‘ಮಾನಿನಿಯ ಮಾರ್ದನಿ’ ಕೃತಿ ಪರಿಚಯ

ಗೀತಾಂಜಲಿ ಎನ್. ಎಂ. ಅವರ ‘ಮಾನಿನಿಯ ಮಾರ್ದನಿ’ ಕೃತಿಯಲ್ಲಿ ಮಹಿಳೆಗೆ ನಿಜವಾಗಿಯೂ ಬೇಕಾಗಿರುವುದು ಗೌರವ, ರಕ್ಷಣೆ ಮತ್ತು ಸ್ಥಾನಮಾನಗಳು ಹೊರತು ಹೊಗಳಿಕೆಯಲ್ಲ ಎನ್ನುವ ಗೀತಾಂಜಲಿಯವರ ಬರಹಗಳು ಪ್ರಸ್ತುತ ಸಮಾಜದ ಮನಸ್ಥಿತಿಗೆ ಕೈಗನ್ನಡಿಯಾಗುತ್ತವೆ. ಈ ಕೃತಿಯ ಕುರಿತು ಡಾ. ವಿಜಯ್ ಪೂಣಚ್ಚ ತಂಬಡ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕದ  : ಮಾನಿನಿಯ ಮಾರ್ದನಿ (ಕಿವಿಗೆ ಕೇಳದ ಹೃದಯಕ್ಕೆ ನಾಟುವ)
ಲೇಖಕರು : ಗೀತಾಂಜಲಿ ಎನ್. ಎಂ.
ಮುದ್ರಕರು : ತಾರಾ ಪ್ರಿಂಟ್ಸ್, ಮೈಸೂರು
ಒಟ್ಟು ಪುಟಗಳು : 136
ಬೆಲೆ : ₹200/-

ಒಳ್ಳೆಯ ಪುಸ್ತಕಗಳು ಕೇವಲ ಓದಿಸಿಕೊಳ್ಳುವುದಿಲ್ಲ, ಅವು ನಮ್ಮನ್ನು ಯೋಚಿಸುವಂತೆ ಮಾಡುತ್ತವೆ. ಅಂತಹ ಚಿಂತನೆಯನ್ನು ಹುಟ್ಟುಹಾಕುವ ಕೃತಿಯೇ ಲೇಖಕಿ ಗೀತಾಂಜಲಿ ಎನ್.ಎಂ.ಅವರ ‘ಮಾನಿನಿಯ ಮಾರ್ದನಿ.’

ಎನ್.ಎಮ್. ಗೀತಾಂಜಲಿ ಅವರು ಕೊಡಗಿನ ‘ಶಕ್ತಿ’ ದಿನ ಪತ್ರಿಕೆ ಸೇರಿ ಅನೇಕ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಬರಹಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ ‘ಶಕ್ತಿ’ ದಿನಪತ್ರಿಯಲ್ಲಿ ಅನೇಕ ಕಂತುಗಳಲ್ಲಿ ಮಹಿಳೆಯರ ಕುರಿತ ಮೌಲ್ಯಯುತವಾದ ಅನೇಕ ಲೇಖನಗಳನ್ನು ಬರೆದು ವಿಶೇಷವಾಗಿ ಕೊಡಗಿನ ಓದುಗರಿಗೆ ಚಿರಪರಿಚಿತರಾಗಿದ್ದಾರೆ. ಕೊಡಗಿನಲ್ಲಿ ಮಹಿಳಾ ಅಂಕಣದ ಮೂಲಕ ಮಹಿಳೆಯರ ಪರವಾದ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸಿದ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾದದ್ದು.

ಮಹಿಳೆಯರ ಬದುಕಿನ ನೈಜ ಚಿತ್ರಣ, ಸಾಮಾಜಿಕ ಕಾಳಜಿ ಮತ್ತು ವೈಚಾರಿಕತೆಯ ಸಮನ್ವಯವಾಗಿ ಮೂಡಿಬಂದಿರುವ ‘ಮಾನಿನಿಯ ಮಾರ್ದನಿ’ ಕೃತಿ ಓದುಗರ ಮನಸ್ಸಿನಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕುವ, ಚಿಂತನೆಗೆ ಪ್ರೇರೇಪಿಸುವ ಹಾಗೂ ಸಮಾಜಮುಖಿ ಅರಿವನ್ನು ಬೆಳೆಸುವ ಉತ್ತಮ ಕೃತಿಯಾಗಿದೆ.

ಈ ಕೃತಿಯ ಹೆಸರೇ ಅರ್ಥಪೂರ್ಣವಾದದ್ದು. ಹೆಣ್ಣಿನ ಮಾರ್ದನಿಯಿದು. ತನ್ನ ಸ್ವಂತ ಸಹಜ ಪ್ರತಿಭೆಯಿಂದ ಗಮನಾರ್ಹವಾದ ಕೃತಿಯನ್ನು ರಚಿಸಿದ ಶ್ರೀಮತಿ ಗೀತಾಂಜಲಿ ಅವರಿಗೆ ಅಭಿನಂದನೆಗಳು.

ಮಹಿಳೆ ಎಂದರೆ ಸಹನೆ, ತ್ಯಾಗ, ಮೌನ ಎನ್ನುವ ಪಾರಂಪರಿಕ ಪೂರ್ವಗ್ರಹಕ್ಕೆ ಬದಲಿ ವ್ಯಾಖ್ಯಾನವನ್ನು ನೀಡುವ ಸಣ್ಣ ಪ್ರಯತ್ನ ಎನ್.ಎಮ್. ಗೀತಾಂಜಲಿ ಅವರ “ಮಾನಿನಿಯ ಮಾರ್ದನಿ” ಸಮಾನತೆ, ನ್ಯಾಯ ಮತ್ತು ಮಾನವೀಯತೆ ಪರಹೋರಾಟ ಮತ್ತು ಬೌದ್ಧಿಕ ಜಿಜ್ಞಾಸೆಯ ಅಭಿವ್ಯಕ್ತಿಯಾಗಿ ಈ ಕೃತಿಯು ರೂಪುಗೊಂಡಿದೆ ಮಹಿಳೆಯು ಪ್ರತಿದಿನ ಅನುಭವಿಸುವ ಶೋಷಣೆ,ಅವಮಾನ ದೌರ್ಜನ್ಯ, ಹಿಂಸೆ, ಅತ್ಯಾಚಾರದಂತಹ ದೌರ್ಜನ್ಯಗಳಿಗೆ ಪುರುಷ ಪ್ರಧಾನ ವ್ಯವಸ್ಥೆಯು ಅನುವು ಮಾಡಿಕೊಟ್ಟಿರುವುದನ್ನು ವಿಶ್ಲೇಷಿಸಿರುವ ಗೀತಾಂಜಲಿ ಅವರು ಹೆಣ್ಣನ್ನು ಆಬಲೆ, ಅಶಕ್ತಳೆಂದು ಬಿಂಬಿಸುವ ಬದಲು ಅವಳು ಆರ್ಥಿಕವಾಗಿ ಸಬಲವಾಗಲೇ ಬೇಕು ಎಂದು ಈ ಕೃತಿಯಲ್ಲಿ ಪ್ರತಿಪಾದಿಸುತ್ತಾರೆ. ಸೂಕ್ತ ಶಿಕ್ಷಣದಿಂದ ಇದು ಸಾಧ್ಯವೆಂದು ಅವರು ತಿಳಿ ಹೇಳುತ್ತಾರೆ.

ಪುರಾತನ ಕಾಲದಿಂದಲೂ ಮಹಿಳೆಯು ಕೇವಲ ಗೃಹಿಣಿಯಾಗಿ ಶಾಸ್ತ್ರಾಧ್ಯಯನ ಮಾತ್ರ ಮಾಡುತ್ತಿರಲಿಲ್ಲ, ಬದಲಿಗೆ ಸಂದರ್ಭ ಬಂದಾಗ ಶಸ್ತ್ರಾಸ್ತ್ರ ಹಿಡಿದು ದಬ್ಬಾಳಿಕೆ ವಿರುದ್ಧ ಪ್ರತಿಭಟಿಸಿದ್ದನ್ನು ಲೇಖಕಿಯು ದಾಖಲಿಸಿದ್ದಾರೆ. ಸ್ವತಂತ್ರ ಭಾರತದಲ್ಲಿ ರಾಷ್ಟಪತಿ, ಪ್ರಧಾನ ಮಂತ್ರಿ ಹುದ್ದೆಯಿಂದ ಹಿಡಿದು ಸ್ತ್ರೀಯರು ವಿಜ್ಞಾನ, ಆಡಳಿತ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿಯೂ ತನ್ನ ಪ್ರತಿಭೆಯನ್ನು ತೋರಿಸಿದ್ದರ ಬಗ್ಗೆ ವಿವರ ನೀಡುತ್ತಾರೆ. ಸಣ್ಣಪುಟ್ಟ ಉದ್ಯಮ, ಚಾಲಕ ಮುಂತಾದ ಉದ್ಯಮಗಳಲ್ಲಿಯೂ ತಮ್ಮ ಪ್ರತಿಭೆಯನ್ನು ಮಹಿಳೆಯರು ತೋರಿದ್ದನ್ನು ಅವರು ದಾಖಲಿಸಿದ್ದಾರೂ ಅವರು ತಾಯಿಯಾಗಿ, ಮಗಳಾಗಿ ಮನೆಯನ್ನು, ಮಕ್ಕಳನ್ನು ನಿಭಾಯಿಸುವ ಕುರಿತಂತೆ ನೀಡಿದ ವಿವರಗಳು ಗಮನಾರ್ಹವಾಗಿವೆ. ಹಾಗೆಂದು “ತಾಯ್ತನದ” ವರ್ತುಲದಲ್ಲಿ ಅವಳನ್ನು ಕಟ್ಟಿಹಾಕುವ ಬಗೆಯ ಬಗ್ಗೆಯೂ ಅವರು ಆಗಾಗ್ಗೆ ಎಚ್ಚರಿಸಿರುವುದು ಗಮನಾರ್ಹವಾಗಿದೆ. ಮಹಿಳೆಗೆ ನಿಜವಾಗಿಯೂ ಬೇಕಾಗಿರುವುದು ಗೌರವ, ರಕ್ಷಣೆ ಮತ್ತು ಸ್ಥಾನಮಾನಗಳು ಹೊರತು ಹೊಗಳಿಕೆಯಲ್ಲ ಎನ್ನುವ ಗೀತಾಂಜಲಿಯವರ ಬರಹಗಳು ಪ್ರಸ್ತುತ ಸಮಾಜದ ಮನಸ್ಥಿತಿಗೆ ಕೈಗನ್ನಡಿಯಾಗುತ್ತವೆ. ಮಹಿಳಾ ದಿನಾಚರಣೆಯನ್ನು ಅಚರಿಸುವುದಕ್ಕಿಂತ ಹೆಚ್ಚು ಅವಳ ಸ್ವಾಭಿಮಾನವನ್ನು ಮತ್ತು ಆತ್ಮವಿಶ್ವಾಸವನ್ನು ಕಾಪಾಡುವುದೇ ದೊಡ್ಡ ಗೌರವ ಎಂದು ಬರೆದಿರುವುದು ಪ್ರಶಂಸನೀಯವಾಗಿದೆ.

ಗೀತಾಂಜಲಿಯವರ ಲೇಖನವೊಂದರಲ್ಲಿ ಮಹಿಳೆಯ ವಯಸ್ಸಿನ ಬಗೆಗಿನ ತರ್ಕಗಳನ್ನು ಚರ್ಚಿಸುತ್ತಾರೆ. ಪುರುಷರಿಗೆ ಕಾಲದಿಂದ ಕಾಲಕ್ಕೆ ಸಿಗುವ ಅವಕಾಶಗಳು ಮಹಿಳೆಗೆ ಸಿಗುವುದು ಕಷ್ಟ. ಅವಳಿಗೆ ಮಧ್ಯ ವಯಸ್ಸಿನಲ್ಲಿ ಅಥವಾ ನಂತರದಲ್ಲಿ ಸಿಗುವ ಅವಕಾಶಗಳಿಗೆ ಮೂಗು ಮುರಿಯುವುದನ್ನು ಲೇಖಕಿಯು ಟೀಕಿಸಿ ಸೂಕ್ತ ಅವಕಾಶಗಳನ್ನು ಪಡೆಯಲು ಮಹಿಳೆಯರನ್ನು ಪ್ರೋತ್ಸಾಹಿಸಬೇಕೆಂದು ಕರೆ ನೀಡುತ್ತಾರೆ. ಹೆಣ್ಣು ಭ್ರೂಣ ಹತ್ಯೆಯಂತಹ ಮಹಿಳಾ ವಿರೋಧಿ ಮೂಢನಂಬಿಕೆಗಳನ್ನು ಕಟುವಾಗಿ ಟೀಕಿಸುವ ಲೇಖಕರು ಮುಟ್ಟಾದ ಸ್ತ್ರೀಯರನ್ನು ಸಮಾಜ ನಡೆಸಿಕೊಳ್ಳುವ ರೀತಿಗಳನ್ನು ಉಗ್ರವಾಗಿ ಖಂಡಿಸಿದ್ದಾರೆ.

ಆ ಮೂಲಕ ಸಮಾಜವು ಮಹಿಳೆಯನ್ನು ಗೌರವದಿಂದ, ಪ್ರೀತಿಯಿಂದ ನಡೆಸಿಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ. ಪ್ರಸ್ತುತ ಕೃತಿಯಲ್ಲಿ ಮಹಿಳಾ ಸಾಧಕರಾದ ಸಿಂಧು ತಾಯಿಯೆಂದು ಖ್ಯಾತವಾಗಿರುವ ಸಿಂಧು ಸತ್ಪಾಲ್, ಖ್ಯಾತ ಪರ್ವತಾರೋಹಿಯಾಗಿರುವ ಅರುಣಿಮಾ, ಬಾಹ್ಯಾಕಾಶಕ್ಕೆ ತೆರಳಿ ವಿಶ್ವದ ಗಮನ ಸೆಳೆದ ಸುನಿತಾ ವಿಲಿಯಮ್ಸ್, ಕ್ರಿಕೆಟ್ ತಾರೆ ಲಿಸಾ ಸ್ಥಾಲೇಕರ್, ಉದ್ಯಮ ಕ್ಷೇತ್ರದ ಸುಧಾಮೂರ್ತಿ ಹಾಗೂ ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವರ ಬಗ್ಗೆ ಬರೆದಿರುವ ಲೇಖನಗಳು ಓದುಗರ ಗಮನ ಸೆಳೆಯುತ್ತವೆ. ಇದರೊಂದಿಗೆ, ಮಹಿಳಾ ಆರೋಗ್ಯ, ಮಹಿಳಾ ಮೆನೋಪಾಸ್ ಸಮಸ್ಯೆ, ಭ್ರೂಣ ಹತ್ಯೆ, ಡಿಜಿಟಲ್ ಶಿಕ್ಷಣ ಕುರಿತ ಲೇಖಕರ ಬರಹಗಳು ಪ್ರಶಂಸನೀಯವಾಗಿದೆ.

ಶ್ರೀಮತಿ ಗೀತಾಂಜಲಿ ಅವರ ‘ಮಾನಿನಿಯ ಮರ್ದಿನಿ’ಯು ಜನಸಾಮಾನ್ಯರನ್ನು ಉದ್ದೇಶಿಸಿ ಬರೆದ ಪ್ರಬಂಧಗಳ ಸಂಕಲನ ಎಂದು ಮೇಲ್ನೋಟಕ್ಕೆ ಕಂಡುಬಂದರೂ ವಾಸ್ತವಿಕವಾಗಿ ಮಹಿಳಾ ಅಧ್ಯಯನದ ಬಗ್ಗೆ ಆಸಕ್ತಿ ಇರುವವರಿಗೆ, ಸಂಶೋಧಕರಿಗೆ ಕೂಡ ಉಪಯುಕ್ತವಾಗಿದೆ. ಸ್ಪಷ್ಟವಾದ ಕನ್ನಡ ಮತ್ತು ಆಕರ್ಷಕವಾದ ಬರವಣಿಗೆ ಶೈಲಿಯಿಂದ ಪ್ರಸ್ತುತ ಕೃತಿಯು ಓದುಗರ ಗಮನ ಸೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಇಂತಹ ಅಮೂಲ್ಯ ಕೃತಿಯನ್ನು ರಚಿಸಿದ ಶ್ರೀಮತಿ ಎನ್.ಎಮ್. ಗೀತಾಂಜಲಿ ಅವರ ಕೃತಿಯು ಓದುಗರನ್ನು ತಲುಪಲಿ ಎಂದು

ಶುಭ ಹಾರೈಸುತ್ತೇನೆ.


  • ಡಾ. ವಿಜಯ್ ಪೂಣಚ್ಚ ತಂಬಡ – ಹಿರಿಯ ಪ್ರಾಧ್ಯಾಪಕರು, ಸಂಶೋಧಕರು, ಸಾಹಿತಿಗಳು ಚರಿತ್ರೆ ವಿಭಾಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ.

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading