“ಒಂಟಿ ಹಕ್ಕಿಯ ಹಾಡು ಪಾಡು”ಕವನ

ಬಸವಳಿದ ಹಕ್ಕಿಗಳಲಿ ಇನಿಯನನೇ ಅರಸುತ್ತಿದೆ…ಮಡಿಲಲ್ಲಿ ನಕ್ಕಾಗ ಜೋಗುಳವ ಹಾಡಿದ್ದು… ಕವಿ ಅರುಣಾ.ಜಿ.ಭಟ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಒಂಟಿ ಹಕ್ಕಿಯೊಂದು
ಹಾಡುತ್ತಿದೆ ಸಂಜೆಯಲಿ
ಮನದ ಭಾವಗಳನು
ಬೆರೆಸುತ್ತಿದೆ ರಾಗದಲಿ.

ಸೋತ ರೆಕ್ಕೆಗಳನು
ಕುಕ್ಕುತ್ತಿದೆ ಕೊಕ್ಕಿನಲಿ
ಕಳೆದ ಕಾಲಗಳನು
ಸ್ಮರಿಸುತ್ತಿದೆ ಮನದಲಿ.

ಬಾನಿನ ಅಂಚಿನಲಿ
ಉಲ್ಲಾಸದಲಿ ತೇಲಿದ್ದು
ಇನಿಯನ ಸನಿಹದಲಿ
ಒಲವಿನಲಿ ಹಾಡಿದ್ದು

ಇಬ್ಬರು ಜೊತೆಯಲ್ಲಿ
ಬುವಿಯಂದ ನೋಡಿದ್ದು
ಚೆಲುವನ್ನೇ ಕಂಡಲ್ಲಿ
ಇಹವನ್ನೇ ಮರೆತದ್ದು

ಒಡಲ ಕುಡಿಗಳಿಗೆ
ಮನೆಯೊಂದ ಕಟ್ಟಿದ್ದು
ಮಡಿಲಲ್ಲಿ ನಕ್ಕಾಗ
ಜೋಗುಳವ ಹಾಡಿದ್ದು.

ಕನಸಂತೆ ಕಳೆದಿಹುದು
ಮರಳದ ದಿನಗಳು
ಅರಸುತ್ತಿದೆ ಕಂಗಳು
ಎಲ್ಲಿಹರೋ ಮಕ್ಕಳು

ಬಸವಳಿದ ಹಕ್ಕಿಗಳಲಿ
ಇನಿಯನನೇ ಅರಸುತ್ತಿದೆ
ಉಲ್ಲಾಸದ ಬಳಗದಲಿ
ಮಕ್ಕಳನೇ ಕಾಣುತ್ತಿದೆ.

ಸುರಿದ ಕಂಬನಿಯಲ್ಲಿ
ಒದ್ದೆಯಾಗಿದೆ ತರಗೆಲೆ
ನೋವಿನ ಗೀತೆಯನ್ನು
ಹಾಡುತ್ತಿದೆ ಮರೆಯಲ್ಲೆ.


  • ಅರುಣಾ.ಜಿ.ಭಟ್ – ಬದಿಕೋಡಿ.

Leave a Reply

Home
Search
Menu
Recent
About
×