ಹರಿ ಕಥಾಮೃತಸಾರ (ಭಾಗ – ೧೬)

ದುರಾಸೆ ಅಹಂಕಾರದ ಕವಚ ಧರಿಸಿದರೆ ದಾಹ ಹಸಿವು ಅಪನಂಬಿಕೆ ಅನುಮಾನ ಈ ಉಪ ಅಲೆಗಳು ಹುಟ್ಟಿ ನಾನು ಎನ್ನುವ ಉನ್ಮತ್ತದ ಆವರಣ ಸುತ್ತಿಕೊಳ್ಳುತ್ತದೆ. ಭೂಮಿಯ ಮೇಲೆ ಜನಿಸಿದ ತಕ್ಷಣ ದ್ವಂದ್ವ ಸ್ವಭಾವದಲ್ಲಿ ಬೆಳೆಯಬೇಕಾಗುವದು ಸಹಜ. ಇದು ಲೇಖಕರಾದ ಸಂಧ್ಯಾ ಟಿ ಅವರು ಹರಿ ಕಥಾಮೃತಸಾರ ಮಹತ್ವವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ನಾಹಂ ಕರ್ತಾ ಹರಿ: ಕರ್ತಾ
ಶ್ರೀ ಗುರುಭ್ಯೋ ನಮಃ ಶ್ರೀಹರಿ ಓಂ.

ಹರಿಕಥಾಮೃತಸಾರದಲ್ಲಿ ದತ್ತ ಸ್ವಾತಂತ್ರ್ಯ ಎಂಬ ಹದಿನೇಳನೇ ಅಧ್ಯಾಯದಲ್ಲಿ ಒಂದು ವಿಶಿಷ್ಟವಾದ ದೃಷ್ಟಾಂತವನ್ನು ದಾಸರು ಕೊಟ್ಟಿದ್ದಾರೆ.

ಅವನಿಪ ಸ್ವಾಮಿತ್ವ ಧರ್ಮವಸ್ವವಶಮಾತ್ಯರಿಗಿತ್ತು ತಾ ಮ 
ತ್ತವರ ಮುಖದಲಿ ರಾಜಕಾರ್ಯವ ಮಾಡಿಸುವ ತೆರದಿ/
ಕವಿಭಿರೀಡಿತ ತನ್ನ ಕಳೆಗಳ ದಿವಿಜ ದಾನವ ಮಾನವರೊಳಿ_
ಟ್ಟವಿರತ ಗುಣತ್ರಯಜ ಕರ್ಮವ ಮಾಡಿ ಮಾಡಿಸುವ//

ಈ ನುಡಿ ತುಂಬಾ ಸ್ವಾರಸ್ಯಕರವಾಗಿದೆ. ಭೂಮಿಯಲ್ಲಿ ಜನಿಸಿದ ಮೇಲೆ ಜೀವಿಗಳಿಗೆ ಒಂದು ಇತಿಮಿತಿ ಎನ್ನುವ ಚೌಕಟ್ಟು ಇರುವುದು. ಅದು ದೇವತೆಗಳಲ್ಲಿಯೂ ಇರುವುದು. ಅದನ್ನು ಪ್ರಕೃತಿಯಲ್ಲಿ ಕಾಣಬಹುದು. ಬ್ರಹ್ಮ, ಆಕಾಶ, ಪರ್ಜನ್ಯ, ವರುಣ, ವಾಯು ಭೂಮಿ ಜಲ ಅಗ್ನಿ ಹೀಗೆ ಎಲ್ಲದಕ್ಕೂ ಒಬ್ಬೊಬ್ಬ ಅಭಿಮಾನಿ ದೇವತೆಗಳ ಸೃಷ್ಟಿ ಪರಮಾತ್ಮನ ಇಚ್ಛೆಯಿಂದಲೆ ಆಗಿರುವದು. ಇದನ್ನು ನಂಬಿದರೆ ನಂಬಬಹುದು ಇಲ್ಲಾ ನಂಬದೇಇರಬಹುದು ಅದು ಅವರವರ ಯೋಗ್ಯತೆ. ಇದರಿಂದ ಪರಮಾತ್ಮನಿಗೆ ಮತ್ತು ದೇವತೆಗಳಿಗೆ ಯಾವ ನಷ್ಟ ಇಲ್ಲ ಮಾನವರಿಗೆ ನಷ್ಟ. ಈ ರೀತಿಯ ಪ್ರಕೃತಿಯ ಸಹಾಯವನ್ನು ಶುದ್ಧ ಮನಸ್ಸಿನಿಂದ ನಮ್ಮ ನಮ್ಮ ಭೂಮಿಯನ್ನು ಸಮೃದ್ಧಿಯಾಗಿ ಇರಿಸಲು ನಾವು ಶಾಂತಿ ಸಮಾಧಾನದಿಂದ ಇರಬೇಕಾದರೆ ಧರ್ಮ ಎನ್ನುವ ಒಂದು ವಿಶಿಷ್ಟವಾದ ಕವಚ ಬೇಕು.

ಅಕ್ಷರಗಳೇ ಧರ್ಮದ ಮೂಲ. ನಮ್ಮ ಜೀವನದ ಮೂಲ ಉದ್ದೇಶವೇ ಧರ್ಮ. ಧರ್ಮವೆಂದರೆ ಜೀವನ ಸಾರ್ಥಕಗೊಳ್ಳಲು ಧನಾತ್ಮಕವಾದ ಕವಚ. ಸಾಧನಕೆ ಜ್ಞಾನ ಸಂಪತ್ತಿನ ಆಸಕ್ತಿಯ ಕವಚವನ್ನು ಆತ್ಮಕ್ಕೆ ಧರಿಸಿಕೊಂಡಾಗ ಸುಖ ದುಖಃದ ನಿಜ ಅರಿವು ತಿಳಿಯುವುದು. ಆಗ ಮಾನವನ ಉದ್ದೇಶ,ಮಾನವೀಯ ಮೌಲ್ಯಗಳನ್ನು ತಿಳಿಯುವ ಆಸಕ್ತಿ ಹುಟ್ಟುವುದು. ಈ ಸಾತ್ವಿಕ ಸ್ವಭಾವ ಹುಟ್ಟುವಿಕೆಯೆ ಧರ್ಮ.

ದುರಾಸೆ ಅಹಂಕಾರದ ಕವಚ ಧರಿಸಿದರೆ ದಾಹ ಹಸಿವು ಅಪನಂಬಿಕೆ ಅನುಮಾನ ಈ ಉಪ ಅಲೆಗಳು ಹುಟ್ಟಿ ನಾನು ಎನ್ನುವ ಉನ್ಮತ್ತದ ಆವರಣ ಸುತ್ತಿಕೊಳ್ಳುತ್ತದೆ. ಈ ಧರ್ಮ ಮುಂತಾದ ಆಚರಣೆಗಳಲ್ಲಿ ನನಗೆ ನಂಬಿಕೆಯಿಲ್ಲ ಎನ್ನುವ ದಾನವನ ಗುಣ ಸಂಖ್ಯೆ ಹೆಚ್ಚಾಗಿ ಅಜ್ಞಾನದ ಹೊದಿಕೆ ಬೀಳಲು ಪ್ರಾರಂಭವಾಗುದು. ಅಜ್ಞಾನದ ಅಂಧಕಾರದಲ್ಲಿ ಒಮ್ಮೆ ಸಿಲುಕಿದರೆ ಶಾಂತವಾಗಿ ಕುಳಿತು ವಿಚಾರಿಸಲು ನಮ್ಮ ಹತ್ತಿರ ಸಮಯ ಬರುವುದಿಲ್ಲ. ಪ್ರತ್ಯಕ್ಷ ಕಾಣುವ ದೃಶ್ಯದಲ್ಲಿ, ಉಣ್ಣುವ ಆಹಾರದಲ್ಲಿ, ಕೇಳುವ ಮಾತನಾಡುವ ಶಬ್ದಗಳಲ್ಲಿ ನಿಂತ ಸ್ಥಳದಲ್ಲೂ ಕೂಡ ನಾನು ತುಂಬಿಕೊಂಡು ನಮ್ಮ ಸ್ವರೂಪವನ್ನೇ ಮರೆಮಾಚಿಬಿಡುತ್ತದೆ.ಆಗ ನಮ್ಮಿಂದ ಪರಿವಾರಕ್ಕಾಗಲಿ ಪರಿಸರಕ್ಕಾಗಲಿ ಶಾಂತಿ ನೆಮ್ಮದಿ ಕೊಡುವದು ಅಸಾಧ್ಯ. ಇದು ಮಾನವನ ದಾನವನ ನಡುವೆ ಹೋರಾಡುತ್ತಿರುವ ಭವಸಾಗರದ ಗುಣತ್ರಯಗಳ ಬಂಧನ. ಭೂಮಿಯ ಮೇಲೆ ಜನಿಸಿದ ತಕ್ಷಣ ದ್ವಂದ್ವ ಸ್ವಭಾವದಲ್ಲಿ ಬೆಳೆಯಬೇಕಾಗುವದು ಸಹಜ. ಹುಟ್ಟು_ಸಾವು, ಹಗಲು _ಇರಳು, ಸುಖ _ದು:ಕೈ, ಜ್ಞಾನ – ಅಜ್ಞಾನ, ಕೊನೆಗೆ ಪರಿಹಾರಕ್ಕಾಗಿ ಪ್ರಶ್ನೆ – ಉತ್ತರ. ಹೀಗೆ ಎಲ್ಲ ದ್ವಂದ್ವ ಗಳಿಗೆ ಪರಿಹಾರವನ್ನು ಕೊಡುವ ದೋಷವರ್ಜಿತವಾದ ಸರ್ವರಿಗೂ ಆಧಾರವಾದ ಅಲೌಕಿಕ ಶಕ್ತಿ ಇದೆ ಎಂಬುದು ಸರ್ವ ಮಾನವ ಜೀವಿಗಳಿಗೆ ಗೊತ್ತು.ಆ ಶಕ್ತಿಯ ಮಹಿಮೆಯನ್ನು ಕಾಣುವ ಆಸಕ್ತಿಯೆ ಧರ್ಮ. ಆದರೆ ಅದೆಲ್ಲ ನೈಸರ್ಗಿಕ (ನ್ಯಾಚರಲ್) ಎಂಬ ಶಬ್ದದ ಹಾರಿಕೆಯ ಉತ್ತರ ನಾನು ಎನ್ನುವ ಅಜ್ಞಾನದ ಕವಚ.

ಕನಕದಾಸರು ತಮ್ಮ ಕೀರ್ತನೆಯಲ್ಲಿ (ಜಲದ ಬೊಬ್ಬುಳಿಯಂತೆ ಈ ದೇಹ ಇದು ಸ್ಥಿರವಲ್ಲ. ನೆಲೆಯನರಿತು ನೆನೆ ಕಂಡ್ಯ ಮನುಜ) ತಿಳಿಸಿದ್ದಾರೆ. ಜಗನ್ನಾಥದಾಸರು ಹರಿಕಥಾಮೃತಸಾರದಲ್ಲಿ ಸವಿನುಡಿ, ವೇದ ಪುರಾಣ ಶಾಸ್ತ್ರಗಳನ್ನು ಕಿವಿಗೊಟ್ಟು ಕೇಳುವುದು ಆಳವಾಗಿ ಅಧ್ಯಯನ ಮಾಡುವುದು ಮಾನವನ ಇಂದ್ರಿಯ. ಜನನಿ ಜನಕರಂತೆ ಜನಾರ್ದನನು ಸಲಹುತಿರಲು ಅದನ್ನು ಯೋಚಿಸದೆ ವಿಹಿತ ಧರ್ಮವ ಬಿಟ್ಟು ಕುಹಕಯುಕ್ತಿಯಿಂದ ಲೋಕಮಹಿತರನು ನಿಂದಿಸುವದು ದಾನವನ ಇಂದ್ರಿಯ ಎಂದು ಬಲ್ಲವರು ಹೇಳುವರೆಂದು ತಿಳಿಸಿರುವವರು. ಇದನ್ನು ಸುಮ್ಮನೆ ಓದುವದಲ್ಲ ಈ ಅಕ್ಷರಗಳ ಆಳವನ್ನು ಅರ್ಥೈಸಿಕೊಳ್ಳಬೇಕು. ಮೇಲೆ ಕೊಟ್ಟ ಪದ್ಯದಲ್ಲಿ ಅವನಿಪ ಸ್ವಾಮಿತ್ವ ಎಂದು ಹೇಳಿದ ದಾಸರ ನುಡಿಯಲ್ಲಿ ರಾಜನು ತನ್ನಲ್ಲಿರುವ ಸ್ವಾಮಿತ್ವ ಎಂಬ ಧರ್ಮವನ್ನು ತನ್ನ ಆಧೀನರಾದ ಮಂತ್ರಿಗಳಿಗೆ ನೀಡಿ ಅವರ ಮೂಲಕ ರಾಜಕಾರ್ಯವನ್ನು ಎಚ್ಚರದಿಂದ ಮಾಡಿಸಬೇಕು.

ಆ ಸ್ವಾಮಿತ್ವ ಎಂಬ ಧರ್ಮ ಇದು ಎಷ್ಟು ಮಹತ್ವದ್ದು ಎಲ್ಲರೂ ಯೋಚಿಸಬೇಕಾದ ವಿಷಯ ತಾನೆ!ಆದರೂ ಸ್ವಾಮಿತ್ವದಿಂದ ಇರುವ ರಾಜನಿಗೆ, ಮಂತ್ರಿಗಳಿಗೂ ಭಯ ಆತಂಕವೂ ಇರುವದು.ಆದರೆ ವೀತಭಯನಾದ ಕವಿಭಿರೀಡಿತ ಅಂದರೆ ಭಯವಿಲ್ಲದ ಹಾಗೂ ಜ್ಞಾನಿಗಳಿಂದ ವಂದಿತನಾದ ಪರಮಾತ್ಮನೊಬ್ಬನೆ ಸರ್ವ ಸ್ವತಂತ್ರನಾದ ಜಗತ್ಸ್ವಾಮಿಗೆ ಸರ್ವರೂ ಅವನ ಆಧೀನರು. ಅವನೆ ಸತ್ವ, ರಜ, ತಮ ಎಂಬ ಮೂರು ಗುಣಗಳಿಂದ ದೇವ, ದಾನವ ಮಾನವ ಎಂಬ ಮೂರು ರೀತಿಯ ಜೀವರಾಶಿಗಳಿಗೆ ಅವರವರ ಯೋಗ್ಯತೆಗೆ ಅನುಗುಣವಾಗಿ ಫಲವನ್ನು ಕೊಟ್ಟು ಸಜ್ಜನರಿಗೆ ಜ್ಞಾನ ಸಂಪತ್ತು ನೀಡಿ ಮೋಕ್ಷಾನಂದವನ್ನು ಕೊಟ್ಟು ಸಲಹುವನು.

ಧರ್ಮ ಸಾಧನೆ ಜಾತಿ ಕುಲಗಳಿಗೆ ಸಂಬಂಧ ಇಲ್ಲ. ಇದು ಮಾನವನು ಆಚರಿಸುವ ಮೌಲ್ಯದ ಕವಚ. ಪರಮಾತ್ಮನು ಜೀವರಲ್ಲಿ ಹಾಗೂ ಪ್ರಕೃತಿಯಲ್ಲಿ ಕಾಲ ಸಮಯ ಎನಿಸುವ ಆದ್ಯಂತದಲ್ಲಿ ತಾನು ನೆಲಿಸಿದ್ದು ಯಾವ ಶ್ರಮ ದೋಷವಿಲ್ಲದೆ ಕ್ರೀಡೆಯಂತೆ ಯಾರ ಸಹಾಯವಿಲ್ಲದೆ ಆಡುವನು. ಜೀವಿಗಳನ್ನು ತನ್ನ ಪರಿವಾರ ಸಹಿತದಿಂದ ಆಡಿಸುವನು. ಸಜ್ಜನರ ಪ್ರಮುಖ ಲಕ್ಷಣವೆಂದರೆ ಭಕ್ತಿ, ಜ್ಞಾನ, ಲೌಕಿಕ ವೈರಾಗ್ಯ, ವಿನಯ, ಪುರಾಣ ಶಾಸ್ತ್ರಗಳ ಅಧ್ಯಯನ ಮನನ, ಹರಿಯಲ್ಲಿ ನಿಷ್ಠೆ, ನಂಬಿಕೆ, ಸತ್ಯ, ಯಜ್ಞ ಧ್ಯಾನಗಳ ಚಿಂತನ ಇನ್ನು ಮಾನವರಿಂದ ತಪ್ಪು ಆಗುವುದು ಸಹಜ ಅದನ್ನು ಒಪ್ಪಿಕೊಂಡು ತಿದ್ದಿಕೊಳ್ಳುವುದು. ಮಾಡಿದ ಕರ್ಮಗಳನ್ನು ದೇವರಿಗೆ ಸಮರ್ಪಿಸುವದು. ದಾನವರ ಪ್ರಮುಖ ಲಕ್ಷಣವೆಂದರೆ ದುರಾಸೆ, ಕ್ರೋಧ, ಲೋಭ ಮದ ಮತ್ಸರ ಹಿಂಸೆ, ಅಸತ್ಯ, ಸೋಗು, ವಂಚನೆ, ಪರಮಾತ್ಮನ ರೂಪಗಳಲ್ಲಿ ಭೇದ ಚಿಂತನೆ,ಹರಿಯ ಭಕ್ತರಲ್ಲಿ ದ್ವೇಷ.

ಈ ರೀತಿ ಗುಣ ಸ್ವಭಾವಗಳಿರುವವು. ಅಕ್ಷರಗಳನ್ನು ನಾವು ಭಕ್ತಿಯಿಂದ ಶ್ರವಣ ಮನನ ಮಾಡುತ್ತಿದ್ದರೆ ಶಿವ ಪಾರ್ವತಿಯರ ಜ್ಞಾನ ಸಂಕೇತದ ಲಿಂಗವು ಜೀವಾತ್ಮನಲ್ಲಿ ನೆಲೆಸುತ್ತದೆ. ಅಲ್ಲಿ ಬಿಂಬನಾದ ಪರಮಾತ್ಮನ ಶಕ್ತಿಯ ಅನುಭವವಾಗುತ್ತದೆ. ನಂತರ ಶಿವನ ಆರಾಧನೆ ಮಾಡಲು ನಮಗೆ ಅಧಿಕಾರ ಬರುವದು. ಅಂದರೆ ಮಾಡಿದ ಶಿವನ ಜಪ ಧ್ಯಾನ ಯಾವುದೇ ರೀತಿಯ ಆರಾಧನೆಗೆ ಮಹತ್ವ ಬರುವುದು.ಶಿವನ ಅನುಗ್ರಹ ನಮ್ಮ ಯೋಗ್ಯತೆಗನುಸಾವಾಗಿ ಫಲ ಸಿಗುತ್ತದೆ. ಮಾನವನು ಯಾವುದೇ ಹುದ್ದೆಯಲ್ಲಿದ್ದರೂ ಮನಸ್ಸು ಏಕಾಗ್ರತೆ ಹೊಂದಿ ಶುದ್ಧ ಆಗಬೇಕಾದರೆ ಶಿವನ ಆರಾಧನೆ ಬೇಕು ಅವನ ಅನುಗ್ರಹವು ಬೇಕು.

ಬಾಯಿ ಚಪಲಕ್ಕೊ ಆಡಂಬರಕ್ಕೊ ಅಹಂಕಾರದಿಂದ ಶಿವನ ಪೂಜೆ ಜಪ ಮುಂತಾದವುಗಳನ್ನು ಅಲ್ಲದೆ ಅನ್ಯರಿಗೆ ತೊಂದರೆ ಕೊಡಲು ಮಾಡಿದರೆ ಮದ ಬಂದ ಆನೆಯು ಕಪಿತ್ಥ ಫಲ (ಬೆಳವಲ ಹಣ್ಣು) ಮೇಲೆ ಚೆನ್ನಾಗಿದ್ದರೂ ಒಳಗಿನ ಸ್ವಾದವನ್ನು ಒಂದು ಚಿಕ್ಕ ಕೀಟವು ತಿಂದು ಹಣ್ಣನ್ನು ಜೊಳ್ಳು ಮಾಡಿರುತ್ತದೆ.ಅದನ್ನು ತಿಂದತೆ ಅದರಿಂದ ಯಾವ ಸಾತ್ವಿಕ ಫಲ ದೊರಕುವುದಿಲ್ಲ.ಅಕ್ಷರಗಳನ್ನು ಅನುಸಂಧಾನ ಪೂರ್ವಕ ಭಕ್ತಿಯಿಂದ ಮಾಡಿದರೆ ಪರಮಾತ್ಮನ ಗುಣ ಮಹಿಮೆಯ ರಹಸ್ಯ ಪೂರ್ಣ ತಿಳಿಯದಿದ್ದರೂ ನಮ್ಮ ಬದುಕಿನಲ್ಲಿ ಶಾಂತಿ ನೆಮ್ಮದಿ ಪ್ರೀತಿಯ ಮಹತ್ವ ತಿಳಿಯುವದು.ಉನ್ನತಮಯವಾದ ಪರಮಾತ್ಮನ ರೂಪ ಪರಿವಾರಗಳನ್ನು ಕರ್ಮಸಾಧನೆಗಳಿಂದ ತಿಳಿಯುವದೆ ಧರ್ಮ.ಅಲ್ಲಿ ನಮ್ಮ ನಡೆ ನುಡಿಗಳಿಗೆ ಪರಮಾತ್ಮನ ಸಹಾಯ ಸಿಗುವುದು.ಅಲ್ಲದೆ ಪರಮಾತ್ಮನ ಅಂಗಗಳೆನಿಸಿದ ಬ್ರಹ್ಮ, ವಾಯು ಗರುಡ ಶೇಷ ರುದ್ರರ ಆಶೀರ್ವಾದದಿಂದ ಎಲ್ಲ ದೇವತೆಗಳ ಪರಿಚಯ ಅನುಗ್ರಹ ನಮ್ಮ ಶರೀರದಲ್ಲಿರುವ ಎಪ್ಪತ್ತೆರಡು ಸಾವಿರ ನರ ನಾಡಿಗಳ ಸಂಚಲನ ಹೀಗೆ ಮಾನವನ ಬದುಕಿನ ಉದ್ದೇಶ ತಿಳಿಯುವುದು ಧನಾತ್ಮಕ ಧರ್ಮದ ಕವಚದಿಂದ.ದಯವೇ ಧರ್ಮದ ಮೂಲ ಎಂದರೆ ದಯ ಎಂಬ ಅಕ್ಷರಗಳನ್ನು ಯೋಚಿಸಿ ಯಾರಿಗೆ? ಯಾವಾಗ? ಹೇಗೆ?ಸಮಯಾನುಸಾರ ಶಾಂತಿಯಿಂದ ಮಾಡುವುದು.ಅಕ್ಷರವೇ ಧರ್ಮದ ಮೂಲ ಆದರೆ ಅಕ್ಷರ ತತ್ವಗಳನರಿತು ಸಮಯಾನುಸಾರವಾಗಿ ಉಪಯೋಗಿಸುವದು ಧರ್ಮ.ಹಕ್ಕು, ಸ್ವಾತಂತ್ರ್ಯ ಎಂದು ಮತ್ತೊಬ್ಬರ ಕಡೆಗೆ ಬೆರಳು ತೋರಿಸುತ್ತ ತಮ್ಮ ನಂಬಿಕೆಗೆ ದ್ರೋಹ ಬಗೆಯುತ್ತಾ ಚಡಪಡಿಸುವದು ಅಧರ್ಮ ಎನಿಸುವುದು.

ಮಾನವನ ಲಕ್ಷಣ

ತಂದೆ ತಾಯಿ ಗುರುಗಳಲ್ಲಿ ಆದರ, ಬ್ರಹ್ಮ ವಿಷ್ಣು ಮಹೇಶ್ವರ ಈ ಮೂವರನ್ನು ಯಾವತ್ತೂ ನೆನಪಿನಲ್ಲಿಡುವದು, ವೃದ್ಧಾಪ್ಯ ಧರ್ಮ ಕಾನೂನು ಗೌರವಿಸುವುದು,ದೇಶ ಗೌರವ ರಾಷ್ಟ್ರಧ್ವಜ ಇವುಗಳಿಗೆ ಹೋರಾಡುವದು, ಶಬ್ದ ನಡೆ ನೀತಿಗಳಲ್ಲಿ ದಕ್ಷತೆಯಿರುವದು, ಇಂದ್ರಿಯ ಮನಸ್ಸು ಕ್ರೋಧ ನಮ್ಮ ವಶದಲ್ಲಿಟ್ಟುಕೊಳ್ಳುವದು. ಅದರಂತೆ ವಿಚಾರವಿಲ್ಲದ ವಿದ್ಯೆ ವ್ಯರ್ಥ, ದಕ್ಷತೆ ಇಲ್ಲದಿದ್ದರೆ ಅಧಿಕಾರ ವ್ಯರ್ಥ, ಯುಕ್ತಿಯಿಲ್ಲದ ಶಕ್ತಿ ವ್ಯರ್ಥ, ಭಕ್ತಿಯಿಲ್ಲದ ಪೂಜೆ ವ್ಯರ್ಥ, ಅದರಂತೆ ಪರಮಾತ್ಮನು ಕೊಟ್ಟ ಈ ಸಾಧನ ಶರೀರಕ್ಕೆ ಧರ್ಮದ ಕವಚ ಧರಿಸದಿದ್ದರೆ ಜೀವನ ವ್ಯರ್ಥ.

ಯಾರು ಧರ್ಮವನ್ನು ರಕ್ಷಿಸಲು ಪ್ರಯತ್ನಿಸವರೋ ಅವರನ್ನು ಆ ಧರ್ಮವೆ ರಕ್ಷಿಸುತ್ತದೆ ಎಂದು ಭಗವದ್ಗೀತೆಯಲ್ಲಿ ಬಂದಿದೆ.ಎಲ್ಲರಿಗೂ ಶ್ರೀ ಕೃಷ್ಣನ ಅನುಗ್ರಹ ಸಿಗಲಿ ಎಂದು ಪ್ರಾರ್ಥಿಸಿ ಈ ಸಂಚಿಕೆಯನ್ನು ಮುಗಿಸುತ್ತೇನೆ.

ಹರಿ ಸರ್ವೋತ್ತಮ ವಾಯು ಜೀವೋತ್ತಮ ಹರೇ ಶ್ರೀನಿವಾಸ.

ತನು ಮನವೆರಡು ನಿನ್ನದೊ ರಂಗಾ
ಅನುದಿನದ ಸಾಧನ ನಿನ್ನ ಅಂಗ
ಕೃಷ್ಣಾ ನನಗೆ ನೀಡು ಸತ್ಸಂಗ

ಮಾಡು ನೀ ಮನವ ಶಿವಾಲಯ
ಬುದ್ಧಿ ಆಗಲಿ ಬ್ರಹ್ಮಾಲಯ
ಭಕ್ತಿ ತುಂಬಲಿ ವಾಯು ನಿಲಯ

ಯೋಚನೆ ಸ್ಥಿತಿ ಗರುಡಾಲಯ
ಕರ್ಮ ಫಲವು ಶೇಷಾಲಯ
ಇದುವೆ ಪಾಪವಿಲ್ಲದ ಪುಣ್ಯಾಲಯ

ಮಾತರಿಶ್ವಾಂತರ್ಗತ
ಶ್ರೀಹರಿ ಕರುಣಿಸು ನೀ ಧರ್ಮದದಾರಿ
ಸಲಹು ದೇವಾ ಮುಕ್ತಿ ತೋರಿ


ಹರಿ ಕಥಾಮೃತಸಾರ ಹಿಂದಿನ ಸಂಚಿಕೆಗಳು: 


  • ಸಂಧ್ಯಾ ಟಿ – ಲೇಖಕರು, ಕವಿಗಳು, ಬೆಂಗಳೂರು.

Leave a Reply

Home
Search
Menu
Recent
About
×