ಎದುರಿನ ವ್ಯಕ್ತಿಗೆ ನಿಮ್ಮ ಪ್ರೀತಿ ಇಷ್ಟವಿಲ್ಲದಿದ್ದರೆ ಅಥವಾ ಅವರು ನಿಮ್ಮನ್ನು ತಿರಸ್ಕರಿಸಿದರೆ, ಅದನ್ನು ಗೌರವಿಸಿ ದೂರ ಸರಿಯುವುದು ಪ್ರಬುದ್ಧತೆಯ ಲಕ್ಷಣ. ಆದರೆ ಇಂದು ಅನೇಕ ಯುವಕ-ಯುವತಿಯರಲ್ಲಿ ಸಹನೆ ಮತ್ತು ಪ್ರಬುದ್ಧತೆ ಕಡಿಮೆಯಾಗಿದೆ, ಆದರೆ ಪ್ರೀತಿಗಾಗಿ ಕೊಳ್ಳುವುದು ಸರಿಯೇ? ಪ್ರೀತಿಯ ಕುರಿತು ಸಿದ್ದೇಶ್ ಸಿದ್ದನಮಠ ಅವರ ಲೇಖನವನ್ನು ತಪ್ಪದೆ ಮುಂದೆ ಓದಿ…
ಮಾನವನ ಜೀವನದಲ್ಲಿ ಅತ್ಯಂತ ಪವಿತ್ರವಾದ, ಮೃದುವಾದ ಮತ್ತು ಸುಂದರವಾದ ಭಾವನೆ ಎಂದರೆ ಅದು ‘ಪ್ರೀತಿ’. ಪ್ರೀತಿ ಎಂದರೆ ತ್ಯಾಗ, ನಂಬಿಕೆ, ಗೌರವ ಮತ್ತು ರಕ್ಷಣೆ. ಒಬ್ಬ ವ್ಯಕ್ತಿ ಇನ್ನೊಬ್ಬರನ್ನು ಪ್ರೀತಿಸಿದಾಗ ಅವರ ಸಂತೋಷವೇ ತನ್ನ ಸಂತೋಷವೆಂದು ಭಾವಿಸುತ್ತಾನೆ. ಆದರೆ, ಇಂದಿನ ಆಧುನಿಕ ಸಮಾಜದಲ್ಲಿ ಪ್ರೀತಿಯ ಹೆಸರಿನಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ, “ನಾವು ತಲುಪುತ್ತಿರುವ ಹಾದಿ ಸರಿಯಿದೆಯೇ?” ಎಂಬ ಆತಂಕಕಾರಿ ಪ್ರಶ್ನೆ ಮೂಡುತ್ತದೆ.
ಕಳೆದ ವಾರ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ನಡೆದ ಭೀಕರ ಘಟನೆ ಇಡೀ ಕರಾವಳಿಯನ್ನೇ ತಲ್ಲಣಗೊಳಿಸಿದೆ. ತಾನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದೆ ಎಂದು ಹೇಳಿಕೊಂಡ ಹುಡುಗನೊಬ್ಬ, ಪ್ರೀತಿಸಿದ ಹುಡುಗಿ ಲಾವಣ್ಯಳನ್ನು ಸಾರ್ವಜನಿಕರು ನೋಡುತ್ತಿದ್ದಂತೆಯೇ ಕತ್ತಿನ ಭಾಗಕ್ಕೆ ಚಾಕುವಿನಿಂದ ಇರಿದು ನಡು ರಸ್ತೆಯಲ್ಲೇ ಕೊಲೆ ಮಾಡಿದ. ಪ್ರೀತಿಯ ಹೆಸರಿನಲ್ಲಿ ನಡೆದ ಈ ರಕ್ತಸಿಕ್ತ ಅಧ್ಯಾಯ ಪ್ರತಿಯೊಬ್ಬ ನಾಗರಿಕ ಸಮಾಜದ ವ್ಯಕ್ತಿಯನ್ನು ಕಂಗೆಡುವಂತೆ ಮಾಡಿದೆ. ಆದರೆ ಇಲ್ಲಿ ಮೂಡುವ ಮೂಲಭೂತ ಪ್ರಶ್ನೆ ಒಂದೇ: ಪ್ರೀತಿಗಾಗಿ ಪ್ರೀತಿಸಿದವರನ್ನ ಕೊಲ್ಲುವುದು… ನಿಜಕ್ಕೂ ಪ್ರೀತಿನಾ?
ನಾವು ಆಗಾಗ್ಗೆ “ಅತಿಯಾದ ಪ್ರೀತಿ” ಎಂಬ ಪದವನ್ನು ಕೇಳುತ್ತೇವೆ. ಆದರೆ ಅತಿಯಾದ ಪ್ರೀತಿ ಎಂದಿಗೂ ಹಿಂಸೆಗೆ ತಿರುಗುವುದಿಲ್ಲ; ಹಿಂಸೆಗೆ ತಿರುಗುವುದು ‘ಮಾಲೀಕತ್ವದ ಮನೋಭಾವ’. “ನೀನು ನನಗೆ ಸಿಗದಿದ್ದರೆ ಇನ್ಯಾರಿಗೂ ಸಿಗಬಾರದು” ಎಂಬ ರಾಕ್ಷಸಿ ಆಲೋಚನೆ ಪ್ರೀತಿಯಲ್ಲ, ಅದು ವಿಕೃತ ಅಹಂಕಾರ (Ego).
ಬಿ.ಸಿ. ರೋಡ್ ಘಟನೆಯಲ್ಲಿ, ಆ ಯುವಕ ತನ್ನ ಪ್ರೀತಿ ತಿರಸ್ಕರಿಸಲ್ಪಟ್ಟಿತು ಅಥವಾ ತನಗೆ ದಕ್ಕಲಿಲ್ಲ ಎಂಬ ಕಾರಣಕ್ಕೆ ಲಾವಣ್ಯಳ ಜೀವವನ್ನೇ ತೆಗೆದುಬಿಟ್ಟ. ಇದು ಪ್ರೀತಿಯ ಸಂಕೇತವಲ್ಲ, ಬದಲಿಗೆ ವಿಕೃತ ಮನಸ್ಥಿತಿಯ ದ್ಯೋತಕ. ಪ್ರೀತಿಸುವ ವ್ಯಕ್ತಿಗೆ ಎದುರಿದ್ದವರ ಸಂತೋಷ ಮತ್ತು ಜೀವ ಮುಖ್ಯವಾಗಬೇಕೇ ಹೊರತು, ತನ್ನ ಅಹಂಕಾರದ ಗೆಲುವಲ್ಲ. ಯಾವುದೇ ವ್ಯಕ್ತಿಯು ಇನ್ನೊಬ್ಬರ ಜೀವವನ್ನು ಕಸಿಯುವ ಹಕ್ಕನ್ನು ಹೊಂದಿಲ್ಲ, ಅದು ಪ್ರೀತಿಯ ಹೆಸರಿನಲ್ಲಂತೂ ಖಂಡಿತ ಇಲ್ಲ.
ಇಂದಿನ ಯುವಜನತೆಯಲ್ಲಿ ಕಂಡುಬರುತ್ತಿರುವ ದೊಡ್ಡ ಕೊರತೆಯೆಂದರೆ ‘ಇಲ್ಲ’ (No) ಎಂಬ ಪದವನ್ನು ಸ್ವೀಕರಿಸಲು ಸಾಧ್ಯವಾಗದಿರುವುದು. ಪ್ರೀತಿ ಎಂಬುದು ಎರಡೂ ಮನಸ್ಸುಗಳ ಪರಸ್ಪರ ಸಮ್ಮತಿಯಿಂದ ಆಗಬೇಕಾದ ಸುಂದರ ಬಾಂಧವ್ಯ. ಅದನ್ನು ಯಾರ ಮೇಲೆಯೂ ಬಲವಂತವಾಗಿ ಹೇರಲು ಸಾಧ್ಯವಿಲ್ಲ.
ಒಂದು ವೇಳೆ ಎದುರಿನ ವ್ಯಕ್ತಿಗೆ ನಿಮ್ಮ ಪ್ರೀತಿ ಇಷ್ಟವಿಲ್ಲದಿದ್ದರೆ ಅಥವಾ ಅವರು ನಿಮ್ಮನ್ನು ತಿರಸ್ಕರಿಸಿದರೆ, ಅದನ್ನು ಗೌರವಿಸಿ ದೂರ ಸರಿಯುವುದು ಪ್ರಬುದ್ಧತೆಯ ಲಕ್ಷಣ. ಆದರೆ, ದುರಾದೃಷ್ಟವಶಾತ್ ಇಂದು ಅನೇಕ ಯುವಕ-ಯುವತಿಯರಲ್ಲಿ ಸಹನೆ ಮತ್ತು ಪ್ರಬುದ್ಧತೆ ಕಡಿಮೆಯಾಗುತ್ತಿದೆ. “ನನ್ನ ಪ್ರೀತಿಯನ್ನು ತಿರಸ್ಕರಿಸಲು ಅವಳಿಗೆ ಎಷ್ಟು ಧೈರ್ಯ?” ಎಂಬ ಅಹಂಕಾರ ಮತ್ತು ಆಕ್ರೋಶವೇ ಮುಂದೆ ಕೊಲೆ, ಆಸಿಡ್ ದಾಳಿಯಂತಹ ಕ್ರೂರ ಕೃತ್ಯಗಳಿಗೆ ದಾರಿಯಾಗುತ್ತದೆ. ಲಾವಣ್ಯಳ ಕೊಲೆಯೂ ಇಂತಹದೇ ವಿಕೃತ ಹಾಗೂ ಅಹಂಕಾರದ ಮನಸ್ಥಿತಿಗೆ ಬಲಿಯಾದ ಉದಾಹರಣೆಯಾಗಿದೆ.

ಇಂದಿನ ಯುವ ಪೀಳಿಗೆಯ ಮೇಲೆ ಸಿನಿಮಾ, ವೆಬ್ ಸೀರೀಸ್ ಹಾಗೂ ಸಾಮಾಜಿಕ ಮಾಧ್ಯಮಗಳು ಬೀರಿದ ಪ್ರಭಾವ ಅಪಾರ. ಅನೇಕ ಸಿನಿಮಾಗಳಲ್ಲಿ ನಾಯಕನು ನಾಯಕಿಯನ್ನು ಹಿಂಬಾಲಿಸುವುದು (Stalking), ಅವಳು ‘ಬೇಡ’ ಎಂದರೂ ಪೀಡಿಸುವುದು, ಪ್ರೀತಿ ಸಿಗದಿದ್ದಾಗ ಹಿಂಸಾತ್ಮಕವಾಗಿ ನಡೆದುಕೊಳ್ಳುವುದನ್ನು “ಸ್ಟೈಲ್” ಅಥವಾ “ನಿಜವಾದ ಪ್ರೀತಿ” ಎಂದು ವೈಭವೀಕರಿಸಲಾಗುತ್ತದೆ.
ಬೀದಿಯಲ್ಲಿ ನಿಂತು ಬೆದರಿಸುವುದು, ಹಿಂಬಾಲಿಸುವುದು, ಪ್ರೀತಿ ನಿರಾಕರಿಸಿದರೆ ಜೀವ ತೆಗೆಯುವುದು ಅಥವಾ ಸಾಯುವುದು ಧೀರತನದ ಕೆಲಸ ಎಂದು ಯುವಮನಸ್ಸುಗಳು ತಪ್ಪಾಗಿ ಭಾವಿಸುತ್ತಿವೆ. ಆದರೆ ನೈಜ ಜೀವನ ಸಿನಿಮಾವಲ್ಲ. ಬಿ.ಸಿ. ರೋಡ್‌ನ ಬಸ್ ನಿಲ್ದಾಣದಲ್ಲಿ ಲಾವಣ್ಯಳ ರಕ್ತ ಹರಿದಾಗ, ಅಲ್ಲಿ ಸಿನಿಮಾ ತರಹದ ಯಾವುದೇ ಗ್ಲಾಮರ್ ಇರಲಿಲ್ಲ. ಬದಲಿಗೆ ಅಲ್ಲಿ ಇಡೀ ಕುಟುಂಬದ ಕನಸುಗಳು, ಹುಸಿ ಭರವಸೆಗಳು ಮತ್ತು ಒಂದು ಅಮೂಲ್ಯ ಜೀವ ನಶಿಸಿಹೋಗಿತ್ತು.
ಬಿ.ಸಿ. ರೋಡ್‌ನಲ್ಲಿ ನಡೆದ ಈ ದುರಂತವು ಕೇವಲ ಒಬ್ಬ ವ್ಯಕ್ತಿಯ ಕ್ರೌರ್ಯವನ್ನು ಮಾತ್ರವಲ್ಲ, ನಮ್ಮ ಸಮಾಜದ ನಿಷ್ಕ್ರಿಯತೆಯನ್ನೂ ಎತ್ತಿ ತೋರಿಸುತ್ತದೆ. ನಾವು ನಮ್ಮ ಮಕ್ಕಳಿಗೆ ಯಶಸ್ಸು, ಶೈಕ್ಷಣಿಕ ಸಾಧನೆ ಮತ್ತು ಹಣ ಗಳಿಸುವುದನ್ನು ಹೇಳಿಕೊಡುತ್ತೇವೆ. ಆದರೆ ಜೀವನದಲ್ಲಿ ಹಿನ್ನಡೆ, ಸೋಲು ಮತ್ತು ತಿರಸ್ಕಾರ ಬಂದಾಗ ಅದನ್ನು ಧೈರ್ಯವಾಗಿ ಎದುರಿಸುವುದು ಹೇಗೆ ಎಂಬುದನ್ನು ಹೇಳಿಕೊಡುತ್ತಿಲ್ಲ. ‘ನೋ’ ಎಂದರೆ ಅದನ್ನು ಗೌರವಿಸಬೇಕು ಎಂಬ ಪ್ರಾಥಮಿಕ ಪಾಠವನ್ನು ಬಾಲ್ಯದಲ್ಲೇ ಮಗುವಿಗೆ ಕಲಿಸಬೇಕಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಯುವತಿಯರ ಮೇಲೆ ನಡೆಯುವ ಪೀಡನೆ (Stalking) ಅಥವಾ ಬೆದರಿಕೆಗಳನ್ನು ಸಮಾಜ ಸಣ್ಣ ವಿಷಯವೆಂದು ನಿರ್ಲಕ್ಷಿಸಬಾರದು. ಆರಂಭದಲ್ಲೇ ಇಂತಹ ನಡವಳಿಕೆಗಳನ್ನು ಖಂಡಿಸಿ, ಕಾನೂನಿನ ಚೌಕಟ್ಟಿಗೆ ತಂದಿದ್ದರೆ ಲಾವಣ್ಯಳಂತಹ ಎಷ್ಟೋ ಹೆಣ್ಣುಮಕ್ಕಳ ಜೀವ ಉಳಿಯುತ್ತಿತ್ತು. ಪ್ರೀತಿ ಎಂದರೆ ಜೀವ ಕೊಡುವುದೂ ಅಲ್ಲ, ಜೀವ ತೆಗೆಯುವುದೂ ಅಲ್ಲ.
ಪ್ರೀತಿ ಎಂಬ ಪದಕ್ಕೆ ತನ್ನದೇ ಆದ ಪವಿತ್ರತೆಯಿದೆ. ಪ್ರೀತಿ ತಾಯಿಯ ಮಮತೆಯಂತೆ ಸ್ವಾರ್ಥವಿಲ್ಲದ್ದು, ಸ್ನೇಹಿತನ /ಳ ಬೆಂಬಲದಂತೆ ಗಟ್ಟಿಯಾದದ್ದು. ”ಪ್ರೀತಿಸಿದ ವ್ಯಕ್ತಿಯನ್ನು ಕಳೆದುಕೊಂಡರೆ ಕಣ್ಣೀರು ಬರಬಹುದು, ಆದರೆ ಆ ವ್ಯಕ್ತಿಯ ಜೀವವನ್ನೇ ತೆಗೆಯುವ ಆಲೋಚನೆ ಬಂದರೆ ಅದು ಪ್ರೀತಿಯಲ್ಲ – ರಾಕ್ಷಸತ್ವ.”
ಇಂದು ಪ್ರೀತಿಯ ಹೆಸರಿನಲ್ಲಿ ಕತ್ತಿ, ಚಾಕು ಹಿಡಿದು ತಿರುಗುವ ಪ್ರತಿಯೊಬ್ಬ ವ್ಯಕ್ತಿಯೂ ಅರ್ಥಮಾಡಿಕೊಳ್ಳಬೇಕಾದ ವಿಷಯವೆಂದರೆ, ಕೊಲೆ ಮಾಡುವುದರಿಂದ ಪ್ರೀತಿ ಸಿಗುವುದಿಲ್ಲ. ಬಂಟ್ವಾಳದ ಘಟನೆಯಲ್ಲಿ ಲಾವಣ್ಯ ತನ್ನ ಜೀವವನ್ನು ಕಳೆದುಕೊಂಡಳು, ಕೊಲೆ ಮಾಡಿದ ಯುವಕ ತನ್ನ ಜೀವನವನ್ನು ಜೈಲಿನ ಕತ್ತಲಲ್ಲಿ ಕಳೆಯುವಂತಾಯಿತು. ಎರಡು ಕುಟುಂಬಗಳು ಶಾಶ್ವತವಾಗಿ ಕಣ್ಣೀರಿನ ಸಾಗರದಲ್ಲಿ ಮುಳುಗಿದವು. ಈ ಘಟನೆಯಿಂದ ಯಾರಿಗೆ ತಾನೆ ಲಾಭವಾಯಿತು?
ಬಿ.ಸಿ. ರೋಡ್‌ನ ಘಟನೆ ಕೇವಲ ಲಾವಣ್ಯಳ ಕೊಲೆಯಲ್ಲ, ಅದು ಪ್ರೀತಿ ಎಂಬ ಸುಂದರ ಭಾವನೆಗೆ ಎಸಗಿದ ದ್ರೋಹ. ಪ್ರೀತಿಗಾಗಿ ಕೊಲೆ ಮಾಡಿದೆ ಎಂದು ಹೇಳುವುದು ಪ್ರೀತಿಗೆ ಮಾಡುವ ದೊಡ್ಡ ಅಪಮಾನ.
ನಾವು ಸಮಾಜಿಕವಾಗಿ ಜಾಗೃತರಾಗಬೇಕಿದೆ. ಪ್ರೀತಿ ಎಂದರೆ ಬಂಧಿಸುವುದಲ್ಲ, ಮುಕ್ತವಾಗಿ ಹಾರಲು ಬಿಡುವುದು. ಪ್ರೀತಿ ಎಂದರೆ ಬಲವಂತವಾಗಿ ಪಡೆದುಕೊಳ್ಳುವುದಲ್ಲ, ಗೌರವದಿಂದ ಒಪ್ಪಿಕೊಳ್ಳುವುದು. ತಿರಸ್ಕಾರವನ್ನು ಗೌರವಿಸುವುದೂ ಕೂಡ ನಿಜವಾದ ಪ್ರೀತಿಯ ಲಕ್ಷಣ. ಇನ್ನು ಮುಂದಾದರೂ ‘ಪ್ರೀತಿಯ ಹೆಸರಿನಲ್ಲಿ ಕ್ರೌರ್ಯ’ ಮೆರೆಯುವ ವಿಕೃತ ಮನಸ್ಥಿತಿಗೆ ಅಂತ್ಯ ಹಾಡಬೇಕಿದೆ. ಇಲ್ಲವಾದರೆ ಲಾವಣ್ಯಳಂತಹ ಅನೇಕ ಮುಗ್ದ ಹೆಣ್ಣುಮಕ್ಕಳು ಪ್ರೀತಿಯ ಹೆಸರಿನಲ್ಲಿ ಬಲಿಯಾಗುತ್ತಲೇ ಇರುತ್ತಾರೆ.
ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಸೋಣ……
ಓ ಮುದ್ದು ಮನಸೇ…..
ಇಂತಿ ನಿಮ್ಮವ
- ಸಿದ್ದೇಶ್ ಸಿದ್ದನಮಠ – ಸಹಾಯಕ ಸಂಚಾರ ಅಧೀಕ್ಷಕರು, ಲೇಖಕರು, ದಾವಣಗೆರೆ.
