“ಅಲ್ಲೇ ಎಣಿಸಿಬಿಟ್ಟ ನಕ್ಷತ್ರಗಳು” ಕೃತಿ ಪರಿಚಯ

ಹಿರಿಯ ಕವಿಯತ್ರಿ ಎಂ.ಆರ್. ಕಮಲ ಮತ್ತು ಅವರ ಮಗ ಯುವಕವಿ ಆಕರ್ಷ್ ಆರ್. ಕಮಲ ಅವರುಗಳು ಸಂಯುಕ್ತವಾಗಿ ರಚಿಸಿರುವ ಪ್ರವಾಸ ಕಥನದ ಕುರಿತು ಲೇಖಕರಾದ ಡಾ ಎಚ್ ಎಸ್ ಸತ್ಯನಾರಾಯಣ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ: ಅಲ್ಲೇ ಎಣಿಸಿಬಿಟ್ಟ ನಕ್ಷತ್ರಗಳು
ಲೇಖಕರು: ಎಂ.ಆರ್. ಕಮಲ ಮತ್ತು ಆಕರ್ಷ್ ಆರ್. ಕಮಲ
ಪ್ರಕಾಶನ : ಸಸಿ ಪ್ರಕಾಶನ, ಮೈಸೂರು
ಬೆಲೆ : 250ರೂ.
ಪುಟಗಳು : 250

ಪ್ರತಿಗಳಿಗೆ ಸಂಪರ್ಕಿಸಿ: 95130 18456

ಇದು ಏಕ ಕಾಲಕ್ಕೆ ಎರಡು ತಲೆಮಾರುಗಳು ಜರ್ಮನಿ ಮತ್ತು ಜಪಾನನ್ನು ಕಂಡ ಅನುಭವಗಳನ್ನು ಓದುವ ಅವಕಾಶವನ್ನು ಈ ತಾಯಿ-ಮಗ ಒದಗಿಸಿರುವುದು ವಿಶೇಷವಾಗಿದೆ. ತಾಯಿ-ಮಗ ಒಟ್ಟಾಗಿ ಬರೆದ ಪ್ರವಾಸಕಥನ ಬಹುಶಃ ಕನ್ನಡಕ್ಕೆ ಇದೇ ಮೊದಲನೆಯದು ಅನ್ನಿಸುತ್ತದೆ. ಹಾಗಿದ್ದಲ್ಲಿ, ಈ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದ ಕೀರ್ತಿ ಕೂಡ ಈ ತಾಯಿ ಮಗನ ಮುಡಿಗೇರುತ್ತದೆ. ಹಿರಿಯರಿಗೆ ಪ್ರವಾಸವೆಂಬುದು ಅನುಭವದ ಒಂದು ಅವಿಭಾಜ್ಯ ಅಂಗವೆನಿಸಿದರೆ, ಕಿರಿಯರಿಗೆ ಪ್ರವಾಸ ಅಭ್ಯಾಸದ ಒಂದು ಭಾಗ. ಕಮಲ ಮತ್ತು ಆಕರ್ಷ್ ಇಬ್ಬರೂ ಕವಿ ಹೃದಯದವರಾಗಿರುವುದರಿಂದ ಈ ಪ್ರವಾಸದ ಅನುಭವಗಳು ಇವರ ವ್ಯಕ್ತಿತ್ವವನ್ನು ಹೊಸ ಆಯಾಮದ ಮೂಲಕ ಓದುಗರಿಗೆ ಪರಿಚಯಿಸುತ್ತವೆ.

ಹೊಸ ದೇಶದ ಪರಿಸರಕ್ಕೆ ಲೀಲಾಜಾಲವಾಗಿ ಹೊಂದಿಕೊಂಡು ಬಾಳಬಲ್ಲ ಮಗ, ತಕರಾರುಗಳೊಂದಿಗೆ ವಿದೇಶವನ್ನು ಸುತ್ತಿ ಮರಳಿ ಮೆಚ್ಚಿದ ಗೂಡಿಗೆ ಬರುವ ಅಮ್ಮ – ಈ ಇಬ್ಬರ ಕಣ್ಣು, ಮನಸ್ಸು, ಹೃದಯಗಳು ದರ್ಶಿಸಿದ ಸಂವೇದನೆಯ ಚಿತ್ರಣಗಳನ್ನು ಈ ಕೃತಿಯುದ್ದಕ್ಕೂ ನಾವು ಗಮನಿಸಬಹುದು. ಜರ್ಮನಿ ಮತ್ತು ಜಪಾನ್ ಎರಡೂ ದೇಶಗಳು ಎರಡನೆಯ ಮಹಾಯುದ್ಧದ ಬಳಿಕ ಪುನರುಜ್ಜೀವನಗೊಂಡು ಜಾಗತಿಕ ಭೂಪಟದಲ್ಲಿ ದೃಢವಾಗಿ ನೆಲೆನಿಂತು, ವಿಶ್ವದ ಶ್ರೇಷ್ಠ ರಾಷ್ಟ್ರಗಳ ಸಾಲಿನಲ್ಲಿ ಇರುವವು. ಅತ್ಯಂತ ಬಲಿಷ್ಠವಾಗಿಯೂ, ತಂತ್ರಜ್ಞಾನದಲ್ಲಿ ಸಾಧನೆಯ ಮುಂಚೂಣಿಯಲ್ಲಿ ಗುರುತಿಸಿಕೊಂಡವು. ಆದರೆ ಎರಡೂ ರಾಷ್ಟ್ರಗಳು ಭಿನ್ನ ಭಿನ್ನ ಸಮಾಜವನ್ನು, ಸಂಸ್ಕೃತಿಯನ್ನು ಹೊಂದಿದವು.

ಈ ಕೃತಿಯಲ್ಲಿ ಅಮ್ಮ ಜರ್ಮನಿಯ ಮೂವತ್ತೊಂದು ಬೇರೆ ಬೇರೆ ಚಿತ್ರಣಗಳನ್ನು ನೀಡಿದರೆ, ಮಗ ಜಪಾನನ್ನು ಏಳು ಅಧ್ಯಾಯಗಳಲ್ಲಿ ತಮ್ಮ ಕಣ್ಣಕನ್ನಡಿಯಲ್ಲಿ ಹಿಡಿದಿಟ್ಟಿದ್ದಾರೆ. ಕುತೂಹಲದ ಹೊರತು ಬೇರಾವ ಅಧ್ಯಯನದ ಉದ್ದೇಶವೂ ಇವರ ಪ್ರವಾಸದ ಹಿಂದಿರಲಿಲ್ಲವಾದರೂ ಪ್ರತಿ ಹಂತದಲ್ಲೂ ತಮಗಾದ ಅನುಭವಗಳನ್ನು ಅಭ್ಯಾಸಪೂರ್ಣವಾಗಿ ಮಂಡಿಸುವ ಕ್ರಮವನ್ನು ಇಬ್ಬರೂ ಪಾಲಿಸಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಕಮಲ ಅವರು ಫ್ರೆಡರಿಕ್ ವಿಶ್ವವಿದ್ಯಾಲಯವನ್ನು ಕುರಿತು ನೀಡುವ ಮಾಹಿತಿಗಳನ್ನು ಗಮನಿಸಬಹುದು. ಬೆಂಗಳೂರು ವಿ.ವಿ.ಯಲ್ಲಿ ಸಹಪಾಠಿಗಳೊಂದಿಗೆ ಸಾಹಿತ್ಯ ಕುರಿತಾಗಿ ಘನಘೋರವಾಗಿ ಚರ್ಚೆ ಮಾಡುತ್ತ, ಭಾವಗೀತೆಗಳನ್ನು ಹಾಡಿಕೊಳ್ಳುತ್ತ ಅಧ್ಯಯನ ಮಾಡಿದ್ದ ಲೇಖಕಿಗೆ ಫ್ರೆಡರಿಕ್ ವಿಶ್ವವಿದ್ಯಾಲಯದಲ್ಲಿ ಬಿಯರ್ ಕುಡಿತಯುತ್ತಾ, ಪುಸ್ತಕಗಳನ್ನು ಕೈಯಲ್ಲಿ ಪುಸ್ತಕಗಳನ್ನು ಹಿಡಿದುಕೊಂಡು ಗಹನವಾಗಿ ಚರ್ಚಿಸುತ್ತಿದ್ದ, ಮೊಬೈಲ್ ನೊಳಗೆ ಮುಳುಗಿಹೋದ, ಒಂಟಿಯಾಗಿ ಆಕಾಶ ನೋಡುತ್ತಾ ಕುಳಿತಿದ್ದ ಭಾರತೀಯ ವಿದ್ಯಾರ್ಥಿಗಳನ್ನು ನೋಡಿದಾಗ ಆದ ಅಚ್ಚರಿಗೆ, “ಅಮ್ಮ, ಬಿಯರ್ ಕುಡಿಯುವುದು ಇಲ್ಲಿ ನೀರು ಕುಡಿದಂತೆ.

ನಿನ್ನ ವಿದ್ಯಾರ್ಥಿಗಳನ್ನು ಹೋಲಿಸಿಕೊಂಡು ಗಾಬರಿಯಾಗ ಬೇಡ” ಎಂಬ ಮಗನ ಮಾತು ಸಾಂತ್ವನ ಹೇಳುತ್ತದೆ. ಈ ನೆಪದಲ್ಲಿ ಲೇಖಕಿ ಆ ವಿಶ್ವವಿದ್ಯಾಲಯದ ಮೂರು ಶತಮಾನಗಳ ಇತಿಹಾಸವನ್ನು, ಅದರ ಕಾರ್ಯವೈಖರಿಯನ್ನು ಓದುಗರ ಮುಂದಿಡುತ್ತಾರೆ. ಕುಳಿತಲ್ಲೇ ಕೋಶ ಓದುವವರಿಗೆ ಈ ಮನಾಹಿತಿಗಳಿಂದ ಜರ್ಮನ್ ಶೈಕ್ಷಣಿಕ ವ್ಯವಸ್ಥೆಯ ಸ್ಥೂಲ ಪರಿಚಯ ಒದಗುವುದರಲ್ಲಿ ಅನುಮಾನವಿಲ್ಲ. ಇಂತಹ ಅನೇಕ ಪೂರಕ ಮಾಹಿತಿಗಳನ್ನು ಸಾಧ್ಯವಿದ್ದೆಡೆಯಲ್ಲೆಲ್ಲಾ ಲೇಖಕರು ಒದಗಿಸಿರುವುದರಿಂದಲೇ ಇದು ಅಭ್ಯಾಸಪೂರ್ಣ ಕೃತಿ ಎನಿಸುವುದು.

ಜರ್ಮನಿಯಲ್ಲಿ ವ್ಯಕ್ತಿಸ್ವಾತಂತ್ರ್ಯ ಮತ್ತು ವೈಯಕ್ತಿಕ ಹೊಣೆಗಾರಿಕೆಗೆ ಹೆಚ್ಚು ಮಹತ್ವ. ಇದಕ್ಕೆ ಧಕ್ಕೆಯಾದಲ್ಲಿ ಅಲ್ಲಿನ ಜನ ತಮಗನಿಸಿದ್ದನ್ನು ಯಾವ ಮುಲಾಜಿಗೂ ಒಳಗಾಗದೆ ಮುಖಕ್ಕೆ ಹೊಡೆದಂತೆ ತಿಳಿಸುತ್ತಾರೆ. ತಮ್ಮ ಹಾಗೆ ಜರ್ಮನ್ನರಲ್ಲದವರನ್ನು ಮುಗುಳ್ನಗುವುದಂತಿರಲಿ ತಲೆಯೆತ್ತಿ ನೋಡುವುದೂ ಇಲ್ಲವಂತೆ! ಲೇಖಕಿಯ ಅಕ್ಕನ ಸೊಸೆ ನವ್ಯ ಅವರು ಭಾರತೀಯ ಸಂಸ್ಕೃತಿಯಲ್ಲಿ ಬೆಳೆದ ಸ್ನೇಹಜೀವಿಯಾದ್ದರಿಂದ ಒಮ್ಮೆ ಎದುರು ಮನೆಯಲ್ಲಿದ್ದ. ಜರ್ಮನ್ನರನ್ನು ಕರೆದು ಊಟ ಬಡಿಸುತ್ತಾರೆ. ಅಡುಗೆಯನ್ನು ಮೆಚ್ಚಿ, ಫೋಟೋ ನೋಡಿ ಖುಷಿಪಟ್ಟು ಭಾರತಕ್ಕೊಮ್ಮೆ ಬರುತ್ತೇವೆ ಎಂದೆಲ್ಲಾ ಹೋದ ಆ ಎದುರು ಮನೆಯ ಅತಿಥಿಗಳು, ಮರುದಿನ ನವ್ಯರ ಮನೆಗೆ ಬಂದ ಮತ್ತೊಬ್ಬ ಅತಿಥಿಗಳು ನಿಯಮ ತಪ್ಪಿ ಆ ಎದುರು ಮನೆಯ ಮುಂದೆ ಕಾರು ನಿಲ್ಲಿಸಿದ್ದಕ್ಕೆ “ನಿಮ್ಮ ಅತಿಥಿಗಳಿಗೆ ಸರಿಯಾದ ತಿಳುವಳಿಕೆ ನೀಡಿಲ್ಲ” ಎಂದು ಆರೋಪಿಸಿದ ಪತ್ರವೊಂದನ್ನು ನವ್ಯ ಅವರ ಮನೆಯ ಪೋಸ್ಟ್ ಬಾಕ್ಸಿಗೆ ಹಾಕಿ ಹೋಗಿದ್ದರಂತೆ.

ಅಕ್ಕಪಕ್ಕದವರು ನಿಮ್ಮ ಹಾಡು ಕೇಳಲು ಹಿಂಸೆಯಾಗುತ್ತಿದೆ, ನಿಲ್ಲಿಸಿ ಎಂದೆಲ್ಲ ಚೀಟಿಗಳನ್ನು ಬಾಗಿಲಿಗೆ ಅಂಟಿಸಿ ಹೋಗುವ, ಜರ್ಮನ್ ಲೈಬ್ರರಿಯಲ್ಲಿಟ್ಟು ಬಂದ ಲೇಖಕರ ಪುಸ್ತಕ ‘ಕಾಳನಾಮ ಚರಿತೆ’ಯನ್ನು ಓದಲು ಒಯ್ದ ಪ್ರಸಂಗ ತಂದ ಖುಷಿಯ ಜೊತೆಯಲ್ಲೇ ಲೇಖಕಿ ದಾಖಲಿಸುತ್ತಾರೆ. ಹದಿನಾರು ರಾಜ್ಯಗಳ ಒಕ್ಕೂಟ ಆಡಳಿತ ವ್ಯವಸ್ಥೆಯನ್ನು, ಸಾರ್ವಜನಿಕ ಬದುಕಿನ ಅನೇಕ ಸಂಗತಿಗಳನ್ನು ವಿವರಿಸುವ ಲೇಖಕಿ ಹೆಜ್ಜೆಹೆಜ್ಜೆಗೂ ಕನ್ನಡದ ನೆಲದ ಬದುಕಿನ ನೆನಪುಗಳು ಮುನ್ನಗುವುದು ಸಹಜವಾಗಿ ಕಾಣುತ್ತಾರೆ. ಭಾರತದಂತೆಯೇ ಗಿಜಿಗುಡುವ ರೈಲು ಪ್ರಯಾಣದಲ್ಲಿ ಜರ್ಮನ್ನರು ನೆಲದ ಮೇಲೆ ಕುಳಿತು ಪ್ರಯಾಣ ಮಾಡುವಾಗಿನ ಪ್ರಸಂಗವನ್ನು ನಾವು ಮಜವಾಗಿ ಓದಬಹುದು. ಮಕ್ಕಳಿಗೆಂದೇ ಮೀಸಲಾದ ಆಟದ ಉದ್ಯಾನದಲ್ಲಿದ್ದ ಆಟಿಕೆಗಳು ಮಕ್ಕಳಿಗೆ ಕಾಡನ್ನು ಪರಿಚಯಿಸುವ ಬಗೆಯನ್ನು ಮೆಚ್ಚುಗೆಯಿಂದ ಕಾಣುತ್ತಾರೆ. ಸುಪ್ರಸಿದ್ಧ ನಾಟಕಕಾರನಾದ ಬ್ರೆಕ್ಟ್‌ನ ಮನೆಯ ಭೇಟಿಯಂತೂ ಲೇಖಕಿಯ ಬರಹದಲ್ಲಿ ಅಪೂರ್ವವಾಗಿ ಮೂಡಿದೆ. ಗಣಿತದ ಪಠ್ಯದಲ್ಲಿ ಬರುವ ‘ಓಮ್ಸ್ ಲಾ’ ನಿರ್ಮಾತೃ ಓಮ್ಸ್‌ನ ನೆನಪನ್ನು ಜರ್ಮನ್ನರು ಉಳಿಸಿಕೊಂಡಿರುವ ಬಗೆಯನ್ನು ಬಣ್ಣಿಸುವಾಗ ಇಲ್ಲೇ ರಾಜಾಜಿನಗರದಲ್ಲಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಮನೆಯನ್ನು ಒಡೆದು ಹಾಕಿದ ನಮ್ಮ ಅನಾದರದ ಬಗ್ಗೆ ವಿಷಾದ ಆವರಿಸುವುದು ಕೂಡ ಅಸಹಜವೆನಿಸುವುದಿಲ್ಲ.

ಎರ್ಲಾಂಗನ್‌ನ ಬಸ್ಸು ಪ್ರಯಾಣದ ವಿವರ ನೀಡುವಾಗ ಅಲ್ಲಿನ ಜನರು ಸಂಚಾರಿ ನಿಯಮಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸುವುದನ್ನು ಹೇಳಿದ್ದಾರೆ. ತೋಟದ ಮನೆಯೊಂದರ ಭೇಟಿಯ ಸಂದರ್ಭದಲ್ಲಿ ಅಲ್ಲಿನ ಕೃಷಿಪದ್ಧತಿಯ ಬಗ್ಗೆ ಗಮನ ಸೆಳೆಯುತ್ತಾರೆ. ಫ್ಯುರ್ತ್ ನಗರದಲ್ಲಿ ಬ್ಯಾಡ್ಮಿಂಟನ್ ಆಡಿದ ಸಂದರ್ಭದಲ್ಲಿ ಎರಡನೇ ಮಹಾಯುದ್ಧದ ಸಂದರ್ಭದ ಯಹೂದಿಗಳ ನೆನಪು ಬಿಚ್ಚಿಕೊಳ್ಳುತ್ತದೆ. ಈ ಮುಂತಾದ ಹಳೆಯ ನೆನಪುಗಳೊಂದಿಗೆ ವರ್ತಮಾನದ ಜರ್ಮನ್ನರು ಸದಾ ಸಂತಸದಿಂದಿರಲು ಏನೆಲ್ಲ ಮಾಡುತ್ತಾರೆಂಬುದೂ ಮುಖ್ಯವಾಗುತ್ತದೆ. ಜೀವಂತಿಕೆ ತುಂಬಿರುವ ಹರಟೆಕಟ್ಟೆಗಳು ಲೇಖಕಿಗೆ ಖುಷಿಕೊಡುವುದು, ಅವರ ಜೀವನೋತ್ಸಾಹವನ್ನು ಅರಸುವ ಮಾದರಿಗೆ ಉತ್ತಮ ಉದಾಹರಣೆಯಾಗಿದೆ.

ಜರ್ಮನಿಯ ಮಕ್ಕಳಿಗೆ ದೊರಕುವ ವಿವಿಧ ಶಾಲಾ ಹಂತದ ಶಿಕ್ಷಣ ವ್ಯವಸ್ಥೆಯನ್ನು, ಮಕ್ಕಳ ಸೃಜನಶೀಲತೆಯನ್ನು ಅರಳಿಸುವ ಕಲಿಕೆಯ ಅವಕಾಶಗಳನ್ನು, ಬ್ರಾಡೆಂಡ್ ಹುಚ್ಚನ್ನು ವಿವರಿಸುವ ಸನ್ನಿವೇಶದಲ್ಲಿ ಆಡಿ-ರುಡಿಯ ಕಥೆಯ ನೆನಪುಗಳು ಭರತ-ಬಾಹುಬಲಿಯ ಸ್ಮರಣೆಯನ್ನು ಮುನ್ನೆಲೆಗೆ ತರುತ್ತದೆ. ನ್ಯೂರೆಂಬರ್ಗ್‌ನಲ್ಲಿ ವರ್ಷಕ್ಕೊಮ್ಮೆ ನಡೆಯುವ ‘ವೊಲ್ಕ್ ಫೆಸ್ಟ್’ ನೋಡಲು ತೆರಳುವಾಗ ಅಲ್ಲಿನ ಹಳ್ಳಿಗಳ ದರ್ಶನವಾಗುವುದು, ತಮ್ಮ ಹುಟ್ಟೂರಿನ ಮೇಟಿಕುರ್ಕೆಯ ನೆನಪುಗಳ ಮೆರವಣಿಗೆಯ ಜೊತೆಯಲ್ಲಿ ಪಯಣಿಸುವುದು ವಿಶೇಷ. ಮಗ, ಸೊಸೆ, ಮೊಮ್ಮಗನ ಜೊತೆಗಿನ ಈ ಪಯಣದ ಅನುಭವ, ಮೂರು ತಲೆಮಾರುಗಳು ಸಂಭ್ರಮಿಸುವ ಕ್ಷಣವಾಗಿ ಮಾರ್ಪಟ್ಟಿರುವುದು ಅಲ್ಲಿನ ಸಮುದಾಯ ಸಂಗಮದ ಭಾಗವಾಗಿಯೇ ನಾವು ಪರಿಭಾವಿಸಬಹುದು. ಬೇಸಿಗೆಯಲ್ಲಿ ರಿಪೇರಿ ಕೆಲಸಗಳನ್ನು ಕೈಗೆತ್ತಿಕೊಳ್ಳುವ ಜರ್ಮನ್ನರದು ಅತ್ಯಂತ ನಿಧಾನವಾದ ಕೆಲಸ ಗತಿಯಾದರೂ ಹಿಡಿದ ಕೆಲಸವನ್ನು ನಮ್ಮಂತೆ ಅರ್ಧಕ್ಕೆ ಬಿಡುವ ಜಾಯಮಾನದವರಲ್ಲ. ರಿಪೇರಿ ಕೆಲಸಗಳಿಗೆ ಬಳಸುವ ಅಲ್ಲಿನ ಬೃಹತ್ ವಾಹನಗಳ ಪಟ್ಟಿಯೂ ಇಲ್ಲಿದೆ. ಅಲ್ಲಿನ ಪುಸ್ತಕದಂಗಡಿಯ ವಿವರಗಳು ನಮ್ಮ ಸಪ್ನಾ ಬುಕ್ ಹೌಸಿಗೆ ಹೋದಾಗಿನ ಅನುಭವದಂತೆಯೇ ಇದೆ.

ಜರ್ಮನ್ ಕಲಿಯದೆ ಅಲ್ಲಿನ ಜನರೊಂದಿಗೆ ಸಂವಾದಿಸುವ ಅವಕಾಶ ದೊರಕದೆಂಬ ಅರಿವಿನಿಂದ ಲೇಖಕಿ ಮೊಬೈಲ್ ಆಪ್ ಮೂಲಕವಾದರೂ ಕೊಂಚ ಜರ್ಮನ್ ಕಲಿಯಬೇಕೆಂಬ ಉಮೇದಿಗೆ ಸಿಲುಕುತ್ತಾರೆ. ಏಕೆಂದರೆ ಜರ್ಮನ್ನರು ಇಂಗ್ಲಿಷ್ ಬಂದರೂ ಮಾತಾಡುವುದಿಲ್ಲ. ನಮ್ಮ ಜೊತೆ ಮಾತಾಡಬೇಕೋ ನಮ್ಮ ಭಾಷೆ ಬಳಸು ಎಂಬ ಧೋರಣೆಯವರು. ಇಂಗ್ಲಿಷ್ ಜೊತೆ ಫ್ರೆಂಚ್ ಭಾಷೆ ಬಲ್ಲ ಲೇಖಕಿಗೆ ಜರ್ಮನ್ ಕಲಿಯುವ ಹುಕಿ ಹೊಕ್ಕದ್ದು ಸಹಜವಾಗಿಯೇ ಇದೆ, ಕಲಿತರೆ ಆ ದೇಶವನ್ನು ಮತ್ತಷ್ಟು ವಿಶದವಾಗಿ ಅರಿಯಬಹುದೆಂಬ ಆಸೆ ಅವರದು. ಬಟಾನಿಕಲ್ ಗಾರ್ಡನ್‌ಗೆ ಹೋದಾಗ ಎಲ್ಲ ಸಸ್ಯಗಳ ಬಗ್ಗೆ ಅರ್ಥವಾಗದಿದ್ದರೂ ಕೇಳಿಸಿಕೊಳ್ಳುವ ಹಂಬಲವನ್ನು ಹತ್ತಿಕ್ಕಿಕೊಳ್ಳಲಾಗುವುದಿಲ್ಲ. ಅದು ಸಸ್ಯವಾಗಿರಲಿ, ಗ್ರಂಥಾಲಯವಿರಲಿ, ಆಟದ ಮೈದಾನವಿರಲಿ, ಜನವಸತಿಯ ಸಂತೆಯಿರಲಿ, ಜನರ ವರ್ತನೆಯಿರಲಿ, ಹಬ್ಬ ಹರಿದಿನಗಳ ಆಚರಣೆಯಿರಲಿ ಲೇಖಕಿ ಅವೆಲ್ಲವನ್ನೂ ಸಮಾಜಶಾಸ್ತ್ರೀಯ ಕುತೂಹಲದಿಂದ ಅರ್ಥ ಮಾಡಿಕೊಳ್ಳುವ, ಮತ್ತು ತಮಗೆ ದಕ್ಕಿದಷ್ಟನ್ನು ಕನ್ನಡದ ಓದುಗರಿಗೆ ದಾಟಿಸುವ ಪ್ರಯತ್ನ ಮಾಡುತ್ತಾರೆ. ಜರ್ಮನಿಯ ಇತಿಹಾಸ, ರಾಜಕೀಯ, ಸಮಾಜ ಜೀವನ ಪ್ರತಿಯೊಂದನ್ನೂ ಅವರ ‘ಸರ್ವಗ್ರಾಹಿ’ಯಾದ ಮನಸ್ಸು ಧನಾತ್ಮಕವಾಗಿ ಸ್ವೀಕರಿಸುತ್ತದೆ. ಅವರ ಸೂಕ್ಷ್ಮಗ್ರಹಿಕೆಯನ್ನು ಈ ಕೃತಿಯ ‘ಬ್ರೆಕ್ಟ್‌ಹೌಸ್’ ಎಂಬ ಅಧ್ಯಾಯದಿಂದ ನಾವು ಅರ್ಥಮಾಡಿಕೊಳ್ಳಬಹುದು. ಪ್ರತಿಯೊಂದು ಕೋಣೆಯ ಚಿಕ್ಕಪುಟ್ಟ ವಿವರಗಳು ಕೂಡ ಅವರ ಕಣ್ಣಿಂದ ತಪ್ಪಿಸಿಕೊಳ್ಳುವುದಿಲ್ಲ. ಎರ್ಲಾಂಗನ್‌ನ ವಿವರವಂತೂ ವರ್ತಮಾನ ಮತ್ತು ಭೂತಕಾಲದಲ್ಲಿ ಜೀಕಾಡುತ್ತ ನಮಗೆ ಅಗೋಚರವಾದ ಇತಿಹಾಸದ ಮುಖಗಳನ್ನು ಬಿಚ್ಚಿಡುತ್ತದೆ. ಎರಡನೇ ಮಹಾಯುದ್ಧದ ನಂತರದ ಆ ನಗರದ ಬಣ್ಣನೆಯೊಂದಿಗೆ ಜರ್ಮನ್ ಕಥಾನಕ ಮುಕ್ತಾಯ ಕಂಡಿದೆ.

ಈ ಪ್ರವಾಸ ಕಥನಕ್ಕೊಂದು ಏಕಸೂತ್ರತೆಯಿಲ್ಲ. ಅಲ್ಲಿದ್ದ ದಿನಗಳಲ್ಲಿ ಬಂದ ಅನುಭವಗಳನ್ನು ದಿನಚರಿಯಂತೆ ದಾಖಲಿಸುವ ಕ್ರಮವಿದ್ದರೂ ಆ ಚೌಕಟ್ಟನ್ನು ಕೂಡ ಈ ಕಥನ ಮೀರುತ್ತದೆ. ಎಲ್ಲಿಂದ ಬೇಕಾದರೂ ಈ ಕಥನವನ್ನು ಪ್ರವೇಶಿಸಬಹುದು. ಕಮಲ ಅವರ ಜರ್ಮನಿಯ ಪಯಣದೊಂದಿಗೆ ನಾವೂ ಪಯಣಿಸಬಹುದು.

“ಲೋಕದ ಸಂಕಟಗಳಿಗೆ ಸಾಕ್ಷಿಯಾದ ಬುದ್ಧ”

ಎರಡನೆಯ ಭಾಗದಲ್ಲಿ ಜಪಾನಿನ ಬಣ್ಣನೆಯನ್ನು ಆಕರ್ಷ್ ಕಮಲ ಮಾಡಿದ್ದಾರೆ. ತುಂಬ ಬಿಗಿಯಾದ ಭಾಷೆಯಲ್ಲಿ, ವೇಗವಾಗಿ ಅವರ ಲೇಖನಿ ಸಾಗುತ್ತದೆ. ಪುಟ್ಟಪುಟ್ಟ ತಲೆಬರಹಗಳಡಿಯಲ್ಲಿ ಜಪಾನಿನ ಚಿತ್ರಗಳಿಲ್ಲಿ ಮೆರವಣಿಗೆ ಹೊರಟಿವೆ. ‘ಬೂಟ್ಸ್ ಮತ್ತು ಬರಿಗಾಲು’ ಎಂಬ ಅಧ್ಯಾಯದಲ್ಲಿ ಹೂವುಗಳ ಬಗ್ಗೆ, ಆರ್ಕಿಡ್‌ಗಳು ಹಾದಿಬದಿಯ ಹೂವಿನಂತೆ ಸ್ವಾಗತಿಸುವ ಪರಿಯನ್ನು ವಿವರಿಸುತ್ತಾ ರೇಖಾಚಿತ್ರಗಳನ್ನು ಜೀವಂತ ಚಿತ್ರವಾಗಿಸುವ ಜಪಾನಿಯರ ತಂತ್ರಜ್ಞಾನದ ಕೌಶಲವನ್ನು ಆಕರ್ಷ್ ಸೊಗಸಾಗಿ ವರ್ಣಿಸಿದ್ದಾರೆ. ಅಲ್ಲಿಗೆ ಹೋದವರ ಕೈಗೆ ಕಾಗದದ ಹಾಳೆಗಳನ್ನು ಮತ್ತು ಬಣ್ಣ ಬಣ್ಣದ ಸುಣ್ಣದ ಕಡ್ಡಿಗಳನ್ನು ಕೊಡುತ್ತಾರಂತೆ. ನಾವು ಬರೆದ ಪ್ರಾಣಿಗೋ ಮತ್ಯಾವುದೋ ಚಿತ್ರಕ್ಕೋ ಬಣ್ಣ ತುಂಬಲು ಸೂಚಿಸುತ್ತಾರಂತೆ. ಬಳಿಕ ಅದನ್ನು ಸ್ಕ್ಯಾನಿಂಗ್ ಸ್ಟೇಷನ್‌ನಲ್ಲಿ ಸ್ಕ್ಯಾನ್ ಮಾಡಿ, ಕೆಲವೇ ಸೆಕೆಂಡುಗಳಲ್ಲಿ ಅದೇ ಚಿತ್ರವನ್ನು ಆ ಕೋಣೆಯ ಗೋಡೆಯ ಮೇಲೆ ಜೀವಂತ ಪ್ರಾಣಿಯಂತೆ ಓಡಾಡಿಸುತ್ತಾರಂತೆ. ಮಕ್ಕಳು ಬಗೆಬಗೆಯಲ್ಲಿ ಬಿಡಿಸಿದ್ದ ಕಪ್ಪೆ, ಹಾವು, ನಾಯಿಗಳೆಲ್ಲ ಆ ಕೋಣೆಯ ಗೋಡೆಯ ಮೇಲೆ ಜೀವತಾಳಿ ಬಂದು ನೆಗೆದಾಡಿದಂತೆ, ಆಹಾರ ಹಿಡಿದು ತಿಂದಂತೆ ಭಾಸವಾಗುವುದಂತೆ. ಹಾಳೆಯ ಮೇಲೆ ಮಕ್ಕಳು ಬಿಡಿಸಿದ ರೇಖೆಗಳು ಜೀವಂತ ಪರಿಸರವನ್ನು ಸೃಷ್ಟಿಮಾಡುವ ಅಚ್ಚರಿ ಜಪಾನಿಯರ ತಂತ್ರಜ್ಞಾನ ಸಿದ್ಧಿಗೊಂದು ಪುಟ್ಟ ಉದಾಹರಣೆ ಮಾತ್ರ.

ಈ ಭಾಗದ ಅತ್ಯಂತ ರಸವತ್ತಾದ ಭಾಗವೆಂದರೆ ಡಾಯ್ ಬತ್ಸುವಿನಲ್ಲಿ ಪ್ರತ್ಯಕ್ಷವಾಗುವ ‘ಮಹಾನ್ ಬುದ್ಧ’ನ ವರ್ಣನೆ. ಚಿನ್ನದ ಎಲೆಗಳಿಂದ ಅಲಂಕರಿಸುವ ಬುದ್ಧನ ಅಡಿಯಲ್ಲೆ ಯುದ್ಧದಲ್ಲಿ ಹತರಾದವರ ಮೂಳೆಗಳು ಹುದುಗಿರುವುದು ಹಿಂಸೆ-ಅಹಿಂಸೆಗಳ ಮೇಲಾಟದ ವ್ಯಂಗ್ಯದಂತಿದೆ. ಆ ಬುದ್ಧನ ಮೂರ್ತಿ ನಾವು ಕಾಣುವ ತುಟಿಗೆ ಹುಡುಗಿಯರಂತೆ ಬಣ್ಣಬಳಿದ, ಕಾಮನಬಿಲ್ಲಿನಂತಹ ಹುಬ್ಬಿನ ಸಾಮಾನ್ಯ ಬುದ್ಧನ ಪ್ರತಿಮೆಗಳಲ್ಲ. ನೀಲಿ, ಹಸಿರು, ಬೂದು ಬಣ್ಣಗಳ ಮಿಶ್ರಣದ ಸಹನಾ ಮೂರ್ತಿಯಂತೆ ಲೇಖಕರ ಕಣ್ಣಿಗವನು ಕಂಡಿದ್ದಾನೆ. ಬಹುಶಃ ಮನಸ್ಸಿಗೆ ಹಿಂಸೆ ನೀಡಿದ ಸಮಾಜದ ದೌರ್ಜನ್ಯಗಳನ್ನು ಬಿಂಬಿಸುವ ಬಣ್ಣಗಳು ಅವಾಗಿರಬಹುದೆಂಬ ಲೇಖಕರ ಊಹೆ, ಅವರ ಸೂಕ್ಷ್ಮವಾದ ಗ್ರಹಿಕೆಯನ್ನೂ, ಅದನ್ನು ಸೂಕ್ತ ಮಾತುಗಳಲ್ಲಿ ಅಭಿವ್ಯಕ್ತಪಡಿಸುವ ಜಾಣ್ಮೆಯನ್ನೂ ನಮಗೆ ಪರಿಚಯಿಸುತ್ತದೆ. ಜಪಾನಿಯರ ದೇವತೆಯಾದ ಬುದ್ಧ ಅವರ ಬೌದ್ಧಧರ್ಮದ ಅತ್ಯಂತ ಪ್ರಜಾಪ್ರಭುತ್ವದ ರೂಪವಾಗಿ ಕಂಡಿರುವುದನ್ನು ಗಮನಿಸಿದಾಗ ಆಕರ್ಷ್ ಅವರ ಆಲೋಚನಾ ಕ್ರಮ ಮತ್ತು ಅದನ್ನು ಹಂಚಿಕೊಳ್ಳು ಅವರು ಸಿದ್ಧಿಸಿಕೊಂಡಿರುವ ಗದ್ಯದ ಹದ ಎರಡೂ ನಮ್ಮ ಮನಸ್ಸನ್ನು ಹಿಡಿದು ನಿಲ್ಲಿಸುತ್ತದೆ. ಶತಮಾನಗಳ ಕ್ರೌರ್ಯಗಳ ಆಳದಲ್ಲೂ ನಗುತ್ತಿರುವ ಬುದ್ಧನ ನಗೆಗೆ ಓಡುತಿದ್ದ ಮಗವನ್ನು ತಡೆದು ನಿಲ್ಲಿಸುವ ಶಕ್ತಿಯಿದೆ. ಇದನ್ನು ವಿವರಿಸುವ ಆಕರ್ಷ್ ಅವರ ಆಕರ್ಷಕ ಬರಹದ ಶೈಲಿ ನಮ್ಮ ಮನಸೂರೆಗೊಳ್ಳುತ್ತದೆ. ಈ ಮಾತಿಗೆ ಉದಾಹರಣೆಯಾಗಿ ಈ ಮುಂದಿನ ಮಾತುಗಳನ್ನು ಗಮನಿಸಿ ನೋಡಿ:

“ಓಡುತ್ತಿದ್ದ ಮಗ ಅವನನ್ನು ನೋಡಿ ಹಾಗೆಯೇ ನಿಂತುಬಿಟ್ಟ. ಬೆಚ್ಚಗಿನ ಕಲ್ಲಿನ ಹಾದಿಯಲ್ಲಿ ನಿಂತು ತಲೆ ಬಾಗಿಸಿ ನೋಡುತ್ತಿದ್ದ. ಜನರಲ್ಲಿ ಬುದ್ಧ ಸೃಷ್ಟಿಸುವ ಈ ನಿಶ್ಚಲತೆಗೆ ಒಂದು ನಿರ್ದಿಷ್ಟ ಗುಣವಿದೆ. ವಿಸ್ಮಯವಂತೂ ಅಲ್ಲ. ನಿಮ್ಮ ಇರುವಿಕೆಯನ್ನು ಇಡಿಯಾಗಿ ಗಮನಿಸಿ ನಿಮ್ಮದೇ ದನಿಯನ್ನು ಅನುಸರಿಸಿ, ನಿಮ್ಮ ಹೆಸರನ್ನೇ ಕೂಗಿ ನಿಲ್ಲಿಸಿಬಿಡುವಂತಹ ವಿಚಿತ್ರ. ಬುದ್ಧ ಯಾವುದೇ ಲೌಕಿಕ ಸಾಂತ್ವನವನ್ನು ನೀಡುವುದಿಲ್ಲ. ಆದರೆ ಎಲ್ಲದಕ್ಕೂ ಸಾಕ್ಷಿಯಾಗುವ ಕಷ್ಟದ ಕೆಲಸ ಅವನದು. ನೀವು ಹೊತ್ತುಕೊಂಡು ತಿರುಗುತ್ತಿರುವ ಭಾರವನ್ನೆಲ್ಲವನ್ನು ನಾನು ನೋಡುತ್ತಿದ್ದೇನೆ ಎಂಬ ಸಾಂತ್ವನದ, ಶಾಂತ ದನಿ.”

ಆಹಾ! ಎಷ್ಟು ಕಾವ್ಯಾತ್ಮಕ ಭಾಷೆಯಲ್ಲಿ ಫಿಲಾಸಫಿಯ ವರ್ಣನೆ ಆಕರ್ಷ್ ಅವರದು. ಇಂತಹ ಅನೇಕ ಸಂಗತಿಗಳ ಜತೆಯಾಗಲು ಖಂಡಿತ ಎಲ್ಲರೂ ಈ ಕೃತಿಯನ್ನು ಒಮ್ಮೆ ಓದಲೇಬೇಕು.


  • ಡಾ.ಎಚ್. ಎಸ್. ಸತ್ಯನಾರಾಯಣ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading