ಕವಿ ಶಿವಾನಂದ ಭಾಗಾಯಿ ಅವರ ಕಾವ್ಯದ ತುತ್ತು ‘ ಉಣಬಡಿಸಿದ ಬಡವನ ಬುತ್ತಿ’ ಕೃತಿಯ ಕುರಿತು ಲೇಖಕರಾದ ದೀಪಾಲಿ ಸಾಮಂತ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಕೃತಿ : ಬಡವನ ಬುತ್ತಿ
ಲೇಖಕರು : ಶಿವಾನಂದ ಭಾಗಾಯಿ
ಪ್ರಕಾಶನ : ಸಾಹಿತ್ಯ ಸೌರಭ ಪ್ರಕಾಶನ ವಡಗೋಲ
ಪ್ರಕಾರ : ಕವನ ಸಂಕಲನ
ಮುಖಪುಟದ ಸಾಹಿತ್ಯ ಬಳಗಗಳ ಮೂಲಕ ಪರಿಚಿತರಾದ ಸಹೋದರ ಶಿವಾನಂದ ಭಾಗಾಯಿಯವರು ಸೃಜನಶೀಲ ಬರಹಗಳಿಂದ ಉತ್ತಮ ಬರಹಗಾರರೆಂದು ಗುರುತಿಸಿಕೊಂಡಿದ್ದಾರೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಬಿಡುವಿನ ಸಮಯದಲ್ಲಿ ಕಾವ್ಯ ರಚನೆಯಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಉದಯೋನ್ಮುಖರಿಗೆ ಸಾಹಿತ್ಯಿಕ ವೇದಿಕೆಯನ್ನು ಕಲ್ಪಿಸುತ್ತ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ.
ಸಹೋದರ ಶಿವಾನಂದರವರ ಕವನ ಸಂಕಲನ ‘ಬಡವನ ಬುತ್ತಿ’ ಯನ್ನು ಓದಿ ಅವಲೋಕಿಸುವ ಚಿಕ್ಕ ಪ್ರಯತ್ನ ನನ್ನದು.

ಅಲ್ಲಮಪ್ರಭು ಮಹಾಸ್ವಾಮಿಗಳು ಆಶೀರ್ವಾದದಿಂದ ಬೆಳಕು ಪಡೆದ ಈ ಕೃತಿಗೆ ಕೆ ಬಿ ಹೊನ್ನಾಯ್ಕರವರು ಮುನ್ನುಡಿ ಬರೆದು ಹರಸಿದ್ದಾರೆ. ವಿಜಯಾ ರಾ ಡಾಂಗೆ ಹಾಗೂ ಚಿದಾನಂದ ಸರವಾಡೆಯವರು ಬೆನ್ತಟ್ಟಿ ಹಾರೈಸಿದ ಕವನ ಸಂಕಲನವು ಒಟ್ಟು 100 ಕವನಗಳನ್ನು ಒಳಗೊಂಡಿದ್ದು ಭಕ್ತಿ ಭಾವ,ದೇಶ ಪ್ರೇಮ, ಪ್ರಕೃತಿ ಆರಾಧನೆ, ಅಂತರಂಗದ ತುಡಿತ, ಒಲವಿನ ಸಲ್ಲಾಪದ ಸುಮಧುರ ಕಾವ್ಯದ ತುತ್ತಾಗಿದೆ.
ಸಂಸ್ಕೃತಿ ಸಂಸ್ಕಾರಕ್ಕೆ ಹೆಸರಾದ ಹಸಿರಾದ ಮಾಧುರ್ಯತೆಯನ್ನ ಹೊಂದಿದ ದೇಶ / ಪ್ರಕೃತಿಯ ಮಡಿಲು ತಾಣಗಳ ತೊಟ್ಟಿಲು ಭಾರತ ದೇಶವಿದು ಸ್ವರ್ಗದ ಬಾಗಿಲಂತೆ / ಎಂದು ಅಪೂರ್ವ ದೇಶಪ್ರೇಮವನ್ನು ಸಾರಿದರೆ ನಿಶೆ ಒಡಲಿಂದ ಉಷೆ ಮೂಡಿದಾಗ ಕವಿತೆಯಲ್ಲಿ ಸಮಯದ ಚಕ್ರವು ಮೆಲ್ಲನೆ ಜಾರುತ್ತಿದೆ, ನಕ್ಷತ್ರಗಳು ಕೈಬೀಸಿ ಕರೆಯುತ್ತಿದೆ, ನಿಷ್ಕಲ್ಮಶ ಮನದಿ ಸ್ವಪ್ನಗಳು ಮೂಡಿ ನನಸಾಗಲು ತುದಿಗಾಲಲ್ಲಿ ಕಾಯುತ್ತಿವೆ. ಎನ್ನುತ್ತಾ ಪ್ರಕೃತಿಯ ಜೊತೆ ಜೊತೆಗೆ ನಮ್ಮ ಬದುಕು ಸಾಗುವ ರೀತಿಯನ್ನು ತುಂಬಾ ಚೆನ್ನಾಗಿ ವ್ಯಕ್ತಪಡಿಸಿದ್ದಾರೆ.
ಸಂಕ್ರಾಂತಿ ಸಡಗರ ಕವಿತೆಯಲ್ಲಿ ಸುಗ್ಗಿ ಸಡಗರ,ರೈತನ ಪರಿಶ್ರಮದ ಫಲವಾಗಿ ಬಂದ ಬೆಳೆ ರಾಶಿ ಮಾಡಿ ಭೂತಾಯಿಗೆ ಸಲ್ಲಿಸುವ ಪೂಜೆ ಹಾಗೂ ಕುಟುಂಬದ ಜನರ ಹರ್ಷೋಲ್ಲಾಸದ ಸಂಭ್ರಮದ ಕ್ಷಣಗಳನ್ನು ಅದ್ಭುತವಾಗಿ ಪ್ರಚುರಪಡಿಸಿದ್ದಾರೆ.
ಸಾಗಿದೆ ಪರಿಸರ ವಿನಾಶದ ಅಂಚಿಗೆ, ವಿಷಜಂತುಗಳು ಸೇರಿವೆ ಒಡಲಿಗೆ, ಸ್ವಾರ್ಥದಿ ಮನುಜ ಅವಳನು ಕೊಂದು, ಕೈ ಒರೆಸಿಕೊಂಡ ಎಲ್ಲವನ್ನು ತಿಂದು ಎಂಬ ಸಾಲುಗಳು ಮಾರ್ಮಿಕವಾಗಿ ಮೂಡಿ ಬಂದಿವೆ. ಮನುಷ್ಯನ ಕುಕರ್ಮದಿಂದಾಗಿ ಪರಿಸರ ಸಂಪೂರ್ಣ ಹಾಳಾಗುತ್ತಿದ್ದು, ಸಕಲ ಜೀವ ಜಂತುಗಳಿಗೂ ಆಧಾರವಾದ ಪರಿಸರ ಮಾತೆ ನಮ್ಮ ತಾಯಿಯಿದ್ದಂತೆ , ಅವಳನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ವೆಂಬ ಉತ್ತಮ ಸಂದೇಶವನ್ನು ‘ಪರಿಸರ ಮಾತೇ ಜೀವದಾತೆ’ ಕವನದ ಮೂಲಕ ರವಾನಿಸಿದ್ದಾರೆ.

ಬದುಕಿನ ಸಂತೆ ಕವನದಲ್ಲಿ ಬದುಕು ನಶ್ವರ ಇದಕ್ಕೆ ಬೇಕಿಲ್ಲ ಸುಣ್ಣ ಬಣ್ಣ ಸಿಂಗಾರ, ದ್ವೇಷ ಅಸೂಯೆಯಿಂದ ಬದುಕೆಂಬ ಬಳ್ಳಿ ಬಾಡುತ್ತಿದೆ.ಅದನ್ನು ಚಿಗುರಿಸಲು ಆಧ್ಯಾತ್ಮವೆಂಬ ನೀರಿನಿಂದ ನಮ್ಮ ಮನದಲ್ಲಿರುವ ಅಜ್ಞಾನದ ಕೊಳೆಯನ್ನು ತೊಳೆದು ಹಾಕಬೇಕು ಎಂಬ ವಾಸ್ತವತೆಯನ್ನು ಬಹಳ ಸೊಗಸಾಗಿ ಪದಗಳಲ್ಲಿ ಹಿಡಿದಿಟ್ಟ ಈ ಕವನವು ನನ್ನ ಮನಸ್ಸಿಗೆ ತುಂಬಾ ಹಿಡಿಸಿತು.
ಕೃತಿಚೌರ್ಯ ಮಾಡಬ್ಯಾಡ ತಮ್ಮ, ಆಗತೈತಿ ನಿನ್ನದು ಕಿಮ್ಮತ್ತು ಕಮ್ಮ , ಬರಹಗಳನ್ನ ಕದ್ದು ಏನ್ ಮಾಡ್ತಿ, ಸ್ವಂತದ್ದು ಬರಿ ಉದ್ಧಾರ ಆಯ್ತಿ / ಎಂದು ಜವಾರಿ ಉತ್ತರ ಕರ್ನಾಟಕ ಶೈಲಿಯಲ್ಲಿ ಮೂಡಿದ ‘ಕೃತಿಚೌರ್ಯ’ ಕವನವು ಬೇರೆಯವರ ಬರಹಗಳನ್ನು ಕದ್ದು ತಮ್ಮ ಹೆಸರು ಸೇರಿಸಿ ಪ್ರಕಟಿಸುವ ಶೋಕಿಗೆ ಕಡಿವಾಣ ಹಾಕುವಂತೆ ಹೇಳುತ್ತಾ ಮುಂದುವರೆದು ಬರಹಗಳು ದೇವರಿಗೆ ಸಮಾನ, ಕದ್ದು ತಕ್ಕೋಬ್ಯಾಡ ನಿನ್ನ ಮಾನ/ ಎಂದು ತಾಕೀತು ನೀಡುವ ಇವರು ಕೃತಿ ಚೌರ್ಯ ಮಾಡುವ ವಂಚಕರ ವಿರುದ್ಧ ಬಲವಾದ ಚಾಟಿಯೇಟು ಬೀಸಿದ್ದಾರೆ.
ಭಾವ ಸಂಚಲನ, ಪ್ರೇಮ ಪಲ್ಲಕ್ಕಿ, ಜನುಮದ ಗೆಳತಿ, ನನ್ನೆದೆಯ ಪುಸ್ತಕ ,ಒಲವ ಹಣತೆ , ನನ್ನಾಕೆ ಇನ್ನೂ ಹಲವು ಕವನಗಳು ಇವರ ಒಲವಿನ ಬುತ್ತಿಯಿಂದ ಸೂಸಿದ ಪ್ರೇಮ ಕಾವ್ಯಗಳು. ಇಲ್ಲಿ ತಮ್ಮ ಮನದಿಂಗಿತವನ್ನು ಸುಮಧುರವಾಗಿ ಅಕ್ಷರ ರೂಪದಲ್ಲಿ ಮೂಡಿಸುವಲ್ಲಿ ಕವಿ ಯಶಸ್ವಿಯಾಗಿದ್ದಾರೆ ಎನ್ನಬಹುದಾಗಿದೆ.
ಒಟ್ಟಾರೆಯಾಗಿ ಭಾಗಾಯಿಯವರು ಸಾಹಿತ್ಯ ಲೋಕದಲ್ಲಿ ಮಿನುಗುವ ಎಲ್ಲ ಭರವಸೆಯನ್ನು ಮೂಡಿಸಿದ್ದಾರೆ. ಇವರಿಂದ ಇನ್ನೂ ಹತ್ತು ಹಲವು ಕೃತಿಗಳು ಸಾಹಿತ್ಯ ಲೋಕ ಸೇರಲಿ ಎಂಬ ಸದಾಶಯ ದೊಂದಿಗೆ
- ದೀಪಾಲಿ ಸಾಮಂತ, ದಾಂಡೇಲಿ.
