ಪ್ರಶಸ್ತಿ, ಹಾರ, ಶಾಲು, ಸನ್ಮಾನ ಎಲ್ಲವೂ ನಶ್ವರವೆ ಕಣಾ… ಸುಮ್ಮನೆ ತೆಗಳುವುದೇಕೆ? ಅವರಿವರನ್ನ ಇರಲಿ ಬಿಡು…ಕವಿ ಜಬೀವುಲ್ಲಾ ಎಂ. ಅಸದ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಓದಿ…
ತಗೊಳುವವರಿದ್ದಾರೆ
ಕೊಡುವವರಿದ್ದಾರೆ
ಇರಲಿ ಬಿಡು…
ಪಡೆಯದವರಿದ್ದಾರೆ
ಪಡೆದುಕೊಂಡವರೂ ಇದ್ದಾರೆ
ಅರೆ! ಇರಲಿಬಿಡು…
ಪ್ರಶಸ್ತಿ, ಹಾರ, ಶಾಲು, ಫಲಕ,
ಬಹುಮಾನ, ಸನ್ಮಾನ
ಎಲ್ಲವೂ ನಶ್ವರವೆ ಕಣಾ…
ಸುಮ್ಮನೆ ತೆಗಳುವುದೇಕೆ?
ಅವರಿವರನ್ನ
ಇರಲಿ ಬಿಡು…
ಕವಿತೆ ಮುಖ್ಯ
ಕವಿ ಅಪ್ರಸ್ತುತ
ಎಲ್ಲಾ ಕಾಲಕ್ಕೂ ಕವಿತೆ ಸಲ್ಲಬೇಕು
ಮತ್ತೇರಿಸಬೇಕು
ಹಳೆಯದಾದಷ್ಟು
ವೈನಾಗಿ ರುಚಿಸಬೇಕು
ಕವಿ ಸತ್ತರು
ಕಾವ್ಯ ಜೀವಂತವಿರಬೇಕು
ಹೆಸರು, ಉಸಿರು
ಎಲ್ಲವೂ ಕೊನೆಗೆ
ಈ ಮಣ್ಣಲ್ಲೇ ಬೇರೆಯೊದು ಕಣಾ…
ಬರಹ ಹಾಗಲ್ಲ ಕೇಳಿಲ್ಲಿ
ಭವಿಷ್ಯವ ಬೆಳಕಾಗಿಸಬೇಕು
ಇಂದು ನೆಲದಿ ತೆವಳುವ ಕಂಬಳಿ ಹುಳು
ಧ್ಯಾನಿಸಿ
ನಾಳೆ ಮುಗಿಲಲಿ ಹಾರುವ ಚಿಟ್ಟೆಯಾದಂತೆ
ಬೀಜ ಮರವಾದಂತೆ
ಮೊಲ್ಲೆ ಹೂವಾದಂತೆ
ಕವಿ ಅನುಭವದಿ ಮಾಗಿ
ಅನುಭಾವಿಯಾಗಬೇಕು
ತೋಚಿದ್ದೆಲ್ಲಾ ಗೀಚಿ
‘ನಾ ಆಧುನಿಕ ಬೀಚಿ’ ಎಂದು ಬೀಗುವ ಬಡಾಯಿಖೊರರಿಗೇನು ಬರವಿಲ್ಲ ಇಲ್ಲಿ
ಇರಲಿ ಬಿಡು…
ಜಗವೆಲ್ಲಾ ಬೆಳಗುವ ಸೂರ್ಯನೆ
ಸಂಜೆಗೆ ಹಿತ್ತಲ ಕತ್ತಲಲ್ಲಿ ಕಳೆದು ಹೋಗುತ್ತಾನೆ
ಕವಿತೆಗಳನ್ನು ಕವಿಯೇ
ಕೊಲ್ಲುತ್ತಿದ್ದಾನೆ
ಇರಲಿ ಬಿಡು…
- ಜಬೀವುಲ್ಲಾ ಎಂ. ಅಸದ್