ಕೊಪ್ಪಳಂದ್ರ ಪವಿತ್ರ ನಾಡು. ಈ ಕೊಪ್ಳ ನಾಡಿನ ಜನಾ ಅಂದ್ರ ಹಾಂಗ ಯಾವಾಗಲೂ ಪಿರೂತಿ ಪಣಿವಾರಾ ಹಂಚವ್ರು. ತುಂಗೆ ಅಂಗಳದ ಕೊಪ್ಪಳದ ಕುರಿತು ನಿವೃತ್ತ ಗಣಿತ ಪ್ರಾಧ್ಯಾಪಕರಾದ ಕೊರಗಲ್ಲ ವಿರೂಪಾಕ್ಷಪ್ಪ ಅವರ “ಕೊಪ್ಪಳ-ಹಾವೇರಿಯ ನೆನಪಿನಂಗಳದಿಂದ” ಅಂಕಣವನ್ನು ತಪ್ಪದೆ ಓದಿ…
ಕನ್ನಡ ನಾಡು ಈ ಕಾವೇರಿಯಿಂದ ಆ ಗೋದಾವರಿ ಮಟಾ (ವರೆಗೆ) ಕಾಲು ಚಾಚೈತೆ ಅಂತಾ ಹೇಳ್ತಾನ ರಾಷ್ಟ್ರಕೂಟ ದೊರಿ ನೃಪತುಂಗ. ಈ ಕನ್ನಡ ದೇಶದೊಳಗಿನ ಕನ್ನಡ ಸಾಹಿತ್ಯ, ಕನ್ನಡದ ಜನಪದ, ಭಾಷೆ ಮುಂತಾದವುಗಳ ತಿರುಳೇ ಇಲ್ಲಿ ಕೊಪ್ಪಳ ನಾಡಿನೊಳಗೈತೆ ಅಂತಾನೂ ಆತ ಹೇಳ್ತಾನ. ಅದಕ್ಕ ಇದುನ್ನ ತಿರುಳ್ಗನ್ನಡ ನಾಡು ಅಂತಾ ಕರ್ದು ಬುಟ್ಟಾರ. ನಮ್ಮ ಈ ಕೊಪ್ಳವನ್ನು ಕೊಪಣನಗರ ಅಂತಾ ಕರ್ದು ಹೆಸರುವಾಸಿ ಆಗು ಹಂಗ ಮಾಡಿದ ನೃಪತುಂಗ ಮಾರಾಜನ್ನ ಬುಡ್ರಿ, ಆತಗಿಂತ ಎಲ್ಡೂವರಿ ಸಾವಿರ ವರ್ಸ ಮೊದ್ಲನ ನಮ್ಮ ಕೊಪಣಾಚಲಕ್ಕ ಬಂದು ಅಡ್ಡಾಡಿ ಅಕ್ಸರಾ ಬರ್ದು ಹ್ವಾದ ಅಶೋಕ ಮಾರಾಜನ ದಿನಮಾನದಿಂದ ನಮ್ಮ ಕೊಪ್ಳ ನಾಡು ಹೆಸರು ಮಾಡಿದ ನಾಡಾಗೈತೆ. ‘ಕೊಲ್ಲಬಾರದು’ ಅಂಬೋ ‘ಜಿನ’ ನನ್ನ ತಲಿ ಮ್ಯಾಲೆ ಇರ್ಲಿ ಅಂದವ್ರು ನಾವು. ಅದಕ್ಕ ಅಹಿಂಸಾ ಪ್ರೀಯರೂ ಈ ಕೊಪ್ಳ ನಾಡಿನೊಳಗದಾರ ಅಂಬೋ ಸುದ್ದೀ ಕೇಳಿ ನಮ್ಮ ಇಂದ್ರಕೀಲ ಪರ್ವತದ ಮ್ಯಾಲೆ ಮೆಟ್ಟು ಮಾಡಿಕೊಂಡಿದ್ದ ಜೈನರ ಸುದ್ದಿನೂ ನೀವು ಕೇಳೀರಿ. ಕೊಪಣಾಚಲದಂತೆ ಪವಿತ್ರ ಅತ್ತಿಮಬ್ಬೆಯ ಚರಿತೆ ಎಂದು ಸಾರಿದ ರನ್ನನ ನುಡಿ, ಕೊಪ್ಪಳಂದ್ರ ಪವಿತ್ರ ನಾಡು ಅಂಬೋ ಪ್ರಮಾಣ ಪತ್ರನ ಕೊಟ್ಟು ಬುಟ್ತು. ಅಂದರೆ ನಮ್ಮ ಕೊಪ್ಳ ಅಂಬೋ ಕೊಪ್ಳ ಜಾತಿ, ಧರ್ಮಾನೆಲ್ಲಾ ತೆಗದಿಟ್ಟು ವೀಶ್ವ ಮಾನವರಾದವರ ದೇಶ ಆಗಿ ಬುಟ್ಟಿತು. ಕೊಪ್ಳ ಅಂಬೋ ಒಂದು ಊರಿಗ್ಯಾಕ ದೇಶ ಅಂತೀರಂತಾ ಕೇಳ್ತೀರೇನು? ಹೌದರಿ ನಮ್ಮ ಕೊಪ್ಳ ಒಂದು ಕಾಲಕ್ಕ ಒಂದು ದೇಶಾನ ಆಗಿತ್ತು. ಅವ್ವಲ್ ಅಲ್ಲಾಹ ಹಜರತ ಸಾಲಾರ ಜಂಗ ಬಹದ್ದೂರ ಈ ಕೊಪ್ಳ ನಾಡಿನ ನವಾಬಸಾಹೇಬ ಆಗಿದ್ದ.
ಮನಿ ಮಠಾ ಬುಟ್ಟು ಬಂದು ಗವಿಯೊಳಗ ಮೆಟ್ಟು ಮಾಡಿಕೊಂಡಿದ್ದು ಜನರ ಸೇವಾ ಮಾಡತಿದ್ದ ಗವಿಸಿದ್ಧ ಅಂಬೋ ಅಲೆಮಾರಿಯನ್ನು ದೇವರ ಮಾಡಿ ಕುಂದ್ರಿಸಿದ ಭಕ್ತರು ನಾವು. ಆ ಗವಿಸಿದ್ಧಾ, ಸ್ವಾಮಿ ಆಗಿ ಪಲ್ಲಕ್ಕಿ ಏರಿ ಮೆರಿಲಿಲ್ಲ. ಆಳಾಗಿ ಜನರ ಸೇವಾ ಮಾಡ್ತಿದ್ದಕ್ಕ ಕೊಪ್ಳದ ನವಾಬ ಸಾಹೇಬ ಗವಿಸಿದ್ಧಪ್ಪಗೂ ‘ಬಗನಾಳ’ ಅಂಬೊ ಗ್ರಾಮಾ ಬಳುವಳಿ ಕೊಟ್ಟು ಉಣಿಸಿದ. ರೋಗಾ, ರುಜಿನಕ್ಕ ಔಸದಿ ಕೊಟ್ಟು ಸೇವಾ ಮಾಡ್ತಿದ್ದಾತನ ಗವಿಗೆ ಬಂದು, ನಜರಿತ್ತು (ಕಾಣಿಕೆ), ನಡು ಬಾಗಿ ಸಲಾಮು ಮಾಡ್ತಿದ್ದ ನವಾಬ ಸಾಬು, “ಎಲ್ಲಾ ಸಲಾಮತ್ತ ಐತನಪ್ಪಾ?” ಎಂದು ಇಚಾರಿಸಿಕೊಳ್ತಿದ್ದ. ಇಂಥ ನವಾಬನನ್ನು ಯಾವ ಧರ್ಮದಾವ ಅನ್ಲಾಕ ಅದೀತು? ಈ ಕೊಪ್ಳ ನಾಡಿನ ಜನಾ ಅಂದ್ರ ಹಾಂಗ ಯಾವಾಗಲೂ ಪಿರೂತಿ (ಪ್ರೀತಿ) ಪಣಿವಾರಾ ಹಂಚವ್ರು. ಬಾಳ ದಿನದ ಮ್ಯಾಲೆ ಎದಿರಿಗಿ ಬಂದ್ರಿ ಅಂದ್ರ “ಆನ್ಯಾ ಖೋಡಿ ಕಂಡೇ ಇಲ್ಲ. ಎಲ್ಲಿ ಓಗಿದ್ದಿ? ಅಲೆ ಅಬ್ಬದಾಗ (ಮೊರಮ್ಮಿನ್ಯಾಗ) ಅತ್ತು (ಹತ್ತು) ರೂಪಾಯಿ ಕೈಗಡಾ ಇಸಗಂದು ಓಗಿದ್ದೆಲ್ಲಾ ಅದನ್ನ ಕೇಳ್ತಾನ ಅಂತಾ ಮಾರಿ ಮುಚ್ಚಿಗೆಂದು ಅಡ್ಡಾಡ್ತೀದೇನು? ನಿನ್ನ ರಕ್ಕಾ(ರೊಕ್ಕಾ) ಯಾರ ಕೇಳ್ತಾರ ಬುಡಪಾ, ಬಂದಕಂತಾ (ಬರುತ್ತಾ) ಓಕೆಂತಾ (ಹೋಗುತ್ತ) ಇರು ಅಂತಾ ಹೇಳಿ ಕಕ್ಲಾತಿ (ಅಂತಃಕರುಣ) ತೋರ್ಸವ್ರು. ಗಂಡುಗಲಿ ರಾಮ ಮತ್ತೆ ಮುಂಡರಗಿಯ ಭೀಮರಂತ ಶೂರ ಸಿಪಾಯಿಗಳ ನಾಡು ನಮ್ಮ ಈ ಕೊಪ್ಳ. ನಮ್ಮ ಕೊಪ್ಪಳದ ಮ್ಯಾರಿ (ಮೇರೆ) ತೋರ್ಸಬೇಕು ಅಂದ್ರ; ಮೂಡಣಕ್ಕ ಹುಲಿಗೆಮ್ಮನ ಹೊಳಿ, ಉತ್ತರಕ್ಕ ಗಂಗಾವತಿ, ಕನಗೇರಿಯ ಮಾಗಾಣಿ ಗಾಳಿ, ಪಡುಣಕ್ಕ ಕುಷ್ಟಗಿ, ಯಲಬುರಗಿ, ಮತ್ತೆ ಕುಕ್ಕನೂರಿನ ಪಾಪವರಿಯದ ಮುಗ್ಧನ ಜನರ ಟೋಳಿ.ಈ ನೆಲವನಪ್ಪಿಕೊಂಡು ಬದುಕು ಕಾಣುವ ನಮ್ದೆಲ್ಲರದೂ ಒಂದ ಸೂರು (ಧ್ವನಿ).

ಮೋಗಲಾಯಿ ನಾಡಿನ ನಾವು ನೃಪತುಂಗ ಬಣ್ಣಿಸಿದ ಆ ಕಾವೇರಿನೂ ನೋಡಿಲ್ಲ, ಮತ್ತೆ ಗೋದಾವರಿನೂ ನೋಡಿಲ್ಲ ಬುಡ್ರಿ. ನಾವು ನೋಡಿರೋದು ಅಂದ್ರ ನಮ್ಮ ಕೊಪ್ಪಳದ ಹನುಮದಿಕ್ಕಿನಲ್ಲಿ (ದಕ್ಷಿಣದ) ಮತ್ತು ಮೂಡಣದ ಹುಲಿಗೆಮ್ಮ ಪಾದದಲ್ಲಿ ಹರೀತಿರುವಂತ ತುಂಗಭದ್ರೆಯನ್ನು ಮಾತ್ರ. ಈ ತುಂಗಭದ್ರೆ ಅಂದ್ರ ಅಂತಿಂಥವ್ಳಲ್ಲರಿ. ಜಳಕಕ್ಕ ಗಂಗಿ ಶ್ರೇಷ್ಠ ಆದರ, ಕುಡಿಲಾಕ ಈ ತುಂಗೀನ ಶ್ರೇಷ್ಠ ಅಂತಾ ಅನುಭವಸ್ಥರು ಹೇಳಿಕೊಂತಾ ಬಂದಾರ. ಅದಕ್ಕ ಏನೋ ನೃಪತುಂಗ ಮಾರಾಜ ಈ ಕೊಪಣ ನಾಡಿಗೆ ನಾಡನ್ನೇ ಕೋಪಣತೀರ್ಥ, ಆದಿತೀರ್ಥ, ಮಹಾತೀರ್ಥ ಅಂತಾ ಹೆಸರಿಟ್ಟು ಕರ್ದಾನ. ಈ ತುಂಗಿಯ ನೀರ ಮೆಚ್ಚಿ ಯಾರು ಯಾರೋ ಬಂದು ಈಕಿ ಮಡಿಲಾಗ ಮೆಟ್ಟು ಮಾಡಿಕೊಂಡು ಕುಂತದ್ದರಿಂದ, ಈ ತುಂಗಮ್ಮಂದ ಒಂದು ರಾಜ್ಯ ಆತು. ಹಕ್ಕ-ಬುಕ್ರು ಅಡ್ಯಾಡಿಕೊಂತ ಬಂದು ಆಕೆಯ ದಂಡೀ ಮ್ಯಾಲೆನ ಹಂಪಿ ವಿರೂಪಾಕ್ಷನ ಬಗಲಾಗ ರಾಜಧಾನಿ ಕಟ್ಟಿ ಆಳಿದ ನಾಡಿದು. ಕನ್ನಡ ಸೇವಾ ಮಾಡವ್ರೆಲ್ಲಾ ನನ್ನ ಮಡಿಲಾಗ ಬಂದು ಇರ್ರೀ ಅಂತಾ ಆ ತುಂಗಾನ ಫರ್ಮಾನ (ಆಜ್ಞೆ) ಇತ್ತು. ಅದಕ್ಕ ಕನ್ನಡ ಇಶ್ವವಿದ್ಯಾಲದವರೂ ಇಲ್ಲಿಗೆ ಬಂದು ನಮ್ಮನ್ನು ನಾಡೋಜರನ್ನು ಮಾಡಿ ನಾಡದೊರಿ ನೃಪತುಂಗನ ನೆನಪಿಸಿ ಕೊಟ್ರು. ಈ ತುಂಗಭದ್ರೆಯ ನೀರಿನ ಸವಿ ಹತ್ತಿದ್ದಕ್ಕೊ ಏನೋ ದಾಸರೊಳಗ ಶ್ರೇಷ್ಠ ಪುರಂಧರ ದಾಸ ತುಂಗೆಯ ದಂಡಿಯೊಳಗ ತಂಬೂರಿ ಮೀಟಿ ಸುತಿ ಸರಿ ಮಾಡಿಕೊಂಡು ಹ್ವಾದ. ಒಬ್ಬ ದಾಸಯ್ಯ ಮಾತ್ರ ನಮ್ಮ ಕೊಪ್ಳ ನಾಡಿಗೆ ಬಂದಿಲ್ಲ, ನಿಮಗ ಗೊತ್ತೈತಲ್ಲ, ಉಸ್ರು ಬುಡ್ದಂಗ ರಗಳಿಯಿಂದ ಕಾವ್ಯ ಮಾಡಿ ಹಾಡಿ, ಪಂಪಾಪುರದರಸನ ಸೇವಾ ಮಾಡಿ ‘ರಗಳಿಕವಿ’ ಅನಿಸಿಗೊಂಡ ಹರಿಹರನೂ ಇಲ್ಲಿಯೇ ಬಂದು ಸೈ ಅನಿಸಿಗೊಂಡು ಹ್ವಾದ. ಅಷ್ಟು ಮಾತ್ರ ಅಲ್ಲ ಇಲ್ಲಿಯ ಸಂತಿಯೊಳಗ ಬರಿ ಕಾಯಿಪಲ್ಲೆ, ಉಪ್ಪು ಮೆಣಸಿನಕಾಯಿ ಅಷ್ಟ ಮಾರತಿದ್ದಿಲ್ಲರಿ. ಮುತ್ತು ರತ್ನಾನೂ ಮಾರ್ತಿದ್ದರಂತೆ. ಅದಕ್ಕ ಪರದೇಶದ ಯಾಪಾರಿಗೋಳು ಹಮ್ಮಿಣಿ ನಡಕ್ಕ ಕಟ್ಟಿಗೊಂಡು ಬಂದು ಹಂಪಿ ಸಂತಿ ಮಾಡತಿದ್ದರಂತೆ.
ಇಷ್ಟು ವಾಯ್ನ (ಪ್ರಸಿದ್ಧಿ) ಆದ ಈ ತುಂಗಭದ್ರೆಯ ಮ್ಯಾಲೆ ಯಾರೋ ಒಬ್ಬನ ಕಣ್ಣು ಬಿತ್ತಂತೆ. ‘ಸುಮ್ನ ಹರ್ದು ಒಂಟ(ಹೊರಟು) ಬುಟ್ಟಾಳಲ್ಲಪ್ಪ ತುಂಗವ್ವಾ ‘ಈ ತುಂಗಿಗೂ ಒಂದು ಒಡ್ಡು ಹಾಕಾಮೇನು (ಹಾಕೋಣೇನು)’ ಅಂತಾ ಅಂದಾಗ; ನಮ್ಮ ತುಂಗವ್ವ ‘ಬ್ಯಾಡ್ರೋ ಅಂಗ ಮಾಡಿದರ ನನ್ನ ಅಂಗಳ ಎಲ್ಲಾ ಹಾಳಾಗತ್ತ್ರೋ’ ಅಂತಾ ಅಂಗ್ಲಾಚಿ ಬೇಡಿಕೊಂಡ್ಲಂತೆ. ಆದರ ಲಾಭ ಬಡಕ್ರು ಕೇಳಲಿಲ್ಲಂತೆ. ‘ಏ! ಸುಮ್ಕಿರವ್ವಾ ನಿನ್ನ ಸವಿ ಸವಿ ನೀರ್ ಸಂಗ್ರಹ ಮಾಡಿ ಕುಡಿತೀವಿ’ ಅಂತಾ ಜಬರಿಸಿ ಆ ಹುಲಿಗೆಮ್ಮನ ಹಂತೇಲೆ ತುಂಗಭದ್ರೆಗೆ ಒಡ್ಡ ಹಾಕಿ, ಅಡ್ಡ ತರುಬಿ ಬುಟ್ರು. ಹಿಂಗ ಅಡ್ಡ ತರುಬಿದ ಮ್ಯಾಲೆ ಸವಿ ನೀರು ಕುಡಿಯವ್ರಿಗಷ್ಟ ಬೇಕಾಗಿದ್ದ ಆ ತುಂಗವ್ವಾ ದುಡಿಯವ್ರಿಗೂ ಬೇಕಾದವ್ಳಾಗಿ ಬುಟ್ಲು. ತುಂಗವ್ವ ನೆಲ್ಲು,ಬೆಲ್ಲ ಸಕ್ರಿ, ಭಕ್ರಿ ಕೊಡೋ ಸಾವಕಾರ್ತಿ ಆಗಿ ಕುಂತು ತನ್ನ ದರ್ಬಾರಾ ಚ್ಯಾಲು ಮಾಡಿದ್ಲು. ಆಕಿ ದಂಡಿ ಮ್ಯಾಲಿನ ಬಂಡಿಯಂಥ ನೆಲಕ್ಕೂ ಬಂಗಾರದ ದಾಣ್ಣಿ (ಧಾರಣಿ) ಬಂತು. ಅದಕ್ಕ ಎಲ್ಲೆಲ್ಲಿಯವ್ರೋ ಇಲ್ಲಿಗೆ ಬಂದು ಮೆಟ್ಟು ಮಾಡಿ ತಮ್ಮ ಯಾಪಾರಾ, ಯಾವಾರಾ (ವ್ಯವಹಾರ) ಚ್ಯಾಲು ಮಾಡಿದರು. ದುಡ್ಡು ಮಾಡೋ ದುರಾತ್ಮರು ಒಗಿ(ಹೊಗೆ) ಉಗುಳೋ ದೊಡ್ಡ ದೊಡ್ಡ ದೆವ್ಗುಲ್ಮಿ (ದೆವ್ವ ಕುಲುಮಿ) ತಂದು ಹಾಕಿ ಜನರ ಜೀವದ ಕೂಡ ಆಟಾ ಆಡಲಿಕ್ಕ ಹತ್ತಿದ ಮ್ಯಾಲೆ, ಪಿರೂತಿಯ ಪದಾ ಹಾಡಿಕೊಂತಾ ಕುಣಿತಿದ್ದ ಬಂಗಾರದ ಗರಿಯ ನವ್ಲು (ನವಿಲು), ಸಿಂಗಾರದ ದನಿಯ ಕೋಗಿಲಗಳು ಮೆಟ್ಟು ಕಿತ್ಗೊಂಡು ಓಗಿ ಬುಟ್ವು. ಅವರು ನಮ್ಮ ಒಲಾ ಕಸಗೊಂಡು ಅದರ ಮಣ್ಣು ಸುಟ್ಟು ಮಸಿ ಮಾಡಿ ಮಾರಿಕೊಂಡ್ರು. ನಮ್ಮುನ್ನೆಲ್ಲಾ ಆಳು ಮಾಡಿ ಡೀಕಾಕ (ದುಡಿಯಾಕ) ಹಚ್ಚಿದರು. ಸಾವಿ, ಸಜ್ಜಿ, ಜ್ವಾಳಾ, ಬ್ಯಾಳಿ ಬೆಳ್ದು ಗಂಡಾ ಹೆಂತಿ (ಹೆಂಡತಿ) ಇದರಾ ಬದರಾ ಕುಂತು ಮುದ್ದಣ-ಮನೋರಮಿ ಹಾಂಗ ಸಂವಾದ ಮಾಡಿಕೊಂತ ಉಮ್ತಿದ್ದ (ಉಣ್ಣುತ್ತಿದ್ದ) ನಮ್ಮ ಸವಿ ಸವಿ ಸಂವಾದದ ಚಣಾ ಕಸಗೊಂಡು ಗಾಳ್ಯಾಗ ತೂರಿ ನಗಾಡಿದರು.

ಅಷ್ಟು ಮಾತ್ರ ಅಲ್ರಿ, ಈ ತುಂಗಭದ್ರೆಯ ಅಂಗಳದಾಗ ಲೂಟಿ ಮಾಡೋ ಖದೀಮರೂ ಬಂದ್ರು, ಗುಡ್ಡದ ಮಣ್ಣ ಕೆಬರಿ ದುಡ್ಡು ಮಾಡಿಕೆಂಡ್ರು. “ಈ ಮಣ್ಣು. ಈ ಗಾಳಿ” ಅಂತಾ ಹಾಡಿಕೊಂತಾ ದಿಬ್ಣಾ ಮಾಡಿ ಕುಣಿದಾಡುತ್ತಿದ್ದ ನಮ್ಮ ಮಣ್ಣು ಕಸಗೊಂಡು “ಕಬ್ಣಾ ಮಾಡಿಕೊಡ್ತೀವಿ ಸುಮ್ಕಿರ್ರಿ, ಬಂಗಾರಾ ತೆಗ್ದು ಕೊಡ್ತೀವಿ ಸುಮ್ಕಿರ್ರಿ” ಅಂತಾ ನಮಗ ಮಂಕು ಬೂದಿ ಚೆಲ್ಲಿ, ಈ ಮಬ್ಬಗುಳ ಮುಂದೆ ಅವರು ಅಬ್ಬಾ(ಹಬ್ಬಾ) ಮಾಡಿದರು. ಜುಳು ಜುಳು ಹರಕೊಂತಾ ಆ ಬಸ್ವಣ್ಣ ಹೇಳಿದ ಹಾಂಗ ಕಾಗಿ, ಕೋಳಿಗಳನ್ನು ಕರೀತಿದ್ದ ನಮ್ಮ ತುಂಗಭದ್ರೆಯ ಮ್ಯಾಲೆ ಅತ್ಯಾಚಾರಾ ಮಾಡಿದರು. ನಮ್ಮ ತುಂಗವ್ವ ಪವಿತ್ರ ಜಲರಾಣಿಯಾಗಿ ಉಳಿಲಿಲ್ಲ. ಅವಳು ಕಣ್ಣೀರಿನ ಮಡುವು ಆಗಿ ಕುಂತು ಬಟ್ಲು. ನಾವು ತಿಂತಿದ್ದ ಕಾರಿ ಹಣ್ಣು, ಕವಳಿ ಹಣ್ಣಿನ ಗಿಡಕ್ಕ ಬೆಂಕಿ ಹಚ್ಚಿ ಆ ಬೂದಿ ಮಾಡಿ, ಆ ಬೂದಿನಾ ನಮ್ಮ ಮ್ಯಾಲೆ ಉಗ್ಗಿ (ಎಸೆದು) ಕೇಕಿ ಒಡ್ದು (ಹೊಡ್ದು) ಓಕಳಿ ಆಡಿದರು. ಅವರು ಉಗ್ಗಿದ ಬೂದಿ, ಅವರು ಎಬಿಸಿದ ಹೊಗಿ ನಮ್ಮ ಎದಿಯಾಗ ಸಂಗಟಾಗಿ ಕುದಿಯಾಕ ಹತ್ತಿತು. ಮಕ್ಕಂಡಿದ್ದ ನಮ್ಮ ಮಕ್ಳು-ಮರಿ ಎದ್ದು ಕುಂತ್ವು ಈಗ ನಮಗ ನಿದ್ದಿಲ್ಲ, ನೀರಡ್ಕಿ ಇಲ್ಲ. ಯಾಕಂದ್ರ ನಮ್ಮ ಆಕಾಸದಾಗ ಹರ್ದಾಡೋ ಗಾಳಿಯೊಳಗಿನ ಜೀವಾಮೃತದ ಮ್ಯಾಲೆ ಗಾಂಚಾಲಿ ಮಾಡಿ ಮೂಗು ಬಾಯಿಗೆ ಅರಬಿ ಕಟ್ಟಿಗೊಂಡು ಅಡ್ಡಾಡಂಗ ಮಾಡಿ ಬುಟ್ಟಾರ. ತುಂಗಭದ್ರೆ ಕುಡಿಲಾಕ ಶ್ರೇಷ್ಠ ಜಲರಾಣಿಯಾಗಿ ಉಳ್ದಿಲ್ಲಂತ ಗೊತ್ತಾಗಿ, ನಮ್ಮ ಕೊಪ್ಪಳದ ಸುತ್ತಾ ಮುತ್ತ ಹರ್ದು ತುಂಗೆ ಸೇರಿತಿದ್ದ, ಹಿರಿಹಳ್ಳಾ, ಕಿರಿಹಳ್ಳಗಳು, ಹರತಾಳ ಮಾಡ್ಲಿಕ್ಕ ಹತ್ಯಾವು. ಆ ಹೊಲಸ ತುಂಗಿಯ ಸಾವಾಸನ ಬ್ಯಾಡ ನಾವು ಅಲ್ಲಿಗೆ ಓಗಾಂಗಿಲ್ಲಂತ ಅಲ್ಲಲ್ಲೇ ಮಡುವು ಆಗಿ ನಿಂತು, ಹೊಲಸ ನಾರಾಕ ಹತ್ತಿಬುಟ್ಟಾವ.
ಇದು ತುಂಗಭದ್ರೆಯ ಅಂಗಳದ ದುರ್ದೆಶೆಯ ಕಥೆಯಾಯಿತು. ಇನ್ನು ನಮ್ಮ ಮನಿ ಮಠಗುಳ ಕತೀನೂ ಒಂಚೂರು ನೀವು ಕೇಳ್ರಿ. ಈ ತುಂಗೆಯ ಅಂಗಳದ ಒಂದು ಅಳ್ಳಿ(ಹಳ್ಳಿ) ನನ್ನೂರು. ಅಲ್ಲಿಯ ಹಳೇ ಮಾವನ ಪಿಳ್ಳಿಯೇ (ಹುಡುಗಿ) ಈ ಪೋರಗ ಹೆಂತಿ ಆಗಿ ಬಂದ್ಲು. ನಮ್ಮ ಮಾವ ನನ್ನ ಹೆಂತೀನ ಗನ್ನಾ ಪಿರೂತಿ ಮಾಡಾಂವ. ಎಷ್ಟು ಪಿರೂತಿ ಮಾಡ್ತಿದ್ದ ಅಂದ್ರ ಆಕಿನ ತನ್ನವ್ವನ ಮಾಡಿ ಮುದೇಕಿ! ಮುದೇಕಿ!! ಅಂತಾ ಕಣ್ಣಾಗ ಇಟಗೊಂಡು ಪೂಜಿ ಮಾಡತಿದ್ದ. ಊರಿಗೆ ಹ್ವಾದ ಸರ್ತಿಗೊಮ್ಮೆ ಕಾಳು,ಕಡಿ, ಬ್ಯಾಳಿ, ಬೆಲ್ಲಾ ಗಂಟು ಕಟ್ಟಿ ಬಸ್ಸಿಗೆ ಹಾಕಿತಿದ್ದ. ಆದರ ಈಗ ಆ ಬ್ಯಾಳಿ ಬೆಲ್ಲದ ಗಂಟಿಲ್ಲ.ಆತನ ಹೊಲದಾಗ ಬೆಳಿತಿದ್ದ ಬೇಳೀನ ಕಾರಖಾನಿ ಇಸಗಾಳಿ ತಿಂದು ಬುಡತೈತೆ. ಈಗ ನಮ್ಮ ಮಾವ ಅಂಗಳಕ ಬಂದು ಆಕಿ ತೆಲಿ ಮ್ಯಾಲೊಂದು ಕೈಯಿಟ್ಟು ಎದಿಯಾಗ ತುಂಬಿರುವ ಸಂಗ್ಟದ ಮ್ಯಾಲಿರೊ ಬಕ್ಣದಿಂದ ನೂರು ರೂಪಾಯಿ ತೆಗ್ದು ಆಕಿ ಉಡ್ಡಲ್ದಾಗ ಹಾಕಿ ಕಣ್ಸೆಲಿಸಿ ಕಳಿಸಿ ಕೊಡತಾನ.
ತುಂಗೆಯಂಗಳದಲ್ಲಿರುವ ನಮ್ಮ ಕೊಪ್ಪಳದ ತಿರುಳ್ಗನ್ನಡ ನಾಡಿನ ಮಕ್ಕಳ ಬದುಕೆಲ್ಲ ಮುರಾಬಟ್ಟಿ ಆಗಲಿಕ್ಕ ಹತ್ತೇದ. ನಮ್ಮ ಸಾಂಸ್ಕøತಿಯ ಸವಿಗಾನ ಬೇಸೂರ ಆಗೇದ. ಈ ಕಾರಕಾನಿಗುಳು ನಮ್ಮ ಕೊಪ್ಳ ನಾಡಿನ ಜನರನ್ನು ಬೆತ್ಲೆ ಮಾಡಿದ್ದಕ್ಕ ಅವರು ಗಾಂಧಿ ಯಾಸಾ ಹಾಕಿ ಹರತಾಳಾ ಮಾಡಾಕ ಕುಂತಾರ. ಇದ್ಯಾವುದೂ ನಮ್ಮ ರಾಜತ್ವದ ಕಣ್ಣಿಗೆ ಬೀಳುವಲ್ದು, ನಮ್ಮ ಅಳು ಅವ್ರ ಕಿವಿಗೆ ಕೇಳವಲ್ದು. ಅವರೆಲ್ಲ ಅಧಿಕಾರಕ್ಕಾಗಿ ಕಬಡ್ಡಿ ಅಡ್ಲಿಕ್ಕ ಹತ್ಯಾರ. ಹಂಬಲ ತುಂಬಿಕೊಂಡು ಆಳಿಕೆ ಮಾಡುವ ಈ ರಾಜತ್ವ ಹಣಾ-ಅಧಿಕಾರದ ಅಮಲೇರಿಸಿಗೊಂಡು ಪ್ರಜೆಗುಳ್ನೆಲ್ಲಾ ಮರ್ತು ಬುಟ್ಟೈತೆ.
ಅಯ್ಯೋ! ಶಿವ ಶಿವಾ!! ನಾ ಏಮಾಡ್ಲಪಾ!!!
“ಕೊಪ್ಪಳ-ಹಾವೇರಿಯ ನೆನಪಿನಂಗಳದಿಂದ” ಅಂಕಣದ ಹಿಂದಿನ ಸಂಚಿಕೆಗಳು :
- ವಾಲಿಕಾರ ಮಲ್ಲೇಶಪ್ಪನ ಪಲ್ಲಕ್ಕಿ ಸೇವೆ – (ಭಾಗ೧)
- ಹಾವೇರಿಯ ನಕ್ಷತ್ರ ಚಂಪಾ – (ಭಾಗ೨)
- ಎಂ.ಎ. ಡಿಗ್ರಿಯ ಕಿಮ್ಮತ್ತು ಬರಿ ಒಂದು
- ಗುಡಾರ – (ಭಾಗ ೩)ಪ್ರಾಮಾಣಿಕ ಹುಚ್ಚ – (ಭಾಗ ೪)
- ಹಳ್ಳಿಯ ನಾಟಕದ ಸೂಳೆಯ ಪಾತ್ರ – (ಭಾಗ ೫)
- ದೊಡ್ಡ ತಲೆಗೆ ಸಣ್ಣ ಮಾಲೆ – (ಭಾಗ ೬)
- ಉಪ್ಪಾರ ಮರಿಯಪ್ಪನ ಮಿಂಚುವ ಜಾತ್ರೆಯ ಅಂಗಿ – (ಭಾಗ ೭)
- ಹಾಲು ಕೊಟ್ಟವರ ನೆನಪಿನ ಲೋಕ – (ಭಾಗ ೮)
- ಬಬ್ರುವಾಹನನ ನಾಟಕದ ಕಥೆ – (ಭಾಗ ೯)
- ಬ್ಯಾಡಗಿ ಮೆಣಸಿನಕಾಯಿ ಮತ್ತು ಎಸ್.ಎಲ್.ಭೈರಪ್ಪನವರು – (ಭಾಗ ೧೦)
- ಸ್ವಾಮಿಗಳಿಗೆ ಸಾಷ್ಟಾಂಗ ಹಾಕದಿದ್ದರೆ ಶಾಪ ತಟ್ಟುತ್ತದೆಯೇ?- (ಭಾಗ-೧೧)
- ವಿರೂಪಾಕ್ಷಪ್ಪ ಕೋರಗಲ್ – ನಿವೃತ್ತ ಗಣಿತ ಪ್ರಾಧ್ಯಾಪಕರು,
