ಕನ್ನಡ ರಾಜ್ಯೋತ್ಸವ ಆಚರಣೆಯ ಮುಖ್ಯ ಉದ್ದೇಶ ನಮ್ಮ ನಾಡು, ನುಡಿಯ ಹಿರಿಮೆಯನ್ನು ಸ್ಮರಿಸುವುದು. ಮನೆಯಲ್ಲಿ ಕನ್ನಡದ ವಾತಾವರಣ ಸೃಷ್ಠಿಸೋಣ, ಪ್ರತಿದಿನ ಕನ್ನಡ ದಿನಪತ್ರಿಕೆ ತರಿಸಿ ಮಕ್ಕಳಿಗೆ ಓದಲು ಪ್ರಚೋದಿಸೋಣ. ಪದ್ಮನಾಭ ಡಿ ಅವರು ಕನ್ನಡದ ಕುರಿತು ಬರೆದ ಲೇಖನವನ್ನು ತಪ್ಪದೆ ಓದಿ…
ಯಾವುದೇ ಒಂದು ಹಬ್ಬ ಅಥವ ಉತ್ಸವವನ್ನು ಆಚರಿಸುವ ಹಿಂದೆ ಹಲವು ಕಾರಣಗಳು ಇರುತ್ತವೆ.ಇದರಲ್ಲಿ ಪ್ರಮುಖ ಕಾರಣವೆಂದರೆ ನಮ್ಮನಮ್ಮಲ್ಲಿ ಇರುವ ಮನಸ್ತಾಪವನ್ನು ಮರೆತು, ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ಸಾಮರಸ್ಯ ಬೆಳೆಸುವುದು, . ತನ್ಮೂಲಕ ಮುಂದೆ ನಾವೇನು ಮಾಡಬೇಕಿದೆ? ಒಟ್ಟಾಗಿ ಸೇರಿ .ಏನು ಮಾಡಬಹುದು ಎಂದು ಚಿಂತಿಸಲು ಒಂದು ವೇದಿಕೆ ಕಲ್ಪಿಸುವುದೇ ಆಗಿದೆ.

ಮನೆಯ ಒಳಗೆ ಕೌಟುಂಬಿಕ ಚೌಕಟ್ಟಿನಲ್ಲಿ ಎಲ್ಲ ಸದಸ್ಯರು ಸೇರಿ ಆಚರಿಸುವುದು ಹಬ್ಬವೆನಿಸಿದರೆ ಮನೆಯ ಹೊರಗೆ ಹಲವಾರು ಸಮಾನ ಮನಸುಗಳು ಸೇರಿ ಸಂಭ್ರಮಿಸುವ ಆಚರಣೆಗಳು ಉತ್ಸವ ಎನಿಸುತ್ತವೆ. ಕೆಲವು ಉತ್ಸವಗಳು ಆಯಾ ಪ್ರದೇಶದ ಜನರ ಧಾರ್ಮಿಕ ನಂಬಿಕೆ ಸಂಪ್ರದಾಯಗಳಿಗೆ ಅನುಗುಣವಾಗಿ ಆಚರಿಸಲ್ಪಟ್ಟರೆ, ಕನ್ನಡ ರಾಜ್ಯೋತ್ಸವ, ಜಾತಿ, ಧರ್ಮ ಪ್ರಾದೇಶಿಕ ಪಂಗಡಗಳ ಪರಿಧಿಯನ್ನು ಮೀರಿ ಕನ್ನಡತನವನ್ನು ಮೆರೆಸುವ, ಕನ್ನಡ ಮನಸ್ಸುಗಳ ಆಚರಣೆಯಾಗಿರುತ್ತದೆ. ರಾಜ್ಯೋತ್ಸವ ಆಚರಣೆಯ ಮುಖ್ಯ ಉದ್ದೇಶ ನಮ್ಮ ನಾಡು ನುಡಿಯ ಹಿರಿಮೆಯನ್ನು ಸ್ಮರಿಸುವುದು ಹಾಗೂ ಅದಕ್ಕಾಗಿ ದುಡಿದವರನ್ನು ಸ್ಮರಿಸುವುದಷ್ಟೇ ಅಲ್ಲದೆ ಅವರ ಆದರ್ಶಗಳ ಹಾದಿಯಲ್ಲಿ ನಾವು ಏನು ಮಾಡಬೇಕಿದೆ ಎಂಬ ಚಿಂತನೆ ನಡೆಸುವುದೂ ಸಹ ಆಗಿದೆ. ಗತವೈಭವವನ್ನು ಹಾಡಿ ಹೊಗಳುವ ಜೊತೆಗೆ ಘೋಷಣೆಗಳನ್ನು ಕೂಗುವ ಜೊತೆಗೆ ಮುಂದಿನ ಪೀಳಿಗೆಗೆ ಕನ್ನಡದ ಮೇಲೆ ಅಭಿಮಾನ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಮೂಡಿಸುವುದು ಅತ್ಯಂತ ಮುಖ್ಯವಾಗಿದೆ. ಸಾಕಷ್ಟು ಸಂಘಟನೆಗಳು ಈ ನಿಟ್ಟಿನಲ್ಲಿ ಕವಿಗೋಷ್ಠಿ, ಗೀತಗಾಯನ ಸಾಧಕರಿಗೆ ಸನ್ಮಾನ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಇದರಲ್ಲಿ ಸಾಕಷ್ಟು ಮಂದಿ ಆಸಕ್ತರು ಭಾಗವಹಿಸುತ್ತಿದ್ದಾರೆ.
ಕನ್ನಡದ ಕಂಪು ಹರಡುವುದು ಕೇವಲ ಸಂಘಟಕರ ಕೆಲಸವಷ್ಟೇ ಅಲ್ಲ, ನಮ್ಮೆಲ್ಲರ ಜವಾಬ್ದಾರಿ ಸಹ ಎಂದು ತಿಳಿಯಬೇಕಿದೆ. ಅಕಸ್ಮಾತ್ ಸಣ್ಣ ಪುಟ್ಟ ಲೋಪಗಳಾಗಿದ್ದರೆ ದೊಡ್ಡ ಪ್ರಮಾದ ಎಂಬಂತೆ ಬಿಂಬಿಸುವ ಅಗತ್ಯವಿಲ್ಲ. ಕಾರ್ಯಕ್ರಮದ ನಿರ್ವಾಹಕ ಎಂದರೆ ಅಧಿಕಾರವಲ್ಲ ಅದೊಂದು ಜವಾಬ್ದಾರಿ. ಅದನ್ನು ಅವರು ಸಂತೋಷದಿಂದ ಮಾಡಿರುತ್ತಾರೆ ಅಲ್ಲವೇ?
ನಾನು ಮೊದಲೇ ಹೇಳಿದಂತೆ ಯಾವುದೇ ಯಾವುದೇ ಆಚರಣೆಯ ಉದ್ದೇಶ. ಒಬ್ಬಟ್ಟು ಸವಿಯವುದಕ್ಕಿಂತ ಒಗ್ಗಟ್ಟು ಸವಿಯುವುದೇ ಆಗಬೇಕು. ಎಲ್ಲರೂ ಸಂಘಟನೆ ಮತ್ತು ಕಾರ್ಯಕ್ರಮ ನಿರ್ವಹಣೆಯನ್ನು ಅಥವ ಕಾರ್ಯಕ್ರಮದ ಆಯೋಜನೆ ಮಾಡಲು ಸಾಧ್ಯವಿಲ್ಲ ಆದರೆ ಸದುದ್ದೇಶದಿಂದ ಮಾಡುವವರ ಬೆನ್ನು ತಟ್ಟಬಹುದು.
ಕೊನೆಯದಾಗಿ ಕನ್ನಡದ ಅಭಿಮಾನ ಸಾರಲು ಇನ್ನೇನು ಮಾಡದಿದ್ದರೂ ಬೇಡ ಮನೆಯಲ್ಲಿ ಕನ್ನಡದ ವಾತಾವರಣ ಸೃಷ್ಟಿಸಿದರೆ, ಪ್ರತಿದಿನ ಕನ್ನಡ ದಿನಪತ್ರಿಕೆ ತರಿಸಿ ಓದಲು ಮಕ್ಕಳಿಗೆ ಪ್ರಚೋದಿಸಿದರೆ, ತಿಂಗಳಿಗೊಂದು ಕನ್ನಡ ಪುಸ್ತಕ ಖರೀದಿಸಿದರೆ ಸಾಕು. ನಾವು ಓದಿ ಅದರ ಬಗ್ಗೆ ಒಂದೆರಡು ಮಾತು ಆಡಿದರೆ ಕನ್ನಡದ ಗೀತೆಗಳನ್ನು ಕೇಳಿದರೆ ಕೇಳಿಸಿದರೆ ಮಕ್ಕಳಿಗೂ ಮನಸ್ಸಾಗುತ್ತದೆ. ಮಕ್ಕಳಿಸ್ಕೂಲ್ ಮನೇಲಲ್ವೇ? ಏನಂತೀರಿ?
- ಪದ್ಮನಾಭ ಡಿ – ಕವಿಗಳು, ಲೇಖಕರು
