ತಿಮ್ಮಣ್ಣ ಭಾಗ್ಯಶಾಲಿ ಎಷ್ಟೆಲ್ಲ ಹಣ, ಆಸ್ತಿ, ಅಧಿಕಾರ ಇದ್ದವರ ಮಕ್ಕಳುಗಳಿಗೆ ಅಪ್ಪನ ನೆನಪೇ ಇಲ್ಲದ ಈ ಕಾಲದಲ್ಲಿ ತಿಮ್ಮಣ್ಣರ ಮಗ ಸತ್ಯನಾರಾಯಣ್ ಮುಗಿಲೆತ್ತರದಲ್ಲಿ ಕಾಣುತ್ತಾರೆ. ಜಿ ಟಿ ಸತ್ಯನಾರಾಯಣ ಅವರ ಅಪ್ಪಯ್ಯ ಪುಸ್ತಕದ ಕುರಿತು ಅರುಣ್ ಪ್ರಸಾದ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಅಪ್ಪಯ್ಯ
ಲೇಖಕರು : ಜಿ ಟಿ ಸತ್ಯನಾರಾಯಣ
ಖರೀದಿಗಾಗಲಿ : 9448018212.
ಸಾಗರ ತಾಲ್ಲೂಕಿನ ಕರೂರು ಭಾರಂಗಿ ಎಂಬ ಎರಡು ಹೋಬಳಿ ಶರಾವತಿ ನದಿಯ ಆಣೆಕಟ್ಟಿನಿಂದ ರಸ್ತೆ ಸಂಪರ್ಕ ಕಳೆದು ಕೊಂಡ ಮುಳುಗಡೆ ಪ್ರದೇಶಗಳು ಇಲ್ಲಿನ ಜನ ತಾಲ್ಲೂಕು ಕೇಂದ್ರ ಸಾಗರ ಪೇಟೆಗೆ ಬೆಳಿಗ್ಗೆ ಮೊದಲ ಲಾಂಚಿನಲ್ಲಿ ಬಂದರೆ ಮಧ್ಯಾಹ್ನದ ಒಳಗೆ ಕೆಲಸ ಮುಗಿಸಿ ಕೊನೆಯ ಲಾಂಚಿನಲ್ಲಿ ಶರಾವತಿ ನದಿ ದಾಟಿ ಅಲ್ಲಿಂದ ಸೂರ್ಯಸ್ತದ ಒಳಗೆ ನಡೆದು ತುಮರಿ ಪೇಟೆ ಸೇರಬೇಕು ಅಲ್ಲಿಂದ ದೂರ ದೂರದ ಅವರ ಹಳ್ಳಿ ಸೇರಲು ಮಧ್ಯರಾತ್ರಿ ಆಗುತ್ತಿದ್ದ ಕಾಲ.
ಹತ್ತಿರದ ಪೋಲಿಸ್ ಠಾಣೆ ಕಾರ್ಗಲ್ ಸುಮಾರು 70 ಕಿಲೋ ಮೀಟರ್ 2015 ರ ತನಕ ಈ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಸಾಗರ ಪೇಟೆಯ ಕೆಲವೇ ಕೆಲವು ಜನರ ಕೈ ಬೆರಳ ತುದಿಯಲ್ಲಿತ್ತು.
ಅಪ್ಪಯ್ಯ ಲೇಖಕರು ಜಿ ಟಿ ಸತ್ಯನಾರಾಯಣ
ಆಗೆಲ್ಲ ಕೊನೆ ಲಾಂಚಿನಲ್ಲಿ ಸಾಗರದಿಂದ ಜಯಂತ್ ಈ ಕಡೆ ಬಂದರಂತೆ, ದಮ೯ಪ್ಪ ಬಂದರಂತೆ, ಕಾಗೋಡು ಅಣ್ಣಜಿ ಬಂದರಂತೆ ಅನ್ನುವ ಮಾತುಗಳು, ಕಾಗೋಡು ಕಾರ್ಗಲ್ ಕೋಗಾರಿಂದ ಬಂದರಂತೆ … ಭಟ್ಟರ ಮನೆಗೆ ಹೋದರಂತೆ …. ಜೈನರ ಮನೆಯಲ್ಲಿ ಊಟ ಅಂತೆ ಇಂತಹ ಸುದ್ದಿಗಳನ್ನ ಈ ಭಾಗದ ಜನರು ದಶಕಗಳಿಂದ ರಸವತ್ತಾಗಿ ಮಾತಾಡುತ್ತಿದ್ದರು, ಸರ್ಕಾರದ ಯೋಜನೆಗಳು ಅನೂಷ್ಟಾನವಾಗದೇ ಬಿಲ್ ಆಗುವ ಬಗ್ಗೆ, ತಮಗೆ ನ್ಯಾಯ ಸಿಗದ ಬಗ್ಗೆ ಈ ಭಾಗದವರು ಅಸಹಾಯಕರು, ಈ ಭಾಗದ ಕೆಲ ಮುಖಂಡರಿಗೆ ಸಾಗರದ ಶಾಂತಾ ಲಾಡ್ಜ್ – ಲಕ್ಷ್ಮಿ ಲಾಡ್ಜ್ ನಲ್ಲಿ ಆದರಾತಿಥ್ಯ ಸಿಗುತ್ತಿತ್ತು.
ಅನ್ಯಾಯ ವಿರೋದಿಸಿ ಕೆಲವರು ಜನಪರ ಯುವ ಹೋರಾಟಗಾರರು ಎದ್ದು ಬಂದರೂ ಅವರನ್ನು ಪಳಗಿಸಿ ತಮ್ಮ ಮತ ಬ್ಯಾಂಕ್ ಆಗಿಸುವ ಚಾಕಚಕ್ಯತೆ ರಾಜಕೀಯ ಪಕ್ಷಗಳಿಗೆ ಮತ್ತು ಅದರ ಮುಖಂಡರಿಗೆ ಇತ್ತು.
ಈ ಭಾಗದ ತುಮರಿ ಸೇತುವೆಗಾಗಿ ನಾನು ಸಾಗರ ತಾಲೂಕಿನಾದ್ಯಂತ 13 ದಿನ ಪಾದಯಾತ್ರೆ ಮಾಡಿದ್ದೆ, ಈ ಭಾಗದಲ್ಲಿ ಕಾಮಗಾರಿಗಳ ಭ್ರಷ್ಟಾಚಾರ ವಿರೋಧಿಸಿ ಹೋರಾಟಗಳನ್ನು ಮಾಡಿದ್ದೆ, ಕೊನೆಯದಾಗಿ ತುಮರಿ ಗ್ರಾ.ಪಂ. ಸದಸ್ಯ ರಾಜಣ್ಣ ಜೈನ್ ಪರವಾಗಿ ನಡೆದ ಹೋರಾಟ ನನ್ನದು.
ಈ ಎಲ್ಲಾ ಹೋರಾಟದಲ್ಲಿ ಭಾಗವಹಿಸಿ ಬೆಂಬಲಿಸಿದ ಸಜ್ಜನರಲ್ಲಿ ತಿಮ್ಮಣ್ಣ ಪ್ರಮುಖರು. ಆ ಕಾಲದಲ್ಲಿ ತುಮರಿಯ ಕೆಲವೇ ಕೆಲವು ಡೇರ್ ಡೆವಿಲ್ಸ್ ಗಳಲ್ಲಿ ಪೇಟೆ ತಿಮ್ಮಣ್ಣ ಒಬ್ಬರು 1985 ರಿಂದ ನನಗೆ ಈ ಭಾಗದ ಪರಿಚಯ, ತುಮರಿಯ ರವಿ ಮೇಸ್ತ್ರಿ, ತುಮರಿ ಪ್ರಾರಂಬದಲ್ಲಿ ಬಲ ಭಾಗದಲ್ಲಿದ್ದ ಬಂದೂಕು ದುರಸ್ತಿ ಮಾಡುತ್ತಿದ್ದ ಸಾಹೇಬರು ಇವರೆಲ್ಲ ಪಡುವಾರಳ್ಳಿ ಪಾಂಡವರಿದ್ದ ಹಾಗೆ ಇವರಿಂದ ಬಡ ಕೂಲಿ ಕಾರ್ಮಿಕರಿಗೆ ರಕ್ಷಣೆ ಇತ್ತು.
ಪೇಟೆ ತಿಮ್ಮಣ್ಣ ನನ್ನ ಎಲ್ಲಾ ಜನ ಪರ ಹೋರಾಟಗಳಲ್ಲಿ ಸಭೆಗಳಲ್ಲಿ ನೇರವಾಗಿ ಭಾಗವಹಿಸುವ ಧೈರ್ಯವಂತರು ಆದರೆ ಈ ಭಾಗದ ಅನೇಕರು ಅಂತ ಸಂದಭ೯ದಲ್ಲಿ ಭಯದಿಂದ ನಾಪತ್ತೆ ಆಗಿರುತ್ತಿದ್ದರು. ಈಗ ತಿಮ್ಮಣ್ಣನ ವಯಸ್ಸು 80, ತಮ್ಮ ಯಜಮಾನಿಕೆ ಮಗ ಸತ್ಯನಾರಾಯಣನಿಗೆ ಹಸ್ತಾಂತರ ಮಾಡುವ ಸಮಯ ಈ ಸಂದರ್ಭದಲ್ಲಿ ವಿದ್ಯೆ- ರಾಜಕಾರಣ- ಪತ್ರಿಕೋದ್ಯಮ ಕಲಿತ ಮಗ ಜಿ.ಟಿ. ಸತ್ಯನಾರಾಯಣ್ ತಂದೆಯ ನೆನಪುಗಳನ್ನು ಅಕ್ಷರವಾಗಿಸಿ ತಿಮ್ಮಣ್ಣರ ಚಿರಸ್ಥಾಯಿಯಾಗಿ ಮಾಡುವ ಅವರ ಜೀವನ ವೃತ್ತಾಂತವನ್ನು ಪುಸ್ತಕ ಮಾಡಿದ್ದಾರೆ ಈ ಪುಸ್ತಕಕ್ಕೆ ಸತ್ಯನಾರಾಯಣ್ ತಾನು ಮೊದಲು ಉಚ್ಚರಿಸಿದ #ಅಪ್ಪಯ್ಯ ಎಂಬ ಪದವನ್ನೇ ಇಟ್ಟಿದ್ದಾರೆ.
ಮಗ ಸತ್ಯನಾರಾಯಣ್ ಅಪ್ಪಯ್ಯ ಕೃತಿಯಲ್ಲಿನ 41 ಅಧ್ಯಾಯದಲ್ಲಿ ಮತ್ತು ಪೋಟೋ ಗ್ಯಾಲರಿಯಲ್ಲಿ ತಿಮ್ಮಣ್ಣರನ್ನು ವಿಶಿಷ್ಟ ರೀತಿಯಲ್ಲಿ ದಾಖಲಿಸಿದ್ದಾರೆ. ಅನ್ನದೇವರ ಮುಂದೆ ಮೊದಲ ಅಧ್ಯಾಯದಿಂದ ಪ್ರಾರಂಭ ಮಾಡಿ ಕೊನೆಯ ಅಧ್ಯಾಯ ಮೊದಲ ಪುಟಕ್ಕೂ ಕೊನೆಯ ಪುಟಕ್ಕೂ ವರೆಗೆ ತಿಮ್ಮಣ್ಣರ ಅಜ್ಜ ಮಾಸ್ತಿ ನಾಯ್ಕರ ಸಿರಿವಂತಿಕೆ, ಕದಿರು ಆರಿಸುವಾಗ ಕೆನ್ನೆಗೆ ಏಟು, ಪೀರ್ ಸಾಬರ ಗಂಜಿ, ಮಾವ ಕೃಷ್ಣ ಪೂಜಾರಿ 43 ದಿನದ ಸೆರೆವಾಸ ಮುಕ್ತಿ, ಮುಳುಗಿದ ಮಡೆನೂರಿನ ಕಥೆ, ಲಿಂಗನಮಕ್ಕಿ ಲಾಂಚ್ ಬಂದಿತು, ಉರಳುಗಲ್ಲು ಹೋರಾಟ, ತುಮರಿ ಸೇತುವೆ ಶಂಕುಸ್ಥಾಪನೆ, ಮುಳುಗಿದ ದೋಣಿ ದುರಂತ, ಹಳೆಯ ಪೋಲಿಸ್ ಠಾಣೆ, ಅಡಿಕೆ ತೋಟಕ್ಕೆ ಮಹೂರ್ತ, ಮಗ ಪ್ರಜ್ಞೆ ತಪ್ಪಿದಾಗ ಹೊಳೆ ಬಾಗಿಲ ತನಕ ಹೊತ್ತು ನಡೆದ ಈ ಭಾಗದ ಸಾರಿಗೆ ಕಥೆ ವ್ಯಥೆ, ಬೀಡಿ ಕಥೆ, 58 ನೇ ದಾಂಪತ್ಯ ವರ್ಷ, ಆಲೇಮನೆ, ಸಾಕು ನಾಯಿ ಹಂಡ ಇಲಿ ಪಾಷಣ ತಿಂದು ಇಹ ಲೋಕ ತ್ಯಜಿಸಿದ್ದು, ದಲಿತ ಚೌಡಜ್ಜನ ಜೊತೆ ಸಹಪಂಕ್ತಿ, ದಲಿತರ ದೇವಸ್ಥಾನ ಪ್ರವೇಶ, ಪುಟ್ಟೇಗೌಡರ ಜಮೀನು ಖರೀದಿಸಿದ ಗೇಣಿದಾರ, ಪ್ಯಾಟೆ ತಿಮ್ಮ ಮೊಸ ಮಾಡಲಿಲ್ಲ, ಉಪ್ಪಾರ ನಾರಾಯಣನ ಜಾತಿ ಬಹಿಷ್ಕಾರ ಅಂತ್ಯ ಸಂಸ್ಕಾರ, ಅಮ್ಮನ ಲೋಕದಲ್ಲಿ, ಧರ್ಮಸ್ಥಳ ದೇವರಾಣೆ, ಸೊನಗಾರ ಬೆತ್ತಮ್ಮನ ಕಳೆದು ಹೋದ ಗಂಟು, ಶಾಲೆಯಲ್ಲಿ ಮಾಂಸಹಾರ, ಮೂರು ಕೈ ನಾರಾಯಣಯ್ಯರ ಹೋಟೆಲ್ ಚಕ್ಕುಲಿ, ಏಕ ವಚನದಲ್ಲಿ ಏನೋ ತಿಮ್ಮ ಎನ್ನುವ ಮೇಲ್ಜಾತಿಯ ಹಾಲುಗಲ್ಲದ ಮಕ್ಕಳು, ಭಟ್ಟರು ಮತ್ತು ಜೈನರ ಚಪ್ಪಲಿಯಲ್ಲಿ ಹೊಡೆದಾಟ, MPM ಬೆಂಕಿ, SSLC ಪೇಲ್, ಹೊಳೆಬಾಗಿಲು ಗೇಟ್ ಟಿಕೇಟ್ ಪ್ರಕರಣ, ನಾಗಾರಾದನೆ, ದರ್ಶನದ ಪಾತ್ರಿಗಳು, ಹೆಣ್ಣು ಮಕ್ಕಳ ವಿವಾಹ, ಕ್ರೈಸ್ತ ಪಾದ್ರಿ ಪ್ರಶ್ನೆ, ಹಾಲ್ಕೆರೆ ಭಟ್ಟರ ಬೆಲ್ಲ ಖರೀದಿ ಪ್ರಸಂಗ, ಸಾವುಗಳ ನಡುವೆ, ಅನಾಥ ಎಮ್ಮೆ ಕರು, ಪತ್ನಿಯ ಮನೆಯವರ ಹೊಡೆದಾಟ, ಎರೆಡೂ ಮುಳುಗಡೆ ನೋಡಿದ ತಿಮ್ಮಣ್ಣ, ನೀರಲ್ಲಿ ಮುಳುಗಡೆ ಆಗದ ಜಮೀನು ಕೆ.ಪಿ.ಸಿಯಿ೦ದ ರೈತರಿಗೆ ಹಸ್ತಾಂತರ ಆಗ ಬೇಕು ಎಂಬ ಆಶಾಭಾವನೆ, ಮುಳುಗಡೆ ಆದ ದೇವಾಲಯ , ಪಾಳು ಬಿದ್ದ ದೇವಸ್ಥಾನ, ದಿಕ್ಕು ಕಾಣದ ಕಲಾಯಿ ಸಾಹೇಬರ ಕುಟುಂಬ, ಬಂಗಾರದ ಜಡೆಸುತ್ತಿನ ಕಥೆ, ತಿಮ್ಮಣ್ಣರ ಗೆಳೆಯರು, ದಿನಸಿ – ಬಟ್ಟೆ ಅಂಗಡಿ ಲೆಕ್ಕಾಚಾರ ಹೀಗೆ ಇಡೀ ಪುಸ್ತಕ ಕನ್ನಡ ಜಿಲ್ಲೆಯ ಘಟ್ಟಕ್ಕೆ ವಲಸೆ ಬಂದ ತಿಮ್ಮಣ್ಣರ ಬಾಲ್ಯದಿಂದ 80 ರ ವೃದ್ದಾಪ್ಯದ ವರೆಗಿನ ಆತ್ಮ ಕಥೆ ಅವರ ಮಗ ಕಂಡಿದ್ದನ್ನು ಕೇಳಿದ್ದನ್ನು ಅನುಭವಿಸಿದ್ದನ್ನು ಬರೆದಿದ್ದಾರೆ.
ನಿಜಕ್ಕೂ ತಿಮ್ಮಣ್ಣ ಭಾಗ್ಯಶಾಲಿ ಎಷ್ಟೆಲ್ಲ ಹಣ, ಆಸ್ತಿ, ಅಧಿಕಾರ ಇದ್ದವರ ಮಕ್ಕಳುಗಳಿಗೆ ಅಪ್ಪನ ನೆನಪೇ ಇಲ್ಲದ ಈ ಕಾಲದಲ್ಲಿ ತಿಮ್ಮಣ್ಣರ ಮಗ ಸತ್ಯನಾರಾಯಣ್ ಮುಗಿಲೆತ್ತರದಲ್ಲಿ ಕಾಣುತ್ತಾರೆ.
ಶಿವರಾಂ ಕಾರಂತರ ಚೋಮನ ದುಡಿಯಲ್ಲಿ ಕರಾವಳಿಯ ಕೃಷಿ ಕಾರ್ಮಿಕರು ಪಶ್ಚಿಮ ಘಟ್ಟಕ್ಕೆ ಹೊಟ್ಟೆ ಪಾಡಿಗೆ ಬರುವ ನೈಜ ಕಥೆ ಇದೆ ಅದರ ಮುಂದಿನ ಭಾಗವೇ ಪೇಟೆ ತಿಮ್ಮಣ್ಣನ ಜೀವನ ಚರಿತ್ರೆ ಅಪ್ಪಯ್ಯ.
ನಾನೂ ಕರಾವಳಿಯಿಂದ ಘಟ್ಟಕ್ಕೆ ನೂರು ವರ್ಷಗಳ ಹಿಂದೆ ಬಂದ ಕುಟುಂಬದ ಮೂರನೆ ತಲೆಮಾರಿನವನಾದ್ದರಿಂದ ಅಪ್ಪಯ್ಯ ಪುಸ್ತಕ ಆಪ್ತ ಅನ್ನಿಸಿತು.
- ಅರುಣ್ ಪ್ರಸಾದ್