ಎಂಗೆಂಗೋ ಇರದೇ ” ಯಂಗ್ ” ಇರಬೇಕಾ..?

ನಾನಾಗ ಹೊಸದಾಗಿ ಕೊಡಗಿಗೆ ಎಂಟ್ರಿ ಕೊಟ್ಟು ಸೋಮವಾರ ಪೇಟೆಯಲ್ಲಿ ಸಂಸಾರ ಹೂಡಿದ್ದ ಆರಂಭದ ದಿನಗಳಲ್ಲಿನ ಈ ಸೀನ್ ನೆಡೆದು ಹೆಚ್ಚು ಕಡಿಮೆ ಇಪ್ಪತ್ತಾರು ವರ್ಷ ಆಗಿದ್ದಿರಬಹುದೇನೋ !…ಹಿರಿಯೂರು ಪ್ರಕಾಶ್ ಅವರು ಯಾವ ಸೀನ್ ಬಗ್ಗೆ ಮಾತಾಡುತ್ತಿದ್ದಾರೆ, ತಪ್ಪದೆ ಮುಂದೆ ಓದಿ…

” ಅಂಕಲ್ , ಹೊರಗೆ‌ ನಿಲ್ಲಿಸಿರುವ ನಿಮ್ಮ ಮೋಟಾರ್ ಬೈಕ್ ಸ್ವಲ್ಪ ಪಕ್ಕಕ್ಕೆ ತಗೋತೀರಾ………. !

ಯುವತಿಯೊಬ್ಬಳ‌ ಬಾಯಿಂದ ಜೀವನದಲ್ಲಿ ಮೊದಲ ಬಾರಿಗೆ ಕಿವಿಗಪ್ಪಳಿಸಿದ “ಅಂಕಲ್‌” ಎಂಬ ಶಬ್ಧ‌ಕೇಳಿ ಆ‌ ಕ್ಷಣಕ್ಕೆ ಯಾಕೋ ಸಕತ್ ಕಸಿವಿಸಿಯಾಗಿತ್ತು ಕಣ್ರೀ ! ಅಯ್ಯೋ ಇವಳಜ್ಜಿ, ನಾನು ಮದುವೆಯಾಗಿ ಇನ್ನೂ ನೆಟ್ಟಗೆ ನಾಲ್ಕೈದು ವರ್ಷ ಕೂಡಾ ಕಳೆದಿಲ್ಲ , ಅಲ್ಲದೇ ಬಹಳಷ್ಟು ಜನ ಎಲ್ರೂ ನನಗೆ ಮದುವೆ ಆಗಿದೆ ಕಣ್ರಯ್ಯಾ ಅಂದ್ರೂ ನಂಬದಂತಹಾ ಸಕತ್ ಸ್ಮಾರ್ಟ್ ನೆಸ್ ಆಗಿ ಆ ಆ ಕಾಲದ ಹೀರೋ ಥರಾ ಇದ್ದ ನನ್ನನ್ನು, ನನಗೇ ಆಂಟಿ ಥರಾ ಇರೋ ಇವಳ್ಯಾರೋ ಬಂದು ‘ಅಂಕಲ್’ ಅಂದು ಬಿಟ್ಟಳಲ್ಲಾ ಅಂತ ಇಡೀ ದಿನ ಕೊರಗೋ ಹಾಗೆ ಆಗಿತ್ತು …..!

ನಾನಾಗ ಹೊಸದಾಗಿ ಕೊಡಗಿಗೆ ಎಂಟ್ರಿ ಕೊಟ್ಟು ಸೋಮವಾರ ಪೇಟೆಯಲ್ಲಿ ಸಂಸಾರ ಹೂಡಿದ್ದ ಆರಂಭದ ದಿನಗಳಲ್ಲಿನ ಈ ಸೀನ್ ನೆಡೆದು ಹೆಚ್ಚು ಕಡಿಮೆ ಇಪ್ಪತ್ತಾರು ವರ್ಷ ಆಗಿದ್ದಿರಬಹುದೇನೋ !

ಪ್ರಕೃತಿ ನಿಯಮ ಅಂದ್ರೆ, ಯಾರಾದರೂ ವಯಸ್ಸಿನಲ್ಲಿ ನಮಗಿಂತ ಸ್ವಲ್ಪವೇ ಚಿಕ್ಕವರು ಅಥವಾ ನಮ್ಮ ವಾರಿಗೆಯವರೇ ನಮ್ಮನ್ನು ಅಂಕಲ್ ಅಂತಾನೋ ಅಥವಾ ಆಂಟೀ ಅಂಥಾನೋ ಅಂದಾಗ ಮನಸ್ಸು ಒಳಗೊಳಗೇ ತಳಮಳದಲ್ಲಿ ತೊಳಲಾಡುತ್ತೆ ಅಲ್ಲವೇ ? ಅದರಲ್ಲೂ ಈ ನೋವು ತುಂಬಿರೋ ಫ಼ೀಲಿಂಗ್ ಅನ್ನೋದು ಗಂಡಸರಿಗೆ ಕಂಪೇರ್ ಮಾಡಿದ್ರೆ ಹೆಣ್ಣುಮಕ್ಕಳಲ್ಲೇ ಸ್ವಲ್ಪ ಜಾಸ್ತೀನೇ !

ಒಟ್ಟಿನಲ್ಲಿ ಹೆಣ್ಣೊ ಗಂಡೋ, ವಯಸ್ಸು ಇನ್ನೂ ಚಿಕ್ಕದಿರುವಾಗ ಯಾರಾದರೂ ಅಂಕಲ್- ಆಂಟೀ ಅಂದ್ರೆ ಖಾಲಿ ಡಬ್ಬದೊಳಗೆ ಕಲ್ಲು ಬಿದ್ದಂಗೆ ಆಗೋದಂತೂ ಗ್ಯಾರಂಟಿ ಅಲ್ವಾ ?
ಅದೇ ಒಂದು ವೇಳೆ ಮದುವೆ ವಯಸ್ಸಿಗೆ ಬಂದಿರೋ ಮಕ್ಕಳಿರುವ ಈ ವಯಸ್ಸಿನಲ್ಲಿ ಅಥವಾ ಮೊಮ್ಮಕ್ಕಳಿರೋ ಈ ಏಜ್ ನಲ್ಲಿ ಯಾರಾದರೂ, ” ಏನ್ರೀ…. ಈಗಲೂ ಎಷ್ಟು ಯಂಗ್ ಆಗಿ ಕಾಣಿಸ್ತೀರಾ ಅಂದ್ರೆ ಧಿಡೀರ್ ಅಂತ ಮೂರೂಮುಕ್ಕಾಲು ಕೇಜಿ ಉಬ್ಬುವುದರಲ್ಲಿ ಅಚ್ಚರಿಯೇನಿಲ್ಲ . ‌ಮೇಲಾಗಿ ಕೆಲವರು ಮಕ್ಕಳ – ಮೊಮ್ಮಕ್ಕಳ ಜೊತೆಗಿರೋ ಫೋಟೋನ ತಮ್ಮ ಸುಂದರ ಫೋಟೋದೊಂದಿಗೆ ಶೇರ್ ಮಾಡಿ ತಮ್ಮ ಫ಼ಿಟ್ ನೆಸ್ ಬಗ್ಗೆ ಹೆಮ್ಮೆ ಪಟ್ಟುಕೊಂಡರೆ ಮತ್ತೇ ಹಲವರು ಈಗೀಗ ನಮ್ಮನ್ನು ಯವ್ವನದ ದಿನಗಳಿಗೇ ಕರೆದೊಯ್ಯುವ ಎಡಿಟ್ ಆಪ್ ಗಳ ಸಹಾಯದಿಂದ ತಮ್ಮ ಸುಂದರ ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿ ತಮ್ಮ ಸೌಂದರ್ಯ ರಾಶಿಯ ಬಗ್ಗೆ ಗರ್ವದಿಂದ ಬೇರೆಯವರೂ ಗಲ್ಲದ ಮೇಲೆ ಕೈ ಇಟ್ಟುಕೊಳ್ಳುವಂತೆ ಮಾಡುತ್ತಾ ಖುಷಿ ಪಡೋ ಸೀನ್ ಗಳನ್ನೂ ಸಾಕಷ್ಟು ನೋಡಿದ್ದೇವೆ. ಅವರ ಖುಷಿ, ಅವರ ಖದರ್ ಮಧ್ಯೆ ನಾವ್ಯಾರ್ರೀ……??

ಕೆಲವರು ವಯಸ್ಸಾದರೂ ಯಂಗ್ ಆಗೇ ಕಾಣುತ್ತಾರೆ ಮತ್ತೇ ಕೆಲವರು ಚಿಕ್ಕವಯಸ್ಸಿನಲ್ಲೇ ಓಲ್ಡ್ ಆಗಿಯೂ ಕಾಣುತ್ತಾರೆ. ಅದ್ದಕ್ಕೆ ನಾನಾ ಕಾರಣಗಳಿರಬಹುದು …. ಅದೂ ಇರ್ಲಿ ಬಿಡಿ.
ವಾಸ್ತವದಲ್ಲಿ, ಮನುಷ್ಯನ ದೇಹವೆಂಬುದು ದಿನಗಳು ಉರುಳಿದಂತೆಲ್ಲಾ ವಯಸ್ಸಾಗುತ್ತಾ ತನ್ನ ಆಕರ್ಷಣೆಯನ್ನು, ದೇಹ ಕಾಂತಿಯನ್ನು ಸಹಜವಾಗಿ ಕಳೆದುಕೊಳ್ಳುತ್ತಾ ಹೋಗುತ್ತದೆ. ಇದು ಪ್ರಕೃತಿ ನಿಯಮ. ಇದು ಗೊತ್ತಿದ್ದರೂ ನಾವು ಅದರ ವಿರುದ್ದ ತನು, ಮನ, ಧನ ಗಳನ್ನೆಲ್ಲಾ ಅರ್ಪಿಸಿ ಅವಿರತವಾಗಿ ಹೋರಾಡುತ್ತಲೇ ಬಂದಿದ್ದೇವೆ. ಮಣ್ಣಲ್ಲಿ ಮಣ್ಣಾಗಿ ಹೋಗುವ , ವಾರಂಟೀ ಪೀರಿಯಡ್ ನೆಟ್ಟಗೇ ಇಲ್ಲದ ಈ ದೇಹವನ್ನು ಹೇಗೆ ಇರುತ್ತೋ ಹಾಗೆ ಸ್ವೀಕರಿಸದೆ ಏನೆಲ್ಲಾ ಕೃತಕತೆಗೆ ಅಲಂಕಾರಕ್ಕೇ ಮೊರೆ ಹೋಗಿ ಕೊನೆಗೆ ಸಕತ್ತಾಗಿ ದಂಡಿಸಿಯಾದರೂ ಸದೃಢವಾಗಿ ಸೌಂದರ್ಯ ವಾಗಿಟ್ಟುಕೊಳ್ಳಲು ಪ್ರಯತ್ನಿಸುತ್ತೇವೆ . ಇದು ಅಸಹಜವೂ ಅಲ್ಲ ಮತ್ತು ಇದರಲ್ಲಿ ವಿಶೇಷವೂ ಇಲ್ಲ. ಯಾಕೆಂದರೆ….

ಪ್ರತಿಯೊಬ್ಬರೂ ಅಂದವಾಗಿ ಚಂದವಾಗಿ ಕಾಣಿಸಿಕೊಳ್ಳಬೇಕೆನ್ನುವ ಹೃದಯದ ತವಕ , ತಲ್ಲಣ ಹಾಗೂ ತನ ಧೀಂ ತನನನ..ಒಂದೆಡೆಯಾದರೆ, ಮತ್ತೊಂದು , ತಾವು ಸದಾ ತಮ್ಮ ವಾಸ್ತವ ವಯಸ್ಸಿಗಿಂತ ನೋಡುಗರ ಕಣ್ಣಿಗೆ “ಎಂಗೆಂಗೋ’ ಇರದೇ “ಯಂಗ್” ಆಗಿ ಕಾಣಬೇಕೆಂಬ ಸಹಜ ಹಂಬಲ, ತುಮುಲ ಹಾಗೂ ಐಡೆಂಟಿಟಿಗಾಗಿ ಆಸೆ ಪಡುವ ಮನಸ್ಸು.
ಖಂಡಿತಾ ಮನುಷ್ಯನ ಈ ಬಯಕೆಯಲ್ಲಿ ಅಸಹಜವಾದದ್ದೇನೂ ಇಲ್ಲಾ ಬಿಡಿ. ಆದರೆ ಬಹಿರಂಗವಾಗಿ ಮಾತ್ರ ಸ್ಮಾರ್ಟ್ ಆಗಿ ಕಾಣಿಸಬೇಕೆಂದು ಕೊರಗುವ ಮನಸು ಮತ್ತು ಹಾಗಿರಲು ಪ್ರಯತ್ನಿಸುವ ನಾವು ಮನಸ್ಸಿನ ಅಂತರಂಗದಲ್ಲೇಕೆ ಸದಾ ಯಂಗ್ ಆಗಿರಬೇಕೆಂದು ಪ್ರಾಮಾಣಿಕವಾಗಿ ಪ್ರಯತ್ನಿಸೋಲ್ಲ ? ಅಥವಾ ಪ್ರಯತ್ನಿಸಿದರೂ ಹಾಗೆ ಬದುಕೋಲ್ಲ..?
ಓಕೆ ಕಣಯ್ಯಾ ! ಹೊರಗೆ ನೋಡಲು ಚಿಕ್ಕವರಂತೆ ಕಾಣಲು ತಲೇಲಿ ಕೂದಲು ಇಲ್ಲಾಂದ್ರೆ ವಿಗ್ ಹಾಕ್ತೀವೆ, ಕೂದಲು ಬಿಳಿ ಇದ್ರೆ ಕಪ್ಪು ಹಚ್ತೀವಿ, ಕಾಸ್ಮೆಟಿಕ್ ಹಾಕಿ ಮೇಕಪ್ ಮಾಡ್ಕೋತೀವಿ, ಡಯಟ್ ಮಾಡ್ತೀವಿ, ಜಿಮ್ಮು, ವಾಕು, ಏರೋಬಿಕ್ಸು, ಜಾಗಿಂಗು ಅಂತಾ ಮಾಡಿ ಸ್ಲಿಮ್ ಆಗ್ತೀವಿ, ಬಣ್ಣ ಬಣ್ಣದ ಬಟ್ಟೆ ತೊಡ್ತೀವೆ, ಇಲ್ಲವೇ ಇಡೀ ದೇಹಕ್ಕೇ ಪ್ಲಾಸ್ಟಿಕ್ ಸರ್ಜರಿ ಮಾಡಿಸ್ತೀವಿ. ಆದರೆ ಬಡ್ಡಿ ಮಗಂದು ಒಳಗಡೆ ಸದಾ ಸ್ಮಾರ್ಟ್ ಕಾಣಲು ಏನ್ರೀ ಮಾಡ್ಬೇಕು ? ಅನ್ನೋದು ಸಹಜವಾದ‌ ಪ್ರಶ್ನೆ….. ?

ಅದಕ್ಕೆ ನೋಡಲು ಚಿಕ್ಕವರಂತೆ ಕಾಣಲು ಮಾಡುವಷ್ಟು ಕಸರತ್ತಾಗಲೀ, ಮುಜುಗರವಾಗಲೀ, ಅಥವಾ ಲಕ್ಷಗಟ್ಟಲೆ ಹಣ ಖರ್ಚು ಮಾಡುವುದಾಗಲೀ ಬೇಕಿಲ್ಲಾ. ಅದಕ್ಕೆ ಬೇಕಿರುವ Ingredients ತುಂಬಾ ಸಿಂಪಲ್ ಕಣ್ರೀ !

  • ದೈಹಿಕವಾಗಿ ಆರೋಗ್ಯವಾಗಿದ್ದರೆ ಸಹಜವಾಗಿ ಮಾನಸಿಕ ಆರೋಗ್ಯ ಚೆನ್ನಾಗಿರುತ್ತೆ. ಸೋ.. ದೇಹದ ಆರೋಗ್ಯ ಕಾಪಾಡಿಕೊಳ್ಳೋಣ.
  • ನಮ್ಮ ಇತಿ‌ ಮಿತಿಗಳನ್ನು ಅರಿತು, ಆದಷ್ಟು ಸರಳವಾಗಿ, ಸಭ್ಯರಾಗಿ, ಸಂಪನ್ನರಾಗಿ, ಸುಸಂಸ್ಕೃತರಾಗಿ ಬದುಕೋಣ.
  • ಇನ್ನೊಬ್ಬರಿಗೆ ಕೆಡುಕನ್ನು ಬಯಸುವುದಾಗಲೀ ಅಥವಾ ಮತ್ತೊಬ್ಬರ ಸ್ವತ್ತಿಗೆ ಆಸೆ‌ ಪಡೋದಾಗಲೀ ಬೇಡಾ.
  • ಹೃದಯದಲ್ಲಿ ದ್ವೇಷ, ಅಸೂಯೆ ಸ್ವಾರ್ಥ, ದುರಾಸೆಗಳ ಜಾಗದಲ್ಲಿ, ಪ್ರೀತಿ, ಪ್ರೇಮ, ಸ್ನೇಹ, ವಿಶ್ವಾಸ ಹಾಗೂ ಮಾನವೀಯ ಅಂತಃಕರಣಕ್ಕೆ ಜಾಗ ಕೊಟ್ಟು ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳುವುದು.
  • ನಮ್ಮ ಯೋಚನೆಗಳು‌ ನಮ್ಮನ್ನು ರೂಪಿಸುತ್ತವೆ. ಹೀಗಾಗಿ ನಮ್ಮ‌ ಯೋಚನೆಗಳು ಪಾಸಿಟಿವ್ ಆಗಿರಲಿ. ನಕಾರಾತ್ಮಕ ಚಿಂತನೆಗಳು ಬೇಡಾ.
  • ಜೀವನವೆಂಬ ಹೋರಾಟದಲ್ಲಿ ಬರುವ ಸಂಕಷ್ಟಗಳನ್ನು ನಗುತ್ತಲೇ ಎದುರಿದೋಣ. ಏಕೆಂದರೆ ಬದುಕಿನ ಎಂತಹಾ ಕಷ್ಟಗಳನ್ನೇ ಆಗಲಿ ಎದುರಿಸುವ ತಾಕತ್ತು ಇರುವುದು ನಮ್ಮ ಆತ್ಮವಿಶ್ವಾಸ ತುಂಬಿದ ನಗುವಿಗೆ ಮಾತ್ರ. !
  • ಒಳ್ಳೆಯ ಘಳಿಗೆಯೋ ಕೆಟ್ಟ ಸಂಧರ್ಭವೋ, ನಮ್ಮನ್ನು ನಾವು ಪ್ರೀತಿಸುವುದನ್ನು ಕಲಿಯೋಣ.

ಕೊನೆಯದಾಗಿ… ಉತ್ತಮ ಹವ್ಯಾಸ , ಸಹವಾಸಗಳ ಜೊತೆಗೆ ಮಗುವಿನ ಮುಗ್ಧತೆ ತುಂಬಿದ ಮನಸ್ಸು ನಮ್ಮದಾಗಿಸಿಕೊಳ್ಳೊಣ. ಮಗುವಿನ ಮನಸು ಇರುವ ವ್ಯಕ್ತಿಗಳಿಗೆ ಈ ಜೀವನ ಅನ್ನೋದೇ ಒಂದು ಸೊಗಸು.

ಈಗ ನಮ್ಮನ್ನು ನಾವೇ ಅನಲೈಸ್ ಮಾಡಿಕೊಂಡಾಗ ನಾವು ಯಂಗ್ ಇದೀವಾ ಅಥವಾ ಯಂಗೆಂಗೋ ಇದೀವಾ ಅನ್ನೋದು ಕನ್ಫ಼ರ್ಮ್ ಆಗಬಹುದು‌.

 ಮರೆಯುವ ಮುನ್ನ

ಇವೆಲ್ಲವನ್ನೂ ಹನ್ನೆರಡನೇ ಶತಮಾನದಲ್ಲಿನ ಬಸವಣ್ಣ ಮತ್ತು ಇಪ್ಪತ್ತನೆಯ ಶತಮಾನದ ರಾಜಣ್ಣ‌ ಹೇಳಿದ್ದನ್ನೇ ತಿರುವು ಮುರುವು ಮಾಡಿ ಕೊರೆದಿದ್ದೇನೆಯೇ ಹೊರತು ಇವೆಲ್ಲಾ ನನ್ನ ಸ್ವಂತ ಆಲೋಚನೆಗಳಿಂದ ಮೂಡಿದವಲ್ಲ. ಸೋ…ಏನಾದ್ರೂ ಉಪಯೋಗಕ್ಕೆ ಬಂದ್ರೆ ಆ ಎಲ್ಲಾ‌ ಕ್ರೆಡಿಟ್ಟು ಈ ಇಬ್ಬರು ಅಣ್ಣಂದಿರಿಗೇ ಸೇರಬೇಕು. ನಿಜ, ನಾನು ಏನೇ‌ ಬರೆದ್ರೂ ಕೊರೆದ್ರೂ ಅಣ್ಣ ಬಸವಣ್ಣ, ಡಾ . ರಾಜಣ್ಣ ಇವರಿಬ್ಬರ ಪ್ರಭಾವದ ನೆರಳು ಎಲ್ಲೋ‌ ಒಂದು ಕಡೆ ಇದ್ದೇ ಇರುತ್ತೆ.

ಹಾಗಾದ್ರೆ…. ಹೊರಗಡೆ ಎಂಗೆಂಗೋ ಇರೋ ಬದ್ಲು ಯಂಗ್ ಯಂಗ್ ಇರಬೇಕು ಅನ್ನೋದಾದ್ರೆ, ಮೊದಲು ನಮ್ಮೊಳಗೆ ನಾವು ಯಂಗ್ ಆಗಿರಲು ಟ್ರೈ ಮಾಡೋಣ. ಆಮೇಲೆ ನಮ್ ಲೈಫ಼್ ನ‌ ಹಂಗಾಮ ಎಂಗೆಂಗೋ ಇರದೆ ಸದಾ ಯಂಗ್ ಅಂಡ್ ಎನರ್ಜೆಟಿಕ್ ಆಗಿಯೇ ಇರುತ್ತೆ !

So……..ಯಂಗ್ ಇರ್ತೀರಾ…….? ಹೇಳಿ !


  • ಹಿರಿಯೂರು ಪ್ರಕಾಶ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW