‘ಉಪ್ಪುತಿಂದವ ನೀರು ಕುಡಿಯಲೇ ಬೇಕು’. ಅಂದರೆ, ತಪ್ಪು ಮಾಡಿದರೆ ಪರಿಣಾಮ ಅನುಭವಿಸಲೇ ಬೇಕು. ಆದುದರಿಂದ ಬೇರೆಯವರಿಗೆ/ಬೇರೆಯದಕ್ಕೆ ನೋವು ಕೊಡುವ ಯೋಚನೆ ಬರುತ್ತಿರುವಂತೆಯೇ ಚಿವುಟಿ ಹಾಕಬೇಕು. ‘ಕಣ್ಣಿಗೆ ಕಣ್ಣು’ ಎಂದು ನಡೆದರೆ ಇಡೀ ಪ್ರಪಂಚವೇ ಕುರುಡಾಗುತ್ತದೆ. ಕತೆಗಾರರಾದ ಸಂಪಿಗೆ ವಾಸು ಅವರ ಕತೆಯನ್ನು ಪೂರ್ತಿಯಾಗಿ ತಪ್ಪದೆ ಮುಂದೆ ಓದಿ…
ಕುರುಕ್ಷೇತ್ರದಲ್ಲಿ ಪಾಂಡವ, ಕೌರವರ ಮಧ್ಯೆ ಹದಿನೆಂಟು ದಿನ ಮಹಾಯುದ್ಧ ಮುಗಿದು, ಹದಿನೆಂಟು ಅಕ್ಟೋಹಿಣಿ ಸೈನ್ಯ ನಾಶವಾಯಿತು. ನೂರು ಮಂದಿ ಕೌರವರು, ಪಾಂಡವರಿಂದ ಹತರಾದರು. ತನ್ನ ನೂರು ಮಂದಿ ಮಕ್ಕಳನ್ನು ಕಳೆದುಕೊಂಡ ಕುರುಡ ಧೃತರಾಷ್ಟ್ರದುಃಖದಿಂದ ಕೃಷ್ಣನನ್ನು ಪ್ರಶ್ನಿಸಿದ. “ಕೃಷ್ಣಾ ನೂರು ಮಂದಿ ಮಕ್ಕಳಾದರು. ಇಂದು ಅಷ್ಟೂ ಮಂದಿಯನ್ನು ಕಳೆದುಕೊಂಡಿದ್ದೇನೆ. ಒಬ್ಬರನ್ನೂ ಉಳಿಸಿಕೊಳ್ಳಲಾಗಲಿಲ್ಲ. ನನ್ನ ವಿಧಿ! ಇದು ಏಕೆ ಹೀಗಾಯಿತು?” ಕೃಷ್ಣ ಉತ್ತರಿಸಿದ. “ಇದು ನಿನ್ನ ಕರ್ಮಫಲ, ವಿಧಿ.”
“ಯಾವ ವಿಧಿ? ಎಂಥ ಕರ್ಮ?” ಮತ್ತೆ ಕೇಳಿದ ಧೃತರಾಷ್ಟ್ರ, ಕೃಷ್ಣನೆಂದ, ಐದುನೂರು ಜನ್ಮಗಳ ಹಿಂದೆ ನೀನೊಬ್ಬಬೇಟೆಗಾರನಾಗಿದ್ದೆ. ಕಾಡಿನ ಪ್ರಾಣಿಗಳನ್ನು ಅಗತ್ಯ ಇರುವಷ್ಟೇ ಬೇಟೆಯಾಡುವುದು, ವಿಕ್ರಯಿಸುವುದು, ಹಕ್ಕಿಗಳನ್ನು ಬಲೆ ಹಾಕಿ ಹಿಡಿದು ಮಾರುವುದು ನಿನ್ನ ಕಾಯಕವಾಗಿತ್ತು. ಉದರಂಭರಣದ ದಾರಿಯಾಗಿತ್ತು. ಇದನ್ನು ನೀನು ಧರ್ಮದಿಂದ, ಹಿಂಸೆಯಾಗದಂತೆ ಮಾಡಬೇಕಿತ್ತು. ಮಾಡುತ್ತಲೂ ಇದ್ದೆ. ಒಂದು ದಿನ ಹೀಗೆ ಬೇಟೆಗೆ ಬಂದಾಗ ಒಂದು ಗಂಡುಹಕ್ಕಿನಿನ್ನಿಂದ ತಪ್ಪಿಸಿಕೊಂಡು ಹೋಯಿತು. ನಿನಗೆ ಕೋಪ ಬಂತು. ಅತ್ತಿತ್ತ ನೋಡಿದರೆ, ದೊಡ್ಡ ಪೊದೆಯೊಂದರಲ್ಲಿ ನೂರಾರು ಗೂಡುಗಳಿದ್ದವು. ಅವುಗಳಲ್ಲಿ ಆಗ ತಾನೇ ಕಣ್ಣು ಬಿಡುತ್ತಿರುವ ಮರಿಹಕ್ಕಿಗಳಿದ್ದವು. ನಿನ್ನ ಕೋಪ ಅವುಗಳತ್ತ ತಿರುಗಿತು.
ಸುತ್ತಮುತ್ತ ಹರಡಿದ್ದ ಪುರುಳೆಯನ್ನು ಆ ಪೊದೆಯ ಸುತ್ತ ಹರಡಿ ಬೆಂಕಿ ಹಾಕಿದೆ. ಮರಿಗಳು ಅದರ ಝಳಕ್ಕೆ ಸತ್ತುಹೋದವು. ಮರಿಗಳಿಗೆ ಆಹಾರ ತರುತ್ತಿದ್ದ ತಾಯಿ ಹಕ್ಕಿಗಳೂ ಅದರ ಹೊಗೆಯಿಂದ ಕುರುಡಾದವು. ಆ ಹಕ್ಕಿತನ್ನ ಮಕ್ಕಳ ಮಾರಣಹೋಮ ನೋಡಿತು. ಕುರುಡಾದ ತಾಯಿ ಹಕ್ಕಿಗಳು ಅಸಹಾಯಕತೆಯಿಂದ ನರಳಿದವು. ಅವುಗಳ ನೋವು ನಿನ್ನ ಬೆಂಬತ್ತಿ ಬಂತು. ನೀನು ಕುರುಡನಾಗಿ ಹುಟ್ಟಿ ಕಣ್ಣಿಲ್ಲದೆ ಬದುಕುವ ನೋವು, ಅಸಹಾಯಕತೆಯಿಂದ ನರಳಿದೆ. ಇನ್ನು ಆ ಮರಿ ಹಕ್ಕಿಗಳ ಸಾವಿಗೆ ಕಾರಣನಾದ ಕರ್ಮ ಸಂಚಯವಾಗಿದೆಯಲ್ಲಾ?
ನೂರು ಮಂದಿ ಮಕ್ಕಳನ್ನು ಪಡೆದರೂ, ಅವರ ಆಟಪಾಠ ನೋಡಲಿಲ್ಲ. ರೂಪ, ಅಂದಚಂದ ಅನುಭವಿಸಲಿಲ್ಲ. ಕಡೆಗೆ ಅಷ್ಟೂ ಮಂದಿಯನ್ನು ಕಳೆದುಕೊಂಡ ದುಃಖ ಅನುಭವಿಸ ಬೇಕಾಯಿತು. ಧೃತರಾಷ್ಟ್ರಕರ್ಮದ ಗತಿ ಗಹನವಾದುದು. ತಪ್ಪು ಮಾಡಿದವ ಅದರ ಫಲ ಅನುಭವಿಸಿಯೇ ಶುದ್ಧ. ನೂರು ಮಕ್ಕಳನ್ನು ಪಡೆಯಲು ನೀನು ತುಂಬಾ ಪುಣ್ಯಸಂಚಯ ಮಾಡಬೇಕಾಯಿತು. ಅದಕ್ಕೆ ಐದುನೂರು ಜನ್ಮಗಳೇ ಬೇಕಾದವು. ಆ ಪುಣ್ಯದಿಂದ ಚಕ್ರವರ್ತಿಯಾಗುವ ಸೌಭಾಗ್ಯವೂ ಬಂತು. ಕರ್ಮನಿಯಮ ಕಾರ್ಯಪ್ರವೃತ್ತವಾಯಿತು. ಈ ಸಮಸ್ತ ಸೌಭಾಗ್ಯಗಳೊಂದಿಗೆ, ತಪ್ಪಿಗೆ ಸರಿಯಾದ ಶಿಕ್ಷೆಯನ್ನೂ ತಂದಿತು. ಫಲ ನಿನ್ನ ನೂರು ಮಕ್ಕಳ ಸಾವಿನ ದುಃಖವನ್ನು ಅನುಭವಿಸುವುದು” ಎಂದು ವಿವರಿಸಿದ.
- ಸಂಪಿಗೆ ವಾಸು, ಬಳ್ಳಾರಿ.
