ಕನ್ನಡ ಭಾಷೆ ನಮ್ಮಿಂದ ಏನನ್ನೂ ಬೇಡುವುದಿಲ್ಲ

ಕನ್ನಡವನ್ನು ಪ್ರೀತಿಸುವುದೆಂದರೆ ಬೇರೆ ಭಾಷೆಗಳನ್ನು ದ್ವೇಷಿಸುವುದಲ್ಲ. ಎಲ್ಲ ಭಾಷೆಗಳಿಗೂ ಗೌರವ ಕೊಡುತ್ತಲೇ ನಮ್ಮ ಭಾಷೆಯ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ನಿಜವಾದ ಭಾಷಾಭಿಮಾನ. ಲೇಖಕರಾದ ಪಾರ್ವತಿ ಜಗದೀಶ್ ಅವರು ಕನ್ನಡದ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ಕನ್ನಡವನ್ನು ಪ್ರೀತಿಸುವುದೆಂದರೆ ಬೇರೆ ಭಾಷೆಗಳನ್ನು ದ್ವೇಷಿಸುವುದಲ್ಲ. ಎಲ್ಲ ಭಾಷೆಗಳಿಗೂ ಗೌರವ ಕೊಡುತ್ತಲೇ ನಮ್ಮ ಭಾಷೆಯ ಅಸ್ತಿತ್ವವನ್ನು ಉಳಿಸಿಕೊಳ್ಳುವುದು. ನಿಜವಾದ ಭಾಷಾಭಿಮಾನ.

ನವೆಂಬರ್ ಒಂದರಂದು ಕನ್ನಡಕ್ಕಾಗಿ ಧ್ವನಿ ಎತ್ತುವ ನಾವು, ನವೆಂಬರ್ ಎರಡರಿಂದ ಕನ್ನಡವನ್ನು ನಮ್ಮ ಬದುಕಿನಲ್ಲಿ ಎಷ್ಟು ಜೀವಂತವಾಗಿರಿಸುತ್ತೇವೆ? ಈ ಪ್ರಶ್ನೆ ಸ್ವಲ್ಪ ಕಹಿ ಎನಿಸಬಹುದು. ಆದರೆ ಕನ್ನಡದ ಮೇಲಿನ ಪ್ರೀತಿ ಕೇವಲ ಒಂದು ದಿನದ ಸಂಭ್ರಮಕ್ಕೆ ಸೀಮಿತವಾಗಬಾರದು ಎನ್ನುವ ಕಾಳಜಿಯಿಂದ ಈ ಪ್ರಶ್ನೆ ಕೇಳಲೇಬೇಕಾಗಿದೆ.

ನವೆಂಬರ್ ತಿಂಗಳು ಆರಂಭವಾಗುತ್ತಿದ್ದಂತೆ ನಾಡಿನಾದ್ಯಂತ ಕೆಂಪು ಹಳದಿ ಬಣ್ಣದ ಸಂಭ್ರಮ. ಬೀದಿ ಬೀದಿಗಳಲ್ಲಿ ಕನ್ನಡದ ಬಾವುಟಗಳು, ಕನ್ನಡದ ಹಾಡುಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಕನ್ನಡದ ಕುರಿತ ಭಾಷಣಗಳು. ಎಲ್ಲೆಲ್ಲೂ ಕನ್ನಡದ ಕಂಪು. ಇದೆಲ್ಲವನ್ನೂ ನೋಡುವಾಗ ಮನಸ್ಸಿಗೆ ಹೆಮ್ಮೆಯಾಗುತ್ತದೆ. ಆದರೆ ಈ ಸಂಭ್ರಮದ ನಡುವೆ ನಾವೊಂದು ಸಂಗತಿಯನ್ನು ಮರೆಯಬಾರದು. #ಕನ್ನಡ ರಾಜ್ಯೋತ್ಸವವೆಂದರೆ ಕೇವಲ ಬಾವುಟ ಹಾರಿಸುವ ದಿನವಲ್ಲ. ನಮ್ಮ ಭಾಷೆ, ನೆಲ, ಸಂಸ್ಕೃತಿ ಮತ್ತು ಅಸ್ಮಿತೆಯನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವ ದಿನ.

ಫೋಟೋ ಕೃಪೆ : ಶಿವದೇವಿ

ಒಂದು ಕಾಲದಲ್ಲಿ ಕನ್ನಡ ಭಾಷಿಕ ಪ್ರದೇಶಗಳು ಬೇರೆ ಬೇರೆ ಆಡಳಿತಗಳ ಅಡಿಯಲ್ಲಿ ಹರಿದು ಹಂಚಿಹೋಗಿದ್ದವು. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ, ಮಲೆನಾಡು ಹೀಗೆ ಭೌಗೋಳಿಕವಾಗಿ ಬೇರೆಬೇರೆಯಾಗಿದ್ದ ಕನ್ನಡಿಗರನ್ನು ಭಾಷೆಯ ಆಧಾರದಲ್ಲಿ ಒಂದಾಗಿಸುವ ಕನಸು ಅನೇಕ ಮಹನೀಯರದ್ದಾಗಿತ್ತು. ಅದರ ಫಲವಾಗಿ 1956ರ ನವೆಂಬರ್ 1ರಂದು ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯ ರಚನೆಯಾಯಿತು. ನಂತರ #1973ರ ನವೆಂಬರ್ 1ರಂದು ನಮ್ಮ ರಾಜ್ಯಕ್ಕೆ #ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು.

ಈ ಏಕೀಕರಣದ ಹಿಂದೆ ಅನೇಕ ಹೋರಾಟಗಾರರ ಪರಿಶ್ರಮ, ತ್ಯಾಗ, ಕನಸು ಮತ್ತು ಕನ್ನಡದ ಮೇಲಿನ ಅಪಾರ ಅಭಿಮಾನವಿದೆ. ನಾವು ಇಂದು ಹೆಮ್ಮೆಯಿಂದ ಕರ್ನಾಟಕದವರು ಎಂದು ಹೇಳಿಕೊಳ್ಳುವಾಗ ಅವರ ಕೊಡುಗೆಯನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಆದರೆ ಇಂದಿನ ಕನ್ನಡದ ಸ್ಥಿತಿಯ ಬಗ್ಗೆ ಸ್ವಲ್ಪ ಯೋಚಿಸೋಣ. ನಮ್ಮ ಮಕ್ಕಳಿಗೆ ಇಂಗ್ಲಿಷ್ ಕಲಿಸಬಾರದು ಎಂದಲ್ಲ. ಜಗತ್ತಿನ ಯಾವುದೇ ಭಾಷೆಯನ್ನು ಕಲಿಯಲಿ, ಜ್ಞಾನ ಸಂಪಾದಿಸಲಿ, ಎತ್ತರಕ್ಕೆ ಬೆಳೆಯಲಿ. ಆದರೆ ಅದಕ್ಕಾಗಿ ತಾಯ್ನುಡಿಯನ್ನೇ ಕಡೆಗಣಿಸಬೇಕೇ?
ಮಗುವಿಗೆ ಇಂಗ್ಲಿಷ್‌ನಲ್ಲಿ ಎರಡು ವಾಕ್ಯ ಮಾತನಾಡಲು ಬಂದರೆ ಹೆಮ್ಮೆಪಡುವ ನಾವು, ಅದೇ ಮಗು ಕನ್ನಡದಲ್ಲಿ ಚೆನ್ನಾಗಿ ಓದಿ, ಬರೆದು, ಮಾತನಾಡಿದಾಗಲೂ ಅಷ್ಟೇ ಹೆಮ್ಮೆಪಡುತ್ತೇವೆಯೇ? ಅಂಗಡಿಗಳ ನಾಮಫಲಕಗಳಲ್ಲಿ, ಕಚೇರಿಗಳ ವ್ಯವಹಾರಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡಕ್ಕೆ ಆದ್ಯತೆ ಸಿಗಬೇಕೆಂದು ಬಯಸುವ ನಾವು, ನಮ್ಮ ದಿನನಿತ್ಯದ ಬದುಕಿನಲ್ಲಿ ಕನ್ನಡಕ್ಕೆ ಎಷ್ಟು ಆದ್ಯತೆ ಕೊಡುತ್ತಿದ್ದೇವೆ?. ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಪರವಾಗಿ ಪೋಸ್ಟ್ ಹಂಚಿಕೊಳ್ಳುವುದು ಸುಲಭ. ಆದರೆ ಕನ್ನಡ #ಪುಸ್ತಕವೊಂದನ್ನು ಕೊಂಡು ಓದುವುದು, ಕನ್ನಡ #ಲೇಖಕರನ್ನು ಪ್ರೋತ್ಸಾಹಿಸುವುದು, ಕನ್ನಡದ #ಹೊಸ ಬರಹಗಾರರಿಗೆ ಬೆಂಬಲ ನೀಡುವುದು ಕೂಡ ಭಾಷಾಭಿಮಾನವೇ.

ಕನ್ನಡವೆಂದರೆ ಕೇವಲ ಸಂವಹನದ ಸಾಧನವಲ್ಲ. ಅದು ನಮ್ಮ ಅಜ್ಜಿಯ ಕಥೆಗಳಲ್ಲಿ ಉಳಿದ ನೆನಪು, ಅಮ್ಮನ ಜೋಗುಳದಲ್ಲಿ ಹರಿದ ಮಮತೆ, ಜನಪದ ಹಾಡುಗಳಲ್ಲಿ ಮೊಳಗಿದ ಬದುಕು, ವಚನಕಾರರ ವಿಚಾರಧಾರೆ, ದಾಸರ ಪದಗಳ ಭಕ್ತಿ, ಕವಿಗಳ ಕಲ್ಪನೆ ಮತ್ತು ಸಾಮಾನ್ಯ ಜನರ ದಿನನಿತ್ಯದ ಬದುಕಿನ ಜೀವಾಳ.

ಕನ್ನಡದ ಸೊಗಡು ಒಂದೊಂದು ಪ್ರದೇಶದಲ್ಲೂ ಒಂದೊಂದು ರೀತಿಯಿದೆ. ಉತ್ತರ ಕರ್ನಾಟಕದ ಸೊಗಡಿನ ಮಾತು, ಮಲೆನಾಡಿನ ಭಾಷಾ ವೈಶಿಷ್ಟ್ಯ, ಕರಾವಳಿಯ ನುಡಿಗಟ್ಟು, ಹಳೆ ಮೈಸೂರಿನ ಸೊಗಸು… ಇವೆಲ್ಲವೂ ಸೇರಿಯೇ ನಮ್ಮ ಕನ್ನಡದ ಶ್ರೀಮಂತಿಕೆ. ನಮ್ಮ ಉಪಭಾಷೆಗಳನ್ನು ಕೀಳಾಗಿ ಕಾಣದೆ ಅವುಗಳನ್ನೂ ಗೌರವಿಸಬೇಕು.

ಮತ್ತೊಂದು ಸಂಗತಿ ನೆನಪಿರಲಿ. ಕನ್ನಡವನ್ನು ಪ್ರೀತಿಸುವುದೆಂದರೆ ಬೇರೆ ಭಾಷೆಗಳನ್ನು ದ್ವೇಷಿಸುವುದಲ್ಲ. ಎಲ್ಲ ಭಾಷೆಗಳಿಗೂ ಗೌರವ ಕೊಡುತ್ತಲೇ ನಮ್ಮ ಭಾಷೆಯ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ನಿಜವಾದ ಭಾಷಾಭಿಮಾನ. ಭಾಷೆ ಬೆಳೆಯಬೇಕಾದರೆ ಅದರಲ್ಲಿ ಹೊಸ ಸಾಹಿತ್ಯ ಸೃಷ್ಟಿಯಾಗಬೇಕು, ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಗಳು ಕನ್ನಡದಲ್ಲಿ ಲಭ್ಯವಾಗಬೇಕು, ಕನ್ನಡದಲ್ಲಿ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳು ಹೆಚ್ಚಬೇಕು. ನಮ್ಮ ಯುವಜನತೆ ಕನ್ನಡದಲ್ಲಿ ಯೋಚಿಸಲು, ಬರೆಯಲು, ಹೊಸ ಆಲೋಚನೆಗಳನ್ನು ಹಂಚಿಕೊಳ್ಳಲು ಹೆಮ್ಮೆಪಡಬೇಕು.

ನಮ್ಮ ಮುಂದಿನ ಪೀಳಿಗೆಗೆ ಕನ್ನಡವನ್ನು ಕೇವಲ ಪಠ್ಯಪುಸ್ತಕದ ಒಂದು ವಿಷಯವಾಗಿ ಪರಿಚಯಿಸಬಾರದು. ಬದುಕಿನ ಒಂದು ಸುಂದರ ಭಾಗವಾಗಿ ಪರಿಚಯಿಸಬೇಕು. ಕನ್ನಡವನ್ನು ಉಳಿಸಲು ಪ್ರತಿಯೊಬ್ಬರೂ ಹೋರಾಟಗಾರರಾಗಬೇಕಿಲ್ಲ. ನಮ್ಮ ಮನೆಯೊಳಗೆ ಕನ್ನಡ ಮಾತನಾಡೋಣ, ನಮ್ಮ ಮಕ್ಕಳಿಗೆ ಕನ್ನಡ ಓದಲು ಕಲಿಸೋಣ, ಕನ್ನಡ ಪುಸ್ತಕಗಳನ್ನು ಓದೋಣ, ಕನ್ನಡದ ಸೃಜನಶೀಲತೆಯನ್ನು ಪ್ರೋತ್ಸಾಹಿಸೋಣ. ನಮ್ಮ ಕೈಲಾದಷ್ಟು ಕನ್ನಡದ ಬಳಕೆಯನ್ನು ಹೆಚ್ಚಿಸೋಣ.

ಕೊನೆಯದಾಗಿ ಒಂದು ಮಾತು…
ಭಾಷೆ ನಮ್ಮಿಂದ ಏನನ್ನೂ ಬೇಡುವುದಿಲ್ಲ. ಆದರೆ ನಾವು ಅದಕ್ಕೆ ಕೊಡುವ ಗೌರವವೇ ಅದರ ಮುಂದಿನ ಪೀಳಿಗೆಯ ಭವಿಷ್ಯವನ್ನು ನಿರ್ಧರಿಸುತ್ತದೆ. ನಮ್ಮನ್ನು ಗುರುತಿಸುವುದು ಕೇವಲ ನಮ್ಮ ಹೆಸರಲ್ಲ, ನಮ್ಮ ನೆಲದ ಅಸ್ಮಿತೆಯೂ ಹೌದು. ಆ ಅಸ್ಮಿತೆಯ ಹೆಸರೇ ಕನ್ನಡ. ಕನ್ನಡ ಕೇವಲ ನಮ್ಮ ಮಾತಾಗಬಾರದು, ನಮ್ಮ ಮನಸ್ಸಿನ ಭಾವವಾಗಬೇಕು. ಕನ್ನಡ ಕೇವಲ ನಮ್ಮ ಸಂಭ್ರಮವಾಗಬಾರದು, ನಮ್ಮ ನಿತ್ಯದ ಬದುಕಾಗಬೇಕು.

ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಬಾಳ್ಗೆ!

ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.


  •  ಪಾರ್ವತಿ ಜಗದೀಶ್ – ಲೇಖಕರು, ಮಹಿಳಾ ಉದ್ಯಮಿಗಳು, ಹಾವೇರಿ.

Leave a Reply

Home
Search
Menu
Recent
About
×