ನಿಶಾಚರಿಯ ಕೌತುಕದ ಬದುಕು – ಡಾ. ಪ್ರಕಾಶ ಬಾರ್ಕಿ



ವಿಶ್ವದ ಅತ್ಯಂತ ಚಿಕ್ಕ ಸಸ್ತನಿ ಬಾವಲಿ. ಕೋಲಾರ, ಬೆಳಗಾವಿಯ ಖಾನಾಪುರದ ಗುಹೆಗಳಲ್ಲಿ ಅತಿ ವಿರಳವಾದ ಪ್ರಭೇದದ ಬಾವಲಿಗಳನ್ನೂ ಕಾಣಬಹುದು. ಅದರ ಆಯಸ್ಸು ಅಂದಾಜು 30- 40 ವರ್ಷಗಳು. ಬಾವಲಿ ಕುರಿತಾದ ಇನ್ನಷ್ಟು ರೋಚಕ ವಿಷಯಗಳನ್ನು ಓದುಗರ ಮುಂದಿಟ್ಟಿದ್ದಾರೆ ಲೇಖಕರಾದ ಡಾ. ಪ್ರಕಾಶ ಬಾರ್ಕಿ ಅವರು.

ಸಂಜೆ ನೇಸರ ತೋಟದ ತೆಂಗಿನ ಮರದ ತುದಿಯಿಂದ ಪ್ರಪಾತದ ಆಳಕ್ಕೆ ಮುಳುಗುತ್ತಲೆ ಕಣ್ಮರೆಯಾಗುವ ಹೊತ್ತು. ತಂಗಾಳಿಗೆ ಮೈಯೊಡ್ಡಿ.. ಚಂದನೆಯ ಹಾಡಿಗೆ ಕಿವಿಯಾಗಿ ಮನೆಯ ಟೆರೆಸ್ ಮೇಲೆ ನಿಧಾನ ಶತಪತ ಹಾಕುತ್ತಿದ್ದೆ. ಬೆಳಕು ಮತ್ತು ಕತ್ತಲು ಮಿಲನದ ಕ್ಷಣಗಳಿಗೆ ಸಾಕ್ಷಿಯಂತೆ, ಕದಡಿ ಓಡುತ್ತಿದ್ದ ಮೋಡಗಳ ಚಿತ್ತಾಕರ್ಷಕ ನೋಟ ಕಣ್ತುಂಬಿಕೊಳ್ಳುತ್ತಾ. ಆಹ್ಲಾದಕರವಾಗಿ “ಚಹಾ” ಹೀರುತ್ತಾ.. ಗುಂಪಾಗಿ ಹಾರುತ್ತಾ ನುಗ್ಗುತಿದ್ದ ಪಕ್ಷಿಗಳತ್ತ ದೃಷ್ಟಿ ಸರಿಯಿತು.

ಅದು ಇನ್ನೇನು ಕತ್ತಲು ಬೆಳಕಿನಾಟ ಮುಗಿದು ಇರುಳಾವರಿಸುವ ಕ್ಷಣಗಣನೆಯಲ್ಲಿತ್ತು. ವೈರಿಗಳನ್ನು ಹೆಡೆಮುರಿ ಕಟ್ಟಲು ಗುಂಪು ಗುಂಪಾಗಿ ದಾಂಗುಡಿಯಿಡುವ ಸೈನಿಕರಂತೆ ಕಪ್ಪನೆಯ ಅಗಲ ರೆಕ್ಕೆಯ ಪಕ್ಷಿಗಳು ಹಾರುತ್ತಾ ನುಗ್ಗಿ ಬಂದವು…. ಹತ್ತಿರವಿದ್ದ ಆಲದ ಮರಕ್ಕೆ, ನೀಲಗಿರಿ ಮರದ ಟೊಂಗೆಗಳಿಗೆ ಇನ್ನೊಂದಿಷ್ಟು ತೋಟದ ಕಡೆ ದಾಳಿ ಮಾಡುವಂತೆ ಬಂದು ಮರಗಳಲ್ಲಿ ತಲೆಕೆಳಗಾಗಿ ಅಂಗಾತ ಬೋರಲಾದವು.

ಓಹ್…!! ಇವು ಹಕ್ಕಿಗಳಲ್ಲ..!! ಬಾವಲಿ.

ಫೋಟೋ ಕೃಪೆ : Live science

ಹಾರಾಡುವ ಸಸ್ತನಿ : 

ಹಗಲು ವಿಶ್ರಾಂತಿ ಮುಗಿಸಿ ಸೂರ್ಯ ಮರೆಯಾದ ಕೂಡಲೆ ತುತ್ತಿನ ಬುತ್ತಿ ತುಂಬಿಕೊಳ್ಳಲು ಶಿಕಾರಿಗಾಗಿ ದಂಡೆತ್ತಿ ಹೊರಡುತ್ತವೆ. ಸೂರ್ಯ ಮೈಮುರಿದು ಹಾಸಿಗೆಯಿಂದ ಏಳುವ ಮೊದಲೆ ತಮ್ಮ ತಾಣ ಸೇರಿ ಜೋತಾಡುತ್ತವೆ. ಬಾವಲಿ, ತೋಲಬಾಲ ಹಕ್ಕಿ, ಕಣ್ಕಪ್ಪಡಿ, ಕಪಟ, ತೊಲೆಹಕ್ಕಿ, ಕಪಟದ ಹಕ್ಕಿ, ಚಕ್ಕಳದ ಹಕ್ಕಿ ಅಂತ ಕರೆಯಲಾಗತ್ತೆ. ಬಾವಲಿಗಳನ್ನ ಅನಿಷ್ಟ, ವಾಮಾಚಾರ ಮಾಡಲು ಉಪಯೋಗ, ದೆವ್ವ ಮುಂತಾದವುಗಳಿಗೆ ಜೋತು ಹಾಕಲಾಗಿದೆ.

ವಿಶ್ವವನ್ನೆ ನುಣ್ಣಗೆ ರುಬ್ಬಿದ “ಕರೋನಾ” ಕಾಯಿಲೆಯ ಮೂಲ ಬಾವಲಿ ಎಂಬ ಬಿರುದು ನೀಡಿ ತಪ್ಪಿತಸ್ಥನ ಕಟಕಟೆಗೆ ನಿಲ್ಲಿಸಲಾಗಿದೆ.

ಬಾವಲಿಗಳು ನಿರುಪದ್ರವಿ ಜೀವಿಗಳು. ದಿನಪೂರ್ತಿ ಮರದ ಟೊಂಗೆ, ಗುಹೆ, ಹಳೆಯ ಪಾಳುಬಿದ್ದ ಕಟ್ಟಡ ಮುಂತಾದವುಗಳಲ್ಲಿ ನೇತುಬಿದ್ದು ಜೀವಿಸುವ “ನಿಶಾಚರಿ”. ದೃಷ್ಟಿ ಸ್ಪಷ್ಟವಿಲ್ಲದೆ ಮಂದವಾಗಿದ್ದರೂ ಶಬ್ಧದ ಮೂಲಕವೆ ಜಗತ್ತನ್ನು ನೋಡುವ ಬಹು ಶಕ್ತಿಶಾಲಿ ಜೀವಿ. ಹಿಮ್ಮಡಿ , ಬೆನ್ನು ಮತ್ತು ಬೆರಳುಗಳಿಗೆ ಕೂಡಿಕೊಂಡಿರುವ ತೆಳು ಚರ್ಮದ ಪದರವೇ ಅವುಗಳ ರೆಕ್ಕೆ. ಇದು ಜೀವಿತಾವಧಿಯಲ್ಲಿ ಹಲವು ಬಾರಿ ಹರಿದು ಪುನಃ ಬೆಳೆಯುತ್ತೆ.

“ಕೈರಾಪ್ಟರಾ”( Chiroptera) ಗುಂಪಿಗೆ ಸೇರಿದ ಬಾವಲಿಗಳು ವಿಶ್ವದಲ್ಲಿ 1017 ಪ್ರಭೇದಗಳಿವೆ. ಭಾರತದಲ್ಲಿ 126, ರಾಜ್ಯದಲ್ಲಿ ಅಂದಾಜು 36 ಪ್ರಭೇದಗಳಿರಬಹುದು ಎಂದು ಊಹಿಸಲಾಗಿದೆ.

ಫೋಟೋ ಕೃಪೆ : istock

ಬಾವಲಿಯನ್ನ “ದೊಡ್ಡ ಬಾವಲಿ”(Mega bats) “ಚಿಕ್ಕ ಬಾವಲಿ”(Micro bats) ಅಂತ ಎರಡು ಗುಂಪಿನಲ್ಲಿ ವಿಂಗಡಿಸಲಾಗಿದೆ‌.

ಹಣ್ಣುಗಳನ್ನು ತಿನ್ನುವ, ಹೂವಿನ ಮಕರಂದ ಹೀರುವ ಗಾತ್ರದಲ್ಲಿ ಹಿರಿದಾಗಿರುವ ದೊಡ್ಡ ಬಾವಲಿಗಳ ದೃಷ್ಟಿ ಮನುಷ್ಯನಷ್ಟೇ ಶಕ್ತಿಶಾಲಿಯಾಗಿದ್ದು, ಕತ್ತಲಲ್ಲಿಯೂ ವಸ್ತುಗಳನ್ನು ನೋಡಿ ಗುರುತಿಸಬಲ್ಲವು. ಅತ್ತಿ ಹಣ್ಣು, ಆಲದ ಮರದ ಹಣ್ಣು, ಸೀಬೇಕಾಯಿ, ಗಸಗಸೆ ಹಣ್ಣು ಹಾಗೂ ಕಾಡು ಹಣ್ಣುಗಳು ಇವುಗಳ ಆಹಾರ.

ದೊಡ್ಡ ಕಣ್ಣು, ಉದ್ದಗೆ ನಾಯಿ ಮೂತಿ, ಪುಟ್ಟ ಕಿವಿ ಹೊಂದಿರುವುದರಿಂದ ದೊಡ್ಡ ಬಾವಲಿಗಳನ್ನ “ಹಾರುವ ತೋಳ” ಎಂದು ಕರೆಯಲಾಗುತ್ತೆ. ದೊಡ್ಡ ಬಾವಲಿ ಸಾಮಾನ್ಯವಾಗಿ ಗುಳೆ ಹೋಗದೆ ಗುಹೆಯಂಥ ನಿರ್ಜನ ಪ್ರದೇಶಗಳಲ್ಲಿ ಅಜ್ಞಾತವಾಸಿಗಳಂತೆ ಇರುತ್ತವೆ. ಇವುಗಳ ಆಯಸ್ಸು ಅಂದಾಜು 30- 40 ವರ್ಷಗಳು. ನಾಲ್ಕರಿಂದ ಹದಿನಾರು ಸೆಂ. ಮೀ ಉದ್ದವಿರುವ “ಚಿಕ್ಕ ಬಾವಲಿ”ಗಳ ದೃಷ್ಟಿ ಮಂದವಾಗಿದ್ದು ಕಡಿಮೆ ಬೆಳಕಿನಲ್ಲಿ ದೃಷ್ಟಿ ಹಾಯಿಸಬಲ್ಲವು. ಇವುಗಳಿಗೆ ಹಗುಲು ಕುರುಡು. ಹಾಗಾಗಿಯೇ ಧ್ವನಿ ಪ್ರತಿಫಲನದ ಮೂಲಕ ಸುತ್ತ ಮುತ್ತಲಿನ ಅಡೆ-ತಡೆ, ಬೇಟೆಯನ್ನ ನಿಖರವಾಗಿ ಗುರುತಿಸಬಲ್ಲವು. ಇವುಗಳು ಕ್ರಿಮಿಕೀಟ, ಹುಳು ಹುಪ್ಪಟೆಗಳನ್ನು ತಿಂದು ಅಂದಾಜು 8 ರಿಂದ 10 ವರ್ಷ ಜೀವಿಸುತ್ತವೆ.

60 ರಿಂದ 140 ಡೆಸಿಬಲ್ ಹಾಗೂ ಹದಿನಾಲ್ಕು ಸಾವಿರದಿಂದ ಒಂದುಲಕ್ಷ ಆವರ್ತನದ ತರಂಗಗಳನ್ನು ಹೊರಹೊಮ್ಮಿಸಬಲ್ಲ ಶಕ್ತಿ ಧ್ವನಿಪೆಟ್ಟಿಗೆಯನ್ನು ಪುಟ್ಟಬಾವಲಿಗಳು ಹೊಂದಿವೆ. ವಿಶೇಷ ಏನೆಂದರೆ, ಬಾವಲಿಗಳು ಈ ಧ್ವನಿಯನ್ನು ಹೊರಡಿಸುವಾಗ ಅವುಗಳ ಕಿವಿಗಳು ತನ್ನಿಂದ ತಾನೆ ಮುಚ್ಚಿಕೊಳ್ಳುತ್ತವೆ. ಏಕೆಂದರೆ, ಈ ಶಕ್ತಿಶಾಲಿ ಧ್ವನಿತರಂಗಗಳಿಂದ ಕಿವಿಗಳಿಗಾಗಬಲ್ಲ ತೊಂದರೆಯಿಂದ ದೂರ ಉಳಿಯುವುದಕ್ಕೆ.



ಹೊರಡಿಸಿದ ಧ್ವನಿ ಪ್ರತಿಫಲನವನ್ನ ಗ್ರಹಿಸಿ ಸುತ್ತಲಿನ ಚಿತ್ರಣವನ್ನು ನೈಜವಾಗಿ ಅರ್ಥೈಸಿಕೊಂಡು ಕರಾರುವಕ್ಕಾಗಿ ಬೇಟೆಯಾಡಬಲ್ಲವು. ವಲಸೆ ಹೋಗುವ ಇವುಗಳ “ಶಬ್ಧವೆಧಿ” ಬದುಕು ಕೌತುಕ ಮತ್ತು ರೋಮಾಂಚನಕಾರಿ. ನಮ್ಮ ದೇಶದಲ್ಲಿರುವ ಚಿಕ್ಕ ಬಾವಲಿಗಳು 20 ಕಿಲೊ ಹರ್ಟ್ಸ್‌ನಿಂದ 150 ಕಿಲೊ ಹರ್ಟ್ಸ್‌ವರೆಗೆ ಶಬ್ದವನ್ನು ಗ್ರಹಿಸಿಕೊಳ್ಳುತ್ತವೆ.

ಬಾವಲಿಗಳ ಹೃದಯ ಮತ್ತು ಪುಪ್ಪುಸ ಹೆಚ್ಚು ಶಕ್ತಿಶಾಲಿ. ಹಾರಾಡುವಾಗ ಬಾವಲಿಯ ಹೃದಯ ನಿಮಿಷಕ್ಕೆ ಒಂದು ಸಾವಿರ ಬಾರಿ ಮಿಡಿಯಬಲ್ಲದು. ಹಾರಾಟಕ್ಕೆ ಬೇಕಾದ ಶಕ್ತಿಯನ್ನು ಉಳಿಸಲು ಮತ್ತು ಹೆಚ್ಚು ಆಮ್ಲಜನಕ ಸೇವಿಸಲು ತಮ್ಮ ದೇಹ ಭಾರವನ್ನು ಹಗುರಾಗಿಸಿಕೊಂಡಿರುತ್ತವೆ, ಆದ್ದರಿಂದಲೇ ಆಹಾರ ಸೇವಿಸಿ ಒಂದು ತಾಸಿನೊಳಗೆ ತ್ಯಾಜ್ಯವನ್ನು ವಿಸರ್ಜಿವವು.

ಬಾವಲಿಗಳು ವರ್ಷಕ್ಕೊಂದು ಬಾರಿ ಮಾತ್ರ ಒಂದು ಮರಿ ಹಾಕುತ್ತವೆ. ಆ ಮರಿ ಭಾರವೆನಿಸುವವರೆಗೂ ಅಪ್ಪಿಕೊಂಡೇ ಜೀವನ ಸಾಗಿಸುತ್ತವೆ. ಆಹಾರಕ್ಕಾಗಿ ಹೊರಟಾಗಲೂ ಅದನ್ನು ಎತ್ತಿಕೊಂಡೇ ಸಾಗುತ್ತವೆ. ಎಷ್ಟೇ ಆಗಲಿ ತಾಯಿಯಲ್ಲವೆ..!!!

ಪರಿಸರ ಪೂರಕವಾದ ಬಾವಲಿ :

  • ಬೀಜ ಪ್ರಸರಣ ಮಾಡುವುದು.
  • ಹೂವಿನ ಮಕರಂದ ಹೀರುತ್ತಾ ಪರಾಗಸ್ಪರ್ಶ ಕ್ರೀಯೆ ನಡೆಸುತ್ತವೆ.
  • ಕ್ರೀಮಿಕೀಟಗಳನ್ನು ಭಕ್ಷಿಸಿ ಬೆಳೆಗಳ ರಕ್ಷಣೆ‌.
  • ಕಾಯಿ ಕೊರಕು ಹುಳು, ರಾತ್ರಿ ವೇಳೆ ಸಂಚರಿಸುವ ಚಿಟ್ಟೆ ಅಥವಾ ಇನ್ನೂ ಲಾರ್ವಾ ಹಂತದಲ್ಲಿರುವ ಚಿಟ್ಟೆಗಳನ್ನು ಕೊಂದು ಬೆಳೆ ರಕ್ಷಿಸುವ ರೈತನ ಮಿತ್ರ.
  • ಸೊಳ್ಳೆ, ನೋಣ ತಿಂದು ಅವುಗಳಿಂದ ಹರಡುವ ಕಾಯಿಲೆಗಳನ್ನು ತಡೆಗಟ್ಟುತ್ತವೆ.
  • ಬಾವಲಿ ಹಿಕ್ಕೆಯಲ್ಲಿ “ಪೊಟ್ಯಾಷಿಯಂ ನೈಟ್ರೇಟ್‌” ಪೋಶಕಾಂಶ ಇರುವುದಿಂದ ಬೆಳೆಗಳಿಗೆ ಗೊಬ್ಬರವಾಗಿ ಬಳಸುವರು. (ಸುಮಾರು ಹದಿನೈದರಿಂದ ಇಪ್ಪತ್ತು ವರ್ಷಗಳ ಹಿಂದೆ ಹಳ್ಳಿಗಳಲ್ಲಿ ಬೆಳೆಗಳಿಗೆ ಈ ಗೊಬ್ಬರವನ್ನು ಬಳಕೆ ಮಾಡುತ್ತಿದ್ದರು)

ಫೋಟೋ ಕೃಪೆ : keralakaumudi

ಹೀಗೆ ವಿವಿಧ ರೀತಿಯಲ್ಲಿ ಬಾವಲಿಗಳು ಪರಿಸರಕ್ಕೆ ಪೂರಕವಾದ ಜೀವಿಗಳು. ಬಾವಲಿಗಳು ನಿಧಾನವಾಗಿ ಅಳಿನಂಚಿಗೆ ತೆವಳುತ್ತಿವೆ.

  • ವಿದ್ಯುತ್ ತಂತಿ ಸ್ಪರ್ಶ.
  • ಬೆಳೆಗಳಿಗೆ ಸಿಂಪಡಿಸಿದ ರಾಸಾಯನಿಕ ಸೇವಿಸಿದ ಹುಳುಗಳ ಭಕ್ಷಣೆ
  • ಮರಗಳ ನಾಶ
  • ಆವಾಸ ಸ್ಥಾನಗಳ ಆಕ್ರಮಣ.
  • ಆಹಾರದ ಕೊರತೆ.
  • ಮೂಢನಂಬಿಕೆಗಳಿಂದ ಬಾವಲಿಗಳ ಹತ್ಯೆ ಮಾಡುವುದರಿಂದ, ಬಾವಲಿಗಳ ಸಂಖ್ಯೆ ದಿನೆ ದಿನೇ ಕ್ಷೀಣಿಸುತ್ತಿದೆ.

#ರಕ್ತಪಿಶಾಚಿ_ಬಾವಲಿ.

ಹುಳು-ಹುಪ್ಪಟೆ, ಹಣ್ಣು ತಿಂದು ಜೀವಿಸುವ ಬಾವಲಿಗಳಂತೆ ರಕ್ತ ಹೀರುವ ಬಾವಲಿಗಳು ಉಂಟು. ನೆತ್ತರು ಬಾವಲಿಗಳು (Vampire bat) ಮಧ್ಯೆ ಅಮೇರಿಕಾ ಮತ್ತು ದಕ್ಷಿಣ ಅಮೇರಿಕಾದಲ್ಲಿ ಮಾತ್ರ ಕಂಡುಬರುತ್ತವೆ.

ರಕ್ತಪಿಶಾಚಿ ಬಾವಲಿಯ ಮುಂದಿನ ಹಲ್ಲು ಸೂಜಿಯಷ್ಟು ಮೊನಚಾಗಿರುತ್ತದೆ. ಕುದುರೆ, ಹಸು, ನಾಯಿ, ಕೋಳಿ, ಆಡು ಇತರೆ ಪ್ರಾಣಿಗಳು ನಿದ್ರಿಸುತ್ತಿರುವಾಗ ಚರ್ಮವನ್ನು ನೆಕ್ಕಿ ಗೊತ್ತಾಗದಂತೆ ಹಲ್ಲಿನಿಂದ ಚರ್ಮ ಕೊರೆದು ನಾಲಿಗೆಯಿಂದ ರಕ್ತ ಹೀರುತ್ತದೆ. ಒಂದು ರಾತ್ರಿಗೆ ಸುಮಾರು 30 ಗ್ರಾಂನಷ್ಟು ನೆತ್ತರು ಬೇಕಾಗುತ್ತದೆ. ರಕ್ತಪಿಶಾಚಿ ಬಾವಲಿ ಮನುಷ್ಯನ ರುಧೀರ ಹೀರುವುದು ತೀರಾ ವಿರಳ. ಒಂದು ವೇಳೆ ಕಚ್ಚಿದ್ದಾದರೆ “ರೇಬಿಸ್” ರೋಗ ಬರುತ್ತದೆ.

ಫೋಟೋ ಕೃಪೆ : The news stock

ಕರ್ನಾಟಕದ ವಿಶೇಷ ಬಾವಲಿಗಳು :

ಕೋಲಾರ ಹಾಗೂ ಬೆಳಗಾವಿಯ ಖಾನಾಪುರದ ಗುಹೆಗಳಲ್ಲಿ ಅತಿ ವಿರಳವಾದ ಪ್ರಭೇದದ ಬಾವಲಿಗಳಿವೆ. ಆದರೆ ಅವುಗಳ ಸಂಖ್ಯೆ 100–150 ಇರಬಹುದು ಅಷ್ಟೆ.ಕೋಲಾರದ ಗುಹೆಯೊಂದರಲ್ಲಿ ಪತ್ತೆಯಾಗಿರುವ ಬಾವಲಿ ಬೇರೆಲ್ಲೂ ಪತ್ತೆಯಾಗಿಲ್ಲ. ಹೀಗಾಗಿಯೇ ಇದಕ್ಕೆ ‘ಕೋಲಾರದ ಎಲೆ ಮೂಗಿನ ಬಾವಲಿ’ ಎಂದು ಹೆಸರಿಡಲಾಗಿದೆ. ಇದೂ ಅಳಿವಿನ ಅಂಚಿನಲ್ಲಿದೆ.

ವಿಶ್ವದಲ್ಲಿ ಕೇವಲ ಮೂರು ಕಡೆ ಕಂಡು ಬರುವ ವಿರಳವಾದ ‘ರಾಟನ್ಸ್ ಫ್ರೀ ಟೇಲ್’ ಬಾವಲಿ. ಮೇಘಾಲಯ, ಕಾಂಬೋಡಿಯ ಹಾಗೂ ನಮ್ಮ ಖಾನಾಪುರದಲ್ಲಿ ಇದೆ. ಇದು ಖಾನಾಪುರದ ಗುಹೆಗಳಲ್ಲಿ ಈಗ ಕೇವಲ 150– 200ರ ಸಂಖ್ಯೆಯಲ್ಲಿದೆ.

ಚೀನಾದ ಬಾವಲಿ ಹೆಣ್ಣು ಶಿಝೇಂಗ್ಲಿ.

ಶಿ ಝೇಂಗ್ಲಿ ಚೀನಾದ ‘#ಬಾವಲಿ ಹೆಣ್ಣು’ ಎಂದೇ ಪ್ರಸಿದ್ಧರಾದವರು. ದಶಕಗಳ ಕಾಲ ಕಾಡುಮೇಡುಗಳನ್ನು, ಗುಹೆ ಬಾವಲಿಗಳ ಬೆನ್ನು ಬಿದ್ದಿರುವ ಈ ಸಂಶೋಧಕಿ “ಸಾರ್ಸ್–ಕೊರೊನಾ ವೈರಸ್‌”ಗಳ ಮೂಲ ಜಾಲಾಡಿದ್ದಾರೆ.

#ವಿಶ್ವದ_ಅತ್ಯಂತ_ಚಿಕ್ಕ_ಸಸ್ತನಿ

ಜಗತ್ತಿನಲ್ಲಿ ಕಂಡುಬರುವ ಹಲವಾರು ಸಸ್ತನಿಗಳಲ್ಲಿ “ಬಂಬಲ್ ಬೀ” ಬಾವಲಿ (bumblebee bat) ಅತ್ಯಂತ ಚಿಕ್ಕ ಸಸ್ತನಿಯಾಗಿದೆ‌. “ಕಿಟ್ಟಿಸ್ ಹ್ಯಾಗ್ನೋಸ್ ಬ್ಯಾಟ್” (Kitti’s hog-nosed bat) ಎಂದು ಕರೆಯಲಾಗುವ ಈ ಬಾವಲಿಗಳು “ಅಳಿವಿನಂಚಿನಲ್ಲಿರುವ ಸಸ್ತನಿಗಳ ಪಟ್ಟಿ”ಗೆ ಸೇರಿದೆ.

1974 ರಲ್ಲಿ ಸಂಶೋಧಿಸಿದ ಬಾವಲಿಯ ಪ್ರಭೇದವಿದು.

ಕೇವಲ 2 ಗ್ರಾಂ ತೂಕವಿರುವ, 1 ರಿಂದ 1.3 ಇಂಚು ಉದ್ದವಿರುವ ಈ ಚಿಕ್ಕ ಬಾವಲಿಗಳು ಥೈಲ್ಯಾಂಡ್ ಮತ್ತು ಮಯನ್ಮಾರನ ಸುಣ್ಣದ ಗುಹೆಗಳಲ್ಲಿ ಮಾತ್ರ ಕಂಡುಬರುತ್ತವೆ.

ಫೋಟೋ ಕೃಪೆ : you tube

ಬಾವಲಿ ಜನ್ಯ ಗಂಭೀರ #ವೈರಸ್ ಗಳು: 

ಬಾವಲಿ ಪರ ಬ್ಯಾಟ್ ಬೀಸುವ ಮೊದಲು ನಾವು ತಿಳಿದಿರಬೇಕಾದ ಇನ್ನೊಂದು ವಿಷಯವೆಂದರೆ, ಕೆಲ ಪ್ರಭೇದದ ಬಾವಲಿ ತನ್ನ ಹೊಟ್ಟೆಯಲ್ಲಿ ಅದೇಷ್ಟೋ ವೈರಸ್’ಗಳನ್ನು ಹೊತ್ತು ತಿರುಗುತ್ತಿದೆ, ಹಲವು ರೋಗಗಳ ಪ್ರಸಾರದಲ್ಲಿ ಬಹುಮುಖ್ಯ ವಾಹಕವಾಗಿದೆ.

ಸಣ್ಣ ಕಣ್ಣಿನ ಕ್ಷುದ್ರ, ಕುತಂತ್ರಿ ಚೀನಾ, ಜಗತ್ತನ್ನೆ ಬೋರಲಾಗುವಂತೆ ಹುರಿದು ಮುಕ್ಕಿದ “ವೈರಸ್ ರೋಗಗಳ” ಪಿತಾಮಹನಾಗಿದೆ. ಆದರೂ ಅಲ್ಲಿನವರ ಅಸಾಹಯಕತೆಯೂ!! ಜನಸಂಖ್ಯಾ ಸ್ಪೋಟದ ಮಹಿಮೆಯೊ,!! ಆಹಾರದ ಕೊರತೆಯೊ!!, ನಾಲಿಗೆ ಚಪಲವೂ!!, ಪೈಶಾಚಿಕ ಬುದ್ಧಿಯೋ!! ಅಥವಾ ಇವೆಲ್ಲವೂ ಹೌದು. ಯಾವಾಗಲೂ ಪ್ರಾಣಿ ಪ್ರಪಂಚಕ್ಕೆ ಮಾರಕವಾದ ವೈರಸ್ ಕಾಯಿಲೆಗಳ ಮೂಲ ಚೀನಾ ಆಗಿದೆ.

ಬಾವಲಿ ತಿಂದು ಬಿಟ್ಟ ಹಣ್ಣು ಸೇವನೆ, ಬಾವಲಿಯ ಆವಾಸಸ್ಥಾನದಲ್ಲಿ ಜೀವಿಸುವುದು, ಅನಧಿಕೃತ ಕಾಡಿನ ಒತ್ತುವರಿ, ಬಾವಲಿಗಳನ್ನೇ ಖಾದ್ಯದಂತೆ ತಿಂದರೆ ರೋಗ ಬರದೆ ಇನ್ನೇನಾದೀತು.? ಇತರೆ ಪ್ರಾಣಿಗಳಿಗೂ ಬಾವಲಿಗಳಿಂದ ರೋಗ ಹರಡಿ, ತನ್ಮೂಲಕ ಮನುಷ್ಯ ಬಲಿಪಶು ಆಗುತ್ತಿದ್ದಾನೆ. ಕಳೆದ ಬಹು ವರ್ಷಗಳಲ್ಲಿ ವೈರಸ್‌ಗಳು ಪ್ರತ್ಯಕ್ಷವಾಗಿ ಮನುಕುಲಕ್ಕೆ ಕಂಟಕ ತಂದೊಡ್ಡುವ ಮಾರಕ ಸೂಚನೆ ನೀಡಿದ್ದವು.

  • 1994ರಲ್ಲಿ ಕಾಣಿಸಿಕೊಂಡಿದ್ದ ಹೆಂಡ್ರಾ ವೈರಸ್.
  • 1998ರಲ್ಲಿ ಸುದ್ದಿಯಾಗಿದ್ದ ನಿಫಾ ವೈರಸ್.
  • 2002ರಲ್ಲಿ ಅಷ್ಟಾಗಿ ಸುದ್ದಿಯಾಗದೆ ಮರೆಯಾಗಿದ್ದ ಮೆರ್ಸ್‌ (Middle East respiratory syndrome) ವೈರಸ್‌. 2012ರಲ್ಲಿ ವಿಶ್ವದ ಕೆಲಭಾಗಗಳನ್ನು ಕಂಗೆಡಿಸಿದ್ದ ಎಬೋಲಾ.
  • 2019 ರಿಂದ ಅಲೆ, ಅಲೆಗಳಲ್ಲಿ ಕಂಗೆಡಿಸುತ್ತಿರುವ ಕೋವಿಡ್. ಈ ಎಲ್ಲವೂ ಬಾವಲಿಜನ್ಯ ವೈರಸ್‌ಗಳೇ.
  • 2018 ರಲ್ಲಿ ಕೇರಳವನ್ನ ಕಾಡಿ, ನಮ್ಮ ಗಡಿ ಊರುಗಳನ್ನು ನಡುಗಿಸಿದ “ನಿಫಾ ವೈರಸ್” (ಬಾವಲಿ ಜ್ವರ) “ವಿಶ್ವದ ಹತ್ತು ಮಾರಣಾಂತಿಕ ಕಾಯಿಲೆ”ಗಳಲ್ಲಿ ಒಂದಾಗಿತ್ತು.

ಫೋಟೋ ಕೃಪೆ : managalorean

#ಬಾವಲಿ_ಚೆಕ್_ಪೋಸ್ಟ್  :

ಮೈಸೂರಿನ, ಹೆಗ್ಗಡದೇವನ ಕೋಟೆ ಮತ್ತು ಕೇರಳದ ನಡುವಿನ ಕರ್ನಾಟಕದ ಗಡಿ ಭಾಗ ಬಾವಲಿ. ಕೇರಳದಿಂದ ಕರ್ನಾಟಕ (ಮೈಸೂರು ಪ್ರದೇಶ) ಪ್ರವೇಶಿಸಲು ಇರುವಂತಹ ಚೆಕ್ ಪೋಸ್ಟನ ಹೆಸರು ಬಾವಲಿ ಚೆಕ್ ಪೋಸ್ಟ್.

ಕರೋನಾ 3 ನೇ ಅಲೆ ಈಗಾಗಲೆ ಕೇರಳದಲ್ಲಿ ಕೇಕೆ ಹಾಕುತ್ತಿದೆ. ದೇಶದ ಅಲ್ಲಲ್ಲಿ ಸುದ್ಧಿಯಲ್ಲಿದೆ. ಎಲ್ಲರೂ ವ್ಯಾಕ್ಸಿನ್ ತೆಗೊಂಡು ಆದಷ್ಟೂ ಜನಸಂದಣಿಯಿಂದ ದೂರವಿರಿ, ಮಾಸ್ಕ್ ಬಳಸಿ… ಇನ್ನೂ.. ಕರೋನಾ ಸಂಪೂರ್ಣ ತೊಲಗಿಲ್ಲ. ತೊಲಗುವುದು ಇಲ್ಲ. ಮುನ್ನೇಚ್ಙರಿಕೆ ಸಾಕು.


  • ಡಾ. ಪ್ರಕಾಶ ಬಾರ್ಕಿ (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ.

0 0 votes
Article Rating

Leave a Reply

1 Comment
Inline Feedbacks
View all comments
Malati

Good, informative.. 👌🏻👏🏻👏🏻

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

1
0
Would love your thoughts, please comment.x
()
x
Aakruti Kannada

FREE
VIEW