ಸಮಸ್ಯೆ ಬಂದಾಗ ಸಮಸ್ಯೆಗೆ ಪರಿಹಾರವು ನಮ್ಮಲ್ಲಿಯೇ ಇರುತ್ತದೆ. ನಮ್ಮಲ್ಲಿಯೇ ಪರಿಹಾರವನ್ನು ಹುಡುಕುವುದನ್ನು ಬಿಟ್ಟು, ಊರೆಲ್ಲ ಹುಡುಕುವುದರಲ್ಲಿ ಅರ್ಥವಿಲ್ಲ ಸಂಪಿಗೆ ವಾಸು ಅವರು ಪುಟ್ಟಕತೆಯನ್ನು ತಪ್ಪದೆ ಮುಂದೆ ಓದಿ…
ಸದಾ ಗ್ರಾಹಕರಿಂದ ತುಂಬಿ ಗಿಜಿಗುಡುತ್ತಿರುತ್ತದೆ ಆ ಕಾಫಿ ಶಾಪ್. ಅಂಗಡಿಯ ಮಾಲೀಕರು ಇಡೀ ದಿನ ಕಾರ್ಯನಿರತರಾಗಿರುತ್ತಿದ್ದರು. ಶನಿವಾರವಾದ್ದರಿಂದ ಅವರ ಅಂಗಡಿ ಇನ್ನೂ ಜನದಟ್ಟಣೆಯಿಂದ ಕೂಡಿತ್ತು.
ಅಂದು ಬೆಳಗ್ಗಿನಿಂದಲೇ ಶುರುವಾಗಿದ್ದ ಅವರ ತಲೆನೋವು. ಸಂಜೆಯ ಹೊತ್ತಿಗೆ ವಿಪರೀತವೆನಿಸತೊಡಗಿತು.ಇನ್ನು ಸಹಿಸಲಾಗದೆ, ಅವರು ಮಾರಾಟವನ್ನು ನೋಡಿಕೊಳ್ಳಲು ಸಿಬ್ಬಂದಿಯನ್ನು ಬಿಟ್ಟು ಅಂಗಡಿಯಿಂದ ಹೊರಬಂದರು.
ನೋವು ನಿವಾರಕ ಔಷಧವನ್ನು ಖರೀದಿಸಲು ಔಷಧದ ಅಂಗಡಿಗೆ ಹೊರಟರು. ಮಾತ್ರೆ ನುಂಗಿದಾಗ ಸಮಾಧಾನವಾಯಿತು. ಕೆಲವೇ ನಿಮಿಷಗಳಲ್ಲಿ ಅವರಿಗೆ relief ಎನಿಸತೊಡಗಿತು
ಅವರು ಅಲ್ಲಿಂದ ಹೊರ ಬರುತ್ತಾ ಅಲ್ಲಿದ್ದ ಸೇಲ್ಸ್‌ಗರ್ಲ್‌ಗೆ ಕೇಳಿದರು, ನಿಮ್ಮ owner ಎಲ್ಲಿ? ಅವರು ಇಂದು ಕ್ಯಾಶ್ ಕೌಂಟರ್‌ನಲ್ಲಿ ಕಾಣಿಸ್ತಾ ಇಲ್ಲ. ಆಕೆ ಉತ್ತರಿಸಿದಳು, — ಸರ್, ಅವರಿಗೆ ತಲೆನೋವು ಎಂದು ಕಾಫಿ ಕುಡಿಯಲು ನಿಮ್ಮ ಕಾಫಿ ಶಾಪ್‌ಗೆ ಹೋಗುತ್ತಿದ್ದೇನೆ ಎಂದು ಹೇಳಿ ಹೋದರು . ಒಂದು ಕಪ್ ಬಿಸಿ ಕಾಫಿ ಕುಡಿದರೆ ತಲೆನೋವಿನಿಂದ ಮುಕ್ತಿ ಸಿಗುತ್ತದೆ ಎನ್ನುತ್ತಿದ್ದರು.
ಓಹ್! ಸರಿ ಎಂದು ಅಲ್ಲಿಂದ ಹೊರಟನು. ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ನಮ್ಮಲ್ಲಿರುವ ಅನೇಕ ಸಮಸ್ಯೆಗಳಿಗೆ ನಮ್ಮಲ್ಲಿಯೇ ಪರಿಹಾರ ಸಮಾಧಾನಗಳನ್ನು ಇಟ್ಟುಕೊಂಡು ಇನ್ನೊಬರತ್ತ ದೃಷ್ಟಿ ಹಾಯಿಸುವ ವಿಶಿಷ್ಟ ಪ್ರಕರಣ ಇದು. ಎಷ್ಟು ವಿಚಿತ್ರ, ಆದರೆ ನಿಜ.
ಔಷಧದ ಅಂಗಡಿಯವ ಕಾಫಿ ಕುಡಿಯುವ ಮೂಲಕ ತಲೆನೋವನ್ನು ನಿವಾರಿಸಿ ಕೊಳ್ಳುತ್ತಾನೆ ಮತ್ತು ಕಾಫಿ ಶಾಪ್ ಮಾಲೀಕ ಮಾತ್ರೆ ಸೇವಿಸುವ ಮೂಲಕ ತಲೆನೋವು ನಿವಾರಿಸಿ ಕೊಳ್ಳುತ್ತಾನೆ.
ಅದೇ ರೀತಿ, ನಮ್ಮಲ್ಲಿ ಅನೇಕರು ತಮ್ಮ ಅನೇಕ ಸಮಸ್ಯೆಗಳಿಗೆ ತಮ್ಮಲ್ಲೇ ಇರುವ ಸುಲಭವಾಗಿ ಸಿಗಬಹುದಾದ ಪರಿಹಾರಗಳನ್ನು ಮರೆತು ಬೇರೊಂದು ಕಡೆ ಹುಡುಕಲು ಪರಿತಪಿಸುತ್ತೇವೆ. ಶಾಂತಿಯು ನಮ್ಮ ಹೃದಯ ಮತ್ತು ಮನಸ್ಸಿನಲ್ಲಿ ಯಾವಾಗಲೂ ನಮ್ಮೊಂದಿಗೆ ಇರುತ್ತದೆ ಎಂದು ನಾವು ಅರಿತುಕೊಳ್ಳದೇ ಹೋಗುವುದು ಎಂತಹ ವಿಪರ್ಯಾಸವಲ್ಲವೇ????
ಹೌದೆನಿಸುತ್ತಿಲ್ಲವೇ??
- ಸಂಪಿಗೆ ವಾಸು