ನೆಹರೂ ಸತ್ತಾಗ… – ಸುಧೀಂದ್ರ ಹಾಲ್ದೊಡ್ಡೇರಿ



ಸುಧೀಂದ್ರ ಹಾಲ್ದೊಡ್ಡೇರಿ ಸರ್ ನಮ್ಮ ನಡುವೆ ಇರದೇ ಇರಬಹುದು ಆದರೆ ಅವರು ಬರೆದಂತಹ ವಿಜ್ಞಾನ ಲೇಖನಗಳಿಂದ ಸದಾ ನಮ್ಮ ನೆನಪಿನಲ್ಲಿರುತ್ತಾರೆ. ಅವರು ಬರೆದಂತಹ ನೆಹರು ಸತ್ತಾಗ ಲೇಖನವನ್ನು ಓದಿ.

(ಅಂದು ಸುಧೀಂದ್ರ ಹಾಲ್ದೊಡ್ಡೇರಿ ಸರ್ ಅವರ ‘ನೆಹರೂ ಸತ್ತಾಗ’ ಲೇಖನವನ್ನು ಆಕೃತಿಕನ್ನಡದಲ್ಲಿ ಪ್ರಕಟಿಸಲು ಸಿದ್ದ ಮಾಡಿಕೊಂಡಿದ್ದೆ. ಅಷ್ಟೋತ್ತಿಗೆ ನನ್ನ messager box ಗೆ ವಿಂಗ್ ಕಮಾಂಡರ್ ಸುದರ್ಶನ ಸರ್ ಅವರ ಒಂದು ಮೆಸೇಜ್ ಬಂತು. ತೆರೆದು ನೋಡಿದಾಗ ‘ಅವರ ಆತ್ಮಕ್ಕೆ ಶಾಂತಿ ಸಿಗಲಿ…’ ಎಂದಿತ್ತು. ನನಗ್ಯಾಕೆ ವಿಂಗ್ ಕಮಾಂಡರ್ ಸರ್ ಈ ರೀತಿ ಮೇಸೇಜ್ ಮಾಡಿದ್ದಾರೆ ಎಂದು ಒಂದ್ ಕ್ಷಣಕ್ಕೆ ಅರ್ಥವೇ ಆಗಲಿಲ್ಲ. ‘ಸರ್ ಯಾಕೆ ಹೀಗೆ ಕಳುಹಿಸಿದ್ದೀರಿ?’ ಎಂದು message ಹಾಕಿದೆ. ಆಗ ಅವರು ‘ಸಾರೀ… ಇದು ನಿಮಗಲ್ಲ. ಮೇಘನಾಗೆ ಕಳುಹಿಸಲು ಹೋಗಿ ತಪ್ಪಾಗಿ ಬಂತು’ ಅಂದರು. ಮೇಘನಾ ಅಂದಾಗ ತಕ್ಷಣಕ್ಕೆ ನನಗೆ ಗಾಬರಿಯಾಯಿತು. ಮೇಘನಾ ಅವರ ಫೇಸ್ ಬುಕ್ ಪೇಜ್ ಗೆ ಹೋಗಿ ನೋಡಿದಾಗ ‘ಅಪ್ಪ ಇಲ್ಲ’ ಎನ್ನುವ message ಗೆ ನೂರಾರು ಸಾತ್ವನದ message ಗಳು ಬಂದಿದ್ದವು. ಸುಧೀಂದ್ರ ಸರ್ ಇಷ್ಟು ಬೇಗ ಹೋಗಬಾರದಿತ್ತು. ಅವರು ಅಚಾನಕ್ ಆಗಿ ಹೋಗಿದ್ದು, ಎಲ್ಲರಿಗೂ ಗರಬಡಿದಂತೆ ಆಗಿತ್ತು. ಸುದರ್ಶನ್ ಸರ್ ಕೂಡ ಆ ಶಾಕ್ ನಲ್ಲಿ ಯಾರಿಗೆmessage ಮಾಡಿದ್ದೇನೆ ಎನ್ನುವುದೇ ಗೊತ್ತಾಗಿರಲಿಲ್ಲ.

ವಿಜ್ಞಾನ ಬರಹಗಾರರಲ್ಲಿ ಸುಧೀಂದ್ರ ಹಾಲ್ದೊಡ್ಡೇರಿ ಅವರು ಕೂಡಾ ಒಬ್ಬರಾಗಿದ್ದರು. ಇಂಗ್ಲಿಷ್ ನಲ್ಲಿ ವಿಜ್ಞಾನ ಬರಹಗಾರರು ಸಾಕಷ್ಟು ಜನರಿದ್ದಾರೆ, ಆದರೆ ಕನ್ನಡದಲ್ಲಿ ಅತಿ ವಿರಳ. ಇಂಗ್ಲಿಷ್ ಭಾಷೆಯನ್ನು ಅರಿಯದವರು ಕನ್ನಡ ವಿಜ್ಞಾನ ಬರಹಗಾರರ ಲೇಖನದಿಂದ ಓದಿ ಅರ್ಥೈಸಿಕೊಳ್ಳುತ್ತಿದ್ದರು, ಅದರಲ್ಲಿ ಈಗ ಒಂದು ಕೊಂಡಿ ನುಣುಚಿಕೊಂಡಾಗ ಸುಧೀಂದ್ರ ಹಾಲ್ದೊಡ್ಡೇರಿ ಕುಟುಂಬದವರಿಗಷ್ಟೇ ನಷ್ಟವಾಗಿಲ್ಲ, ಇಡೀ ವಿಜ್ಞಾನ ಬರಹಕ್ಕೆ ದೊಡ್ಡ ಹೊಡೆತವೇ ಬಿತ್ತೆಂದೇ ಹೇಳಬಹುದು.

ಇಂದು ಅವರು ಎಲ್ಲರಿಂದಲೂ ದೂರವಾಗಿರಬಹುದು, ಆದರೆ ಅವರ ಬರಹಗಳಿಂದ ಸದಾ ಹತ್ತಿರವಾಗಿಯೇ ಇರುತ್ತಾರೆ.  ಅವರು ಕೊಟ್ಟಂತಹ ಲೇಖನಗಳು ಪತ್ರಿಕೆಗಳಲ್ಲಿ,ಜಾಲತಾಣದಲ್ಲಿ ಸದಾ ಹರಿದಾಡುತ್ತಲೇ ಇರುತ್ತವೆ. ಅವರು ಬರೆದಂತಹ ಲೇಖನ ನಿಲ್ಲಬಾರದು ಎನ್ನುವ ಕಾರಣಕ್ಕೆ’ ನೆಹರು ಸತ್ತಾಗ’ ಲೇಖನವನ್ನು ಪ್ರಕಟಿಸುತ್ತಿದ್ದೇನೆ.) ದಯವಿಟ್ಟು ಓದಿ

ನೆಹರೂ ಸತ್ತಾಗ (೨೭ -೦೫ -೧೯೬೪) ನಾನು ಎರಡು ವರ್ಷದ ಹಸುಳೆ, ಆ ಕಾರಣ ನೆಹರೂ ಅವರನ್ನು ಕಂಡ, ಅವರ ಚಟುಟಿಕೆಗಳ ಕುರಿತು ಓದಿದ ನೆನಪುಗಳು ನನಗಿಲ್ಲ. ಆದರೆ ಮನೆಯ ಗೋಡೆಯನ್ನಲಂಕರಿಸಿದ್ದ ಗಾಂಧಿ ಹಾಗೂ ನೆಹರೂ ಫೋಟೋಗಳಿಗೆ ವರ್ಷದಲ್ಲಿ ನಾಲ್ಕು ದಿನ ಹೂಗಳು ಏರುತ್ತಿದ್ದವು.

ಅವರ ಜಯಂತಿ, ಪುಣ್ಯತಿಥಿಗಳ ಜತೆಗೆ ಗಣರಾಜ್ಯದಿನ ಹಾಗೂ ಸ್ವಾತಂತ್ರ್ಯದಿನಗಳಂದು ಈ ವ್ರತವನ್ನು ನನ್ನ ತಂದೆ ತಪ್ಪದೇ ಮಾಡಿಕೊಂಡು ಬಂದಿದ್ದರು. ನಮ್ಮ ಮನೆಯ ಮಾಳಿಗೆಯ ಮೇಲೆ ವರ್ಷಕ್ಕೆ ಎರಡು ಬಾರಿ ಧ್ವಜಾರೋಹಣವೂ ನಡೆಯುತ್ತಿತ್ತು. ನನ್ನ ತಮ್ಮ ನೆಹರೂ ಜನ್ಮದಿನದಂದೇ ಹುಟ್ಟಿದ ಕಾರಣ, ಆ ದಿನ ಸಿಹಿಯೂ ನಮಗೆ ಸಿಗುತ್ತಿತ್ತು.

ಎಮರ್ಜೆನ್ಸಿಯಿಂದ ದೇಶ ಹೊರಬಂದ ಸಮಯಕ್ಕೆ ನಾನು ಆಗಷ್ಟೇ ಕಾಲೇಜು ಮೆಟ್ಟಿಲು ಹತ್ತಿದ್ದೆ. ಸಂಜಯ ಗಾಂಧಿ, ಇಂದಿರಾ ಗಾಂಧಿಯವರ ಕೃತ್ಯಗಳ ಕುರಿತು ಪತ್ರಿಕೆಗಳಲ್ಲಿ ನಿತ್ಯವೂ ಓದಿ ಅವರಿಬ್ಬರ ಬಗ್ಗೆ ಆಕ್ರೋಷಗೊಂಡಿದ್ದೆ. ಆ ಸಿಟ್ಟು ಎಷ್ಟರ ಮಟ್ಟಿಗೆ ಏರಿತೆಂದರೆ, ಜವಹರಲಾಲ ನೆಹರೂ ಅವರ ತನಕ, ಕೊನೆಗೆ #ಮೋತಿಲಾಲ_ನೆಹರೂ ಅವರನ್ನೂ ಸಾರಾಸಗಟಾಗಿ ತಿರಸ್ಕರಿಸುವಷ್ಟರ ಮಟ್ಟಿಗೆ. ಹೀಗೊಂದು ದಿನದ ನನ್ನ ಬೀಸು ಹೇಳಿಕೆಗೆ ತಂದೆಯವರು ಸಿಟ್ಟಾದರು – ಸ್ವಾತಂತ್ರ್ಯ ಹೋರಾಟದ ಬಗ್ಗೆ ನಿನಗೇನು ಗೊತ್ತು? ಗಾಂಧೀಜಿಯವರ ಸತ್ಯಾಗ್ರಹದ ಬಗ್ಗೆ ಏನಾದರೂ ಅರಿತಿದ್ದೀಯಾ? ನೆಹರೂ ಕುಟುಂಬದ ಕೊಡುಗೆಯ ಕುರಿತು ಕಿಂಚಿತ್ತಾದರೂ ನಿನಗೆ ಅರಿವಿದೆಯೆ? ಎಂದು ಗದರುತ್ತಲೇ ಎರಡು ಪುಸ್ತಕಗಳನ್ನು ಓದಲು ಕೊಟ್ಟರು.

ಫೋಟೋ ಕೃಪೆ : kannadapustakapradhikara

ಫೋಟೋ ಕೃಪೆ : raptisrarebooks

ಮೊದಲನೆಯದು ಕೃಷ್ಣಾ ಹಥೀಸಿಂಗ್ ಅವರು ಬರೆದ ಪುಸ್ತಕದ ಕನ್ನಡ ಅನುವಾದ – “ನೆನಪು ಕಹಿಯಲ್ಲ” ಹಾಗೂ ಜವಹರಲಾಲ ನೆಹರೂ ಅವರೇ ಬರೆದ “ಡಿಸ್ಕವರಿ ಆಫ್ ಇಂಡಿಯಾ”. ನಂತರದ ದಿನಗಳಲ್ಲಿ ಜವಹರಲಾಲ ನೆಹರೂ ಅವರ ಕುರಿತಂತೆ ನನ್ನ ಅಭಿಪ್ರಾಯ ಬದಲಾಯಿತು. ಮುಂದೆ ನನ್ನ ತಂದೆಯವರು ತಾವು ಟ್ರಾಂಬೆ ಪರಮಾಣು ಸ್ಥಾವರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ “ಸಂಯುಕ್ತ ಕರ್ನಾಟಕ”ಕ್ಕೆ ಬರೆದ ಲೇಖನವನ್ನು ಕೊಟ್ಟರು. ಹೋಮಿ ಜಹಾಂಗೀರ್ ಭಾಭಾ ಅವರ ಕುರಿತು ಹೇಳಿದರು. ತಾವು ದೆಹಲಿಯಲ್ಲಿ ಪತ್ರಕರ್ತ ಸಂಘದ ಸದಸ್ಯರೊಂದಿಗೆ ನೆಹರೂ ಅವರನ್ನು ಭೇಟಿ ಮಾಡಿದ ಪ್ರಸಂಗವನ್ನು ನೆನಪಿಸಿಕೊಂಡರು.

ನೆಹರೂ ಅವರ ಯಾವ ಚಿತ್ರವನ್ನು ಫೇಸ್’ಬುಕ್’ನಲ್ಲಿ ಹಾಕಲಿ ಎಂದು ತಂದೆಯವರ ಗ್ರಂಥಾಲಯವನ್ನು ತಡಕಾಡುತ್ತಿದ್ದಾಗ, ನೆಹರೂ ಅವರ ನಿಧನದ ನಂತರ ಸರ್ಕಾರದ ಡಿ.ಎ.ವಿ.ಪಿ. ಪ್ರಕಟಿಸಿದ ಚಿತ್ರ ಸಂಪುಟ ಸಿಕ್ಕಿತು. ಅದರಲ್ಲಿ ನೆಹರೂ ಟ್ರಾಂಬೆಯ ಪರಮಾಣು ಸ್ಥಾವರದ ಮುಂದೆ ನಿಂತು ತೆಗೆಸಿಕೊಂಡ ಚಿತ್ರ ಕಣ್ಣಿಗೆ ಬಿತ್ತು.



ಟ್ರಾಂಬೆಯೆಂದೊಡನೆ, ಭಾಭಾ ಅವರು ನೆಹರೂ ಅವರೊಂದಿಗೆ ನಡೆಸಿದ ಒಂದು ಹಸಿರು ಹೋರಾಟ ನೆನಪಿಗೆ ಬರುತ್ತದೆ. ಮುಂಬೈನ ಸಮುದ್ರಭಾಗವನ್ನು ಭೂಮಿಯಾಗಿ ಪರಿವರ್ತಿಸಿಕೊಂಡ ಜಾಗವದು. ಪರಮಾಣು ಸ್ಥಾವರ ನಿರ್ಮಿಸುವ ಮೊದಲು ಭಾಭಾ ಅಲ್ಲಿ ಗಿಡಮರಗಳನ್ನು ನೆಡುವ ಯೋಚನೆ ಮಾಡಿ, ಕೆಲಸ ಆರಂಭಿಸುತ್ತಾರೆ. ಎಂದಿನಂತೆ ಹಣಕಾಸು ಇಲಾಖೆಯ ಐ.ಎ.ಎಸ್. ಅಧಿಕಾರಿಗಳು, ಅನಗತ್ಯ ಖರ್ಚಿನ ನೆಪ ಒಡ್ಡಿ, ಈ ಕೆಲಸಕ್ಕೆ ಅಡ್ಡಗಾಲು ಹಾಕುತ್ತಾರೆ. ಗಿಡಮರ ನೆಡುವುದು ಪರಮಾಣು ಶಕ್ತಿ ಇಲಾಖೆಯ ಕೆಲಸವಲ್ಲ ಎಂಬ ಶರಾ ಬರೆಯುತ್ತಾರೆ. ನೆಹರೂ ಅವರನ್ನು ‘ಜೇ’ ಎಂದೇ ಸಂಬೋಧಿಸಿ ಫೋನ್’ನಲ್ಲಿ ಮಾತನಾಡುವಷ್ಟು ಹಾಗೆಯೇ ಪತ್ರ ಬರೆಯಬಲ್ಲಷ್ಟು ಸಲಿಗೆಯನ್ನಿರಿಸಿಕೊಂಡಿದ್ದ ಭಾಭಾ ಪ್ರಧಾನಿಗೊಂದು ಕಾಗದ ಬರೆಯುತ್ತಾರೆ. ಇಂಥ ಅಧಿಕಾರಿಗಳ ಅನುಮೋದನೆಗಳಿಗಾಗಿ ಕಾಯುವಂಥ ಕೆಲಸ ನನಗೆ ಇಷ್ಟವಿಲ್ಲ ಎನ್ನುತ್ತಾರೆ. ಸಂವೇದನಾಶೀಲ ನೆಹರೂ ಪತ್ರಕ್ಕೆ ಉತ್ತರ ಬರೆಯುವುದರ ಜತೆಗೆ ಪರಮಾಣು ಶಕ್ತಿ ಇಲಾಖೆಯ ಮುಖ್ಯಸ್ಥರು ಅಧಿಕಾರಶಾಹಿಯ ಹಸ್ತಕ್ಷೇಪವಿಲ್ಲದೆಯೇ ನೇರವಾಗಿ ಪ್ರಧಾನಮಂತ್ರಿಗಳಿಗೇ ರಿಪೋರ್ಟ್ ಮಾಡಿಕೊಳ್ಳುವಂಥ ವ್ಯವಸ್ಥೆ ಮಾಡುತ್ತಾರೆ. ಜತೆಗೇ ಇದ್ದ ಬಾಹ್ಯಾಕಾಶ ಇಲಾಖೆಗೂ ಇದೇ ಸ್ವಾಯತ್ತತೆ ಲಭ್ಯವಾಗುತ್ತದೆ. ಇಂದು ಇವೆರಡೂ ಇಲಾಖೆಗಳು ಅತ್ಯದ್ಭುತ ಸಾಧನೆಗಳನ್ನು ಮಾಡಿ ದೇಶದ ಕೀರ್ತಿಯನ್ನು ಜಗದಗಲಕ್ಕೆ ವಿಸ್ತರಿಸಿದೆಯೆಂದರೆ, ಅದರ ಹಿಂದಿನ ದೂರದರ್ಶಿತ್ವವನ್ನು ನೆನಪಿನಲ್ಲಿಡಬೇಕು. ಸರ್ಕಾರಿ ಇಲಾಖೆಗಳಾಗಿ ಗುಮಾಸ್ತಗಿರಿಯಲ್ಲಿ ಕಳೆದುಹೋಗಬಹುದಾಗಿದ್ದ ದೇಶದ ಎರಡು ಪ್ರಮುಖ ಸಂಶೋಧನಾ ಸಂಸ್ಥೆಗಳನ್ನು ಬೆಂಬಲಿಸಿದ್ದು ನೆಹರೂ ಅವರು. ಇದಕ್ಕೂ ಒಂದು ಹಿನ್ನೆಲೆಯಿದೆ. ದೇಶಕ್ಕೆ ಇನ್ನೇನು ಸ್ವಾತಂತ್ರ್ಯ ಸಿಗುವ ಸಂದರ್ಭದಲ್ಲಿ ನೆಹರೂ ಪ್ರಧಾನಿಯಾಗಿ ನಿಯೋಜಿತರಾಗಿರುತ್ತಾರೆ. ಆಗ ಸ್ವತಂತ್ರ ಭಾರತದ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳ ಆದ್ಯತೆ ಕುರಿತಂತೆ ನೆಹರೂ ಅವರು ಭಾಭಾರೊಂದಿಗೆ ಚರ್ಚಿಸುತ್ತಾರೆ. ಭಾಭಾ, ದೇಶ ಪರಮಾಣು ಶಕ್ತಿ ಹಾಗೂ ಬಾಹ್ಯಾಕಾಶ ಕ್ಷೇತ್ರಗಳಿಗೆ ಆದ್ಯತೆ ನೀಡಬೇಕೆನ್ನುತ್ತಾರೆ. ಚಕಿತರಾದ ನೆಹರೂ ಏಕೆಂದು ಪ್ರಶ್ನಿಸಿದಾಗ, ಭಾಭಾ ನೀಡಿದ ಹೇಳಿಕೆ – Strength Respects Strength. ಅಂದರೆ ಶಕ್ತಿವಂತನನ್ನು ಮಾತ್ರ ಮತ್ತೊಬ್ಬ ಶಕ್ತಿವಂತ ಗೌರವಿಸುತ್ತಾನೆ ಎಂದರ್ಥ. ಮುಂಚೂಣಿ ರಾಷ್ಟ್ರಗಳು, ಶಕ್ತಿಶಾಲಿ ರಾಷ್ಟ್ರಗಳು ಇಂದು ಭಾರತವನ್ನು ಗೌರವಿಸುತ್ತಿದೆಯೆಂದರೆ ಅದಕ್ಕೆ ಕಾರಣ, ಪರಮಾಣು ಶಕ್ತಿ ಸ್ಥಾವರಗಳ ಮೂಲಕ ನಾವು ವಿದ್ಯುತ್ ಉತ್ಪಾದಿಸಬಲ್ಲೆವು, ಉಪಗ್ರಹಗಳನ್ನು ನಿರ್ಮಿಸಿ ಉಡ್ಡಯಿಸಿಕೊಳ್ಳಬಲ್ಲೆವು, ರಾಕೆಟ್’ಗಳನ್ನೂ ತಯಾರಿಸಿಕೊಳ್ಳಬಲ್ಲೆವು, ಯುದ್ಧಕ್ಕೆ ಬೇಕಾದ ಕ್ಷಿಪಣಿ, ವಿಮಾನಗಳನ್ನೂ ನಮ್ಮಲ್ಲೇ ಉತ್ಪಾದಿಸಿಕೊಳ್ಳಬಲ್ಲೆವು. ಈ ಎಲ್ಲ ಶಕ್ತಿ ಸಾಮರ್ಥ್ಯವಿದೆಯೆಂದೇ ಭಾರತವನ್ನು ಯಾವ ದೇಶವೂ ಸುಲಭವಾಗಿ ತಳ್ಳಿಹಾಕಲು ಸಾಧ್ಯವಿಲ್ಲ.

ಇರಲಿ, ಚಿತ್ರದಲ್ಲಿ ತೋರಿಸಿರುವಂತೆ ಪರಮಾಣು ಶಕ್ತಿಯನ್ನು ಶಾಂತಿಯುತ ಬಳಕೆಗೆ ಮಾತ್ರ ನಾವು ಬಳಸುತ್ತೇವೆಂದು ನೆಹರೂ ಘೋಷಿಸಿದ್ದರು. ಭಾಭಾ ಅವರಿಗೆ ಅಗತ್ಯ ಬಿದ್ದಲ್ಲಿ ಪರಮಾಣು ಬಾಂಬನ್ನು ತಯಾರಿಸಬೇಕೆಂಬ ಹಂಬಲವಿತ್ತು. ನೆಹರೂ ನಿಧನಾನಂತರ (ಲಾಲಬಹಾದ್ದೂರ್ ಶಾಸ್ತ್ರಿಯವರ ಆಳ್ವಿಕೆಯ ಸಮಯದಲ್ಲಿ ಭಾಭಾ ಈ ಕುರಿತು ಹೇಳಿಕೆಯೊಂದನ್ನು ನೀಡಿದ್ದರು. ಶಾಸ್ತ್ರಿಯವರು ಆ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಭಾರತ-ಪಾಕಿಸ್ತಾನ ಶಾಂತಿ ಸಂಧಾನಕ್ಕೆಂದು ತಾಷ್ಕೆಂಟಿಗೆ ತೆರಳಿದ್ದ ಶಾಸ್ತ್ರಿಯವರು ೧೧ನೇ ಜನವರಿ ೧೯೬೬ರಂದು ನಿಗೂಢವಾಗಿ ನಿಧನರಾದರು. ಅದಾದ ಹದಿಮೂರನೆಯ ದಿವಸಕ್ಕೆ (೨೪ -೦೧ – ೧೯೬೬) ಪರಮಾಣು ಶಕ್ತಿ ಕುರಿತ ಸಮ್ಮೇಳನಕ್ಕೆಂದು ಜಿನೀವಾಕ್ಕೆ ವಿಮಾನದಲ್ಲಿ ಹೊರಟಿದ್ದ ಭಾಭಾ ಅವರು ದಾರಿಯಲ್ಲಾದ ಅಪಘಾತದಿಂದ ನಿಗೂಢವಾಗಿ ತೀರಿಕೊಂಡರು. ಇವೆರಡೂ ಸಾವುಗಳು ಯಾವ ಶಕ್ತಿವಂತ ರಾಷ್ಟ್ರದ ಹುನ್ನಾರಗಳಾಗಿದ್ದವೋ ಗೊತ್ತಿಲ್ಲ. ಎರಡೇ ವರ್ಷಗಳಲ್ಲಿ ಮೂವರು ದೇಶಭಕ್ತ ನಾಯಕರುಗಳನ್ನು ಭಾರತ ಕಳೆದುಕೊಂಡಿತು.


  • ಸುಧೀಂದ್ರ ಹಾಲ್ದೊಡ್ಡೇರಿ (ಖ್ಯಾತ ಹಿರಿಯ ವಿಜ್ಞಾನ ಲೇಖಕರು)

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW