ಪ್ರಕೃತಿ ಅಂದರೆ ವಿಶಿಷ್ಟವಾದ ಕೃತಿ ಎಂದು ಅರ್ಥವಾಗುವುದು. ಇದು ನವರಸಗಳಿಂದ ಹಾಗೂ ಇಪ್ಪತ್ತನಾಲ್ಕು ತತ್ವಗಳಿಂದ ಕೂಡಿದೆ.ಪಂಚಭೂತಗಳಲ್ಲಿರುವ ಆಕಾಶವು ಎರಡು ವಿಧವಾಗಿದೆ. ಪ್ರಕೃತಿಯಲ್ಲಿ ಸತ್ವ, ರಜ, ತಮ ಈ ಮೂರು ಗುಣಗಳುಳ್ಳ ಪ್ರಕೃತ್ಯಾತ್ಮ ಲಿಂಗದೇಹವಿದೆ. ಇದು ಲೇಖಕರಾದ ಸಂಧ್ಯಾ ಟಿ ಅವರು ಹರಿ ಕಥಾಮೃತಸಾರ ಮಹತ್ವವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಓಂ ಪ್ರಕೃತ್ಯೈ ನಮಃ,
ಓಂ ಹಿರಣ್ಮಯ್ಯೈ ನಮಃ
ಓಂ ವಸುಧಾರಿಣ್ಯೈ ನಮಃ
ಓಂ ಶ್ರದ್ಧಾಯೈ ನಮಃ
ಓಂ ವಿಭೂತ್ಯೈ ನಮೋನಮಃ
ನಾಹಂ ಕರ್ತಾ ಹರಿ: ಕರ್ತಾ
ಶ್ರೀ ಗುರುಭ್ಯೋ ನಮಃ ಶ್ರೀಹರಿ ಓಂ
ಹರಿ ಕಥಾಮೃತಸಾರದಲ್ಲಿ ಅಕ್ಷರಗಳ ಮಹಿಮೆಯ ಧಾರೆಯು ಪ್ರಕೃತಿ ಎನಿಸಿದ್ದಾಳೆ. ಹಿರಣ್ಮಯೀ ಎನಿಸಿ ಸರ್ವರನ್ನು ಸರ್ವವನ್ನೂ ಧಾರಣೆ ಮಾಡಿ ಪೋಷಿಸುವವಳು ಪ್ರಕೃತಿ. ಪರಮಾತ್ಮನು ಬ್ರಹ್ಮನನ್ನು ಸೃಷ್ಟಿಸಿದ ಮೇಲೆ ಅವನಿಗೆ ವ್ಯಂಜನ ವರ್ಗದ ಹದಿನಾರನೆಯ ಅಕ್ಷರವಾದ “ತ” ವನ್ನು ಇಪ್ಪತ್ತೊಂದನೆಯ “ಪ” ವನ್ನು ಅಂದರೆ ತಪ ಎಂಬ ಶಬ್ದದಿಂದಲೇ ವೇದಜ್ಞಾನ ಉಪದೇಶಿಸಿ ಪ್ರಕೃತಿಯನ್ನು ಸೃಷ್ಟಿಸಿಸಿದನು. ‘ತ’ ಎಂದರೆ ತಾರಕ ಮಂತ್ರದ ಸಂಕೇತ. ‘ಪ’ ವರ್ಗದ ಐದು ಅಕ್ಷರಗಳು ಆಕಾಶ ಹಾಗೂ ಭೂಮಿಯ ಸಂಹಿತೆಯ ಸಂಕೇತ.
ತಪ ಶಬ್ದದಿಂದ ಚೈತನ್ಯ ತುಂಬಿದ ಪ್ರಕೃತಿ ಸೃಷ್ಟಿ ಆಯಿತು. ಪ್ರಕೃತಿ ಅಂದರೆ ವಿಶಿಷ್ಟವಾದ ಕೃತಿ ಎಂದು ಅರ್ಥವಾಗುವದು. ಇದು ನವರಸಗಳಿಂದ ಹಾಗೂ ಇಪ್ಪತ್ತನಾಲ್ಕು ತತ್ವಗಳಿಂದ ಕೂಡಿದೆ. ಅಕ್ಷರ ವಿತತ ಹಾಗೂ ಅವುಗಳ ವರ್ಣಗಳಿಂದ ಘಟಿತವಾದ ಶಬ್ದವೆ ಪ್ರಪಂಚದ ಆವಿಷ್ಕಾರ. ಈ ವಿಶೇಷಾಂಶವು ಐವತ್ತೊಂದು ವರ್ಣಾಕ್ಷರದ ವೇದತ್ಯತ್ವದ ಸೂಕ್ಷ್ಮವಾದ ಜ್ಞಾನದಿಂದ ಸ್ವಲ್ಪ ಮಟ್ಟಿಗೆ ತಿಳಿಯುವುದು.
ಪ್ರಕೃತಿಯು ಪಂಚಭೂತಗಳಿಂದ ಪಂಚ ತನ್ಮಾತ್ರಗಳಿಂದ ಕೂಡಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಪಂಚಭೂತಗಳಲ್ಲಿರುವ ಆಕಾಶವು ಎರಡು ವಿಧವಾಗಿದೆ. ಅವ್ಯಾಕೃತ ಆಕಾಶ ಮತ್ತು ಭೂತಾಕಾಶ ಎಂದು ಎರಡು ವಿಧ. ಭೂತಾಕಾಶವೆಂದರೆ ಪೃಥ್ವಿ ಎಂಬ ವಿಶೇಷ ನಾಮ. ಅವ್ಯಾಕೃತಾಕಾಶವು ಅನಾದಿ, ನಿತ್ಯ ನಿರ್ವಿಕಾರ ನಿಶ್ಚಲವಾದ ಸರ್ವವ್ಯಾಪ್ತವಾದದ್ದು. ಇದಕ್ಕೆ ಸಾಕ್ಷಾತ್ ಮಹಾಲಕ್ಷ್ಮಿಯು ಮುಖ್ಯ ಅಭಿಮಾನಿ ದೇವತೆ. ಭೂತಾಕಾಶ ಸೃಷ್ಟಿ ಕಾಲದಲ್ಲಿ ಹುಟ್ಟಿ ಲಯಕಾಲದಲ್ಲಿ ವಿನಾಶ ಹೊಂದುವಂತಹದು. ವಿಶ್ವಂಬರನ ಆರಾಧಕನಾದ ಗಣೇಶನು ಇದಕ್ಕೆ ಮುಖ್ಯ ಅಭಿಮಾನಿ ದೇವತೆ.
ಪಂಚಭೂತಗಳು ಪಂಚತನ್ಮಾತ್ರಗಳು ಸೃಷ್ಟಿಯ ಬಳಿಕ ಎರಡೂ ಹೊಂದಿಕೊಂಡಿರುವವು. ಪ್ರತ್ಯೇಕವಾಗಿ ನೋಡುವುದು ಅಸಾಧ್ಯ. ಶಬ್ದ ಸ್ಪರ್ಶ ಗೋಚರವಾದಾಗ ಮಾತ್ರ ಅವುಗಳ ಸಂಬಂಧ ಮತ್ತು ಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳಬಹುದು. ಭೂ, ಜಲ, ಅಗ್ನಿ, ವಾಯು, ಆಕಾಶ ಈ ಪಂಚ ಭೂತಗಳಲ್ಲಿ ಹಾಗೂ ಶಬ್ದ, ರೂಪ, ರಸ ಸ್ಪರ್ಶ ಗಂಧ ಈ ತನ್ಮಾತ್ರಗಳಲ್ಲಿ ಅಜಾದಿ ಆದ ಐವತ್ತೊಂದು ವರ್ಣಾಕ್ಷರಗಳಿಂದ ಪ್ರತಿಪಾದ್ಯನಾದ ಶ್ರೀ ಹರಿಯು ವ್ಯಾಪ್ತನಾಗಿರುವದಂತೂ ಸತ್ಯ. ಅದರಂತೆ ತನ್ಮಾತ್ರಗಳು ತಮಗೆ ಸಂಬಂಧಿಸಿದ ಭೂತಗಳಲ್ಲಿ ಇರುವುದು ಒಂದು ವಿಶಿಷ್ಟ ಗುಣವಾಗಿದೆ.
ಶಬ್ದ ಎಂಬುದು ಆಕಾಶತತ್ವದ ಗುಣ ಅಲ್ಲಿಂದಲೆ ಎಲ್ಲ ಶಬ್ದಗಳು ಹೊರಡುವವು. ಸ್ಪರ್ಶ ವಾಯುವಿನ ಗುಣ. ರೂಪ ಎಂಬುದು ಅಗ್ನಿಯ ಗುಣ. ರಸ ಇದು ಜಲದ ಗುಣ. ಗಂಧ ಎಂಬುದು ಭೂಮಿಯ ಗುಣ. ಇವೆಲ್ಲವುಗಳನ್ನೊಳಗೊಂಡ ಪ್ರತಿಕೃತಿಯನ್ನು ಹೇಗೆ ತಿಳಿಯಬೇಕು? ಯೋಚಿಸಬೇಕಾಗಿರುವದೆ ನಿಜ ಅಲ್ವಾ! ತಿಳಿಯುವದಕ್ಕಿಂತ ಕಲಿಯುವದೇ ಜಾಸ್ತಿ ಇರುವುದು. ಇದರಂತೆ ಮಾನವನ ದೇಹವು ಪಂಚಭೂತ ಪಂಚತನ್ಮಾತ್ರಗಳಿಂದ ಸೃಷ್ಟಿಯಾಗಿದೆ.

ವಾಙ್ಮಯ ಪ್ರಪಂಚದಲ್ಲಿ ಐವತ್ತೊಂದು ವರ್ಣಾಕ್ಷರಗಳು ಸರ್ವತ್ರ ವ್ಯಾಪ್ತವಾಗಿವೆ. ಇವುಗಳಿಲ್ಲದೇ ಭಾಷೆ ಶಾಸ್ತ್ರ
ಯಾವದೂ ಸರ್ವಥಾ ಇಲ್ಲ..
ಪ್ರಕೃತಿಯಲ್ಲಿ ಸತ್ವ, ರಜ, ತಮ ಈ ಮೂರು ಗುಣಗಳುಳ್ಳ ಪ್ರಕೃತ್ಯಾತ್ಮ ಲಿಂಗದೇಹವಿದೆ. ವಿಶ್ವ, ತೈಜಸ, ಪ್ರಾಜ್ಞ ಎಂಬ ಮೂರು ನಾಮಗಳು, ಬ್ರಹ್ಮ, ವಿಷ್ಣು, ಶಿವ ಈ ಮೂರು ರೂಪಗಳು, ಮೂರು ಸ್ಥಾನಗಳೆಂದರೆ ನೇತ್ರ, ಕಂಠ ಹೃದಯ ಪ್ರಕೃತಿಯಲ್ಲಿರುವ ಈ ಮೂರು ಸಂಖ್ಯೆಗಳು ಎಷ್ಟು ಮಹತ್ವವಾಗಿವೆ. ಕಾಲಮಾನಗಳ ಮೂರು ಅವಸ್ಥಾ ಗಳು ಇವು ಪ್ರಕತಿಯಲ್ಲಿಯೂ ನಮ್ಮ ಸಾಧನ ಶರೀರದಲ್ಲಿಯೂ ಇವೆ.ಇದು ಪರಮಾತ್ಮನ ಕರುಣೆಯ ವಿಶಿಷ್ಟವಾದ ಅದ್ಭುತ ಕಾರ್ಯವು ಈ “ಪ್ರ”ಕೃತಿ. ನಾವು ಏನೇ ಕಾರ್ಯ ಮಾಡಿದರೂ ಪ್ರಕೃತಿಯ ಅಂಶಗಳನ್ನು ನಾವು ಉಪಯೋಗಿಸುತ್ತೇವೆ. ಕಾರಣ ನೇತ್ರ ಕಂಠ ಹೃದಯ ಶುದ್ಧವಾಗಿರಬೇಕಾದರೆ ಆತ್ಮಕ್ಕೆ ಸಾಕ್ಷಿ ಆಗಿರುವದು ಪ್ರಕೃತಿ. ಜ್ಞಾನೇಂದ್ರಿಯ, ಕರ್ಮೇಂದ್ರಿಯ, ತನ್ಮಾತ್ರಗಳು ನಂತರ ಪಂಚಭೂತಗಳು ಈ ಎಲ್ಲ ಇಂದ್ರಿಯಗಳ ಸಂಖ್ಯೆ ಇಪ್ಪತ್ತು. ಮನಸ್ಸು ಒಂದು ಇದರಲ್ಲಿ ಹರಿದಾಡುವ ಬುದ್ಧಿ, ಚಿತ್ತ ಅಹಂಕಾರ ಇವು ಮೂರು ಒಟ್ಟು ಈ ಇಪ್ಪತ್ನಾಲ್ಕು ತತ್ವಗಳು. ಇವುಗಳಲ್ಲಿ ಪರಮಾತ್ಮನು ನೆಲೆಸಿದ್ದು ತತ್ವಾಭಿಮಾನಿಗಳಿಂದ ಕಾರ್ಯ ಕಾರಣ ತಾನಾಗಿ ಮಾಡಿ ಮಾಡಿಸುವದು ಪ್ರಕೃತಿಯ ವೈಶಿಷ್ಟ್ಯ. ಇದನ್ನು ತಿಳಿದರೆ ಮಾನವನ ಬದುಕಿನ ವೈಭವ ಶಾಂತಿಯುತವಾಗಿ ಪ್ರಕೃತಿಯಲ್ಲಿ ಲೀನವಾಗುವುದು.
ಪ್ರಕೃತಿಯನ್ನು ಕಾಣಿಸುವನು ಸೂರ್ಯನು ಇವನು ಪ್ರಕೃತಿಯ ಒಂದು ಮುಖ್ಯ ಅಂಗವಾಗಿರುವನು. ಸೂರ್ಯನಲ್ಲಿ ನಾರಾಯಣ ನಾಮದಿಂದ ಪರಮಾತ್ಮನು ವ್ಯಾಪ್ತನಾಗಿರುವನು. ಇದನ್ನು ಸ್ವತಃ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಪುರುಷೋತ್ತಮ ಯೋಗ ಹದಿನೈದನೆಯ ಅಧ್ಯಾಯದಲ್ಲಿ ಹನ್ನೆರಡನೆಯ ಶ್ಲೋಕದಲ್ಲಿ ಸಂಪೂರ್ಣ ಜಗತ್ತನ್ನು ಪ್ರಕಾಶಗೊಳಿಸುವ ಸೂರ್ಯನ ತೇಜಸ್ಸು, ಚಂದ್ರನ ತೇಜಸ್ಸು, ನನ್ನದೆ ಎಂದು ಹೇಳಿರುವನು. ಈ ಪರಮಾತ್ಮನ ಸ್ವತಂತ್ರ ಸ್ವಭಾವವೆ ಪ್ರಕೃತಿ. ಅದನ್ನೆ ದಾಸರು ಹರಿಕಥಾಮೃತಸಾರ ದಲ್ಲಿ ಸೂರ್ಯನ ಕಿರಣಗಳು ಒಟ್ಟು ಎಪ್ಪತ್ತೆರಡು ಸಾವಿರ. ದಕ್ಷಿಣಾಯಣ ರಶ್ಮಿಗಳು ಮೂವತ್ತಾರು ಸಾವಿರ ಉತ್ತರಾಯಣ ರಶ್ಮಿಗಳು ಮೂವತ್ತಾರು ಸಾವಿರ. ಈ ಎಪ್ಪತ್ತೆರಡು ಸಾವಿರ ಕಿರಣಗಳು ಪರಮಾತ್ಮನ ನಾಡಿರೂಪಗಳಾಗಿವೆ. ಅದರಂತೆ ನಮ್ಮ ಶರೀರದಲ್ಲಿರುವ ಎಪ್ಪತ್ತೆರಡು ಸಾವಿರ ನಾಡಿಗಳಲ್ಲಿ ನಾಡಿಗಳ ಅಭಿಮಾನಿ ದೇವತೆಗಳ ಜೊತೆಗೆ ಪರಮಾತ್ಮನು ನೆಲೆಸಿರುವನು. ಸೂರ್ಯನು ಹಗಲು ರಾತ್ರಿಗಳ ನಿಯಂತ್ರಣವನ್ನು ತಪ್ಪದೆ ಮಾಡುವನು. ಹಾಗೆಯೆ ನಮ್ಮ ಆಯುಷ್ಯಗಳ ಗಣನೆ ನಡೆಯುವುದು. ಕಾರಣ ಸೂರ್ಯನಿಗೆ ಆದಿತ್ಯ ಎಂದೂ ಕರೆಯುವರು. ಏನೇ ಆದರೂ ಅವನಲ್ಲಿ ನೆಲೆಸಿರುವ ಭಗವದ್ರೂಪಗಳಿಂದ ಕಾಲದ ನಿಯಮನ ಎಂಬುದು ಮುಖ್ಯ ಭಾವ. ಅದರಂತೆ ಚಂದ್ರನ ತೇಜಸ್ಸಿನಲ್ಲಿ ರಸರೂಪನಾಗಿ ಚಂದ್ರನಿಂದ ಔಷದಿ ರೂಪನಿಂದ ಎಲ್ಲ ವನಸ್ಪತಿಗಳನ್ನು ಪರಮಾತ್ಮನು ಪೋಷಣೆ ಮಾಡುತ್ತಾನೆ. ಇದನ್ನೆ ವಿಷ್ಣು ಸಹಸ್ರನಾಮದಲ್ಲಿ ಮೂವತ್ತು ಮೂವತ್ತೊಂದನೆಯ ಶ್ಲೋಕಗಳಲ್ಲಿ ಅಮೃತಾಂಶೋದ್ಭವೋ ಭಾನು ಶಶಿಬಿಂದು ಎಂಬ ಸುಂದರ ಅಕ್ಷರಳಿಂದ ಪ್ರಕಾಶ ರೂಪನಾಗಿ ಸೂರ್ಯನಲ್ಲಿದ್ದು ಪ್ರಾಣ ಬಲ, ರಸರೂಪನಾಗಿ ಚಂದ್ರನಿಂದ ಔಷಧಿ ಸತ್ವನಾಗಿ ಧನ್ವಂತರಿ ಎನಿಸುವನು.
ವಾಯುವಿನಲ್ಲಿಚೈತನ್ಯರೂಪದಿಂದ ನೆಲೆಸಿದ್ದು ಜಡ ಚೇತನ ಜೀವಿಗಳಲ್ಲಿ ಪಕ್ಷಪಾತವಿಲ್ಲದೆ ಶ್ವಾಸೋಚ್ಛ್ವಾಸ ಮಾಡಿಸುವನು. ಪ್ರಕತಿಯಲ್ಲಿಜೀವಿಸುವವರೆಲ್ಲರೂ ಮಾಡಿದ ಕರ್ಮಗಳೆಲ್ಲವನ್ನು ವಾಯುದ್ವಾರವಾಗಿ ಪರಮಾತ್ಮನಿಗೆ ಮುಟ್ಟುವವು. ಅಗ್ನಿಯಿಂದ ಧಾನ್ಯಗಳು ಅನ್ನರೂಪವಾಗಿ ಜೀವಿಗಳಿಗೆ ಸಾತ್ವಿಕ ಆಹಾರದ ರೂಪದಲ್ಲಿ ಶರೀರಕ್ಕೆ ಶಕ್ತಿ ನೀಡುತ್ತದೆ. ಅಲ್ಲದೆ ನಾವು ಮಾಡುವ ಪ್ರತಿಯೊಂದು ಕರ್ಮಗಳನ್ನು ಯಜ್ಞ ರೂಪವೆಂದು ದೇವರ ಮುಂದೆ ದೀಪ ಹಚ್ಚಿದರೆ ಆ ದೀಪದಲ್ಲಿ ಹದಿಮೂರು ರೂಪಗಳಲ್ಲಿದ್ದು ತನ್ನ ಸಾಖ್ಯತನವನ್ನು ಲಲಿತರೂಪವಾಗಿ ಪ್ರಕೃತಿಯಿಂದ ಕೊಡುವನು. ಭೂಮಿ ಈ ಎಲ್ಲ ಭೂತ ಜೀವಿಗಳನ್ನು ಧಾರಣ ಮಾಡಿ ಕಾರುಣ್ಯದ ಮಮತೆಯಿಂದ ತಾಯಿಯ ವಾತ್ಸಲ್ಯ ನೀಡಿ ಆತ್ಮ ಪರಮಾತ್ಮನ ಸಂಹಿತೆಯ ಗಂಧವನ್ನು ಪ್ರಕೃತಿಯ ಮಡಿಲಲ್ಲಿ ಇರುವ ವಿದ್ಯೆ ಎಂಬ ಸರಸ್ವತೀ ರೂಪದಲ್ಲಿ ಗುಪ್ತಗಾಮಿನಿಯಾಗಿರುವಳು. ಹೀಗೆ ಪ್ರಕೃತಿಯ ವೈಶಿಷ್ಟ್ಯ ವೈಭವ ಎಲ್ಲವೂ ಪರಮಾತ್ಮನ ಸ್ವಭಾವ ಅವನ ಸ್ವ ಇಚ್ಛೆಯ ಸ್ವರೂಪವೆ ಪ್ರಕೃತಿ. ಅಕ್ಷರಪುರುಷಳು ಎನಿಸಿದ ಮಹಾಲಕ್ಷ್ಮೀಯ ಅನುಗ್ರಹದಿಂದ ಪರಮಾತ್ಮನ ಸ್ವ ಇಚ್ಛೆಯ ಸ್ವರೂಪವಾದ ಪ್ರಕೃತಿಯ ಸಹಾಯ ಎಲ್ಲರಿಗೂ ಒಳ್ಳೆಯದನ್ನು ಕರುಣಿಸಲಿ ಎಂದು ಪ್ರಾರ್ಥಿಸಿ ಈ ಸಂಚಿಕೆಯನ್ನು ಮುಗಿಸುತ್ತೇನೆ.
ಶ್ರೀ ಹರಿಯ ಸ್ವ ಶಕ್ತಿ ಓ ಪ್ರಕೃತಿ
ನಿನ್ನ ಕರುಣೆಯಿಂದಾಗಲಿನನ್ನ ಕೃತಿ
ನಿನ್ನ ಕರುಣೆಯಿಂದ ಜಯಾಪಜಯ
ನಿನ್ನ ಕರುಣೆಯಿಂದ ಸಾಗಲಿ ಈ ಕಾಯ
ನೀನು ಅಜಾದಿ ಮೂರ್ತಿಯ ಅಂತರಾತ್ಮ
ನಿನ್ನ ಅನುಗ್ರಹ ಕೇಳುತಿದೆ ನನ್ನಾತ್ಮ
ನಿನ್ನ ವಿಶಾಲ ಮಹಿಮೆ ನಾನರಿಯೆ
ನನ್ನ ಪಾಲಿಸು ಶ್ರೀ ವರನ ಸಿರಿಯೆ
ಮಾತರಿಶ್ವಾಂತರ್ಗತ ಶ್ರೀಹರಿಯ ಕಳತ್ರ
ನನ್ನ ಜೀವನದಲಿರಲಿ ಪ್ರೀತಿಯ ಸೂತ್ರ
ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂರ್ಗತ ಶ್ರೀ ಲಕ್ಷ್ಮೀ ಪ್ರೀತ್ಯರ್ಥಮ್ ಶ್ರೀ ಕೃಷ್ಣಾರ್ಪಣ ಮಸ್ತು
ಹರಿ ಕಥಾಮೃತಸಾರ ಹಿಂದಿನ ಸಂಚಿಕೆಗಳು:
- ಹರಿ ಕಥಾಮೃತಸಾರ (ಭಾಗ – ೧)
- ಹರಿ ಕಥಾಮೃತಸಾರ (ಭಾಗ – ೨)
- ಹರಿ ಕಥಾಮೃತಸಾರ (ಭಾಗ – ೩)
- ಹರಿ ಕಥಾಮೃತಸಾರ (ಭಾಗ – ೪)
- ಹರಿ ಕಥಾಮೃತಸಾರ (ಭಾಗ – ೫)
- ಹರಿ ಕಥಾಮೃತಸಾರ (ಭಾಗ – ೬)
- ಹರಿ ಕಥಾಮೃತಸಾರ (ಭಾಗ – ೭)
- ಹರಿ ಕಥಾಮೃತಸಾರ (ಭಾಗ – ೮)
- ಹರಿ ಕಥಾಮೃತಸಾರ (ಭಾಗ – ೯)
- ಹರಿ ಕಥಾಮೃತಸಾರ (ಭಾಗ – ೧೦)
- ಹರಿ ಕಥಾಮೃತಸಾರ (ಭಾಗ – ೧೧)
- ಹರಿ ಕಥಾಮೃತಸಾರ (ಭಾಗ – ೧೨)
- ಹರಿ ಕಥಾಮೃತಸಾರ (ಭಾಗ – ೧೩)
- ಹರಿ ಕಥಾಮೃತಸಾರ (ಭಾಗ – ೧೪)
- ಹರಿ ಕಥಾಮೃತಸಾರ (ಭಾಗ – ೧೫)
- ಹರಿ ಕಥಾಮೃತಸಾರ (ಭಾಗ – ೧೬)
- ಸಂಧ್ಯಾ ಟಿ – ಲೇಖಕರು, ಕವಿಗಳು, ಬೆಂಗಳೂರು.
