ಡೇಂಜರ್ ಚೌಕಟ್ಟು ಮೀರಿದರೇ ಹೇಗೆ?, ಲೈಫ್ ಜಾಕೆಟ್ ಇಲ್ಲದೆ ನೀರಿಗೆ ಜಿಗಿದರೆ ಹೇಗೆ?, ಹೆಲ್ಮೆಟ್ ಬೇಡ, ಕಾರ್ ಸೀಟ್ ಬೆಲ್ಟ್ ಬೇಡಾ ಕಿರಿ ಕಿರಿ ಅಂತ ಯೋಚ್ನೆ ಮಾಡಿ ‘ಎಕ್ಸೈಟ್‌ಮೆಂಟ್’ ಲ್ಲಿದ್ರೆ ಜೀವನ ಏನಾಗುತ್ತೆ?. ಲೇಖಕ ಸಂದೇಶ್ ಎಚ್ ನಾಯ್ಕ್ ಅವರ ಒಂದು ಲೇಖನವನ್ನು ತಪ್ಪದೆ ಓದಿ, ಜೀವನವನ್ನು ಬಾಡದಂತೆ ಸುಂದರವಾಗಿಸಿಕೊಳ್ಳಿ…
ಅದೊಂದು ತಕ್ಕಮಟ್ಟಿಗೆ ಹಳೆಯದೇ ಎನ್ನಬಹುದಾದ ಕಾರು ಎಂಬುವುದು ಮೇಲ್ನೋಟಕ್ಕೆ ತಿಳಿಯುತ್ತಿತ್ತು. ಅಷ್ಟೇನೂ ಆಕರ್ಷವಾಗಿರದೇ ಇದ್ದರೂ, ಅದನ್ನು ಒಂದಷ್ಟು ಮಾಡಿಫೈ ಮಾಡಿಸಿ ಇಲ್ಲದ ‘ಮಾಡ್ ಲುಕ್ ‘ ನೀಡುವ ಪ್ರಯತ್ನ ಮಾಡಲಾಗಿತ್ತು. ಆ ಕಾರಿನ ರೂಪು ಹಾಗೂ ಬ್ರ್ಯಾಂಡ್‌ಗೆ ಹೊಂದದ ಬಣ್ಣ, ತುಸು ಹೆಚ್ಚೇ ಹೊರ ಚಾಚಿಕೊಂಡಿರುವ ಅಗಲ ಬಾಯಿಯ ಸೈಲೆನ್ಸರ್, ಕಾರಿನ ಗಾತ್ರಕ್ಕೆ ಅನುಗುಣವಾಗಿರದ ದೊಡ್ಡದಾದ ಟೈರ್‌ಗಳು, ಫ್ಯಾನ್ಸಿ ಹಾರ್ನ್, ಕೆಕ್ಕರಿಸಿ ನೋಡುತ್ತಿರುವ ಕಣ್ಣುಗುಡ್ಡೆಗಳಂತಿರುವ ಮುಂಭಾಗದಲ್ಲಿ ಅಳವಡಿಸಿರುವ ದೊಡ್ಡ ದೊಡ್ಡ ಲೈಟ್, ಆ್ಯಂಟೆನಾದಂಥ ಹೆಚ್ಚುವರಿ ಫಿಟ್ಟಿಂಗ್‌ಗಳು, ಚಿತ್ರ ವಿಚಿತ್ರ ಬಣ್ಣ ಹಾಗೂ ವಿನ್ಯಾಸದ ಹ್ಯಾಂಗಿಗ್‌ಗಳು, ಏನೇನೋ ಸ್ಟಿಕ್ಕರ್‌ಗಳು ಹೀಗೆ ಅದು ಎಲ್ಲೇ ಇದ್ದರೂ ಜನ ಒಮ್ಮೆ ಅದರತ್ತ ತಿರುಗಿ ನೋಡಬೇಕು ಹಾಗಿತ್ತು ಅದರ ವಿನ್ಯಾಸ, ರೂಪುರೇಷೆ. “ಅರ್ರೇ… ಇದೇನಿದು ಹೀಗಿದೆಯಲ್ಲ?” ಎಂದು ಮೂಗು ಮುರಿಯುವಂತೆಯೋ ಅಥವಾ “ವ್ಹಾವ್ ಏನ್ ಸೈಕ್ ಆಗ್ ಮಾಡಿಫೈ ಮಾಡ್ಸಿದಾನೆ ಗುರು!” ಎಂದು ಒಮ್ಮಗೆ ಕುತೂಹಲದ ಕಣ್-ಕಣ್ ಬಿಟ್ಟು ನೋಡುವಂತಿತ್ತು ಅದರ ಒಟ್ಟಾರೆ ಸ್ವರೂಪ.
ಫೋಟೋ ಕೃಪೆ : google
ಹುಡುಗಾಟಿಕೆಯ ಮನೋಧೋರಣೆ ಧಾಟಿ ಬೆಳೆದವರಿಗೆ ಇವೆಲ್ಲ ತಲೆಹರಟೆಯೋ, ಉಡಾಫೆಯೋ ಅಥವಾ ತುಸು ಪೊರ್ಕಿತನವಾಗಿಯೋ ಕಂಡರೆ, ಅದೇ ಬಿಸಿ ರಕ್ತದ ಯುವಮನಸ್ಸುಗಳಿಗೆ ಇವೆಲ್ಲ ಟ್ರೆಂಡಿ, ಮಾಡ್, ಪಂಕಿ ಎಂದೆಲ್ಲಾ ಅನಿಸಿಕೊಂಡು ಅತ್ಯಂತ ಆಕರ್ಷಣೀಯ ಎನಿಸಿಕೊಳ್ಳುತ್ತದೆ. ಇದೇನು ತೀರಾ ನಿಷ್ಠೂರವಾದ ವೈರುಧ್ಯವೋ, ವ್ಯತಿರಿಕ್ತವಾದುದೋ ಅಲ್ಲ. ಬದಲಿಗೆ ಇದೂ ಭಿನ್ನ ಮನಃಸ್ಥಿತಿ, ಅಭಿರುಚಿ, ಆಸಕ್ತಿ ಹಾಗೂ ಆದ್ಯತೆಯನ್ನು ತೋರ್ಪಡಿಸುವ ವೈವಿಧ್ಯತೆ ಎಂದೆನ್ನಬಹುದು. ಇನ್ನು ಕಾರಿನೊಳಗೆ ಕುಳಿತವರು ಈ ಎರಡನೇ ವರ್ಗದವರೇ ಎನ್ನುವುದು ಅವರ ವೇಷ ಭೂಷಣ, ಸ್ಟೈಲ್, ಹಾವ-ಭಾವ ಹಾಗೂ ಮಾತುಕತೆಯಿಂದ ತಿಳಿಯುತ್ತಿತ್ತು. ಇದಿಷ್ಟೇ ಆಗಿದ್ದರೆ ಬಹುಶಃ ನಾನು ಅದರ ಬಗ್ಗೆ ಇಲ್ಲಿ ಬರೆಯುತ್ತಲೇ ಇರಲಿಲ್ಲವೇನೋ. ಅವೆಲ್ಲದರ ಹೊರತಾಗಿ ನನ್ನನ್ನು ಅತೀವವಾಗಿ ಸೆಳೆದದ್ದು ಅಥವಾ ಕಾಡಿದ್ದು ಎಂದರೂ ಸರಿಯೇ ಆ ಕಾರಿನ ಮೇಲೆ ಅಂಟಿಸಲ್ಪಟ್ಟಿದ್ದ ಒಂದು ಸ್ಟಿಕ್ಕರ್. ಅದರಲ್ಲಿ ಹೀಗೆ ಬರೆದಿತ್ತು – ‘No air bag, we die like real men!’. ಈ ಒಂದು ಸ್ಟಿಕ್ಕರ್ ತತ್ ಕ್ಷಣಕ್ಕೆ ಹತ್ತಾರು ಆಲೋಚನೆಗಳೆಡೆಗೆ ನಮ್ಮನ್ನು ಮುಖ ಮಾಡಿಸುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಸ್ಟಿಕ್ಕರ್ ಗಳಲ್ಲಿ ಚಿತ್ರ ವಿಚಿತ್ರ ಬರಹಗಳನ್ನೋ, ವ್ಯತಿರಿಕ್ತ ಎನಿಸುವ ಸಂಗತಿಗಳನ್ನೋ ಛಾಪಿಸಿ ಪ್ರದರ್ಶಿಸುವುದು ಈ ಕಾಲಕ್ಕೆ ಹೊಸತೇನಲ್ಲ. ಹಾಗೆ ನೋಡಿದರೆ ಅದರಲ್ಲೂ ಒಂದು ವಿಭಿನ್ನ ಓದು – ಬರಹದ ಲೋಕವೇ ಅಡಗಿರುತ್ತದೆ. ಹಾಗೆಯೇ ಇಂದಿನ ಹೊಸ ಕಾಲಮಾನದಲ್ಲಿ ಸಹಜ ಹಾಗೂ ಸಾಮಾನ್ಯವೆನಿಸುವ ಸಂಗತಿಗಳು ಅಷ್ಟು ಬೇಗನೇ ನಾಲ್ಕು ಜನರನ್ನು ತನ್ನೆಡೆಗೆ ಸೆಳೆಯುವಲ್ಲಿ ಸಫಲವಾಗುವುದಿಲ್ಲ. ಅದರಲ್ಲಿನ ಗುಣ ವಿಶೇಷವನ್ನು ಸೂಕ್ಷ್ಮವಾಗಿ ಗ್ರಹಿಸಿ ಅನುಭವಿಸುವ ಆ ‘ಎಕ್ಸೈಟ್‌ಮೆಂಟ್’ ಈಗೀಗ ಸ್ವಲ್ಪ ಕಡಿಮೆಯೇ. ಹೀಗಾಗಿ ಚೌಕಟ್ಟು ಮೀರಿದ, ಸಿದ್ಧ ಮಾದರಿಯ ಆಲೋಚನಾ ಶೈಲಿಯಿಂದ ಅತೀತವಾದ ಫಟಾಪಟ್ ಖುಷಿ ನೀಡಿ ಮರೆಯಾಗುವ ಸಂಗತಿಗಳು ಬೇಗನೇ ಜನರ ಕಣ್ಣಿಗೆ ಬಿದ್ದು ಅದೇ ವೇಗದಲ್ಲಿ ಲೈಕ್ ಆಗುತ್ತವೆ ಕೂಡಾ. ಇಂದಿನ ಹುಚ್ಚಾಪಟ್ಟೆ ವೈರಲ್ ಆಗುವ ಸರಕುಗಳ ಹಿಂದಿನ ತತ್ವವೂ ಬಹುಪಾಲು ಇದೇ ಆಗಿರುತ್ತದೆ. ಆ ಕಾರಿನಲ್ಲಿ ಕಂಡದ್ದೂ ಅಂಥದ್ದೇ ಒಂದು ಸ್ಯಾಂಪಲ್!

ಅದು ಹಳೆಯ ಮಾಡೆಲ್ ಕಾರು ಆಗಿರುವುದರಿಂದ ಅದರಲ್ಲಿ ಏರ್ ಬ್ಯಾಗ್ ಇಲ್ಲದೇ ಇರುವುದು ಒಂದು ಸಣ್ಣ ಮಿತಿ. ಹೀಗೆ ಏರ್ ಬ್ಯಾಗ್ ಇಲ್ಲದೇ ಇರುವ ವಾಹನದಲ್ಲಿ ಸಂಚರಿಸುವುದು ಸೇಫಾ ಅಲ್ಲವಾ ಎನ್ನುವುದೆಲ್ಲ ಬೇರೆಯದೇ ಚರ್ಚೆಯ ವಿಷಯ. ಆದರೆ ಏರ್ ಬ್ಯಾಗ್ ಇಲ್ಲದ್ದಕ್ಕೂ ‘ತಾವು ಗಂಡುಗಲಿಯಂತೆ ಸಾಯುತ್ತೇವೆ’ ಎಂಬ ಸಮರ್ಥನೆಯ ರೀತಿಯ ಸಾಲು ಸೇರಿಸಿರುವುದು ‘ಏರ್ ಬ್ಯಾಗ್’ನ ಬಳಕೆಯ ಹಾಗೂ ಅದಕ್ಕೆ ಸಂಬಂಧಿಸಿದಂತೆ ಜಾರಿಯಲ್ಲಿರುವ ನಿಯಮಾವಳಿಗಳ ಅಣಕದಂತೆ ಕಾಣುತ್ತದೆ. ಅಲ್ಲದೇ ಏರ್ ಬ್ಯಾಗ್ ಎಂಬ ಸುರಕ್ಷತಾ ಸಾಧನದ ಮೊರೆ ಹೋದವರೆಲ್ಲ ಸಾವಿಗೆ ಬೆದರುವ ಅಗ್ದೀ ಹೆದರು ಪುಕ್ಕಲರು ಎಂದರ್ಥವೇ?
ಸಾವನ್ನು ನಿರ್ಧರಿಸುವುದು ನಮ್ಮಂಥ ಮನುಜ ಮಾತ್ರರಾದ ಯಾರ ಕೈಯ್ಯಲ್ಲೂ ಇಲ್ಲ. ಅದು ಅನಿಶ್ಚಿತವಾದುದು ಎನ್ನುವುದನ್ನು ಒಪ್ಪಿಕೊಳ್ಳೋಣ. ಅಂದ ಮಾತ್ರಕ್ಕೆ ಸೂಕ್ತ ಸುರಕ್ಷತಾ ಪರಿಕರಗಳ ಬಳಕೆ, ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಅನುಸರಣೆಯೆಡೆಗಿನ ನಿಷ್ಠೆ ದೌರ್ಬಲ್ಯವೇನಲ್ಲವಲ್ಲ! ಇವುಗಳು ಅನಾಮತ್ತು ಸಾವನ್ನೇ ಎದುರಿಸಿ ನಮ್ಮನ್ನು ಸೇಫ್ ಮಾಡುತ್ತವೆಯೋ, ಒಂದು ಪುಟ್ಟ ಧೈರ್ಯ ಮೂಡಿಸುತ್ತವೆಯೋ, ಏನೂ ಆಗದು ಎಂಬ ಸುರಕ್ಷತೆಯ ಕಂಫರ್ಟ್‌ನ್ನು ಸೃಷ್ಟಿಸುತ್ತದೋ ಎನ್ನುವುದು ಆಯಾ ಸಮಯ, ಸನ್ನಿವೇಶವನ್ನು ಅವಲಂಭಿಸಿರುತ್ತದೆ. ಅಂಥ ಸುರಕ್ಷತಾ ಕ್ರಮಗಳೆಡೆಗೆ ಒಂದು ಉಪೇಕ್ಷೆಯ ನಿಲುವು ತಳೆಯುವ ಅವುಗಳನ್ನು ಉಲ್ಲಂಘಿಸುವ ಮನೋಧೋರಣೆ ಇಂದಿನ ‘ಫಾಸ್ಟ್ ಆ್ಯಂಡ್ ಫ್ಯೂರಿಯಸ್’ ಜಗತ್ತಿನಲ್ಲಿ ತುಂಬಾ ವ್ಯಾಪಕವಾಗಿ ಕಂಡುಬರುತ್ತಿದೆ. ಅದರ ಕುರುಹಿನ ಸಣ್ಣ ತುಣುಕಿನಂತೆ ಈ ಸ್ಟಿಕ್ಕರ್ ಕಾಣಿಸುತ್ತದೆ.
ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸುವ ಧೋರಣೆಯು ಹಲವು ವಿಧಗಳಲ್ಲಿ ಗೋಚರಿಸುತ್ತದೆ. ‘ಅಯ್ಯೋ ಏನಾಗಲ್ಲ ಹೆಲ್ಮೆಟ್ ಬೇಡ; ಸೀಟ್ ಬೆಲ್ಟ್ ಕಿರಿ ಕಿರಿ ತೆಗೆದಿಡ್ತೀನಿ ಬಿಡು; ಸ್ವಿಮ್ಮಿಂಗ್ ಬರತ್ತೋ ಇಲ್ಲವೋ ಆದ್ರೂ ಲೈಫ್ ಜಾಕೆಟ್ ಹಾಕದೇ ನೀರಿಗೆ ಜಿಗಿಯಬೇಕು ಅದೇ ಮಜಾ ಮಾರಾಯ; ಅಷ್ಟಕ್ಕೆಲ್ಲಾ ಹಾಸ್ಪಿಟಲ್, ಮಾತ್ರೆ, ಇಂಜೆಕ್ಷನ್ ಒಂದಷ್ಟು ಫೀಸ್ ತೆರುವುದೆಲ್ಲ ಯಾಕೆ ಸುಮ್ಮನಿರು ಸರಿಹೋಗುತ್ತಪ್ಪಾ; ಅಗೋ ‘ಇದಕ್ಕಿಂತ ಮುಂದೆ ಹೋಗ ಬೇಡಿ. ಎಚ್ಚರಿಕೆ’ ಅಂತ ಅಲ್ಲೊಂದು ಕೆಂಪು ಬೋರ್ಡ್ ತಗುಲು ಹಾಕಿದ್ದಾರಲ್ಲ ಅದರಾಚೆಗೆ ನಿಂತು ಒಂದು ರೀಲ್ ಮಾಡಬಾರದೇಕೆ, ಹೆವ್ವಿ ಎಕ್ಸೈಟಿಂಗ್ ಆಗಿರುತ್ತೆ; ಮೇಲು ಸೇತುವೆ ಏಕೆ ಹಿಂಗೇ ನೇರವಾಗಿ ಕ್ರಾಸ್ ಮಾಡ್ ಬಿಡೋಣ ಬೇಗ ರೀಚ್ ಆಗಬಹುದು ಎಂದೆಲ್ಲಾ ಪ್ರಜ್ಞಾಪೂರ್ವಕವಾಗಿಯೇ ಹೇಳುವವರ ಆಂತರ್ಯದಲ್ಲಿ ಇರುವುದೆ ಅದೇ ಉಪೇಕ್ಷೆಯ ಉಡಾಫೆ.
ಫೋಟೋ ಕೃಪೆ : WSFA
‘ತಾನು ಸಾವಿಗೆಲ್ಲ ಹೆದರಲ್ಲ’ ಎಂದು ಹೊರಜಗತ್ತಿಗೆ ಸಾರಿಕೊಂಡು ತಿರುಗುವ ಅದೆಷ್ಟೋ ಜನರ ಆಂತರ್ಯದಲ್ಲಿ ಮರಣದ ಭಯ, ಬದುಕುವ ಬಯಕೆಯ ನಡುವಿನ ತಾಕಲಾಟ ಇದ್ದದ್ದೇ. ಅದನ್ನು ವಾಚ್ಯಕ್ಕೆ ಸೀಮಿತವಾಗಿರಿಸಿಕೊಂಡರೆ ಸರಿ ಆದರೆ ಅದನ್ನು ಹೋಗಿ ಹೋಗಿ ಬಂಡೆಗೆ ತಲೆ ಚಚ್ಚಿಕೊಳ್ಳುವ ಭಂಡತನ ಮೆರೆಯುವ ನಿಟ್ಟಿನ ವರ್ತನೆ, ಆಸಕ್ತಿ, ಪ್ರತಿಕ್ರಿಯೆಯ ರೂಪದಲ್ಲಿ ಪ್ರಚುರ ಪಡಿಸಿದರೆ ಆ ಕೆಟ್ಟ ಮಾದರಿಯನ್ನು ಆಯ್ದುಕೊಳ್ಳುವೆಡೆಗೆ ಜನರನ್ನು ಅನ್ಯಾಯವಾಗಿ ಪ್ರಚೋದಿಸಿದಂತಾಗುತ್ತದೆ. ‘We die like real men’ ಎಂದು ಬರೆದುಕೊಂಡವರ ಬದುಕಿನಲ್ಲಿ ಇರುವವರ ಪಾಲಿಗೆ ಆ ‘ಸಾವು’ ಎನ್ನುವುದು ಅವರಂದುಕೊಂಡ ರೀತಿಯಲ್ಲಿ ಇರದು. ಇಂಥ ಸಲ್ಲದ ನಡವಳಿಕೆಯ ಹುಚ್ಚು ಮೋಹಕ್ಕೆ ಮಾರು ಹೋಗಿ ಅದೆಷ್ಟೋ ಜನರು ಅನ್ಯಾಯವಾಗಿ ತಮ್ಮ ಬದುಕನ್ನು ಅಪಾಯ, ಅನಾಹುತಗಳೆಂಬ ತೂಗುಗತ್ತಿಯ ಅಡಿಯಾಳಾಗಿಸುತ್ತಿದ್ದಾರೆ. ಅದರ ನೋವು, ದುಃಖಗಳನ್ನು ಉಣ್ಣಲು ಇನ್ಯಾರಿಗೋ ಬಿಟ್ಟು ಹೊರಟು ಹೋಗುತ್ತಾರೆ.
ವ್ಹೀಲಿಂಗ್ ಎಂಬ ಕೆಟ್ಟ ಸಾಹಸ ಪ್ರದರ್ಶನಕ್ಕೆ ಛಿದ್ರವಾದ ಬದುಕಿನ ಗಾಲಿ, ಸೆಲ್ಫಿಯ ಕ್ಷುಲ್ಲಕ ಹುಚ್ಚಿಗೆ ಬಿದ್ದು ಚೌಕಟ್ಟು ಬಡಿಸಿಕೊಂಡು ಗೋಡೆಗೆ ನೇತು ಬಿದ್ದ ಫೋಟೊ, ಅತಿವೇಗದ ಹಿಂದೆ ಹೋಗಿ ಸಾವಿನ ಮನೆಯ ಆತಿಥ್ಯ ಪಡೆದಿದ್ದು, ಕ್ಷಣಿಕ ಸುಖದ ಲಾಲಸೆಯಲ್ಲಿ ಲಕ್ಷ ಲಕ್ಷ ಕಳೆದುಕೊಂಡು ಬದುಕಿಗೇ ಕೊನೆ ಚುಕ್ಕಿ ಇಟ್ಟುಕೊಂಡಿದ್ದು ಇಂಥ ಅಸಂಖ್ಯಾತ ದಾರುಣ ಅಂತ್ಯದ ಉದಾಹರಣೆಗಳೆಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಮುನ್ನೆಚ್ಚರಿಕೆಯ ಮಹತ್ವಕ್ಕೆ ಬೆನ್ನು ತೋರಿರುವುದರ ಫಲಶ್ರುತಿಯೇ ಆಗಿರುವಂಥದ್ದು.
ಬದುಕಿನ ಅರ್ಥಪೂರ್ಣತೆ ಮತ್ತು ಸಾವಿನ ಸಾರ್ಥಕ್ಯ ಈ ಎರಡರ ಸಾಧನೆಯ ಮೂಲ ಆ ವ್ಯಕ್ತಿಯ ಜೀವಿತಾವಧಿಯೇ ಆಗಿದೆ. ಹಾಗಾಗಿ ನಿರ್ಲಕ್ಷ್ಯದ ಬೆನ್ನು ಬಿದ್ದು, ಸುರಕ್ಷತೆಗಳನ್ನು ಬದಿಗೊತ್ತಿ ಮುನ್ನುಗ್ಗಿ ಅಕಾರಣ ಸಾವಿನ ಬಾಯಿಗೆ ತುತ್ತಾಗುವುದರಲ್ಲಿ ಅದ್ಯಾವ ಧೀರೋದಾತ್ತತೆಯೂ ಇರಲು ಸಾಧ್ಯವಿಲ್ಲ. ಅಷ್ಟಕ್ಕೂ ಸಾವಿನ ವಿಷಯದಲ್ಲೂ ಅನಗತ್ಯ ಕಾರಣಗಳಿಗೆ ರಿಸ್ಕ್ ತೆಗೆದುಕೊಳ್ಳುವಷ್ಟೂ ಸಾವು ಸದರವೇನಲ್ಲ! ಆದ್ದರಿಂದ ‘ಏರ್‌ಬ್ಯಾಗ್’ನಂಥ ಸುರಕ್ಷತೆಯ ಎಚ್ಚರಿಕೆಯೊಂದು ಸದಾ ನಮ್ಮ ಜೊತೆಗಿರಿಸಿಕೊಳ್ಳುವುದು ದೌರ್ಬಲ್ಯವೂ ಅಲ್ಲ, ಅದರ ಹಂಗೆಲ್ಲ ನಮಗೆ ಬೇಕಿಲ್ಲ ಎಂದುಕೊಳ್ಳುವುದು ಮಹಾನ್ ಧೈರ್ಯ, ಶೌರ್ಯದ ಪ್ರತೀಕವೂ ಇಲ್ಲ.
- ಸಂದೇಶ್ ಎಚ್ ನಾಯ್ಕ್