್ಲಿ ಟೀ ಕುಡಿಯಲು ಮುಕ್ತ ಮೇಲೆ ಹೋದಳು. ಅವನೊಂದಿಗೆ ಮಾತನಾಡಲು ಇದೇ ಸಮಯವೆಂದು ಅವಳ ಗ್ರಹಿಕೆಯಾಗಿತ್ತು. ಅವಳು ಎಣಿಸಿದಂತೆ ಅವನು ಒಂದು ಮೂಲೆಯಲ್ಲಿ ಒಂದು ಛೇರ್ ಹಿಡಿದು ಟೇಬಲ್ ಬಳಿ ಟೀ ಕುಡಿಯುತ್ತಾ, ಮೊಬೈಲ್ ನೋಡಿಕೊಂಡು ಕುಳಿತಿದ್ದ. ಸೀದ ಅವನ ಬಳಿ ಹೋಗಿ ಮತ್ತೊಂದು ಛೇರ್ ಮೇಲೆ ಹೋಗಿ ಕುಳಿತಳು. ಅವನಿಗೆ ಇದು ಅನಿರೀಕ್ಷಿತವಾಗಿತ್ತು. ಗಾಬರಿಯಿಂದ ಮೇಡಂ ಅಂದ, ಸ್ವಲ್ಪ ಕೋಪವೂ ಇತ್ತು.
ಅವನ ಮುಖವನ್ನೇ ನೋಡುತ್ತ, ‘ಮುಂದಿನ ವಾರ ವೀಕೆಂಡ್ ಆಫೀಸಿನವರೆಲ್ಲ ರೆಸಾರ್ಟ್ ಹೊರಟಿದ್ದೇವೆ. ಆನ್ಯುಯಲ್ ಮೀಟಿಂಗ್ ಅಲ್ಲಿ ಇಟ್ಟುಕೊಂಡಿದೇನೆ. ಫೈನಾನ್ಸ್ ರಿಪೋರ್ಟ್ ಎಲ್ಲ ನೀನು ನೋಡ್ಕೋಬೇಕು’ ಎಂದು ಹೇಳಿ ಅವನ ಉತ್ತರಕ್ಕಾಗಿ ಕಾದಳು. ‘ನಿಮಗೆ ನಾನು ಕೆಲಸಕ್ಕೆ ಸೇರುವಾಗಲೇ ಹೇಳಿದ್ದೆ ಯಾವುದೇ ಸೋಷಿಯಲ್ ಆಕ್ಟಿವಿಟೀಸನಲ್ಲಿ ಭಾಗವಹಿಸುವುದಿಲ್ಲವೆಂದು, ನೆನಪಿದೆಯಾ ‘ ಎಂದ. ‘ಹೌದು, ನೆನಪಿದೆ. ಆದರೆ ಇದು ಯಾವುದೇ ಹೊರಗಿನ ಮೋಜಿನ ಕಾರ್ಯಕ್ರಮ ಅಲ್ಲ, ಕಂಪನಿಯ ಆಗುಹೋಗುಗಳ ಬಗ್ಗೆ ಒಂದು ಸಮೀಕ್ಷೆ ನಡೆಸಬೇಕು. ನಮ್ಮ ಕಂಪನಿ ಒಂದು ಕುಟುಂಬ ಇದ್ದ ಹಾಗಿದೆ. ಅದರಲ್ಲಿ ನೀನು ಒಬ್ಬ ಸದಸ್ಯ ಹಾಗಾಗಿ ಯು ಹ್ಯಾವ್ ಟು ಕಮ್ ವಿತ್ ಅಸ್’ ಎಂದು ಹೇಳಿ ತನಗಾಗಿ ತಂದಿಟ್ಟು ಟೀ ಕುಡಿಯುತ್ತಾ ಬೇರೆ ಕಡೆ ದೃಷ್ಟಿ ಹರಿಸಿ, ನೋಡಿ ಸಮೀರ ಎಲ್ಲರೂ ನಗ್ತಾ ನಗ್ತಾ ಮಾತನಾಡಿಕೊಂಡಿದ್ದಾರೆ. ಈ ಕಂಪನಿ ಕಟ್ಟಿದ ನನಗೆ ಎಷ್ಟು ಹೆಮ್ಮೆ ಆಗ್ತಿದೆ ಗೊತ್ತಾ, ಇದರಲ್ಲಿ ನೀವು ಸಹ ಭಾಗಿಯಾಗಬೇಕು ಎಂದು ಹೇಳಿ ಟೀ ಕುಡಿದು ಮುಗಿಸಿ ನಿಮ್ಮ ನಿರೀಕ್ಷೆಯಲ್ಲಿರುತ್ತೇವೆ ಎಂದು ಹೇಳಿ ಅಲ್ಲಿಂದ ಎದ್ದು ಹೋದಳು.
ಸಮೀರ ಸಿಡಿಮಿಡಿಗಳ್ಳುತ್ತಾ, ಅಸಹನೆಯಿಂದ ಎದ್ದು ಅಲ್ಲಿಂದ ಹೊರಟು, ‘ಲೀವಿಂಗ್ ಆಫೀಸ್ ಅರ್ಲಿ’ ಎಂದು ಮೇಲ್ ಹಾಕಿ ಹೊರಟು ಬಿಟ್ಟ. ಮುಕ್ತಾ ಮೇಲ್ ನೋಡಿ, ಯಾಕೆ ಈ ಹುಡುಗ ಈ ಥರ, ಕೆಲಸ ಮಾತ್ರ ಅಚ್ಚುಕಟ್ಟಾಗಿ ಮಾಡ್ತಾನೆ, ಯಾರ ಬಳಿಯೂ ಮಾತಿಲ್ಲ ಕತೆಯಿಲ್ಲ ತನ್ನ ಪಾಡಿಗೆ ತನ್ನ ಕೆಲಸ ಮುಗಿಸಿ ಹೊರಟು ಬಿಡುತ್ತಾನೆ. ಎರಡು ತಿಂಗಳಾಯಿತಷ್ಟೆ ಅವನು ಕಂಪನಿ ಸೇರಿ, ಅವನು ಮಾತನಾಡದಿದ್ದರೂ ಏನೋ ಭಾವ ಅವನ ಮೇಲೆ ಬೈಯಕ್ಕೂ ಮನಸು ಬರಲ್ಲ ಅವಳಿಗೆ ಅವನ ವರ್ತನೆ ಕಂಡು. ಏನೋ ವಿಚಿತ್ರ ಸ್ವಭಾವ ಅಂದುಕೊಂಡಳು.
ರೆಸಾರ್ಟ್ ಗೆ ಹೊರಡುವ ದಿನ ಬಂದೇ ಬಿಟ್ಟಿತು. ಹಿಂದಿನ ದಿನ ಎಲ್ಲಾ ತಯಾರಾಗುತ್ತಿತ್ತು. ಸಮೀರ ಬರುವುದು ಇನ್ನೂ ಖಚಿತವಾಗಿರಲಿಲ್ಲ. ಮುಕ್ತ ಮತ್ತೆ ಅವನನ್ನು ಏನೂ ಕೇಳಲಿಲ್ಲ. ಏನಾದರೂ ಮಾಡಿಕೊಳ್ಳಲಿ ಎಂದು ಅಂದುಕೊಂಡು ಕೂತಿದ್ದಳು. ‘ಸಬಿತಾ ಮೇಡಂ, ಮೇ ಐ ಕಮ್ ಇನ್’ ಎಂದು ಬಾಗಿಲಲ್ಲಿ ನಿಂತಳು. ‘ಕಮ್ ಇನ್ ‘ ಎಂದು ಮುಕ್ತಾ ಕರೆದಳು. ‘ಮೇಡಂ ಸಮೀರ ಈಸ್ ಕಮಿಂಗ್ ಟುಮಾರೋ ವಿದ್ ಅಸ್ ಎಂದು ಹೇಳಿ ನಕ್ಕಳು. ಓ ಈಸ್ ಇಟ್? ಸೋ ನೈಸ್ ಎಂದು ಸಂತಸಗೊಂಡಳು. ಮಾರನೆ ದಿನ ಬೆಳಿಗ್ಗೆ ಐದು ವರೆಗೆ ಎಲ್ಲರೂ ಆಫೀಸಿನ ಮುಂದೆ ಬಂದು ಇರಬೇಕೆಂದು ಹೇಳಿ ಅನೌನ್ಸ್ ಮಾಡಿಸಿದಳು. ಮೈಸೂರಿನಿಂದ ಸಕಲೇಶಪುರಕ್ಕೆ ಹೊರಟಿದ್ದರು.
ಹೇಳಿದ ಹಾಗೆ ಎಲ್ಲರೂ ನಿಗದಿತ ಸಮಯಕ್ಕೆ ಬಂದು ಸೇರಿದ್ದರು. ಸರಿಯಾಗಿ ಆರು ಗಂಟೆಗೆ ದೊಡ್ಡ ಟಿಟಿಯಲ್ಲಿ ಎಲ್ಲರೂ ಹೊರಟರು. ಮೈಸೂರಿನಿಂದ ಸಕ್ಲೇಶಪುರಕ್ಕೆ ಮೂರು ಗಂಟೆಗಳ ಪ್ರಯಾಣ ಇತ್ತು. ಟಿಟಿಯಲ್ಲಿ ಎಲ್ಲರೂ ಹಾಡು ಕುಣಿತ ಮಾಡಿಕೊಂಡು ಖುಷಿ ಖುಷಿಯಿಂದ ಇದ್ದರು. ಮುಂದಿನ ಸೀಟಿನಲ್ಲಿ ಕುಳಿತಿದ್ದ ಮುಕ್ತಾ ಹಿಂದೆ ತಿರುಗಿ ನೋಡಿದಳು. ಸಮೀರ ಇದರ ಯಾವುದೂ ಗಮನವಿಲ್ಲದೆ ತನ್ನದೇ ಲೋಕದಲ್ಲಿ ಕುಳಿತು ಮೊಬೈಲ್ ನಲ್ಲಿ ಗೇಮ್ ಆಡುತ್ತಾ ಕುಳಿತಿದ್ದ. ಮುಕ್ತಾ ಸುಮ್ಮನೆ ಕುಳಿತಳು. ಈ ಹುಡುಗನದು ವಿಚಿತ್ರ ಸ್ವಭಾವ, ಯಾರ ಬಳಿಯೂ ಮಾತನಾಡುವುದಿಲ್ಲ, ತಾನಾಯಿತು ತನ್ನ ಕೆಲಸವಾಯಿತು, ಕೆಲಸದಲ್ಲಿ ಮಾತ್ರ ಪರ್ಫೆಕ್ಟ್, ಸಧ್ಯ ಜೊತೆಗೆ ಬಂದನಲ್ಲಾ ಅಂದುಕೊಂಡಳು.
ಮೂರು ಗಂಟೆಗಳು ಕಳೆದದ್ದೇ ತಿಳಿಯಲಿಲ್ಲ, ತಲುಪಬೇಕಾದ ಜಾಗ ತಲುಪಿದರು. ಎಲ್ಲರೂ ಇಳಿದು ರೆಸಾರ್ಟ್ ಒಳಗೆ ಹೋಗಿ ಎಲ್ಲಾ ಫಾರ್ಮಾಲಿಟೀಸ್ ಮುಗಿಸಿಕೊಂಡು ಡೈನಿಂಗ್ ಹಾಲ್ ಸೇರಿದರು. ತಿಂಡಿ ಕಾಫಿ ಮುಗಿಸಿಕೊಂಡು ಅವರವರಿಗೆ ಅಲಾಟ್ ಮಾಡಿದ ರೂಂ ಸೇರಿದರು. ಸರಿಯಾಗಿ ಹನ್ನೊಂದುವರೆಗೆ ಎಲ್ಲರೂ ಬಂದು ಸೆಮಿನಾರ್ ಹಾಲ್ ನಲ್ಲಿ ಸೇರಬೇಕೆಂದು ಹೇಳಿ ಮುಕ್ತಾ ತನ್ನ ರೂಂ ಗೆ ಹೋದಳು. ಸಮೀರ ಮಾತ್ರ ಯಾರೊಬ್ಬರ ಜೊತೆಗೂ ರೂಂ ಶೇರ್ ಮಾಡಿಕೊಳ್ಳದೆ ತನಗೆ ಪ್ರತ್ಯೇಕ ರೂಂ ಇರಬೇಕೆಂದು ಕೇಳಿದ್ದರಿಂದ ಅವನು ತನ್ನ ರೂಂ ಗೆ ಹೋಗಿ ಸೇರಿಕೊಂಡನು. ಮಿಕ್ಕವರು ಇಬ್ಬರಿಗೆ ಉಳಿದುಕೊಳ್ಳಲು ನಿಗದಿಯಾಗಿದ್ದ ರೂಮುಗಳಿಗೆ ಹೆಣ್ಣು ಮಕ್ಕಳು, ಗಂಡು ಮಕ್ಕಳು ಬೇರೆ ಬೇರೆ ರೂಂ ಗಳಿಗೆ ಹೋದರು.
ಮುಕ್ತಾ ಫ್ರೆಶ್ ಅಪ್ ಆಗಿ ತನ್ನ ರೂಮಿನಿಂದ ಹೊರ ಬಂದು ಹುಲ್ಲು ಹಾಸಿನ ಮೇಲೆ ನಡೆಯುತ್ತಾ ದೊಡ್ಡ ಗೇಟ್ ದಾಟಿ ಹೊರಬಂದಳು. ಬಂದವಳೇ ಸಮೀರನನ್ನು ನೋಡಿ ಆಶ್ಚರ್ಯಗೊಂಡಳು. ಅರೆ ಎಷ್ಟು ಖುಷಿಲಿದಾನೆ, ಒಂದು ಕಂದು ಬಣ್ಣದ ಲ್ಯಾಬ್ರೆಡಾರ್ ನಾಯಿಮರಿ ಜೊತೆ ಆಡುತಿದ್ದಾನೆ. ಅವನು ಓಡಿದರೆ ಅವನ ಹಿಂದೆಯೇ ಓಡಿ ಬಾಲ ಆಡಿಸುತ್ತಾ ಅವನ ಕಾಲ ಬಳಿ ನುಸುಳಿಕೊಂಡು ಆಡುತ್ತಿದೆ. ಅವನ ಬಳಿ ಬಂದಳು, ಸಮೀರ ಇವಳನ್ನು ನೋಡಿ ಹಾಗೆ ನಿಂತುಬಿಟ್ಟ. ‘ಎಷ್ಟು ಮುದ್ದಾಗಿದೆ ಅಲ್ವಾ ನಾಯಿಮರಿ’ ಎಂದಳು, ‘ಹಾ ಹೌದು ಅದರ ಹೆಸರು ಜಿಪ್ಪಿ, ನನ್ನ ಹಾಗೆ ಅನಾಥ’ ಎಂದು ಹೇಳಿ ಅದನ್ನು ಮುದ್ದಿಸುತ್ತಾ ಕುಳಿತನು.
ವಾಟ್….ಅನಾಥನ…..ಇವಳಿಗೆ ಅವನ ಮೇಲೆ ಕನಿಕರ ಬಂದಿತು. ಆದರೆ ಅವನ ಗಂಭೀರ ನಡೆ ಇವಳು ಮಾತನಾಡದೆ ಸುಮ್ಮನಾದಳು. ಹನ್ನೊಂದು ಕಾಲು ಆಗಿತ್ತು, ಮುಕ್ತಾ ಸೆಮಿನಾರ್ ಹಾಲ್ ಗೆ ಹೋಗಿ ಅಂದಿನ ಕಾರ್ಯಕ್ರಮದ ಬಗ್ಗೆ ಅಕೌಂಟ್ಸ್ ಚೀಫ್ ಮೆನೇಜರ್ ಗುರುದತ್ತರ ಬಳಿ ಮಾತನಾಡುತ್ತಾ ಕುಳಿತಳು. ಬೆಳಿಗ್ಗೆ 11:30 ಕ್ಕೆ ಸರಿಯಾಗಿ ಎಲ್ಲರೂ ಸೆಮಿನಾರ್ ಹಾಲ್ ಗೆ ಬಂದರು. ಎರಡು ಗಂಟೆಗಳ ಕಾಲ ಆ ವರ್ಷದ ಬಜೆಟ್ ಮೀಟಿಂಗ್ ಮುಗಿಸಿದರು.
ಎಲ್ಲರೂ ಊಟ ಮುಗಿಸಿ ತಮ್ಮ ತಮ್ಮ ಕೊಠಡಿಗಳಿಗೆ ಹೋಗಿ ವಿಶ್ರಾಂತಿ ಪಡೆಯಲು ಹೊರಟರು. ಸಬಿತಾ ಮುಕ್ತಾ ಮಾತನಾಡುತ್ತಾ ಅಲ್ಲೇ ಲಾನ್ ಬಳಿ ಹೋಗಿ ಕುರ್ಚಿಯಲ್ಲಿ ಕುಳಿತು ಸಂಜೆಯ ಕಾರ್ಯಕ್ರಮದ ಬಗ್ಗೆ ಚರ್ಚೆ ಮಾಡುತಿದ್ದರು. ಜಿಪ್ಪಿ ಬಂದು ಇವರ ಬಳಿ ನಿಂತಿತು, ಸಬಿತಾ ಗೆ ನಾಯಿ ಎಂದರೆ ಭಯ. ಅವಳು ಎದ್ದು ನಿಂತು ಅದರಿಂದ ತಪ್ಪಿಸಿಕೊಳ್ಳಲು ಹೆಣಗಾಡುತಿದ್ದಳು. ಜಿಪ್ಪಿ ಅವಳ ಕಾಲ ಬಳಿಯೇ ಬಂದು ನಿಂತಿತು ಕಿರಚಿಕೊಂಡು ಓಡಿ ಹೋಗುವುದರಲ್ಲಿ ಎಡವಿ ಬೀಳಲು… ಸಮೀರ ಅವಳನ್ನು ಹಿಡಿದುಕೊಂಡನು. ಅವಳಿಗೆ ಹೋದ ಜೀವ ಬಂದಂತಾಗಿ, ಥ್ಯಾಂಕ್ಯೂ ಸಮೀರ್ ಐ ಯಾಮ್ ಅಫ್ರೈಡ್ ಆಫ್ ದ ಡಾಗ್ ಎಂದಳು. ‘ಸಬಿತಾ….ಡಾಗ್ಸ್ ಆರ್ ಮೋಸ್ಟ್ ಪ್ರಾಮ್ಟ್ ಅಂಡ್ ಫ್ರೆಂಡ್ಲಿ ದ್ಯಾನ್ ಹ್ಯೂಮನ್ಸ್’ ಎಂದು ಹೇಳಿ. ಕಮಾನ್ ಜಿಪ್ಪಿ ಎಂದು ಹೇಳಿ ಅದನ್ನು ಓಡಿಸಿಕೊಂಡು ಹೋದನು.
ಸಬೀತಾ ಗೆ ಒಂದು ಕ್ಷಣ ಅವನು ಅವಳನ್ನು ಹಿಡಿದುಕೊಂಡಿದ್ದು ನೆನೆದು ರೋಮಾಂಚನಗೊಂಡಳು, ಅಬ್ಬಾ ಸಧ್ಯ ಬಿದ್ದಿದ್ದರೆ ಕೈಯೋ ಕಾಲೋ ಮುರಿದು ಹೋಗುತಿತ್ತು ಎಂದು ನಿಧಾನವಾಗಿ ಮುಕ್ತ ಇರುವ ಕಡೆ ಬಂದಳು.
‘ಸಬಿತಾ… ಸಮೀರ್ ನ ಗಮನಿಸಿದೆಯಾ? ಎಷ್ಟು ಖುಷಿಯಿಂದ ಇದಾನೆ ಅಲ್ವಾ? ಯಾರಿಗೆ ಏನು ಕಷ್ಟವೋ ಗೊತ್ತಾಗಲ್ಲ ಅಲ್ವಾ?’ ಎಂದು ಹೇಳಿ, ನಡಿ ರೂಂ ಗೆ ಹೋಗಿ ಸ್ವಲ್ಪ ರೆಸ್ಟ್ ಮಾಡು ನಾನು ಇಲ್ಲೇ ಕೂತಿರ್ತೀನಿ ಎಂದು ಹೇಳಿದಳು. ಸಬಿತಾ ಗೆ ನಿಜವಾಗಿಯೂ ಆಯಾಸವಾಗಿತ್ತು, ಸರಿ ಮೇಡಂ ಎಂದು ಹೊರಟಳು. ದೂರದಲ್ಲಿ ಸಮೀರ ರೆಸಾರ್ಟ್ ಸಿಬ್ಬಂದಿಯವರೊಡನೆ ಮಾತನಾಡುತ್ತಾ ನಿಂತಿದ್ದ, ಜಿಪ್ಪಿ ಅವನ ಕಾಲ ಬಳಿಯೇ ಓಡಾಡುತಿತ್ತು.
ಮುಕ್ತಾ ಎದ್ದು ಸಮೀರನ ಬಳಿ ಬಂದಳು, ಸಮೀರ ಇವಳನ್ನು ನೋಡಿ ಮುಗುಳ್ನಕ್ಕನು. ಏನು ಸಮೀರ ಜಿಪ್ಪಿ ಜೊತೆ ಇಷ್ಟೊಂದು ಫ್ರೆಂಡ್ ಆಗಿದೀಯ ಎಂದಾಗ ಸಮೀರನ ಮುಖ ಚರ್ಯೆ ಬದಲಾಯಿತು, ಕೋಪ, ತಾತ್ಸಾರ, ಜಿಗುಪ್ಸೆ, ಅವಮಾನ ಎಲ್ಲಾ ಅವನ ಮುಖಭಾವದಲ್ಲಿ ಕಾಣಿಸಿತು. ನನ್ನ ಹಾಗೆ ಇದೂ ಅನಾಥ ಹಾಗಾಗಿ ಅದರ ಮೇಲೆ ಪ್ರೀತಿ ಎಂದು ಹೇಳಿ ಅಲ್ಲೇ ಇದ್ದ ಒಂದು ಕುರ್ಚಿ ಮೇಲೆ ಕುಳಿತ, ಮುಕ್ತಳೂ ಸಹ ಮತ್ತೊಂದು ಕುರ್ಚಿ ಎಳೆದುಕೊಂಡು ಅವನೆದುರಿಗೆ ಕುಳಿತಳು. ನಾನೂ…ಅನಾಥಳು ಸಮೀರ… ಎಂದಾಗ ಅವನು ಆಶ್ಚರ್ಯದಿಂದ ಅವಳೆಡೆಗೆ ನೋಡಿ, ಜೋರಾಗಿ ನಕ್ಕುಬಿಟ್ಟು…ಇಷ್ಟು ದೊಡ್ಡ ಕಂಪನಿಯ ಸಿಈಓ ನೀವು ಅದು ಹೇಗೆ ಅನಾಥರಾಗ್ತೀರ ಎಂದು ಹೇಳಿ ನಗುತ್ತಲೇ ಇದ್ದನು. ಮುಕ್ತಾ ಕೋಪದಿಂದ ಶಟ್ ಅಪ್ ಎಂದು ಹೇಳಿ….ಅನಾಥಳಾದ ಮಾತ್ರಕ್ಕೆ ನಾನು ಕಂಪನಿಯ ಸಿಈಓ ಆಗಬಾರದೆಂದು ಯಾರು ಹೇಳಿದಾರೆ ಎಂದು ಹೇಳಿ ಅವನ ಮುಖವನ್ನು ನೋಡುತ್ತಾ ಕುಳಿತಳು. ಅವನಿಗೆ ಏನೂ ಮಾತನಾಡಲು ತೋಚಲಿಲ್ಲ. ಸುಮ್ಮನೆ ನೆಲ ನೋಡುತ್ತಾ ಕುಳಿತಿದ್ದ ಅವನನ್ನು ಮುಕ್ತಳೆ ಮಾತು ಮುಂದುವರಿಸಿದಳು. ನನಗೆ ತಂದೆ ತಾಯಿ ಇಬ್ಬರೂ ಇಲ್ಲ ನೆಂಟರಿಷ್ಟರು ಯಾರೂ ಗೊತ್ತಿಲ್ಲ, ಅಪ್ಪ ಅಮ್ಮ ಲವ್ ಮ್ಯಾರೇಜ್ ಆಗಿದ್ದರು. ನನಗೆ ಐದು ವರ್ಷವಿದ್ದಾಗ ರೈಲು ಅಪಘಾತದಲ್ಲಿ ಸತ್ತು ಹೋದರು ಹಿಂದೆ ಮುಂದೆ ಯಾರೂ ಗೊತ್ತಿಲ್ಲ ನನಗೆ. ಮನೆಯ ಅಕ್ಕ ಪಕ್ಕದವರು ಸೇರಿ ಆರ್ಫನೇಜ್ ಹೋಮ್ ಗೆ ಸೇರಿಸಿದರು. ದೇವರ ದಯೆ ನಾನು ಕಷ್ಟಪಟ್ಟು ಓದಿ ಬರೆದೆ. ಡಿಗ್ರಿ ಮುಗಿತು. ಇನ್ನೂ ಓದಬೇಕು ಅಂತ ಛಲ ಇತ್ತು ಮನಸಿನಲ್ಲಿ, ಬೆಳಿಗ್ಗೆ ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿ ರಾತ್ರಿ ಕಾಲೇಜಿನಲ್ಲಿ ಮಾಸ್ಟರ್ಸ್ ಮಾಡಿದೆ.
ಬ್ಯಾಂಕ್ ನಿಂದ ಸಾಲ ತೆಗೆದುಕೊಂಡು ಧೈರ್ಯ ಮಾಡಿ ಕಂಪನಿ ಸ್ಟಾರ್ಟ್ ಮಾಡಿದೆ. ಈಗ ಈ ಕಂಪನಿಯ ಸಿಇಓ ಆಗಿದೀನಿ ಎಂದು ಹೇಳಿ ಅವನ ಮುಖ ನೋಡುತ್ತಾ ಕುಳಿತಳು. ಸಮೀರ ಓ ಸಾರಿ ಸಾರಿ ಇಷ್ಟೆಲ್ಲ ಗೊತ್ತಿಲ್ಲ ನನಗೆ ಎನ್ನುತಿದ್ದಂತೆ ನಿನಗಲ್ಲ ಇಲ್ಲಿ ಮತ್ಯಾರಿಗೂ ಗೊತ್ತಿಲ್ಲ ನನ್ನ ಬಗ್ಗೆ, ಅದೇನೋ ಗೊತ್ತಿಲ್ಲ ನಿನ್ನ ನೋಡುತಿದ್ದ ಹಾಗೆ ನನಗೆ ಒಡಹುಟ್ಟಿದವನು ಅನಿಸಿಬಿಟ್ಟಿತು, ಯಾಕಂದರೆ ನನಗೆ ಯಾರೂ ಇಲ್ವಲ್ಲಾ ಒಡಹುಟ್ಟಿದವರು ಎಂದು ಹೇಳಿ ಕಣ್ಣೀರು ಒರೆಸಿಕೊಂಡಳು. ಮದುವೆ ಆಗ್ಲಿಲ್ವಾ ಅಂತ ಸಮೀರ ಕೇಳಿದ ಆಗಬೇಕಿತ್ತು ಪ್ರೀತಿ ಪ್ರೇಮ ಅಂತ ನಾನೂ ಎಡವಿದೆ, ಒಬ್ಬ ಕೈಕೊಟ್ಟ, ಥೂ ಇಷ್ಟೇ ಜೀವನ ಇವನಲ್ಲದಿದ್ದರೆ ಮತ್ತೊಬ್ಬ ಅಂತ ಕಟ್ಕೊಂಡು ಹೋದ್ರೆ ನನ್ನ ಜೀವನಕ್ಕೆ ಅರ್ಥ ಇಲ್ಲ ಅನ್ನುಸ್ತು ಹಾಗಾಗಿ ಮದುವೆ ಮಾಡಿಕೊಳ್ಳಲಿಲ್ಲ ಎಂದು ಹೇಳಿ, ಹಮ್ ನೀ ಹೇಳು ನಿನ್ನ ಕಥೆಯನ್ನು ಅಂತ ಹೇಳಿದಳು.
ನನ್ನ ಕಥೆ ಕೇಳಬೇಕೆಂದು ನಿಮ್ಮ ಕಥೆ ಹೇಳಿದಿರಾ ಅಂತ ಮತ್ತೆ ಜೋರಾಗಿ ನಕ್ಕ ಸಮೀರ, ಮುಕ್ತಾ ಗೆ ಕೋಪ ಬಂದು. ಬೇಡ ಹೇಳಬೇಡ ಜಸ್ಟ್ ಕನ್ಸರ್ನ್ ಇಂದ ಕೇಳ್ದೆ ಅಷ್ಟೆ. ಹೇಳುದ್ರು ಹೇಳದಿದ್ರೂ ಏನೂ ಬದಲಾಗಲ್ಲ ನನಗಾಗಿ ಕೊಟ್ಟ ನಿನ್ನ ಅಮೂಲ್ಯ ಟೈಮ್ ಗೆ ತುಂಬಾ ಥ್ಯಾಂಕ್ಸ್ ಎಂದು ಹೇಳಿ ಹೊರಡಲು ಎದ್ದು ನಿಂತಳು. ಓ…ಓಕೆ ಓಕೆ ಸಾರಿ ರೀ… ಕೂತ್ಕೊಳಿ ಕೂತ್ಕೊಳಿ ಎಂದು ಅವಳ ಕೈ ಹಿಡಿದು ಕೂರಿಸಿದ.
ನಂಗೆ ಅಪ್ಪ ಯಾರು ಅಮ್ಮ ಯಾರೂ ಅಂತ ಗೊತ್ತೇ ಇಲ್ಲ, ಅವರ ದೈಹಿಕ ಸುಖಕ್ಕೆ ನಾನು ಬಲಿಯಾದೆ….ಥೂ ಇಂಥವರಿಗೆ ಏನು ಹೇಳಬೇಕೋ, ಯಾವಳೋ ಯಾವನಿಗೋ ತೀಟೆ ತೀರಿಸಿಕೊಂಡು ಬೇಡದ ಪಿಂಡವ ಕತ್ತರಿಸಿ ಹಾಕುತ್ತಾರೆ ಇಲ್ಲಾ ಕಸದ ತೊಟ್ಟಿಯಲ್ಲೋ, ಚರಂಡಿಯಲ್ಲೋ ಎಸೆದು ಹೋಗುತ್ತಾರೆ. ಹಾಗೆ ನಾನೂ ಸಹ ಕಸದ ತೊಟ್ಟಿಯಲ್ಲಿ ಸಿಕ್ಕಿದೆ ಅಂತ ನಾನು ಬೆಳೆದ ಅನಾಥಾಶ್ರಮದಲ್ಲಿ ಹೇಳುತಿದ್ದರು.
ಸಮಾಜದ ಕಣ್ಣಿಗೆ ನಾನು ಅನಾಥ ಆದರೆ ಹಾದರದ ಶೇಷ ಎಂದು ನಾನು ಬೆಳೆದು ದೊಡ್ಡವನಾದಾಗಲೇ ಗೊತ್ತಾಗಿದ್ದು. ಅನಾಥಾಶ್ರಮದಲ್ಲಿ ವರ್ಷಕ್ಕೊಮ್ಮೆ ಬರುವ ಶ್ರೀಮಂತರು ನಮ್ಮನ್ನು ಹರಾಜು ಹಾಕಿ ಕಾಂಟ್ರಾಕ್ಟ್ ತಗೊಳುವಂತೆ ಒಬ್ಬೊಬ್ಬರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ವರ್ಷ ಪೂರ್ತಿ ಓದು ಬರಹದ ಖರ್ಚು ಅವರದೇ. ಅದೇನು ಪುಣ್ಯವೋ ಗೊತ್ತಿಲ್ಲ ನನಗೆ ತಕ್ಕ ಮಟ್ಟಿಗೆ ಬುದ್ದಿ ಇದ್ದು ಓದುವದರಲ್ಲಿ ಮುಂದೆ ಇದ್ದು ನನ್ನ ಓದಿಸುತಿದ್ದವರಿಗೆ ಯಾವತ್ತೂ ನಿರಾಶೆ ಮಾಡಲಿಲ್ಲ. ಥ್ರೂ ಔಟ್ ಡಿಸ್ಟಿಂಕ್ಷನ್ ನಲ್ಲಿ ಪಾಸಾದೆ. ನಿಮ್ಮ ಕಂಪನಿಯಲ್ಲಿ ಕೆಲಸ ಸಿಕ್ಕಿತು.
ಅವನ ಮಾತುಗಳನ್ನು ಕೇಳುತಿದ್ದ ಮುಕ್ತಾ ನಿಟ್ಟುಸಿರು ಬಿಟ್ಟು ಕುರ್ಚಿಗೆ ಒರಗಿ ಕಣ್ಮುಚ್ಚಿದಳು. ಮನದ ಮೂಲೆಯಲ್ಲಿ ಯಾಕೋ ಸಮೀರನ ಮೇಲೆ ಅನುಕಂಪ ಮೂಡಿತು. ಕಣ್ತೆರೆದು ಅವನ ಕಡೆ ನೋಡಿದಾಗ ಅವನ ಕಣ್ಣಂಚಿನಲ್ಲಿ ನೀರು ಕಂಡು ಕರುಣೆ ಮೂಡಿತು. ಸಮೀರಾ ಸಾರಿ ನಾನು ನಿನ್ನ ಜೀವನದಲ್ಲಿ ಬಚ್ಚಿಟ್ಟಿದ್ದ ಸಂಗತಿಗಳನ್ನು ಬಿಚ್ಚಿಡಿಸಿದೆ, ನೀನೊಬ್ಬನೇ ಅನಾಥನಲ್ಲ, ನಿನ್ನ ಜೊತೆ ನಾನೂ, ಹಾಗು ಕೆಲವು ಎಂಪ್ಲಾಯಿಸ್ ಸಹ ಅನಾಥರು ಇದಾರೆ ಎಂದಾಗ ಅವಳನ್ನು ಆಶ್ಚರ್ಯದಿಂದ ನೋಡಿದ.
ಹೌದು ಎನ್ನುತಿದ್ದಂತೆ. ಅವಳಿಗೆ ಫೋನ್ ಕಾಲ್ ಬಂತು, ಜಸ್ಟ್ ಎ ಮಿನಟ್ ಎಂದು ಸಮೀರನಿಗೆ ಸಂಜ್ಞೆ ಮಾಡಿ ಅವಳ ರೂಂ ಕಡೆ ಹೊರಟಳು.
ಸಮೀರ ಒಂದು ನಿಟ್ಟುಸಿರು ಬಿಟ್ಟು ಕೈಗಳನ್ನು ಕುತ್ತಿಗೆಯ ಹಿಂದಕ್ಕೆ ಕಟ್ಟಿ ಆಕಾಶದೆಡೆಗೆ ನೋಡುತ್ತಾ ಕಣ್ಮುಚ್ಚಿ. ಪ್ರಪಂಚ ಎಷ್ಟು ವಿಚಿತ್ರ ಅಲ್ವಾ? ನಾವೇನೋ ಅನ್ಕೊಂಡಿರ್ತೀವಿ, ಅದು ಬೇರೆ ರೀತಿಯದೇ ಆಗಿರುತ್ತದೆ ಎಂದು ಮತ್ತೊಮ್ಮೆ ನಿಟ್ಟುಸಿರು ಬಿಟ್ಟನು. ಎಲ್ಲಿತ್ತೋ ಜಿಪ್ಪಿ ಓಡಿ ಬಂದು ಅವನ ಕಾಲ ಬಳಿ ಬಂದು ಕುಂಯ್ ಕುಂಯ್ ಎಂದಾಗಲೇ ಅವನು ವಾಸ್ತವಕ್ಕೆ ಬಂದಿದ್ದು.
ಕೂತಿದ್ದವನು ಮೇಲೆದ್ದು ತನಗಾಗಿ ನಿಗದಿ ಪಡಿಸಿದ ರೂಂ ಗೆ ತೆರಳಲು ಅನುವಾದಾಗ ಜಿಪ್ಪಿ ಅವನ ಕಾಲ ಬಳಿಯೇ ನುಸುಳಿ ಆಡುವುದ ಗಮನಿಸಿ, ಏಯ್ ಜಿಪ್ಪಿ. ನಿದ್ದೆ ಬರ್ತಿದೆ ಆಮೇಲೆ ಸಿಗ್ತೀನಿ ಎಂದು ಹೇಳಿ ಅದರ ತಲೆ ನೇವರಿಸಿ ತಿರುಗುವಿದಕ್ಕೂ, ಸಬಿತಾ ಕಾಫಿ ಕಪ್ ಹಿಡಿದು ಬರುವುದಕ್ಕೂ ಸರಿ ಹೋಯಿತು.
ಅವನು ಡಿಕ್ಕಿ ಹೊಡೆದ ಕಾಫಿ ಅವನ ಶರ್ಟ್ ಮೇಲೆ ಬಿತ್ತು. ‘ಯೂ ನೆಗ್ಲಿಜೆಂಟ್, ಕಾಂಟ್ ಯೂ ಸೀ’… ಎಂದನು ಸಮೀರ. ಸಮೀರ್ ನೀವೆ ಅಡ್ಡ ಬಂದಿದ್ದು ಎಂದು ಸಬಿತಾ ಅನ್ನೋ ಅಷ್ಟರಲ್ಲಿ ‘ಕಣ್ಣು ನೆತ್ತಿ ಮೇಲಿದ್ರೆ ಹೀಗೆ ಆಗೋದು’ ಎಂದು ಅವಳನ್ನು ಒರಟಾಗಿ ಬೈದು ಧಡ ಧಡ ಹೆಜ್ಜೆ ಹಾಕುತ್ತಾ ಹೋದನು ಸಮೀರ.
ಸಬಿತಾ ಪೆಚ್ಚು ಮೋರೆ ಹಾಕಿಕೊಂಡು ಕಣ್ಗಳಲ್ಲಿ ನೀರು ತುಂಬಿಕೊಂಡು ಅವಮಾನದಿಂದ ತಲೆ ತಗ್ಗಿಸಿ ನಿಂತಳು. ಸಮೀರನ ಕೂಗಾಟಕ್ಕೆ ಎಲ್ಲರೂ ಇವಳ ಬಳಿ ಬಂದು ಸಮಾಧಾನ ಮಾಡಲು ಮುಂದಾದರು.
ಸಬಿತಾ ಅಳುತ್ತಾ ತನ್ನ ಕೋಣೆಗೆ ಹೋದಳು. ಅವಳ ಜೊತೆಯಲ್ಲಿ ರೂಂ ಶೇರ್ ಮಾಡಿದ್ದ ಸ್ವಾತಿ, ಗಾಬರಿಯಾಗಿ ಅವಳ ಕೈ ಹಿಡಿದು ಏನಾಯಿತು ಎಂದು ಕೇಳಿದಳು. ನಡೆದದ್ದೆಲ್ಲ ಹೇಳಿದ ಸಬಿತಾ ಬಿಕ್ಕುತ್ತಾ ಕುಳಿತಳು. ‘ಸ್ವಾತಿ, ಕೋಪದಿಂದ ಇವನಿಗೆ ಯಾರೂ ಹೇಳುವವರು ಕೇಳುವವರು ಇಲ್ಲವೇ. ಈ ಮುಕ್ತ ಮೇಡಂ ಇವನನ್ನು ಕೆಲಸದಿಂದ ಡಿಸ್ಮಿಸ್ ಮಾಡೋದು ಬಿಟ್ಟು ಯಾಕೆ ಆಫೀಸಲ್ಲಿ ಇಟ್ಕೊಂಡಿದಾರೋ’… ಎಂದು ಅವಳನ್ನು ಸಮಾಧಾನ ಪಡಿಸಿದಳು.
ವಿಷಯ ತಿಳಿದ ಮುಕ್ತಾ ಸಬಿತಾ ಇದ್ದ ರೂಮಿಗೆ ಬಂದು ಅವಳನ್ನು ಸಮಾಧಾನ ಪಡಿಸಿದಳು. ‘ಸಬಿತಾ, ಅಳಬೇಡ ಏನೋ ಬ್ಯಾಡ್ ಟೈಮ್, ಸುಮ್ಮನಿರು’ ಎಂದು ಸಮಾಧಾನ ಪಡಿಸಿದಳು.
ಸಬಿತಾ ಕಣ್ಣೊರಸಿಕೊಂಡು, ಇಷ್ಟು ದಿನ ತನ್ನ ಚಿಕ್ಕಮ್ಮ ಅನ್ನುತಿದ್ದಳು. ಇಂದು ಇವನು ಅಂದ, ನನ್ನ ಹಣೆ ಬರಹನೇ ಇಷ್ಟು ಬರೀ ಅನ್ನಿಸಿಕೊಳ್ಳುವುದೇ ಜೀವನ ಎಂದು ಕರ್ಚೀಫ್ ನಿಂದ ಕಣ್ಣೊರೆಸಿಕೊಂಡಳು.
ಮುಕ್ತಾ ಏನು ಮಾತಾಡಲೂ ತೋಚದೆ ಸುಮ್ಮನೆ ಕುಳಿತುಬಿಟ್ಟಳು.
ಇತ್ತ ಸಮೀರ ರೂಮಿಗೆ ಬಂದು ಸೀದ ಬಾತ್ ರೂಂ ಗೆ ಹೋಗಿ, ಸ್ನಾನ ಮಾಡಿಕೊಂಡು ಹೊರ ಬಂದನು. ಅವನ ಕೋಪವಿನ್ನೂ ಕಡಿಮೆಯಾಗಿರಲಿಲ್ಲ. ಜೋರಾಗಿ ಫ್ಯಾನ್ ಹಾಕಿ ಹಾಸಿಗೆ ಮೇಲೆ ಕುಳಿತನು. ಮನಸು ಸ್ವಲ್ಪ ಹದಕ್ಕೆ ಬಂದ ಮೇಲೆ, ಛೆ ನಂದೇ ತಪ್ಪಿತ್ತು ಸಬಿತಾ ಗೆ ಬೈದುಬಿಟ್ಟೆ, ಪಾಪ ಅವಳು ಎಷ್ಟು ಭಯದಿಂದ ನಿಂತಿದ್ದಳು. ನನಗೆ ಭಾವನೆಗಳೇ ಇಲ್ಲವೇ? ಅನಾಥ ಅನ್ನೋ ಪ್ರಜ್ಞೆಯಿಂದ ಬೇರೆಯವರ ಮೇಲೆ ನನ್ನ ಕೋಪವನ್ನು ತೀರಿಸಿಕೊಳ್ಳುತ್ತಿದ್ದೀನಾ? ನಾನಿಷ್ಟು ದುರ್ಬಲನಾ? ಎಂದೆಲ್ಲಾ ಯೋಚಿಸಿ ತಾನು ಅಂದಿದ್ದಕ್ಕೆ ಪಶ್ಚಾತ್ತಾಪ ಪಟ್ಟುಕೊಳ್ಳುತ್ತಾ ಕುಳಿತುಬಿಟ್ಟ.
ಮುಕ್ತಾಗಂತು ಅವನ ಕಂಡು ಎರಡು ಬಾರಿಸಬೇಕು ಎನಿಸಿತು. ಸಬಿತಾಳ ರೂಮಿನಿಂದ ಸೆಮಿನಾರ್ ಹಾಲಿಗೆ ಬಂದು ಕುಳಿತಳು. ತಲೆ ಸಣ್ಣದಾಗಿ ನೋಯುತಿತ್ತು.ಮುಸ್ಸಂಜೆಯಾಗುತಿತ್ತು. ಏಳೂವರೆಗೆ ಮತ್ತೊಂದು ಮೀಟಿಂಗ್ ಮುಗಿಸಿ ಡಿನ್ನರ್ ಮುಗಿಸಿ ರೆಸ್ಟ್ ಮಾಡುವ ಕಾರ್ಯಕ್ರಮವಿತ್ತು. ಬೆಳಿಗ್ಗೆ ಎಂಟಕ್ಕೆ ರೆಡಿಯಾಗಿ ರೆಸಾರ್ಟ್ ನಿಂದ ಹೊರಟು ಊರು ತಲುಪುವುದೆಂದು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಮಧ್ಯೆ ಸಮೀರನ ನಡತೆ ಕಂಡು ನಿಜವಾಗಿಯೂ ಬೇಸರ ತರಿಸಿತ್ತು. ಅವನನ್ನು ವಾರ್ನ್ ಮಾಡಲೇ ಅಥವಾ ಇಂತಹ ಕೋಪಿಷ್ಟನ ಜೊತೆ ಕೆಲಸ ಮಾಡಿಕೊಂಡಿರಬೇಕೆ ಎಂದು ಯೋಚಿಸುತ್ತಿರುವಾಗಲೇ ಸಮೀರ ಬಂದು ಮುಕ್ತಳ ಬಳಿ ಬಂದು ಕುಳಿತ. ಮುಕ್ತ ಅವನನ್ನು ದುರುಗುಟ್ಟಿ ನೋಡಿದಳು. ಅವಳು ಇಷ್ಟು ಕೋಪದಿಂದ ಇರುವುದು ಈ ಮೊದಲು ಅವನು ನೋಡೇ ಇರಲಿಲ್ಲ, ಅವಳ ನೋಟಕ್ಕೆ ತತ್ತರಿಸಿ ಹೋದ ಸಮೀರ.
‘ಸಾರಿ, ಐಯಾಮ್ ರಿಯಲಿ ಸಾರಿ, ಪ್ಲೀಸ್ ಫರ್ಗೀವ್ ಮಿ’ ಎಂದು ಕೈ ಮುಗಿದು ಬಿಕ್ಕಿ ಬಿಕ್ಕಿ ಅಳಲು ಶುರುಮಾಡಿದ. ಮುಕ್ತಳೂ ಸಹ ಅವನನ್ನು ಸಮಾಧಾನ ಮಾಡಲು ಹೋಗಲಿಲ್ಲ, ಸುಮ್ಮನೆ ಕುಳಿತಿದ್ದಳು. ‘ಇದ್ದಕ್ಕಿದ್ದಂತೆ ಅವಳ ಕಾಲು ಮೇಲೆ ಬಿದ್ದು ದಯವಿಟ್ಟು ನನ್ನ ಕ್ಷಮಿಸಿ’… ಎಂದು ಕೇಳಿದ, ಮುಕ್ತಳಿಗೆ ಏನನಿಸಿತೋ ಅವನ ತಲೆಯ ಮೇಲೆ ಕೈ ಇಟ್ಟು ತಲೆ ಕೂದಲು ಸವರುತ್ತಾ ಏಳು ಸಮೀರ ಎಂದು ಅವನನ್ನು ಪಕ್ಕದಲ್ಲಿ ಕೂರಿಸಿದಳು.
ಸಬಿತಾ ಬಳಿ ಸಾರಿ ಕೇಳು, ಅವಳೂ ತುಂಬಾ ಬೇಸರದಿಂದ ಇದಾಳೆ ಎಂದು ಹೇಳಿದಳು. ಸರಿ ಎಂದು ಎದ್ದು ಹೊರಡಲು, ತಾಳು ನಾನು ಬರ್ತೀನಿ ಎಂದು ಅವನ ಜೊತೆ ಸಬಿತಾ ಇದ್ದ ಕೋಣೆಗೆ ಬಂದಳು. ಸಬೀತ ಅತ್ತೂ ಅತ್ತೂ ಕಣ್ಣು ಕೆಂಪಗಾಗಿತ್ತು. ಸಮೀರನಿಗೆ ಮೊದಲ ಬಾರಿಗೆ ಕರುಣೆ ಉಕ್ಕಿ ಬಂತು. ‘ಸಾರಿ ಸಬೀತ, ಐ ಯಾಮ್ ರಿಯಲಿ ಸಾರಿ, ನಂಗೆ ತುಂಬಾ ಕೋಪ ಇದೆ. ಖಂಡಿತ ಬದಲಾಯಿಸಿ ಕೊಳ್ಳುತ್ತೇನೆ. ನೀವು ಬೇಜಾರಾಗಬೇಡಿ ಪ್ಲೀಸ್’ ಎಂದು ಬೇಡಿಕೊಳ್ಳುವ ರೀತಿಯಲ್ಲಿ ಅವಳ ಕೈ ಹಿಡಿದು ಕೊಂಡ.
ಇಬ್ಬರಿಗೂ ಮೊದಲ ಬಾರಿಗೆ ಸ್ಪರ್ಷದ ಅನುಭವ ಆಯಿತು. ಇಬ್ಬರೂ ಕೈ ಕೈ ಹಿಡಿದು ಬಹಳ ಹೊತ್ತು ಒಬ್ಬರಿಗೊಬ್ಬರು ನೋಡುತ್ತಾ ನಿಂತರು. ಇದನ್ನೆಲ್ಲ ಗಮನಿಸುತ್ತಿದ್ದ ಮುಕ್ತ ಕೆಮ್ಮಿದಂತೆ ನಟಿಸಿದಳು. ಇಬ್ಬರೂ ದೂರಾ ನಿಂತರು. ಸಬಿತಾಳಿಗೆ ಒಂದು ರೀತಿ ನಾಚಿಕೆ, ಸಂಕೋಚ, ಮುಜುಗರ ಒಟ್ಟಿಗೆ ಆಗಿ ಏನೂ ತೋಚದಂತೆ ನಿಂತಳು. ಸಮೀರನೂ ಸಹ ಏನೂ ತಿಳಿಯದೆ ನೆಲವನ್ನು ನೋಡುತ್ತಾ ನಿಂತ. ಮುಕ್ತಳೇ ಮಾತನಾಡಿ, ಹೂಂ ಸರಿ ಸರಿ, ರಾಜಿ ಆದ್ರಲ್ಲ ಬನ್ನಿ ಮೀಟಿಂಗ್ ಮುಗಿಸುವ ಎಂದು ಹೊರ ನಡೆದಳು.
ಆ ವರ್ಷದ ಹಣಕಾಸಿನ ಬಗ್ಗೆ ಹಾಗು ಹೊಸ ಯೋಜನೆಗಳ ಬಗ್ಗೆ ಅಡ್ವೋಕೇಟ್ ನಂದಕುಮಾರ್ ಹಾಗು ಮುಕ್ತ ಸುಮಾರು ಒಂದೂವರೆ ಗಂಟೆ ಮಾತನಾಡಿದರು. ಸರಿಯಾಗಿ 8:15 ರ ಸಮಯಕ್ಕೆ ಕಾರ್ಯಕ್ರಮ ಮುಗಿಸಿದರು.
ಎಲ್ಲರೂ ಊಟಕ್ಕಾಗಿ ಡೈನಿಂಗ್ ಹಾಲಿಗೆ ಬಂದು ಊಟ ಶುರು ಮಾಡಿದರು. ಸಮೀರ ಒಬ್ಬನೇ ಕುಳಿತು ಊಟ ಮಾಡುತಿದ್ದ, ಸಬಿತಾ ಅವನ ಬಳಿ ಬಂದು ‘ಕ್ಯಾನ್ ಐ ಶೇರ್ ಯುವರ್ ಟೇಬಲ್’ ಎಂದು ಕೇಳಿದಾಗ, ‘ಬೈ ಆಲ್ ಮೀನ್ಸ್, ಪ್ಲೀಸ್ ಕೂತ್ಕೊಳ್ಳಿ’… ಎಂದು ಎದುರಿಗಿದ್ದ ಕುರ್ಚಿಯ ಕಡೆ ಕೈ ತೋರಿಸಿದ. ‘ಥ್ಯಾಂಕ್ಯೂ’ ಎಂದು ಸಬಿತಾ ಅವನ ಎದುರಿಗೆ ಕುಳಿತು ಊಟ ಮಾಡತೊಡಗಿದಳು.
ಇಬ್ಬರೂ ಏನೋ ಮಾತನಾಡಲು ಹೊರಟು, ಇಬ್ಬರ ಕಣ್ಗಳು ಸಂಧಿಸಿತು. ಇಬ್ಬರಿಗೂ ತುಸು ಸಂಕೋಚವಾಗಿ ತಲೆ ತಗ್ಗಿಸಿ ಊಟ ಮುಂದುವರಿಸಿದರು. ಇದನ್ನೆಲ್ಲ ಮುಕ್ತ ದೂರದಲ್ಲೇ ಗಮನಿಸುತಿದ್ದು ಅವಳ ತಲೆಯಲ್ಲಿ ಹೊಸ ಯೋಚನೆ ಮೂಡಿತು. ಸಧ್ಯಕ್ಕೇ ಕಾರ್ಯರೂಪಕ್ಕೆ ತರಬೇಕು ಎಂದು ತೀರ್ಮಾನಿಸಿದಳು.
ಮಾರನೆ ದಿನ ಬೆಳಿಗ್ಗೆ 8:30 ಕ್ಕೆ ಕಾಫಿ, ತಿಂಡಿ ಮುಗಿಸಿಕೊಂಡು ಆಫೀಸ್ ಟೀಂ ವಾಪಸು ಊರಿನ ಕಡೆಗೆ ಹೊರಟಿತು. ಮಧ್ಯಾಹ್ನ 3 ಗಂಟೆಗೆ ನಿಗದಿ ಪಡಿಸಿದಂತೆ ಆಫೀಸಿನ ಮುಂದೆ ಟಿಟಿ ಬಂದು ನಿಂತಿತು. ಎಲ್ಲರೂ ಇಳಿದು ಒಬ್ಬರಿಗೊಬ್ಬರು ವಿದಾಯ ಹೇಳಿ ಅವರವರ ಮನೆಗೆ ಹೊರಟರು.
ಮರು ದಿನ ಸೋಮವಾರ ಎಂದಿನಂತೆ ಎಲ್ಲರೂ ಬಹಳ ಖುಷಿಯಿಂದ ಆಫೀಸಿಗೆ ಬಂದು ತಮ್ಮ ಕೆಲಸಗಳಲ್ಲಿ ತೊಡಗಿದರು. ಸಮೀರ ಮಾತ್ರ ಬಂದಿರಲಿಲ್ಲ, ಮುಕ್ತಳಿಗೆ ಏಕೆ ಬಂದಿಲ್ಲ ಎಂದುಕೊಂಡು ಅವನ ಮೇಲ್ ಚೆಕ್ ಮಾಡಿದಳು, ಬಹಶಃ ಲೀವ್ ಹಾಕಿರಬಹುದು ಎಂದು. ಆದರೆ ಮೇಲ್ ನಲ್ಲಿ ಯಾವ ಸಂದೇಶವೂ ಇರಲಿಲ್ಲ. ಮಧ್ಯಾನದವರೆಗೂ ಅವನ ಸಂದೇಶಕ್ಕಾಗಿ ಕಾದಳು ಆದರೆ ಯಾವ ಸುಳಿವೂ ಇರಲಿಲ್ಲ. ಅವನ ಫೋನ್ ಗೆ ಕರೆ ಮಾಡಿದಳು ಸ್ವಿಚ್ ಆಫ್ ಆಗಿತ್ತು. ಮುಕ್ತಳಿಗೆ ಆತಂಕ ಶುರುವಾಯಿತು.
ಸಬಿತಾಳನ್ನು ತನ್ನ ಛೇಂಬರ್ ಕರೆದು ಅವನ ಬಗ್ಗೆ ವಿಚಾರಿಸಿದಾಗ ಅವಳೂ ಸಹ ಏನೂ ತಿಳಿಯದು ಎಂದು ಹೇಳಿದಳು. ಏನು ಮಾಡುವುದೆಂದು ಇಬ್ಬರಿಗೂ ತಿಳಿಯದಾಯಿತು. ಆಫೀಸಿನಲ್ಲಿ ಅವನ ಬಗ್ಗೆ ಬೇರೆ ಯಾರಿಗೂ ತಿಳಿಯದ ಕಾರಣ ಯಾರಲ್ಲೂ ವಿಚಾರಿಸಲು ಆಗಲಿಲ್ಲ.
ಮರುದಿನ ಸುಮಾರು ಹತ್ತು ಗಂಟೆಗೆ ಮುಕ್ತಳಿಗೆ ಫೋನ್ ಕರೆ ಬಂದಿತು. ಲ್ಯಾಂಡ್ ಲೈನ್ ನಂಬರ್ ಆದ್ದರಿಂದ ಯಾರಿರಬಹುದು ಎಂದು ರಿಸೀವ್ ಮಾಡಿದಳು. ‘ಹಲೋ, ಮೇಡಂ ನಾನು ಕೃಷ್ಣ, ನರ್ಸಿಂಗ್ ಹೋಂ ನಿಂದ ನರ್ಸ್ ತೇಜಸ್ವಿನಿ ಮಾತಾಡ್ತಿದೀನಿ, ನಿಮ್ಮ ಆಫೀಸಿನಲ್ಲಿ ಕೆಲಸ ಮಾಡುವ ಒಬ್ಬರು ಅಡ್ಮಿಟ್ ಆಗಿದ್ದಾರೆ. ಹೈ ಫೀವರ್ ಯಿಂದ ಪ್ರಜ್ಞೆ ಇಲ್ಲದಾಗಿತ್ತು. ಫೋನ್ ಸಹ ಸ್ವಿಚ್ ಆಫ್ ಆಗಿತ್ತು ಈಗ ಅವರು ಎಚ್ಚರವಾಗಿದ್ದಾರೆ. ನಿಮ್ಮ ನಂಬರ್ ಹೇಳಿದರು ಕಾಲ್ ಮಾಡಿದೀನಿ, ಪೇಷಂಟ್ ಗೆ ಕೊಡ್ತೀನಿ’ ಮಾತಾಡಿ ಎಂದು ಹೇಳಿದಳು. ‘ಹಲೋ ಮೇಡಂ, ನಾನು ಸಮೀರ ಸಾರಿ ನಿಮಗೆ ವಿಷಯ ತಿಳಿಸಲಾಗಲಿಲ್ಲ, ರೆಸಾರ್ಟ್ ನಿಂದ ಮನೆಗೆ ಹೋಗಿ ಮಲಗಿದವನಿಗೆ ಎಚ್ಚರವೇ ಇರಲಿಲ್ಲ. ಓನರ್ ಬಂದು ಅವರ ಮನೆಯಲ್ಲಿ ಇದ್ದ ಮತ್ತೊಂದು ಕೀ ನಲ್ಲಿ ಬಾಗಿಲು ತೆಗೆದು ನನ್ನ ಪರಿಸ್ಥಿತಿ ನೋಡಿ ಇಲ್ಲೇ ಹತ್ತಿರದ ನರ್ಸಿಂಗ್ ಹೋಂ ಗೆ ಸೇರಿಸಿದರು. ನನಗೆ ಪ್ರಜ್ಞೇನೇ ಇಲ್ಲದಷ್ಟು ಜ್ವರವಿತ್ತು. ಫೋನ್ ಬೇರೆ ಸ್ವಿಚ್ ಆಫ್ ಇತ್ತು, ನಿಮಗೆ ವಿಷಯ ತಿಳಿಸಲಾಗಲಿಲ್ಲ. ಇವಾಗ ಹುಷಾರಾಗಿದೀನಿ. ಸಂಜೆಗೆ ಡಿಸ್ಚಾರ್ಜ್ ಮಾಡ್ತಾರೆ ನಾಳೆ ಆಫೀಸ್ ಗೆ ಬರ್ತೀನಿ’ ಎಂದು ಹೇಳಿದ.
ಬೇಡ ಎರಡು ದಿನ ರೆಸ್ಟ್ ಮಾಡು ಆಮೇಲೆ ಕೆಲಸದ ವಿಷಯ, ನಾನು ನರ್ಸಿಂಗ್ ಹೋಂ ಗೆ ಬರ್ತಿನಿ ಇವಾಗ ಎಂದು ಹೇಳಿ ಕಾಲ್ ಕಟ್ ಮಾಡಿದಳು.
ಇಂಟರ್ ಕಾಮ್ ನಿಂದ ಸಬಿತಾಗೆ ತನ್ನ ಛೇಂಬರ್ ಗೆ ಬರಲು ಹೇಳಿದಳು. ಎರಡು ನಿಮಿಷದಲ್ಲಿಯೇ ಸಬಿತಾ ಬಂದು. ‘ಎಸ್ ಮೇಡಂ’ ಎಂದಳು. ಮುಕ್ತ ತಾನು ಮಾತನಾಡಿದ ವಿಷಯವೆಲ್ಲಾ ಅವಳಿಗೆ ತಿಳಿಸಿ, ಈಗ ತಕ್ಷಣ ಆಸ್ಪತ್ರೆಗೆ ಹೋಗಿ ಬರೋಣ, ನಾವು ಬರುವವರೆಗೂ ನಂದಕುಮಾರ್ ಹಾಗು ಮನೋಜ್ ಗೆ ಹೇಳಿರು’ ಎಂದು ಹೇಳಿ ಹೊರಡಲು ಅನುವಾದಳು.
ಇಬ್ಬರೂ ಕಾರಿನಲ್ಲಿ ಹೊರಟು ಅರ್ಧ ಗಂಟೆಯಲ್ಲಿ ಆಸ್ಪತ್ರೆ ತಲುಪಿದರು. ರಿಸೆಪ್ಷನ್ ನಲ್ಲಿ ಸಮೀರನ ಬಗ್ಗೆ ವಿಚಾರಿಸಿ ಅವನಿದ್ದ ರೂಮಿಗೆ ಬಂದರು. ಸಮೀರ ಇವರು ಬಂದ ಹೆಜ್ಜೆಯ ಸಪ್ಪಳಕ್ಕೆ ಎದ್ದು ಕುಳಿತನು. ಅವನ ಹತ್ತಿರಕ್ಕೆ ಬಂದ ಮುಕ್ತ ಅವನ ತಲೆ ಸವರುತ್ತಾ ಕೈ ಹಿಡಿದುಕೊಂಡು, ಹೇಗಿದೀಯ ಸಮೀರ ಎಂದು ಕೇಳಿದಳು. ಅವನಿಗೆ ಕಣ್ಣೀರು ತಡೆಯಲಾಗಲಿಲ್ಲ. ಕಲ್ಲು ಹೃದಯದವನಾಗಿದ್ದವನನ್ನು ಮೃದು ಸ್ವಭಾವದವನಾಗಿ ಬದಲಿಸಿದ್ದಳು. ‘ಮುಕ್ತಾ, ಬಿಕ್ಕುತ್ತಾ ಯಾವ ಜನ್ಮದ ಋಣವೋ ನನಗೆ, ಈ ಜನ್ಮದಲ್ಲಿ ಅಕ್ಕನ ರೀತಿ ಸಿಕ್ಕಿದಿರಾ!. ನಾನು ನಿಮಗೆ ಸದಾ ಚಿರಋಣಿ’ ಎಂದು ಬಿಕ್ಕುತ್ತಾ ಹೇಳಿದನು. ‘ಮುಕ್ತ, ಅವನ ಕಣ್ಣೋರಸಿ, ಮನುಷ್ಯರಾದವರು ಒಬ್ಬರಿಗೊಬ್ಬರು ಆಗಲೇಬೇಕು’ ಹೀಗೆ ಎಂದು ಅವನನ್ನು ಸಮಾಧಾನ ಪಡಿಸಿದಳು. ಇತ್ತ ಸಬಿತಾ ಅವನ ಪಕ್ಕದಲ್ಲಿ ನಿಂತಿದ್ದವಳು ಅವನನ್ನು ನೋಡಿ ನಕ್ಕಳು. ಸಮೀರನು ಸಹ ಅವಳನ್ನು ನೋಡಿ ನಗೆ ಬೀರಿ ಬಂದಿದ್ದಕ್ಕೆ ತುಂಬಾ ಧನ್ಯವಾದಗಳು ಎಂದು ಹೇಳಿದನು. ನಾವೆಲ್ಲ ಒಟ್ಟಿಗೆ ಕೆಲಸ ಮಾಡುವವರು ಒಂದೇ ಮನೆಯವರಂತಿರುವವರು ಹಾಗಾಗಿ ಧನ್ಯವಾದಗಳು, ಎಲ್ಲ ಬೇಡ ಎಂದು ಹೇಳಿದಳು. ಅವನನ್ನು ಡಿಸ್ಚಾರ್ಜ್ ಮಾಡಿಸಲು ರಿಸೆಪ್ಶನ್ ಕೌಂಟರ್ ಗೆ ಹೋಗಿ ಮುಕ್ತ ಬಿಲ್ ಸೆಟ್ಲ್ ಮಾಡಿ ಸಮೀರನನ್ನು ಅವನಿದ್ದ ಮನೆಗೆ ತಲುಪಿಸಿ ಪುನಃ ಸಬೀತಾಳೊಂದಿಗೆ ಆಫೀಸಿಗೆ ಹೊರಟಳು.
ಎರಡು ದಿನ ಕಳೆದ ಮೇಲೆ ಸಮೀರ ಆಫೀಸಿಗೆ ಬಂದ ಬಹಳ ಹೊಸದಾಗಿ ಕಾಣುತ್ತಿದ್ದ. ಅವನ ರೀತಿ, ನಡಾವಳಿಕೆ ಬದಲಾಗಿತ್ತು. ಎಲ್ಲರೊಂದಿಗೆ ನಗು ನಗುತ್ತಾ ಬಹಳ ಸಂಯಮದಿಂದ ವರ್ತಿಸತೊಡಗಿದ.
ಇದನ್ನೆಲ್ಲಾ ಗಮನಿಸಿದ ‘ಮುಕ್ತಾ, ಸಬಿತಾಳನ್ನು ಕರೆದು ಸಮೀರನ ಬಗ್ಗೆ ನಿನ್ನ ಅಭಿಪ್ರಾಯವೇನು’ ಎಂದು ಕೇಳಿದಾಗ, ಅನಿರೀಕ್ಷಿತ ಪ್ರಶ್ನೆಯಿಂದ ಏನು ಮಾತನಾಡಬೇಕೆಂದು ತೋಚದೆ ಸುಮ್ಮನೆ ತಲೆ ತಗ್ಗಿಸಿ ಕುಳಿತುಬಿಟ್ಟಳು. ‘ನೋಡು ಸಬಿತಾ, ನಿನಗಾಗಿ ಅಂತ ನಿನ್ನ ಚಿಕ್ಕಮ್ಮ ಬಿಟ್ಟರೆ ಯಾರೂ ಇಲ್ಲ, ಸಮೀರನಿಗೂ ಯಾರೂ ಬಂಧುಗಳಿಲ್ಲ, ನೀವಿಬ್ಬರು ಮದುವೆ ಮಾಡಿಕೊಳ್ಳಬಹುದು ಅಲ್ವಾ?’ ಎಂದು ಕೇಳಿದಾಗ, ನನಗೆ ಯೋಚಿಸಲು ಅವಕಾಶ ಕೊಡಿ. ‘ಮೇಡಂ, ಹಾಗೆ ಸಮೀರನಿಗೆ ನನ್ನ ಬಗ್ಗೆ ಯಾವ ಭಾವನೆ ಇದೆ ಎಂದು ತಿಳಿದರೆ ಒಳ್ಳೆಯದು’ ಎಂದು ಹೇಳಿ ಹೊರ ಬಂದಳು.
ಮತ್ತೆರಡು ದಿನ ಕಳೆಯುತಿದ್ದಂತೆ ಮುಕ್ತ ಸಮೀರನನ್ನು ತನ್ನ ಛೇಂಬರ್ ಗೆ ಕರೆದಳು. ಅವನನ್ನು ಕುಳಿತುಕೊಳ್ಳಲು ಹೇಳಿ ಮಾತು ಶುರುಮಾಡಿದಳು. ‘ನೋಡು, ಸಮೀರ ನಿನಗೆ ನೇರವಾಗಿ ಕೇಳುತ್ತಿದ್ದೇನೆ. ಸಬಿತಾಳ ಬಗ್ಗೆ ನಿನ್ನ ಅಭಿಪ್ರಾಯವೇನು?’ ಎಂದು ಕೇಳಲು, ‘ಯಾಕೆ ಮೇಡಂ ಏನಾಯ್ತು ಸಬಿತಾಗೆ’ ಎಂದು ಕೇಳಿದಾಗ ಮುಕ್ತ ಜೋರಾಗಿ ನಕ್ಕು ಏನೂ ಆಗಿಲ್ಲ ಇನ್ನು ಮುಂದೆ ಆಗಬೇಕು ಎಂದಾಗ ನಿಜಕ್ಕೂ ಗೊಂದಲವಾಯಿತು ಸಮೀರನಿಗೆ.
‘ಬಹಳ ಒಳ್ಳೆಯ ಹುಡುಗಿ ಮೇಡಂ, ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಅವರು ಈ ಆಫೀಸಿಗೆ ಶೋಭೆ’ ಎಂದು ಹೇಳಿದ. ‘ಅದು ಸರಿ ನಿನ್ನ ಮನಸಿನಲ್ಲಿ ಅವಳ ಮೇಲೆ ಯಾವ ಭಾವನೆ ಇದೆ’ ಎಂದು ಕೇಳಿ ಅವನ ಮುಖ ನೋಡುತ್ತಾ ಕುಳಿತಳು. ಸ್ವಲ್ಪ ಗಾಬರಿಯಿಂದ ‘ಮೇಡಂ’ ಎಂದು ತಡವರಿಸಿದ. ‘ನನಗೆ ಅವರ ಕಂಡರೆ ತುಂಬಾ ಇಷ್ಟವಿದೆ ಮೇಡಂ, ಆದರೆ ಆ ಘಟನೆಯಿಂದ ನನಗೆ ಬಹಳ ಅವಮಾನ ಅನಿಸುತ್ತಿದೆ, ಕ್ಷಮೆ ಕೇಳಿದರೂ ಒಂಥರಾ ಕೀಳರಿಮೆ ಇದೆ’ ಎಂದು ಹೇಳಿದ.
‘ವಿಲ್ ಯು ಮ್ಯಾರಿ ಹರ್?’ ಎಂದು ಕೇಳಿದಾಗ, ಶಾಕ್ ಹೊಡೆದಂತೆ ಎದ್ದು ನಿಂತು ‘ಮೇಡಂ, ಅವರೆಲ್ಲಿ ನಾನೆಲ್ಲಿ, ನಾನೊಬ್ಬ ಅನಾಥ, ನನಗೆ ಅಂತ ಯಾರೂ ಇಲ್ಲ. ಅವರು ಹೇಗೆ ನನ್ನ ಒಪ್ಪುತ್ತಾರೆ’ ಎಂದು ಕೇಳಿದ. ‘ಕೂತ್ಕೋ, ಯಾಕೆ ನಾವ್ಯಾರೂ ನಿನ್ನವರ ಹಾಗೆ ಕಾಣ್ತಿಲ್ವಾ?, ನಾನು ಆ ದಿನ ಹೇಳಿದ್ದೆ ನೆನಪಿರಬೇಕು. ಈ ಆಫೀಸಿನಲ್ಲಿ ಇರುವವರೆಲ್ಲರೂ ಯಾರಾದರೂ ಒಬ್ಬರನ್ನು ಕಳೆದುಕೊಂಡವರೆ, ನಾನು ಅಂತಹವರಿಗೆ ಕೆಲಸ ಕೊಟ್ಟು ಒಂದೇ ಕುಟುಂಬದ ಹಾಗೆ ಇದೀವಿ, ಹಾಗಾಗಿ ನಿನ್ನ ಯೋಚನೆ ಬಿಟ್ಟು ಬಿಡು ಎಂದು ಹೇಳಿ ಅವನನ್ನು ಪುನಃ ಕೇಳಿದಳು. ಅವಳನ್ನು ಮದುವೆ ಆಗ್ತೀಯ ಅಂತ, ಅವರು ಒಪ್ಪಿದರೆ ನನ್ನದೇನು ಅಭ್ಯಂತರವಿಲ್ಲ’ ಎಂದು ಹೇಳಿದನು.
ಸಬಿತಾಳ ಸಮ್ಮತಿಯೂ ಸಿಕ್ಕಿತು. ಸಮೀರ ಸಬಿತಾ ಇಬ್ಬರೂ ಕುಳಿತು ಮಾತನಾಡಿಕೊಂಡು ಇಬ್ಬರೂ ಒಪ್ಪಿಗೆ ತಿಳಿಸಿದರು. ಮುಕ್ತ ತನ್ನ ಸಿಬ್ಬಂದಿಯವರ ಜೊತೆಗೂಡಿ ಅವರಿಬ್ಬರ ಮದುವೆ ಮಾಡಿದಳು.
ಸಮೀರಾ ಸಬಿತಾ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿ ಹೊಸಜೀವನಕ್ಕೆ ಕಾಲಿಟ್ಟರು. ಸವಿ ಸಿಂಚನದ ಪ್ರೇಮ ಇಬ್ಬರನ್ನೂ ಬಂಧಿಸಿತ್ತು.
- ಚಂಪಾ ಚಿನಿವಾರ್ – ಆಪ್ತ ಸಮಾಲೋಚಕಿ.
