ಅಕ್ಷರ ಗುಂಡಾಗಿ ಬರೆದರೆ ಹೆಣ್ಣು ಕೊಡ್ತಾರಾ..??



ಅನ್ನದ ಋಣ, ನೀರಿನ ಋಣ , ಕೈ ಹಿಡಿಯುವವರ ಋಣ ಆ‌ ಬ್ರಹ್ಮ ಯಾರ್ಯಾರ ಹಣೆಯಲ್ಲಿ ಏನು‌ ಬರೆದಿರುತ್ತಾನೋ ಅದರಂತೆಯೇ ನೆಡೆವುದು. ಬದುಕು ಚೆನ್ನಾಗಿರಬೇಕು ಅಂದ್ರೆ ಮುಖ್ಯವಾಗಿ ಕೈ ಬರಹಕ್ಕಿಂತಲೂ ಹಣೆಬರಹ ನೆಟ್ಟಗಿರಬೇಕು ಅಷ್ಟೇಯಾ…- ಹಿರಿಯೂರು ಪ್ರಕಾಶ್, ಮುಂದೆ ಓದಿ…

ಕಾಲೇಜು ಮುಗಿಸಿ ಉದ್ಯೋಗಕ್ಕೆ ಸೇರಿದ್ದ ಆರಂಭದ ದಿನಗಳವು. ನಮ್ಮ ಹಿರಿಯೂರಿನ ಹತ್ತಿರವೇ ಇದ್ದ ಆದಿವಾಲದಲ್ಲಿ ಬ್ಯಾಂಕ್ ಉದ್ಯೋಗಕ್ಕೆ ಸೇರಿದ್ದೆ. ಮನೆಯಿಂದ ಆರೇಳು ಕಿಮೀ ದೂರದ ಕಚೇರಿಗೆ ನಿತ್ಯವೂ ಸೈಕಲ್ ಮೇಲೆಯೇ ಹೋಗಿ ಬರುತ್ತಿದ್ದ ಜೋಷ್ ತುಂಬಿದ್ದ ಕಾಲವದು. ಕಾಲೇಜಿನಲ್ಲಿರಲಿ ಉದ್ಯೋಗದಲ್ಲಿರಲಿ, ದಿನನಿತ್ಯ ಊಟ ತಿಂಡಿ ಬಿಟ್ಟರೂ ಕ್ರಿಕೆಟ್ ಹಾಗೂ ಕೇರಂ ಪ್ರಾಕ್ಟೀಸ್ ಮಾತ್ರ ಬಿಡುತ್ತಿರಲಿಲ್ಲ. ಉದ್ಯೋಗವನ್ನು ಸಹಾ ಒಂದು ಕ್ರೀಡೆಯೆಂಬಂತೆ ಖುಷಿಯಿಂದ ಆಸ್ವಾದಿಸಿ ಕೆಲಸ ಮಾಡುತ್ತಿದ್ದುದ ರಿಂದ ನಾನೊಬ್ಬ ಉದ್ಯೋಗಿ ಎಂಬ ವಿಶೇಷವಾದ ಭಾವನೆ ನನ್ನಲ್ಲಿರಲಿಲ್ಲ. ಬಹುಶಃ ಈ ಮನೋಭಾವನೆಯಿಂದ ಉದ್ಯೋಗ ಆರಂಭಿಸಿದ ಕಾರಣಕ್ಕೇ ಏನೋ ಇಂದಿನ ಉದ್ಯೋಗದ ವಾತಾವರಣದಲ್ಲೂ ಕ್ರೀಡಾ ಮನೋಭಾವವನ್ನು ಹಾಗೆಯೇ ಉಳಿಸಿ ಬೆಳೆಸಿಕೊಂಡು ಬರಲು ಸಾಧ್ಯವಾಗಿದ್ದು.

ಅದಿರಲಿ. ಈಗ ವಿಷಯ ಅದಲ್ಲ.

ನಾನು ಕೆಲಸ ಮಾಡುತ್ತಿದ್ದ ಆದಿವಾಲ ಶಾಖೆಯಲ್ಲಿ ತಿಪ್ಪೇಸ್ವಾಮಿ ಎಂಬುವರು ಸಹಾಯಕರಾಗಿದ್ದರು. ಆತ ವಯಸ್ಸಿನಲ್ಲಿ ನಮಗಿಂತ ತುಂಬಾ ಹಿರಿಯರಾಗಿದ್ದರೂ ಪ್ರತೀ ವಿಷಯಕ್ಕೂ ಅವರನ್ನು ಸಕತ್ ತಮಾಷೆ ಮಾಡುತ್ತಾ ಕಾಲೆಳೆಯುತ್ತಿದ್ದೆ. ಆತನಿಗೆ ನನ್ನನ್ನು ಕಂಡರೆ ಬಹಳ ಅಭಿಮಾನ ಇತ್ತು. ಬ್ಯಾಂಕಿನ ಕೆಲಸವನ್ನು ಚಕ ಚಕ ಅಂತ ಯಾವುದೇ ಕಿರಿಕ್ ಇಲ್ಲದೇ ನಿರಾಯಾಸವಾಗಿ ಮುಗಿಸಿ ಸಂಜೆಯಾಗುತ್ತಲೇ ಹಿರಿಯೂರಿನ ಕ್ರಿಕೆಟ್ ಮೈದಾನಕ್ಕೆ ಓಡುತ್ತಿದ್ದ ನನ್ನನ್ನು ಆತ ಬಹಳ ಅಕ್ಕರೆಯಿಂದಲೇ ಮಾತನಾಡಿಸುತ್ತಾ ಮೈದಾನದಲ್ಲಿ ನಮ್ಮ ಆಟವನ್ನು ನೋಡಲು ಆಗಾಗ್ಗೆ ಬರುತ್ತಿದ್ದರು. ಅವರ ಹಿರಿಯೂರಿನ ಭಾಷೆ ಕೇಳಲು ಸಕತ್ ಮಜಾ ಇರುತ್ತಿತ್ತು. ಮೇಲಾಗಿ ನಾವೆಲ್ಲಾ ಆಗ ಸಿರ್ಫ಼್ ಕಚೇರಿಯ ಕೆಲಸ ಮಾತ್ರವಲ್ಲದೇ ಅದೂ ಇದೂ ಅಂತ ಕೆಲವು ಕ್ರಿಯಾತ್ಮಕ. ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಸಹಾ ಹಮ್ಮಿಕೊಂಡು ತುಂಬಾ ಕ್ರಿಯಾಶೀಲವಾಗಿದ್ದರಿಂದ ತಿಪ್ಪೇಸ್ವಾಮಿ ಗೆ ನನ್ನ ಕಂಡ್ರೆ ಬೋ ಪಿರೂತಿ ಕಣ್ರೀ .

” ಅಲ್ಲಪ್ಪಾ…. ಆಫ಼ೀಸ್ನಾಗೂ ಬಾಳಾ ಚುರುಕಾಗಿ ಕೆಲ್ಸ ಮಾಡ್ತೀಯಾ , ಆಟನೂ ಪಸಂದಾಗಿ ಆಡ್ತೀಯಾ. ದಿನಾಲೂ ಒಂಚೂರು ಸುಸ್ತಾಗದಂತೆ ಬ್ಯಾಂಕ್ ಕೆಲಸ ಎಲ್ಲಾ ಮುಗ್ಸಿ ಬಿಡ್ತೀಯಾ. ಭಾಳಾ ಜೋರು ಬುಡು ನೀನು ” ಎಂಬ ಕಾಂಪ್ಲಿಮೆಂಟ್ ಕೂಡ ನನಗೆ ಅವರಿಂದ ಆಗಾಗ್ಗೆ ಸಿಗ್ತಾ ಇತ್ತು.

ಫೋಟೋ ಕೃಪೆ : Hindustan Times

ಹೀಗಿದ್ದಾಗ ಒಮ್ಮೆ ತಿಪ್ಪಣ್ಣ ” ಅಲ್ಲಪ್ಪ ಕೆಲ್ಸ ಸಿಕ್ಕಾಯ್ತು , ಒಂದು ಒಳ್ಳೆ ಹುಡ್ಗಿ ನೋಡಿ ಮದ್ವೆ ಆಗ್ಬೋದಲ್ಲ ? ಎಂದು ಕಾಳಜಿ ತುಂಬಿದ ದನಿಯಲ್ಲಿ ವಿಚಾರಿಸುತ್ತಿದ್ದ. ಆಗೆಲ್ಲಾ ನಾನು ” ಗಡ್ಡ ಬಿಟ್ಕೊಂಡ್ ಜೋಗಿ ಥರಾ ಇರೋ ನನಗೆ ಯಾರು ಹೆಣ್ಣು ಕೊಡ್ತಾರೆ ತಿಪ್ಪಣ್ಣ ” ಎಂದು ತಮಾಷೆಯಾಗಿಯೇ ಪ್ರಶ್ನಿಸುತ್ತಿದ್ದೆ. ಬಹುಶಃ ಅದನ್ನು ಆತ ಗಂಭೀರವಾಗಿಯೇ ತೆಗೆದುಕೊಂಡು ‘ ಪಾಪ ಈ ಹುಡ್ಗನಿಗೆ ಹೆಣ್ಣು ಸಿಕ್ಕಿಲ್ಲ ‘ ಅಂತ ಅಂದ್ಕೊಂಡಿದ್ದಿರ ಬಹುದು ಅನ್ಸುತ್ತೆ.

ಕೆಲ ದಿನಗಳ ತರುವಾಯ ಒಂದು ಸಂಜೆ ಆಫ಼ೀಸಿನಲ್ಲಿದ್ದ ನನ್ನ ಬಳಿ ಅವಸರವಸರವಾಗಿ ಬಂದ ತಿಪ್ಪೇಸ್ವಾಮಿ ” ನಾನು ನಿನ್ನೆ ಬೆಂಗ್ಳೂರಿಗೆ ಹೋಗಿದ್ದೆ ಕಣಪ್ಪಾ . ಅಲ್ಲಿ ನಿನಗೆ ಒಂದು ಹುಡುಗಿ ನೋಡಿದೆ . ನೋಡೋಕೆ ಬಾಳಾ ಚನ್ನಾಗಿತ್ತು ಮಗ . ಅವರ ಅಪ್ಪ ತಾಶೀಲ್ದಾರ್ರು, ನನಗೆ ಗೊತ್ತಿರೋರೇ . ವಿಜಯ ನಗರದಲ್ಲಿ ದೊಡ್ ಮನೆ ಇದೆ. ಆ ಮಗ ಇನ್ನೂ ಓದ್ತಾ ಇದೆಯಂತೆ. ಆಮೇಲೆ ಅವ್ರೂ ನಿಮ್ಮವ್ರೇ…! ನಿನ್ ಬಗ್ಗೆ ಎಲ್ಲಾ ಹೇಳಿದ್ದೀನಿ. ಆದ್ರೆ ನಿನ್ ಬಗ್ಗೆ ಎಲ್ಲಾ ಕೇಳಿದ್ ಮೇಲೆ ಯಾಕೋ ಅವ್ರು ಒಪ್ಪಿದಂಗೆ ಕಾಣ್ಲಿಲ್ಲಪ್ಪಾ…

ಹೀಗೆ ಒಂದೇ ಉಸಿರಿಗೆ ಹೇಳುತ್ತಲೇ ಹೋದ ತಿಪ್ಪಣ್ಣನನ್ನು ಮಧ್ಯದಲ್ಲೇ ತಡೆದೆ. ” ಅಲ್ಲಾರೀ ಸ್ವಾಮಿ … ನನಗೆ ಹುಡುಗಿ ಬೇಕು ಅಂತ ನಿಮ್ಮತ್ರ ನಾನ್ಯಾವತ್ತಾದ್ರೂವೇ ಹೇಳಿದ್ನಾ…? ನನ್ನನ್ನು ಒಪ್ಪೋಕೆ ಬಿಡೋಕೆ ಅವರ್ ಯಾರ್ರೀ…? ನಾನೇನು ಅವರ ಮುಂದೆ ಹೋಗಿ ಹುಡುಗಿ ಕೊಡ್ರೀ ಅಂತಾ ಕೂತಿದ್ನಾ..? ನಾನು ಹಿಂಗೆ ಆರಾಮಾಗಿರೋದು ನಿಮಗೆ ಇಷ್ಟ ಇಲ್ವಾ ? ಎಂದಿದ್ದೆ.

ಅದಕ್ಕೆ ತಿಪ್ಪಣ್ಣ ” ಅಲ್ಲಪ್ಪಾ…‌ನೀನೆ‌ ಅಲ್ವಾ ಹೇಳಿದ್ದು ನನಗೆ ಯಾರು ಹೆಣ್ಣು ಕೊಡ್ತಾರೆ ಅಂತ ! ಅದನ್ನು ಮನ್ಸಾಗೆ ಇಟ್ಕೊಂಡೇ ಹುಡುಗೀನಾ ನೋಡಿದ್ದು. ಅವ್ರಿಗೆ ಹುಡುಗ ಎಂಗೇ ಅಂಬ್ತ ಹೇಳಿದ್‌ ಮೇಲೂ ಯಾಕೋ ಒಪ್ಪಿದಂಗೆ ಅನಿಸಲಿಲ್ಲಪ್ಪ.!

ಫೋಟೋ ಕೃಪೆ : blog.gouletpen

ಯಾಕೋ ತಲೆ‌ ಕೆಟ್ಟೋಯ್ತು. ಈ ತಿಪ್ಪಣ್ಣ ನನ್ ಬಗ್ಗೆ ಏನೆಲ್ಲಾ ಹೇಳಿರಬಹುದು ಎಂಬ ಯೋಚನೆಯಲ್ಲಿಯೇ ” ಅಲ್ರೀ ತಿಪ್ಪೇಸ್ವಾಮಿ, ಅವರತ್ರ ನನ್ ಬಗ್ಗೆ ಏನೆಲ್ಲಾ ಹೇಳಿದ್ದೀಯಪ್ಪಾ….. ಎಂದೆ.
ಅದಕ್ಕೆ ಆತ ತುಂಬು ಮುಗ್ಧತೆಯಿಂದ ” ನೋಡಿ ಸ್ವಾಮಿ ಹಿರಿಯೂರ್ನಾಗೆ ನಮ್ ಹುಡುಗ ಒಬ್ಬ ಇದಾನೆ. ನೋಡೋಕೆ ಚಂದಾಗವ್ನೆ, ಅದೆಂಥದ್ದೋ ಬ್ಯಾಟ್ ಆಟ ಪಸಂದಾಗ್ ಆಡ್ತಾನೆ, ಕ್ಯಾರಂ ಬೋರ್ಡು ಚೆನ್ನಾಗ್ ಆಡ್ತಾನೆ… ಆಮ್ಯಾಕೆ ಅಕ್ಷರ ಭಾಳಾ ಗುಂಡು ಗುಂಡುಗೆ ಬರೀತಾನೆ…

ಹಿಂಗೆಲ್ಲಾ ಹೇಳ್ದೇ ಕಣಪ್ಪಾ.!

ಈ ಭರದಲ್ಲಿ ನಾನು ಉದ್ಯೋಗ ಮಾಡುತ್ತಿರುವ ವಿಚಾರವನ್ನೇ ಆತ ಹೇಳೋದು ಮರೆತಿದ್ದನಂತೆ.!

ನನ್ನ ತಲೆ ಚಿತ್ರಾನ್ನಾವಾಗೋಯ್ತು ! ಅಲ್ಲಾರೀ, ಹೆಣ್ಣು ಕೊಡೋರಿಗೆ ಬೇಕಾಗಿರೋದು ಹುಡುಗನ ಗುಣ, ಸ್ವಭಾವ ಉದ್ಯೋಗ, ಸಂಪಾದನೆ ಹಾಗೂ ಅವನ ಮನೆ -ಮಠ ಇತ್ಯಾದಿ. ಆದರೆ ಯಾವಾನಾದ್ರೂ ಹುಡುಗ ಚೆನ್ನಾಗಿ ಕ್ರಿಕೆಟ್ ಆಡ್ತಾನೆ ಅಂತಾನೋ ಇಲ್ಲವೇ ಅಕ್ಷರ ಗುಂಡಗೆ ಬರೀತಾನೆ ಅಂತಾನೋ ತಮ್ಮ ಹುಡುಗೀನಾ ಕೊಡ್ತಾರೇನ್ರೀ…?? ಅಂತೂ ನನ್ನ ಮರ್ಯಾದೆನಾ ಸ್ವಲ್ಪಮಟ್ಟಿಗೆ ಹರಾಜು ಹಾಕಿ ಬಂದ್ರಿ !

ಹೋಗ್ಲೀ ಬಿಡ್ರಿ ., ನನಗೇನೂ ಬೇಜಾರಿಲ್ಲ. ಅವರಾರೋ ನಾನ್ಯಾರೋ ! ಆದ್ರೆ ಇನ್ಮುಂದೆ ಹುಡುಗೀನ ಕೇಳೋವಾಗ ಹುಡುಗ ಅಕ್ಷರ ಚೆನ್ನಾಗಿ ಬರೀತಾನೆ ಅಂತ ಹೇಳ್ಬೇಡಿ. ಯಾಕಂದ್ರೆ ಬದುಕು ಚೆನ್ನಾಗಿರಬೇಕು ಅಂದ್ರೆ ಮುಖ್ಯವಾಗಿ ಕೈ ಬರಹಕ್ಕಿಂತಲೂ ಹಣೆಬರಹ ನೆಟ್ಟಗಿರಬೇಕು ….ಎಂದೆ. ನಾನು ಹೇಳಿದ್ದನ್ನು ಆತ ಅದೇನು ಕೇಳಿಸಿಕೊಂಡನೋ ಬಿಟ್ಟನೋ ಗೊತ್ತಿಲ್ಲ. ಅಷ್ಟರಲ್ಲಿ ಮ್ಯಾನೇಜರ್ ” ತಿಪ್ಪೇಸ್ವಾಮಿ ಬನ್ರೀ ಬೇಗ ” ಎಂದಾಗ ತಿಪ್ಪಣ್ಣ ನನ್ನಿಂದ ಕಾಲ್ಕಿತ್ತಿದ್ದ .



** ಮರೆಯುವ ಮುನ್ನ **

ಅನ್ನದ ಋಣ, ನೀರಿನ ಋಣ , ಕೈ ಹಿಡಿಯುವವರ ಋಣ ಆ‌ ಬ್ರಹ್ಮ ಯಾರ್ಯಾರ ಹಣೆಯಲ್ಲಿ ಏನು‌ ಬರೆದಿರುತ್ತಾನೋ ಅದರಂತೆಯೇ ನೆಡೆವುದು. ಈ ತಿರುಗೋ ಭೂಮಿಯಲ್ಲಿ ಬದುಕಿನ ಪಯಣದಲ್ಲಿ ಯಾರು ಯಾವಾಗ ಎಲ್ಲಿ ಜೊತೆಯಾಗುತ್ತಾರೆ, ಯಾರು ಎಲ್ಲಿಯವರೆಗೆ ಜೊತೆಗಿದ್ದೂ ಕಾಣೆಯಾಗುತ್ತಾರೆಂಬುದೇ ಸೃಷ್ಟಿಯ‌ ವಿಸ್ಮಯ. ಹೀಗಾಗಿ ಅಂದು ನಮ್ಮ ತಿಪ್ಪಣ್ಣ ನನ್ನ ಬಗೆಗೆ ಕೇವಲ ಕ್ರಿಕೆಟ್ ಮತ್ತು ಹ್ಯಾಂಡ್ ರೈಟಿಂಗ್ ಗಳನ್ನೇ ಹೇಳದೇ ನನ್ನ ಉದ್ಯೋಗವೂ ಸೇರಿದಂತೆ ಮತ್ತೇನನ್ನೋ ಹೈಲೈಟ್ ಮಾಡಿ ಹೇಳಿದ್ದಲ್ಲಿ ಬೆಂಗಳೂರಿನ ವಿಜಯನಗರದ ಆ ತಹಶೀಲ್ದಾರರೂ ಮಗಳನ್ನು ಕೊಡಲು ಆಸಕ್ತಿ ತೋರುತ್ತಿದ್ದರೇನೋ ಗೊತ್ತಿಲ್ಲ !

ಆದರೆ ನನ್ನ ಈ ಬದುಕಿನಲ್ಲಿ ನನಗೇ ಅಂತಾನೇ ಆಲ್ ರೆಡಿ ಒಂದು ಹುಡುಗಿಯನ್ನು #ಬ್ರಹ್ಮ ಫ಼ಿಕ್ಸ್ ಮಾಡಿರುವಾಗ , ಮಿಕ್ಕ ಯಾವ ವಿಚಾರಗಳೂ ಅಡೆತಡೆಗಳೂ ಅಲ್ಲಿ ಅಡ್ಡ ಬರಲಾರವು . ನನಗೇ ಅಂತ ಅಲ್ಲ, ಎಲ್ಲರ ಬಾಳಿನ ವಿಚಾರದಲ್ಲೂ ಇದು ಬಹುತೇಕ ನಿಜ…. ಅಲ್ವೇ…??

ಆದರೆ ನನಗೆ ಇನ್ನೂ ವಿಸ್ಮಯದ ಜೊತೆಗೆ ವಿನೋದವನ್ನೂ ಮೂಡಿಸುತ್ತಿರುವುದು ನಮ್ಮ ತಿಪ್ಪಣ್ಣನ ಅಸೀಮ ಮುಗ್ಧತೆ ಹಾಗೂ ನನ್ನನ್ನು ಆತ ಅರ್ಥೈಸಿಕೊಂಡಿರುವ ರೀತಿ. ನನ್ನ‌ ಕ್ರಿಕೆಟ್ ಆಟ ಹಾಗೂ ಚಂದದ ಹ್ಯಾಂಡ್ ರೈಟಿಂಗೇ ಒಂದು ‌ಹುಡುಗಿಯನ್ನು ಕೇಳುವಷ್ಟರಮಟ್ಟಿಗಿನ ಅರ್ಹತೆ ದೊರಕಿಸಿಕೊಡಬಲ್ಲವು ಎಂದು ನಂಬಿದ್ದ ಆತನ ಪ್ರಾಮಾಣಿಕ ಅಮಾಯಕತೆಗೆ ಈಗಲೂ ನಗು ಬರುತ್ತದೆ.
ಇಂದು ಅದೇ ಆದಿವಾಲದ ನಮ್ಮ ಹಳೆಯ ಬ್ಯಾಂಕ್ ಕಚೇರಿಯ ಕಟ್ಟಡದ ಮುಂದೆ ಸಾಗುವಾಗ ಮುವ್ವತ್ತು ವರ್ಷಗಳ ಹಿಂದಿನ ಸಹೋದ್ಯೋಗಿ ತಿಪ್ಪಣ್ಣನ‌ ಅನೇಕ ತಮಾಷೆಯ ನೆನಪುಗಳ ಒಂದು ಝಲಕ್ ಹಾಗೇ ಕಣ್ಮುಂದೆ ಬಂತು…..!

ಯಾರ ಕೈ ಬರಹ ಹೇಗಿದ್ದರೇನು….ಹಣೆಬರಹ ಮುಖ್ಯ !

ಪ್ರೀತಿಯಿಂದ..


  • ಹಿರಿಯೂರು ಪ್ರಕಾಶ್  (ಲೇಖಕರು, ಚಿಂತಕರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW