“ಇದು ಅನುಪಮ ಅನುರಾಗ ಸೌಂದರ್ಯದ ಅನಾವರಣದ ಕವಿತೆ. ಅನನ್ಯ ಪ್ರೇಮ ಮಾಧುರ್ಯದ ರಿಂಗಣಗಳ ಭಾವಗೀತೆ. ನೈಜ ನಿಜ ಪ್ರೀತಿಯೆಂದರೆ ಹಾಗೆ. ಒಲಿದ ಜೀವದ ಅಕ್ಕರೆ ಅಂತಃಕರಣಗಳ ನಿತ್ಯ ನಿರಂತರ ಆರಾಧನೆ. ಒಲವ ಭಾವ ಭಾಷ್ಯಗಳ ಸತತ ಸತ್ಯ ನಿವೇದನೆ. ಹೃದ್ಯ ಝೇಂಕಾರಗಳ ಚಿರಂತನ ಸಂಕೀರ್ತನೆ. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಗೆಳತಿ ನಿನ್ನನ್ನು ಕಂಗಳಲ್ಲಿ
ತುಂಬಿಕೊಂಡವರು ಇಲ್ಲಿ
ಇರಬಹುದು ನೂರಾರು.!
ನನ್ನಂತೆ ಹೃದಯದಲ್ಲಿ
ತುಂಬಿಕೊಂಡವರು ಮಾತ್ರ
ಇಲ್ಲವೇ ಇಲ್ಲ ಯಾರ್ಯಾರು.!
ನಿನ್ನ ಚೆಂದ ಚೆಲುವುಗಳ
ಆಸೆಯಲಿ ಆಸ್ವಾಧಿಸಲು
ನಿಂತಿರಬಹುದು ಸಾಲು.!
ಸಾಧ್ಯವೇ ಇಲ್ಲ ಯಾರಿಗು
ಅನುದಿನವು ಅನುಕ್ಷಣವು
ನನ್ನಂತೆ ನಿನ್ನ ಆರಾಧಿಸಲು.!
ಗೆಳತಿ ಕಾಯುತಿರಬಹುದು
ಎಲ್ಲರು ಬಲೆಯ ಬೀಸುತ
ನಿನ್ನೊಲವ ಮಧು ಹೀರಲು.!
ನನ್ನಂತೆ ಯಾರೊಬ್ಬರು ಕೂಡ
ನಿನ್ನ ಆದರಿಸಿ ಕಾಪಿಡಲಾರರು
ಹೃನ್ಮನ ಅರ್ಪಿಸುತ ದಿನಾಲು.!
ನಿನ್ನ ರೂಪ ಲಾವಣ್ಯಗಳ
ವರ್ಣಿಸಿ ಬರೆಯಬಹುದು
ರಾಶಿ ರಾಶಿ ಪ್ರೇಮಕವಿತೆ
ನನ್ನಂತೆ ಸದಾ ಇನ್ಯಾರು
ಆದರಿಸಿ ಹಚ್ಚಿಡಲಾರರು
ನಿನ್ನ ಅಡಿಗಡಿಗು ಭಾವಪ್ರಣತೆ.!
- ಎ.ಎನ್.ರಮೇಶ್. ಗುಬ್ಬಿ