ಬೆಳಿಗ್ಗೆ ಆ ಮನೆಯಿಂದ ಎದ್ದು ಬರುವಾಗ “ಬಂದ್ಲು ನೋಡ್ರಿ ಶಿಸುನಳ್ಳಿ ನಿಂಗಪ್ಪನ ಸೂಳಿ” ಎಂದು ಹೇಳಿ ನಗಲಿಕ್ಕೆ ಶುರು ಮಾಡಿದರು. ನನ್ನ ಹತ್ತಿರ ಬಂದು “ಏನ ನೀನು ಇಂಗ್ಲೀಷ ಸಾಲಿ ಕಲೀತೀದಿ ಅಂಥಾವಗ ಒಂದು ಸೂಳಿ ಪಾರ್ಟು ಕೊಟ್ಟಾರಲ್ಲ. ನಿನ್ನ ಶಿಸುನಾಳ ನಿಂಗಪ್ಪನ ಸೂಳಿ ಅಂತಾನ ಕರೀತಾರ ಎಂದು ಗೇಲಿ ಮಾಡತೊಡಗಿದರು, ಮುಂದೇನಾಯಿತು ತಪ್ಪದೆ ಓದಿ ಕೊರಗಲ್ಲ ವಿರೂಪಾಕ್ಷಪ್ಪ ಅವರ ‘ಕೊಪ್ಪಳ-ಹಾವೇರಿಯ ನೆನಪಿನಂಗಳದಿಂದ’ ಅಂಕಣ…
ವರ್ಷಕ್ಕೊಮ್ಮೆ ಎಪ್ರಿಲ್ ತಿಂಗಳಿನಲ್ಲಿ ನಮ್ಮ ಊರ ಜಾತ್ರೆಯಾಗುತ್ತದೆ. ಅದೊಂದು ಸಣ್ಣ ಹಳ್ಳಿಯಾದರೂ ಜಾತ್ರೆ ಮಾತ್ರ ಗಡದ್ದಾಗಿ ದೊಡ್ಡದೆ ಆಗುತ್ತದೆ, ಈ ಜಾತ್ರೆಯಲ್ಲಿ ಊರ ಹುಡುಗರೆಲ್ಲಾ ಸೇರಿ ಒಂದೆರಡು ತಿಂಗಳು ಪ್ರಾಕ್ಟೀಸ್ ಮಾಡಿ ಒಂದು ನಾಟಕವನ್ನೋ, ದೊಡ್ಡಾಟವನ್ನೋ ಮಾಡುವುದು ನಡೆದುಕೊಂಡು ಬಂದ ರೂಢಿ. ಊರಲ್ಲಿ ಗೌಡರದೊಂದು, ರೈತರದೊಂದು ಎರಡು ಪಾರ್ಟಿ ಇರುವುದರಿಂದ ಎರಡು ನಾಟಗಳು ಆಡಲ್ಪಡುತ್ತವೆ. ಒಂದು ನಾಟಕವನ್ನು ಇನ್ನೊಂದು ಪಾರ್ಟಿಯವರು ಹೇಗಾದರೂ ಮಾಡಿ ಕೆಡಿಸಲಿಕ್ಕೆ ಪ್ರಯತ್ನಿಸುತ್ತಾರೆ.
ನಾನು ಒಂಭತ್ತನೆಯ ಕ್ಲಾಸಿನಲ್ಲಿ ಅಭ್ಯಾಸ ಮಾಡುವಾಗ ನಮ್ಮ ರೈತರ ಪಾರ್ಟಿಯವರು ‘ಚಿತ್ರಾಂಗದೆ’ ಎಂಬ ಒಂದು ನಾಟಕ ಕಲಿಯಲಿಕ್ಕೆ ಶುರು ಮಾಡಿದರು. ನಮ್ಮ ಮನೆಯ ಪಕ್ಕದಲ್ಲಿಯೇ ಹೊಸದಾಗಿ ಕಟ್ಟಲಿಕ್ಕೆ ಶುರು ಮಾಡಿದ್ದ, ನಮ್ಮದೇ ಆದ ಒಂದು ಮನೆ ಖಾಲಿ ಇತ್ತು. ನಾಟಕದ ತಾಲೀಮು ಅಲ್ಲಿಯೇ ಕಾಯಿ ಒಡೆದು ಪೂಜೆ ಮಾಡಿ ಶುರು ಮಾಡಿದ್ದರು. ಬೇಸಿಗೆ ಸೂಟಿಯಲ್ಲಿ ನಾವುಗಳೆಲ್ಲಾ ನಿದ್ದೆ ಬರುವವರಗೆ ಆ ನಾಟಕದ ಮನೆಯಲ್ಲಿ ಹೋಗಿ ಕುಳಿತು ತಾಲೀಮು ನೋಡುತ್ತಿದ್ದೆವು. ಪ್ರತಿ ದಿವಸ ನೋಡಿ ನೋಡಿ ಸುಮಾರಾಗಿ ಎಲ್ಲಾ ಪಾರ್ಟುಗಳ ಮಾತುಗಳು ನಮಗೂ ಬಾಯಿ ಪಾಠ ಆಗಿ ಬಿಟ್ಟಿದ್ದವು. ಅಲ್ಲದೆ ತಾಲೀಮು ಮಾಡುವಾಗ ನಾಟಕ ಕಲಿಸುತ್ತಿದ್ದ ಬಾರಕೇರ ಮಾಸ್ತರರ ಹಾರ್ಮೋನಿಯಂ ಪಕ್ಕದಲ್ಲಿ ಕುಳಿತು ಸಂಭಾಷಣೆಯನ್ನು ಎತ್ತಿ ಕೊಡುವ (ಪ್ರಾಮ್ಠ) ಕಾರ್ಯವನ್ನೂ ನಾನೇ ಮಾಡುತ್ತಿದ್ದೆ. ಆ ನಾಟಕದಲ್ಲಿ ಕೌಂಡಿಣ್ಯನೆನ್ನುವ ನಾಗ ಬರುತ್ತಾನೆ. ಅವನಿಗೆ ತಕ್ಷಕಿ ಎನ್ನುವ ಹೆಂಡತಿಯೂ, ಕೇತಕಿ ಎಂಬ ಪ್ರೀಯತಮೆಯೂ ಇರುತ್ತಾರೆ. ಅವರಲ್ಲಿ ತಕ್ಷಕಿ ಪಾತ್ರವನ್ನು ಉಪ್ಪಾರ ಮಹದೇವಪ್ಪ ಮಾಡಿದ್ದರೆ, ಕೇತಕಿಯ ಪಾತ್ರವನ್ನು ಕಾಯಗಡ್ಡಿ ಕಲ್ಲಪ್ಪ ಮಾಡಿದ್ದ. ನಾಟಕ ಪೂರ್ಣ ತಯಾರಿಯಾಗಿ ಬಿಟ್ಟಿತ್ತು. ಆಗ ಕಾಯಗಡ್ಡಿ ಕಲ್ಲಪ್ಪನ ಧ್ವನಿ ಬಿದ್ದು ಹೋಗಿ ಆತನನ್ನು ತೋರಿಸಲಿಕ್ಕೆ ಕೆ.ಎಂ.ಸಿ ಕರೆದುಕೊಂಡು ಹೋದರು. ಆಗ ಕಲ್ಲಪ್ಪನ ಪಾತ್ರದ ಮಾತುಗಳನ್ನು ನಾನೇ ಹೇಳಲಿಕ್ಕೆ ಶುರು ಮಾಡಿ ತಾಲೀಮು ಆಬಾಧಿತವಾಗಿ ನಡೆಯುವಂತೆ ಮಾಡಿದೆ. ದುರ್ದೈವದಿಂದ ಕಲ್ಲಪ್ಪನ ಗಂಟಲು ಚಿಕಿತ್ಸೆಗೊಳಪಟ್ಟು ಆತ ಪಾತ್ರ ಮಾಡಲಿಕ್ಕೆ ಸಾಧ್ಯವಿಲ್ಲವೆನ್ನುವ ಸುದ್ದಿ ಬಂತು. ಆಗ ಉಳಿದ ಪಾತ್ರಧಾರಿಗಳು ನನ್ನನ್ನು ಪುಸಲಾಯಿಸಿ ಆ ಕೇತಕಿ ಪಾತ್ರ ಮಾಡಲಿಕ್ಕೆ ಹಚ್ಚಿದರು. ತಾಲೀಮು ನೋಡಲಿಕ್ಕೆ ಬಂದವರೆಲ್ಲಾ ‘ಕಲ್ಲಪ್ಪನಿಗಿಂತ ಈ ಹುಡುಗನ ಬೇಸಿ ಮಾಡತೈತೆ ಬುಡು’ ಎಂದು ನನ್ನನ್ನು ಹುರಿದುಂಬಿಸಿದ್ದರಿಂದ ಮತ್ತಷ್ಟು ಉತ್ತೇಜಿತನಾಗಿ ಮೈ ಚಳಿ ಬಿಟ್ಟು ಪ್ರೀಯಕರನಾದ ಕೌಂಡಿಣ್ಯನ ಜೊತೆ ಕೈ ಕೈ ಹಿಡಿದು ಕುಣಿ ಕುಣಿದು ಡಾನ್ಸ ಮಾಡಲಿಕ್ಕೆ ಶುರು ಮಾಡಿದ್ದರಿಂದ ನನ್ನ ಪಾತ್ರ ಬಹಳ ಪ್ರಸಿದ್ಧಿಯನ್ನು ಪಡೆಯಿತು. ನಾಟಕದ ಮಾಸ್ತರರಾಗಿದ್ದ ಬಾರಕೇರ ಮಾಸ್ತರರು ರಾತ್ರಿ ನಮ್ಮ ಆ ತಾಲೀಮಿನ ಮನೆಯಲ್ಲಿಯೇ ಮಲಗುತ್ತಿದ್ದದರಿಂದ, ಬಿಡುವಿನ ಸಮಯದಲ್ಲಿ ನನಗೆ ಹಾಡು ಪ್ರಾಕ್ಟಿಸು ಮಾಡಿಸಿ ಒಳ್ಳೆಯ ರೀತಿಯಿಂದ ತಯಾರು ಮಾಡಿದರು.
ಫೋಟೋ ಕೃಪೆ : google ಸಾಂದರ್ಭಿಕ ಚಿತ್ರ
ನಮ್ಮ ತಂದೆಯವರು ಅವರ ಕಾಲದಲ್ಲಿ ದೊಡ್ಡಾಟದಲ್ಲಿ ಪಾತ್ರ ಮಾಡುವ ಪ್ರಸಿದ್ಧ ಕಲಾಕಾರರಾಗಿದ್ದರು. ಅಷ್ಟು ಮಾತ್ರವಲ್ಲದೆ ವಿರಾಟ ಪರ್ವವೆಂಬ ಒಂದು ದೊಡ್ಡಾಟದ ಕೃತಿಯನ್ನೂ ರಚಿಸಿದ್ದರು. ನನ್ನ ಪಾತ್ರ ನೋಡಲಿಕ್ಕೆ ನಮ್ಮ ತಂದೆಯವರೂ ಬಂದು ಕುಳಿತು ಎರಡು ಮೂರು ದಿವಸ ನೋಡಿ ಖುಷಿ ಪಟ್ಟರು. ನಾನು ನಮ್ಮ ತಂದೆಯೊಡನೆ ನಮ್ಮ ಎತ್ತಿನ ಮನೆಯಲ್ಲಿ ಮಲಗುತ್ತಿದ್ದೆ.ನಮ್ಮ ಎತ್ತಿನ ಮನೆಯ ಪಕ್ಕದಲ್ಲಿಯೇ ಕೌಂಡಿಣ್ಯನ ಪಾತ್ರ ಮಾಡಿದ್ದ ಶಿಸ್ವಿನಹಳ್ಳಿ ನಿಂಗಪ್ಪನ ಮನೆ ಮತ್ತು ತಕ್ಷಕಿಯ ಪಾತ್ರ ಮಾಡಿದ್ದ ಉಪ್ಪಾರ ಮಹದೇವಪ್ಪನ ಮನೆಗಳೂ ಇದ್ದವು. ತಾಲೀಮು ಮುಗಿಸಿಕೊಂಡು ಹೋಗುವಾಗ ಆ ನಿಂಗಪ್ಪ ಮಹದೇವಪ್ಪ ಮತ್ತು ನಾನು ಜೊತೆಯಲ್ಲಿಯೇ ಹೋಗುತ್ತಿದ್ದೆವು. ದಾರಿಯಲ್ಲಿ ಹೋಗುವಾಗ ಜನರೆಲ್ಲಾ ನಮ್ಮನ್ನು ಚೇಷ್ಟೆ ಮಾಡಿ ಏನೋ ನಿಂಗಪ್ಪಾ ಎರಡೂ ಹೆಣ್ಣು ಕರಕೊಂಡು ಹೊಂಟೆಲ್ಲಾ ಎನ್ನುತ್ತಿದ್ದರು. ಮತ್ತೆ ಕೆಲವರು ಇದರಲ್ಲಿ ನಿನ್ನ ಹೆಂಡತಿ ಯಾರು ಮತ್ತೆ ನಿನ್ನ ಸೂಳೆ ಯಾರು ಎಂದು ಕೇಳಿದರೆ ಆ ಕೌಂಡಿಣ್ಯನ ಪಾತ್ರಧಾರಿ ಮಹದೇವಪ್ಪನನ್ನು ತೋರಿಸಿ, ಈಕೆ ಹೆಂಡತಿ ಎಂದು, ನನ್ನತ್ತ ಬೆರಳು ಮಾಡಿ ತೋರಿಸಿ… ಈಕೆ ಸೂಳೆ ಎಂದು ಹೇಳುತ್ತಿದ್ದ. ಆ ಓಣಿಯವರೆಲ್ಲಾ ನನ್ನನ್ನು ನೋಡಿ ನಗಲಿಕ್ಕೆ ಶುರು ಮಾಡಿದರು.
ಬೆಳಿಗ್ಗೆ ಆ ಮನೆಯಿಂದ ಎದ್ದು ಬರುವಾಗ “ಬಂದ್ಲು ನೋಡ್ರಿ ಶಿಸುನಳ್ಳಿ ನಿಂಗಪ್ಪನ ಸೂಳಿ” ಎಂದು ಹೇಳಿ ನಗಲಿಕ್ಕೆ ಶುರು ಮಾಡಿದರು. ಗೌಡರ ಪಕ್ಷದವರೆಲ್ಲಾ ನಮ್ಮ ಪಕ್ಷದ ನಾಟಕವನ್ನು ಹಾಳು ಮಾಡಬೇಕಿಂದಿದ್ದವರು, ನನ್ನ ಹತ್ತಿರ ಬಂದು “ಏನ ನೀನು ಇಂಗ್ಲೀಷ ಸಾಲಿ ಕಲೀತೀದಿ ಅಂಥಾವಗ ಒಂದು ಸೂಳಿ ಪಾರ್ಟು ಕೊಟ್ಟಾರಲ್ಲ. ಇನ್ನು ಮ್ಯಾಲೆ ನಿನಗ ಇರಪಾಕ್ಷಪ್ಪ ಅಂತಾ ಯಾರೂ ಅನ್ನಾಂಗಿಲ್ಲ. ಊರನ್ನ ಮಂದೆಲ್ಲಾ ನಿನ್ನ ಶಿಸುನಾಳ ನಿಂಗಪ್ಪನ ಸೂಳಿ ಅಂತಾನ ಕರೀತಾರ. ನೀನು ಈ ಪಾರ್ಟು ಮಾಡ ಬಾರದಾಗಿತ್ತು. ಎಷ್ಟು ಮಾತದವು?” ಎಂದು ಕೇಳಿದಾಗ ನಾನು “೩೮ ಮಾತದಾವು?” ಎಂದು ಹೇಳಿದ್ದೆ. “ನೋಡು ಬರಿ ೩೮ ಮಾತು ಇರುವ ಸೋಗು ಕೊಟ್ಟು ನಿನ್ನ ಸೂಳಿ ಮಾಡಿ ಬುಟ್ಟರು. ನಿಮ್ಮ ಅಪ್ಪಾ ದೊಡ್ಡ ದೊಡ್ಡ ಸೋಗು ಹಾಕಿತ್ತಿದ್ದ. ಆತ ದೊಡ್ಡಾಟದಾಗ ಪಾರ್ಟ ಮಾಡಿದರ ಬೀಗರು ಬಿಜ್ಜರಲ್ದ ಬ್ಯಾರೆ ಊರವರು ಆತಗ ಬೆಳ ಬೆಳತನಕಾ ಆಯೇರು ಮಾಡಿತಿದ್ರು. ನಿನಗ ಯಾರೂ ಹತ್ತು ಪೈಸಾ ಆಯೇರು ಮಾಡದಲ್ಲ.” ಎಂದು ಹೇಳಿ ನನ್ನನ್ನು ಹೀಯಾಳಿಸಿ ಮಾತಾಡಿ ಬಿಟ್ಟರು. ಅಷ್ಟು ಮಾತ್ರವಲ್ಲ ನಾನು ನಮ್ಮ ಮನೆಯಿಂದ ಹೊರಗೆ ಬಂದರೆ ಸಣ್ಣ ಸಣ್ಣ ಮಕ್ಕಳೆಲ್ಲಾ ನನಗೆ ಮುಗಿ ಬಿದ್ದು “ಶಿಸುನಾಳ ನಿಂಗಪ್ಪನ ಸೂಳಿ,ಶಿಸುನಾಳ ನಿಂಗಪ್ಪನ ಸೂಳಿ” ಎಂದು ಹೇಳುವಂತೆ ಪ್ರೇರೇಪಿಸಿದ್ದರಿಂದ, ಹುಡುಗರೆಲ್ಲಾ ಬೆನ್ನು ಹತ್ತಿ ಕೂಗಿ ಕಾಡಲಾರಂಭಿಸಿದರು. ಹೀಗೆ ನಾಲ್ಕೈದು ದಿವಸ ಶಿಸುನಾಳ ನಿಂಗಪ್ಪನ ಸೂಳೆಯಾದ ಮೇಲೆ ನಾನು ನಾಟಕದ ಮನೆಗೆ ತಾಲೀಮಿಗೆ ಹೋಗುವುದನ್ನು ಬಿಟ್ಟು ಬಿಟ್ಟೆ. ನಾನು ಪಾರ್ಟು ಮಾಡಬೇಕೆಂದು ನಮ್ಮ ತಂದೆಯವರಿಗೆ ಬಹಳ ಅಪೇಕ್ಷೆ ಇತ್ತು. ಅವರು ನನಗೆ ಬಹುವಾಗಿ ಹೇಳಿ ಒಪ್ಪಿಸಲಿಕ್ಕೆ ಪ್ರಯತ್ನಿಸಿದರೂ ನಾನು ಸುತರಾಂ ಒಲ್ಲೆ ಎಂದು ಹೇಳಿ ಕುಳಿತು ಬಿಟ್ಟೆ. ನಾಟಕದ ಮಾಸ್ತರರಾಗಿದ್ದ ಬಾರಕೇರ ಮಾಸ್ತರರು, “ನೀನು ಪಾರ್ಟು ಮಾಡಿದರ ನಿನಗ ೨೫ ರೂಪಾಯಿ ನಾನು ಆಯೇರ ಮಾಡ್ತೀನಿ. ಒಲ್ಲೆನಬ್ಯಾಡ.” ಎಂದು ತಿಳಿ ಹೇಳಿದರೂ ನನಗೆ ಮನಸ್ಸು ಬರಲಿಲ್ಲ. ನಮ್ಮ ತಂದೆಯವರು ನನ್ನನ್ನು ಅತಿಯಾಗಿ ಪ್ರೀತಿಸುತ್ತಿದ್ದರು. ಒತ್ತಾಯಕ್ಕ ಬಿದ್ದು ನಾನು ಪಾರ್ಟು ಮಾಡುವುದು ಅವರಿಗೂ ಬೇಡವಾಗಿತ್ತು. “ಒಲ್ಲಂತಾನ ಬ್ಯಾಡ ಬಿಡ್ರಿ” ಎಂದು ನಮ್ಮ ತಂದೆಯವರು ಹೇಳಿ ಬಿಡಿಸಿ ಬಿಟ್ಟರು. ಶಂಬುಲಿಂಗ ಎನ್ನುವ ಇನ್ನೊಬ್ಬನಿಗೆ ಆ ಪಾತ್ರ ಕೊಟ್ಟು ಬಿಟ್ಟರು.ಆದರೆ ಗೌಡರ ಪಕ್ಷದ ಜನರು ಅವನ ತಲೆಯನ್ನೂ ಕೆಡಿಸಿ ಅವನೂ ಪಾತ್ರ ಮಾಡದೆ ಅವರ ಅಕ್ಕನ ಮನೆಗೆ ಹೋಗುವಂತೆ ಮಾಡಿ ಬಿಟ್ಟರು. ಅನಿವಾರ್ಯವಾಗಿ ಕೇತಕಿ ಪಾರ್ಟು ಮಾಡಲಿಕ್ಕೆ ಕೂಡ್ಲಿಗಿಯಿಂದ ಹೆಣ್ಣು ತಂದು ಪಾತ್ರ ಮಾಡಿಸುವುದೆಂದು ನಿರ್ಣಯಿಸಿ ಬಿಟ್ಟರು. ಆ ನಾಟಕ ಕಲಿಸುತ್ತಿದ್ದ ಬಾರಕೇರ ಮಾಸ್ತರರೂ ನಮ್ಮ ತಂದೆಯವರೂ ಸೇರಿ ಒಂದು ನಾಟಕ ಮಾಡಿದರು.
ನನ್ನನ್ನು ಕೊಪ್ಪಳಕ್ಕೆ ಕರೆದುಕೊಂಡು ಹೋಗಿ “ಮುಂದಿನ ವರ್ಷ ನೀನು ಮೆಟ್ರಿಕ್ ಪರೀಕ್ಷೆಗೆ ಕೂಡ್ರುವವ ಇಲ್ಲಿಯೇ ಇದ್ದು ಚಲೋತ್ನಾಗ ಅಭ್ಯಾಸಾ ಮಾಡು. ನಾಟಗಾಪಾಟಗಾ ತಗೊಂಡು ಏನು ಮಾಡ್ತಿ” ಎಂದು ಹೇಳಿ ನಮ್ಮ ಕೋಣೆಯಲ್ಲಿಟ್ಟು ಬಂದರು. ನಾನು ಒಮ್ಮೆಲೆ ಜಾತ್ರೆ ಮೂರು ನಾಲ್ಕು ದಿವಸವಿದ್ದಾಗ ಊರಿಗೆ ಬಂದೆ. ಅಷ್ಟೊತಿಗೆ ಎಲ್ಲಾ ಮರೆತು ಹೋದದ್ದರಿಂದ, ನನಗೆ ಯಾರೂ ಸೂಳೆಯೆನ್ನುತ್ತಿರಲಿಲ್ಲ. ಬಾರಕೇರ ಮಾಸ್ತರರು, ಹೆಗಲ ಮೇಲೆ ಕೈ ಹಾಕಿ ತಾಲೀಮಿನ ಮನೆಗೆ ಕರೆದುಕೊಂಡು ಹೋದರು. ಈ ಹುಡುಗ ಛಂದ ಹಾಡ್ತಾನ ಎಂದು ಹೇಳಿ ಕೇತಕಿ ಪಾತ್ರದ ಎರಡೂ ಹಾಡನ್ನು ಎರಡು ಸಲ ಹಾರ್ಮೋನಿಯಮದ ಜೊತೆಗೆ ಹಾಡಿಸಿದರು. “ಕೇತಕಿ ಪಾರ್ಟ ಮಾಡುವ ಹೆಣ್ಣ ಮಗಳಿಗೆ ಮಾತು ಬರದಲ್ಲ. ನೀನು ಹಿಂದೆ ಕುಂತು ಹೇಳವಂತಿ ಮಾತು ನೋಡಿಕ್ಯಾ” ಎಂದು ಹೇಳಿ ನನ್ನ ಮಾತಿನ ಓವಿ ಹೊರಗೆ ತೆಗೆಯಿಸಿ ಓದ ಹಚ್ಚಿದರು. ಕೇತಕಿ ಪಾತ್ರ ಮಾಡುವ ಹೆಣ್ಣು ಮಗಳು ಒಮ್ಮೆಲೇ ನಾಟಕದ ಸಮಯಕ್ಕೆ ಬರುತ್ತಾಳೆಂದು ಆಕೆಯ ದಾರಿ ಕಾಯ್ದರು. ಆದರೆ ರಾತ್ರಿ ಆ ಕೂಡ್ಲಿಗಿ ಹೆಣ್ಣು ನಾನೇ ಆಗಬೇಕಾಯಿತು. ರಾತ್ರಿ ನಮ್ಮ ಅಕ್ಕನ ಮದುವೆ ಸೀರೆ ಉಡಿಸಿ ನನ್ನನ್ನು ಸ್ಟೇಜಿಗೆ ತಂದು ನಿಲ್ಲಿಸಿದ ಬಾರಕೇರ ಮಾಸ್ತರರ ಜಾಣತನವನ್ನು ಮೆಚ್ಚಲೇ ಬೇಕು. ಶಿಶ್ವಿನಳ್ಳಿ ನಿಂಗಪ್ಪನ ಪ್ರೇಯಸಿಯಾಗಿ ಆತನ ಕೈ ಹಿಡಿದು ಡ್ಯಾನ್ಸ ಮಾಡುತ್ತಾ ಹಾಡಿದೆ.ಕೆಲವು ಜನರು ನಾನೇ ಕೂಡ್ಲಗಿಯ ಹೆಣ್ಣು ಎಂದು ತಿಳಿದರು. “ಪಾರ್ಟ ಮಾಡಿದಾಕಿ, ಕೂಡ್ಲಗಿ ಹೆಣ ಮಗಳಲ್ಲ. ಕ್ವಾರಗಲ್ಲ ಇರಪಣ್ಣ ಅಲ್ಲನು.” ಎಂದು ಒಬ್ಬರು ಹೇಳಿದರೆ; “ಅಲ್ಲ ಬುಡು ಜಡಿ ಹಾಕೆಂದಾಳ, ಈಟೀಟ ದಪ್ಪ ಮಲಿ ಅದಾವ ನೋಡು” ಎಂದು ಮತ್ತೊಬ್ಬರು ಹೇಳಿದಂತೆ ಮುಂದೆ ಕೆಲವು ದಿವಸ ನನ್ನನ್ನು ಶಿಸುನಳ್ಳಿ ನಿಂಗಪ್ಪನ ಸೂಳೆ ಎನ್ನುವುದನ್ನು ಮಾತ್ರ ಬಿಡಲಿಲ್ಲ.
“ಕೊಪ್ಪಳ-ಹಾವೇರಿಯ ನೆನಪಿನಂಗಳದಿಂದ” ಅಂಕಣದ ಹಿಂದಿನ ಸಂಚಿಕೆಗಳು :
- ವಾಲಿಕಾರ ಮಲ್ಲೇಶಪ್ಪನ ಪಲ್ಲಕ್ಕಿ ಸೇವೆ – (ಭಾಗ೧)
- ಹಾವೇರಿಯ ನಕ್ಷತ್ರ ಚಂಪಾ – (ಭಾಗ೨)
- ಎಂ.ಎ. ಡಿಗ್ರಿಯ ಕಿಮ್ಮತ್ತು ಬರಿ ಒಂದು ಗುಡಾರ – (ಭಾಗ ೩)
- ಪ್ರಾಮಾಣಿಕ ಹುಚ್ಚ – (ಭಾಗ ೪)
- ಕೊರಗಲ್ಲ ವಿರೂಪಾಕ್ಷಪ್ಪ, ಹಾವೇರಿ