ಲೇಖಕರ ಮನದಾಳದ ಮಾತು : ಪಾರ್ವತಿ ಐತಾಳ್

ಹಿರಿಯ ಲೇಖಕಿ ಪಾರ್ವತಿ ಐತಾಳ್ ಅವರ ಮೊದಲ ಬರಹ ಉಪೇಂದ್ರನಾಥ ಅಶ್ಕ್ ಅವರ ಐದು ನೀಳ್ಗತೆ ಗಳ ಸಂಕಲನ ‘ಅಶ್ಕರ ಕಥೆಗಳು’. ಪಾರ್ವತಿ ಐತಾಳ್ ಅವರು ತಮ್ಮ ಮನದಾಳದ ಮಾತನ್ನು ವಸಂತ ಗಣೇಶ್ ಅವರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

೧. ನಿಮ್ಮ ಬಾಲ್ಯ ಹಾಗೂ ತಂದೆ-ತಾಯಿ, ಹುಟ್ಟಿದ ಊರು ವಿದ್ಯಾಭ್ಯಾಸದ ಬಗ್ಗೆ ಹೇಳಿ?

ನಾನು ಹುಟ್ಟಿ ಬೆಳೆದದ್ದು ಕಾಸರಗೋಡು ತಾಲೂಕಿಗೆ (ಈಗ ಅದು ಜಿಲ್ಲೆ) ಸೇರಿದ ಧರ್ಮತ್ತಡ್ಕ ಎಂಬ ಹಳ್ಳಿಯ ಬಾಳಿಕೆ ಎಂಬ ಮನೆಯಲ್ಲಿ. ‌ನನ್ನ ತಂದೆ ಮಹಾಲಿಂಗ ಭಟ್ ಮತ್ತು ತಾಯಿ ಪರಮೇಶ್ವರಿ ಅಮ್ಮ. (ಇಬ್ಬರೂ ಎಂಬತ್ತರ ದಶಕದ ಆರಂಭದಲ್ಲೇ ತೀರಿಕೊಂಡರು). ತಂದೆ ಕೃಷಿಕರು. ಅಡಿಕೆ ತೋಟ, ಗೇರುಬೀಜ ಮರಗಳಿರುವ ಗುಡ್ಡ , ಭತ್ತದ ಗದ್ದೆಗಳಿದ್ದವು. ಹಟ್ಟಿ-ದನ ಕರುಗಳಿದ್ದವು. ನಾವು ಆರು ಮಂದಿ ಮಕ್ಕಳು. ಹಿರಿಯ ಇಬ್ಬರು ಅಣ್ಣಂದಿರು. ಸುಬ್ಬಣ್ಣ ಭಟ್ ಮತ್ತು ರಾಮ ಭಟ್. ಮೂವರು ಅಕ್ಕಂದಿರು. ಗೌರಿ, ಲಕ್ಷ್ಮಿ, ಸರಸ್ವತಿ. ನಾನು ಕೊನೆಯವಳು. ಮನೆಯಲ್ಲಿ ಅಪ್ಪ ಅಮ್ಮಂದಿರ ಜೊತೆಗೆ ನಾವೆಲ್ಲರೂ ಒಂದಿಲ್ಲೊಂದು ಕೆಲಸ ಮಾಡುತ್ತಲೇ ಇರಬೇಕಿತ್ತು. ಅಪ್ಪ ತುಂಬಾ ಕಟ್ಟುನಿಟ್ಟಾದದ್ಧರಿಂದ ನಾವು ಅಪ್ಪನಿಗೆ ತುಂಬಾ ಹೆದರುತ್ತಿದ್ದೆವು. ಹೇಳಿದ ಕೆಲಸ ಮಾಡದಿದ್ದರೆ, ತಂಟೆ ಕಿತಾಪತಿ ಮಾಡಿದರೆ, ಸಂಪ್ರದಾಯಗಳನ್ನು ಸರಿಯಾಗಿ ಪಾಲಿಸದಿದ್ದರೆ, ಸುಮ್ಮನೆ ಕಿತ್ತಾಡಿಕೊಂಡು ಕೆಟ್ಟ ಮಾತುಗಳಿಂದ ಬೈದುಕೊಂಡರೆ ಪೆಟ್ಟು ಬೀಳುತ್ತಿತ್ತು . ಅಮ್ಮ ಗೃಹಿಣಿ, ಮುಂಜಾವಿನಿಂದ ರಾತ್ರಿಯೇ ತನಕವೂ ದುಡಿಯುತ್ತಿದ್ದಳು. ನಮ್ಮ ಹತ್ತಿರ ಮಾತನಾಡಲಿಕ್ಕೂ ಅವಳಿಗೆ ಸಮಯ ಸಿಗುತ್ತಿರಲಿಲ್ಲ. ಅಪ್ಪನಿಗೆ ಅವಳೂ ಹೆದರುತ್ತಿದ್ದಳು.

ಅಪ್ಪನಿಗೆ ವಿದ್ಯಾಭ್ಯಾಸ ಹೆಚ್ಚು ಇಲ್ಲದಿದ್ದರೂ ಅವರು ಪ್ರತಿಭಾವಂತರು. ತಾಳಮದ್ದಳೆ ಅರ್ಥಧಾರಿಗಳಾಗಿ ಊರಿನಲ್ಲಿ ಅವರಿಗೆ ಒಳ್ಳೆಯ ಹೆಸರಿತ್ತು. ಮುಸ್ಸಂಜೆ ಅಥವಾ ರಾತ್ರಿ ಮಲಗುವುದಕ್ಕೆ ಮೊದಲು ನಾವು ಮಕ್ಕಳನ್ನು ಸುತ್ತ ಕುಳ್ಳಿರಿಸಿಕೊಂಡು ರಾಮಾಯಣ, ಮಹಾಭಾರತ, ಭಾಗವತಗಳಿಂದ ಪದ್ಯಗಳನ್ನು ರಾಗವಾಗಿ ವಾಚಿಸಿ ಬಹಳ ಚೆನ್ನಾಗಿ ಕಥೆಗಳನ್ನು ಹೇಳುತ್ತಿದ್ದರು. ಮನೆಯಲ್ಲಿ ಒಂದು ಉತ್ತಮ ಸಾಂಸ್ಕೃತಿಕ ವಾತಾವರಣ ಮೂಡಲು ಇದು ಕಾರಣವಾಯಿತು.

ಹಿಂದುಳಿದ ಹಳ್ಳಿ. ವಿದ್ಯುತ್ ಸಂಪರ್ಕ ಇರಲಿಲ್ಲ.‌ ಒಂದು ಪ್ರಾಥಮಿಕ ಶಾಲೆಯಿತ್ತು. ಅಲ್ಲೇ ನಮ್ಮೆಲ್ಲರ ಮೊದಲ ಹಂತದ ವಿದ್ಯಾಭ್ಯಾಸ ನಡೆಯಿತು. ಅಲ್ಲಿ ಒಳ್ಳೆಯ ಅಧ್ಯಾಪಕರು ನನಗೆ ಸಿಕ್ಕಿದರು. ಕಥೆ ಪುಸ್ತಕಗಳನ್ನು ಓದುವ ಪ್ರೇರಣೆ ಅಲ್ಲಿಯೇ ನನಗೆ ಸಿಕ್ಕಿತು. ಅಲ್ಲಿಂದ ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ನಾನು ವಿಟ್ಲದ ವಿಠಲ ಬಾಲಿಕಾ ಪ್ರೌಢ ಶಾಲೆಗೆ ಹೋದೆ. ಮುಂದೆ ಸರ್ಕಾರಿ ಕಾಲೇಜು ಕಾಸರಗೋಡಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ನನ್ನ ಬಿ.ಎ.ಮುಗಿಸಿ ಎಂ.ಎ.ಗಾಗಿ ಮೈಸೂರಿನ ಮಾನಸಗಂಗೋತ್ರಿಗೆ ಹೋದೆ. ೧೯೮೧ರಲ್ಲಿ ಎಂ.ಎ.ಮುಗಿಸಿದ ಕೂಡಲೇ ಮಂಗಳೂರಿನ ರೋಶನಿ ನಿಲಯದಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿ ಸೇರಿದೆ. ಅಲ್ಲಿ ನಾಲ್ಕು ತಿಂಗಳು ಕೆಲಸ ಮಾಡಿ ಮುಂದೆ ಮೂಲ್ಕಿಯ ವಿಜಯಾ ಕಾಲೇಜಿಗೆ ಸೇರಿದೆ. ೧೯೮೮ರಲ್ಲಿ ಕುಂದಾಪುರದ ಗಂಗಾಧರ ಐತಾಳರನ್ನು ಮದುವೆಯಾದ ನಂತರ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿಗೆ ವರ್ಗವಾಗಿ ಹೋದೆ. ೨೦೧೭ ಜುಲೈನಲ್ಲಿ ನಿವೃತ್ತಿ ಹೊಂದುವ ತನಕದ ಅಲ್ಲೇ ಸೇವೆ ಸಲ್ಲಿಸಿದೆ.

೨. ಸಾಹಿತ್ಯದಲ್ಲಿ ಕ್ಷೇತ್ರದಲ್ಲಿ ನಿಮಗೆ ಆಸಕ್ತಿ ಹುಟ್ಟಿದ್ದು ಯಾವಾಗ ಮತ್ತು ಹೇಗೆ? ಲೇಖಕಿಯಾಗಬೇಕೆನಿಸಿದ್ದು ಯಾವಾಗ? ಕಾರಣ ಏನು?

ಕಥೆ ಪುಸ್ತಕಗಳನ್ನು ಓದುವ ಹವ್ಯಾಸ ಆರನೇ ತರಗತಿಯಲ್ಲಿ ಪ್ರಾರಂಭವಾಯಿತು. ಮಾಸ್ತರರು ಹೇಳಿದ ಪುಟ್ಟ ಪ್ರಬಂಧಗಳನ್ನು ನಾನು ಸ್ವತಃ ಬರೆದು ಶಹಬ್ಬಾಷ್ ಗಿರಿ ಪಡೆಯುತ್ತಿದ್ದೆ. ಹೈಸ್ಕೂಲಿಗೆ ಹೋದ ಮೇಲೆ ಪ್ರಬಂಧ ಸ್ಪರ್ಧೆಗಳಲ್ಲಿ ನನಗೆ ಬಹುಮಾನಗಳು ಸಿಗುತ್ತಿದ್ದವು. ಅಲ್ಲಿ ಶಾಲಾ ಸಂಚಿಕೆಗೆ ಕಥೆ ಕವನಗಳನ್ನು ಕೊಡಿ ಅಂದಾಗ ನಾನು ತಪ್ಪದೇ ಕೊಡುತ್ತಿದ್ದೆ.‌ ಸಂಚಿಕೆಯಲ್ಲಿ ಪ್ರಿಂಟಾಗಿ ಬಂದಾಗ ತುಂಬಾ ಸಂತೋಷ ಪಡುತ್ತಿದ್ದೆ. ಕಾಲೇಜಿಗೆ ಸೇರುವಷ್ಟರಲ್ಲಿ ತ್ರಿವೇಣಿ, ಅನುಪಮಾ ನಿರಂಜನ, ಎಂ.ಕೆ.ಇಂದಿರಾ, ಕೃಷ್ಣ ಮೂರ್ತಿ ಪುರಾಣಿಕ, ತ.ರಾ.ಸು. ರವರ ಹಲವು ಕಾದಂಬರಿಗಳನ್ನು ಓದಿ ಮುಗಿಸಿದ್ದೆ. ಕಾಲೇಜು ವಾರ್ಷಿಕ ಸಂಚಿಕೆಗೆ ಕಥೆ ಕವನ ಪ್ರಬಂಧಗಳನ್ನು ಕೊಡುತ್ತಿದ್ದೆ. ಕಾಸರಗೋಡಿನಲ್ಲಿದ್ದಾಗ ಮಲೆಯಾಳ ಪತ್ರಿಕೆಗಳನ್ನು ಓದುವ ಉದ್ದೇಶದಿಂದ ಗೆಳತಿಯರಿಂದ ಮಲೆಯಾಳ ಓದಲು ಮತ್ತು ಬರೆಯಲು ಕಲಿತೆ. ಮುಂದೆ ಮಲೆಯಾಳದ ಕೃತಿಗಳನ್ನು ಅನುವಾದಿಸಲು ಇದೇ ಪ್ರೇರಣೆಯಾಯಿತು.

ಎಂ.ಎ.ಮುಗಿಸಿ ಉಪನ್ಯಾಸಕಿ ಆದ ಮೇಲೆ ಮೂಲ್ಕಿಯ ಕಾಲೇಜಿನಲ್ಲಿ ಒಳ್ಳೆಯ ಸಾಹಿತ್ಯಕ ವಾತಾವರಣ ಸಿಕ್ಕಿತು. ಆಧುನಿಕ ಸಾಹಿತ್ಯದ ಕುರಿತು ಬಹಳಷ್ಟು ಚರ್ಚೆಗಳಾಗುತ್ತಿದ್ದವು. ನನಗೆ ಕನ್ನಡ, ಇಂಗ್ಲಿಷ್, ಹಿಂದಿ, ಮಲೆಯಾಳ, ತುಳು-ಹೀಗೆ ಐದು ಭಾಷೆಗಳು ತಿಳಿದಿವೆ ಅನ್ನುವುದು ಗೊತ್ತಾದಾಗ ನನ್ನ ಹಿರಿಯ ಸಹೋದ್ಯೋಗಿಗಳು ಕನ್ನಡ ವಿಮರ್ಶಕರೂ ಆಗಿದ್ದ ಪ್ರೊ.ಡಿ.ರಘುನಾಥ ರಾವ್ ಮತ್ತು ಪ್ರೊ.ಎನ್.ಎಸ್.ರಾಘವನ್ ‘ ನೀವು ಅನುವಾದ ಕ್ಷೇತ್ರದಲ್ಲಿ ಯಾಕೆ ಕೆಲಸ ಮಾಡಬಾರದು?’ ಎಂದು ಸಲಹೆಯಿತ್ತರು. ನನಗೂ ಅದು ಹೌದು ಅನ್ನಿಸಿತು. ಆಗಲೇ ನನ್ನ ಕೆಲವು ಸಣ್ಣ ಕಥೆಗಳು ಉದಯವಾಣಿಯಲ್ಲಿ ಪ್ರಕಟವಾಗಿದ್ದವು.‌ ಅನಂತರ ನಾನು ಇಂಗ್ಲಿಷ್, ಮಲೆಯಾಳ ಮತ್ತು ಹಿಂದಿಗಳಿಂದ ಕೆಲವು ಸಣ್ಣ ಕಥೆಗಳನ್ನು ಅನುವಾದಿಸಿದೆ. ಎಲ್ಲವೂ ಪತ್ರಿಕೆಗಳಲ್ಲಿ ಪ್ರಕಟವಾದವು. ನಾನು ಅನುವಾದಕಿಯಾಗಿ ಪ್ರಸಿದ್ಧಳಾಗಿ ಬಿಟ್ಟೆ.

೩. ನಿಮ್ಮ ಮೊದಲ ಬರಹ ಯಾವುದು? ಬರೆದದ್ದು ಯಾವಾಗ?

ಮೊದಲ ಬರಹ ಆಗಲೇ ಹೇಳಿದೆ ಶಾಲಾ ವಾರ್ಷಿಕ ಸಂಚಿಕೆಗೆಳಲ್ಲಿ ಪ್ರಕಟವಾಯಿತು ಅಂತ. ಪುಸ್ತಕ ರೂಪದಲ್ಲಿ ನನ್ನ ಮೊದಲ ಕೃತಿ ನಾನು ಹಿಂದಿಯಿಂದ ಅನುವಾದಿಸಿದ ಉಪೇಂದ್ರನಾಥ ಅಶ್ಕ್ ಅವರ ಐದು ನೀಳ್ಗತೆ ಗಳ ಸಂಕಲನ ‘ಅಶ್ಕರ ಕಥೆಗಳು’. ಅದು ೧೯೮೭ರಲ್ಲಿ ಮಂಗಳೂರಿನ ಭಾರದ್ವಾಜ ಪ್ರಕಾಶನದ ಮೂಲಕ ಪ್ರಕಟವಾಯಿತು. ಮೂಲ ಲೇಖಕರ ಒಪ್ಪಿಗೆ ಪತ್ರ ಪಡೆಯಲು ಅವರಿಗೆ ಹಿಂದಿಯಲ್ಲೇ ಪತ್ರ ಬರೆದೆ. ಅವರು ಅನಂತರ ತುಂಬಾ ಕಾಲದ ತನಕ ಪತ್ರ ಬರೆಯುತ್ತಿದ್ದರು.

೪. ಒಟ್ಟು ನೀವು ಬರೆದಿರುವ ಕೃತಿಗಳು ಎಷ್ಟು? ಕಾದಂಬರಿ, ಕವಿತೆ, ಲೇಖನಗಳು, ಎಷ್ಟೆಲ್ಲ ಬರೆದಿರುವ ನಿಮಗೆ ಇಷ್ಟವಾಗುವ ಸಾಹಿತ್ಯದ ಪ್ರಕಾರ ಯಾವುದು?

ನಾನು ಅನುವಾದಗಳ ಜೊತೆಗೆ ಸ್ವತಂತ್ರವಾಗಿಯೂ ಕಥೆಗಳನ್ನು ಬರೆಯುತ್ತಿದ್ದೆ. ‘ಅಚಲಾ’ಅನ್ನುವ ನನ್ನ ಕಥಾಸಂಕಲನವನ್ನು ೨೦೦೭ರಲ್ಲಿ ವಸಂತ ಪ್ರಕಾಶನ ಪ್ರಕಟಿಸಿತು. ೨೦೧೮ರಲ್ಲಿ ‘ಸುಟ್ಟ ಗಾಯದ ಕಲೆಗಳು’ ಅನ್ನುವ ಇನ್ನೊಂದು ಸಂಕಲನವನ್ನು ಅವರೇ ಪ್ರಕಟಿಸಿದರು. ೨೦೧೪ರಲ್ಲಿ ನನ್ನ ಒಂದು ಕಾದಂಬರಿ ‘ಒಡಲಬೆಂಕಿ’ಯನ್ನು ಹೇಮಂತ ಸಾಹಿತ್ಯದವರು ಪ್ರಕಟಿಸಿದರು.

೫. ಒಟ್ಟು ನೀವು ರಚಿಸಿರುವ ಕೃತಿಗಳು ಎಷ್ಟು?

ನಾನು ಸಾಕಷ್ಟು ಪುಸ್ತಕ ವಿಮರ್ಶೆ, ನಾಟಕ ವಿಮರ್ಶೆ, ಮತ್ತು ವೈಚಾರಿಕ ಲೇಖನಗಳನ್ನು ಬರೆದಿದ್ದೇನೆ. ಅವುಗಳಲ್ಲಿ ಹೆಚ್ಚಿನವು ಸಂಕಲನ ರೂಪದಲ್ಲಿ ಪ್ರಕಟವಾಗಿವೆ. ಐದೂ ಭಾಷೆಗಳಲ್ಲಿ ಬರೆದಿದ್ದೇನೆ. ಪ್ರಸಿದ್ಧ ಲೇಖಕರ ಕಥೆ ಕಾದಂಬರಿ ನಾಟಕಗಳನ್ನು ಅನುವಾದಿಸಿದ್ದೇನೆ. ಇತರ ಲೇಖಕರ ಜತೆಗೆ ಸಹಲೇಖಕಿಯಾಗಿ ಪುಸ್ತಕಗಳು ಪ್ರಕಟವಾಗಿವೆ. ನಾಲ್ಕು ಕೃತಿಗಳನ್ನು ಸಂಪಾದಿಸಿದ್ದೇನೆ. ಇದುವರೆಗೆ ಎಲ್ಲ ಭಾಷೆಗಳಲ್ಲಿ ಬರೆದದ್ದು ಸೇರಿ ಒಟ್ಟು ೯೫ ಕೃತಿಗಳು ಪ್ರಕಟವಾಗಿವೆ.

೬. ನೀವು ಬರೆದಿರುವ ಪ್ರತೀ ಕಾದಂಬರಿಗಳಿಗೆ, ಕಥೆಗಳಿಗೆ ವೈವಿಧ್ಯಮಯ ವಸ್ತು, ವಿಷಯಗಳನ್ನು ಎಲ್ಲಿಂದ ಸಂಗ್ರಹಿಸುತ್ತಿದ್ದಿರಿ?

ಸ್ವತಂತ್ರ ಕಥೆಗಳಿಗೆ ನನ್ನ ಸುತ್ತ ಮುತ್ತಲಿನ ಬದುಕನ್ನು ಅವಲೋಕಿಸುವ ಮೂಲಕ ವಸ್ತುಗಳನ್ನು ಕಂಡುಕೊಂಡು ಬರೆಯುತ್ತೇನೆ. ಸ್ತ್ರೀಯರು ಸಮಸ್ಯೆಗಳನ್ನು ವಸ್ತುವಾಗಿಸಿ ತುಂಬಾ ಕಥೆಗಳನ್ನು ಬರೆದಿದ್ದೇನೆ. ಅನುವಾದವಾದರೆ ಮೂಲದ ಒಂದು ಕೃತಿಯನ್ನು ಓದಿ ಕೂಲಂಕುಷವಾಗಿ ಆ ಬಗ್ಗೆ ಚಿಂತಿಸಿ ಅರ್ಥ ಮಾಡಿಕೊಂಡು ಅದು ಉದ್ದಿಷ್ಟ ಭಾಷೆಯ ಓದುಗರಿಗೆ ಒಂದು ಹೊಸ ಅನುಭವವನ್ನು ಕೊಡಬಲ್ಲ ಕೃತಿಯೆಂದು ಖಚಿತವಾದರೆ ಮಾತ್ರ ಅನುವಾದಕ್ಕೆ ಆಯ್ದುಕೊಳ್ಳುತ್ತೇನೆ. ಆಯ್ಕೆ ಅನ್ನುವುದು ಅನುವಾದದಲ್ಲಿ ಬಹಳ ಮುಖ್ಯ. ಯಾರೋ ಒತ್ತಾಯ ಮಾಡಿದರೆಂದು ದಾಕ್ಷಿಣ್ಯಕ್ಕೆ ಕಟ್ಟು ಬಿದ್ದು ಅನುವಾದ ಮಾಡುವುದು ವ್ಯರ್ಥವೆಂಬುದು ನನ್ನ ಅಭಿಪ್ರಾಯ. ಅಕಾಡೆಮಿಗಳು ಅನುವಾದದ ಕೆಲಸಗಳನ್ನು ವಹಿಸಿ ಕೊಟ್ಟಾಗ ಖುಷಿಯಿಂದ ಮಾಡುತ್ತೇನೆ.‌ ಅನುವಾದ ಅನ್ನುವುದು ಒಂದು ಸೃಜನಶೀಲತೆಯನ್ನು ಬೇಡುವ ಕೆಲಸ. ಬರೇ ಎರಡು ಭಾಷೆಗಳು ತಿಳಿದಿವೆ ಎಂದು ಮಾತ್ರಕ್ಕೆ ಅನುವಾದ ಮಾಡಲಾಗದು. ಭಾಷಾ ಪ್ರತಿಭೆ, ಒಳ್ಳೆಯ ಬರವಣಿಗೆಯ ಶೈಲಿ ಇಲ್ಲದವರಿಂದ ಅದು ಖಂಡಿತಾ ಸಾಧ್ಯವಿಲ್ಲ.

೭. ನಿಮಗೆ ಸಿಕ್ಕ ಪ್ರಶಸ್ತಿ ಪುರಸ್ಕಾರಗಳ ಬಗ್ಗೆ ಹೇಳಿ?

 • ಕರ್ನಾಟಕ ಲೇಖಕಿಯರ ಸಂಘದ “ಎಚ್.ವಿ.ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ 2011” “ದುರ್ಬಿಜ” ಅನುವಾದಿತ ಕಾದಂಬರಿಗೆ
 • ಕೈರಳಿ ಸುಹೃದ್ವೇದಿಯಿಂದ ಡಾ. ಶಿವರಾಮ ಕಾರಂತ ಸಾಹಿತ್ಯ ಪ್ರಶಸ್ತಿ 2001
 • ಕನ್ನಡ ಸಾಹಿತ್ಯ ಪರಿಷತ್ತಿನ ” ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ_2002
 • ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮಲ್ಲಿಕಾ ಪ್ರಶಸ್ತಿ 2005
 • ತುಳು ಸಾಹಿತ್ಯ ಅಕಾಡೆಮಿಯಿಂದ “ತುಳು ಮಹನೀಯರ್” ಪುರಸ್ಕಾರ 2007
 • ತುಳು ಕೂಟ ಏರ್ಪಡಿಸಿದ್ದ ಕವನ ರಚನಾ ಸ್ಪರ್ಧೆಯಲ್ಲಿ ಬಹುಮಾನ _ 2008
 • ಕರ್ನಾಟಕ ಸರ್ಕಾರದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಶ್ರೇಷ್ಠ ಅನುವಾದಾಜಿ ಗೌರವ ಪ್ರಶಸ್ತಿ_2011
 • ಕೇರಳದಿಂದ ಕಾಳಿಯತ್ತ್ ದಾಮೋದರನ್ ಮೆಮೋರಿಯಲ್ ಅವಾರ್ಡ್_2011
 • ಉಡುಪಿಯ ರಥಬೀದಿ ಗೆಳೆಯರು ನಡೆಸಿದ ರಾಜ್ಯ ಮಟ್ಟದ ಮಕ್ಕಳ ನಾಟಕ ರಚನಾ ಸ್ಪರ್ಧೆಯಲ್ಲಿ “ತಂತ್ರಗಾರ್ತಿ” ನಾಟಕಕ್ಕೆ ಪ್ರಥಮ ಬಹುಮಾನ
 • ಮೂರನೆಯ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ” ಕರ್ನಾಟಕ ಸಾಹಿತ್ಯ ರತ್ನ” ಪುರಸ್ಕಾರ
 • ಬೆಂಗಳೂರಿನ ವಿಶ್ವೇಶ್ವರಯ್ಯ ಪ್ರತಿಷ್ಠಾನದಿಂದ “ಒಡಲ ಬೆಂಕಿ” ಕಾದಂಬರಿಗೆ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ
 • ಕರ್ನಾಟಕ ಲೇಖಕಿಯರ ಸಂಘದಿಂದ ” ಮಹಿಳಾ ಚಿಂತನೆಯ ವಿಭಿನ್ನ ನೆಲೆಗಳನ್ನು” ಲೇಖನಕ್ಕೆ ಗೀತಾ ದೇಸಾಯಿ ದತ್ತಿ ಪ್ರಶಸ್ತಿ 2015
 • ಕನ್ನಡ ಸಾಹಿತ್ಯ ಪರಿಷತ್ತಿನಿಂದ “ಉಪನಿಷತ್ ಚಿಂತನೆ” ಕೃತಿಗೆ ವಾಸುದೇವ ಭೂಪಾಲಂ ದತ್ತಿ ಪ್ರಶಸ್ತಿ
 • ಅಮೋಘ ಸಾಂಸ್ಕೃತಿಕ ಸಂಸ್ಥೆ ಉಡುಪಿ ಇವರಿಂದ “ರಂಗಭೂಮಿ ಪುರಸ್ಕಾರ_2016”
 • ಕುಂದಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ 2017 ರಲ್ಲಿ ಸನ್ಮಾನ
 • ಅಜಪುರ ಕರ್ನಾಟಕ ಸಂಘ, ಬ್ರಹ್ಮಾವರದ ಸುವರ್ಣನಿಧಿ ಪುರಸ್ಕಾರ
 • ಗುರುನರಸಿಂಹ ಪ್ರಶಸ್ತಿ_2018
 • ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿ_2018
 • ಶಿವಮೊಗ್ಗ ಕರ್ನಾಟಕ ಸಂಘದಿಂದ ಎಸ್.ವಿ.ಪಿ. ಪ್ರಶಸ್ತಿ 2018
 • ರಂಗಚಿನ್ನಾರಿ, ಕಾಸರಗೋಡು ಇವರ “ರಂಗಚಿನ್ನಾರಿ” ಪ್ರಶಸ್ತಿ

ಇದಲ್ಲದೆ ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಅನುವಾದ ಸಾಹಿತ್ಯ ಅಕಾಡೆಮಿಗಳಿಗೆ ತೀರ್ಪುಗಾರರಾಗಿ, ರಾಜ್ಯ ಮಟ್ಟದ ಮತ್ತು ರಾಷ್ಟ್ರ ಮಟ್ಟದ ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಇನ್ನೂ ಹತ್ತು ಹಲವಾರು ರೀತಿಯಲ್ಲಿ ಸೇವೆ ಸಲ್ಲಿಸಿ ಗೌರವ ಪುರಸ್ಕಾರಗಳು ದೊರಕಿವೆ.

ನಾನು ಕಾಲೇಜಿನಲ್ಲಿ ಪಾಠ ಪ್ರವಚನಗಳಲ್ಲದೆ ವಿದ್ಯಾರ್ಥಿಗಳ ಸಾಹಿತ್ಯಕ ಮತ್ತು ಲಲಿತಕಲಾ ಚಟುವಟಿಕೆಗಳ ಜವಾಬ್ದಾರಿಯನ್ನು ತುಂಬಾ ವರ್ಷಗಳ ತನಕ ವಹಿಸಿಕೊಂಡಿದ್ದೆ. ಅಲ್ಲದೆ ಕೇರಳ-ಕರ್ನಾಟಕಗಳಲ್ಲಿ ಅನೇಕ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸೆಮಿನಾರುಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದೆ.

೮.ನೀವು ನಿಮ್ಮ ವೃತ್ತಿ ಜೀವನ, ಗೃಹಿಣಿಯ ಜವಾಬ್ದಾರಿಗಳ ನಡುವೆ ಬರವಣಿಗೆಗೆ ಹೇಗೆ ಸಮಯ ಹೊಂದಿಸಿಕೊಳ್ಳುತ್ತಿದ್ದಿರಿ.

ವೃತ್ತಿ ಜೀವನ ಹಾಗೂ ಮನೆಕೆಲಸಗಳು ಜವಾಬ್ದಾರಿಗಳಿಂದಾಗಿ ಹವ್ಯಾಸಕ್ಕೆ ಸಮಯ ಹೊಂದಿಸಿಕೊಳ್ಳುವುದು ಕಷ್ಟ ನಿಜ. ಆದರೆ ಅಸಾಧ್ಯವಲ್ಲ. ಮನಸ್ಸಿದ್ದರೆ ಮಾರ್ಗವಿದೆ ಅಲ್ಲವೇ? ಸಮಯ ಹೊಂದಿಸಿಕೊಳ್ಳುವಲ್ಲಿ ಶಿಸ್ತು ಪಾಲಿಸಿದರೆ ಎಲ್ಲವೂ ಸಾಧ್ಯವಿದೆ.

೯. ಜನಪ್ರಿಯ ಸಾಹಿತ್ಯ, ವಿಮರ್ಶಕರಿಂದ ಕಡೆಗಣಿಸಲ್ಪಟ್ಟಿದೆ ಎನ್ನುವ ಮಾತು ಸಾಹಿತ್ಯ ವಲಯದಲ್ಲಿ ಇದೆ. ಒಬ್ಬ ಬರಹಗಾರ್ತಿಯಾಗಿ ಈ ಕುರಿತು ನೀವು ಏನು ಹೇಳುತ್ತೀರಿ?

ಹೌದು. ಜನಪ್ರಿಯ ಕಥೆ ಕಾದಂಬರಿಗಳನ್ನು ಗಂಭೀರ ಸಾಹಿತ್ಯ ವಿಮರ್ಶಕರು ಪರಿಗಣಿಸುತ್ತಿಲ್ಲ. ಹಾಗಂತ ಜನಪ್ರಿಯ ಸಾಹಿತ್ಯದ ಅಗತ್ಯವಿಲ್ಲವೆಂದು ಅರ್ಥವಿಲ್ಲ. ಸಾಮಾನ್ಯ ಓದುಗರಿಗೆ ಅಥವಾ ಸಾಹಿತ್ಯದ ಓದನ್ನು ಆರಂಭಿಸುವವರಿಗೆ ಸರಳವಾದ ಕಥೆಗಳನ್ನು ಒದಗಿಸುವುದು ಜನಪ್ರಿಯ ಸಾಹಿತ್ಯವೇ. ಅವನ್ನು ಓದುವವರಿಗೆ ಒಂದು ಹೊಸ ವಿಮರ್ಶಕ ವರ್ಗವನ್ನು ಸೃಷ್ಟಿಸಿದರಾಯ್ತಲ್ಲ?

೧೦. ಪ್ರಸ್ತುತ ದಿನಗಳಲ್ಲಿ ನಮ್ಮ ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸಲು ಏನು ಮಾಡಬಹುದು? ಈ ವಿಷಯದಲ್ಲಿ ನಿಮ್ಮ ಸಲಹೆ ಏನು?

ಈಗ ಮಕ್ಳಳ ಸಾಹಿತ್ಯ ಅನ್ನುವ ಒಂದು ಹೊಸ ಪ್ರಕಾರವೇ ಹುಟ್ಟಿಕೊಂಡಿದೆ. ಬಹಳಷ್ಟು ಮಕ್ಕಳ ಕೃತಿಗಳು ಬರುತ್ತಿವೆ. ಇವತ್ತು ಮಕ್ಕಳು ಆಧುನಿಕ ತಂತ್ರಜ್ಞಾನದ ಸುಳಿಯಲ್ಲಿ ಸಿಕ್ಕಿ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಿಲ್ಲ ಅನ್ನುವ ಕೂಗು ಕೇಳುತ್ತಿದೆ. ಆದರೆ ಅದಕ್ಕೆ ಕಾರಣ ಹಿರಿಯರಲ್ಲಿ ಆ ಅಭ್ಯಾಸ ಇಲ್ಲದಿರುವುದೇ ಆಗಿದೆ. ಮಕ್ಕಳು ಚಿಕ್ಕವರಿರುವಾಗ ದೊಡ್ಡವರು ಅವರಿಗೆ ಓದಿ ಹೇಳುವ ಅಭ್ಯಾಸ ಮಾಡಿದರೆ ಮುಂದೆ ಮಕ್ಕಳಿಗೆ ತಾನಾಗಿಯೇ ಓದುವ ಆಸಕ್ತಿ ಮೂಡಬಹುದು. ಶಾಲೆಗಳಲ್ಲೂ ಅಷ್ಟೇ. ಅಂಕಗಳಿಗೆಯೇ ಮುಖ್ಯವೆಂದು ಮಕ್ಕಳ ಮನಸ್ಸಿನಲ್ಲಿ ಭ್ರಮೆ ಹುಟ್ಟಿಸದೆ ಪಾಠ ಪಟ್ಟಿಗೆ ಹೊರತಾದ ಸಾಹಿತ್ಯ ಕೃತಿಗಳ ಓದನ್ನು ಅವರಲ್ಲಿ ಪ್ರೇರೇಪಿಸಲು ಶಾಲೆಯ ಸ್ವಲ್ಪ ಸಮಯವನ್ನು ಅಧ್ಯಾಪಕರು ವ್ಯಯಿಸಬೇಕು.

೧೧. ನಿಮ್ಮ ಯಾವುದಾದರೂ ಕೃತಿಗಳು ಚಲನಚಿತ್ರ/ ಧಾರಾವಾಹಿ ಗಳಾಗಿವೆಯೇ?

ನಾನು ಮಲೆಯಾಳದಲ್ಲಿ ಅನುವಾದಿಸಿದ ಬಿ.ಎಂ.ಸುಹರಾ ಅವರ ಸಣ್ಣಕಥೆ ‘ಹುಚ್ಚು’ಇದನ್ನು ಸಂಜ್ಯೋತಿ ಅನ್ನುವವರು ‘ಅನಲ’ ಅನ್ನುವ ಅರ್ಧ ಗಂಟೆಯ ಶಾರ್ಟ್ ಫಿಲ್ಮ್ ಆಗಿ ಮಾಡಿದ್ದಾರೆ.ಅದಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ ಬಂದಿತ್ತು.

೧೨.ನಿಮ್ಮ ಇಷ್ಟದ ಲೇಖಕರು ಯಾರು, ನೀವು ಮತ್ತೆ ಮತ್ತೆ ಓದಲು ಇಷ್ಟಪಡುವ ಕೃತಿಗಳ ಬಗ್ಗೆ ಹೇಳಿ. ಹಾಗೆ ನೀವು ಆಸೆಪಟ್ಟು ನಿಮ್ಮ ಇಷ್ಟದ ಲೇಖಕ/ಲೇಖಕಿಯರನ್ನು ಭೇಟಿಯಾಗಿ ಮಾತನಾಡಿಸಿದ ಕ್ಷಣದ ನೆನಪುಗಳನ್ನು ಹಂಚಿಕೊಳ್ಳಿ.

ನನ್ನ ಇಷ್ಟದ ಲೇಖಕರು ಅಂತ ಒಬ್ಬರನ್ನೇ ಹೆಸರಿಸುವುದು ಕಷ್ಟ. ಕನ್ನಡದಲ್ಲಿ ಶಿವರಾಮ ಕಾರಂತರು, ಮಲೆಯಾಳದಲ್ಲಿ ಎಂ.ಟಿ. ವಾಸುದೇವನ್ ನಾಯರ್, ಹಿಂದಿಯಲ್ಲಿ ಪ್ರೇಮಚಂದ್, ಇಂಗ್ಲಿಷ್ ನಲ್ಲಿ ಟಾಲ್ ಸ್ಟಾಯ್ ಹೀಗೆ. ಅವರಲ್ಲಿ ವಾಸುದೇವನ್ ನಾಯರ್ ಬಿಟ್ಟರೆ ಉಳಿದವರೆಲ್ಲರೂ ಈಗಿಲ್ಲ. ವಾಸುದೇವನ್ ನಾಯರ್ ಮಲೆಯಾಳದ ಜ್ಞಾನಪೀಠ ಪ್ರಶಸ್ತಿ ವಿಜೇತರು. ಕೇರಳದಲ್ಲಿ ಅದ್ಭುತ ಜನಪ್ರಿಯತೆ ಪಡೆದವರು. ನಾನು ಅವರನ್ನು ಮೊದಲು ಭೇಟಿಯಾಗಿದ್ದು ತ್ರಿಶ್ಶೂರಿನ ಕೇರಳ ಸಾಹಿತ್ಯ ಅಕಾಡೆಮಿ ಹಾಲ್ ನಲ್ಲಿ. ಮಲೆಯಾಳದಿಂದ ಕನ್ನಡಕ್ಕೆ ನಾನು ಅನುವಾದಿಸಿದ ಮೊದಲ ಕಾದಂಬರಿ ವೆಟ್ಟೂರು ರಾಮನ್ ನಾಯರ್ ಅವರ ‘ಜೀವಿಕ್ಯಾನ್ ಮರನ್ನು ಪೋಯ ಸ್ತ್ರೀ'(ಬದುಕಲು ಮರೆತು ಸ್ತ್ರೀ)’ಯನ್ನು ಅಂದು ಬಿಡುಗಡೆಗೊಳಿಸಿದ್ದು ಎಂ.ಟಿ.ವಾಸುದೇವನ್ ನಾಯರ್. ಅವರು ನನ್ನ ಹತ್ತಿರ ಕನ್ನಡ ಸಾಹಿತ್ಯದ ಬಗ್ಗೆ ಮತ್ತು ನನ್ನ ವೈಯಕ್ತಿಕ ವಿಚಾರಗಳ ಬಗ್ಗೆ ತುಂಬಾ ಮಾತನಾಡಿದರು.‌ ಅವರು ಎಂದೂ ನಗುವುದಿಲ್ಲ ಎಂದೇ ಫೇಮಸ್. ಆದರೆ ಅಂದು ನನ್ನ ಪುಸ್ತಕ ಬಿಡುಗಡೆ ಮಾಡಿ ಭಾಷಣ ಮಾಡುವಾಗ ಮುಗುಳು ನಕ್ಕರು ಅನ್ನುವುದು ದೊಡ್ಡ ಸುದ್ದಿಯಾಗಿತ್ತು. ನನಗೆ ತುಂಬಾ ಖುಷಿ. ಅವರ ಎರಡು ಕಾದಂಬರಿಗಳನ್ನು ಎರಡು ಸಣ್ಣ ಕಥೆಗಳ ಸಂಕಲನವನ್ನು ನಾನು ಕನ್ನಡದಲ್ಲಿ ತಂದಿದ್ದೇನೆ.‌

೧೩.ನೀವು ನಮ್ಮ ಪುಸ್ತಕ ಅವಲೋಕನ ಬಳಗದ ಸದಸ್ಯರೂ ಆಗಿದ್ದೀರಿ. ನಮ್ಮ ಬಳಗದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

ಜನರಲ್ಲಿ ಪುಸ್ತಕ ಪ್ರೀತಿಯನ್ನು ಬೆಳೆಸುವ ನಿಟ್ಟಿನಲ್ಲಿ ಪುಸ್ತಕ ಅವಲೋಕನ ಗುಂಪು ಮಾಡುತ್ತಿರುವ ಕೆಲಸಗಳ ಬಗ್ಗೆ ನನಗೆ ಸಂತೋಷವಿದೆ, ಅಭಿಮಾನವೂ ಇದೆ. ಕೃತಿಗಳು ದೊಡ್ಡ ಲೇಖಕರದ್ದು ಆಗಲಿ ಸಾಮಾನ್ಯರದ್ದಾಗಲಿ, ಗಂಭೀರ ಸಾಹಿತ್ಯವಾಗಲಿ ಜನಪ್ರಿಯ ಸಾಹಿತ್ಯವಾಗಲಿ- ಪುಸ್ತಕ ಅವಲೋಕನ ಗುಂಪು ಎಲ್ಲದಕ್ಕೂ ಸಮಾನವಾದ ಪ್ರಾಮುಖ್ಯ ನೀಡುತ್ತಿದೆ. ನಮ್ಮ ಸಮಾಜದಲ್ಲಿ ವಿವಿಧ ಆಸಕ್ತಿಗಳುಳ್ಳ, ವಿವಿಧ ಗ್ರಹಣ ಶಕ್ತಿ ಗಳಿರುವ ಓದುಗರಿರುವಾಗ ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ಇಂಥ ನಿಷ್ಪಕ್ಷ ಧೋರಣೆಯನ್ನು ತಾಳುವುದು ಒಳ್ಳೆಯದು. ಆದ್ದರಿಂದ ಈ ಗುಂಪಿನ ಧೋರಣೆ ಶ್ಲಾಘನೀಯ.

೧೪. ನೀವು ಅನುವಾದ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದ್ದೀರಿ. ಈ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆನ್ನುವವರಿಗೆ ನಿಮ್ಮ ಕಿವಿಮಾತು ಹೇಳಿ.

ಅನುವಾದ ನಾನು ಕೆಲಸ ಮಾಡಿದ ಪ್ರಧಾನ ಕ್ಷೇತ್ರ. ಆಗಲೇ ಹೇಳಿದ ಹಾಗೆ ಒಳ್ಳೆಯ ಅನುವಾದಕ್ಕೆ ಅಸಾಧಾರಣ ಪ್ರತಿಭೆ, ಜಾಣ್ಮೆ, ಪರಿಶ್ರಮ ಪಡುವ ಬುದ್ಧಿ, ಬರವಣಿಗೆಯ ಸುಂದರ ಶೈಲಿ, ವ್ಯಾಪಕ ಅನುಭವ, ಲೋಕಜ್ಞಾನ, ಎಲ್ಲವೂ ಬೇಕು. ಆದರೆ ಓದುಗರು ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ‘ಅವರಿಗೆ ಎರಡು ಭಾಷೆಗಳು ತಿಳಿದಿವೆ. ಆದ್ದರಿಂದ ಅನುವಾದ ಮಾಡುತ್ತಾರೆ’. ಎಂದು ಸಸಾರ ಮಾಡುತ್ತಾರೆ. ಹೆಚ್ಚಿನ ಓದುಗರ ದೃಷ್ಟಿಯಲ್ಲೂ ಅನುವಾದಕರು ಲೆಕ್ಕಕ್ಕೇ ಇಲ್ಲ. ಇದು ಸಾಹಿತ್ಯ ಕ್ಷೇತ್ರದಲ್ಲಿ ಎಲ್ಲಾ ಭಾಷೆಗಳಲ್ಲಿ ಎಲ್ಲಾ ದೇಶಗಳಲ್ಲಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದ ರಾಜಕೀಯ. ಜನರು ಇವತ್ತು ಸ್ವಲ್ಪ ಮಟ್ಟಿಗೆ ಬದಲಾಗಿದ್ದಾರೆ.‌ ಅಕಾಡೆಮಿಗಳು ಅನುವಾದಕರಿಗೆ ಪ್ರಾಮುಖ್ಯ ಕೊಡುತ್ತಿವೆ. ಆದರೆ ಇನ್ನಷ್ಟು ಬದಲಾವಣೆಗಳು ಆಗಬೇಕಾಗಿವೆ.

ಹೃತ್ಪೂರ್ವಕ ಧನ್ಯವಾದಗಳು ಮೇಡಂ ಇಷ್ಟು ಸಮಯ ನಮ್ಮೆಲ್ಲ ಪ್ರಶ್ನೆಗಳಿಗೆ ಸಾವಧಾನವಾಗಿ ಉತ್ತರಿಸಿ ಸಾಹಿತ್ಯದ ಕುರಿತಾಗಿ ಹಲವಾರು ವಿಚಾರಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ. ನಿಮ್ಮ ಸಾಹಿತ್ಯ ಸಾಧನೆ ಹೀಗೆಯೇ ಮುಂದುವರೆಯಲಿ. ನಿಮ್ಮಿಂದ ಇನ್ನಷ್ಟು ಸ್ವತಂತ್ರ ಕೃತಿಗಳು ಹಾಗೂ ಅದ್ಭುತವಾದ ಅನುವಾದದ ಕೃತಿಗಳು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅರ್ಪಣೆಯಾಗಲಿ. ಅವುಗಳನ್ನು ಓದುವ ಭಾಗ್ಯ ನಮ್ಮದಾಗಲಿ.

(ಶ್ರೀಮತಿ ಮೇಡಂ ಅವರ ನಂಬರ್ ಕೊಟ್ಟು ಅವರೊಂದಿಗೆ ಮಾತನಾಡಿ ಸಂದರ್ಶನ ಪಡೆಯಲು ಹೇಳಿದ್ದು ನಮ್ಮ ಶ್ರೀಮತಿ ವೀಣಾ ನಾಯಕ್ ಮೇಡಂ. ಅವರಿಗೂ ನನ್ನ ಧನ್ಯವಾದಗಳು.)

 • ಕೃಪೆ : ಪುಸ್ತಕ ಅವಲೋಕನ

ಹಿಂದಿನ ಸಂಚಿಕೆ :


 • ವಸಂತ ಗಣೇಶ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW