ಎತ್ತು, ಹೊತ್ತು, ಮುತ್ತಿಟ್ಟ ಮಕ್ಕಳು ಕೊನೆಗಾಲದಲ್ಲಿ ಅಪ್ಪನನ್ನು ನೋಡಲು ಬಾರದೆಯಿದ್ದಾಗ ಇಡೀ ಊರಿಗೆ ಊರೇ ಸಂಕಟ ಪಟ್ಟಿತ್ತು. ಆದರೆ ಹೆತ್ತ ಮಗಳು ವಿಡಿಯೋ ಕಾಲ್ ಮೂಲಕ ಅಪ್ಪನ ಅಂತಿಮ ಯಾತ್ರೆ ನೋಡಿ ಸುಮ್ಮನಾದಗಳು. ಕರುಳು ಹಿಡಿದ ದೃಶ್ಯವನ್ನು ಕವಿ ಧನಪಾಲ ನಾಗರಾಜಪ್ಪ ಅವರು ಕವಿತೆ ಮೂಲಕ ಕಟ್ಟಿಕೊಟ್ಟಿದ್ದಾರೆ. ತಪ್ಪದೆ ಮುಂದೆ ಓದಿ….
ತೆಲುಗು ಮೂಲ : ರಾಜಾಬಾಬು ಕಂಚರ್ಲ

ಒಂದು ಕೋಣೆಯಲ್ಲಿ
ನಿಶ್ಶಬ್ದವಾಗಿ
ತಂದೆಯೊಬ್ಬ ಕೊನೆಯುಸಿರುಬಿಟ್ಟ
ಆದರೆ…
ಮೂರು ಫೋನುಗಳ ಪರದೆಗಳಲ್ಲಿ
“Connecting…” ಎಂಬ ಅಕ್ಷರಗಳು ಮಾತ್ರ
ಇನ್ನೂ ಮಿನುಗುತ್ತಲೇ ಇವೆ
ಕೊನೆಯ ಸಲ
ಅಪ್ಪನ ಮುಖ
ಒಂದು ಮೊಬೈಲ್ ಪರದೆಯಲ್ಲಿ ಕಾಣಿಸಿತು
ತಣ್ಣಗಾದ ದೇಹ
ಉರಿಯುತ್ತಿರುವ ಕಟ್ಟಿಗೆಗಳು
ಹೊಗೆಯಾಡುತ್ತಿರುವ ನೆನಪುಗಳು
ಆ ಕೈಗಳೇ…
ಅವರ ಬೆರಳುಗಳನ್ನು ಹಿಡಿದು
ನಡಿಗೆ ಕಲಿಸಿದ್ದವು
ಆ ಹೆಗಲುಗಳೇ…
ಅವರ ಭವಿಷ್ಯದ ಭಾರ ಹೊತ್ತಿದ್ದವು
ತನ್ನ ಕನಸುಗಳನ್ನೆಲ್ಲ ಮಾರಿ
ಅವರ ಕನಸುಗಳಿಗೆ ರೆಕ್ಕೆ ಕಟ್ಟಿದ್ದ
ತನ್ನ ಯೌವನವನ್ನೆಲ್ಲ ಒತ್ತೆಯಿಟ್ಟು
ಅವರ ಬದುಕಿಗೆ ಬೆಳಕಾಗಿದ್ದ
ಆ ತಂದೆ…
ಚಿತೆಯಲ್ಲಿ ಸುಟ್ಟುಹೋಗುತ್ತಿದ್ದರೆ
ಅವರು ಮಾತ್ರ
ವಿಡಿಯೋದಲ್ಲಿ ನೋಡುತ್ತಾ
ಉತ್ಸವದ ಮೂರ್ತಿಗಳಂತೆ ನಿಂತಿದ್ದರು
ಕಾಲ…
ಎಷ್ಟು ಕ್ರೂರವಾಗಿ ಬದಲಾಗಿದೆಯಲ್ಲವಾ!
ಚಿಕ್ಕಂದಿನಲ್ಲಿ
ತಂದೆಯ ಕೈ ಹಿಡಿದು
ನಡಿಗೆ ಕಲಿತ ಮಕ್ಕಳು
ಈಗ
ಮೊಬೈಲ್ ಫೋನ್ ಹಿಡಿದು
ವಿದಾಯ ಹೇಳುವುದನ್ನು ಕಲಿತಿದ್ದಾರೆ
ಒಂದು ಗುಂಡಿ ಒತ್ತಿದರೆ
ಹಣ ತಲುಪಿತು
ಮತ್ತೊಂದು ಗುಂಡಿ ಒತ್ತಿದರೆ
ವಿಡಿಯೋ ಶುರುವಾಯಿತು
ಆದರೆ…
ಯಾವ ಗುಂಡಿ ಒತ್ತಿದರೂ
ಆ ತಂದೆಯ ಹೃದಯಕ್ಕೆ
ಈ ಹೆಣ್ಣುಮಕ್ಕಳ ಸ್ಪರ್ಶ ತಲುಪಲಿಲ್ಲ
“ಇನ್ನೂ ಎಷ್ಟು ಹೊತ್ತು?
ಊಟ ಮಾಡಬೇಕು…”
ಎಂದು ಕೇಳಿದ ಮಾತು
ಚಿತೆಯ ಬೆಂಕಿಗಿಂತಲೂ ಹೆಚ್ಚು ದಹಿಸುತ್ತದೆ
ಬೂದಿಯಾಗುತ್ತಿರುವುದು ಶವವಲ್ಲ;
ಸಂಬಂಧ
ಆ ಚಿತೆಯಲ್ಲಿ ಸುಟ್ಟದ್ದು
ಒಬ್ಬ ಮನುಷ್ಯನ ದೇಹ ಮಾತ್ರವಲ್ಲ
ತನ್ನ ಮಕ್ಕಳನ್ನು ಕೊನೆಯ ಸಲ ನೋಡಬೇಕೆಂದು
ಹಾತೊರೆದ ಆ ಎರಡು ಕಣ್ಣುಗಳು
“ನನ್ನ ಮಕ್ಕಳು ಖಂಡಿತ ಬರುತ್ತಾರೆ” ಎಂಬ
ಆ ತಂದೆಯ ನಂಬಿಕೆ!
ಯಾವ ಮನುಷ್ಯನಾದರೂ
ಸಾಯುವುದು ಪ್ರಕೃತಿ ಧರ್ಮ
ಪ್ರಾಣಕ್ಕೆ ಸಮಾನರಾದವರೂ
ತನ್ನವರಾಗದಿರುವುದೇ
ನಿಜವಾದ ಸಾವು
ಆ ತಂದೆಯ ಚಿತೆಯ ಹೊಗೆ
ಆಗಸದಲ್ಲಿ ಬೆರೆತುಹೋಗಬಹುದು
ಆದರೆ
ಆ ಹೊಗೆ ಕೇಳಿದ ಪ್ರಶ್ನೆ
ಇನ್ನೂ ಈ ನೆಲದ ಮೇಲೆಯೇ ಅಲೆದಾಡುತ್ತಿದೆ
ತಂದೆ ಸತ್ತ ನಂತರ
ವಿಡಿಯೋ ಕಾಲ್‌ನಲ್ಲಿ
ಅಂತ್ಯಕ್ರಿಯೆಗಳನ್ನು ನೋಡಬಹುದು
ಹಣ ಕೊಟ್ಟು
ಕ್ರಿಯಾಕರ್ಮಗಳನ್ನು ಮಾಡಿಸಬಹುದು
ಆದರೆ…
“ಅಪ್ಪಾ…” ಎಂದು ಕರೆದಾಗ
“ಏನಮ್ಮಾ…” ಎನ್ನುವ
ಆ ಅಪರೂಪದ ನುಡಿ
ಯಾವ ಪರದೆಯಲ್ಲೂ ಕೇಳಿಸುವುದಿಲ್ಲ
ಯಾವ ವಿಡಿಯೋದಲ್ಲೂ ಕಾಣಿಸುವುದಿಲ್ಲ
ಆ ತಂದೆ ಎದುರು ನೋಡಿದ
ಹೆಣ್ಣುಮಕ್ಕಳ ಸ್ಪರ್ಶವನ್ನು
ಜಗತ್ತಿನ ಯಾವುದೇ ನೆಟ್‌ವರ್ಕ್
ಡೌನ್‌ಲೋಡ್ ಮಾಡಲಾರದು!!
- ಕನ್ನಡಾನುವಾದ : ಧನಪಾಲ ನಾಗರಾಜಪ್ಪ
