ಕವಿ ಮತ್ತು ಸಂಸ್ಕೃತಿ ಚಿಂತಕರಾದ ವಡ್ಡಗೆರೆ ನಾಗರಾಜಯ್ಯನವರು ಸಂಗ್ರಹಿಸಿರುವ ಜನಪದ ಸಾಹಿತ್ಯವೆಲ್ಲ ಜನಪರ ಸಾಹಿತ್ಯವಲ್ಲ “ವಡ್ಡಗೆರೆ ನಾಗಮ್ಮ; ಮಹಾಸತಿ ಕಾವ್ಯ” ಕೃತಿಯ ಕುರಿತು ಡಾ. ರಂಗನಾಥ ಕಂಟನಕುಂಟೆ ಅವರು ವಿಮರ್ಶೆ ಬರೆದಿದ್ದಾರೆ, ತಪ್ಪದೆ ಓದಿ…
ಪುಸ್ತಕ : ವಡ್ಡಗೆರೆ ನಾಗಮ್ಮ
ಲೇಖಕರು : ಡಾ.ವಡ್ಡಗೆರೆ ನಾಗರಾಜಯ್ಯ
ಕರ್ನಾಟಕದ ಜಾನಪದ ಸಾಹಿತ್ಯವನ್ನು ಸಂಗ್ರಹಿಸುವ ಮತ್ತು ಅದನ್ನು ಬರಹ ರೂಪಕ್ಕಿಳಿಸುವ ಕಾರ್ಯ ಶತಮಾನದಷ್ಟು ಹಳೆಯದು. ವಸಾಹತುಶಾಹಿಯ ದೇಶಭಾಷೆಗಳ ಅಧ್ಯಯನ ಯೋಜನೆಗಳ ಜತೆಗೆ ಇದು ಆರಂಭವಾದುದೆಂದು ಹೇಳಬಹುದು. ಈ ಕಾರ್ಯ ನಿಡುಗಾಲ ಮುಂದುವರೆದಿದ್ದು ಅದು ಅಧ್ಯಯನದ ವಿಷಯವಾಗಿ, ಒಂದು ಶಾಸ್ತ್ರವಾಗಿ ಬೆಳೆದಿದೆ. ಜಾನಪದ ಸಾಹಿತ್ಯದ ಅಧ್ಯಯನಕ್ಕೆ ವಿಶ್ವವಿದ್ಯಾಲಯಗಳಲ್ಲಿ ಪ್ರತ್ಯೇಕ ವಿಭಾಗಗಳು, ಹಲವು ಖಾಸಗಿ ಸಂಸ್ಥೆಗಳು, ಜಾನಪದ ಅಧ್ಯಯನ ಪದವಿಗಳು ಇತ್ಯಾದಿ ಆರಂಭವಾಗಿ ಮುನ್ನಡೆದುಕೊಂಡು ಬಂದಿವೆ. ಜಾನಪದ ಅಕಾಡೆಮಿಯೂ ಸ್ಥಾಪನೆಯಾಗಿದೆ. ಅನೇಕ ವಿದ್ವಾಂಸರು ಈ ಕ್ಷೇತ್ರದಲ್ಲಿ ತೀವ್ರ ಆಸಕ್ತಿ ಮತ್ತು ಶ್ರದ್ಧೆಗಳಿಂದ ಕಾರ್ಯನಿರ್ವಹಿಸಿದ್ದಾರೆ. ಇದು ಸಾಲದೆಂಬಂತೆ, ಈ ಸಾಹಿತ್ಯದ ಅಧ್ಯಯನಕ್ಕೆ ಇಂದು ಪ್ರತ್ಯೇಕ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಪ್ರಯತ್ನಗಳೂ ಚಾಲನೆ ಪಡೆದುಕೊಂಡಿವೆ. ವಿಶ್ವವಿದ್ಯಾಲಯ ಸ್ಥಾಪನೆಗೆ ಪೂರಕವಾಗಿ ಕಾಠ್ಯ ನಿರ್ವಹಿಸಲು ವಿಶೇಷಾಧಿಕಾರಿಯನ್ನು ಸರ್ಕಾರ ನೇಮಿಸಿದೆ. ಈ ವಿಶ್ವವಿದ್ಯಾಲಯದ ಮುಂದಿನ ಯೋಜನೆಗಳು ಹೇಗಿರುತ್ತವೆ? ಈ ಎಲ್ಲ ಪ್ರಯತ್ನಗಳಿಂದ ಏನನ್ನು ಅಧ್ಯಯನ ಮಾಡಲಾಗುತ್ತದೆ? ಅಧ್ಯಯನದ ಕೇಂದ್ರ ನೆಲೆ ಯಾವುದು? ಎಷ್ಟು ಕಾಲ ಈ ಅಧ್ಯಯನವನ್ನು ಮಾಡಲಾಗುತ್ತದೆ? ಎಲ್ಲಕ್ಕಿಂತ ಮಿಗಿಲಾಗಿ ಈ ಅಧ್ಯಯನದಿಂದ ಯಾವ ಕಸುವನ್ನು ಹೆಕ್ಕಿ ತೆಗೆದು ಜನರ ಇಂದಿನ ಮತ್ತು ಮುಂದಿನ ಬದುಕಿಗೆ ಕಸಿಗೊಳಿಸಲಾಗುತ್ತದೆ? ಎಂಬ ಕುತೂಹಲದ ನಿರೀಕ್ಷೆಗಳಿವೆ.
ಯಾಕೆ ಈ ಕುತೂಹಲ ಇರಬೇಕೆಂದರೆ, ಈವರೆಗಿನ ಜನಪದ ಸಾಹಿತ್ಯದ ಅಧ್ಯಯನಗಳು ಸಂಗ್ರಹದ ಹಂತವನ್ನು ದಾಟಿ ವಿಶ್ಲೇಷಣೆಯ ಹಂತವನ್ನು ಮುಟ್ಟಿವೆ. ಆದರೆ ಈ ವಿಶ್ಲೇಷಣೆಯ ಹಂತದಲ್ಲಿ ಜನಪದ ಸಾಹಿತ್ಯವನ್ನು ವ್ಯಾಖ್ಯಾನಿಸುತ್ತಿರುವ ರೀತಿ ಪ್ರಶ್ನಾತೀತವಾಗಿ ಉಳಿದಿಲ್ಲ. ಎಷ್ಟೆಲ್ಲಾ ವಿಶ್ಲೇಷಣೆಗಳು ನಡೆದರೂ ಇದು ಸಮಸ್ಯಾತ್ಮಕವಾಗಿದೆಯೆಂದೇ ಹೇಳಬೇಕು. ಸಮಕಾಲೀನ ಸಂದರ್ಭದಲ್ಲಿ ಸೃಷ್ಟಿಯಾಗಿರುವ ಅಲ್ಲೋಲ ಕಲ್ಲೋಲವಾದ ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ವಿದ್ಯಮಾನವು ಆಸಕ್ತ ಕೆಲವರನ್ನು ಆತಂಕಕ್ಕೆ ಗುರಿಮಾಡಿದೆ. ಅದರಲ್ಲಿಯೂ ಬೌದ್ಧಿಕ ಜಗತ್ತಿನೊಳಗಿನ ಒಂದು ಧಾರೆಯನ್ನು ಇದು ತೀವ್ರವಾಗಿ ಕಾಡುತ್ತ ವಿಷಾದದಲ್ಲಿ ಮುಳುಗಿಸಿದಂತಿದೆ. ಈ ಆತಂಕಿತ ವಲಯ ಸಮಕಾಲೀನ ಸಮಾಜದ ಎಲ್ಲ ಸಮಸ್ಯೆಗಳಿಗೆ ಆಧುನಿಕತೆಯ ಬಿಕ್ಕಟ್ಟುಗಳಿಗೆ ಪರಿಹಾರ ನಮ್ಮ ಪರಂಪರೆಯಲ್ಲಿದೆ; ಜಾನಪದ ಸಾಹಿತ್ಯದಲ್ಲಿದೆ; ಇಂತಹ ‘ಔಷಧಿರೂಪಿ’ಯಾದ ಸಾಹಿತ್ಯವನ್ನು ಆಧುನಿಕತೆ, ನಗರೀಕರಣ ಮತ್ತು ಕೈಗಾರಿಕೀಕರಣಗಳು ನಾಶ ಮಾಡುತ್ತಿವೆ ಎಂಬ ಅಭಿಪ್ರಾಯವನ್ನು ಪ್ರಬಲವಾಗಿ ಮಂಡಿಸುತ್ತಿದೆ. ನಶಿಸಿ ಹೋಗುತ್ತಿರುವ ಪಾರಂಪರಿಕ ಕಲೆಯನ್ನು, ಸಾಹಿತ್ಯವನ್ನು, ಜ್ಞಾನವನ್ನು ಸಂರಕ್ಷಿಸಿಕೊಳ್ಳಬೇಕಿದೆ ಎಂದು ಈ ವಲಯ ವಾದಿಸುತ್ತಿದೆ. ಮೇಲ್ನೋಟಕ್ಕೆ ಇದು ಸರಿಯೆನಿಸುತ್ತದೆ. ಆದರೆ ಇದು ಸಾಧ್ಯವೇ? ಸಂರಕ್ಷಿಸಿಕೊಳ್ಳುವುದಿದ್ದರೆ ಅದರ ದಾರಿಗಳೇನು? ಯಾವ ಯಾವ ರೂಪದಲ್ಲಿ ಅದನ್ನು ರಕ್ಷಿಸಿಕೊಳ್ಳಬಹುದು? ಸಂಗ್ರಹ ಕಾರ್ಯವೇ ಸಂರಕ್ಷಣೆಯೇ? ಎಂಬುದನ್ನು ಖಚಿಗೊಳಿಸಿಕೊಳ್ಳಬೇಕಿದೆ. ಹಾಗೆ ಖಚಿತಗೊಳಿಸಿಕೊಂಡರೆ ಮಾತ್ರ ನಮ್ಮ ಅಧ್ಯಯನದೊಳಗಿನ ಆತಂಕ ವಿಷಾದಗಳು ತಗ್ಗಿ ವಸ್ತುನಿಷ್ಠವಾದ ಅಧ್ಯಯನ ಕ್ರಮವೊಂದು ರೂಪುಗೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ನಮ್ಮ ಅಧ್ಯಯನವನ್ನು ಕಾಡುವ ಆತಂಕ ವಿಷಾದಗಳು ನಿರಂತರವಾಗಿ ಬಾಧಿಸುತ್ತಲೇ ಇರುತ್ತವೆ. ಇಂತಹ ಬಾಧೆಯಿಂದ ಸಾಧಿಸುವುದಾದರೂ ಏನನ್ನು? ಈ ಬಾಧೆಯಿಂದ ಬಿಡುಗಡೆ ಬೇಡವೇ?.

ಕವಿ ಮತ್ತು ಸಂಸ್ಕೃತಿ ಚಿಂತಕರಾದ ವಡ್ಡಗೆರೆ ನಾಗರಾಜಯ್ಯನವರು ಸಂಗ್ರಹಿಸಿರುವ “ವಡ್ಡಗೆರೆ ನಾಗಮ್ಮ; ಮಹಾಸತಿ ಕಾವ್ಯ” ಎಂಬ ಕೃತಿಯನ್ನು ಈ ಹಿನ್ನೆಲೆಯಲ್ಲಿ ನಾವು ಓದಬೇಕಿದೆ, ವಿಶ್ಲೇಷಿಸಬೇಕಿದೆ. ಈ ಕೃತಿಯ ಸಂಗ್ರಹದ ಹಿಂದೆ ಇರುವ ಗ್ರಹಿಕೆಯಲ್ಲಿಯೂ ಮೇಲೆ ಹೇಳಿದ ಆತಂಕ ಮತ್ತು ವಿಷಾದಗಳೇ ಕಾಡಿದಂತಿವೆ. ಅವರು ತಮ್ಮ ಪ್ರಸ್ತಾವನೆಯಲ್ಲಿ ಇದನ್ನು ಹೇಳಿಕೊಂಡಿರುವುದನ್ನು ನಾವಿಲ್ಲಿ ಗಮನಿಸಬಹುದು. “ಇತ್ತೀಚಿನ ಜನರ ಆಸಕ್ತಿಗಳು ಜನಪದ ಸಾಹಿತ್ಯಕ್ಕೆ ವಿಮುಖವಾಗಿ ಬೇರೆಡೆಗೆ ತಿರುಗಿ ಸರಕು ಸಂಸ್ಕೃತಿಯ ಮೋಹಜಾಲದಲ್ಲಿ ಸಿಲುಕಿ ಜನಪದ ಸಾಹಿತ್ಯವನ್ನು ಕಡೆಗಣನೆಗೆ ಈಡುಮಾಡಿರುವುದು ಅತ್ಯಂತ ವಿಷಾದನೀಯ ಸಂಗತಿ.” ಇಂತಹ ಆತಂಕಗಳಿಗೆ, ವಿಷಾದಗಳಿಗೆ ಕಾರಣಗಳೇನು? ಜನಪದ ಸಾಹಿತ್ಯದಲ್ಲಿ ಜನಪರವಾದ ಜೀವನ ಮೌಲ್ಯಗಳು ಮುಪ್ಪುರಿಗೊಂಡಿರುತ್ತವೆ ಎಂಬ ತೀವ್ರವಾದ ಗ್ರಹಿಕೆ ಇದರ ಹಿಂದೆ ಇರುವಂತೆ ಕಾಣುತ್ತದೆ. ಇಂತಹ ಗ್ರಹಿಕೆ ನಮ್ಮ ಅನೇಕ ಸಂಸ್ಕೃತಿ ಚಿಂತಕರು, ಜಾನಪದ ಅಧ್ಯಯನಕಾರರಲ್ಲಿದೆ. ಆದರೆ ಎಲ್ಲ ಸಂದರ್ಭದಲ್ಲಿ, ಎಲ್ಲ ಜನಪದ ಸಾಹಿತ್ಯದಲ್ಲಿ ಇಂತಹ ಮೌಲ್ಯಗಳಿರುತ್ತವೆಯೇ? ಜನಪದ ಸಾಹಿತ್ಯವೆಲ್ಲ ಜನಪರವಾದ ಸಾಹಿತ್ಯ ಎನ್ನಲು ಸಾಧ್ಯವೇ?
ಈ ಎಚ್ಚರದಿಂದಲೇ ಈ ಕಾವ್ಯವನ್ನು ಚರ್ಚಿಸಬೇಕಿದೆ. ವಡ್ಡಗೆರೆ ನಾಗರಾಜಯ್ಯನವರು ತಮ್ಮ ಊರಿನ ಜನಪದ ಕವಿಗಳು, ಗಾಯಕಿಯರು ಆಗಿರುವ ತಮ್ಮ ತಾಯಿ ವಡ್ಡಗೆರೆ ಕದರಮ್ಮ ಮತ್ತು ಇತರರ ಮೇಲಿನ ಪ್ರೀತಿ; ಜನಪದ ಸಾಹಿತ್ಯದ ಮೇಲಿಟ್ಟಿರುವ ಕಾಳಜಿಯಿಂದ ಬಹಳ ಅಚ್ಚುಕಟ್ಟಾಗಿ ಕಾವ್ಯವನ್ನು ಸಂಪಾದಿಸಿದ್ದಾರೆ. ಸಂಪಾದನೆಯಲ್ಲಿ ಶಿಸ್ತು ಎದ್ದು ಕಾಣುತ್ತದೆ. ಕೇವಲ ಕಾವ್ಯ ಸಂಗ್ರಹಿಸಿ ಓದುಗರಿಗೆ ನೀಡಿ ತಮ್ಮ ಕಾವ್ಯವನ್ನು ನಿಲ್ಲಿಸದೆ ಓದುಗರ, ಅಧ್ಯಯನಕಾರರ ಕೈಸೇರುವ ಕೃತಿಯನ್ನು ಅರ್ಥೈಸಿಕೊಳ್ಳಲು ಪೂರಕವಾಗಿ ಬೇಕಾಗುವ ವೈವಿಧ್ಯಮಯವಾದ ಮಾಹಿತಿಯನ್ನು ಹಾಗೂ ನಿಡಿದಾದ ಪ್ರಸ್ತಾವನೆಯನ್ನು ಬರೆಯುವ ಮೂಲಕ ಅಧ್ಯಯನದ ಶಿಸ್ತನ್ನು ಮೆರೆದಿದ್ದಾರೆ. ಓದುಗರ ಶ್ರಮವನ್ನು, ಕಾರ್ಯವನ್ನು ಸುಲಭವಾಗಿಸಿದ್ದಾರೆ. ಅಲ್ಲದೆ ಅದನ್ನು ಚಾರಿತ್ರಿಕ ಮತ್ತು ಸಾಮಾಜಿಕ ನೆಲೆಗಳಲ್ಲಿ ಅರಿಯಬಹುದಾದ ಸಾಧ್ಯತೆಗಳನ್ನು ಸೂಚಿಸಿದ್ದಾರೆ.
ಈ ಪೂರಕವಾದ ಮಾಹಿತಿಯೂ, ಕಾವ್ಯವನ್ನು ಒಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಚೌಕಟ್ಟಿನಲ್ಲಿಡುವುದರ ಮೂಲಕ ಅಧ್ಯಯನದ ಜವಾಬ್ದಾರಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಇಷ್ಟೆಲ್ಲ ಜವಾಬ್ದಾರಿಯನ್ನು ನಿರ್ವಹಿಸುವ ನಡುವೆ ತಾವು ಮಾಡುತ್ತಿರುವ ಕಾರ್ಯದ ಮಹತ್ವವೇನು? ಮತ್ತು ಅದರ ಸಮಸ್ಯೆಗಳೇನು ಎಂಬುದನ್ನು ಅವರು ಚನ್ನಾಗಿ ಬಲ್ಲರು. ಈ ಎರಡು ಸಾಧ್ಯತೆಗಳನ್ನು ಅವರು ಅರಿತಿರುವ ಕಾರಣ ಜನಪದ ಸಾಹಿತ್ಯವೆಲ್ಲ ಜನಪರವಾಗಿ ಉಳಿದಿಲ್ಲ, ಎಂಬ ಎಚ್ಚರಿಕೆಯೂ ಅವರಿಗಿದೆ. ಆದ್ದರಿಂದಲೇ ಅವರ ಈ ಕಾವ್ಯಸಂಗ್ರಹ ಮುಕ್ತವಾದ ಮತ್ತು ಆತ್ಮವಿಮರ್ಶೆಯಿಂದ ಕೂಡಿರಲು ಸಾಧ್ಯವಾಗಿದೆ. ಅದರೊಟ್ಟಿಗಿನ ನಮ್ಮ ಚರ್ಚೆಯನ್ನು ಸಂಘರ್ಷವನ್ನು ಮುಕ್ತವಾಗಿ ನಡೆಸಲು ಸಾಧ್ಯವಾಗಿದೆ. ಇಂತಹ ಮುಕ್ತವಾದ ಮತ್ತು ನಿಷ್ಟುರವಾದ ಮನಸ್ಥಿತಿಯನ್ನು ನಮ್ಮ ಅನೇಕ ಜಾನಪದ ಅಧ್ಯಯನಗಳು ಹೊಂದಿಲ್ಲದಿರುವುದು ಒಂದು ಸಮಸ್ಯೆ. ಇದರಿಂದ ವಿಶ್ಲೇಷಣೆಗಳು ಚೂಪಾಗಲು, ಇನ್ನೊಂದು ಹೆಜ್ಜೆ ಮುಂದುವರೆಯಲು ಸಾಧ್ಯವಾಗುತ್ತಿಲ್ಲ ಎನ್ನಿಸುತ್ತದೆ.

ಈ ದೃಷ್ಟಿಯಿಂದ ನೋಡಿದಾಗ ಪ್ರಸ್ತುತ ಕೃತಿ ಅಧ್ಯಯನದ ಆಸಕ್ತಿಗೆ ಸಂಗ್ರಹವಾಗಬೇಕಿದ್ದ ಕೃತಿ. ಅಂತಹ ಕಾವ್ಯವನ್ನು ನೆರವೇರಿಸಿ ಕನ್ನಡ ಸಂಸ್ಕೃತಿಗೆ ಮತ್ತೊಂದು ಸಮರ್ಥ ಆಕರವೊಂದನ್ನು ಒದಗಿಸಿದ್ದಾರೆ. ಆದರೆ ಇದರಿಂದ ನಮ್ಮ ಕಾಲದ ಪ್ರಜಾತಾಂತ್ರಿಕ ಸಮಾಜಕ್ಕೆ ಬೇಕಾದ ಯಾವುದೋ ಒಂದು ಮೌಲ್ಯವನ್ನು ಹೆಕ್ಕಿ ತೆಗೆಯಬಹುದು ಎಂದು ಅನ್ನಿಸುವುದಿಲ್ಲ. ಹಾಗೆ ಹೇಳಲು ಯಾರೂ ಅಂಜಿಕೊಳ್ಳಬೇಕಿಲ್ಲ. ಕೃತಿಯ ಹೆಸರೇ ಸೂಚಿಸುವಂತೆ ಇದು ಮಹಾಸತಿ ಕಾವ್ಯ. ಇದರಲ್ಲಿ ಸೂಚಿತವಾಗುವ ಕೆಲವು ಅಂತರ್ಗತ ವಿಚಾರಗಳು ಎಷ್ಟು ತಣ್ಣಗೆ ಹೆಣ್ಣಿನ ಬಲಿದಾನವನ್ನು ಬೇಡುತ್ತವೆ ಎಂಬುದನ್ನು ಗಮನಿಸಿದಾಗ ಭೀತಿ ಹುಟ್ಟಿಸುತ್ತದೆ. ನಮ್ಮ ಪರಂಪರೆಯಲ್ಲಿದ್ದ ಭೀಕರ ಪ್ರಸಂಗಗಳು ಬೆಚ್ಚಿಬೀಳಿಸುತ್ತವೆ. ಈ ಕೃತಿಯಿಂದ ಇಲ್ಲಿ ಉಲ್ಲೇಖಿಸಬಹುದಾದ ಒಂದು ಪ್ರಸಂಗವಿದೆ. ಗಂಡ ನಾಗಣ್ಣ ಮಡಿದಾಗ ಈರನಾಗಮ್ಮ ಕೆಂಡಕೊಂಡವಾಗುವ ಮಾತನ್ನು ಪ್ರಸ್ತಾಪಿಸುತ್ತಾಳೆ. ಆಗ ಅವಳ ಅತ್ತೆ ಮಾವ ಪ್ರತಿಕ್ರಿಯಿಸುವುದನ್ನು ನಾವಿಲ್ಲಿ ಗಮನಿಸಬೇಕು.
“ಸತ್ತರು ಸಾಯಾಲಿ ಮತ್ತಿರಮ್ಮ ನಾಗು ಅವುರಾಳೋ ರಾಜ್ಯಾವೆ ನಿನದಮ್ಮ| ನೀನು ಆಳಿಕೊಂಡು ಮತ್ತಿರಮ್ಮಾ ನಾಗು ಸೊಸಿಮುದ್ದು ||
ಎಂದು ಅತ್ತೆ-ಮಾವ ಪ್ರತಿಕ್ರಿಯಿಸುತ್ತಾರೆ. ಹಾಗೆಯೇ ಅವರ ಅಪ್ಪ-ಅಮ್ಮಂದಿರು ಕೂಡ ‘ಕೊಂಡಾದ ಗೊಡವೆ ನಿನಗ್ಯಾಕೆ, ತುಪ್ಪಾನ್ನವನುಂಡು ಸುಖದಿಂದಿರು’ ಎಂದು ಸಮಾಧಾನ ಹೇಳುತ್ತಾರೆ. ಈ ಸಂದರ್ಭ ಅವರ ಮಾತನ್ನು ಮೀರಿ ಈರನಾಗಮ್ಮನೇ ಕೆಂಡಕೊಂಡವಾಗಲು ಬಯಸುತ್ತಾಳೆ ಎಂಬ ಭಾವವನ್ನು ಮೂಡಿಸಲು ಬಯಸುತ್ತದೆ. ಆ ಮೂಲಕ ಆಕೆಯ ‘ವೀರತ್ವ’ವನ್ನು ಬಿಂಬಿಸಲು ಕಾವ್ಯ ಪ್ರಯತ್ನಿಸುತ್ತದೆ. ಅವರ ಈ ಸಲಹೆ ಸಾಂತ್ವನಗಳು ಪ್ರಾಮಾಣಿಕವೇ? ಆಕೆಯಲ್ಲಿ ನಿಜವಾಗಿಯೂ ವೀರತ್ವವಿತ್ತೇ? ಇದು ನಿಜವಾಗಿರಲಿಲ್ಲ ಎಂಬುದನ್ನು ಕಾವ್ಯವೇ ಸಾಕ್ಷೀಕರಿಸುತ್ತದೆ. ಈರನಾಗಮ್ಮನಂತಹ ಹೆಣ್ಣುಗಳ ಸುತ್ತ ಸಮಾಜ ಹೆಣೆದಿರುವ ನಿರ್ಬಂಧಗಳು ಅವಳನ್ನು ಬಲವಂತವಾಗಿ ಕೆಂಡಕೊಂಡಕ್ಕೆ ತಳ್ಳುತ್ತಿದ್ದವು ಎಂಬುದನ್ನು ಬಿಚ್ಚಿಡುತ್ತವೆ.
ಊಳಿಗಮಾನ್ಯಶಾಹಿ ಸಮಾಜದ ಕೌಟುಂಬಿಕ, ವೈವಾಹಿಕ, ಜಾತಿ ಮತ್ತು ಮಹಿಳಾ ವಿರೋಧಿ ಮೌಲ್ಯಗಳು ಜನಪದರಲ್ಲಿ ಹೇಗೆ ಬೇರುಬಿಟ್ಟಿವೆ ಎಂಬುದರ ಸಂಕೇತವಾಗಿ ಈ ಕಾವ್ಯವಿದೆ. ಇಂತಹ ಹಲವು ಮಹಿಳಾ ವಿರೋಧಿ ಮೌಲ್ಯಗಳುಳ್ಳ ತ್ರಿಪದಿಗಳನ್ನು ನಾವು ಉದಾಹರಿಸಬಹುದು.
(ಬಾಲಕರಿಲ್ಲದ ಬಾಲಿದ್ಯಾತರ ಜನ್ಮ/ ಬಾಡಿಗಿ ಎತ್ತು ದುಡಿದಂಗ/ ಬಾಳೆಲೆಯ ಹಾಸ್ಯುಂಡು ಬೀಸಿ ಒಗೆದಂಗ, ಹಾಗೂ ಗಂಡನಿಲ್ಲದ ಬಾಲಿ ದಂಡನಾಳಿದರೇನ/ ಪುಂಡಿಯ ಹೂವು ಹೊಲತುಂಬ/ ಅರಳಿದರ ಚಂಡು ಹೂವಿನ ಹೋಲ್ಯವ. (ಗರತಿಯ ಹಾಡು. ೧೯೭೧ ಸಂ: ಮಧುರಚೆನ್ನ ಮತ್ತು ಇತರರು). ಇದನ್ನು ಮಹಿಳೆಯರು ಎದುರಿಸಲಾಗದ, ಎದುರಿಸಿ ಅವುಗಳಿಂದ ಪಾರಾಗಲಾಗದ ಮತ್ತು ಕೆಲವು ಸಾಮಾಜಿಕ ಮೌಲ್ಯಗಳು ಮನುಷ್ಯ ವಿರೋಧಿಯಾದವು; ಅವು ತಮ್ಮ ವಿರುದ್ಧ ಹೆಣೆಯಲಾಗಿರುವ ನಿರ್ಬಂಧಗಳು ಎಂಬುದನ್ನು ತಿಳಿಯದೆ ಪಾಲಿಸುತ್ತಿರುತ್ತಾರೆ. ಹಾಗಾಗಿ ಈ ಕೃತಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಗಳ ವಿರುದ್ಧ ಜನಪದ ಸಾಹಿತ್ಯದ ನಿಷ್ಠುರ ವಿಮರ್ಶೆಗೆ ಬೇಕಾದ ಆಕರವಾಗಿದೆ. ಇಂತಹ ಇನ್ನೂ ಎಷ್ಟೋ ಎಷ್ಟೋ ಆಕರಗಳು ಜಾನಪದ ಸಾಹಿತ್ಯದ ವಾಜ್ಮಯದಲ್ಲಿವೆ. ಅವುಗಳನ್ನು ವಿಶ್ಲೇಷಿಸಬೇಕಾದ ಅಗತ್ಯತೆಯನ್ನು ಇದು ಸೂಚಿಸುತ್ತದೆ. ಅಂತಹ ಒಂದು ನಿಷ್ಠುರ ವಿಮರ್ಶೆಯನ್ನು ಈ ಕೃತಿ ಬೇಡುತ್ತದೆ. ಆದ್ದರಿಂದ ನಿಷ್ಠುರ ವಿಮರ್ಶೆ ವಿಶ್ಲೇಷಣೆಗಳ ಮೂಲಕವೇ ನಮ್ಮ ಪರಂಪರೆಗೆ ಗೌರವವನ್ನು ತೋರಿಸುವಂತಾದರೆ ಅದು ಒಳ್ಳೆಯದು. ಯಾಕೆಂದರೆ ಕುರುಡು ಆರಾಧನೆಗಿಂತ ನಿಷ್ಠುರ ವಿಮರ್ಶೆಗೆ ಹೊಸದನ್ನು ಸೃಷ್ಟಿಸುವ ಶಕ್ತಿಯಿದೆ ಎಂದೆ ಇಲ್ಲಿನ ಪ್ರಬಲವಾದ ನಂಬಿಕೆ.
ಈ ಕಾವ್ಯ ನಿರ್ವಚಿಸುವಂತೆ ಬಾಲ್ಯ ವಿವಾಹಕ್ಕೆ ಬಲಿಯಾದ ‘ಎಲೆಯೋರ’ ಬಾಲೆ ನಾಗಮ್ಮ ಋತುಮತಿಯಾಗುವ ಮೊದಲೆ ಗಂಡ ನಾಗಣ್ಣನನ್ನು ಕಳೆದುಕೊಂಡು, ‘ಕೆಂಡಕೊಂಡಕ್ಕೆ’ ಆಹುತಿಯಾಗುವ ಮೂಲಕ ‘ಪರ’ದಲ್ಲಿಯೂ ಸತಿಯಾಗಬಯಸುತ್ತಾಳೆ! ಈ ದುರಂತ ಕತೆಯನ್ನು ಕಾವ್ಯವಾಗಿಸಿ ಶತಮಾನಗಳಿಂದ ಜನಪದರು ಹಾಡುತ್ತಲೇ ಬರುತ್ತಿದ್ದಾರೆ. ಇಂತಹ ಇತರ ಹಲವು ಮಹಾಸತಿ ಕಾವ್ಯಕೃತಿಗಳು ಕನ್ನಡದಲ್ಲಿವೆ. ಬಾಲ್ಯ ವಿವಾಹ ಮತ್ತು ಮಹಾಸತಿಯ ಕಥಾನಕವನ್ನು ಉನ್ನತೀಕರಿಸಿರುವ ಇಲ್ಲಿನ ಕಾವ್ಯ: ಆ ಮೂಲಕ ಮಹಿಳಾ ವಿರೋಧಿ ಮೌಲ್ಯಗಳು; ಅವುಗಳನ್ನು ಆಚರಿಸುವ ಆಚರಣೆಗಳಾದ ಬಾಲ್ಯ ವಿವಾಹ ಮತ್ತು ಸತಿ ಪದ್ಧತಿಯನ್ನು ಮಾನ್ಯಮಾಡಿವೆ. ಅವನ್ನು ಜನಮಾನಸದಲ್ಲಿ ಆಳವಾಗಿ ಬೇರೂರುವಂತೆ ಮಾಡಿವೆ. ಈ ಆಚರಣೆಗಳನ್ನು ಮೀರಲು ಧಿಕ್ಕರಿಸಲು ಜನಪದರಿಗೆ ಸಾಧ್ಯವಾಗಿದೆಯೇ? ಕಾವ್ಯದಲ್ಲಿ ನಾಗಮ್ಮನ ಆಂತರಿಕ ಹೊಯ್ದಾಟವನ್ನು ಚಿತ್ರಿಸುತ್ತ ಅಲ್ಲಿನ ಅಮಾನವೀಯ ನೆಲೆಗಳನ್ನು ಅನಾವರಣಗೊಳಿಸಿದರೂ ಕಾವ್ಯದ ಉದ್ದೇಶ ಸತಿ ಆಚರಣೆಯನ್ನು ಗಟ್ಟಿಗೊಳಿಸುವುದೇ ಆಗಿದೆ. ಆದರೆ ಈ ಮಹಿಳಾ ವಿರೋಧಿ ಆಚಣೆಗಳಿಗೆ ತಾತ್ವಿಕವಾಗಿ ಮತ್ತು ಕಾನೂನುಬದ್ಧವಾಗಿಯಾದರೂ ಪರಿಹಾರದ ದಾರಿಗಳು ಕಾಣಿಸಿಕೊಂಡದ್ದು ‘ಆಧುನಿಕ’ ಕಾಲದಲ್ಲಿಯೇ. ಈ ಕಾನೂನುಗಳು ಎಷ್ಟರಮಟ್ಟಿಗೆ ಮಹಿಳೆಯರನ್ನು ಬಿಡುಗಡೆಗೊಳಿಸಿದವು ಎಂಬುದು ಬೇರೆಯದೇ ಚರ್ಚೆ. ಆದರೆ ಇವು ಅಮಾನುಷವಾದ ಆಚರಣೆಗಳು ಎಂಬ ಎಚ್ಚರ ಮೂಡಿದ್ದು ಈ ಕಾಲದಲ್ಲಿಯೇ ಎಂಬುದನ್ನು ಮರೆಯಬಾರದು.
ಇದಲ್ಲದೆ ಇಲ್ಲಿ ಮತ್ತೊಂದು ಅಂಶವನ್ನು ನಾವು ಗಮನಿಸಬೇಕಿದೆ. ಈ ಕಾವ್ಯ ನಾಯಕಿ ಈರನಾಗಮ್ಮ, ನಾಯಕ ಈರನಾಗಣ್ಣ. ಇವರಿಬ್ಬರು ಸತಿಪತಿಗಳು! ಈರನಾಗಣ್ಣನ ತಂದೆ ವೀರಕ್ಯಾತರಾಯ; ತಾಯಿ ಮಲ್ಲಾಜಮ್ಮ. ಇವರು ಕುಂಚಿಟಿಗರು. ಅಂದರೆ ಶೂದ್ರ ಜಾತಿ. ಆದರೆ ಭೂಮಾಲಿಕರು ಮತ್ತು ಯುದ್ಧವೀರರು. ಜಾತಿಯಲ್ಲಿ ತೀವ್ರವಾದ ನಂಬಿಕೆ ಉಳ್ಳವರು. ತಮ್ಮ ಸಂಪತ್ತನ್ನು ಕುಲದ ಗೌರವನ್ನು ಕಾಯ್ದುಕೊಳ್ಳಲು ಕಟಿಬದ್ಧರಾಗಿದ್ದವರು. ಇಂತಹ ವರ್ಗದಲ್ಲಾಗುವ ಆಚರಣೆಯನ್ನು ಕುರಿತು ಕಾವ್ಯ ಕಟ್ಟಿ ಹಾಡುವವರು ಅಸ್ಪೃಶ್ಯರು! ಈ ಅಸ್ಪೃಶ್ಯರನ್ನು ಮನೆಯೊಳಗೆ ಸೇರಿಸುವುದು ಹೋಗಲಿ. ತಮ್ಮ ಮನೆಯ ಹೆಣ್ಣಿನ ಬಲಿಯನ್ನು ಕುರಿತು ಹಾಡುತ್ತ ಆಕೆಯನ್ನು ದೈವವಾಗಿ ಮೆರೆಸುವ ದಲಿತ ಕವಯತ್ರಿಯರನ್ನು, ನಾಗಮ್ಮನ ದೇವಾಲಯಕ್ಕೂ ಸೇರಿಸುವುದಿಲ್ಲ. ನಾಗಮ್ಮನ ಕಥಾಕಾವ್ಯ ಹಾಡುವ ಸಂದರ್ಭದಲ್ಲಿ ಅವರನ್ನು ಮನೆಯ ಪಡಸಾಲೆಗೂ ಬಿಟ್ಟುಕೊಳ್ಳುವುದಿಲ್ಲ. ಇದನ್ನು ಯಾವ ಪ್ರಶ್ನೆಯೂ ಮಾಡದೆ ಕವಿಗಳು ಹಾಡುತ್ತ ಒಪ್ಪಿಕೊಳ್ಳುತ್ತ ಬಂದಿದ್ದಾರೆ. ಇದು ಈಗಲೂ ಆಚರಣೆಯಲ್ಲಿರುವ ಹೀನ ಪದ್ಧತಿ. ಅಂದರೆ ಜಾತಿಪದ್ಧತಿಯನ್ನು ಜೀವಂತವಾಗಿ ಕಾಪಾಡಿಕೊಂಡಿರುವ ಕಾವ್ಯ ಪರಂಪರೆಯೂ ಹೌದು.

ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿಯಿದೆ. ಸೂರ್ಯ, ಚಂದ್ರ, ಪುತ್ರ, ಅಗ್ನಿ, ಮುಂತಾದ ಪರುಷವಾಚಿ ನಾಮಪದಗಳು ಪಿತೃಪ್ರಧಾನ ನೆಲೆಯವು. ಆದರೆ ಈ ಪುರುಷವಾಚಿ ಪದಗಳನ್ನು ಸೂರಿದಮ್ಮ, ಚಂದಿರಮ್ಮ, ಪುತ್ರಮ್ಮ, ಅಗ್ಗುಣಿದೇವಿ ಇತ್ಯಾದಿಯಾಗಿ ಇಲ್ಲಿ ಸ್ತ್ರೀವಾಚಿಗೊಳಿಸಲಾಗಿದೆ. ಇದು ವಿಶಿಷ್ಟವಾದ ಭಾಷಾ ಪ್ರಯೋಗ. ಯಾಕೆಂದರೆ ಭಾಷೆಯೇ ಪಿತೃ ಪ್ರಧಾನವಾದ ನೆಲೆಯಿಂದ ರೂಪಿತವಾಗಿದೆ. ಇದನ್ನು ಈಚಿನ ಭಾಷಿಕ ಅಧ್ಯಯನ, ಅದರಲ್ಲಿಯೂ ಸ್ತ್ರೀವಾದಿ ಭಾಷಾಶಾಸ್ತ್ರದ ಅಧ್ಯಯನ ಇದನ್ನು ವಿಶೇಷವಾಗಿ ತೋರಿಸಿಕೊಟ್ಟಿದೆ. ಇಂತಹ ಪುರುಷ ಕೇಂದ್ರಿತವಾದ ಭಾಷಿಕ ರಚನೆಗಳನ್ನು ಮುರಿದು ಸ್ತ್ರೀವಾಚಿಯಾಗಿಸಿರುವುದು ಕ್ರಾಂತಿಕಾರಕ ಪ್ರಯತ್ನ, ಆದರೆ ಭಾಷೆ ಸ್ತ್ರೀವಾಚಿಯಾದರೂ ವಿರೋಧಿಯಾದ ಮೌಲ್ಯಗಳನ್ನು ಅಂತರ್ಗತಗೊಳಿಸಿಕೊಂಡಿರುವುದು ಇದರಿಂದ ವ್ಯಕ್ತಗೊಳ್ಳುತ್ತದೆ. ಹೆಣ್ಣನ್ನು ಕುರಿತು ಹೆಂಗಸರೇ ಕಟ್ಟಿ ಹಾಡುತ್ತಿರುವ, ಈ ಕಾವ್ಯ ಪದ ಮತ್ತು ಪದಾರ್ಥಗಳ ನಡುವೆ ವೈಚಾರಿಕ, ತಾತ್ವಿಕ ಬಿರುಕುಗಳಿರುವುದನ್ನು ಎತ್ತಿ ತೋರಿಸುತ್ತದೆ. ಭಾಷೆಯ ಬಳಕೆ ಮತ್ತು ವೈಚಾರಿಕತೆ ಏಕೀಭವಿಸದಿದ್ದರೆ ಭಾಷೆ ಮಹತ್ವ ಪಡೆಯಲಾರದು.
ಈ ಮೇಲಿನ ವಿವರಣೆಯನ್ನು ಗಮನಿಸಿದರೆ ಈ ಕೃತಿಯ ವೈಚಾರಿಕತೆ ಯಾವುದು ಎಂಬುದು ಸ್ಪಷ್ಟಗೊಳ್ಳುತ್ತದೆ. ನಾವು ಯಾವುದು ಜಡ, ಪ್ರತಿಗಾಮಿ ಮತ್ತು ಜನವಿರೋಧಿ ಮೌಲ್ಯಗಳು ಎಂದು ವ್ಯಾಖ್ಯಾನಿಸುತ್ತಿದ್ದೇವೆಯೋ, ಆ ಮೌಲ್ಯಗಳನ್ನೇ ಸ್ತುತಪಡಿಸುತ್ತಿದೆ. ಒಂದು ರೀತಿಯಲ್ಲಿ ಪ್ರಭುತ್ವ ಕೇಂದ್ರಿತ ಮೌಲ್ಯಗಳನ್ನು ಸ್ತುತಿಸುತ್ತಲೇ ಜನವಿರೋಧಿ ಜನಪದ ಕಾವ್ಯವಾಗಿದೆ. ಇದು ನಮ್ಮ ಇತರೆ ಜನಪದ ಕಾವ್ಯಪರಂಪರೆ ಕಟ್ಟಿರುವ ವೈಚಾರಿಕತೆಯನ್ನು ರೂಢಿಸಿಕೊಳ್ಳದೇ ಹೋಗಿದೆ. ಮಾದೇಶ್ವರ ಮತ್ತು ಮಂಟೆಸ್ವಾಮಿ ಪರಂಪರೆಗಳನ್ನು ಸ್ಮರಿಸಿದಾಗ ಇದು ಅರ್ಥವಾಗುತ್ತದೆ. ಇಲ್ಲಿ ಯಾವುದನ್ನು ‘ವೀರತ್ವ’ ಎಂದು ಕೀರ್ತಿಸಲಾಗುತ್ತಿದೆಯೋ ಅದು ವೀರತ್ವವಾಗದೆ ಅಸಹಾಯಕತೆಯ ಒತ್ತಡದಿಂದ ರೂಪಿತವಾಗಿರುವ ಕ್ರಿಯೆ ಆಗಿರಬಹುದು. ಬುದ್ದಿ ಬೆಳೆಯದ ಎಳೆಯ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡು ವಿಧವೆಯಾದ ನಾಗಮ್ಮ ತಾನೇ ಕೆಂಡಕೊಂಡವಾಗುತ್ತೇನೆನ್ನುವುದು ಅಸಾಧ್ಯದ ಮಾತು ಎನ್ನಿಸುತ್ತದೆ. ಬಲಾತ್ಕಾರವಾಗಿ ಆಕೆಯನ್ನು ಎತ್ತಿಕೊಂಡು ಹೋಗಿ ಕೊಂಡಕ್ಕೆಸೆದು ಅದನ್ನೇ ವೀರತ್ವವೆಂದು ಕೀರ್ತಿಸಿರುವ ಸಾಧ್ಯತೆಗಳನ್ನು ತಳ್ಳಿಹಾಕಲು ಬರುವುದಿಲ್ಲ. ಇದು ಬದುಕನ್ನು ಕಟ್ಟುವುದಕ್ಕಿಂತ ಮುರಿಯುವುದಕ್ಕೆ ಹೆಚ್ಚು ಆದ್ಯತೆ ನೀಡಿದಂತೆ ಕಾಣುತ್ತದೆ. ಕರ್ನಾಟಕ, ಆಂಧ್ರ ಮತ್ತು ತಮಿಳುನಾಡುಗಳ ವಿಸ್ತಾರವಾದ ಪ್ರದೇಶದಲ್ಲಿ ಇಂತಹ ಕಾವ್ಯದ ನಾಯಕ/ನಾಯಕಿಯರು ದೈವಗಳಾಗಿ ಆರಾಧನೆಗೊಳ್ಳುತ್ತಿರುವುದು ಆಶ್ಚರ್ಯವನ್ನು ಮೂಡಿಸುತ್ತದೆ. ಅಲ್ಲದೆ ಕೃಷ್ಣದೇವರಾಯನಂತಹ ರಾಜರ ಬಗೆಗೆ ಕಾವ್ಯಕಟ್ಟಿ ಹಾಡದ ಜನಪದರು, ‘ಈರ ‘ನಾಗಮ್ಮನಂತಹ ಬಾಲೆಯರ ಬಗೆಗೆ ಕಾವ್ಯಕಟ್ಟಿ ಹಾಡಿರುವುದು ಏನನ್ನು ಸೂಚಿಸುತ್ತದೆ? ಸಾಮಾಜಿಕ ಮೌಲ್ಯದ ಕೀರ್ತನೆಯೇ ಪ್ರಧಾನವಾಗಿದೆ ಎಂಬುದು ಅಂದರೆ ಈ ಕೃತಿಯಲ್ಲಿ ಸ್ತ್ರೀ ಪ್ರಧಾನ ಮೌಲ್ಯಗಳಿಗಿಂತ ಸ್ತ್ರೀವಿರೋಧಿಯಾದ ಸತಿಯಂತಹ ಸಾಮಾಜಿಕ ಮೌಲ್ಯದ ಕೀರ್ತನೆಯೇ ಪ್ರಧಾನವಾಗಿದೆ ಎಂಬುದು ತಿಳಿದುಬರುತ್ತದೆ. ಅದರಲ್ಲಿಯೂ ಇದರ ವ್ಯಾಪ್ತಿ ಮತ್ತು ಕಾಲವನ್ನು ಗಮನಿಸಿದರೆ ಕರ್ನಾಟಕದಲ್ಲಿ ಯುದ್ಧಗಳು ನಿತ್ಯವರ್ತಮಾನವಾಗಿದ್ದ ಕಾಲದಲ್ಲಿ ಈ ಕಾವ್ಯ ಸೃಷ್ಟಿಯಾಗಿದೆ. ಪ್ರಭುತ್ವದ ಹಿತಾಸಕ್ತಿಗೆ ಪೂರಕವಾಗಿ ಸಾಗುತ್ತಿದ್ದ ನಿತ್ಯಯುದ್ಧದಲ್ಲಿ ಸಂಭವಿಸುತ್ತಿದ್ದ ಸಾವುಗಳು ಸಹಜ ಎನ್ನುವಂತ ಮನಸ್ಥಿತಿಯನ್ನು ಸೃಷ್ಟಿಸಲು ಇಂತಹ ಕಾವ್ಯಗಳನ್ನು ಹೆಚ್ಚು ಪ್ರಚಾರಕ್ಕೆ ತಂದಿರುವಂತೆ ಕಾಣುತ್ತದೆ.
ಹೀಗಿರುವಾಗ ಇಂತಹ ಕೃತಿಗಳಿಂದ ನಾವು ಯಾವ ಜನಪರ ಮೌಲ್ಯವನ್ನು ಹೆಕ್ಕಿ ತೆಗೆಯಬೇಕು; ಹೆಕ್ಕಿ ತೆಗೆದು ಸಮಕಾಲೀನ ಬದುಕಿಗೆ ಕಸಿಗೊಳಿಸಿ ಅದರ ಸಾತತ್ಯವನ್ನು ಉಳಿಸಬೇಕೆಂದು ಅರ್ಥವೇ ಆಗುವುದಿಲ್ಲ. ಆಶಯ ಮತ್ತು ಆಕೃತಿಗಳು ಒಂದರಲ್ಲಿ ಒಂದು ಹೆಣೆದುಕೊಂಡಿರುವಾಗ ಆಶಯವನ್ನು ಧಿಕ್ಕರಿಸಿ ಆಕೃತಿಯನ್ನು ಉಳಿಸಿಕೊಳ್ಳಲಾದೀತೆ? ಆಕೃತಿಯನ್ನು ಉಳಿಸಿಕೊಳ್ಳುತ್ತ ಅದರ ಮೂಲಕ ಏನನ್ನು ಹೇಳುವ ಸಾಧ್ಯತೆಗಳಿವೆ? ಯಾರು ಆಕೃತಿಗಳನ್ನು ಬಳಸುವವರು? ಈ ಕೇಳ್ವಿಗಳು ಮುಖ್ಯ. ಆದ್ದರಿಂದ ಜನಪದ ಸಾಹಿತ್ಯವನ್ನು ವಿಮರ್ಶಾತೀತವಾಗಿ ಒಪ್ಪುವುದು ಕಷ್ಟ, ಹಾಗೆಯೇ ಅವುಗಳಲ್ಲಿ ಏನಿದೆ ಎಂಬುದನ್ನು ತಿಳಿಯದೆ ಅವುಗಳನ್ನು ನಿರಾಕರಿಸುವುದು ತಪ್ಪು. ಆದ್ದರಿಂದ ಜನರ ಬದುಕಿನ, ಅರಿವಿನ, ಜೀವನದರ್ಶನದ ಭಾಗವಾಗಿ ಬೇರೂರಿರುವ ಸಾಹಿತ್ಯವನ್ನು ಅದರೊಳಗಿನ ಮೌಲ್ಯಗಳನ್ನು ನೈಜ ಪ್ರಜಾತಂತ್ರದ ಮತ್ತು ಮಾನವರ ಸಮಾನತೆಯ ನೆಲೆಯಲ್ಲಿ ವಿಶ್ಲೇಷಿಸಬೇಕಿದೆ. ಇಲ್ಲವಾದರೆ ಜಾನಪದ ಸಾಹಿತ್ಯ ಸಂಗ್ರಹವನ್ನು ಕೇವಲ ಸಂಗ್ರಹಕ್ಕಾಗಿ ಮಾಡುವುದರಿಂದ ಅಂತಹ ಮಹತ್ವದ ಪ್ರಯೋಜನವಾಗಲಾರದು. ಹಾಗಾಗಿ ಜಾನಪದ ಸಾಹಿತ್ಯದ ಅಧ್ಯಯನ ಕ್ಷೇತ್ರದಲ್ಲಿ ಸಂಗ್ರಹಣೆಯ ಹಂತದಿಂದ ವಿಶ್ಲೇಷಣೆಯ ಹಂತಕ್ಕೆ ಜಿಗಿದಿರುವ ಈ ಸಂದರ್ಭದಲ್ಲಿ ಸೂಕ್ಷ್ಮವಾದ ವಿಮರ್ಶೆಗಳು ನಡೆಯಬೇಕಿವೆ.
ಆ ಮೂಲಕ ಇಂದಿನ ಬದುಕಿಗೆ ಬೇಕಿರುವ ನಿರ್ಧಿಷ್ಟ ತಾತ್ವಿಕತೆಯನ್ನು ಕಟ್ಟಿಕೊಳ್ಳಬೇಕಿದೆ. ಇಲ್ಲವಾದರೆ ಅಧ್ಯಯನಗಳು ಅಪ್ರಸ್ತುತವಾಗುವ ಅಪಾಯಗಳಿವೆ. ವೈಯಕ್ತಿಕ ಸಂಗ್ರಹ ಕಾರ್ಯಗಳಿಗೂ ಬೆಲೆ ಇಲ್ಲದಂತಾಗುತ್ತದೆ. ಸಂಸ್ಥೆಗಳೂ ನಿರರ್ಥಕವಾಗುತ್ತವೆ. ಹಾಗಾಗಿ ನಮ್ಮ ಜಾನಪದ ಅಧ್ಯಯನಗಳು, ಸಂಗ್ರಹ ಕಾರ್ಯಗಳು ನೈಜ ದಾರಿಯನ್ನು ಕಂಡುಕೊಳ್ಳಬೇಕಾದ ಅಗತ್ಯವಿದೆ.
- ಡಾ. ರಂಗನಾಥ ಕಂಟನಕುಂಟೆ
