ಹೆಣ್ಣು ಮನೆಯ ಕಣ್ಣು – ದೇವರಾಜ ಚಾರ್




ಹೆಣ್ಣು ಓದಿದರೆ ಮನೆಯೊಂದು ಓದಿದಂತೆ, ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ, ಅತ್ತೆಯಾಗಿ ಮನೆಯ ಎಲ್ಲಾ ಜವಾಬ್ದಾರಿಯನ್ನು ಆಕೆ ನಿರ್ವಹಿಸಿರುತ್ತಾಳೆ. ಮಹಿಳೆಗಾಗಿ ಮಾರ್ಚ್ ೮ ನೇಯ ತಾರೀಖು ಕೇವಲ ಒಂದೇ ದಿನ ಮಹಿಳಾ ದಿನಾಚರಣೆ ಯಾಗಬಾರದು. ಅವಳ ಸಾಧನೆಗೆ ನಿತ್ಯವೂ ಬೆಂಬಲ ಸಿಗಬೇಕು, ಮುಂದೆ ಓದಿ…

ಮಾರ್ಚ್ 8 ರಂದು ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿರುವುದು ತುಂಬಾ ಸಂತೋಷಕರವಾದ ವಿಚಾರ. ಅಂತರರಾಷ್ಟ್ರೀಯ ಮಟ್ಟದಲ್ಲಿ, ರಾಷ್ಟ್ರೀಯ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಗುರುತಿಸಲ್ಪಟ್ಟ ಮಹಿಳೆಯರನ್ನು ಈ ಸಂದರ್ಭದಲ್ಲಿ ಸನ್ಮಾನ ಮಾಡುತ್ತಾರೆ. ಅಂತಹವರನ್ನು ಮಾಧ್ಯಮಗಳು ಸಹ ಸಂದರ್ಶನ ಮಾಡಿ ಒಳ್ಳೆಯ ಮಾತುಗಳನ್ನು ಆಡುತ್ತಾರೆ. ಅದರ ಉದ್ದೇಶ ಇಂಥ ಮಹಿಳೆಯರ ಹಾದಿಯಲ್ಲಿ ಉಳಿದವರೂ ಸಹ ನಡೆಯಲಿ ಎಂದು. ಈ ರೀತಿ ಗುರುತಿಸಲ್ಪಟ್ಟವರ ಹಿನ್ನೆಲೆ ಉತ್ತಮದ್ದಾಗಿರುತ್ತದೆ. ಅವರ ಗುಂಪಿನಲ್ಲಿ ಹಳ್ಳಿಯ
ಹಿನ್ನೆಲೆಯಿಂದ ಬಂದವರು ಇರುವುದು ವಿರಳ. ಮಹಿಳೆಯರು ಮುಖ್ಯವಾಹಿನಿಯಲ್ಲಿ ಇರುವವರ ಸಂಖ್ಯೆ ಬಹಳ ಕಡಿಮೆ.ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿರುವ ಮಹಿಳೆ ಮುಂದೆ ಬರುವುದು ಅಷ್ಟು ಸುಲಭದ ಕೆಲಸವಲ್ಲ .ಪ್ರತಿ ಕ್ಷೇತ್ರದಲ್ಲಿ ಹೆಣ್ಣು ಗಂಡಿನ ಸರಿ ಸಮಾನಳಾಗಿ ದುಡಿಯಬಲ್ಲಳು, ಆದರೂ ಕೂಡ ಅವರಿಬ್ಬರ ನಡುವೆ ಒಂದು ಅಂತವಂತೂ ಇದೆ.

  • ಹೆಣ್ಣಿನ ಬಾಲ್ಯ

ಹುಟ್ಟಿದ ಮಗು ಹೆಣ್ಣು ಅಂತ ಕೇಳಿದಾಗ 90% ಜನಕ್ಕೆ ನಿರಾಶೆಯಾಗುತ್ತದೆ. ಹೆಣ್ಣು ಮಗುವಿನ ಓದಿನ ಖರ್ಚು, ಬಟ್ಟೆ ಬರೆ ಖರ್ಚು, ಮದುವೆ, ಖರ್ಚು, ವರದಕ್ಷಿಣೆಯಂಥ ಖರ್ಚಿನ ಲೆಕ್ಕ ಹಾಕುತ್ತಾರೆ. ನಿಮಗೆ ಹೆಣ್ಣೆಷ್ಟು? ಗಂಡೆಷ್ಟು? ಎಂದು ಕೇಳುವ ಬದಲಾಗಿ ಲಾಭ ಎಷ್ಟು?…ನಷ್ಟ ಎಷ್ಟು? …ಎಂದು ಕೇಳುವವರಿದ್ದಾರೆ. ಕಾರಣ ಹೆಣ್ಣನ್ನು ನಷ್ಟಕ್ಕೆ ಹೋಲಿಸುತ್ತಾರೆ. ಹೆಣ್ಣಿಗೆ ಯಾಕೆ ಅಷ್ಟುಓದು ? ಮುಸುರೆ ತಿಕ್ಕುವುದು ಇದ್ದೇ ಇದೆಯಲ್ಲ ಅಂತ ಹೀಗಳೆಯುವ ಜನ ನಮ್ಮಲ್ಲಿದ್ದಾರೆ. ಹೆಣ್ಣು ಹುಟ್ಟಿದಾಗ ಕಣ್ಣಲ್ಲಿ ನೀರು ಹಾಕುತ್ತಾ ಕೂರುವರಿದ್ದರೆ, ಅದೇ ಗಂಡಾದಾಗ ಊರಿಗೆಲ್ಲಾ ಸಿಹಿ ಹಂಚಿ ಸಂಭ್ರಮಿಸುವರಿದ್ದಾರೆ. ಮಗು ಹುಟ್ಟಿದಾಗಲೇ ಶುರುವಾಗಿ ಬಿಡುತ್ತದೆ. ಹೆಣ್ಣು ಮಗುವಿಗೆ  ಹನ್ನೆರಡು ಹದಿಮೂರು ಆಗುತ್ತಿದ್ದಂತೆ ಕೆಲವು ಕಟ್ಟುಪಾಡುಗಳನ್ನು ಹಾಕಲಾಗುವುದು. ಅಲ್ಲಿಂದಲೇ ಹೆಣ್ಣಿನಲ್ಲಿ ಕೀಳರಿಮೆ, ಅಭದ್ರತೆ, ಮುಜುಗರ ಕಾಡ ತೊಡಗುತ್ತದೆ. ಗಂಡು ಮಗುವಿಗೆ ಆಟಕ್ಕಾಗಿ ಬ್ಯಾಟ್ ಬಾಲ್, ಬೈಕ್ ಲ್ಲಿ ಸುತ್ತಾಟ ಎಲ್ಲವೂ ನಿರ್ಬಂಧ ಮುಕ್ತ ಜೀವನ. ಗಂಡನ ಮನೆಗೆ ಹೋಗೋ ಹೆಣ್ಣೆಂದು ಸಣ್ಣ ವಯಸ್ಸಿನಲ್ಲಿಯೇ ಮನೆಯ ಜವಾಬ್ದಾರಿಗಳೆಲ್ಲ ಒಂದೊಂದಾಗಿ ಬಿದ್ದುಬಿಡುತ್ತದೆ ಮನೆ ಕೆಲಸ, ಅಡಿಗೆ ಕೆಲಸ ಇತ್ಯಾದಿ.

ಹೀಗೆ ಹುಡುಗಿಯನ್ನು ಹೊರಗಿನವಳು ಎಂದು, ಹುಡುಗ #ವಂಶೋದ್ಧಾರಕನೆಂತಲೂ ಹೇಳಲಾಗುತ್ತದೆ. ಮುಂದೆ ವಂಶ ಉದ್ದಾರ ಮಾಡುತ್ತಾನೋ ಇಲ್ಲವೋ, ಸತ್ತಾಗ ಕೊಲ್ಲಿ ಇಡುತ್ತಾನೋ ಇಲ್ಲವೋ ಎನ್ನುವುದು ಅಪ್ಪ-ಅಮ್ಮ ವೃದ್ಧರಾದಾಗಲೇ ಅರ್ಥವಾಗುತ್ತದೆ.

ಹೆಣ್ಣಿಗೆ ಒಂದು ಡಿಗ್ರಿ ಮಾಡಿಸಿದರೆ ಸಾಕಪ್ಪ ಎನ್ನುತ್ತಾರೆ, ಹೆಚ್ಚು ಓದಿದರೆ ಹುಡುಗ ಒಪ್ಪುವುದಿಲ್ಲ, ಅವಳ ಸಮ ಹುಡುಗ ಎಲ್ಲಿಂದ ತರುವುದು? ಓದಿದ ಅಹಂಕಾರದಿಂದ ಗಂಡನ ಮನೆಯಲ್ಲಿ ಬಾಳ್ವೆ ಮಾಡಲ್ಲ ಎನ್ನುವ ಭಯ ಅಪ್ಪಅಮ್ಮನಿಗೆ ಕಾಡುತ್ತದೆ. ಅವಳಿಗೆ ಇಪ್ಪತ್ತು ತುಂಬುತ್ತಿದ್ದಂತೆ ಮದುವೆಗೆ ಸಿದ್ಧತೆ ಶುರುವಾಗಿ ಬಿಡುತ್ತದೆ.ವಯಸ್ಸಾದರೆ ಎನ್ನುವ ಮತ್ತೆ ಭಯ ಅಪ್ಪ ಅಮ್ಮನಿಗೆ, ಹೆಣ್ಣು ನೋಡುವ ಶಾಸ್ತ್ರದಲ್ಲಿಯೂ ಆಕೆಗೆ ಒಂದು ರೀತಿ ಶೋಷಣೆಯೇ ಆಗುತ್ತದೆ, ಬಂದ ಹುಡುಗರ ಮುಂದೆ ಪ್ರದರ್ಶನಕ್ಕೆ ಇತ್ತ ಬೊಂಬೆಯಂತೆ ಬಂದು ಕೂರಬೇಕು, ಡಾಕ್ಟರ್ -ಇಂಜಿನಿಯರ್ ಹುಡುಗ ಒಪ್ಪಿದರೆ ಅವನ ಡಿಮ್ಯಾಂಡ್ ತಕ್ಕಂತೆ ಮದುವೆ, ವರದಕ್ಷಿಣೆ ಎನ್ನುವ ಪರೋಕ್ಷವಾದ ಶೋಷಣೆಗಳು ಆರಂಭವಾಗುತ್ತದೆ.

ಫೋಟೋ ಕೃಪೆ : The Indian Express

  • ಉದ್ಯೋಗಸ್ಥ ಮಹಿಳೆ/ಗೃಹಿಣಿ

ಮದುವೆಗೆ ಮುನ್ನ ಮಹಿಳೆ ಉದ್ಯೋಗಕ್ಕೆ ಸೇರಿದ್ದರೆ ಬಚಾವು. ಉದ್ಯೋಗದಲ್ಲಿರುವ ಹುಡುಗಿಯನ್ನು ಒಪ್ಪುವುದಿಲ್ಲ ಕೆಲವರು. ಉದ್ಯೋಗದಲ್ಲಿದ್ದರೂ ಬಿಡಿಸಲು ಪ್ರಯತ್ನಿಸುತ್ತಾರೆ. ಏನೇನೋ ಸಬೂಬು ಹೇಳುತ್ತಾರೆ .ಹೆಂಡತಿಯಾದವಳು ಉನ್ನತ ಹುದ್ದೆಯಲ್ಲಿದ್ದರೆ ಇಷ್ಟಪಡುವುದಿಲ್ಲ .ಅಧಿಕಾರಿಗಳು, ರಾಜಕೀಯ ವ್ಯಕ್ತಿಗಳು ಒಂದಲ್ಲ ಒಂದು ಕಾಟ ಕೊಡುತ್ತಾರೆ .ರಾಜಕೀಯ ವ್ಯಕ್ತಿಗಳು ,ಐ.ಎ.ಎಸ್ ಮಹಿಳೆಯನ್ನು ಸಹ ಬಿಡುವುದಿಲ್ಲ .ಪುಸ್ತಕದ ಬದನೆಕಾಯಿ ಅವರಿಗೇನು ಗೊತ್ತು ಅಂತಾರೆ. ಕಾನೂನುಬದ್ಧವಾಗಿ ಕೆಲಸ ಮಾಡಿದರೂ ತೆಗಳಿಕೆ ಅಥವಾ ಎತ್ತಂಗಡಿ ಇದ್ದೇ ಇರುತ್ತೆ .ಸೂಕ್ಷ್ಮ ಮನಸ್ಸಿನವರು ಉದ್ಯೋಗದಲ್ಲಿ ಮುಂದುವರಿಯುವುದು ಕಷ್ಟ .ಹೊರಗಿನ ಕೆಲಸದ ಜತೆ ಮನೆಯ ಕೆಲಸವನ್ನು ಸಹ ನೋಡಿಕೊಳ್ಳಬೇಕು .ಯಾವುದೇ ವಿನಾಯಿತಿ ಇರುವುದಿಲ್ಲ .ಗಂಡ, ಮಕ್ಕಳು, ಅತ್ತೆ ಮಾವ ಇವರನ್ನು ಜವಾಬ್ದಾರಿಯಿಂದ ನೋಡಿಕೊಳ್ಳುಬೇಕು.

ಪೂರ್ಣಪ್ರಮಾಣದ ಗೃಹಿಣಿಗೆ ಮನೆಯೇ ಪ್ರಪಂಚ. ಬೇಗ ಎದ್ದು ಮನೆ ಸ್ವಚ್ಛ ಮಾಡಿ, ನಿಧಾನವಾಗಿ ಎದ್ದವರಿಗೆ ಕಾಫಿಮಾಡಿ ಕೊಡಬೇಕು. ತಿಂಡಿ ತಯಾರು ಮಾಡಿ ,ಮಕ್ಕಳಿಗೆ ತಿನ್ನಿಸಿ, ಮನೆಯವರಿಗೆ ಕೊಟ್ಟು ,ಹೊರಗೆ ಹೋಗುವವರಿಗೆ ತಿಂಡಿ ಡಬ್ಬಿ ಕೊಡಬೇಕು .ನಂತರ ಬಟ್ಟೆ, ಪಾತ್ರೆ ,ಸ್ನಾನ ,ಪೂಜೆ ಇತ್ಯಾದಿ ಮುಗಿಸುವಷ್ಟರಲ್ಲಿ ಮಧ್ಯಾಹ್ನ ಹನ್ನೆರಡು ದಾಟುತ್ತದೆ .

ಹೆಣ್ಣು ಅಂದರೆ ಅನುಸರಿಸಿಕೊಂಡು ಹೋಗುವ ಕರುಣಾಮಯಿ ಅಲ್ಲವೇ, ಉಳಿದಿದ್ದನ್ನು ತಿಂಡಿ ಅಂತ ತಿಂತಾಳೆ. ನಂತರ ಅಡುಗೆ ತಯಾರಿ. ಮನೆಯಲ್ಲಿ ಇದ್ಧವರಿಗೆ ಊಟ ಬಡಿಸಿ, ತಾನೂ ತಿನ್ನಬೇಕು . ಅಷ್ಟರಲ್ಲಿ ಮಕ್ಕಳನ್ನು ಕರೆದು ತರಲು ಹೊರಗೆ ಹೋಗುತ್ತಾಳೆ. ಮಕ್ಕಳು ಹೊರಲಾಗದ ಬ್ಯಾಗನ್ನು, ತನ್ನ ಹೆಗಲಿಗೆ ಹಾಕಿಕೊಂಡು ಮನೆಗೆ ಕರೆತರುತ್ತಾಳೆ. ಮಕ್ಕಳಿಗೆ ತಿಂಡಿ ಹಾಲು ಕೊಟ್ಟು ಹೊರಗೆ ಆಡಲು ಕಳುಹಿಸಬೇಕು. ಮನೆ ಯನ್ನು ಒಂದುಸ್ಥಿತಿಗೆ ತಂದು ,ಮಕ್ಕಳನ್ನು, ಗಂಡನನ್ನು ಬರಮಾಡಿಕೊಳ್ಳುತ್ತಾಳೆ. ನಂತರ ಅವರಿಗೆ ಕಾಫಿ ಇತ್ಯಾದಿ ಕೊಡುತ್ತಾಳೆ. ಮಕ್ಕಳ ಓದು, ಹೋಮ್ ವರ್ಕ್ ಮಾಡಿಸಿ ನಂತರ ಅಡುಗೆ ತಯಾರಿ. ಎಲ್ಲರಿಗೂ ಬಿಸಿ ಬಿಸಿ ಬಡಿಸಿ ಸಂತುಷ್ಟಳಾಗುತ್ತಾಳೆ. ತನಗೇನೂ ಬಿಸಿ ಬೇಕಿಲ್ಲವಲ್ಲ, ಅದನ್ನೇ ತಿಂತಾಳೆ. ನಾಳೆ ಬೆಳಿಗ್ಗೆ ಬೇಕಾಗುವ ಬಟ್ಟೆ ಪಾತ್ರೆ ರೆಡಿಮಾಡಿ ಮಲಗುತ್ತಾಳೆ .ಈ ಮಧ್ಯೆ ಕಥೆ ಹೇಳಿ ಮಕ್ಕಳನ್ನು ಮಲಗಿಸುತ್ತಾಳೆ .ಇದು ಸಾಮಾನ್ಯ ಮಹಿಳೆಯ ದಿನಚರಿ. ಇದು ಗೃಹಿಣಿಯ ಕರ್ತವ್ಯ ಅಂತ ಸುಮ್ಮನಾಗಿ ಬಿಡುತ್ತಾರೆ.

ಫೋಟೋ ಕೃಪೆ : readers digest

  • ಮಹಿಳೆ ತಾಯಿಯಾಗಿ/ ಅತ್ತೆಯಾಗಿ

ಮಹಿಳೆ ತಾಯಿಯಾಗಲು ಇಷ್ಟಪಡುತ್ತಾಳೆ .ಎಷ್ಟೇ ಕಷ್ಟ ಬಂದರೂ ಸಂತಸದಿಂದ ಅನುಭವಿಸುತ್ತಾಳೆ .ಮಗು ಹುಟ್ಟುವ ತನಕ, ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ವನ್ನು ಜೋಪಾನ ಮಾಡುತ್ತಾಳೆ .ಮಗು ಹುಟ್ಟಿದ ಮೇಲೆ ತಾಯಿ ಅನುಭವಿಸುವ ಸಂತಸ ಹೇಳತೀರದು .ಏನೇ ಕಷ್ಟ ಬಂದರೂ ಅದು ಗೌಣ .ಮಗುವಿನ ಲಾಲನೆ ಪಾಲನೆ ,ವಿದ್ಯಾಭ್ಯಾಸ, ಬೆಳವಣಿಗೆಯನ್ನು ಅಚ್ಚುಕಟ್ಟಿನಿಂದ ನೋಡಿಕೊಳ್ಳುತ್ತಾಳೆ .ಮಗು ಮಾತು ಕಲಿಯುವ ತನಕ ,ಅದರ ಅಳು ನಗುವನ್ನು ಅರ್ಥಮಾಡಿಕೊಳ್ಳುತ್ತಾಳೆ. ಒಟ್ಟಿನಲ್ಲಿ ಮಹಿಳೆ ತಾಯಿಯಾಗಿ ಶ್ರೇಷ್ಠ ವ್ಯಕ್ತಿ ಆಗುತ್ತಾಳೆ .ಇದೆ ಮಹಿಳೆ ಅತ್ತೆ ಯಾದ ನಂತರ ಇಷ್ಟವಾಗುವುದಿಲ್ಲ. ಹೆಣ್ಣಿಗೆ ಹೆಣ್ಣೆ ಶತ್ರು ಎನ್ನುವಂತೆ, ತಾನು ಮೊದಲು ಸೊಸೆಯಾಗಿದ್ದೆ ಎನ್ನುವುದನ್ನು ಮರೆತು, ತನ್ನ ಸೊಸೆಯಾದವಳಿಗೆ ಕಷ್ಟಕೊಡಲು ಪ್ರಾರಂಭಿಸುತ್ತಾಳೆ .ಅತ್ತೆ ಯಾದ ಮೇಲೆ ಕೆಲವರ ಸ್ವಭಾವ ಬದಲಾಗುತ್ತದೆ . ಎಲ್ಲಿ ತನ್ನ ಮಗ ಹೆಂಡತಿಯ ಕೈಗೊಂಬೆಯಾಗುತ್ತಾನೆ ಅನ್ನುವ ಚಿಂತೆ . ಹೆಂಡತಿಯನ್ನು ಹದ್ದುಬಸ್ತಿನಲ್ಲಿಡಲು ಸಲಹೆ ಕೊಡುತ್ತಾಳೆ .ತಾನು ಸೊಸೆಗೆ ಸಹಾಯ ಮಾಡದೆ ಎಲ್ಲಾ ಕೆಲಸವನ್ನು ವರ್ಗಾಯಿಸುತ್ತಾಳೆ .ಹೆಚ್ಚಾಗಿ ಗಂಡು ಮಕ್ಕಳು ತಾಯಿಯ ಮಾತನ್ನೇ ನಂಬುತ್ತಾರೆ .ಹೀಗಾಗಿ ಅತ್ತೆ ಸೊಸೆಗೆ ಸಂಘರ್ಷ ಪ್ರಾರಂಭವಾಗುತ್ತದೆ .ಕೆಲವು ಸೊಸೆಯಂದಿರು ಅತ್ತೆಗೆ ಕಾಟ ಕೊಡುವುದು ಇದೆ .

  • ರಾಜಕೀಯದಲ್ಲಿ ಮಹಿಳೆ

ಎಲ್ಲ ಕ್ಷೇತ್ರದಲ್ಲೂ ಮುಂದೆ ಬರಲು ಮಹಿಳೆ ಪ್ರಯತ್ನಿಸುತ್ತಾಳೆ. ಪುರುಷರು ಬಿಡಬೇಕಲ್ಲ. ಮೀಸಲಾತಿ ಇಲ್ಲದಿದ್ದರೂ ಮಹಿಳೆಯರು ಅಲ್ಲಲ್ಲಿ ಮಂತ್ರಿಯಾಗಿ ಕಾಣಿಸುತ್ತಾರೆ. ತಳಮಟ್ಟದಲ್ಲಿ ಮೀಸಲಾತಿಯಿದ್ದು ಅಧಿಕಾರಕ್ಕೆ ಬಂದರೆ , ಕುರ್ಚಿಯಲ್ಲಿ ಕೂತು ಕೆಲಸ ಮಾಡುವವರು ಅವರ ಗಂಡಂದರೇ .ಶಾಸಕರಾಗಲು ಮೀಸಲಾತಿ ಕೊಟ್ಟರೆ, ಮಹಿಳೆಯರು ಮುಂದೆ ಬರಬಹುದು .

  • ಸಿನಿಮಾದಲ್ಲಿ ಮಹಿಳೆ

ನಟನೆಯಲ್ಲಿ ಎಷ್ಟೇ ಗಟ್ಟಿತನವಿದ್ದರೂ , ನಾಯಕಿ ಸ್ಥಾನ, ನಾಯಕನ ನಂತರದ್ದು. ನಟಿಯರಿಗೆ ವಯಸ್ಸಾಗಬಾರದು, ಮದುವೆಯಾಗಬಾರದು, ಮಕ್ಕಳಾಗಬಾರದು. ಇಂತಹವರು ನಾಯಕಿಯಾಗಿ
ಮುಂದುವರಿಯಲು ಅರ್ಹಳಲ್ಲ .ನಾಯಕ ಒಂದು ಸಾರಿ ನಾಯಕನಾದರೆ ಆಯಿತು .ಮುಂದೆ ಯಾವ ಕಟ್ಟುಪಾಡು ಇರುವುದಿಲ್ಲ .

ಫೋಟೋ ಕೃಪೆ : irishnews

  • ಗಂಡನ ಹಿಡಿತದಲ್ಲಿ ಮಹಿಳೆ

ಹೆಣ್ಣು ಮದುವೆಯಾದ ನಂತರ ಗಂಡನ ಸ್ವತ್ತಾಗುತ್ತಾಳೆ .ಕೆಲವು ದಂಪತಿಗಳು ಅನ್ಯೋನ್ಯ ವಾಗಿರಬಹುದು .ಆದರೆ ಅದು ವಿರಳ. ಸಾಮಾನ್ಯವಾಗಿ ಗಂಡನ ಮಾತೆ ನಡೆಯುತ್ತದೆ. ಎಷ್ಟೋ ಹೆಣ್ಣು ಮಕ್ಕಳು ಫೋನ್ ನಲ್ಲಿ ತಾಯಿಯ ಜತೆ ಮಾತನಾಡಲು ಹೆದರುತ್ತಾರೆ .ಅಂದರೆ ಗಂಡನ ಎದುರಿಗೆ ತನ್ನ ಕಷ್ಟ ಸುಖಗಳನ್ನು ಹೇಳಿಕೊಳ್ಳಲು ಇಷ್ಟಪಡುವುದಿಲ್ಲ .ಅವನಿಲ್ಲದಾಗ ಮಾತನಾಡುವುದೇ ಹೆಚ್ಚು. ಹೆಂಡತಿ ಪ್ರತಿಯೊಂದನ್ನು ಗಂಡನಿಗೆ ವರದಿ ಮಾಡಬೇಕು .ಆದರೆ ಗಂಡನ ಚಲನವಲನಗಳನ್ನು ತಿಳಿದುಕೊಳ್ಳಬಾರದು .ಅಪೇಕ್ಷೆಪಟ್ಟರೆ ನಿನಗೇಕೆ ಅಂತ ದಬಾಯಿಸುವುದು .ಇಂತಹ ಸನ್ನಿವೇಶಗಳು ಗಂಡ ಹೆಂಡತಿ ಇಬ್ಬರೂ ಹೆಚ್ಚಿನ ವಿದ್ಯಾವಂತರಾಗಿರುವವರೆ ಆಗಿರುತ್ತಾರೆ .ಗಂಡನದೆ ಮೇಲುಗೈ ಆಗಿರುತ್ತದೆ .ಹೆಣ್ಣು ತನ್ನ ಬಾಲ್ಯದ ಸಹಚರರನ್ನು ಮತ್ತು ಮುಖ್ಯವಾಗಿ ತಂದೆ ತಾಯಿ ಗಳನ್ನು ಬಿಟ್ಟು ಬಂದಿರುತ್ತಾಳೆ .ಅವಳಿಗೆ ಯಾವುದೇ ಭಯ ಉಂಟು ಮಾಡಬಾರದು ಎನ್ನುವ ಸಾಮಾನ್ಯ ಜ್ಞಾನ ಇರುವುದಿಲ್ಲ. ಗಂಡನಾದವನು ಅಕ್ಕ ತಂಗಿಯರ ಹಿಡಿತದಲ್ಲಿ ಇರುತ್ತಾನೆ. ಅವರ ಅಪೇಕ್ಷೆಗಳನ್ನು ಮೇಲೆ ಬಿದ್ದು ಈಡೇರಿಸುತ್ತಾನೆ .ಹೆಂಡತೀನೂ ಅದೇ ರೀತಿ ಒಂದು ಹೆಣ್ಣು ಎನ್ನುವ ಕಲ್ಪನೆ ಬರುವುದೇ ಇಲ್ಲ .



  • ಕೊನೆಯ ಮಾತು

ಹೆಣ್ಣೆಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು. ಉದ್ಯೋಗಕ್ಕೆ ಹೋಗಲು ಪ್ರೋತ್ಸಾಹಿಸಬೇಕು. ಗಂಡಿನಂತೆ ಹೆಣ್ಣು ಸಹ ತನ್ನ ಕಾಲ ಮೇಲೆ ನಿಲ್ಲುವಂತೆ ನೋಡಿಕೊಳ್ಳಬೇಕು. ಹೆಣ್ಣು ಗಂಡು ಎಂಬ ಬೇಧಬಾವ ಮಾಡಬಾರದು. ಹೆಣ್ಣು ಮಾಡುವ ಕೆಲಸವನ್ನು ,ಗಂಡು ಸಹ ಮಾಡುವಂತೆ ಪ್ರೇರೇಪಿಸುವುದು .ಮುಂದೆ ಜೀವನದಲ್ಲಿ ಹೆಣ್ಣಿಗೆ ಗಂಡು ಆಸರೆಯಾಗಬಹುದು. ಹೆಣ್ಣು ಯಾವುದೇ ಕ್ಷೇತ್ರ ಆರಿಸಿಕೊಂಡರು, ಅವಳಿಗೆ ಬೆಂಬಲಿಸ ಬೇಕು .

ಅತ್ತೆ ಸೊಸೆ ಸಂಬಂಧ ಚೆನ್ನಾಗಿರಬೇಕಾದರೆ ಒಬ್ಬರಿಗೊಬ್ಬರು ನಂಬಿಕೆ ಇಡಬೇಕು. ಹೆಣ್ಣಿನ ಶೋಷಣೆ ನಿಲ್ಲಬೇಕಾದರೆ ,ಗಂಡು ಬಾಲ್ಯದಲ್ಲಿ ವಿವಾಹ ಹಾಗುವಾಗ ಹೆಂಡತಿಯಾದಗ, ತಾಯಿಯಾದಗ, ತನ್ನ ಪ್ರತಿಷ್ಠೆಯನ್ನು ಬದಿಗೊತ್ತಿ ಸಹಕರಿಸಬೇಕು .


  • ದೇವರಾಜ ಚಾರ್ (ಭೂ ವಿಜ್ಞಾನಿ, ನಿವೃತ್ತ ಕೆಪಿಸಿಎಲ್ ಇಂಜೀನಿಯರ್) ಮೈಸೂರು. 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading