ದೇಶದ ಮೊದಲ ಮಹಿಳಾ ಗೂಢಚಾರಿಣಿ ನೀರಾ ಆರ್ಯ

ಅಪ್ರತಿಮ ದೇಶಪ್ರೇಮ ಹೊಂದಿದ ನೀರಾ ಆರ್ಯ ರವರು “ದೇಶದ ಮೊದಲ ಮಹಿಳಾ ಗೂಢಚಾರಿಣಿ ಎಂಬ ಹೆಗ್ಗಳಿಕೆಗೆ” ಪಾತ್ರರಾಗಿದ್ದಾರೆ. ಅವರ ಸಾಧನೆಯ ಕುರಿತು ಲೇಖಕರಾದ ಚೇತನ ಭಾರ್ಗವ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಇಂದು ನಾವು ಸ್ವಾತಂತ್ರ್ಯದ ಸವಿಯನ್ನು ಅನುಭವಿಸುತ್ತಿದ್ದೇವೆ ಅಂದರೆ ಅದರ ಹಿಂದೆ ಅಸಂಖ್ಯಾತ ವೀರರ ತ್ಯಾಗ, ದೇಶಪ್ರೇಮ, ನೋವು ಅಡಗಿದೆ. ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ಅರ್ಪಿಸಿದ ಹಲವಾರು ವೀರ ವೀರಾಂಗನೇಯರ ಕಥೆ ಮರೆಯಾಗಿರುವುದು ಶೋಚನೀಯ ಸಂಗತಿ. ಅದರಲ್ಲಿ ನೀರಾ ಆರ್ಯ ಒಬ್ಬರು. ಅಪ್ರತಿಮ ದೇಶಪ್ರೇಮ ಹೊಂದಿದ ನೀರಾ ಆರ್ಯ ರವರು “ದೇಶದ ಮೊದಲ ಮಹಿಳಾ ಗೂಢಚಾರಿಣಿ ಎಂಬ ಹೆಗ್ಗಳಿಕೆಗೆ” ಪಾತ್ರರಾಗಿದ್ದಾರೆ.

ಆಜಾದ್ ಹಿಂದ್ ಫೌಜ್ ನಲ್ಲಿ ಅತ್ಯಂತ ಧೈರ್ಯ ಶ್ರದ್ಧೆ ನಿಷ್ಠೆಯಿಂದ ಕಾರ್ಯನಿರ್ವಹಿಸಿದ ನೀರಾರವರು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ವೈಯುಕ್ತಿಕ ಸುಖ ಸೌಕರ್ಯಗಳನ್ನು ತ್ಯಜಿಸಿ ತಮ್ಮನ್ನೇ ತಾವು ಅಪಾಯಕ್ಕೆ ಒಡ್ಡಿಕೊಂಡು, ತಮ್ಮ ಜೀವನವನ್ನೇ ದೇಶಕ್ಕಾಗಿ ಅರ್ಪಿಸಿದ ಕೆಚ್ಚೆದೆಯ ದಿಟ್ಟ ಮಹಿಳೆ. ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ನೇತೃತ್ವದಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿದ್ದ ಹೋರಾಟದಲ್ಲಿ ಇವರ ಪಾತ್ರ ಹಿರಿಯದಾಗಿದೆ.

ನೀರಾ ಆರ್ಯ ರವರು 1902 ಮಾರ್ಚ್ 5 ರಂದು ಉತ್ತರ ಪ್ರದೇಶದ ಭಾಗಪತ್ ನ ಖೇಕ್ರಾ ದಲ್ಲಿ ಜನಿಸಿದರು. ನೀರಾ ಆರ್ಯರವರ ತಂದೆ ಸೇಠ್ ಛಜ್ಜುಮಲ್. ಅವರು ಪ್ರಸಿದ್ಧ ಉದ್ಯಮಿಯಾಗಿದ್ದರು. ಅವರು ತಮ್ಮ ಮಕ್ಕಳಾದ ನೀರಾ ಆರ್ಯ ಮತ್ತು ಬಸಂತ್ ರವರಿಗೆ ಕಲ್ಕತ್ತದಲ್ಲಿ ಉತ್ತಮವಾದ ವಿದ್ಯಾಭ್ಯಾಸವನ್ನು ಕೊಡಿಸಿದ್ದರು.

ಚಿಕ್ಕ ವಯಸ್ಸಿನಿಂದಲೇ ನೀರಾ ಭಾರತದ ಸ್ವಾತಂತ್ರ್ಯ ಹೋರಾಟದಿಂದ ಬಲವಾಗಿ ಪ್ರೇರಿತರಾಗಿದ್ದರು ಮತ್ತು ದೇಶಭಕ್ತಿಯ ಮನೋಭಾವವನ್ನು ಹೊಂದಿದ್ದರು. ಶಾಲಾ ಶಿಕ್ಷಣದ ನಂತರ ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಥಾಪಿಸಿದ ಆಜಾದ್ ಹಿಂದ್ ಫೌಜ್ ನಲ್ಲಿರುವ ರಾಣಿ ಜಾನ್ಸಿ ರೆಜಿಮೆಂಟ್ ಗೆ ಸೇರಿದರು. ಅಲ್ಲಿ ಮಹಿಳಾ ಸಬಲೀಕರಣ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದರು. ಅಲ್ಲದೆ ಇವರು ಐಎನ್ಎ ಗುಪ್ತಚರ ವಿಭಾಗದ ಒಳಗೆ ಕಾರ್ಯನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು.

ನೀರಾ ಆರ್ಯ ಐಎನ್‌ಎಯ ಸಂಪೂರ್ಣ ಮಹಿಳಾ ಯುದ್ಧ ಘಟಕವಾದ ಝಾನ್ಸಿ ರಾಣಿ ರೆಜಿಮೆಂಟ್‌ನಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದರು . ಮಹಿಳೆಯರು ಮಿಲಿಟರಿ ಪಾತ್ರಗಳಲ್ಲಿ ಭಾಗವಹಿಸಲು ವಿರಳವಾಗಿ ಅವಕಾಶವಿದ್ದ ಸಮಯದಲ್ಲಿ, ನೀರಾ ಆರ್ಯ ಸಾಮಾಜಿಕ ಅಡೆತಡೆಗಳನ್ನು ಮುರಿದು ಮಹಿಳೆಯರು ದೇಶಕ್ಕಾಗಿ ಪುರುಷರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಹೋರಾಡಬಹುದು ಎಂದು ಸಾಬೀತುಪಡಿಸಿದರು. ಅವರು ತಮ್ಮ ಶಿಸ್ತು, ನಿರ್ಭಯತೆ ಮತ್ತು ಬಲವಾದ ದೇಶಭಕ್ತಿಗೆ ಹೆಸರುವಾಸಿಯಾಗಿದ್ದರು.

ನೀರಾರವರು ಗೌಪ್ಯವಾಗಿ ಬ್ರಿಟಿಷರ ವಿರುದ್ಧ ಮಾಹಿತಿಯನ್ನು ಸಂಗ್ರಹಿಸುತ್ತಿದ್ದರು. ಇವರ ಚಟುವಟಿಕೆಗಳು ಶತ್ರುಗಳಿಗೆ ಅಗೋಚರವಾಗಿತ್ತು. ಆದ್ದರಿಂದ ಇವರಿಗೆ ಮುಕ್ತವಾಗಿ ಓಡಾಡಲು ಮತ್ತು ರಹಸ್ಯವಾದ ವಿಷಯಗಳನ್ನು ರವಾನಿಸಲು ಯಾವುದೇ ಅಡೆತಡೆಗಳಾಗದೆ ಸುಲಭವಾಗುತ್ತಿತ್ತು.

ಇವರು ಬ್ರಿಟಿಷರ ಚಲನವಲನಗಳ ಬಗ್ಗೆ ಗುಪ್ತವಾಗಿ ಮಾಹಿತಿಯನ್ನು ಸಂಗ್ರಹಿಸುವುದು, ಐ ಎನ್ ಎ ವಿರುದ್ಧ ಬ್ರಿಟಿಷರ ಸಂಭಾವ್ಯ ಧಾಳಿಯ ಬಗ್ಗೆ ಎಚ್ಚರಿಕೆಯ ಸಂದೇಶವನ್ನು ನೀಡುವುದು, ನೇತಾಜಿಯ ಚಲನವಲನಗಳ ಮಾಹಿತಿಯು ಸೋರಿಕೆಯಾಗದಂತೆ ತಡೆಯುವುದು ಮತ್ತು ಸ್ವಾತಂತ್ರ್ಯ ಚಳುವಳಿಯನ್ನು ಬೆಂಬಲಿಸಲು ಸ್ಥಳೀಯ ಜನರನ್ನು ಸಂಘಟಿಸುವ ಕಾರ್ಯವನ್ನು ಮಾಡುತ್ತಿದ್ದರು.

ನೀರಾಳ ಮದುವೆಯನ್ನು ಅವರ ತಂದೆ ಭಾರತದಲ್ಲಿ ಸಿಐಡಿ ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡಿದ್ದ ಬ್ರಿಟಿಷ್ ಸೇನಾ ಅಧಿಕಾರಿ ಶ್ರೀಕಾಂತ್ ಜೈ ರಂಜನ್ ದಾಸ್ ಅವರೊಂದಿಗೆ ನಿಶ್ಚಯಿಸಿದ್ದರು.ದಂಪತಿಗಳು ವಿಭಿನ್ನ ಸಿದ್ಧಾಂತಗಳು ಮತ್ತು ವಿಭಿನ್ನ ಪಕ್ಷಗಳಿಗೆ ನಿಷ್ಠರಾಗಿದ್ದರಿಂದ , ಇದೇ ಅವರಿಬ್ಬರ ನಡುವಿನ ಸಂಘರ್ಷಕ್ಕೆ ಕೇಂದ್ರ ಬಿಂದುವಾಯಿತು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸೈನ್ಯದಲ್ಲಿ ನೀರಾ ಅವರ ಪಾಲ್ಗೊಳ್ಳುವಿಕೆಯ ಬಗ್ಗೆ ಶ್ರೀಕಾಂತ್ ಅವರಿಗೆ ತಿಳಿದಾಗ, ನೇತಾಜಿ ಎಲ್ಲಿದ್ದಾರೆಂದು ತಿಳಿದುಕೊಳ್ಳುವ ಪ್ರಯತ್ನದಲ್ಲಿ ಅವರು ಅದರ ಬಗ್ಗೆ ಅವರನ್ನು ಪ್ರಶ್ನಿಸಲು ಪ್ರಾರಂಭಿಸಿದರು.

ನೀರಾ ಗುಟ್ಟನ್ನು ಬಿಟ್ಟುಕೊಡಲಿಲ್ಲ, ಆದರೆ ಶ್ರೀಕಾಂತ್ ಪಟ್ಟು ಹಿಡಿದರು. ಒಂದು ದುರದೃಷ್ಟಕರ ದಿನ, ನೀರಾ ಬೋಸ್‌ರನ್ನು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಭೇಟಿಯಾದಾಗ , ಶ್ರೀಕಾಂತ್ ನೀರಾ ಅವರನ್ನು ಹಿಂಬಾಲಿಸಿಕೊಂಡು ಹೋಗಿ ನೇತಾಜಿಗೆಂದು ಗುಂಡು ಹಾರಿಸಿದರು, ಅದು ನೇತಾಜಿಯ ಬದಲಿಗೆ ಅವರ ಚಾಲಕನಿಗೆ ತಗುಲಿ, ಆತ ಮರಣಹೊಂದಿದನು.
ತನ್ನ ಪತಿಯಿಂದಲೇ ನೇತಾಜಿಯವರ ಪ್ರಾಣಕ್ಕೆ ಅಪಾಯವಿದೆ ಎಂದು ಅರಿತ ನೀರಾರವರು ಶ್ರೀಕಾಂತ್‌ನನ್ನು ಇರಿದು ಕೊಂದು, ನೇತಾಜಿ ಯ ಜೀವವನ್ನು ಉಳಿಸಿದರು. ಇದಕ್ಕಾಗಿ, ಬ್ರಿಟಿಷ್ ಸರ್ಕಾರವು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಅವರನ್ನು ಅಂಡಮಾನ್ ಮತ್ತು ನಿಕೋಬಾರ್‌ನ ಸೆಲ್ಯುಲಾರ್ ಜೈಲಿಗೆ ರವಾನಿಸಲಾಯಿತು.

ನೀರಾ ಜೈಲಿನಲ್ಲಿ ಇದ್ದ ಸಮಯದಲ್ಲಿ, INA ನಾಯಕರ ಬಗ್ಗೆ, ಸುಭಾಷ್ ಚಂದ್ರ ಬೋಸ್ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದರೆ, ಅವರಿಗೆ ಜಾಮೀನು ನೀಡುವುದಾಗಿ ಲಂಚ ದ ಆಮಿಷವನ್ನು ನೀಡಿದರು.ಅವರು ಇದನ್ನುಸಾರಾಸಗಟಾಗಿ ನಿರಾಕರಿಸಿದರು . ಜೈಲಿನಲ್ಲಿ ಅವರಿಗೆ ಚಿತ್ರವಿಚಿತ್ರ ಹಿಂಸೆಯನ್ನು ನೀಡಲಾಯಿತು. ಅವರ ಕುತ್ತಿಗೆ ಕೈ ಮತ್ತು ಕಾಲುಗಳಿಗೆ ಗಟ್ಟಿಯಾದ ಕಬ್ಬಿಣದ ಸರಪಳಿಯಿಂದ ಕಟ್ಟಿ ಹಾಕಲಾಯಿತು. ಅವರ ಕೈಯಿಂದ ಮಾಂಸವನ್ನು ಕತ್ತರಿಸಿ ತೆಗೆಯಲಾಯಿತು. ನೇತಾಜಿಯ ಬಗ್ಗೆ ಮಾಹಿತಿಯನ್ನು ನೀಡುವಂತೆ ಒತ್ತಾಯಿಸಿ ಅವರ ಮೂಳೆಗಳಿಗೆ ಭಾರವಾದ ಸುತ್ತಿಗೆಯಿಂದ ಮೊಳೆ ಹೊಡೆದು ಹಿಂಸಿಸಲಾಯಿತು. ಆದರೂ ಅವರು ಯಾವುದೇ ವಿಷಯದ ಬಗ್ಗೆ ಬಾಯಿ ಬಿಡಲಿಲ್ಲ. ಕೊನೆಗೆ ಜೈಲರ್ ಅನುಚಿತ ವಾಗಿ ವರ್ತಿಸಿ ಅವರ ಬಟ್ಟೆಯನ್ನು ಹರಿದು, ಕಾದ ಕಬ್ಬಿಣದಿಂದ ಅವರ ಬಲ ಸ್ತನವನ್ನು ಕತ್ತರಿಸಿ ಹಾಕಿ ಹಿಂಸಿಸಿದರು. ಆ ನೋವನ್ನೂ ಸಹಿಸಿಕೊಂಡು ನೀರಾರವರು ಆ ಜೈಲರ್ ನ ಮುಖಕ್ಕೆ ಉಗುಳಿ “ಮಹಿಳೆಯರಿಗೆ ಗೌರವಿಸಲು ಕಲಿಯಿರಿ” ಎಂದು ಹೇಳಿ ದೇಶಪ್ರೇಮವನ್ನು ಮೆರೆದು ರಾಷ್ಟ್ರಕ್ಕೆ ನಿಷ್ಠರಾಗಿ ಉಳಿದರು.

ಕಾರಾಗೃಹದಲ್ಲಿದ್ದಾಗಲೂ ಅವರ ದೇಶಪ್ರೇಮ ಕುಗ್ಗಲಿಲ್ಲ. ಸ್ವಾತಂತ್ರ್ಯ ಹೋರಾಟದ ನಾಯಕರ ಬಗ್ಗೆ, ವಿಶೇಷವಾಗಿ ನೇತಾಜಿಯ ಬಗ್ಗೆ ಮಾಹಿತಿ ನೀಡಿದರೆ ಬಿಡುಗಡೆ ಮಾಡುವುದಾಗಿ ಹೇಳಿದರೂ ಅವರು ದೇಶದ ರಹಸ್ಯವನ್ನು ಬಿಟ್ಟುಕೊಡಲಿಲ್ಲ. ಕಷ್ಟಗಳು ಎದುರಾದರೂ ದೇಶನಿಷ್ಠೆಯಿಂದ ಹಿಂದೆ ಸರಿಯದ ಅವರ ಮನೋಬಲ ನಿಜಕ್ಕೂ ಅಸಾಮಾನ್ಯವಾಗಿತ್ತು.
ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ, ಅವರು ಜೈಲಿನಿಂದ ಬಿಡುಗಡೆಯಾದರು .ನಂತರ ಅಂದಿನ ಭಾರತ ಸರ್ಕಾರವು ಅವರಿದ್ದ ಕಾಟೇಜ್ ಅನ್ನು ಸಹ ಕೆಡವಿತು. ನೀರಾ ಆರ್ಯ ಹೈದರಾಬಾದ್‌ನ ರಸ್ತೆಬದಿಯಲ್ಲಿ ಹೂವುಗಳನ್ನು ಮಾರಾಟ ಮಾಡುವ ಮೂಲಕ ಅನಾಮಧೇಯ, ದುಃಖಕರ ಮತ್ತು ಅಸಹಾಯಕ ಜೀವನವನ್ನು ನಡೆಸಿದರು, ಆದರೆ ಯಾವುದೇ ರೀತಿಯ ಸರ್ಕಾರಿ ಸಹಾಯ ಅಥವಾ ಪಿಂಚಣಿಯನ್ನು ಸ್ವೀಕರಿಸಲಿಲ್ಲ.

ಹೈದರಾಬಾದ್‌ನ ಫಲಕ್ನುಮಾ ಪ್ರದೇಶದ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಅವರು ಜುಲೈ 26, 1998 ರಂದು ಚಾರ್ಮಿನಾರ್ ಬಳಿಯ ಉಸ್ಮಾನಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ನೀರಾ ಆರ್ಯ ಅವರ ಬದುಕು ನಮಗೆ ಒಂದು ಅಮೂಲ್ಯ ಪಾಠವನ್ನು ಕಲಿಸುತ್ತದೆ—ದೇಶಪ್ರೇಮವೆಂದರೆ ಕೇವಲ ದೇಶದ ಬಗ್ಗೆ ಮಾತನಾಡುವುದಲ್ಲ,ದೇಶದ ಹಿತಕ್ಕಾಗಿ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುವುದು. ಸ್ವಾತಂತ್ರ್ಯವನ್ನು ಪಡೆದ ನಾವು ಅದರ ಮೌಲ್ಯವನ್ನು ಅರಿತು, ದೇಶದ ಏಕತೆ, ಶಾಂತಿ ಮತ್ತು ಪ್ರಗತಿಗೆ ನಮ್ಮ ಕೊಡುಗೆ ನೀಡಬೇಕು.

ಇಂದು ತ್ರಿವರ್ಣ ಧ್ವಜವನ್ನು ನೋಡಿದಾಗ ಅದರ ಬಣ್ಣಗಳಲ್ಲಿ ಅಸಂಖ್ಯಾತ ವೀರರ ತ್ಯಾಗವನ್ನು ಕಾಣಬೇಕು. ಆ ತ್ಯಾಗದ ಸಾಲಿನಲ್ಲಿ ನೀರಾ ಆರ್ಯ ಅವರಂತಹ ವೀರನಾರಿಯರ ಹೆಸರೂ ಸದಾ ಸ್ಮರಣೀಯ.ನೀರಾ ಆರ್ಯ ಅವರ ದೇಶಪ್ರೇಮ ನಮ್ಮ ಹೃದಯಗಳಲ್ಲಿ ಸದಾ ಜೀವಂತವಾಗಿರಲಿ.

ವಂದೇ ಮಾತರಂ!


  • ಚೇತನ ಭಾರ್ಗವ – ಅರಮನೆತೋಟ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading