ದಿನಾ ಕಾಣುವ ಅದೇ ಕಡಲು , ಅನುಭವ ಮಾತ್ರ ಬೇರೆ. ಕಡಲು ರೂಪಿಸುವ ಉನ್ಮೇಶಶಾಲೀ ನಾವೀನ್ಯತೆ ಇದು. ಹಿರಿಯ ಲೇಖಕರಾದ ಗಿರಿಜಾ ಶಾಸ್ತ್ರಿ ಅವರು ಪ್ರವಾಸ ಕಥನವನ್ನು ತಪ್ಪದೆ ಮುಂದೆ ಓದಿ…
ಸಿಯಾಟಲ್ ನಲ್ಲೀಗ ಬೇಸಿಗೆಯ ಕಾಲ. ಚಳಿಗಾಲ ಕಳೆದು ಹರ್ಷೋನ್ಮಾದಿಂದ, ಸೂರ್ಯಸ್ನಾನಕ್ಕೆ ಬುಳ ಬುಳನೆ ಎದ್ದು ಬರುತ್ತಾರೆ ಜನ. ಅವರಲ್ಲಿ ಒಂದು ರೀತಿಯ ಉತ್ಸಾಹ, ಚಟುವಟಿಕೆ, ಆವೇಗ ಮನೆಯ ಮುಂದೆಯೇ ಸಮುದ್ರವಿದೆ. ಅದರ ಹಾದಿಗುಂಟ ಒಂಬತ್ತು ಎಕೆರೆಯಲ್ಲಿ ಸುಂದರ ಉದ್ಯಾನವನ್ನು ನಿರ್ಮಿಸಲಾಗಿದೆ. ಇದನ್ನು sculpture park ಎನ್ನುತ್ತಾರೆ.

ಇಲ್ಲಿ ಗಾಜಿನ ಕಲಾಕೃತಿಗಳಿವೆ. ಸಮುದ್ರದೊಳಗೆ ಇಳಿಯುತ್ತಿರುವ ಸೂರ್ಯ, ಸಾಲಾಗಿ ಸಾಗುವ ಹಾಯಿದೋಣಿಗಳು, ಎಲ್ಲಿಂದಲೋ ಬಂದು, ಎಲ್ಲಿಗೋ ಹೋಗುವ ಹಡಗುಗಳು, ವಿಹಾರ ದೋಣಿಗಳು, ಹುಟ್ಟು ಹಾಕುತ್ತಾ ಸಾಗುವ ದೋಣಿಗರು, ಮೋಟರ್ ಬೋಟುಗಳು, ಜೊತೆಗೆ ಸಾಗುವ ಬೆಳ್ಳಕ್ಕಿಗಳು, ಸ್ಫಟಿಕದಷ್ಟು ಶುಭ್ರ ನೀರು, ಬೆರಗುಗೊಳಿಸುವ ಸ್ವಚ್ಛತೆ, ನೀರಾಟವಾಡುವ ಅರೆಬತ್ತಲ ಚೆನ್ನಿ -ಚೆನ್ನಿಗರು! ದೂರದಲ್ಲಿ ಕಾಣುವ ರೈನ್ಯಿಯರ್ ಮಂಜಿನ ಪರ್ವತ. ಇವುಗಳನ್ನು ಕಾಣುವುದೇ ಒಂದು ಸ್ವರ್ಗೀಯ ಅನುಭವ. ದಿನಾ ಕಾಣುವ ಅದೇ ಕಡಲು , ಅನುಭವ ಮಾತ್ರ ಬೇರೆ. ಕಡಲು ರೂಪಿಸುವ ಉನ್ಮೇಶಶಾಲೀ ನಾವೀನ್ಯತೆ ಇದು. ಯಾಕೆಂದರೆ, ಕಡಲೆಂದರೆ ವಿವಿಧ ಮೂಲೆಗಳಿಂದ ನೆಲದ ಸತ್ವವನ್ನು ಹೊತ್ತು ತರುವ ನದಿಗಳ ದೇಣಿಗೆ ತಾನೇ?, ಅದಕ್ಕೇ ಕಡಲು ನಿತ್ಯನೂತನ ಅದರ ಹಾಗೆ ಕಾವ್ಯವೂ ಎಂದು ಪಂಪ ಹೇಳಿರಬೇಕು. (“ಇದು ನಿಚ್ಚಂ ಪೊಸತು ಆರ್ಣವಂಬೋಲ್”) ಅಲ್ಲದೇ, ಕಡಲು ಮತ್ತು ಅಲೆಗಳು ಅದ್ವೈತ ಸಿದ್ಧಾಂತದ ಪರಮ ಪ್ರತೀಕ ಎಂದು ಜ್ಞಾನಿಗಳು ಹೇಳುತ್ತಾರೆ.

ಇಲ್ಲಿ ಕಣ್ಣಿನ ಆಕೃತಿಯ ಬೆಂಚುಗಳಿವೆ. ನಮ್ಮ ಕಣ್ಣಿನಳತೆಗೆ ತಕ್ಕಂತೆ ದೃಶ್ಯವ್ಯಾಪಾರ ತೆರೆದುಕೊಳ್ಳುತ್ತದೆ. ಅದಕ್ಕೆಂದೇ ಇದಕ್ಕೆ EYE BENCHES ಎಂದು ಹೆಸರು. ಪ್ರತಿದಿನ ಈ ಬೆಂಚುಗಳ ಮೇಲೆ ಕುಳಿತು ಇಲ್ಲಿ ಬರಹೋಗುವವರನ್ನು ಗಮನಿಸುವುದೇ ಒಂದು ಅನುಭಾವ ಸುಖ! ನಮ್ಮ ಕಲ್ಪನಾ ಶಕ್ತಿ ಗರಿಗೆದರುತ್ತದೆ. ವಸ್ತು ಪ್ರಪಂಚವೂ ಅದಕ್ಕೆ ಅನುಗುಣವಾಗಿ ಹುಟ್ಟಿಕೊಳ್ಳುತ್ತದೆ (ಅಧ್ಯಾಸ?). ಒಂದು ಭಾವವಲಯ ಸೃಷ್ಟಿಯಾಗುತ್ತದೆ.


ಬಹುಶಃ ಅಷ್ಟಾದಶ ವರ್ಣನೆಗಳಲ್ಲಿ ಸಮುದ್ರವೂ ಹೊಕ್ಕಿದ್ದು ಈ ಕಾರಣಕ್ಕೇ ಇರಬೇಕು. ಕಾವ್ಯಕ್ಕೆ ಸಮುದ್ರದ ನಂಟು, ಸಮುದ್ರಕ್ಕೆ ನದಿಯ ನಂಟು, ನದಿಗೆ ಸಂಸ್ಕೃತಿಯ ನಂಟು ಇಂದಿನದಲ್ಲವಲ್ಲ? ಆದರೂ “ಇದು ನಿಚ್ಚಂ ಪೊಸತು”…..
- ಗಿರಿಜಾ ಶಾಸ್ತ್ರೀ
