ಹೊಟ್ಟೆ ಹರಿದು ಮಗು ಕೊಡುವ ಹೆಣ್ಣು…



ಕರೆಯದೆ ಧುತ್ತನೆ ಬಂದೆರಗುವ ರಕ್ತದೊತ್ತಡ, ಮಧುಮೇಹ, ಥೈರಾಯ್ಡ್ ಕಾಯಿಲೆಗಳು. ದಿನದಿನಕ್ಕೆ ಮೈದುಂಬುವ ಕೊಬ್ಬು, ಬದಲಾಗುವ ದೇಹದ ಅಪರಿಚಿತ ಪರಿ. ನುಗ್ಗಾದರೂ ಮುನ್ನುಗ್ಗುವ ಛಾತಿ ಹೆಣ್ಣಿನದು. ಕೇವಲ ತಾನು ವಂಶದ ಕುಡಿಗೆ ಆಸರೆಯಾಗಲು. – ಡಾ. ಪ್ರಕಾಶ ಬಾರ್ಕಿ, ಮುಂದೆ ಓದಿ…

ಬಾಣಂತಿ ಮುಂದೆ ಗೊಣಗಾಟ ತಾಯ್ತನದ ದುರ್ಗಮ ದಾರಿ  ಛೇ..ಮತ್ತೆ ಹೆಣ್ಣು ಮಗು ಹುಟ್ಟಿತು. [ಹೆಣ್ಣು, ಗಂಡು ಮಗು ಹುಟ್ಟಲು ಪುರುಷನೇ(XY chromosome) ಕಾರಣೀಕರ್ತ ಹೊರತು ಹೆಣ್ಣಲ್ಲ(XX chromosome)]

ಇವಳು ಅನಿಷ್ಟೆ..!! ಡೆಲಿವರಿ ಟೈಮಲ್ಲಿ ನೋವು ಕೊಟ್ಟು ಸಹಕರಿಸದೇ #ಸಿಜೇರಿಯನ್ ಆಪರೇಷನ್ ಗೆ ಹಣ ಕಳೆದಳು. ಆಸ್ಪತ್ರೆಯ ಖರ್ಚು ಸಾವಿರ- ಸಾವಿರ ಹರಿದೋಯ್ತು.!! ಸರ್ಕಾರಿ ಆಸ್ಪತ್ರೆ ಆಗಿದ್ರೆ ಒಂದಿಷ್ಟು ಉಳಿತಿತ್ತು.ಜಗತ್ತಿನಲ್ಲಿ ಯಾರೂ ಹೆತ್ತಿರದ್ದನ್ನು ನೀನು ಹೆತ್ತಿದ್ದಿಯಾ.. ನೋಡು!! ಮೈಗಳ್ಳಿ.!! ಸೊಂಟ ನೋವಂತೆ. ಒಂದು ಹಡಿದು ಈ ಗತಿ. ಇನ್ನೊಂದಾದರೆ ಮುಗೀತು.

ನಿನ್ನ ದೇಕರೇಖಿಯಲ್ಲಿಯೇ ನನ್ನ ಜೀವ ಸಾಕು- ಸಾಕಾಯ್ತು.!!.

………..ಬ್ಲಾ…..ಬ್ಲಾ…….!!!

ಲೇ ದೋಸ್ತ್!!… ಮಗು ಹೆತ್ತು ಸುಸ್ತಾಗಿ #ತಾಯ್ತನದ ಘಮಲು ಆಸ್ವಾದಿಸುತ್ತಿರುವ ಆ ಹೆಣ್ಣಿನ ಮುಂದೆ ಹೀಗೆಲ್ಲ “ಅಸಹಾಯಕತೆ”, ಮೂದಲಿಕೆ, ಚುಚ್ಚು ಮಾತಾಡಬೇಡ. ಆ ಜೀವ ಇನ್ನಷ್ಟು ಜರ್ಝರಿತಗೊಂಡು, ಖಿನ್ನತೆಗೆ ಒಳಗಾದರೆ ಆ ಪಾಪ ನಿನ್ನ ಕಾಡದೆ ಇರದು.

ಹೀಗೆ ಗೊಣಗುವ ಮೊದಲು ಮೂಕ ಪ್ರೆಕ್ಷಕನಂತೆ ತಾಯ್ತನದ ಹಿಂದಿನ ದಟ್ಟ ನೋವಿನ ರಹಸ್ಯ ಕಂಡ ನನ್ನ ಅನುಭವ ಒಂಚೂರು ಓದಿಬಿಡು. #ಹೆಣ್ಣಿನ_ಗರ್ಭದಲ್ಲಿ ಮತ್ತೊಂದು ಜೀವ ಚಿಗುರೊಡೆದ ದಿನದಿಂದಲೆ ಮನೆ ಮಂದಿಗೆಲ್ಲಾ ಸಂಭ್ರಮ. ಗರ್ಭ ಹೊತ್ತವಳ ದೇಹ, ಮನಸ್ಸು ಏರಿಳಿತಗಳ ಅಲೆಗೆ ನಲುಗಿ ಹೋಗುತ್ತೆ. ಅವಳಿಗೆ ಗರ್ಭ ನಿಂತ ಕ್ಷಣದಿಂದ, ಹೆರಿಗೆಯ ತನಕದ ದೇಹ, ಮನಸ್ಸಿನ ಭಾರಿ ಬದಲಾವಣೆ, ಹಾರ್ಮೋನುಗಳ ಏರಿಳಿತಗಳಿಗೆ ವೈದ್ಯ, ದಾದಿಯರೆ ಮೂಕ ಸಾಕ್ಷಿ.

ಮೊದಲ ಮೂರು ತಿಂಗಳು ಬಗ್ಗು ಬಡಿದು ಹಾಕುವ ವಾಂತಿ, ಉಬ್ಬಳಿಕೆ. ಅನ್ನದ ಘಮ ಮೂಗು ತಾಗಿದರೂ ಹಿಂಡುವ ಕರುಳು. ಒತ್ತರಿಸಿ ಮೆಲಕ್ಕೇರುವ ವಾಂತಿ. (Hyperemesis Gravidarum)
ಏನು ತಿಂದರೂ, ಕುಡಿದರೂ ಹೊಟ್ಟೆ ಹಿಡಿಯದು. ದೇಹ ದಣಿದು ಮುದುಡಿ ಹೋಗುತ್ತೆ. ಅದೇನೇನೋ ತಿನ್ನುವ ಆಸೆ.

ಫೋಟೋ ಕೃಪೆ : firstcry

ಅದೆಲ್ಲಿಂದಲೋ ಬೇಡಿ ಬರುವ ಬಯಕೆಗಳು.

ಹಲ್ಲು ಜುಮ್ಮೇನ್ನುವ ಹುಳ್ಳನೆಯ ಹಣ್ಣು, ನಾಲಿಗೆ ನೀರೂರಿ ಸಿಹಿ ಸವಿಯುವ, ಮುಂತಾದ ಏನೇನೋ ಬಯಕೆ. ನಂತರದ ದಿನಗಳು ಹೆಚ್ಙು ಪ್ರಯಾಣಿಸುವಂತಿಲ್ಲ. ಹಬ್ಬ, ಮದುವೆ- ಮುಂಜಿ, ಟೆರೆಸ್ ಹತ್ತಿ ಸುತ್ತು, ಇಷ್ಟದ ತಿನಿಸು, ದೂರದ ಯಾನ, ಉಹ್ಞುಂ!! ಎಲ್ಲದಕ್ಕೂ ತಿಲಾಂಜಲಿ. ಅವಳಾಯಿತು, ಚಿಗಿತ ಮಗುವಾಯಿತು. ಮನೆ, ಗಂಡ, ಮನೆಕೆಲಸ ಇವಿಷ್ಟೇ.

ಒಲ್ಲದ ಮನಸ್ಸಿನಿಂದ ಪ್ರತಿ ದಿನ ನುಂಗುವ ಒಂದ್ಹಿಡಿ ಮಾತ್ರೆ. ಹೊಟ್ಟೆಯೊಳಗೆ ಆಗಾಗ ಅನುಭವಕ್ಕೆ ಬರುವ ಚಿಗುರು ಮಗುವಿನ ಮಿಸುಕಾಟ, ನೆಗೆತ, ಮೌನ ಮಾತು.

ದೇಹದ ಅಲ್ಲಲ್ಲಿನ ಅಂಗಗಳಲ್ಲಿ ಬದಲಾಗುತ್ತಿರುವ ರೂಪ, ಬಣ್ಣ, ಗಾತ್ರ. ಮಗು ಬೆಳೆದು ನಿಂತ  “ತುಂಬಿದ ಹೊಟ್ಟೆ”. ಸೊಂಟ ನೋವು. ವಿಪರೀತ ಕಾಡುವ ತೊಡೆ ನೋವು. ತಳ ಹೊಟ್ಟೆ ಹಿಂಡುವ ಮಲಬದ್ದತೆ. ಎದೆಯುರಿಯುವ ಹುಳಿತೇಗು. ಕೂತು ಏಳಲು ಭೂಮಿಗೆ ಊರುವ ಕೈ ಆಸರೆ.

ಅಬ್ಬಬ್ಬಾ!! ನೋವು ನೂರಿದ್ದರು ನಗುವ ವದನ. ಮೊದಲಿನ ಬಟ್ಟೆಗಳಾವವು ಬರಲೋಲ್ಲವು.

ಕರೆಯದೆ ಧುತ್ತನೆ ಬಂದೆರಗುವ ರಕ್ತದೊತ್ತಡ, ಮಧುಮೇಹ, ಥೈರಾಯ್ಡ್ ಕಾಯಿಲೆಗಳು. ದಿನದಿನಕ್ಕೆ ಮೈದುಂಬುವ ಕೊಬ್ಬು, ಬದಲಾಗುವ ದೇಹದ ಅಪರಿಚಿತ ಪರಿ. ನುಗ್ಗಾದರೂ ಮುನ್ನುಗ್ಗುವ ಛಾತಿ ಹೆಣ್ಣಿನದು. ಕೇವಲ ತಾನು ವಂಶದ ಕುಡಿಗೆ ಆಸರೆಯಾಗಲು.

ಒಂಬತ್ತು ತಿಂಗಳಿನ ಬದುಕು ದುರ್ಗಮ ದಾರಿಯ ಪಯಣ. ವೈದ್ಯ, ದಾದಿಯರು ನಿತ್ಯ ಕಾಣುವ ಹೆಣ್ಣಿನ ಸುಮಧುರ ನೋವುಗಳು.

ಫೋಟೋ ಕೃಪೆ : independent

ಕೊನೆಯ ಹಂತ ಹೆರಿಗೆ.

ಹೆರಿಗೆ ಸಹಜವಾದರೆ ಒಂದಿಷ್ಟು ನಿರಾಳತೆ. ಮಗು ತಲೆ ದೊಡ್ಡದಿದೆ, ತೂಕ ಹೆಚ್ಚಿದೆ ಎಂದಾಗ ವೈದ್ಯರು “ಯೋನಿಯ” ಅಕ್ಕ ಪಕ್ಕ ಕತ್ತರಿಸಿ (Episiotomy) ಕತ್ತರಿ ಪ್ರಯೋಗಿಸುವ ಮೂಲಕ ಮಗು ಭುವಿಗಿಳಿಸುವರು.

ರಕ್ತ ಜಳ್ಳನೆ ಚಿಮ್ಮುವುದು. ಹರಿದ ಯೋನಿಗೆ ಮತ್ತೇ ಎಂಟ್ಹತ್ತು ಹೊಲಿಗೆ . ಗಾಯ ಒಣಗಲು ಸಮಯ ಹೆಚ್ಚು. ಸಕ್ಕರೆ ಕಾಯಿಲೆಯಿದ್ದರಂತೂ ಗಾಯವು ಬೇಗನೆ ಒಣಗದು. ಅದರ ನೋವು ಆಕ್ರಂದನ ನನ್ನಿಂದ ಬರೆಯಲಾಗದು. ನಾವು ಕಲ್ಪನೆ ಮಾಡಿಕೊಂಡರೆ ತರ- ತರ ಕೈ ಕಾಲು ನಡಗುತ್ತವೆ. ಇನ್ನೂ ಆ ಹೆಣ್ಣಿನ ನೋವೆಷ್ಟೀರಬೇಕು. ದೇವರೆ.!!! ರಕ್ತದೊತ್ತಡ ಹೆಚ್ಚಾಗಿ ಫಿಟ್ಸ್ ಬರುವ ಸಂಭವ ಹೆಚ್ಚು. ಜೀವಕ್ಕೆರಗುವ ಆಪತ್ತು ಮಗ್ಗುಲಿಗೆ ಮಲಗಿರತ್ತೆ.

ಸಹಜ ಹೆರಿಗೆಯಾದರೂ ಆ ನೋವು ಹೇಳತಿರದು, ಗರ್ಭಚೀಲದ ಮಾಂಸಖಂಡಗಳ ತೀವ್ರ ಸಂಕೋಚನ, ಆಕುಂಚನದಿಂದ ಮಗು ಹೊರದಬ್ಬಲ್ಪಡುತ್ತೆ. ಬೆನ್ನು, ಯೋನಿ ಒಳಭಾಗ, ಹೊಟ್ಟೆ, ತೊಡೆಯ ಮಾಂಸಖಂಡಗಳು ಸಿಡಿದೆದ್ದ ಆರ್ಭಟದ ನೋವಿಗೆ ಪತರುಗುಟ್ಟಿ ಹೋಗವವು. ಭುಗಿಲೆದ್ದ ನೋವನ್ನು ದವಡೆಗಚ್ಙಿ ಸಹಿಸುವಳು. ಒಬ್ಬ ಗಂಡಸೂ ಸಹ ತಡೆಯಲಾಗದ ನೋವದು. ಕನಸಲ್ಲಿಯೂ ನಾವು ಕಂಡಿರದ, ಊಹಿಸಲಸಾಧ್ಯ ನೋವು. ನಡೆಯುವಾಗ ಕಲ್ಲಿಗೆ ಎಡವಿದರೆ ಪಾದದ ನೋವು ನೆಲಕಚ್ಚುವಂತೆ ಮಾಡುವುದು. ಕೇವಲ ಹಲ್ಲು ನೋವು, ಕಿವಿ ನೋವಿಗೆ ಗದಗದ ನಡುಗಿ ನೀರಾಗುವ ನಾವುಗಳೆಲ್ಲಿ, ಮಗುವಿಗೆ ಜನ್ಮ ನೀಡುವ ತಾಯಿ ಎಲ್ಲಿ? ಅಜಗಜಾಂತರದ ದೂರ.

ಇನ್ನೂ ಮಗು ಅಡ್ಡ ಕೂತಿದೆ, ಗರ್ಭಚೀಲದೊಳಗಿ ನೀರು ಕಡಿಮೆ ಇದೆ, ಮಗು ಮಲ ತಿಂದಿದೆ, ಮಗುವಿನ ಜನ್ಮಕ್ಕೆ ಎಂತದಕ್ಕೋ ಗಂಡಾಂತರ, ತಾಯಿಯ ಜೀವಕ್ಕೆ ಕುತ್ತು, ತುರ್ತು ಎಂದು ಹೊಟ್ಟೆ ಬಗೆದು (LACS) ಮಗು ತೆಗೆಯುವ ಕಾರ್ಯ ನಡೆದರಂತೂ ಅವಳು ಹೀನಾಮಾನ ಸೋತು ಹೋಗುವಳು.

ಆಪರೇಷನ್ ಥಿಯೇಟರ್ ಒಳಗಿನ ಮಂಚದ ಮೇಲೆ ಪ್ರಖರ ಬೆಳಕಿಗೆ ಒರಗುವ ತುಂಬು ಗರ್ಭಿಣಿ. ತಾಯ್ತನ ಪಡೆಯುವ ಹೋರಾಟಕ್ಕೆ ಅಣಿಯಾದಂತಿರುತ್ತಾಳೆ. ತನ್ನ ಮೊಣಕಾಲು ಹಣೆಗೆ ತಾಕುವಂತೆ ಮುದುಡಿ ಮಗ್ಗಲು ಮಲಗಲು ಹೇಳಲಾಗತ್ತೆ. ( ಗರ್ಭದೊಳಗಿನ ಮಗು ತರ).

ಫೋಟೋ ಕೃಪೆ : CDC

ಬಿಲ್ಲಿನಂತಾಗುವ ಬೆನ್ನುಹುರಿಗೆ ಗೇಣುದ್ದ ಸೂಜಿ ಚುಚ್ಚಿ, ಅನಸ್ತೇಷಿಯಾ ಔಷಧಿ ಒಳ ಹರಿಸಲಾಗತ್ತೆ. ಸೂಜಿ ಒಳಹೊಕ್ಕ ನೋವಿಗೆ ಮೆದುಳು ಕಲಸಿದಂತಾಗಿ. ನಿಧಾನಕ್ಕೆ ಕಣ್ಣು ಮಂಜು ಮಂಜು ಕಂಡು, ಸಂಪೂರ್ಣ ದೇಹ ಗಾಳಿಯಲ್ಲಿ ತೇಲಾಡಿದಂತೆ ಭಾಸವಾಗತ್ತೆ. ಅರೆಪ್ರಜ್ಞೆಗೆ ನಿಧಾನಕ್ಕೆ ಜಾರುತ್ತಾಳೆ.

ಆಮೇಲೆ ವೈದ್ಯನ ಕತ್ತರಿ ಪ್ರಯೋಗ.. ಹೊಟ್ಟೆ ಬಗಿದು, ಗರ್ಭಚೀಲ ಸೀಳುತ್ತೆ (Caesarean section). ಒಳ ಪವಡಿಸಿದ ಮಗುವನ್ನು ಹೊರ ತೆಗೆದು, ಮತ್ತೆ ಸೂಜಿ, ದಾರದಿಂದ ಗರ್ಭಚೀಲ, ಹೊಟ್ಟೆಯ ಮಾಂಸಖಂಡ, ಮೇಲ್ಪದರನ್ನು ಹೊಲೆದು ತೇಪೆ ತರಹ ಪಟ್ಟಿ ಕಟ್ಟುವ ಕೆಲಸ.

ಫೋಟೋ ಕೃಪೆ : johnsonmemorial

ಕೇವಲ ಒಂದೂವರೆ- ಎರಡಿಂಚು ಸೂಜಿ ಚುಚ್ಚಿಸಿಕೊಳ್ಳಲು ಬೆವೆತು ತೊಪ್ಪೆಯಾಗುವ ಗಂಡಸರು ನಾವೆಲ್ಲಿ. ಗೇಣುದ್ದ ಸೂಜಿ ಚುಚ್ಚಿಕೊಂಡು, ಹೊಟ್ಟೆ ಹರಿದು ಮಗು ಕೊಡುವ ಹೆಣ್ಣು ಎಲ್ಲಿ? ಯಾರು

ದಿ ಗ್ರೇಟ್!!!!?


  • ಡಾ. ಪ್ರಕಾಶ ಬಾರ್ಕಿ (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW